ಶಿಕ್ಷಕರಿಗೆ, ಗಣತಿದಾರರಿಗೆ ಗಣತಿಯಿಂದ ಸಮಸ್ಯೆ..ಸಮಸ್ಯೆ…!
– ಸಮಸ್ಯೆ ಬಗೆಹರಿಸದ ಆಡಳಿತ, ಸರ್ಕಾರ: ಜನರಿಗೆ ಮಾಹಿತಿಯೇ ಇಲ್ಲ
– ಸರ್ವರ್ ಇರಲ್ಲ… ಸರ್ವರ್ ಇದ್ರೆ ನೆಟ್ವರ್ಕ್ ಇಲ್ಲ… ಗೋಳು ಕೇಳೋರಿಲ್ಲ
– ನೂರೆಂಟು ಸಮಸ್ಯೆ: ಗಣತಿದಾರರ ಬೇಡಿಕೆಗಳು ಏನೇನು?
ವಿಶೇಷ ವರದಿ: ಸಾಕ್ಷಿ ಭಟ್, ಬೆಂಗಳೂರು
NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ / ಎಲ್ಲಾ ಗಣತಿದಾರರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಎಲ್ಲೆಡೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ವತಿಯಿಂದ ದಿನಾಂಕ:22.09.2025 ರಿಂದ 07.10.2025 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶೇಕಡ 100% ರಷ್ಟು ಶಿಕ್ಷಕರನ್ನು ನಿಯೋಜಿಸಲಾಗಿರುತ್ತದೆ. ನಿಯೋಜನೆಗೊಂಡಿರುವ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯವರಿಗೆ, ಮಾನ್ಯ ಅಪರ ಜಿಲ್ಲಾಧಿಕಾರಿಯವರಿಗೆ, ತಾಲೂಕಲ್ಲಿ ತಹಶೀಲ್ದಾರವರಿಗೆ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಲವು ಬಾರಿ ಮನವಿ ನೀಡಲಾಗಿದೆ. ಆದರೆ ಯಾವುದೇ ಸಮಸ್ಯೆವು ಪರಿಹಾರವಾಗಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಕೊಟ್ಟಲ್ಲಿ ಶಿಕ್ಷಕರು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹಲವೆಡೆ ಹೋರಾಟಕ್ಕೆ ಮುಂದಾಗಿದ್ದಾರೆ.
ಸರ್ವರ್ ಇರಲ್ಲ,ಸರ್ವರ್ ಇದ್ರೆ ನೆಟ್ವರ್ಕ್ ಇಲ್ಲ, ಗೋಳು ಕೇಳೋರಿಲ್ಲ
ಗಣತಿಗೆ ಮಾಡಿಕೊಟ್ಟಿರುವ ಆಪ್ ಸರ್ವರ್ ಅನೇಕ ಸಮಯದಲ್ಲಿ ಇರಲ್ಲ,ಸರ್ವರ್ ಇದ್ರೆ ನೆಟ್ವರ್ಕ್ ಇಲ್ಲ, ಗೋಳು ಕೇಳೋರಿಲ್ಲ. ಇನ್ನು ಜನರಿಗೆ ಕೂಡ ಈ ಬಗ್ಗೆ ಆಸಕ್ತಿ ಇಲ್ಲ. ಆಧಾರ್ ಓಟಿಪಿ ಕಡ್ಡಾಯವಾಗಿರುವುದರಿಂದ ಅನೇಕ ಕಡೆ ಮೊಬೈಲ್ ಓಟಿಪಿ ಬರಲ್ಲ. ಇದರಿಂದ ಗಣತಿದಾರರು ಒಂದೇ ಮನೆಗೆ ಅನೇಕ ಬಾರಿ ಭೇಟಿ ನೀಡುವ ಸಂಕಷ್ಟ ಎದುರಾಗಿದೆ ಎಂಬ ದೂರು ಕೇಳಿ ಬಂದಿದೆ.
ತೀರ್ಥಹಳ್ಳಿ, ಕಾರ್ಕಳ, ಉಡುಪಿ ಸೇರಿ ಎಲ್ಲೆಡೆ ಹೋರಾಟ: ಓರ್ವ ಸಸ್ಪೆಂಡ್
ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಗೆ ಹಾಜರಾಗದ ಶಿಕ್ಷಕನಿಗೆ ಸರ್ಕಾರ ಶಾಕ್ ನೀಡಿದೆ. ಸಸ್ಪೆಂಡ್ ಮಾಡಿ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ. ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಸದರಿ ಹುದ್ದೆಯಲ್ಲಿ ಶ್ರೀಮತಿ ಚೇತನ, ಮುಖ್ಯ ಶಿಕ್ಷಕರು ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ಉಲ್ಲೇಖ (2)ರಂತೆ ನೇಮಿಸಲಾಗಿರುತ್ತದೆ. ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಕಾರಣ ಅಮಾನತು ಮಾಡಲಾಗಿದೆ.
