ಬೆಂಗಳೂರು: ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಸಚಿವ ಖಾದರ್ ಅವರನ್ನು ಭೇಟಿ ಮಾಡಿ, ಅಡಿಕೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ, ಎಂಎಲ್‌ಸಿ ಅರತಿ ಕೃಷ್ಣ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ಅವರ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ತೀರ್ಥಹಳ್ಳಿ -ಮುಳುಬಾಗಿಲಿನಲ್ಲಿ ರಿಂಗ್ ರಸ್ತೆ ವಿರುದ್ಧ ಜನಾಂದೋಲನ
ತೀರ್ಥಹಳ್ಳಿ: ತೀರ್ಥಹಳ್ಳಿ -ಮುಳುಬಾಗಿಲಿನಲ್ಲಿ ರಿಂಗ್ ರಸ್ತೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ಪುರಾತನ ಭೀಮನಕಟ್ಟೆ (ಭೀಮಸೇ ತು )ಸೇತುವೆ,ಕೃಷಿ ಭೂಮಿ ಉಳಿಸಲು ಗ್ರಾಮಸ್ಥರ ಜನಾಂದೋಲನ ಶುರುವಾಗಿದೆ.
ಸರ್ಕಾರವು ಪ್ರಸ್ತಾಪಿಸಿರುವ ತಾತ್ಕಾಲಿಕ ಅನುಮೋದಿತ ‘ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್’ (ರಿಂಗ್ ರಸ್ತೆ) ಯೋಜನೆಗೆ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೃಷಿಯನ್ನೇ ನಂಬಿ ಬದುಕುತ್ತಿರುವ ನೂರಾರು ಬಡ ರೈತರ ಜಮೀನುಗಳು ಈ ಯೋಜನೆಯಿಂದ ನಾಶವಾಗಲಿವೆ ಎಂದು ಆರೋಪಿಸಿ ಗ್ರಾಮಸ್ಥರು ಶಿವಮೊಗ್ಗದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಅಧಿಕೃತ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.
ರೈತರ ಬದುಕಿಗೆ ಆಘಾತ: ಮುಳುಬಾಗಿಲು ಭಾಗದ ಬಹುತೇಕ ಜನ ಸಾಮಾನ್ಯರು ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ. ಉದ್ದೇಶಿತ ರಿಂಗ್ ರಸ್ತೆಯು ಇವರ ಸಣ್ಣ-ಪುಟ್ಟ ಜಮೀನುಗಳ ಮಧ್ಯೆಯೇ ಹಾದುಹೋಗುವುದರಿಂದ, ರೈತರು ತಮ್ಮ ಜೀವನೋಪಾಯದ ಏಕೈಕ ಆಧಾರವನ್ನು ಕಳೆದುಕೊಳ್ಳಲಿದ್ದಾರೆ. “ನಾವು ತಲೆತಲಾಂತರದಿಂದ ನಂಬಿ ಬಂದ ಭೂಮಿಯನ್ನು ರಸ್ತೆಗಾಗಿ ಬಿಟ್ಟುಕೊಟ್ಟರೆ ನಮ್ಮ ಮುಂದಿನ ಪೀಳಿಗೆಯ ಬದುಕು ಏನಾಗಬೇಕು?” ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ತಾಣಗಳ ಅಸ್ತಿತ್ವಕ್ಕೆ ಸಂಚಕಾರ: ರಸ್ತೆ ನಕ್ಷೆಯು ಕೇವಲ ರೈತರ ಭೂಮಿಯನ್ನಷ್ಟೇ ಅಲ್ಲದೆ, ಈ ಭಾಗದ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಶ್ರೀ ಭೀಮೇಶ್ವರ ದೇವಸ್ಥಾನ ಮತ್ತು ಪುರಾಣ ಪ್ರಸಿದ್ಧ ಭೀಮನಕಟ್ಟೆ ಭೀಮಸೇತು ಸನಿಹದಲ್ಲೇ ಹಾದುಹೋಗಲಿದೆ. ಈ ಆಧುನಿಕ ರಸ್ತೆ ಕಾಮಗಾರಿಯಿಂದ ಇಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗಳಿಗೆ ಶಾಶ್ವತ ಹಾನಿಯಾಗುವ ಆತಂಕ ಎದುರಾಗಿದೆ.
