ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಸಮೀಪ ಗುರುವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ. ಬಸ್ ಉಡುಪಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದತ್ತ ತನ್ನ ಎಂದಿನ ಸಂಚಾರದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ವೇಳೆ ಪ್ರಯಾಣಿಕರ ಸುರಕ್ಷತೆ ಹಾಗೂ ಹಾನಿಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
•ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ; ಇಬ್ಬರ ಬಂಧನ
ಪುತ್ತೂರು: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿ, ಪೊಲೀಸರು ದಾಳಿ ನಡೆಸಿದ ಘಟನೆ, ಮಂಗಳವಾರದಂದು ಕೊಣಾಲು ಗ್ರಾಮದ ಪಾಂಡಿಬೆಟ್ಟುವಿನ ರಬ್ಬರ್ ತೋಟದಲ್ಲಿನ ಖಾಲಿ ಜಾಗದಲ್ಲಿ ನಡೆದಿದೆ. ರಾತ್ರಿಯ ಗಸ್ತು ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಕೌಶಿಕ್ ಬಿ.ಸಿ ಮತ್ತು ಸಿಬ್ಬಂದಿಗಳು ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ಕಂಡೊಡನೆ ಅಲ್ಲಿ ನೆರೆದಿದ್ದ ಆರೋಪಿಗಳು ಓಡಿ ಹೋಗಿದ್ದು, ಇಬ್ಬರು ಆರೋಪಿಗಳು ಪೊಲೀಸರಿಗೆ ಸೆರೆಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆರೋಪಿಗಳನ್ನು ಕೊಣಾಲು ನಿವಾಸಿಗಳಾದ ಸುರೇಶ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಅಂಕಕ್ಕೆ ಬಳಸಿದ 5510ರೂಪಾಯಿ ಮೌಲ್ಯದ 7 ಹುಂಜಗಳನ್ನು, 1700ರೂಪಾಯಿ ನಗದು ಹಣವನ್ನು ಮತ್ತು 300ರೂಪಾಯಿ ಮೌಲ್ಯದ ಇತರ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: ಉಸಿರಾಟದ ಸಮಸ್ಯೆ; ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಪಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಬೆಳ್ಮಣ್ ಗ್ರಾಮದ ಪ್ರೇಮನಾಥ್ ಎಂದು ಗುರುತಿಸಲಾಗಿದೆ. ಹಿಂದೆ ಮರದ ಕೆಲಸ ಮಾಡಿಕೊಂಡಿದ್ದ ಪ್ರೇಮನಾಥ್ ಅವರು ಉಸಿರಾಟದ ಸಮಸ್ಯೆಯಿಂದಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ. ಸೋಮವಾರದಂದು ರಾತ್ರಿ ಮನೆಯಿಂದ ಹೊರಟಿದ್ದ ಅವರು ಬೆಳ್ಮಣ್ ಜಂತ್ರ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಮನೆಯವರು ಎಷ್ಟೇ ಬಲವಂತಪಡಿಸಿದರೂ ಹಿಂತಿರುಗಿ ಬರದೆ, ನಡೆದುಕೊಂಡು ಹೋಗಿದ್ದರು ಎನ್ನುವ ಮಾಹಿತಿ ಲಭಿಸಿದೆ. ಬಳಿಕ 1:30ರ ಸುಮಾರಿಗೆ ಅವರ ತಾಯಿಗೆ ಕರೆ ಮಾಡಿ ಪಳ್ಳಿ ಗ್ರಾಮದ ಹಳೆಯ ಮನೆಯಲ್ಲಿ ಇರುವುದಾಗಿ ತಿಳಿಸಿದ್ದರು. ಬಳಿಕ ಪ್ರೇಮನಾಥ್ ಅವರು ಯಾರ ಕರೆಯನ್ನು ಸ್ವೀಕರಿಸಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಆಗಸ್ಟ್ 18ರ ಮಂಗಳವಾರದಂದು ಅವರ ತಂಗಿ ತುಳಸಿಯವರು ನೋಡಿಕೊಂಡು ಬರೋಣವೆಂದು