ಮಜೂರು: ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತ- ಗ್ರಾಮಸ್ಥರಲ್ಲಿ ಆತಂಕ
NAMMUR EXPRESS NEWS
ಮಜೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತ ಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೇ ದಿನಬಳಕೆಗೆ ಬಳಸುವುದೂ ಕಷ್ಟಸಾಧ್ಯವೆಂಬಂತಾಗಿದೆ. ಹಾಗಾಗಿ ಎಲ್ಲಾ ಮನೆಯವರೂ ಪಕ್ಕದಲ್ಲೇ ಇರುವ ಬಾವಿಯ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯತ್ ನೀಡುವ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆ ಸಿಬಂದಿಗಳು ಎರಡೆರಡು ಬಾರಿ ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ನೀರಿನಲ್ಲಿ ಅಮೋನಿಯಾ ಅಂಶ ಅಂಶ ಪತ್ತೆಯಾಗಿದೆ.
ಬಾವಿಯ ನೀರು ಕಲುಷಿತವಾಗಿರುವ ಬಗ್ಗೆ ಪರೀಕ್ಷೆಗಾಗಿ ಖಾಸಗಿಯಾಗಿ ಪ್ರಯೋಗಾಲಯಕ್ಕೆ ತಂದಿದ್ದು ಅದನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಪರೀಕ್ಷೆಗೊಳಪಟ್ಟಿರುವ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಅಮೋನಿಯಾ ಅಂಶಗಳು ಪತ್ತೆಯಾಗಿವೆ. ಕೊಳೆತ ವಾಸನೆ ಹೆಚ್ಚಿದ್ದು, ಬಾವಿ ನೀರು ಕೆಸರಿನ ರಾಡಿಯಂತಾಗಿರುವುದು ಪತ್ತೆಯಾಗಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಒಂದೆರಡು ದಿನದ ಬಳಿಕ ಶುಚಿಯಾಗಬೇಕಿದ್ದು ಇಲ್ಲಿ ಬಾವಿಯ ನೀರು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದನ್ನು ಪತ್ತೆ ಹಚ್ಚ ಬೇಕಿದ್ದು ಅತ್ಯಾಧುನಿಕ ತಂತ್ರಜ್ಣಾನದಲ್ಲಿ ನೀರನ್ನು ಪರಿಶೀಲಿಸುವ ಅಗತ್ಯತೆ ಕಂಡು ಬರುತ್ತಿದೆ ಎಂದು ಖಾಸಗಿ ಪ್ರಯೋಗಾಲಯ ತಜ್ಣರು, ಉಡುಪಿ ಡಾ| ಅವಿಲಾ ಡಿ ಸೋಜ ಹೇಳಿದ್ದಾರೆ.