ನವದೆಹಲಿ: ವಿಮೆಗಳಿಲ್ಲದೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕುರಿತು ಸರ್ವೋಚ್ಚ ನ್ಯಾಯಾಲಯವು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ಮೂರನೇ ದರ್ಜೆಯ ವಿಮೆ ಕಡ್ಡಾಯವಾಗಿದ್ದು, ಇದನ್ನು ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ‘ನೋ ಇನ್ಸೂರೆನ್ಸ್, ನೋ ಫ್ಯೂಯಲ್’ ಎನ್ನುವ ಪೈಲಟ್ ಯೋಜನೆಯನ್ನು ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನವನ್ನು ಸಹ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡಿರುವಂತಹ ದ್ವಿಸದಸ್ಯ ಪೀಠವು ರಸ್ತೆ ಸುರಕ್ಷತೆ ಮತ್ತು ಅಪಘಾತಕ್ಕೆ ಒಳಗಾಗಿರುವಂತಹ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ಕುರಿತು ಹಲವಾರು ಮಹತ್ವದಾಯಕ ಸೂಚನೆಗಳನ್ನು ಸಹ ನೀಡಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ ದೇಶದಲ್ಲಿ ನೋಂದಣಿಗೊಂಡಿರುವ 30.48ಕೋಟಿ ವಾಹನಗಳಲ್ಲಿ ಶೇಕಡ 56ರಷ್ಟು ವಾಹನಗಳಿಗೆ ಕಡ್ಡಾಯ ಮೂರನೇ ದರ್ಜೆಯ ವಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು “ವಿಮೆ ಇಲ್ಲದ ವಾಹನಗಳಿಂದಾಗಿ ಅಪಘಾತ ಸಂಭವಿಸಿದ್ದು, ನಿಖರವಾದ ಮಾಹಿತಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅಪಘಾತಕ್ಕೆ ಒಳಗಾದ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರವನ್ನು ನೀಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಅಪಘಾತಕ್ಕೆ ಒಳಗಾಗಿರುವ ಸಂತ್ರಸ್ತರ ಬದುಕು ಮತ್ತು ಜೀವನೋಪಾಯದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತಿದೆ. ಅಲ್ಲದೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿರುವಂತಹ ಜೀವಿಸುವ ಹಕ್ಕಿನ ವಿಚಾರಕ್ಕೂ ಇದು ಸಂಬಂಧಪಟ್ಟಿದೆ” ಎಂದು ತನ್ನ ಬೇಸರವನ್ನು ವ್ಯಕ್ತಪಡಿಸಿದೆ. ಇದನ್ನೆಲ್ಲಾ ತಡೆಗಟ್ಟುವ ನಿಟ್ಟಿನಲ್ಲಿ ‘ನೋ ಇನ್ಸೂರೆನ್ಸ್, ನೋ ಫ್ಯೂಯಲ್’ ಪೈಲಟ್ ಯೋಜನೆಯ ಮೂಲಕ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆಯನ್ನು ನಿರ್ಬಂಧಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸಂಬಂಧಿತ ಸಚಿವಾಲಯಗಳಿಗೆ ಆದೇಶವನ್ನು ಹೊರಡಿಸಿದ್ದು, ಜಾರಿಗೆ ತರಬಹುದಾದ ಅದರ ಸಾಧ್ಯತೆಯನ್ನು ಪರಿಶೀಲಿಸುವಂತೆ, ರಸ್ತೆಗಳಲ್ಲಿ ಈಗಾಗಲೇ ಅಳವಡಿಸಿರುವಂತಹ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ, ಕ್ಯಾಮೆರಾಗಳನ್ನು ವಾಹನ್ ಡೇಟಾ ಬೇಸ್ ಗೆ ಸಂಪರ್ಕಿಸುವಂತೆ ಕೂಡ ತಿಳಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ನ್ಯಾಯಾಲಯವು ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವ ಸಂಚಾರ ಪೊಲೀಸರಿಗೆ ವಿಮೆಯ ವಿವರಗಳನ್ನು ಕ್ಷಣಾರ್ಧದಲ್ಲಿ ಪರಿಶೀಲಿಸಲು ಬೇಕಾಗಿರುವಂತಹ ಡಿಜಿಟಲ್ ಸಾಧನಗಳನ್ನು ಒದಗಿಸಲು ಸಹ ಸೂಚನೆಯನ್ನು ನೀಡಿದೆ. ಇದಕ್ಕೆ ಸಾರ್ವಜನಿಕರು ಕೂಡ ಕೈಜೋಡಿಸುವ ಮೂಲಕ ಯಾವುದೇ ವಾಹನದ ವಿಮೆ ಸಕ್ರಿಯವಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಿ, ಸರಳ ಡಿಜಿಟಲ್ ವ್ಯವಸ್ಥೆಯ ಮೂಲಕ ಪರಿಶೀಲನೆ ನಡೆಸಿ, ವಿಮೆ ಇಲ್ಲದ ವಾಹನಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಿದೆ.







