ವೃದ್ಧೆ ಜೀವ ತೆಗೆದ ನಾಗರ ಹಾವು..ಸರ್ಕಾರವೂ ಕಾರಣ!
* ನದಿ ದಾಟಲು ಆಗದೆ ಹಾವು ಕಚ್ಚಿ ಅಸುನೀಗಿದ ವೃದ್ದೆ
* ಈ ಸಾವಿಗೆ ನಾಗರ ಹಾವು ಮಾತ್ರ ಅಲ್ಲ, ಆಡಳಿತವೂ ಹೊಣೆ!
NAMMUR EXPRESS NEWS
ತೀರ್ಥಹಳ್ಳಿ: ಕೋಣಂದೂರು ಸಮೀಪದ ಆಲಸೆ ಗ್ರಾಮದಲ್ಲಿ ಇತ್ತೀಚಿಗೆ ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವು ತಾನು ಹೊಂಚು ಹಾಕಿದ ಬೇಟೆ ತಪ್ಪಿಸಿಕೊಂಡಿತು ಎಂಬ ಸಿಟ್ಟಿನಲ್ಲಿ ಜಾನಕಮ್ಮ(85)ಎಂಬ ವೃದ್ದೆಯ ಜೀವವನ್ನೇ ಕಿತ್ತುಕೊಂಡ ಘಟನೆ ನಡೆದಿದೆ. ಒಂದು ಕಡೆ ಅಜ್ಜಿಯ ಜೀವ ಹೋಗಲು ಹಾವು ಕಾರಣ ಆದ್ರೆ ಮತ್ತೊಂದು ಕಡೆ ಈ ಗ್ರಾಮಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಕೊಡದ ಆಡಳಿತ ಕೂಡ ಈ ಸಾವಿಗೆ ಕಾರಣವಾಗಿದೆ.
ಹಾವು ಕಚ್ಚಿದ ತಕ್ಷಣ ಸ್ಥಳೀಯರು ವೃದ್ದೆಯನ್ನು ಹೊತ್ತು ಕೊಂಡು ಸ್ವಲ್ಪ ದೂರ ಗೌರಿ ಹೊಳೆ ಎಂಬ ಹೊಳೆಯಲ್ಲಿ ನಡೆದು ಕೊಂಡೆ ಅವರನ್ನು ಕೋಣಂದೂರು ಆಸ್ಪತ್ರೆಗೆ ದಾಖಲಿಸಿದರೂ, ಕೋಣಂದೂರಿನಿಂದ ತೀರ್ಥಹಳ್ಳಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜಾನಕಮ್ಮ ಅವರು ಪ್ರಾಣ ಬಿಟ್ಟಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ನಾಗರಹಾವು ಮರುದಿನವೂ ಅದೇ ಜಾಗದಲ್ಲಿ ಮತ್ತೆ ಕಾಣಿಸಿಕೊಂಡಿದೆ. ತಕ್ಷಣ ಉರಗ ತಜ್ಞರನ್ನು ಕರೆಸಿ ನಾಗರ ಹಾವನ್ನು ಹಿಡಿಸಿದ್ದಾರೆ.
ಗ್ರಾಮದ ಜನರ ಗೋಳುಕೇಳೋರಿಲ್ಲ..!
ಅಲಸೆ ಗ್ರಾಮದಲ್ಲಿ ಸುಮಾರು 15 ಮನೆಗಳಿದ್ದು ಆಲಸೆ ಗ್ರಾಮದಲ್ಲಿ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಚಂಡಿಕೇಶ್ವರಿ ದೇವಿ ನೆಲೆಸಿರುವ ಪುಣ್ಯಕ್ಷೇತ್ರವಾಗಿದೆ, ದಿನದಲ್ಲಿ ನೂರಾರು ಭಕ್ತರು ಭೇಟಿ ನೀಡುತ್ತಾರೆ ಆದರೆ ಇಲ್ಲಿನ ಕೆಲವು ಮನೆಗಳ ಪರಿಸ್ಥಿತಿ ಕರುಣಾಜನಕ ಮನೆಯ ಬಳಿ ಹರಿಯುವ ಸಣ್ಣ ನದಿ ಮತ್ತು ಅಲ್ಲಿ ನಿರ್ಮಾಣವಾಗದ ಕಾಲು ಸಂಕ (ಕಾಲುವೆ ಸೇತುವೆ) ಕಾರಣದಿಂದ ಗ್ರಾಮವು ದ್ವೀಪದಂತಾದ ಪರಿಸ್ಥಿತಿಯಲ್ಲಿ ಸಿಲುಕಿದೆ. ಮಳೆ ಬಂದರೆ ಹೊರಗೆ ಹೋಗುವುದು ಕಷ್ಟ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ಜನರು ಜೀವ ಪಣಕ್ಕಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ, ಶಾಸಕರು, ಅಧಿಕಾರಿಗಳು ಕಣ್ಮುಚ್ಚಿಕೊಂಡಿದ್ದಾರೆ. ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲ. ಸೌಲಭ್ಯಗಳ ಕೊರತೆಯಿಂದ ವೃದ್ದೆಯ ಜೀವ ಹೋದರೂ ಯಾವ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಕಣ್ಣೀರು ಒರೆಸಬೇಕಾದ ಸರ್ಕಾರವೇ ಕಾಣದಂತೆ ನಡೆದುಕೊಳ್ಳುತ್ತಿರುವ ಈ ನಿರ್ಲಕ್ಷ್ಯ, ಈಗ ಜನರ ಕೋಪಕ್ಕೆ ಕಾರಣವಾಗಿದೆ. ಊರಿನಲ್ಲಿ ಭಯದ ವಾತಾವರಣದ ಜೊತೆಗೆ ಸಿಟ್ಟು, ಬೇಸರ ಮತ್ತು ಪ್ರಶ್ನೆಗಳ ಮಳೆ ಮುಂದಿನ ಬಾರಿ ಮತ ಕೇಳಲು ಬರುವ ರಾಜಕಾರಣಿಗಳಿಗೆ ಶಾಪ ಆಗಲಿದೆ. ಯಾವುದೇ ಸರ್ಕಾರ ಬಂದರೂ ಈ ಗ್ರಾಮದ ಜನರ ಸಣ್ಣ ಬೇಡಿಕೆ ಕೂಡ ಈಡೇರಿಲ್ಲ. ಅಧಿಕಾರಿಗಳು ತಕ್ಷಣ ಗಮನಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ.
