“ಥಗ್ ಲೈಫ್” ಬಿಡುಗಡೆ ತಡೆಗಟ್ಟಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ
* ಚಲನಚಿತ್ರ ಬಿಡುಗಡೆ ಮೇಲೆ ರಾಜ್ಯ ಸರ್ಕಾರ ತಡೆಯೊಡ್ಡಲು ಸಾಧ್ಯವಿಲ್ಲ
* ವಾಕ್ ಸ್ವಾತಂತ್ರ್ಯ ಮತ್ತು ಕಾನೂನು ಪ್ರಭುತ್ವವನ್ನು ಕಾಪಾಡುವ ಕಠಿಣ ಸೂಚನೆ
NAMMUR EXPRESS NEWS
ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ತಡೆಯೊಡ್ಡಿರುವ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ಎಚ್ಚರಿಸಿದೆ. ದೇಶದಾದ್ಯಂತ ಜೂನ್ 5 ರಂದು ಬಿಡುಗಡೆಗೊಂಡಿದ್ದ ಈ ಚಿತ್ರ, ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಕರ್ನಾಟಕದಲ್ಲಿ ತೆರೆ ಕಾಣಲು ವಿಳಂಬವಾಗುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಮಹೇಶ್ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚಿತ್ರ ಬಿಡುಗಡೆ ತಡೆಯುವಂತಹ ಬೆದರಿಕೆಗಳು ಅಥವಾ ಗುಂಪುಗಳ ಒತ್ತಡಗಳಿಗೆ ನ್ಯಾಯ ವ್ಯವಸ್ಥೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರ ದ್ವಿಸದಸ್ಯ ಪೀಠ, “ಒಬ್ಬ ವ್ಯಕ್ತಿಯು ತನ್ನ ಸಿನಿಮಾ ಬಿಡುಗಡೆ ಮಾಡುವ ಹಕ್ಕು ಹೊಂದಿರುವುದು ಕಾನೂನಿನ ಅಧೀನದಲ್ಲಿದೆ. ಸೆನ್ಸಾರ್ ಮಂಡಳಿಯಿಂದ ಅನುಮೋದನೆ ಪಡೆದಿರುವ ಚಿತ್ರ ಬಿಡುಗಡೆಗಾಗಲೇಬೇಕು. ಗುಂಪುಗಳು ಬೀದಿಗೆ ಇಳಿದು ಆಪ್‌ತಮಾಡುವಂತಿಲ್ಲ. ಇದು ಕಾನೂನಿನ ಆಳ್ವಿಕೆಯ ಕಾಲ,” ಎಂದು ತೀವ್ರವಾಗಿ ಸೂಚಿಸಿದೆ.
ಕಮಲ್ ಹಾಸನ್ ನೀಡಿದ ಹೇಳಿಕೆ ವಿವಾದಾತ್ಮಕವಾಗಿದ್ದರೂ ಅದನ್ನು ವಿಮರ್ಶೆ ಮಾಡುವ, ಚರ್ಚಿಸುವ ಹಕ್ಕು ಜನರಿಗೆ ಇದೆ. ಆದರೆ ಅದನ್ನು ಆಧಾರವನ್ನಾಗಿ ಮಾಡಿಕೊಂಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ತಡೆಯಲು ಸಾಧ್ಯವಿಲ್ಲ. ಚಿತ್ರ ತಡೆಯುವುದು ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿಗತ ಹಕ್ಕಿಗೆ ವಿರುದ್ಧವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿವಾದದ ನಡುವೆ ಚಿತ್ರ ಬಿಡುಗಡೆಯ ಬಗ್ಗೆ ಸ್ಪಷ್ಟನೆ ನೀಡಲು ಕರ್ನಾಟಕ ಸರ್ಕಾರಕ್ಕೆ ಒಂದು ದಿನದ ಅವಧಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, “ಒಬ್ಬ ನಟ ಹೇಳಿದ ಮಾತುಗಳಿಂದ ಕೆರಳಿದ ಜನತೆ ಅದರ ಕುರಿತು ಚರ್ಚಿಸಬಹುದು. ಆದರೆ ರಾಜ್ಯ ಸರ್ಕಾರವು ಆ ಮಾತನ್ನು ನೆಪವನ್ನಾಗಿ ಮಾಡಿಕೊಂಡು ಬಿಡುಗಡೆ ತಡೆಯುವುದು ಸಮಂಜಸವಲ್ಲ” ಎಂಬುದು ನ್ಯಾಯಪೀಠದ ನಿಲುವಾಗಿದೆ.