ಬೈಂದೂರು: ಮಹಿಳೆ ಮತ್ತು ಪುರುಷ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ, ಗೋಳಿಹೊಳೆ ಗ್ರಾಮದ ಚಾರ್ಸಲ್ ನ ಸೌಪರ್ಣಿಕಾ ನದಿಯ ಬಳಿ ನಡೆದಿದೆ. ಮೃತ ವ್ಯಕ್ತಿಗಳನ್ನು ಚಾರ್ಸಲ್ ನಿವಾಸಿ ವಿಠಲ ನಾಯ್ಕ ಮತ್ತು ಹೊಸೂರು ಗ್ರಾಮದ ದರುಕೋಡು ನಿವಾಸಿ ಭವ್ಯ ಅಲಿಯಾಸ್ ನಿಶ್ಮಿತಾ ಎಂದು ಗುರುತಿಸಲಾಗಿದೆ. ಆಟೋ ಚಾಲಕನಾದ ವಿಠಲ ನಾಯ್ಕ ತನ್ನ ಪತ್ನಿಗೆ ವಿಷಪ್ರಾಶನ ಮಾಡಿಸಿ ಕೊಲೆಗೆ ಯತ್ನಿಸಿದ್ದ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಠಲ ನಾಯ್ಕ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದ ಸಂದರ್ಭದಲ್ಲಿ ಟೈಲರ್ ಕೆಲಸ ಮಾಡಿಕೊಂಡಿದ್ದ ಭವ್ಯಳ ಪರಿಚಯವಾಗಿದೆ. ಬಳಿಕ ಅದು ಪ್ರೀತಿಗೆ ತಿರುಗಿದೆ. ಇದನ್ನು ವಿಠಲ ನಾಯ್ಕನ ಹೆಂಡತಿ ವಿರೋಧಿಸಿದಾಗ ಭವ್ಯಳನ್ನು ನರ್ಸ್ ಎಂದು ಪರಿಚಯಿಸಿ, ತನ್ನ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿ, ಭವ್ಯಳಿಂದ ಇಂಜೆಕ್ಷನ್ ಕೊಡಿಸಿದ್ದ ಎನ್ನುವ ಮಾಹಿತಿ ಲಭಿಸಿದೆ.
ವಿಠಲನ ಪತ್ನಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಂತೆ ವಿಠಲ ನಾಯ್ಕ ಮತ್ತು ಭವ್ಯ ಮೈಸೂರಿಗೆ ಪರಾರಿಯಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಇದಾದ ಬಳಿಕ ಮಂಗಳವಾರದಂದು ವಿಠಲ ನಾಯ್ಕ ಮತ್ತು ಭವ್ಯಳ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸೌಪರ್ಣಿಕಾ ನದಿಯ ಬಳಿ ಕಂಡುಬಂದಿದ್ದು, ಇಬ್ಬರು ಸಾವನ್ನಪ್ಪಿ 15 ದಿನಗಳು ಕಳೆದಿರಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸೋಕೋ ತಂಡ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
•ಪುತ್ತೂರು: ಬೆಳ್ಳಿ ಸಾಮಗ್ರಿಗಳ ಕಳ್ಳತನ
ಪುತ್ತೂರು: ಮನೆಯೊಂದರಲ್ಲಿ ಬೆಳ್ಳಿ ಸಾಮಾಗ್ರಿಗಳು ಕಳುವಾಗಿರುವ ಘಟನೆ ಕೊಂಬೆಟ್ಟು ಎನ್ನುವಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸವಿತಾ ಎನ್ನುವವರು ಆಗಸ್ಟ್ 29 ರಂದು ಮನೆಗೆ ಬೀಗ ಹಾಕಿಕೊಂಡು ಉಜಿರೆಗೆ ತೆರಳಿದ್ದು, ಸೆಪ್ಟೆಂಬರ್ 25ರಂದು ಅವರ ಸಂಬಂಧಿಕರು ಮನೆಯ ಬಾಗಿಲನ್ನು ತೆರೆದು ನೋಡಿದಾಗ ಕಳುವಾಗಿರುವ ಸಂಗತಿ ತಿಳಿದುಬಂದಿದೆ. ತಕ್ಷಣ ಸಂಬಂಧಿಕರು ಸವಿತಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸವಿತಾ ಅವರು ಮನೆಗೆ ಬಂದು ನೋಡಿದಾಗ ಬೆಳ್ಳಿಯ ಚೆಂಬು, ದೀಪ ಸೇರಿದಂತೆ ಸುಮಾರು 1.50ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಸಾಮಗ್ರಿಗಳು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: ಈಜಲು ತೆರಳಿದ್ದ ಇಬ್ಬರು ಯುವಕರ ಸಾವು
ಕಾರ್ಕಳ: ಯುವಕರಿಬ್ಬರು ಈಜಲು ತೆರಳಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಹಿರ್ಗಾನ ಗ್ರಾಮದ ಕಾನಂಗಿ ಸಮೀಪದ ಸ್ವರ್ಣಾ ನದಿಯಲ್ಲಿ ನಡೆದಿದೆ. ಮೃತ ಯುವಕರನ್ನು ಹಿರ್ಗಾನ ಗ್ರಾಮದ ಹರ್ಷನ್ ಆಚಾರ್ಯ ಮತ್ತು ಭರತ್ ಪೂಜಾರಿ ಎಂದು ಗುರುತಿಸಲಾಗಿದೆ. ಹರ್ಷನ್ ಮಂಗಳೂರಿನ ಎಟಿಎಂ ಪಿನ್ ಜನರೇಟರ್ ಉದ್ಯೋಗ ಮಾಡಿಕೊಂಡಿದ್ದು, ಭರತ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಹರ್ಷನ್, ಭರತ್ ಸೇರಿದಂತೆ ನಾಲ್ವರು ಸ್ನೇಹಿತರು ಈಜಾಡಲು ಸ್ವರ್ಣಾ ನದಿಗೆ ಹೋಗಿದ್ದು, ಭರತ್ ನೀರಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ ಹರ್ಷನ್ ಭರತ್ ನ ರಕ್ಷಣೆಗೆ ಧಾವಿಸಿದ್ದಾನೆ. ಆಗ ಹರ್ಷನ್ ಕೂಡ ನೀರುಪಾಲಾದ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರ್ಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್, ರೂಪೇಶ್, ಸುರೇಶ್, ದಿನೇಶ್, ನಿತ್ಯಾನಂದ, ಶಿವಾನಂದ, ಪೊಲೀಸರು ಮತ್ತು ಸ್ಥಳೀಯರಾದ ರಂಜಿತ್, ಚೇತನ್ ಅವರು ಮೃತ ಯುವಕರ ಪತ್ತೆಗಾಗಿ ಶೋಧನಾ ಕಾರ್ಯವನ್ನು ಕೈಗೊಂಡಿದ್ದು, ಸಂಜೆಯ ಹೊತ್ತಿಗೆ ಹರ್ಷನ್ ಮತ್ತು ಭರತ್ ಅವರ ಮೃತದೇಹಗಳನ್ನು ಪತ್ತೆ ಹಚ್ಚಿ ಮೇಲಕ್ಕೆ ತಂದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.







