ಕರಾವಳಿ ಟಾಪ್ ನ್ಯೂಸ್
ಮಲ್ಪೆ: ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ!
– ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಕೂತಲ್ಲೇ ನಿಧನ
– ಮಲ್ಪೆ: ಜುಗಾರಿ ಅಡ್ಡಕ್ಕೆ ದಿಢೀರ್ ದಾಳಿ, ಐವರು ವಶ!
NAMMUR EXPRESS NEWS
ಮಲ್ಪೆ: ಕರಾವಳಿ ಅಂದರೆ ಇಲ್ಲಿ ಜನರು ದೇವರನ್ನು ನಂಬುವಷ್ಟೇ ದೈವವನ್ನು ಕೂಡಾ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ. ದೈವಾರಾಧನೆಗೆ ಹೆಸರಾದ ನಮ್ಮ ಈ ಪುಣ್ಯ ಸ್ಥಳದಲ್ಲೂ ಅನೇಕ ದುಷ್ಕೃತ್ಯಗಳು ನಡೆಯುತ್ತಿದೆ.
ಹೌದು ಇದೀಗ ಉಡುಪಿಯ ಮಲ್ಪೆಯಲ್ಲಿ ದೈವಸ್ಥಾನದ ಡಬ್ಬಿಯನ್ನೇ ಒಡೆದು ಕಳ್ಳತನ ಮಾಡಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೇವರಬೆಟ್ಟು ಆವರಣ ಗೋಡೆಯ ಹೊರಭಾಗದಲ್ಲಿ ಇಟ್ಟಿದ್ದಂತಹ ಕಾಣಿಕೆ ಡಬ್ಬಿ ಒಡೆದು ಹಣ ದೋಚಿ ಕಿಡಿಗೇಡಿಗಳು ಕೂಡಾ ಎಸ್ಕೇಪ್ ಆಗಿದ್ದಾರೆ.
ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ಸುಮಾರು ಹದಿನೈದು ಸಾವಿರ ಹಣ ಕಳವು ಮಾಡಲಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಕೂತಲ್ಲೇ ನಿಧನ
ಉಡುಪಿ: ಮುಂಬೈನಿಂದ ಉಡುಪಿ-ಶಿರ್ವ- ಮೂಡುಬಿದಿರೆಗಾಗಿ ಮಂಗಳೂರಿಗೆ ತೆರಳುತ್ತಿದ್ದ KSRTC ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತಪಟ್ಟ ಪ್ರಯಾಣಿಕ ಕುಮಟಾ ಮೂಲದ ಸತ್ಯ ಭಂಡಾರಿ(45) ಎಂದು ತಿಳಿದು ಬಂದಿದೆ.
ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
– ಮಲ್ಪೆ: ಜುಗಾರಿ ಅಡ್ಡಕ್ಕೆ ದಿಢೀರ್ ದಾಳಿ, ಐವರು ವಶ!
ಮಲ್ಪೆ: ಸಾರ್ವಜನಿಕ ಸ್ಥಳದಲ್ಲಿ ಹಣದ ಬೆಟ್ಟಿಂಗ್ ಮಾಡಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಸಿಕ್ಕ ಮಾಹಿತಿಯ ಮೇರೆಗೆ ಪೊಲೀಸರು ದಿಢೀರನೆ ಜುಗಾರಿ ಅಡ್ಡಕ್ಕೆ ದಾಳಿ ನಡೆಸಿರುವ ಘಟನೆ ಉಡುಪಿಯ ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮಬೈದರ್ಕಳ ಗರಡಿಯ ಬಳಿ ನಡೆದಿದೆ.
ಶರತ್, ಸಂದೇಶ, ಜಯಕರ, ರಮೇಶ, ಅರುಣ್ ಕುಮಾರ್ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರೋಪಿಗಳಾಗಿದ್ದಾರೆ. ಪೊಲೀಸರು ಈ ಸ್ಥಳದಲ್ಲಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳನ್ನು ಹಿಂಸಾತ್ಮಕವಾಗಿ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದುದರ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.
ದಾಳಿ ನಡೆಸಿದಾಗ ಹಣ ಸ್ಥಳದಲ್ಲಿಯೇ ಎಸೆದು ಕೆಲವರು ಎಸ್ಕೇಪ್ ಆಗಿದ್ದಾರೆ. ಸುಮಾರು ಹತ್ತು ಸಾವಿರ ರೂ. ಮೌಲ್ಯದ ಕೋಳಿಗಳು, ಕಾಲಿಗೆ ಕಟ್ಟಿದ್ದ ಎರಡು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.