Categories
ಮಾಹಿತಿ

ವರವ ಕೊಡೆ ವರ ಮಹಾಲಕ್ಷ್ಮಿ!

ವರವ ಕೊಡೆ ವರ ಮಹಾಲಕ್ಷ್ಮಿ!
– ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಏಕೆ.. ಹೇಗೆ..?
– ಹಣ, ಚಿನ್ನ, ಸಂಪತ್ತು ಕೊಡುವ ಲಕ್ಷ್ಮಿ ಆರಾಧನೆ ಏಕೆ ಮಾಡಬೇಕು..?

NAMMUR EXPRESS NEWS
ಹಿಂದೂ ಸಂಪ್ರದಾಯದಲ್ಲಿ ವೃತಗಳಿಗೆ ವಿಶಿಷ್ಟ ಸ್ಥಾನಮಾನವಿದೆ. ಅದರಲ್ಲೂ ಶ್ರಾವಣ ಮಾಸದ ಹುಣ್ಣಿಮೆಯ ಮೊದಲ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ವ್ರತವನ್ನು ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ವೃತಮಾಡಿ ಸಕಲ ಐಶ್ವರ್ಯ ವೃದ್ಧಿ ಮಾಡುವ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಏನಿದು ವರಮಹಾಲಕ್ಷ್ಮಿ ವ್ರತ?

ಕೇಳಿದೆಲ್ಲ ದಯಪಾಲಿಸುವ ದೇವಿಯೇ ವರಮಹಾಲಕ್ಷ್ಮಿ. ಆಕೆಯನ್ನು ಪೂಜಿಸುವ ಹಬ್ಬವೇ ವರಮಹಾಲಕ್ಷ್ಮೀ ಹಬ್ಬ. ಹಾಗಾದ್ರೆ ಇದರ ಇತಿಹಾಸ ಏನು..? ಒಮ್ಮೆ ದುರ್ವಾಸ ಮಹರ್ಷಿಗಳ ಶಾಪದಿಂದ ಇಂದ್ರನ ಜೊತೆ ವೈಕುಂಠ ಅಧಿಪತಿಯ ಮಡದಿಯಾದ ಲಕ್ಷ್ಮಿ ದೇವಿಯು ಸಹ ರಾಜ್ಯ ಭ್ರಷ್ಟಳಾಗುತ್ತಾಳೆ. ಆದ ಕಾರಣ ಲಕ್ಷ್ಮಿ ದೇವಿ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಬ್ರಹ್ಮದೇವ ಮತ್ತು ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ತ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಮತ್ತೆ ಕ್ಷೀರಸಮುದ್ರದ ಮಂಥನದ ಫಲವಾಗಿ ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುನೊಂದಿಗೆ ವಿವಾಹವಾದಳು. ಈ ದಿನವನ್ನು ಸಕಲವನ್ನು ನೀಡುವ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಈ ವ್ರತ ಆಚರಣೆಯ ಇತಿಹಾಸದ ಬಗ್ಗೆ ನಾನಾ ರೀತಿಯ ಕಥೆಗಳು ಪ್ರಚಲಿತದಲ್ಲಿದೆ.

ವರಮಹಾಲಕ್ಷ್ಮಿ ವ್ರತದ ಆಚರಣೆ ಹೇಗೆ?

ವರಮಹಾಲಕ್ಷ್ಮಿಯು ಅಷ್ಟ ಲಕ್ಷ್ಮಿಯ ಸಂಯೋಜಿತ ಶಕ್ತಿಯನ್ನು ಹೊಂದಿದ್ದಾಳೆನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ವ್ರತದ ಆಚರಣೆಯನ್ನ ಹೆಚ್ಚಾಗಿ ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಹಾಗಾಗಿ ಪೀಳಿಗೆಯಿಂದ ಪೀಳಿಗೆಗೆ ಆಚರಣೆ ಮುಂದುವರಿದಿದೆ. ವ್ರತವನ್ನುಆಚರಿಸುವವರು ಇಡೀ ದಿನ ಉಪವಾಸವಿದ್ದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪೂಜಾ ಸ್ಥಳವನ್ನ ಶುದ್ದಿಕರಿಸಿ ಮರದ ಮಣೆ ಮೇಲೆ ನೀರಿನಲ್ಲಿ ಬೆರೆಸಿದ ಅರಿಶಿನವನ್ನು ಹಚ್ಚಿ ಮತ್ತು ನಂತರ ಅಕ್ಕಿ ಪುಡಿಯಿಂದ ರಂಗೋಲಿಯನ್ನು ಹಾಕುತ್ತಾರೆ. ಅನಂತರ ಮರದ ಮಣೆಯ ಮಧ್ಯದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಅದರ ಮೇಲೆ ಲೋಹದ ತಟ್ಟೆಯನ್ನು ಇಡುತ್ತಾರೆ. ಅ ತಟ್ಟೆಯಲ್ಲಿ ಅಕ್ಕಿಯನ್ನು ಸಮವಾಗಿ ಹರಡಿ.ಅರಿಶಿನ ಮತ್ತು ಕುಂಕುಮವನ್ನು ಕಲಶದ ಮೇಲೆ ಹಚ್ಚಿ ಮತ್ತು ತಟ್ಟೆಯ ಮಧ್ಯದಲ್ಲಿ ಇಡಲಾಗುತ್ತದೆ.ಕಲಶಕ್ಕೆ ನೀರು ಹಾಕಿ ಸ್ವಲ್ಪ ಅಕ್ಷತೆ ಹಾಕಿ, ಕಲಶದ ಮೇಲೆ ತೆಂಗಿನಕಾಯಿ ಇರಿಸಿ.

ತೆಂಗಿನಕಾಯಿಯ ಮೇಲೆ ಲಕ್ಷ್ಮಿ ದೇವಿಯ ಮುಖವನ್ನು ಹಾಕಿ ಅ ಕಳಸಕ್ಕೆ ಸೀರೆಯನ್ನು ಉಡಿಸಿ, ಆಭರಣವನ್ನು ತೊಡಿಸಿ ಕಳಸವನ್ನೆ ಸಾಕ್ಷಾತ್ ದೇವಿಯ ವಿಗ್ರಹದಂತೆ ರೆಡಿ ಮಾಡಿ ಕನ್ನಡಿಯನ್ನು ಇಟ್ಟು ಎಣ್ಣೆಯ ದೀಪವನ್ನು ಬೆಳಗಿಸಿ ದೇವಿಯ ಮುಂದೆ ಹಳದಿ ಬಣ್ಣದ ದಾರವನ್ನು ಇಡಲಾಗುತ್ತದೆ. ನಂತರ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿ , ವರಲಕ್ಷ್ಮಿ ದೇವಿಗೆ ಸಮರ್ಪಿತವಾದ ಪವಿತ್ರ ಮಂತ್ರಗಳನ್ನು ಪಠಿಸಲಾಗುತ್ತದೆ. ನೈವೇದ್ಯ ಮಾಡಲಾಗುತ್ತದೆ.

