Categories
ಸಿನಿಮಾ

ನಟಿ ಶುಭಾ ಪೂಂಜಾ ಜತೆ ಅಸಭ್ಯ ವರ್ತನೆ!?

ನಟಿ ಶುಭಾ ಪೂಂಜಾ ಜತೆ ಅಸಭ್ಯ ವರ್ತನೆ!?
– ಹಾಡಿನ ಚಿತ್ರೀಕರಣದ ವೇಳೆ ಯುವಕರಿಂದ ಪುಂಡಾಟ
– ಚಿತ್ರೀಕರಣ ವೇಳೆ ಕುದುರೆಮುಖದ ಮೈದಾಡಿಗುಡ್ಡದಲ್ಲಿ ಘಟನೆ

NAMMUR EXPRESS NEWS
ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಹಾಡಿನ ಚಿತ್ರೀಕರಣದಲ್ಲಿದ್ದ ವೇಳೆ ನಟಿಯೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತಿಸಿ, ಶೂಟಿಂಗ್ ಸೆಟ್ ಧ್ವಂಸಗೊಳಿಸಿರುವ ಘಟನೆ ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಶನಿವಾರ ನಡೆದಿದೆ ಎಂದು ತಿಳಿದು ಬಂದಿದೆ. ಸುಧೀರ್ ಅತ್ತಾವರ ನಿರ್ದೇಶನದಲ್ಲಿ “ಕೊರಗಜ್ಜ ಚಿತ್ರ ಮೂಡಿಬರುತ್ತಿದ್ದು, ಶುಭಾ ಪೂಂಜಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಚಿತ್ರೀಕರಣ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಯುವಕರ ಅಸಭ್ಯ ವರ್ತನೆಯಿಂದ ಚಿತ್ರತಂಡ ತಕ್ಷಣ ಹಾಡಿನ ಚಿತ್ರೀಕರಣ ನಿಲ್ಲಿಸಿದೆ. ಕುದುರೆಮುಖದ ಮೈದಾಡಿಗುಡ್ಡ ಪ್ರದೇಶದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಚಿತ್ರೀಕರಣದಲ್ಲಿ ತೊಡಗಿದ್ದರು. ಯುವಕರ ಮಾಡಿದ ಈ ಅಸಭ್ಯ ವರ್ತನೆಯಿಂದ ಮನಸ್ಸಿಗೆ ನೋವು ಉಂಟು ಮಾಡಿದೆ. ಯುವಕರ ಈ ರೀತಿಯ ವರ್ತನೆಯಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾತೆಂದು ಸುಧೀರ್ ಅತ್ತಾವರ ಹೇಳಿದ್ದಾರೆ. ಹಾಡಿನ ಚಿತ್ರಿಕರಣದ ವೇಳೆ ಸುಮಾರು 50 ಜನಕಲಾವಿದರು ಮತ್ತು ಖ್ಯಾತ ನೃತ್ಯ ನಿರ್ದೇಶಕರಾದ ಗಣೇಶ ಆಚಾರ್ಯ ಕೂಡ ಇದ್ದರೆಂದು ಅತ್ತಾವರ ತಿಳಿಸಿದ್ದಾರೆ. ಈ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಘಟನೆ ಬಗ್ಗೆ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

Categories
ತೀರ್ಥಹಳ್ಳಿ

ಮೈಸೂರು ದಸರಾದಲ್ಲಿ ತೀರ್ಥಹಳ್ಳಿಯ ಪ್ರತಿಭೆಗಳು!

ಮೈಸೂರು ದಸರಾದಲ್ಲಿ ತೀರ್ಥಹಳ್ಳಿಯ ಪ್ರತಿಭೆಗಳು!
– ಮೊದಲ ಸ್ಥಾನ ಪಡೆದ ನಿರೀಕ್ಷಾ: ಶುಭಾಶಯಗಳು
– ನಿರೀಕ್ಷಾ, ಹರ್ಷಿತಾ ಜೋಡಿಗೆ ಎಲ್ಲೆಡೆ ಗೆಲುವು