ಯೋಜನೆ ಸ್ಥಗಿತಕ್ಕೆ ಒಕ್ಕೊರಲಿನ ಆಗ್ರಹ:ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಸಭೆಯಲ್ಲೂ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗಿದ್ದು, ಗ್ರಾಮಸ್ಥರೆಲ್ಲರೂ ಒಮ್ಮತದಿಂದ ಯೋಜನೆಗೆ ತೀವ್ರ ವಿರೋಧ ದಾಖಲಿಸಿದ್ದಾರೆ.ಇದರಿಂದ ತೀರ್ಥಹಳ್ಳಿ ತಾಲೂಕಿನ ಜನಗಳಿಗೆ ಏನ ಉಪಯೋಗವಿಲ್ಲ ಇದರಿಂದ ಪರಿಸರ ನಾಶ ಅರಣ್ಯ ನಾಶ ತುಂಗಾ ನದಿಯ ನಾಶ ಪವಿತ್ರ ಕ್ಷೇತ್ರದ ನಾಶ ರೈತರ ನಾಶ ಇದರಲ್ಲಿ ದೊಡ್ಡ ಗುತ್ತಿಗೆದಾರರು ರಾಜಕಾರಣಿಗಳು ಅಧಿಕಾರಿಗಳಿಗೆ ಇದರಿಂದ ಲಾಭವಾಗುತ್ತದೆ ಜನಸಾಮಾನ್ಯರಿಗೆ ಸಮಸ್ಯೆನೇ ಜಾಸ್ತಿ ಆಗುತ್ತದೆ ಈ ಹಿನ್ನೆಲೆಯಲ್ಲಿ ಬಡವರ ಮತ್ತು ಧಾರ್ಮಿಕ ಕ್ಷೇತ್ರಗಳ ಹಿತದೃಷ್ಟಿಯಿ ಇಂದ ಸರ್ಕಾರವು ಈ ರಿಂಗ್ ರಸ್ತೆ ಯೋಜನೆಯನ್ನು ಕೂಡಲೇ ಕೈಬಿಡಬೇಕು ಒತ್ತಾಯಿಸಲಾಗಿದೆ. ಈ ಕುರಿತು ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳಿಗೂ ಪತ್ರದ ಪ್ರತಿಗಳನ್ನು ರವಾನಿಸಿ ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಸಹಿ ಸಂಗ್ರಹ ಚಳವಳಿಯ ಮೂಲಕ ಮನವಿ ಮಾಡಿದ್ದಾರೆ.
•ತೀರ್ಥಹಳ್ಳಿ: ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ತೀರ್ಥಹಳ್ಳಿ: ರೈತರಲ್ಲಿ ಆರೋಗ್ಯಕರ ಸ್ಪರ್ಧಾ ಭಾವನೆಯನ್ನು ಮೂಡಿಸುವ ಹಾಗೂ ಆಹಾರ ಬೆಳೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ 2026-27ನೇ ಸಾಲಿನ ಕೃಷಿ ಪ್ರಶಸ್ತಿಗಾಗಿ ರೈತರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಸಲ್ಲಿಸಬೇಕಾಗಿದ್ದು, ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಒಂದು ಎಕರೆಯಲ್ಲಿ ಭತ್ತ ಬೆಳೆಯುವ ರೈತರಾಗಿ ಪಹಣಿಯನ್ನು ಅಥವಾ ಜಮೀನು ಮಾಲೀಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರವನ್ನು ಅಂದರೆ ಜಿಪಿಎಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೆ ಭತ್ತದ ಬೆಳೆಯಲ್ಲಿ ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೂ ಏಕರೂಪದ ಅರ್ಜಿಯನ್ನು ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಆಸಕ್ತ ರೈತರು ಆಗಸ್ಟ್ 31ರ ಸೋಮವಾರದ ಒಳಗಾಗಿ ಭಾವಚಿತ್ರ, ಪಹಣಿ, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನೊಂದಿಗೆ ಆನ್ ಲೈನ್ ಮೂಲಕ ಸಲ್ಲಿಸಬೇಕಿದೆ. ಮತ್ತು ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಈ ಮೂಲಕ ತಿಳಿಸಲಾಗಿದೆ.
ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆ: ರಿಪ್ಪನ್ ಪೇಟೆ ವಿದ್ಯಾರ್ಥಿನಿಗೆ ದ್ವಿತೀಯ ಸ್ಥಾನ
ಹೊಸನಗರ: ಏಳನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಶಿವಮೊಗ್ಗದಲ್ಲಿ ನಡೆಸಲಾಗಿದ್ದು, ಈ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ವಿದ್ಯಾಸಂಘ ಶಿಶುಮಂದಿರದ ಸ್ಥಳೀಯ ಕರಾಟೆ ತರಗತಿಯು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಗಮನಸೆಳೆದಿದೆ. ಅದರಲ್ಲೂ ಕಾತಾ ವಿಭಾಗದಲ್ಲಿ ಪಾಲ್ಗೊಂಡಿದ್ದ ಹುಂಚದಕಟ್ಟೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಅಪೇಕ್ಷಾ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾಗಿದ್ದಂತಹ ಅಂತರರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿ, ಪ್ರಶಸ್ತಿಯನ್ನು ಗಳಿಸಿ, ತನಗೆ ತರಬೇತಿ ನೀಡಿದ ಕರಾಟೆ ತರಗತಿಗೆ, ಪೋಷಕರಿಗೆ ಮತ್ತು ಅವರ ಊರಾದ ರಿಪ್ಪನ್ ಪೇಟೆಗೆ ಕೀರ್ತಿಯನ್ನು ತಂದಿದ್ದಾರೆ. ಅಪೇಕ್ಷಾ ಅವರ ಈ ಕ್ರೀಡಾ ಸಾಧನೆಗೆ ಹೊಸನಗರ ಹೊಸನಗರ ತಾಲ್ಲೂಕು ಕರಾಟೆ ಶಿಕ್ಷಕರ ಸಂಘ, ಐಕಿ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಇಂಡಿಯಾ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