ಪೂಜೆ ಮಾಡಿದ್ರೆ ಇಷ್ಟಾರ್ಥ ನೆರವೇರುತ್ತೆ!

ವರಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ಕೇಳಿದೆಲ್ಲ ಕಲ್ಪಿಸುವ ದೇವಿ. ಹಿಂದೂ ಸಂಪ್ರದಾಯದ ಪ್ರಕಾರ, ವರಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭೂಮಿ, ಐಶ್ವರ್ಯ, ಸಂಪತ್ತು, ಬುದ್ಧಿವಂತಿಕೆ, ಪ್ರೀತಿ, ಖ್ಯಾತಿ, ಶಾಂತಿ, ಸಿಗುತ್ತದೆ ಆದ್ದರಿಂದ ವಿವಾಹಿತ ಮಹಿಳೆ ಕುಟುಂಬದ ಹಿತದೃಷ್ಟಿಯಿಂದ ವ್ರತವನ್ನು ಆಚರಿಸಿದ್ದಾರೆ. ಈ ದಿನ ವರಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾಗಿರುವುದ್ದರಿಂದ ಸಕಲ ಇಷ್ಟಾರ್ಥವು ಈಡೇರುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಅತ್ಯಂತ ಮಂಗಳಕರ ದಿನ. ಆದ್ದರಿಂದ ಶ್ರಾವಣ ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸುವುದು ಅತ್ಯಂತ ಪುಣ್ಯಕರವಾಗಿದೆ.

ಎಲ್ಲರೂ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶಭಾಶಯಗಳು.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಂಗಳೂರು ವಿಮಾನ ನಿಲ್ದಾಣಕ್ಕೆ ಹೈಟೆಕ್ ಭದ್ರತೆ!
– 20 ವರ್ಷ ತಲೆಮರಸಿಕೊಂಡಿದ್ದ ಆರೋಪಿ ಅರೆಸ್ಟ್!
– ಮಾಯದಂತೆ ಚಿನ್ನದ ಸರ ಕದ್ದು ಹೋದ ಯುವಕ!

NAMMUR EXPRESS NEWS
ಮಂಗಳೂರು: ರಾಜ್ಯದ ಪ್ರಸಿದ್ಧ ವಿಮಾನ ನಿಲ್ದಾಣದಲ್ಲಿ ಒಂದಾದ ಮಂಗಳೂರು ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತೆ ಒದಗಿಸುವ ಪಡೆ ನೀಡಲಾಗಿದೆ. ಈ ಮೂಲಕ ಕರಾವಳಿಯ ವಿಮಾನ ನಿಲ್ದಾಣ ಮತ್ತಷ್ಟು ಸುರಕ್ಷಿತ ಆಗಲಿದೆ. ಭದ್ರತೆಯ ಉದ್ದೇಶಕ್ಕಾಗಿ ಏರ್‌ಪೋರ್ಟ್‌ ಸೆಕ್ಯುರಿಟಿ ಗ್ರೂಪ್(ASG)ಗೆ ಇದೀಗ ಬಾಂಬ್‌ ಸೂಟ್ ನೀಡಲಾಗಿದೆ. ವಿಮಾನ ನಿಲ್ದಾಣದ ಆವರಣದಲ್ಲಿ ಸ್ಫೋಟಕಗಳನ್ನು ಒಳಗೊಂಡ ಯಾವುದೇ ಭದ್ರತಾ ಬೆದರಿಕೆಯನ್ನು ನಿಷ್ಕ್ರಿಯಗೊಳಿಸಲು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವು ಬಾಂಬ್ ಸೂಟ್ ಅನ್ನು ಬಳಸಲಿದೆ. ಸ್ಫೋಟಕಗಳನ್ನು ಎದುರಿಸಲು ತರಬೇತಿ ಪಡೆದ ಎಎಸ್‌ಜಿ ಸಿಬ್ಬಂದಿಗೆ ಹೆಚ್ಚು ಅಗತ್ಯವಾದ ಆತ್ಮವಿಶ್ವಾಸ ಮತ್ತು ತುರ್ತು ಭದ್ರತಾ ಬೆದರಿಕೆಗಳನ್ನು ಎದುರಿಸಲು ರಕ್ಷಣೆಯನ್ನು ನೀಡುತ್ತದೆ.

20 ವರ್ಷ ತಲೆಮರಸಿಕೊಂಡಿದ್ದ ಆರೋಪಿ ಅರೆಸ್ಟ್!

ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2003ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳದ ಕೋಯಿಕ್ಕೋಡ್‌ ಸಮೀಪದ ನೌಷದ್‌ ಯಾನೆ ಹಂಸದ್‌ (46) ಬಂಧಿತ ಆರೋಪಿ. ಕೋಯಿಕ್ಕೋಡ್‌ ಜಿಲ್ಲೆಯ ಪೇರಾಂಬರದಲ್ಲಿ ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿದೆ.

ಮಾಯದಂತೆ ಚಿನ್ನದ ಸರ ಕದ್ದು ಹೋದ ಯುವಕ!

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದರೊಬ್ಬರ ಜತೆ ಮಾತನಾಡುತ್ತ ಅವರಿಗೆ ಅವರ ಕತ್ತಿನಲ್ಲಿದ್ದ 14 ಗ್ರಾಮ್‌ ತೂಕದ ಚಿನ್ನದ ಸರವನ್ನು ಅಪರಿಚಿತನೋರ್ವ ಪಡೆದು ವಂಚಿಸಿದ ಘಟನೆ ಬುಧವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ್‌ ಟೈಲರ್‌ (70) ಎಂಬವರು ಮುಂಜಾನೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ಭೇಟಿಯಾದ ಯುವಕನೋರ್ವ ಅವರನ್ನು ಮಾತಿಗೆಳೆದು ಅವರಿಗೆ ಅರಿವಿಲ್ಲದೆಯೇ ಅವರಾಗಿಯೇ ಅವರ ಕತ್ತಿನಲ್ಲಿದ್ದ ಚಿನ್ನಾಭರಣವನ್ನು ಆತನ ಕೈಗಿತ್ತರು. ತಾವು ವಂಚನೆಗೆ ಒಳಗಾದ ಬಗ್ಗೆ ಅರಿವಾಗುತ್ತಲೇ ಆತನಿಗಾಗಿ ಹುಡುಕಾಟ ನಡೆಸಿದರಾದರೂ ವಿಫ‌ಲರಾಗಿ ಪೊಲೀಸರಿಗೆ ದೂರು ನೀಡಿದರು.ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ ಹೊಸ ಬಸ್‌ ನಿಲ್ದಾಣದ ಸಮೀಪ ಇರುವ ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ಕಳ್ಳನೋರ್ವ ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಶೈಲೇಶ್‌ ಗಾಣಿಗ ಹಾಗೂ ನಿತೀನ್‌ ಸುವರ್ಣ ಅವರ ಕೋಳಿ ಮಾಂಸ ಮಾರಾಟ ಅಂಗಡಿಗೆ ನುಗ್ಗಿದ ಕಳ್ಳನೋರ್ವ ಶೈಲೇಶ್‌ ಅಂಗಡಿಯೊಳಗಿದ್ದ ಒಂದು ಅಂಗಡಿಯಿಂದ 10 ಸಾವಿರ ರೂ. ಎಗರಿಸಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

Categories
ಮಲ್ನಾಡ್

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ!