NAMMUR EXPRESS NEWS
ತೀರ್ಥಹಳ್ಳಿ: ಮೈಸೂರಿನಲ್ಲಿ ನಡೆದ ನಾಡ ಹಬ್ಬ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಯುವ ಪ್ರತಿಭೆಗೆ ಮೊದಲ ಸ್ಥಾನ ಲಭಿಸಿದೆ. ತೀರ್ಥಹಳ್ಳಿಯ ಸೆಕ್ಷನ್ -8 ನೃತ್ಯ ಶಾಲೆಯಿಂದ 24-10-23 ರಂದು ನೆಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೇಲಿನಕುರುವಳ್ಳಿಯ ಸುಬ್ರಮಣ್ಯ ಅವರ ಪುತ್ರಿ ನಿರೀಕ್ಷಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ತೀರ್ಥಹಳ್ಳಿಯ ಸೆಕ್ಷನ್ -8 ನೃತ್ಯ ಶಾಲೆಯ ಕೊರಿಯೋಗ್ರಾಫರ್ ಹರ್ಷಿತಾ ಎಸ್ ಕೂಡ ಆಕರ್ಷಕ ಬಹುಮಾನ ಪಡೆದು ಮೈಸೂರಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಹೆಸರನ್ನು ಹೆಚ್ಚಿಸಿದ್ದಾರೆ. ಇವರಿಗೆ ಸ್ಥಳೀಯರು ಅಭಿನಂದಿಸಿದ್ದಾರೆ. ನಿರೀಕ್ಷಾ ಮತ್ತು ಹರ್ಷಿತಾ ಸತತವಾಗಿ ಎರಡನೇ ಬಾರಿಗೆ ಈ ಬಹುಮಾನ ಪಡೆದಿದ್ದಾರೆ.

Categories
ಉಡುಪಿ

ಉಡುಪಿಯಲ್ಲಿ ಅದ್ದೂರಿ ವಿಶ್ವ ಬಂಟರ ಸಮಾವೇಶ

ಉಡುಪಿಯಲ್ಲಿ ಅದ್ದೂರಿ ವಿಶ್ವ ಬಂಟರ ಸಮಾವೇಶ
– ಬಂಟರ ಅಭಿವೃದ್ಧಿ ನಿಗಮ ಘೋಷಣೆ: ಸಿಎಂ ಭರವಸೆ
– ಬಂಟ ಸಮುದಾಯದ ಸಾವಿರಾರು ಜನರ ಸಮಾಗಮ

NAMMUR EXPRESS NEWS
ಉಡುಪಿ: ಶನಿವಾರ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಬಂಟ ಸಮಯದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮ ಆರಂಭಿಸಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬಂಟ ಸಮುದಾಯ ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದೆ. ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರು ಮತ್ತು ಮಂಗಳೂರು-ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು. ವಿಶ್ವದ ಎಲ್ಲಾ ಕಡೆ ಹರಿಡಿದ್ದು ತಾವು ಹೋಗುವ ವಿಶ್ವದ ಎಲ್ಲಾ ಕಡೆ ಎಲ್ಲರ ಜತೆಗೂ ಬೆರೆತು, ಸಹೃದಯತೆಯಿಂದ ಬೆರೆಯುತ್ತಾರೆ. ಇದು ಬಂಟರ ಸಮುದಾಯದ ಹೆಗ್ಗಳಿಕೆ ಎಂದರು.

ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಎಲ್ಲೇ ಹೋದರು ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮಗಳ ಪ್ರೇಮ ಮತ್ತು ಅಕ್ಕರೆ ಅನುಕರಣೀಯ. ಇದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು. ಬಂಟ ಸಮಾಜ ಜಾತ್ಯತೀತ ಸಮುದಾಯ. ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವೀಯ ಮೌಲ್ಯವನ್ನು ಆಚರಿಸುತ್ತಿದೆ. ಇದು ಹೆಮ್ಮೆಯ ಸಂಗತಿ. ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಇದು ಅತ್ಯಂತ ಶ್ಲಾಘನೀಯ. ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕಕ್ಕೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ, ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಲೆ, , ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.
ಹೊರ ರಾಜ್ಯ, ವಿದೇಶಗಳಲ್ಲಿ ಇರುವ ಬಂಟ ಸಮುದಾಯದವರನ್ನ ಒಗ್ಗೂಡಿಸುವ ಕೆಲಸವನ್ನು ಉಡುಪಿ-ಮಂಗಳೂರು ಬಂಟ ಸಮಾಜದವರು ಈ ಸಮ್ಮೇಳನದ ಮೂಲಕ ಮಾಡಿದ್ದಾರೆ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಜಿ ಸಚಿವ ರಮಾನಾಥ ರೈ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ , ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಡಾ.ಪಿ.ವಿ.ಶೆಟ್ಟಿ, ಸಂತೋಷ್ ಗುರುಜಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Categories
ಸಿನಿಮಾ

ಪುನೀತ್ ಮರೆಯಾಗಿ 2 ವರ್ಷ..!

