ಉಡುಪಿ: ಗೋವಿನ ರುಂಡ ಪತ್ತೆ ಪ್ರಕರಣ, ಆರು ಮಂದಿ ಬಂಧನ
NAMMUR EXPRESS NEWS
ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಗೋವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 6 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರಾಮ ಕುಂಜಾಲು (49), ಪ್ರಸಾದ್ ಕುಂಜಾಲು (21), ನವೀನ್ ಮಟಪಾಡಿ (35), ಕೇಶವ ನಾಯ್ಕ ಅಡಿjಲ (50), ಸಂದೇಶ ಕುಂಜಾಲು (35) ಮತ್ತು ರಾಜೇಶ್ ಕುಂಜಾಲು (28) ಬಂಧಿತರು. 7ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೂ. 28ರಂದು ರಾತ್ರಿ ಸುಮಾರು 11.30ಕ್ಕೆ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಬಳಿಯ ರಿಕ್ಷಾ ನಿಲ್ದಾಣದ ಎದುರು ಮುಖ್ಯ ರಸ್ತೆಯ ಮಧ್ಯೆ ಗೋವಿನ ತಲೆ ಮತ್ತು ಚರ್ಮ ಕಂಡು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಒಟ್ಟು 4
ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಸಿಸಿಟಿವಿ ಹಾಗೂ ವಾಹನಗಳ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಲಾಗಿದೆ.
ದನಗಳನ್ನು ಕಡಿದು ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಕೆಲವು ಅವಶೇಷ ರಸ್ತೆಯಲ್ಲಿ ಬಿದ್ದಿವೆ. ಪ್ರಕರಣದಲ್ಲಿ ಬಳಕೆಯಾದ ಸ್ಕೂಟರ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವಧಿಸಿದ ದನದ ಮಾಂಸವನ್ನು ಸ್ವಂತಕ್ಕೆ ಬಳಸಿದ್ದು, ಮಾರಾಟ ಮಾಡುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದರು.
ಸಿಸಿಟಿವಿ ಆಧಾರದಲ್ಲಿ ಪತ್ತೆ ಪ್ರಕರಣದ ತನಿಖೆಗಾಗಿ ರಚಿಸಿದ್ದ ವಿಶೇಷ ತಂಡವು ಘಟನೆ ನಡೆದ ಆಸುಪಾಸು ಭಾಗದ ಸುಮಾರು 3-4 ಕಿ.ಮೀ. ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ರಾಮ ಕುಂಜಾಲು ಎಂಬಾತ ಕೇಶವನಿಂದ ದನವನ್ನು ಪಡೆದುಕೊಂಡು ಕಾರಿನಲ್ಲಿ ತಂದು ವಧೆ ಮಾಡಿ ಅನಂತರ ಸ್ಕೂಟರ್‌ನಲ್ಲಿ ಕೊಂಡೊಯ್ಯುವ ವೇಳೆ ಅವಶೇಷಗಳು ಕೆಳಗೆ ಬಿದ್ದಿವೆ. ಅನಂತರ ಇದರ ಅರಿವಾಗುತ್ತಲೇ ಅವರು ಹಿಂದಿರುಗಿ ಬಂದಿದ್ದರು. ಆಗ ಅಲ್ಲಿ ಜನರು ಸೇರಿದ್ದನ್ನು ಕಂಡು ಅವರು ವಾಪಸಾಗಿದ್ದರು ಎನ್ನಲಾಗಿದೆ.
ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಯಗಳು ತತ್‌ಕ್ಷಣ ಬಂಧಿಸಿರುವುದು ಉತ್ತಮ ವಿಚಾರವಾಗಿದೆ. ಹಾಗೆಯೇ ಕಳೆದ ಡಿಸೆಂಬರ್‌ನಲ್ಲಿ ಹಾರಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕೂಡ ಗೋವಿನ ಕಳೇಬರ ಹಾಗೂ ದೇಹದ ಭಾಗಗಳು ಎಸೆದಿರುವ ಬಗ್ಗೆಯೂ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿಗಳ ಬಂಧನಕ್ಕೂ ಪೊಲೀಸ್ ಇಲಾಖೆ ಮುಂದಾಗಬೇಕು. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ಆರೋಪಿಗಳ ಹಿಂದೆ ಇರುವ ಕಾಣದ ಕೈಗಳು ಹಾಗೂ ಬ್ರಹ್ಮಾವರ ಪರಿಸರದಲ್ಲಿ ಅವ್ಯಾಹತವಾಗಿರುವ ದನಗಳ ಕಳ್ಳತನ ಹಾಗೂ ಅಕ್ರಮ ಕಸಾಯಿಗಳ ಬಗ್ಗೆ ಕಠಿನ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.