ಬೆಂಗಳೂರು: ರಾಜ್ಯ ಸರ್ಕಾರವು ನಂದಿನಿ ಹಾಲಿಗೆ 5ರೂಪಾಯಿ ಹೆಚ್ಚಳಗೊಳಿಸುವ ಕುರಿತು ನಿರ್ಧಾರ ಕೈಗೊಂಡಿದ್ದು, ಇದರ ಬೆನ್ನಲ್ಲೇ ಹಾಲಿಗೆ ಸಂಬಂಧಿಸಿದಂತಹ ಪದಾರ್ಥಗಳ ಬೆಲೆ ಕೂಡ ಹೆಚ್ಚಳಗೊಳ್ಳಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಂದರೆ ಹಾಲಿನಿಂದ ತಯಾರಾಗುವ ಪದಾರ್ಥಗಳ ಬೆಲೆ ಅನಿವಾರ್ಯವಾಗಿ ಹೆಚ್ಚಳಗೊಳಿಸಬೇಕಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಪ್ರತಿದಿನ ನಾಲ್ಕು ಲಕ್ಷ ಲೀಟರ್ ನಷ್ಟು ಹಾಲನ್ನು ಹೊಟೇಲ್ ಗಳಲ್ಲಿ ಬಳಸಲಾಗುತ್ತಿದೆ. ಕೆಎಂಎಫ್ ಉತ್ಪಾದಿಸುವ ಶೇಕಡ 40ರಷ್ಟು ಹಾಲನ್ನು ಹೊಟೇಲ್ ನವರೇ ಖರೀದಿಸುತ್ತಾರೆ. ಆದ್ದರಿಂದ ದರ ಏರಿಕೆಯನ್ನು ಲೀಟರ್ ಗೆ 2 ರಿಂದ 3 ರೂಪಾಯಿಗೆ ಸೀಮಿತಗೊಳಿಸಬೇಕು. ಹೈನುಗಾರರಿಗೆ ಆಗುತ್ತಿರುವ ನಷ್ಟಕ್ಕೆ ಸರ್ಕಾರವೇ ಅನುದಾನ ಅಥವಾ ಇನ್ನಿತರ ಬೆಂಬಲ ನೀಡಬೇಕು. ಹೊಟೇಲ್ ಉದ್ಯಮ ರಾಜ್ಯದ ರೈತರ ಪರವಾಗಿದೆ. ಬೆಲೆ ಹೆಚ್ಚಳ ಅಧಿಕವಾದರೆ ಹೊರರಾಜ್ಯಗಳಿಂದ ಬರುವ ಹಾಲಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಂದಿನಿ ಹಾಲಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು” ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಎಸ್ ಯುವಿ ಕಾರು ದರ ಮತ್ತೊಮ್ಮೆ ಹೆಚ್ಚಳ
ನವದೆಹಲಿ: ಕಚ್ಚಾ ವಸ್ತುಗಳ ದರದಲ್ಲಿನ ಹೆಚ್ಚಳದಿಂದಾಗಿ, ವಾಹನಗಳ ದರವನ್ನು ಕೂಡ ಅಧಿಕಗೊಳಿಸುವ ನಿರ್ಧಾರವನ್ನು ವಾಹನ ತಯಾರಿಕಾ ಸಂಸ್ಥೆಯಾದ ಮಹೀದ್ರಾ ಆ್ಯಂಡ್ ಮಹೀಂದ್ರಾ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ಎಸ್ ಯುವಿ ಶ್ರೇಣಿಯ ವಾಹನಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲು ಆಲೋಚಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹೀಂದ್ರಾ ಗ್ರೂಪ್ ನ ಅಟೋಮೋಟಿವ್ ವಿಭಾಗದ ಸಿಇಒ ನಳಿನಿಕಾಂತ್ ಗೊಲ್ಲಗುಂಟ ಅವರು “ಸಂಸ್ಥೆಯು ಈ ವರ್ಷ ಈಗಾಗಲೇ ಮೂರು ಬಾರಿ ಅಂದರೆ ಜನವರಿ, ಏಪ್ರಿಲ್ ಮತ್ತು ಜುಲೈ ತಿಂಗಳಿನಲ್ಲಿ ದರವನ್ನು ಹೆಚ್ಚಳಗೊಳಿಸಿದೆ. ಅದರಲ್ಲೂ ಜುಲೈ ತಿಂಗಳಿನಲ್ಲಿ ಎಸ್ ಯುವಿಗಳ ಮೇಲೆ ಶೇಕಡ 2.7ರಷ್ಟು ಗಮನಾರ್ಹ ಏರಿಕೆ ಮಾಡಲಾಗಿತ್ತು. ನಾವು ಮಾರುಕಟ್ಟೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇತ್ತೀಚಿನ ಕಚ್ಚಾ ವಸ್ತುಗಳ ಬೆಲೆಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ದರ ಹೆಚ್ಚಳದ ಅಗತ್ಯವಿದೆಯೇ ಎನ್ನುವುದನ್ನು ಮುಂದಿನ ಎರಡು ವಾರಗಳಲ್ಲಿ ತೀರ್ಮಾನಿಸಲಿದ್ದೇವೆ. ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗೆ ಬೆಲೆಗಳು ಏರಿಕೆಯಾಗಿದ್ದರೂ ಕೂಡ ವಾಹನಗಳ ವಿಚಾರಣೆ ಮತ್ತು ಮುಂಗಡ ಬುಕಿಂಗ್ ಗಳ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರಿಲ್ಲ.” ಎಂದು ತಿಳಿಸಿದ್ದಾರೆ.
ಅ.2ಕ್ಕೆ ಯುಪಿಐ ರಹಿತ ದಿನ: ಯುಪಿಐ ಶುಲ್ಕ ವಿರೋಧಿಸಿ ಹೋರಾಟ!
ನವದೆಹಲಿ: ಯುಪಿಐ ವಹಿವಾಟುಗಳ ಮೇಲೆ ವಿಧಿಸಿರುವಂತಹ ಶುಲ್ಕವನ್ನು ವಿರೋಧಿಸಿ ಅಕ್ಟೋಬರ್ 2ರ ಶುಕ್ರವಾರದಂದು ಭಾರತದಾದ್ಯಂತ ಇರುವಂತಹ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ನೋ ಯುಪಿಐ ಡೇ (ಯುಪಿಐ ರಹಿತ ದಿನ) ಅನ್ನು ಆಚರಿಸಲು ತೀರ್ಮಾನ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉದ್ಯಮ ಸಂಘಟನಾ ಎಐಎಂಆರ್ ನ ಉಪಾಧ್ಯಕ್ಷರಾದ ತರ್ವಿಂದರ್ ಸಿಂಗ್ ಅವರು “ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ಚಿಲ್ಲರೆ ವ್ಯಾಪಾರಿಗಳು ಸಾಂಕೇತಿಕವಾಗಿ ಯುಪಿಐ ಕ್ಯೂಆರ್ ಕೋಡ್ ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಿಟ್ಟು, ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವುದರಿಂದ ದೂರವಿರಲಿದ್ದಾರೆ” ಎಂದು ತಿಳಿಸಿದ್ದಾರೆ.