ಪುನೀತ್ ಮರೆಯಾಗಿ 2 ವರ್ಷ..!
– ಅಪ್ಪು ಸಮಾಧಿ ನಮನ ಸಲ್ಲಿಸಲು ಸಿದ್ಧತೆ
– ಅ.29ಕ್ಕೆ ರಾಜ್ಯದ ಹಲವೆಡೆ ಕಾರ್ಯಕ್ರಮ

NAMMUR EXPRESS NEWS
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್, ಯುವರತ್ನ ಪುನೀತ್ ರಾಜ್‌ಕುಮಾರ್ ನಿಧನರಾಗಿ ಅ.29ಕ್ಕೆ 2 ವರ್ಷ. ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಹೊಂದಿ 2 ವರ್ಷವಾದರೂ ಸಹ ಇಂದಿಗೂ ಅವರು ಬದುಕಿಲ್ಲ ಎಂಬ ಸತ್ಯವನ್ನು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನ ಮಾಡಲು ಸಿದ್ಧತೆ ನಡೆದಿದೆ. ಅಲ್ಲದೇ ಪುನೀತ್ ಸತ್ತು ಎರಡು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಚಿತ್ರರಂಗದ ಅನೇಕ ಗಣ್ಯರು,ಪುನೀತ್ ಅಭಿಮಾನಿಗಳು ಪುನೀತ್ ಸಮಾಧಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಪುನೀತ್ ಸಾಮಾಜಿಕ ಸೇವೆಯ ರಾಯಭಾರಿ

ತಮ್ಮ ಸೇವೆ, ಸಾಮಾಜಿಕ ಕೆಲಸಗಳ ಮೂಲಕ ಪುನೀತ್ ರಾಜ್ ಕುಮಾರ್ ದೇಶಕ್ಕೆ ರಾಯಭಾರಿಯಾಗಿದ್ದಾರೆ. ಅವರ ಹೆಸರಲ್ಲಿ ಲಕ್ಷ ಲಕ್ಷ ಜನ ರಕ್ತದಾನ ಮಾಡಿದ್ದಾರೆ. ನೇತ್ರದಾನ ಮಾಡಿದ್ದಾರೆ. ಶಿಕ್ಷಣ, ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಅವರು ನಮ್ಮಿಂದ ಮರೆಯಾದ್ರೂ ಸೇವೆಯ ರಾಯಭಾರಿ ಆಗಿದ್ದಾರೆ.

Categories
ತೀರ್ಥಹಳ್ಳಿ

ಆಗುಂಬೆ ಘಾಟಿಯಲ್ಲಿ ತಪ್ಪಿತು ದೊಡ್ಡ ದುರಂತ!

ಆಗುಂಬೆ ಘಾಟಿಯಲ್ಲಿ ತಪ್ಪಿತು ದೊಡ್ಡ ದುರಂತ!
– 30 ಜನರಿದ್ದ ಸ್ಕೂಲ್ ಬಸ್ ಘಾಟಿ ಅಪಘಾತ
– ಚೂರು ಜಾರಿದ್ದರೂ ದೊಡ್ಡ ದುರಂತ…!