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ!
– ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿಗೆ ಜನ ರಶ್
– ಅಂಗಡಿ ಮಾಲೀಕರ ಮೊಗದಲ್ಲಿ ಮೂಡಿದ ಮಂದಹಾಸ
– ಬಟ್ಟೆ, ಜ್ಯುವೆಲ್ಲರಿ ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಳ

NAMMUR EXPRESS NEWS
ಮಲೆನಾಡು: ತೀರ್ಥಹಳ್ಳಿ ತಾಲೂಕಿನಾದ್ಯಂತ ಜನರು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದು ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನವಾದ ಗುರುವಾರ ಹೂವು ಹಾಗೂ ಹಣ್ಣು ಖರೀದಿಸಲು ಪೇಟೆಗೆ ಜನ ಆಗಮಿಸಿದ್ದಾರೆ.
ಹೂವು-ಹಣ್ಣು ಅಂಗಡಿ, ಪೂಜಾ ಸಾಮಗ್ರಿಗಳ ಅಂಗಡಿ ಹಾಗೂ ಫ್ಯಾನ್ಸಿ ಸ್ಟೋರ್ ಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಮಹಿಳೆಯರು ಫ್ಯಾನ್ಸಿ ಸ್ಟೋರ್ ನಲ್ಲಿ ಗಾಜಿನ ಬಳೆಗಳನ್ನು ತೆಗೆದುಕೊಳ್ಳುವುದು ಹಾಗೂ ದೇವಿಯ ಮುಖ, ಆಭರಣ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿರುವಂತಹ ದೃಶ್ಯಗಳು ಕಂಡುಬರುತ್ತಿವೆ.
ಇನ್ನು ವರಮಹಾಲಕ್ಷ್ಮಿ ಹಬ್ಬವಾಗಿರುವುದರಿಂದ ಎಲ್ಲಾ ಮನೆ ಮನೆಗಳನ್ನು ಲಕ್ಷ್ಮಿ ಪೂಜೆ ಮಾಡುವುದರಿಂದ ಹೂವು ಹಾಗೂ ಹಣ್ಣಿನ ಬೆಲೆ ಏರಿಕೆಯಾಗಿದೆ. ಜನರು ಬೆಲೆ ಏರಿಕೆಯನ್ನು ಲೆಕ್ಕಿಸದೆ ವರಮಹಾಲಕ್ಷ್ಮಿಗೆ ಹೂವು ಹಣ್ಣು ಖರೀದಿಸುತ್ತಿದ್ದಾರೆ. ಇನ್ನು ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದರಿಂದ ಅಂಗಡಿ ಮಾಲೀಕರು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಆಭರಣ, ಬಟ್ಟೆ ಖರೀದಿ ಜೋರು!

ತೀರ್ಥಹಳ್ಳಿಯ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಚಿನ್ನದ ಅಂಗಡಿಗಳಾದ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ಗಾಯತ್ರಿ ಜ್ಯುವೆಲ್ಲರಿ, ಅನ್ನಪೂರ್ಣ, ಆಚಾರ್ಯ ಸೇರಿದಂತೆ ಜ್ಯುವೆಲ್ಲರಿಯಲ್ಲಿ ಗ್ರಾಹಕರು ಹೆಚ್ಚಿದ್ದಾರೆ.

ಮನೆ ಮನೆಯಲ್ಲೂ ಸಂಭ್ರಮ

ವರಮಹಾಲಕ್ಷ್ಮಿ ಹಬ್ಬದಂದು ಮನೆಯಲ್ಲಿ ಲಕ್ಷ್ಮಿ ಕೂರಿಸಿ ಹಣ,ಹಣ್ಣು, ಬಂಗಾರ ಇಟ್ಟು ಪೂಜೆ ಮಾಡುವ ಆಚರಣೆ ಎಲ್ಲಾ ಕಡೆ ಇದೆ. ಇದೀಗ ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿವೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು
– ದೊಡ್ಡಬಳ್ಳಾಪುರ ಭೂಚನಹಳ್ಳಿಯ ಕೆರೆಯಲ್ಲಿ ಘಟನೆ
– ಶಾಲೆಯ ವಿದ್ಯಾರ್ಥಿನಿ ಮದುವೆ: ಮಾಸ್ಟರ್ ಸಸ್ಪೆಂಡ್!
– ನಟಿ ಉಳಿದುಕೊಂಡಿದ್ದ ಕೋಣೆಗೆ ಸೀಕ್ರೆಟ್ ಕ್ಯಾಮರಾ
– ಮೇಲಾಧಿಕಾರಿಗಳ ಕಿರುಕುಳ: ಆತ್ಮಹತ್ಯೆ ಯತ್ನ
– ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ: ನಾಲ್ವರು ಅಮಾನತು

NAMMUR EXPRESS NEWS
ಬೆಂಗಳೂರು: ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯ ಕೆರೆಯಲ್ಲಿ ನಡೆದಿದೆ. ಮೃತರನ್ನು ತಂದೆ ಪುಟ್ಟರಾಜು(42), ಮಗ ಕೇಶವ(14) ಎಂದು ಗುರುತಿಸಲಾಗಿದೆ. ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ತಾವರೆ ಹೂ ಬೇಕೆಂದು ಹೂ ಕೀಳಲು ಕೆರೆದ ಇಳಿದ ತಂದೆ, ಮಗ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮೃತಪಟ್ಟವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಯ ವಿದ್ಯಾರ್ಥಿನಿ ಮದುವೆಯಾದ ಮಾಸ್ಟರ್ ಸಸ್ಪೆಂಡ್!

ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಗೌಪ್ಯವಾಗಿ ವಿವಾಹ ಮಾಡಿಕೊಂಡಿದ್ದ ಶಾಲಾ ಶಿಕ್ಷಕನಿಗೆ ಅಮಾನತು ಮಾಡಲಾಗಿದೆ. ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಸಂದೀಪ್ ಕುಮಾರ್ ಅವರನ್ನು ಅಮಾನತು ಮಾಡಿರುವ ಬಗ್ಗೆ ವರದಿಯಾಗಿದೆ.ಶಿಕ್ಷಕ ಸಂದೀಪ್ ಕುಮಾರ್ ಅವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಡಿಡಿಪಿಐ ಸಲೀಂ ಪಾಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಗೌಪ್ಯವಾಗಿ ಮದುವೆಯಾಗಿದ್ದ.
ಈ ಮೊದಲು ಆತನಿಗೆ ಮದುವೆಯಾಗಿ ಮಗುವಿದ್ದು, ಇದೀಗ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಎರಡನೇ ಮದುವೆಯಾಗಿದ್ದನು. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶಿಕ್ಷಕನ ವಿರುದ್ಧ ಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದರು.

ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ: ನಾಲ್ವರು ಅಮಾನತು

ಹಾಸನ: ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಗಾಂಜಾ ಹಾಗೂ ಮೊಬೈಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸೆಲ್ ನ ಒಳಗಿನಿಂದ ಖೈದಿಯೊಬ್ಬ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ವೀಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲಾ ಕಾರಾಗೃಹದ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ ನೇತೃತ್ವದ ತಂಡ ದಾಳಿ ನಡೆ ಮೊಬೈಲ್‌ಗಳು, ಗಾಂಜಾ ಪ್ಯಾಕೆಟ್‌ಗಳು, ಬೀಡಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಈ ವಿಚಾರದಲ್ಲಿ ಕರ್ತವ್ಯ ಲೋಪ ಸಾಬೀತಾದ ಹಿನ್ನಲೆಯಲ್ಲಿ ನಾಲ್ವರುಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಜೈಲರ್ ಖುತುಬುದ್ದೀನ್ ದೇಸಾಯಿ, ಜಾದವ್ ಹಾಗೂ ಪಾಟೀಲ್ ಅಮಾನತಾದ ಅಧಿಕಾರಿಗಳಾಗಿದ್ದಾರೆ.

ನಟಿ ಉಳಿದುಕೊಂಡಿದ್ದ ಕೋಣೆಗೆ ಸೀಕ್ರೆಟ್ ಕ್ಯಾಮರಾ!

ತಾನು ಉಳಿದುಕೊಂಡ ಹೊಟೇಲ್ ಕೋಣೆಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಲಾಗಿತ್ತು ಎಂದು ನಟಿ ಕೃತಿ ಕರಬಂಧ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಾನು ಹೋಟೆಲ್‌ನಲ್ಲಿ ತಂಗಿದ ಸಂದರ್ಭದಲ್ಲಿ ತಾನು ಮತ್ತು ತನ್ನ ತಂಡವು ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ. ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಕೋಣೆಯಲ್ಲಿ ರಹಸ್ಯವಾಗಿ ಕ್ಯಾಮರಾ ಅಳವಡಿಸಿದ್ದರು. ನನ್ನ ತಂಡ ಮತ್ತು ನಾನು ಕೊಠಡಿಯನ್ನು ಪರಿಶೀಲಿಸಿದಾಗ, ನಾವು ಆ ಕ್ಯಾಮೆರಾ ನೋಡಿದ್ದೇವೆ. ಆ ಹುಡುಗ ಇದರಲ್ಲಿ ನಿಪುಣನಲ್ಲ, ಹಾಗಾಗಿ ಅವನು ಕ್ಯಾಮೆರಾವನ್ನು ತುಂಬಾ ಕೆಟ್ಟದಾಗಿ ಅಳವಡಿಸಿದ್ದನು. ನಾನು ಅದನ್ನು ನೋಡಿದೆ. ಕ್ಯಾಮೆರಾವನ್ನು ಸೆಟ್ ಟಾಪ್ ಬಾಕ್ಸ್ ಹಿಂದೆ ಮರೆಮಾಡಲಾಗಿತ್ತು. ಇದು ತುಂಬಾ ಅಪಾಯಕಾರಿ ಮತ್ತು ಅಂತಹ ಘಟನೆಗಳನ್ನು ತಪ್ಪಿಸಲು, ನೀವೂ ಎಚ್ಚರದಿಂದಿರುವುದು ಬಹಳ ಮುಖ್ಯ ಎಂದು ಕೃತಿ ಹೇಳಿದ್ದಾರೆ. ಕನ್ನಡ ಸಿನಿಮಾ ಶೂಟಿಂಗ್ ವೇಳೆ ಇಂತಹ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ.

ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ

ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹಾಯಕ ಸರ್ವೇಯರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿ.ಸಿ ಕಚೇರಿ ಆವರಣದಲ್ಲಿ ವಿಷ ಸೇವಿಸಿ ಸಹಾಯಕ ಸರ್ವೇಯರ್ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಮಹೇಶ್ ಕಳೆದ 6 -7 ವರ್ಷಗಳಿಂದ ಸಹಾಯಕ ಸರ್ವೇಯರ್ ಆಗಿ ಕೆಲಸ ಮಾಡ್ತಿದ್ದು, ಸರ್ವೇ ಮೇಲ್ವಿಚಾರಕಿ ಕವಿತ ಅವರಿಂದ ಕಿರುಕುಳದ ಆರೋಪ ವ್ಯಕ್ತವಾಗಿದೆ. ಸಹಾಯಕ ಸರ್ವೇಯರ್ ಮಹೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಸೂಕ್ತ ಚಿಕಿತ್ಸೆಗಾಗಿ ಮಹೇಶ್‌ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

Categories
ರಾಜಕೀಯ ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಆಪರೇಷನ್ ಹಸ್ತ ಸಕ್ಸಸ್!

ಶಿವಮೊಗ್ಗದಲ್ಲಿ ಆಪರೇಷನ್ ಹಸ್ತ ಸಕ್ಸಸ್!
– ಆಯನೂರು ಮಂಜುನಾಥ್, ನಾಗರಾಜ್ ಗೌಡ ಸೇರಿದಂತೆ ಹಲವು ಮುಖಂಡರ ಕಾಂಗ್ರೆಸ್ ಸೇರ್ಪಡೆ
– ಡಿಕೆಶಿ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಆಪರೇಷನ್ ಹಸ್ತ ಸಕ್ಸಸ್ ಆಗಿದೆ. ಮಾಜಿ ಲೋಕ ಸಭಾ ಸದಸ್ಯ ಆಯನೂರು ಮಂಜುನಾಥ್, ನಾಗರಾಜ್ ಗೌಡ ಸೇರಿದಂತೆ ಹಲವು ಮುಖಂಡರು ಬೆಂಗಳೂರಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಇಬ್ಬರು ನಾಯಕರು ಹಲವು ಮುಖಂಡರೊಂದಿಗೆ ಪಕ್ಷ ಸೇರ್ಪಡೆಗೊಂಡರು..