ಹಳೆಯ ಮನೆಯತ್ತ ತೆರಳಿದಾಗ, ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಕುಟುಂಬಸ್ಥರು ಮನೆಯ ಬಾಗಿಲನ್ನು ಒಡೆದು, ಒಳಗೆ ಹೋಗಿ ನೋಡಿದಾಗ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪ್ರೇಮನಾಥ್ ಅವರು ಕಂಡುಬಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೆಳ್ತಂಗಡಿ: ದಿನಸಿ ಅಂಗಡಿಯೊಳಗೆ ನುಗ್ಗಿದ ಕಾಳಿಂಗ ಸರ್ಪ
ಬೆಳ್ತಂಗಡಿ: 10ಅಡಿ ಉದ್ದದ ಕಾಳಿಂಗ ಸರ್ಪವೊಂದು ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ, ಬುಧವಾರದಂದು ಮಿತ್ತಬಾಗಿಲು ಗ್ರಾಮದ ಕಕ್ಕೇನೇಜಿ ಎನ್ನುವಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ವಾಸುದೇವ ರಾವ್ ಎನ್ನುವವರ ದಿನಸಿ ಅಂಗಡಿಗೆ ಮಧ್ಯಾಹ್ನದ ವೇಳೆಗೆ ಕಾಳಿಂಗ ಸರ್ಪವೊಂದು ಏಕಾಏಕಿ ನುಸುಳಿಕೊಂಡಿದೆ. ಇದರಿಂದ ಅಂಗಡಿಯವರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ವಾಸುದೇವ ರಾವ್ ಅವರು ಲಾಯಿಲದ ಪ್ರಸಿದ್ಧ ಉರಗ ತಜ್ಞರಾದ ಸ್ನೇಕ್ ಅಶೋಕ್ ಅವರಿಗೆ ವಿಚಾರ ತಿಳಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಶೋಕ್ ಅವರು ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸೆರೆಹಿಡಿದು, ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶಕ್ಕೆ ತಂದು ಬಿಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಬಂಟ್ವಾಳ: ವಿದ್ಯುತ್ ಆಘಾತಕ್ಕೆ ವ್ಯಕ್ತಿ ಬಲಿ
ಬಂಟ್ವಾಳ: ಟ್ರಾನ್ಸ್ ಫಾರ್ಮರ್ ಹತ್ತಿದ್ದ ಸಂದರ್ಭದಲ್ಲಿ, ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಕರಿಯಂಗಳ ಗ್ರಾಮದ ತಂತಿಬೆಟ್ಟು ಎನ್ನುವಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿಯನ್ನು ಹರೀಶ್.ಟಿ ಎಂದು ಗುರುತಿಸಲಾಗಿದೆ. ಸೋಮವಾರದಂದು ಬೆಳಿಗ್ಗೆ 7:೦೦ಗಂಟೆಗೆ ಮನೆಯವರು ಎದ್ದು ನೋಡಿದಾಗ ಹರೀಶ್ ಅವರು ಮನೆಯಲ್ಲಿ ಇರಲಿಲ್ಲ. 7:30ರ ಸುಮಾರಿಗೆ ಪುರುಷೋತ್ತಮ ಎನ್ನುವವರು ಹರೀಶ್ ಅವರ ಮನೆಯವರಿಗೆ ಕರೆ ಮಾಡಿದ್ದು, ತಂತ್ರಿಬೆಟ್ಟಿನ ಟ್ರಾನ್ಸ್ ಫಾರ್ಮರ್ ನಲ್ಲಿ ಸದ್ದು ಕೇಳಿಬಂದಿದ್ದು, ಹರೀಶ್ ದುರಸ್ತಿ ಮಾಡಲು ತೆರಳಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಹರೀಶ್ ಅವರ ಮೋಟಾರ್ ಸೈಕಲ್ ಟ್ರಾನ್ಸ್ ಫಾರ್ಮರ್ ಬಳಿ ಕಂಡುಬಂದಿದ್ದು, ಅವರು ಕೆಳಗೆ ಬಿದ್ದಿರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಯವರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆಯನ್ನು ನಡೆಸಿದಾಗ ಹರೀಶ್ ಅವರು ಟ್ರಾನ್ಸ್ ಫಾರ್ಮರ್ ಕೆಳಗಡೆ ಬಿದ್ದು, ಮೃತಪಟ್ಟಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.