ಸುಳ್ಯ: ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ದಾಳಿ ನಡೆಸಿರುವ ಘಟನೆ, ಸೋಮವಾರದಂದು ಜಾಲ್ಸೂರು ಗ್ರಾಮದ ಕೆಮ್ಮನಬಳ್ಳಿ ಎನ್ನುವಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ದಿವಾಕರ ಎನ್ನುವವರಿಗೆ ಸೇರಿದ ತೋಟಕ್ಕೆ ನುಗ್ಗಿದ ಒಂಟಿ ಸಲಗವು ತೆಂಗು, ಬಾಳೆ ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಾಲ್ಸೂರು ಗ್ರಾಮದ ಸುತ್ತಮುತ್ತ ಒಂಟಿ ಸಲಗದ ಉಪಟಳ ಅಧಿಕವಾಗಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಆನೆಯ ದಾಳಿಯಿಂದಾಗಿ ಬಹುತೇಕ ಬೆಳೆಗಳು ನಾಶವಾಗಿದ್ದು, ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಪರಿಸ್ಥಿತಿ ಕೃಷಿಕರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.
•ಬೈಂದೂರು: ಸಾಫ್ಟ್ ವೇರ್ ಇಂಜಿನಿಯರ್ ನ ಧಾರುಣ ಸಾವು
ಬೈಂದೂರು: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ, ಭಾನುವಾರದಂದು ಚನ್ನರಾಯಪಟ್ಟಣದ ಬಳಿ ನಡೆದಿದೆ. ಕೆಲಸದ ನಿಮಿತ್ತ ಬೈಂದೂರಿನಿಂದ ಬೈಕಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಬೈಂದೂರಿನ ಚುಂಗಿಗುಡ್ಡೆ ನಿವಾಸಿಯಾದ ನಾರಾಯಣ ಹೆಬ್ಬಾರ್ ಅವರ ಏಕಮಾತ್ರ ಪುತ್ರರಾದ ಅಕ್ಷಯ್ ಅವರು ವರ್ಕ್ ಫ್ರಮ್ ಹೋಂ ಮಾಡಿಕೊಂಡಿದ್ದು, ತಿಂಗಳಿಗೊಮ್ಮೆ ಬೆಂಗಳೂರಿನ ತಮ್ಮ ಕಂಪನಿಗೆ ಹೋಗಿ ಬರಬೇಕಾಗಿತ್ತು. ಅದೇ ರೀತಿ ಸೋಮವಾರ ಕಂಪನಿಗೆ ತೆರಳುವ ಸಲುವಾಗಿ ಭಾನುವಾರದಂದು ಬೈಕ್ ನಲ್ಲಿ ಹೊರಟಾಗ ಟ್ರಕ್ ಗೆ ಬೈಕ್ ನ ಹ್ಯಾಂಡಲ್ ತಗುಲಿ, ಅಕ್ಷಯ್ ಅವರಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿದಂತಾಗಿ ಅವರು ರಸ್ತೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಪಘಾತದ ಪರಿಣಾಮವಾಗಿ ಅಕ್ಷಯ್ ಅವರು ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಪುತ್ತೂರು: ಅಕ್ರಮ ಗೋಸಾಗಾಟ; ವ್ಯಕ್ತಿ ಸೆರೆ
ಪುತ್ತೂರು: ಪರವಾನಿಗೆ ರಹಿತವಾಗಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ, ಭಾನುವಾರದಂದು ಮಾಡೂರು ಗ್ರಾಮದ ಈಶ್ವರಮಂಗಲದಲ್ಲಿ ನಡೆದಿದೆ. ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ, ತಮಿಳುನಾಡಿನ ನೋಂದಣಿಯನ್ನು ಹೊಂದಿರುವಂತಹ ಅಶೋಕ್ ಲೇಲ್ಯಾಂಡ್ ಟೆಂಪೋದಲ್ಲಿ ಮೂರು ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ವಿಚಾರಿಸಿದಾಗ ಪರವಾನಿಗೆ ಇಲ್ಲದೆಯೇ ಇಂತಹ ದುಷ್ಕೃತ್ಯವನ್ನು ನಡೆಸುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದು, ಮೂರು ಹಸುಗಳ ರಕ್ಷಣೆ ಮಾಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಬ್ರಹ್ಮಾವರ: ಭೀಕರ ರಸ್ತೆ ಅಪಘಾತ
ಬ್ರಹ್ಮಾವರ: ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಕುಮ್ರಗೋಡುವಿನಲ್ಲಿ ನಡೆದಿದೆ. ನಯಾಜ್ ಎನ್ನುವ ವ್ಯಕ್ತಿಯು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಂದಾಪುರದ ಕಡೆಯಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಾಲಕನಾದ ನಯಾಜ್ ನಿರ್ಲಕ್ಷ್ಯದಿಂದ ಕಾರನ್ನು ಚಲಾಯಿಸಿದ್ದು, ಇದರಿಂದಾಗಿ ಕಾರು ಆತನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮನೆಯೊಂದರ ಪಾಗರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಶೇಖ್ ವಾಜಿದ್ ಮಿರ್ಜಾ ಮತ್ತು ತೌಫಿಕ್ ಅವರಿಗೆ ಮೈ,ಕೈ, ಕಾಲು, ತಲೆ ಮತ್ತು ಕಣ್ಣಿನ ಭಾಗಗಳಿಗೆ ಗಾಯಗಳಾಗಿದ್ದು, ಕಾರಿನಲ್ಲಿದ್ದ ನವಾಬ್ ಮತ್ತು ಕಾರು ಚಾಲಕನಾದ ನಯಾಜ್ ಅವರಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಗಾಯಾಳುಗಳನ್ನು ತಕ್ಷಣ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶೇಖ್ ವಾಜಿದ್ ಮಿರ್ಜಾ ಅವರು ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೊಳಂಬೆ ಹೆರೂರು ಗ್ರಾಮದ ಮಿಜ್ಜಾನ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಅಪರಾಧ ಕ್ರಮ 213/2026ರ ಅನ್ವಯ ಭಾರತೀಯ ನ್ಯಾಯ ಸಂಹಿತೆ ಕಲಂ 281, 125(ಎ), 125(ಬಿ) ಮತ್ತು 106ರ ಅಡಿಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.