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹಮದ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾದ ಪಿ.ಎನ್. ಚಂದ್ರಪ್ಪ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾದ ಆರ್.ಎಂ ಮಂಜುನಾಥ್ ಗೌಡ ಹಾಗೂ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರು ಇದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

Categories
ಮಾಹಿತಿ

ಚಂದ್ರನಂಗಳದಲ್ಲಿ ಭಾರತದ ಮುದ್ರೆ!

ಚಂದ್ರನಂಗಳದಲ್ಲಿ ಭಾರತದ ಮುದ್ರೆ!
– ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಏನ್ ಮಾಡ್ತಿದೆ?
– 2025ರಲ್ಲಿ ಚಂದ್ರನತ್ತ ಮನುಷ್ಯರನ್ನು ಕಳಿಸುತ್ತೆ ಅಮೇರಿಕ!

NAMMUR EXPRESS NEWS : ಚಂದ್ರಯಾನದಲ್ಲಿ ಭಾರತ ಗೆದ್ದಿದೆ. ಈಗಾಗಲೇ ಚಂದ್ರಯಾನದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‌ನಲ್ಲಿ 4 ವೈಜ್ಞಾನಿಕ ಉಪಕರಣಗಳಿವೆ. ಅವುಗಳು ಚಂದ್ರನಲ್ಲಿ ಕಂಪನದ, ಚಂದ್ರನ ಮೇಲ್ಮನಲ್ಲಿ ಶಾಖ ಸಾಗುವ ರೀತಿಯನ್ನು, ಚಂದ್ರನ ಮೇಲ್ಮನ ಬಳಿ ಇರುವ ಪ್ಲಾಸ್ಮಾ ವಾತಾವರಣವನ್ನು ಅಧ್ಯಯನ ನಡೆಸಲಿವೆ. ಪ್ರಗ್ಯಾನ್ ರೋವರ್‌ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣಗಳಿದ್ದು, ಚಂದ್ರನ ಮೇಲ್ಮನ ಸಂರಚನೆಯ ಅಧ್ಯಯನ ಮಾಡಲಿದೆ.

ಚಂದ್ರನ ಅಂಗಳದಲ್ಲಿ ಪುಟಾಣಿ ರೋಬೋ!

ಜಗತ್ತಿನ ದೊಡ್ಡ ದೊಡ್ಡ ದೇಶಗಳು ಚಂದ್ರಲೋಕದ ಪೈಪೋಟಿಗೆ ಬಿದ್ದಿರುವಾಗಲೇ ಭಾರತ, ದೊಡ್ಡ ಹೆಜ್ಜೆ ಇಟ್ಟಿದೆ. ಚಂದ್ರಲೋಕಕ್ಕೆ ಪ್ರಯಾಣ ಆರಂಭಿಸಿಬಿಟ್ಟಿದೆ. ಈ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್, ಚಂದ್ರಲೋಕದಲ್ಲಿ ಕಾಲಿಟ್ಟಿವೆ. ಚಂದ್ರಲೋಕ ತಲುಪಿದ ಬಳಿಕ ಈ ಎರಡು ಒಟ್ಟಿಗೆ ಕಾರ್ಯಾಚರಣೆ ನಡೆಸಲಿವೆ. ಪರಸ್ಪರ ಸಂಪರ್ಕ ಸಾಧಿಸಿಕೊಂಡು ಕೆಲಸ ಮಾಡಲಿವೆ. ಈ ಲ್ಯಾಂಡರ್ ಮತ್ತು ರೋವರ್ ಕಾಲಿಟ್ಟಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ‘ವಾಟರ್ ಐಸ್’ ಮತ್ತು ಬೆಲೆಬಾಳುವ ಮಿನರಲ್ಸ್ ಇರುವ ಸಾಧ್ಯತೆ ಇದೆ. ಅಲ್ಲದೆ ಭೂಮಿಯಿಂದ ಚಂದ್ರನ ದೂರವನ್ನು ನಿಖರವಾಗಿ ಅಳೆಯಲಿವೆ.

ಪ್ರಗ್ಯಾನ್ ಏನು ಮಾಡುತ್ತೆ?

ಪ್ರಗ್ಯಾನ್ ಹೆಸರಿನ ಈ ರೋವರ್‌ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣಗಳಿವೆ. ಎಕ್ಸ್‌ ರೇ ಮತ್ತು ಲೇಸರ್ ಉಪಕರಣಗಳಿವೆ. ಈ ಎರಡರ ಸಹಾಯದಿಂದ ರೋವರ್, ಚಂದ್ರನ ಮೇಲ್ಮನ ಸಂರಚನೆಯ ಅಧ್ಯಯನ ಮಾಡಲಿದೆ. ಚಂದ್ರನ ಮಣ್ಣಿನಲ್ಲಿರುವ ಖನಿಜ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ವಿಶ್ಲೇಷಣೆ ಮಾಡಲಿದೆ.
ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ 14 ದಿನ ಸಕ್ರಿಯವಾಗಿರುತ್ತವೆ. ಚಂದ್ರನ ಮೇಲಿನ ಒಂದು ದಿನ, ಭೂಮಿಯ ಮೇಲೆ 14 ದಿನಕ್ಕೆ ಸಮ. ಈ ಎರಡು ಚಂದ್ರನ ಮೇಲೆಸೂರ್ಯಾಸ್ತವಾದರೆ, ಚಂದ್ರನಲ್ಲಿ ಉಷ್ಣಾಂಶ ಕುಸಿದು ಹೋಗುತ್ತೆ. ಆ ಬಳಿಕ ಲ್ಯಾಂಡರ್ ಮತ್ತು ರೋವರ್ ಕೆಲಸ ಮಾಡೋದು ಕಷ್ಟ.
ಭೂಮಿ ಮೇಲೆ ಚಂದ್ರನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಗಳು ಪತ್ತೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ವಿಜಾನಿಗಳಿದ್ದಾರೆ.

ಚಂದ್ರನ ದಕ್ಷಿಣದಲ್ಲಿ ಇದೆ ಖನಿಜ ರಾಶಿ!

