ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋಷಕರ ಮತ್ತು ಕಾನೂನುಬದ್ಧ ಅನುಮತಿಯನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆ ತೆರೆಯುವುದನ್ನು ತಡೆಗಟ್ಟುವ ಕುರಿತು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲಯನ್ಸ್’ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯವು ಚರ್ಚೆಯನ್ನು ನಡೆಸಿದ್ದು, ಮಕ್ಕಳು ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಖಾತೆಯನ್ನು ತೆರೆಯಲು ಅವಕಾಶ ನೀಡುವಾಗ, ಮೊದಲಿಗೆ ಆ ವೇದಿಕೆಗಳ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿ ಸೂಚಿಸಬೇಕಾಗುತ್ತದೆ. ಆದರೆ ಭಾರತೀಯ ಕಾನೂನಿನ ಅಡಿಯಲ್ಲಿ ನೋಡುವುದಾದರೆ ಅಪ್ರಾಪ್ತರು ಯಾವುದೇ ನಿರ್ಬಂಧಗಳಿಲ್ಲದಂತೆ ಸ್ವತಂತ್ರವಾಗಿ ಪ್ರವೇಶಿಸುವ ಅವಕಾಶವಿದೆ. ಇದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಖಾತೆಯನ್ನು ತೆರೆಯುವ ಪ್ರಕ್ರಿಯೆಯಲ್ಲಿ ಪೋಷಕರ ಅನುಮತಿಯನ್ನು ಕಡ್ಡಾಯಗೊಳಿಸಬಹುದೇ ಎನ್ನುವ ಕುರಿತು ಕೇಂದ್ರ ಸರ್ಕಾರವು ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯವು ತಿಳಿಸಿದೆ. ಅರ್ಜಿದಾರರು ಉಲ್ಲೇಖಿಸಿರುವಂತೆ ಮಕ್ಕಳ ಆನ್ ಲೈನ್ ಸುರಕ್ಷತೆಗೆ ವಯಸ್ಸಿನ ಪರಿಶೀಲನೆ, ಪೋಷಕರ ಅನುಮತಿ ಮತ್ತು ಅಗತ್ಯವಿದ್ದಲ್ಲಿ ಪಾಲಕರ ಗುರುತಿನ ದೃಢೀಕರಣದಂತಹ ವ್ಯವಸ್ಥೆಗಳು ಇರಬೇಕಾಗಿದೆ. ಈಗಾಗಲೇ ಹಲವು ಡಿಜಿಟಲ್ ವೇದಿಕೆಗಳು 13 ವರ್ಷ ಮೇಲ್ಪಟ್ಟವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನು ತೆರೆಯಲು ಅವಕಾಶ ನೀಡುತ್ತಿರುವ ಹಿನ್ನೆಲೆಯಿಂದಾಗಿ ಈ ರೀತಿಯ ಕಾನೂನು ಪ್ರಶ್ನೆ ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಏಕೆಂದರೆ ಮಕ್ಕಳು ಆನ್ ಲೈನ್ ನಲ್ಲಿ ಸೈಬರ್ ಬುಲ್ಲಿಯಿಂಗ್, ವೈಯಕ್ತಿಕ ಮಾಹಿತಿಯ ದುರ್ಬಳಕೆ, ವಯಸ್ಸಿಗೆ ಸೂಕ್ತವಲ್ಲದ ವಿಷಯ ಸೇರಿದಂತೆ ಹಲವು ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಆತಂಕವನ್ನು ವ್ಯಕ್ತಪಡಿಸಲಾಗಿದೆ.







