ಕಾಪು: ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ
NAMMUR EXPRESS NEWS
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿದೆ.
ಕಾಪು ಪಡು ಮೂಳೂರು ತೊಟ್ಟಂ ಮತ್ತು ಮೂಳೂರು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ನಡುವಿನ ಸುಮಾರು ಒಂದು ಕಿ. ಮೀ. ಉದ್ದದ ಕರಾವಳಿ ತೀರದ ಎರಡು ಮೂರು ಕಡೆಗಳಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ. ಬೃಹತ್ ಅಲೆಗಳು ದಡಕ್ಕೆ ಮತ್ತು ತಡೆಗೋಡೆಗೆ ಅಪ್ಪಳಿಸುತ್ತಿದ್ದು ಈ ಪ್ರದೇಶಗಳಲ್ಲಿ ಹಿಂದೆ ನಿರ್ಮಿಸಿರುವ ತಡೆಗೋಡೆ, ಕಡಲು ವಿಸ್ತಾರಗೊಳ್ಳದಂತೆ ಅಡ್ಡಲಾಗಿ ಜೋಡಿಸಿರುವ ಕಲ್ಲುಗಳನ್ನು ಆಹುತಿ ಪಡೆಯುತ್ತಾ ಮುನ್ನುಗ್ಗಿ ಸಾಗಿಬರುತ್ತಿದೆ.
ಬೃಹತ್ ಅಲೆಗಳ ಕಾರಣದಿಂದಾಗಿ ಫಿಷರೀಸ್ ರಸ್ತೆಯಿಂದ ಪಡುಭಾಗದಲ್ಲಿರುವ ವೆಂಕು ಬಾಯಿ, ಅಪ್ಪಿ ಮರಕಾಲ್ತಿ, ತಾರಾವತಿ ಶ್ರೀಯಾನ್, ಶಾರದಾ ಕೋಟ್ಯಾನ್, ಸಂತೋಷ್ ಕುಮಾರ್, ಸುಮತಿ ಕಾಂಚನ್ ಎಂಬವರಿಗೆ ಸೇರಿದ ಮನೆ, ತೋಟ ಮತ್ತು ಖಾಲಿ ಜಾಗವು ತೀರಾ ಅಪಾಯದಲ್ಲಿವೆ. ಹತ್ತಾರು ತೆಂಗಿನಮರಗಳು ಸಮುದ್ರದ ಒಡಲು ಸೇರಲು ಸಿದ್ಧವಾಗಿರುವಂತೆ ಕಾಣುತ್ತಿದೆ.