ಉಪಗ್ರಹ ಚಂದ್ರನಲ್ಲಿ ನೀರು ಹೆಪ್ಪುಗಟ್ಟಿದ ರೂಪದಲ್ಲಿದೆ. ಚಂದ್ರನಲ್ಲಿರುವ ಈ ನೀರಿನ ಕುರಿತು ಸಂಶೋಧನೆಗೆ ಪೈಪೋಟಿ ನಡೆಯುತ್ತಿದೆ. ಚಂದ್ರನಲ್ಲಿನ ನೀರು ಬಳಕೆ ಯೋಗ್ಯವಾ ಎಂಬುದನ್ನು ತಿಳಿದುಕೊಳ್ಳಲೂ ಜಗತ್ತಿನ ರಾಷ್ಟ್ರಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಚಂದ್ರನ ಮಣ್ಣಿನಲ್ಲಿ ಅತ್ಯಮೂಲ್ಯ ಹೀಲಿಯಂ-3 ಇರಬಹುದಾದ ಸಾಧ್ಯತೆ ಇದ್ದು, ಕೆಲವು ಅಂದಾಜುಗಳ ಪ್ರಕಾರ, ಚಂದ್ರನಲ್ಲಿ 10 ಲಕ್ಷ ಟನ್ ಹೀಲಿಯಂ-3 ಇದೆ ಎನ್ನಲಾಗಿದೆ. ಚಂದ್ರನಲ್ಲಿ ಐರನ್, ಟೈಟೇನಿಯಂ, ಅಲ್ಯೂಮಿನಿಯಂ, ಮ್ಯಾಗ್ನೆಷಿಯಂ ಮತ್ತು ಸಿಲಿಕಾನ್ ಸಹ ಹೇರಳವಾಗಿವೆ ಎಂಬ ನಿರೀಕ್ಷೆಗಳಿವೆ.1972ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರಲೋಕಕ್ಕೆ ಮನುಷ್ಯರನ್ನು ಕಳುಹಿಸಲು ಅಮೆರಿಕ ಸಜ್ಜಾಗುತ್ತಿದೆ. 2025 ರಲ್ಲಿ ಅಮೆರಿಕದ ಗಗನಯಾತ್ರಿಗಳು ಚಂದ್ರನ ಅಂಗಳಕ್ಕೆ ಹೋಗಲಿದ್ದಾರೆ.

ಬಾಹ್ಯಾಕಾಶದಲ್ಲಿ ಭಾರತ, ಇಸ್ರೋ ಮುದ್ರೆ!

ವಿಕ್ರಂ ಲ್ಯಾಂಡರ್ ನೊಳಗಿದ್ದ ಪ್ರಗ್ಯಾನ್ ರೋವರ್ ಚಂದಿರನ ಅಂಗಳಕ್ಕೆ ಕಾಲಿಟ್ಟಿದೆ. ಅದು ಅಲ್ಲಿ ಮುಂದಿನ 14 ದಿನಗಳ ಕಾಲ (ಭೂಮಿಯ ಕಾಲಮಾನ) ಸುತ್ತಾಡಿ ವಿವಿಧ ಮಾಹಿತಿಗಳನ್ನು ಕಲೆಹಾಕಲಿದೆ. ಇದೀಗ ಈ ಪ್ರಗ್ಯಾನ್ ರೋವರ್ ಸುತ್ತು ಹಾಕುವ ಕಡೆಗಳಲ್ಲಿ ನಮ್ಮ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋ ಲಾಂಛನದ ಗುರುತನ್ನು ಚಂದಿರನ ನೆಲದಲ್ಲಿ ಇದು ಗುರುತು ಹಾಕಲಿದೆ. ಈ ಮೂಲಕ ಚಂದಿರನ ಈ ಭಾಗದಲ್ಲಿ ಭಾರತದ ಸಾಧನೆಯ ನೆನಪು ಶಾಶ್ವತವಾಗಿ ಉಳಿಯುವಂತಹ ಕಾರ್ಯವನ್ನು ಇಸ್ರೋ – ಹಾರಿಬಿಟ್ಟ ವಿಕ್ರಂ ಲ್ಯಾಂಡರ್‌ ಒಳಗಿದ್ದ ಕಾಫಿ ಟೇಬಲ್ ಗಾತ್ರದ ಪ್ರಗ್ಯಾನ್ ರೋವರ್ ಮಾಡಲಿದೆ.
ಚಂದ್ರಯಾನ 3ರ ಉಡ್ಡಯನಕ್ಕೂ ಮೊದಲು ಇಸ್ರೋ ಈ ವಿಡಿಯೋದಲ್ಲಿ ತೋರಿಸಿದಂತೆ ಚಂದಿರನ ನೆಲದಲ್ಲಿ ರೋವರ್ ಚಲಿಸುತ್ತಿರುವಂತೆ ಅದರ ಹಿಂಭಾಗದ ಎರಡೂ ಚಕ್ರಗಳು, ನಮ್ಮ ರಾಷ್ಟ್ರ ಲಾಂಛನವಾಗಿರುವ ಮೂರು ಸಿಂಹಗಳು ಮತ್ತು ಇಸ್ರೋದ ಲೋಗೋವನ್ನು ಆ ಪ್ರದೇಶದಲ್ಲಿ ಅಚ್ಚು ಹಾಕಲಿದೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D

Categories
ಚಿಕ್ಕಮಗಳೂರು

ಚಂದ್ರಯಾನ-3 ತಂಡದಲ್ಲಿ ಬಾಳೆಹೊನ್ನೂರಿನ ಯುವತಿ!

ಚಂದ್ರಯಾನ-3 ತಂಡದಲ್ಲಿ ಬಾಳೆಹೊನ್ನೂರಿನ ಯುವತಿ!
– ಡಾ. ನಂದಿನಿ ಚಂದ್ರಯಾನ 2ರಲ್ಲೂ ಕೆಲಸ ಮಾಡಿದ್ದರು
– ಭಾರತದ ಹೆಮ್ಮೆಯ ಸಾಧನೆಗೆ ಮಲೆನಾಡ ವಿಜ್ಞಾನಿ ಕೊಡುಗೆ

NAMMUR EXPRESS NEWS
ಬಾಳೆಹೊನ್ನೂರು: ಭಾರತಕ್ಕೆ ಚಂದ್ರನ ಅಂಗಳದಲ್ಲಿ ದೊಡ್ಡ ಜಯ ಸಿಕ್ಕಿದೆ. ಭೂಮಿಯಿಂದ ಹೊರಟ ಚಂದ್ರಯಾನ ನೌಕೆ 42 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಗೋಧೂಳಿ ಮುಹೂರ್ತದಲ್ಲಿ ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಿದ್ದು ವಿಶ್ವದಲ್ಲಿ ಭಾರತ ಹೊಸ ಮೈಲುಗಲ್ಲು ನೆಟ್ಟಿದೆ. ಈ ನಡುವೆ ಮಲೆನಾಡ ಯುವತಿ ಚಂದ್ರಯಾನ-3 ತಂಡದಲ್ಲಿ ಕೆಲಸ ಮಾಡಿದ್ದು, ಇದೀಗ ಆಕೆಯ ಸಾಧನೆಗೆ ಶುಭಾಶಯ ಮಹಾಪುರ ಹರಿದು ಬರುತ್ತಿದೆ. ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಯುವತಿ ಡಾ ಕೆ ನಂದಿನಿ: ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಶುಕ್ರವಾರ ಉಡಾವಣೆ ಮಾಡಿದ ಚಂದ್ರಯಾನ 3ರ ತಂಡದಲ್ಲಿ ಕೆಲಸ ಮಾಡಿದ್ದಾರೆ.