ಗಣತಿ ದಾರರ ಬೇಡಿಕೆಗಳು ಏನೇನು?
* ಈ ಗಣತಿ ಕಾರ್ಯದಲ್ಲಿ ನಿವೃತ್ತಿಗೆ ಒಂದು ವರ್ಷವಿರುವವರನ್ನು, ತೀವ್ರತರದ ವಿಕಲಚೇತನರನ್ನು, ಗರ್ಭಿಣಿಯರನ್ನು ಹಾಗೂ ಆರೋಗ್ಯ ಸಮಸ್ಯೆ ಇರುವ ಗಣತಿದಾರರನ್ನು ತಕ್ಷಣದಿಂದ ಕೈ ಬಿಡುವುದು.
* ಇದೇ ಎಪ್ರಿಲ್ ನಲ್ಲಿ ಮಾಡಿದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಗಣತಿಯ ಗಣತಿದಾರರಿಗೆ ಇದುವರೆಗೆ ದೊರೆಯದ ಗೌರವಧನ ಹಾಗೂ ನ್ಯಾಯಬದ್ಧವಾಗಿ ಸಿಗಬೇಕಾದ ಗಳಿಕೆರಜೆಗೆ ಹಾಜರಾತಿ ಪ್ರಮಾಣಪತ್ರವನ್ನು ನೀಡುವುದು
* ಈ ಗಣತಿ ಕಾರ್ಯದಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಅವರ ಶಾಲಾ ಸ್ಥಳ ಅಥವಾ ಅಲ್ಲೇ ಪಕ್ಕದ ಏರಿಯಾದಲ್ಲಿ ಗಣತಿ ಮಾಡುವಂತೆ ನೋಡಿಕೊಳ್ಳುವುದು.
* ಎಲ್ಲಾ ಇಲಾಖೆಯ ನೌಕರರನ್ನು ಸರಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗಣತಿಗೆ ಬಳಸಿಕೊಳ್ಳುವುದು
* ಪ್ರೌಢಶಾಲಾ ಶಿಕ್ಷಕರನ್ನು ಕೊನೆಯ ಆದ್ಯತೆಯಲ್ಲಿ ಪರಿಗಣಿಸುವುದು.
* ಬಿ.ಎಲ್.ಒ. ಗಣತಿದಾರರನ್ನು ಈ ಕಾರ್ಯದಿಂದ ತಕ್ಷಣ ಕೈಬಿಡುವುದು
* ಗಣತಿಯ ಆ್ಯಪ್ ನಲ್ಲಿರುವ ತಾಂತ್ರಿಕ ತೊಂದರೆಯನ್ನು ತಕ್ಷಣ ಸರಿಪಡಿಸುವುದು.
* ಗಣತಿದಾರರಿಗೆ ಗಣತಿ ಪ್ರದೇಶದ ಮನೆ ಪಟ್ಟಿಯ ಹಾರ್ಡ್ ಪ್ರತಿಯನ್ನು ತಕ್ಷಣ ಒದಗಿಸುವುದು,
* ಗಣತಿದಾರರಿಗೆ ತಮ್ಮ ಶಾಲೆ ಅಥವಾ ಅನುಕೂಲವಾಗುವ ಪ್ರದೇಶದಲ್ಲಿ ಗಣತಿಗೆ ನಿಯೋಜಿಸುವುದು.
* ಮಹಿಳಾ ಗಣತಿದಾರರಿಗೆ ದೂರದ ದುರ್ಗಮ ಪ್ರದೇಶಕ್ಕೆ ನಿಯೋಜಿಸದೆ ಅವರಿಗೆ ಅನುಕೂಲವಾಗುವ ಸ್ಥಳದಲ್ಲಿ ಗಣತಿಗೆ ಅವಕಾಶ ಕೊಡುವುದು.
* ಗಣತಿ ಮನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು
* ಗಣತಿಗೆ ನೀಡಿರುವ ಮನೆಗಳು ಒಂದೇ ಪ್ರದೇಶಕ್ಕೆ ಸಂಬಂಧಪಟ್ಟದ್ದಾಗಿರಬೇಕು.
* ದಿನಕ್ಕೆ ಇಂತಿಷ್ಟೇ ಮನೆಗಳನ್ನು ಮಾಡಬೇಕು ಎಂಬ ಒತ್ತಡ ಹೇರಬಾರದು.
* ಈ ಗಣತಿ ಬಗ್ಗೆ ಗ್ರಾಮ ಪಂಚಾಯತ್ ಮೂಲಕ ಪ್ರತಿ ಮನೆಯವರಿಗೆ ಮನವರಿಕೆ ಮಾಡಿ, ಗಣತಿ ಕಾರ್ಯ ಯಶಸ್ವಿಯಾಗಲು ಸಹಕಾರ ನೀಡುವುದು.
