ಬೆಂಗಳೂರು: ಪ್ರಸ್ತುತ ರಾಜ್ಯಾದ್ಯಂತ ಒಣಹವೆ ಆವರಿಸಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ವಾತಾವರಣದಲ್ಲಿ ಮತ್ತೆ ಬದಲಾವಣೆಯಾಗುವ ನಿರೀಕ್ಷೆ ಇದೆ. ಬಿಸಿಲು ಹೆಚ್ಚಳ ಕಾರಣ ಕೃಷಿ ಚಟುವಟಿಕೆ ಮಾಡಲು ಕಷ್ಟವಾಗಿದೆ. ನೀರಿಲ್ಲದೆ ಬೆಳೆ ಒಣಗುತ್ತಿದೆ.
ಸೆಪ್ಟೆಂಬರ್ 28ರ ಸೋಮವಾರದಂದು ಅರಬ್ಬಿ ಸಮುದ್ರದ ಗಾಳಿಯು, ಶ್ರೀಲಂಕಾದ ದಕ್ಷಿಣ ಕರಾವಳಿಯ ಮೂಲಕ ಬಂಗಾಳಕೊಲ್ಲಿಯನ್ನು ಪ್ರವೇಶಿಸಲಿದ್ದು, ತಮಿಳುನಾಡು ಭಾಗದ ಕರಾವಳಿಯ ಮುಖಾಂತರ ಭೂಭಾಗವನ್ನು ಪ್ರವೇಶಿಸುತ್ತದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಹಿಂಗಾರು ಮಳೆಯ ರೀತಿಯಲ್ಲಿ ಗುಡುಗು ಸಹಿತ ಮಳೆಯ ವಾತಾವರಣ ನಿರ್ಮಾಣಗೊಳ್ಳುತ್ತದೆ ಎನ್ನಲಾಗಿದೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಒಣಹವೆ ಮುಂದುವರಿದಿದ್ದು, ಮಳೆಯು ಸಂಭವಿಸುವ ಸಾಧ್ಯತೆ ಇದ್ದು, ವ್ಯಾಪಕ ಮಳೆಯಾಗುವ ರೀತಿಯಲ್ಲಿ ಯಾವುದೇ ಮುನ್ಸೂಚನೆ ಇಲ್ಲ.
ಕೊಡಗಿನ ಒಂದೆರಡು ಕಡೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಬಾಳೆಹೊನ್ನೂರು ಮತ್ತು ಮೂಡಿಗೆರೆ ಭಾಗಗಳಲ್ಲಿ ತುಂತುರು ಮಳೆಯಾಗಲಿದ್ದು, ಮಲೆನಾಡಿನ ಉಳಿದ ಭಾಗಗಳಲ್ಲಿ ಎಂದಿನಂತೆ ಒಣಹವೆ ಮುಂದುವರೆಯುತ್ತದೆ ಎನ್ನುವ ಮಾಹಿತಿ ಲಭಿಸಿದೆ.
ಉತ್ತರ ಒಳನಾಡಿನಲ್ಲೂ ಕೂಡ ಒಣಹವೆ ಮುಂದುವರೆದಿದ್ದು, ವ್ಯಾಪಕ ಮಳೆಯ ಮುನ್ಸೂಚನೆ ಇಲ್ಲವಾಗಿದ್ದು, ಹವಾಮಾನ ವ್ಯವಸ್ಥೆಯನ್ನು ಆಧರಿಸಿ, ಮಳೆಯ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಬಹುದು. ದಕ್ಷಿಣ ಒಳನಾಡಿನಲ್ಲೂ ಎಲ್ಲಾ ಕಡೆಗಳಂತೆ ಒಣಹವೆ ಇದ್ದು, ಸೆಪ್ಟಂಬರ್ 28ರ ಸೋಮವಾರದಂದು ಅರಬ್ಬಿ ಸಮುದ್ರದ ಗಾಳಿಯ ಚಲನೆಯಲ್ಲಿ ಬದಲಾವಣೆಯಾಗುವ ಹಿನ್ನೆಲೆಯಿಂದಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ಚಲನೆ ಮತ್ತು ವಾತಾವರಣದಲ್ಲಿನ ತೇವಾಂಶದ ಬದಲಾವಣೆಯಿಂದಾಗಿ ಕರ್ನಾಟಕದಲ್ಲೂ ಹಿಂಗಾರು ಮಳೆಯ ರೀತಿಯಲ್ಲಿ ಗುಡುಗು ಸಹಿತ ಮಳೆಯ ವಾತಾವರಣ ರೂಪಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.