ಬಾಳೆಹೊನ್ನೂರು ಸಮೀಪದ ತುತ್ತೂರು ಗ್ರಾಮದ ಯುವತಿ ಬಾಳೆಹೊನ್ನೂರು ಪಟ್ಟಣದಲ್ಲಿ ಕಾಫಿ ಉದ್ಯಮ, ವ್ಯವಹಾರ ನಡೆಸುತ್ತಿರುವ ಕೇಶವಮೂರ್ತಿ, ಮಂಗಳ ದಂಪತಿ ಪುತ್ರಿ. ಡಾ. ಕೆ.ನಂದಿನಿ ಚಂದ್ರಯಾನ 3 ತಂಡದಲ್ಲಿ ಇದ್ದು ಶುಕ್ರವಾರ ನಡೆದ ಯಶಸ್ವಿ ಉಡಾವಣೆಯಲ್ಲಿ ಈಕೆಯೂ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿದೆ.

ಮಲೆನಾಡ ಹೆಮ್ಮೆ ಡಾ. ನಂದಿನಿ

ಡಾ.ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019ರ ಚಂದ್ರಯಾನ 2ರ ತಂಡದಲ್ಲೂ ಭಾಗವಹಿಸಿದ್ದು, ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್‌ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್‌ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D

Categories
ಶಿವಮೊಗ್ಗ

ಶಿವಮೊಗ್ಗ ಲೋಕಸಭೆಗೆ ಕುಮಾರ್ ಬಂಗಾರಪ್ಪ..?

ಶಿವಮೊಗ್ಗ ಲೋಕಸಭೆಗೆ ಕುಮಾರ್ ಬಂಗಾರಪ್ಪ..?
– ಮಧು ಬಂಗಾರಪ್ಪ ಒಪ್ಪಿಸ್ತಾರಾ ಡಿಕೆಶಿ?
– ಶಿವಮೊಗ್ಗಕ್ಕೆ ಬರ್ತಾರಾ ಅಚ್ಚರಿ ಕೈ ಅಭ್ಯರ್ಥಿ!
– ಶಿವಮೊಗ್ಗ ಕಾಂಗ್ರೆಸ್ ನಾಯಕರು ಹೇಳೋದು ಏನು?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕಸಭೆಗೆ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಮಾಜಿ ಸಚಿವ, ಸೊರಬದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಲು ಖುದ್ದು ಡಿಸಿಎಂ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ತಂತ್ರಗಾರಿಕೆಗೆ ಮುಂದಾಗಿದ್ದಾರೆ.

ಮಧು ಬಂಗಾರಪ್ಪ ಒಪ್ಪಿಸ್ತಾರಾ ಡಿಕೆಶಿ?

ಕರ್ನಾಟಕ ಕಂಡ ಅಪ್ರತಿಮ ನಾಯಕ ಸಾರೆಕೊಪ್ಪ ಬಂಗಾರಪ್ಪ ಕುಟುಂಬ ಈ ಮೂಲಕ ಒಗ್ಗೂಡಿಸುವ ಪ್ರಯತ್ನದಲ್ಲಿ ಡಿಕೆಶಿ ಇದ್ದಾರೆ. ಅದರಲ್ಲೂ ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಕುಟುಂಬವನ್ನುಒಂದುಗೂಡಿಸುವ ಜತೆಗೆ ಮಲೆನಾಡಲ್ಲಿ ಕಾಂಗ್ರೆಸ್ ಆಪರೇಷನ್ ಗಟ್ಟಿ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಅದರ ಮೊದಲ ಪ್ರಯತ್ನವಾಗಿ ಕುಮಾರ್ ಬಂಗಾರಪ್ಪ ಅವರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಕಾಂಗ್ರೆಸ್ ಇಂದಲೇ ಕುಮಾರ್ ಹೆಸರು ಪ್ರಸ್ತಾಪ

ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅವರೇ ಉತ್ತಮ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸುವಂತೆ ಸಹೋದರ, ಸಚಿವ ಮಧು ಬಂಗಾರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದಿದ್ದ ಶಿವಮೊಗ್ಗ ಜನಪ್ರತಿನಿಗಳ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಹಲವರು ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ ಲಾಭವಾಗುತ್ತದೆ ಎಂದು ಹೇಳಿದ್ದರು. ಆದರೆ, ಈ ಮಧ್ಯೆ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ ಹೆಚ್ಚಿನ ಲಾಭ ಆಗುತ್ತದೆ ಎಂಬ ವಾದವನ್ನು ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಮುಂದಿಟ್ಟಿದ್ದಾರೆ. ಶಿವಮೊಗ್ಗದಿಂದ ಬೇಡಿಕೆ ಹೆಚ್ಚಿದ ಕಾರಣಕ್ಕೆ ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಮಧು ಬಂಗಾರಪ್ಪ ಒಪ್ಪಿದ್ದಾರಾ?

ರಾಜಕೀಯದಲ್ಲಿ ಕೌಟುಂಬಿಕ ವಿಚಾರ ಅಡ್ಡ ಬರಬಾರದು. ಅದು ಪಕ್ಷದ ಸಂಘಟನೆಗೂ ಅಡ್ಡಿಯಾಗಬಾರದು. ನಮಗೆ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಗೆಲ್ಲಬೇಕು. ಹಾಗಾಗಿ ಕುಮಾರ್ ಬರಲಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂಬ ಸಲಹೆಯನ್ನು ಡಿಕೆಶಿ ಮಧುಬಂಗಾರಪ್ಪರಿಗೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರ್ ಬಂಗಾರಪ್ಪ ಪ್ಲಸ್ ಯಾಕೆ?

ಹಾಲಿ ಸಂಸದ, ಯಡಿಯೂರಪ್ಪ ಪುತ್ರ ರಾಘವೇಂದ್ರ ಈಗಾಗಲೇ ಎರಡು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರ ಎದುರು ಪ್ರಬಲ ಅಭ್ಯರ್ಥಿ ಬೇಕು. ಹಾಗಾಗಿ ಯುವ ನಾಯಕ, ಸಚಿವ, ಶಾಸಕರಾಗಿ ಅನುಭವ ಇರುವ ಕುಮಾರ್ ಸೂಕ್ತ ಎನ್ನಲಾಗುತ್ತಿದೆ. ಇನ್ನು ಈಡಿಗ ಸಮುದಾಯದ ನಾಯಕರಾಗಿರುವ ಕುಮಾರ್ ಬಂಗಾರಪ್ಪ ಅವರಿಗೆ ಇಡೀ ಜಿಲ್ಲೆಯ ಈಡಿಗರು ಕೈ ಹಿಡಿದರೆ ನೇರಾ ನೇರ ಸ್ಪರ್ಧೆ ಆಗಲಿದೆ ಎಂಬ ಲೆಕ್ಕಾಚಾರ. ಹೀಗೆಲ್ಲ ಪ್ಲಸ್ ಪಾಯಿಂಟ್ ಇವೆ. ಆದರೆ ಕುಮಾರ್ ಬಂಗಾರಪ್ಪ ಎಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D

Categories
ತೀರ್ಥಹಳ್ಳಿ

ಚಂದ್ರಯಾನ-3ರಲ್ಲಿ ತೀರ್ಥಹಳ್ಳಿ ವಿಜ್ಞಾನಿ!

