ನವದೆಹಲಿ: ಮೊಬೈಲ್ ಗ್ರಾಹಕರಿಗೆ ಅನುಕೂಲವಾಗುವಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಎರಡು ಮಹತ್ವದ ನಿರ್ದೇಶನಗಳನ್ನು ನೀಡಿದೆ. ಟೆಲಿಕಾಂ ಕಂಪನಿಗಳು 28 ದಿನಗಳ ವ್ಯಾಲಿಡಿಟಿಯ ಬದಲಿಗೆ ಕನಿಷ್ಠ 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ಗಳನ್ನು ನೀಡುವುದು ಕಡ್ಡಾಯವಾಗಲಿದೆ. ಇದರ ಜೊತೆಗೆ, ಒಂದು ಪೂರ್ಣ ಕ್ಯಾಲೆಂಡರ್ ತಿಂಗಳಿಗೆ ಅನ್ವಯಿಸುವ ರೀಚಾರ್ಜ್ ಪ್ಲಾನ್ಗಳನ್ನೂ ಗ್ರಾಹಕರಿಗೆ ಒದಗಿಸಬೇಕಾಗಿದೆ.
ಟ್ರಾಯ್ನ ಈ ಕ್ರಮದಿಂದ ತಿಂಗಳ ಹೆಸರಿನಲ್ಲಿ 28 ದಿನಗಳ ವ್ಯಾಲಿಡಿಟಿ ನೀಡುವ ಪದ್ಧತಿಗೆ ಕಡಿವಾಣ ಬೀಳಲಿದೆ. 28 ದಿನಗಳ ಪ್ಲಾನ್ನಿಂದಾಗಿ ಗ್ರಾಹಕರು ವರ್ಷಕ್ಕೆ 12 ಬಾರಿ ಬದಲಾಗಿ 13 ಬಾರಿ ರೀಚಾರ್ಜ್ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ ಎಂಬ ವಿಚಾರವೂ ಚರ್ಚೆಗೆ ಕಾರಣವಾಗಿತ್ತು.
ಹೊಸ ನಿರ್ದೇಶನದಂತೆ ಟೆಲಿಕಾಂ ಕಂಪನಿಗಳು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಕನಿಷ್ಠ ಒಂದು ರೀಚಾರ್ಜ್ ಪ್ಲಾನ್ನ್ನು ಗ್ರಾಹಕರಿಗೆ ನೀಡಬೇಕಾಗುತ್ತದೆ. ಅಲ್ಲದೆ, ಪ್ರತಿ ತಿಂಗಳ ಅದೇ ದಿನಾಂಕದಂದು ರೀಚಾರ್ಜ್ ಮಾಡಬಹುದಾದ ಪೂರ್ಣ ಕ್ಯಾಲೆಂಡರ್ ತಿಂಗಳ ಪ್ಲಾನ್ನ್ನೂ ಲಭ್ಯವಾಗುವಂತೆ ಮಾಡಬೇಕಾಗಿದೆ. ಇದರಿಂದ ಗ್ರಾಹಕರಿಗೆ ರೀಚಾರ್ಜ್ ಆಯ್ಕೆಗಳಲ್ಲಿ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ಗೆ ಹೊಸ ಪ್ಲಾನ್!
ಟ್ರಾಯ್ನ ಮತ್ತೊಂದು ಪ್ರಮುಖ ನಿರ್ದೇಶನವು ಡೇಟಾ ಬಳಕೆ ಮಾಡದ ಗ್ರಾಹಕರಿಗೆ ಸಂಬಂಧಿಸಿದೆ. ಕೇವಲ ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ ಸೇವೆ ಅಗತ್ಯವಿರುವ ಗ್ರಾಹಕರಿಗಾಗಿ ಪ್ರತ್ಯೇಕ ಹಾಗೂ ಸರಳ ರೀಚಾರ್ಜ್ ಪ್ಲಾನ್ಗಳನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಹಲವು ರೀಚಾರ್ಜ್ ಪ್ಲಾನ್ಗಳಲ್ಲಿ ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ ಜೊತೆಗೆ ಡೇಟಾ ಸೌಲಭ್ಯವೂ ಸೇರಿರುತ್ತದೆ. ಆದರೆ ಡೇಟಾ ಅಗತ್ಯವಿಲ್ಲದ ಗ್ರಾಹಕರೂ ಇಂತಹ ಪ್ಯಾಕೇಜ್ಗಳಿಗೆ ಹಣ ಪಾವತಿಸಬೇಕಾಗುತ್ತದೆ. ಹೊಸ ನಿರ್ದೇಶನ ಜಾರಿಗೆ ಬಂದರೆ, ಕೇವಲ ಕರೆ ಮತ್ತು ಎಸ್ಎಂಎಸ್ ಸೇವೆ ಬಳಸುವವರಿಗೆ ಕಡಿಮೆ ವೆಚ್ಚದ ಆಯ್ಕೆಗಳು ಲಭ್ಯವಾಗುವ ಸಾಧ್ಯತೆ ಇದೆ.







