ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಗಣೇಶೋತ್ಸವದಲ್ಲಿ ಅದ್ದೂರಿ ಕಾರ್ಯಕ್ರಮ, ಮೆರವಣಿಗೆ, ಅಲಂಕಾರ, ಬೆಳಕಿನ ಅಲಂಕಾರದ ಮೂಲಕ 50ನೇ ವರ್ಷದ ಅದ್ದೂರಿ ಗಣೇಶೋತ್ಸವ ಮಾಡಿದ ಕುರುವಳ್ಳಿ ಗಣಪತಿ ಇದೀಗ ಅದ್ದೂರಿ ತೆರೆ ಕಂಡಿದೆ.
ತೀರ್ಥಹಳ್ಳಿಯಲ್ಲಿ ದಸರಾವನ್ನೇ ನೆನಪಿಸಿದ ಕುರುವಳ್ಳಿ ಗಣಪತಿಯು ಶನಿವಾರ ವಿಸರ್ಜನೆ ಮೂಲಕ ಐತಿಹಾಸಿಕ ಪುಟ ಸೇರಿದೆ.
ಮೆರವಣಿಗೆಯಲ್ಲಿ ತೀರ್ಥಹಳ್ಳಿ ದೇಗುಲಗಳ ದರ್ಶನದ ಟ್ಯಾಬ್ಲೋ
50ನೇ ವರ್ಷದ ಅದ್ದೂರಿ ಗಣೇಶೋತ್ಸವದ ರಾಜಬೀದಿ ಉತ್ಸವದಲ್ಲಿ ಜನಸಾಗರವೇ ಸೇರಿತ್ತು. ಮೆರವಣಿಗೆಯಲ್ಲಿ ತೀರ್ಥಹಳ್ಳಿ ದೇಗುಲಗಳ ದರ್ಶನದ ಟ್ಯಾಬ್ಲೋ, ಸೇತುವೆಗೆ ಬೆಳಕಿನ ಅಲಂಕಾರ, ಕ್ರೇನ್ ಮೂಲಕ ಗಣಪತಿ ವಿಸರ್ಜನೆ ಗಮನ ಸೆಳೆಯಿತು.
ಐದು ದಶಕಗಳ ಸಂಭ್ರಮಕ್ಕೆ ಸಾಕ್ಷಿಯಾದ ಕುರುವಳ್ಳಿ ಗಣಪತಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನಾ ಮೆರವಣಿಗೆ ಇಡೀ ತೀರ್ಥಹಳ್ಳಿ ಜನರ ಗಮನ ಸೆಳೆಯಿತು.
ಯುವಕ ಸಂಘ ಕುರುವಳ್ಳಿಯ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ಕುರುವಳ್ಳಿ ನಾಗರಾಜ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆದ 50ನೇ ವರ್ಷದ ಗಣೇಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಗಮನ ಸೆಳೆದ ಟ್ಯಾಬ್ಲೋ, ಕಲಾ ತಂಡಗಳು!
ತೀರ್ಥಹಳ್ಳಿ ಮಾರಿಕಾಂಬ ದೇವಸ್ಥಾನ, ಶ್ರೀ ರಾಮೇಶ್ವರ ದೇವಸ್ಥಾನ ಹಾಗೂ ಕುರುವಳ್ಳಿ ಸೇತುವೆ, ರಾಮಮಂಟಪ, ಆಕರ್ಷಕ ಟ್ಯಾಬ್ಲೋಗಳಾದ ಗೊರಿಲ್ಲಾ, ಹುಲಿವೇಷದ ಅಬ್ಬರ, ಸಾಂಪ್ರದಾಯಿಕ ಕುಣಿತ, ಭಜನಾ ತಂಡಗಳ ಭಕ್ತಿ. ವೈಭವ ಹಾಗೂ ಆಕರ್ಷಕ ಗೊಂಬೆಗಳ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಐವತ್ತು ವರ್ಷಗಳ ಸುದೀರ್ಘ ಪರಂಪರೆಯನ್ನು ಮೆಲುಕು ಹಾಕಿತು. ತೀರ್ಥಹಳ್ಳಿಯ ಸಾಂಸ್ಕೃತಿಕ ವೈಭವ ಮತ್ತು ಸಾರ್ವಜನಿಕರ ಒಗ್ಗಟ್ಟಿನ ಪ್ರತೀಕವಾಗಿ ಐತಿಹಾಸಿಕ ಪುಟ ಸೇರಿದೆ.