ಚಂದ್ರಯಾನ-3ರಲ್ಲಿ ತೀರ್ಥಹಳ್ಳಿ ವಿಜ್ಞಾನಿ!
– ಅರಳಸುರಳಿ ವಿಜ್ಞಾನಿ ಸುಬ್ರಹ್ಮಣ್ಯ ಉಡುಪರ ಸಾಧನೆ
– ಇಸ್ರೋದಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ ನಿವೃತ್ತಿ
– ಚಂದ್ರಯಾನ-3ರಲ್ಲಿ ತಂತ್ರಜ್ಞರಾಗಿ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಚಂದ್ರಯಾನ-3ರ ಯಶಸ್ಸು ಇಡೀ ದೇಶದ ಜನರ ಸಂತಸಕ್ಕೆ ಕಾರಣ ಆಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶ ತಲೆದೂಗಿದೆ. ಈ ಚಂದ್ರಯಾನ ತಂಡದಲ್ಲಿ ತೀರ್ಥಹಳ್ಳಿ ಮೂಲದ ವಿಜ್ಞಾನಿಯೊಬ್ಬರು ಕೆಲಸ ಮಾಡಿದ್ದಾರೆ.
ಹೌದು.ಅರಳಸುರಳಿ ವಿಜ್ಞಾನಿ ಸುಬ್ರಹ್ಮಣ್ಯ ಉಡುಪ ಈ ತಂಡದಲ್ಲಿ ಹಿರಿಯ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.
ಇಸ್ರೋ ಸಂಸ್ಥೆಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಸುಬ್ರಮಣ್ಯ ಅವರು ಚಂದ್ರಯಾನ-2 ಮತ್ತು ಚಂದ್ರಯಾನ- 3 ಎರಡರಲ್ಲೂ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದರು.

ಚಂದ್ರಯಾನ-3ರ ಅಂತಿಮ ಹೊತ್ತಿಗೆ ಇವರು ಸೇವೆಯಿಂದ ನಿವೃತ್ತರಾಗಿದ್ದರೂ ಇಸ್ರೋ ಉಡುಪರನ್ನು ಕರೆಸಿಕೊಂಡು ಅವರ ಸೇವೆಯನ್ನು ಪಡೆದುಕೊಂಡಿದೆ. ಸುಬ್ರಹ್ಮಣ್ಯ ಉಡುಪರು ಅರಳಸುರಳಿಯ ನಿವೃತ್ತ ಶಿಕ್ಷಕ ಗೋವಿಂದರಾಮ ಉಡುಪರ ಪುತ್ರರು. ಸಂಶೋಧನೆಯಲ್ಲಿ ಸಾಧನೆ ಮಾಡಿ ದೇಶದ ಬಹು ದೊಡ್ಡ ಸಾಧನೆಗೆ ಕೈ ಜೋಡಿಸಿರುವ ಸುಬ್ರಮಣ್ಯ ಅವರಿಗೆ ಇಡೀ ಕರುನಾಡು, ಹುಟ್ಟಿದ ಊರು ತೀರ್ಥಹಳ್ಳಿ ಜನತೆ ಪರವಾಗಿ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆ ಸಲ್ಲಿಸುತ್ತದೆ.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D

Categories
ತೀರ್ಥಹಳ್ಳಿ

ಚಂದ್ರಯಾನ ಯಶಸ್ವಿ: ತೀರ್ಥಹಳ್ಳಿಯಲ್ಲಿ ಸಂಭ್ರಮಾಚಾರಣೆ!

ಚಂದ್ರಯಾನ ಯಶಸ್ವಿ: ತೀರ್ಥಹಳ್ಳಿಯಲ್ಲಿ ಸಂಭ್ರಮಾಚಾರಣೆ!
– ತೀರ್ಥಹಳ್ಳಿ, ಶಿವಮೊಗ್ಗ, ರಿಪ್ಪಿನಪೇಟೆ, ಸಾಗರದಲ್ಲಿ ಸಂಭ್ರಮ

NAMMUR EXPRESS NEWS
ತೀರ್ಥಹಳ್ಳಿ: ಭಾರತದ ಹೆಮ್ಮೆಯ ಚಂದ್ರಯಾನ -3 ಯಶಸ್ವಿಯಾದ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಬಿಜೆಪಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರವೀಶ್ ಬಾಬಿ, ಪ್ರಮುಖರಾದ ಗುರು ಸಿ ಗೌಡ ರಕ್ಷಿತ್ ಮೇಗರವಳ್ಳಿ, ಮಧುರಾಜ್ ಹೆಗಡೆ, ಅಶೋಕ್ ಮೂರ್ತಿ, ಬಸವರಾಜ್, ಹೊದಲ, ರಾಜೀವನ್, ವಿನುತ್ ಗೌಡ ಹಾಗೂ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ರಿಪ್ಪಿನಪೇಟೆಯಲ್ಲಿ ಸಂಭ್ರಮಾಚರಣೆ

ಹೊಸನಗರ ತಾಲೂಕು ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ ನಡೆಯಿತು. ಪಟ್ಟಣದ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರಾಷ್ಟ್ರ ಧ್ವಜ ಬೀಸುತ್ತಾ,ಘೋಷಣೆ ಕೂಗಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.

ಶಿವಮೊಗ್ಗ ಯುವಕಾಂಗ್ರೆಸ್ ಸಂಭ್ರಮಾಚರಣೆ

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ನಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಇಸ್ರೋ ಸಂಸ್ಥೆಗೆ ಜೈ ಕೂಗಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತುಈ ವೇಳೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ವಿನಯ್ ತಾಂಡೈ ಅಲ್ತಾಫ್ ಪರ್ವೇಜ್, ಪಾಲಿಕೆ ಸದಸ್ಯ ಹೆಚ್ ಸಿ ಯೋಗೀಶ್, ಎನ್ ರಮೇಶ್, ವಿಶ್ವನಾಥ್ ಕಾಶಿ, ಎನ್ ಎಸ್ ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಮೊದಲಾದರು ಈ ವೇಳೆ ಉಪಸ್ಥಿತರಿದ್ದರು.ಇದೇ ವೇಳೆ ಭಾರ್ಗವಿ ಪೆಟ್ರೋಲ್ ಬಂಕ್ ನಲ್ಲೂ ಸಹ ಇಂಧನ ತುಂಬಿಸಿಕೊಳ್ಳಲು ಬರುವ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D