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರು ಹೋಗುವಾಗ ಆಗುಂಬೆ ಘಾಟಿಯ ಮೊದಲ ಕ್ರಾಸಿನಲ್ಲಿ ಅಪಘಾತವಾದ ಘಟನೆ ಶನಿವಾರ ಸಂಭವಿಸಿದೆ. ಇದರಿಂದಾಗಿ ದೊಡ್ಡ ದುರಂತವೊಂದು ಪಾರಾಗಿದೆ. ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗದ ಸಮೀಪ ಮೊದಲ ತಿರುವಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಘಾಟಿ ಕೆಳಗೆ ಬೀಳುವ ಹಂತಕ್ಕೆ ಹೋಗಿದೆ. ವೇಗವಾಗಿ ಚಲಿಸಿದ ಕಾರಣ ನಿಯಂತ್ರಣ ತಪ್ಪಿದ್ದು ಸ್ಕೂಲ್ ಬಸ್ ಅಲ್ಲಿ 30 ಜನ ಇದ್ದರು ಎನ್ನಲಾಗಿದೆ. ಒಂದು ವೇಳೆ ಸ್ವಲ್ಪ ಕೆಳಗೆ ಜಾರಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಆಗುಂಬೆ ಪೊಲೀಸರು ವಾಹನ ತೆಗೆಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಘಾಟಿ ರಸ್ತೆಯಲ್ಲಿ ವೇಗದ ಚಾಲನೆ ಒಳ್ಳೆಯದಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

Categories
ಕರಾವಳಿ ಮಲ್ನಾಡ್

ಭೂಮಿ ಹುಣ್ಣಿಮೆ ಹಬ್ಬ: ಭೂಮಿ ತಾಯಿಗೆ ಪೂಜೆ

ಭೂಮಿ ಹುಣ್ಣಿಮೆ ಹಬ್ಬ: ಭೂಮಿ ತಾಯಿಗೆ ಪೂಜೆ
– ರಾತ್ರಿ ಅಡುಗೆ ಮಾಡಿ ಮುಂಜಾನೆ ಭೂಮಿಗೆ ಅರ್ಪಣೆ
– ಮನೆ ಮನೆಯಲ್ಲೂ ಸಂಭ್ರಮದ ಹಬ್ಬ

NAMMUR EXPRSS NEWS
ಮಲೆನಾಡು, ಕರಾವಳಿ ಭಾಗದ ಪ್ರಮುಖ ಹಬ್ಬ ಭೂಮಿ ಹುಣ್ಣಿಮೆ ಹಬ್ಬವನ್ನು ಜನತೆ, ರೈತರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು. ಶುಕ್ರವಾರವೇ 101 ಸೊಪ್ಪು, ತರಕಾರಿ, ಪದಾರ್ಥ ಒಟ್ಟು ಹಾಕಿ ಹಸಿರಾಗಿ ನಿಂತ ಭೂಮಿ ತಾಯಿಗೆ ಬಯಕೆ ಹಾಕಿ ಪೂಜೆ ಮಾಡಿ ಹಬ್ಬ ಆಚರಣೆ ಮಾಡಲಾಯಿತು. ಶುಕ್ರವಾರ ಹೆರಕು ಸೊಪ್ಪು ಹೆರಕಿ ರಾತ್ರಿ ಎಲ್ಲಾ ಅಡುಗೆ ಮಾಡಿದ ಬಳಿಕ ಮುಂಜಾನೆ ಕೋಳಿ ಕೂಗುವ ಮುನ್ನ ಭೂಮಿಗೆ ಪೂಜೆ ಮಾಡಿ, ಬಯಕೆ ತೀರಿಸಲಾಯಿತು.
ಮಲೆನಾಡಿನ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.

ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ನೂರಾ ಒಂದು ಸೊಪ್ಪಿನ ಕುಡಿ ಪಲ್ಯ ಮಾಡಿ ಅನ್ನ ಮಿಶ್ರಿತ ಬಯಕೆ ಹಾಕುತ್ತರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಮಲೆನಾಡಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ. ಸೀಗೆ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ತೀರ್ಥಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
– ಮುಂದಿನ ಪೀಳಿಗೆಗೆ ವಾಲ್ಮೀಕಿ ಅವರ ಆದರ್ಶ ದಾರಿದೀಪವಾಗಬೇಕು: ಮುಖ್ಯಶಿಕ್ಷಕ ಮಂಜು ಬಾಬು
– ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯನ್ನು ತೀರ್ಥಹಳ್ಳಿಯ ತಾಲೂಕು ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಗುಡ್ಡೇಕೇರಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಅವರು ಮಾತನಾಡಿ, ವಾಲ್ಮೀಕಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಮನುಷ್ಯ ತನ್ನಲ್ಲಿರುವ ವಿವೇಕದಿಂದ ಇಂದು ಜಗತ್ತಿನಲ್ಲಿ ಮನುಷ್ಯನಾಗಿ ಗುರುತಿಸಿಕೊಂಡಿರುತ್ತಾನೆ. ಮನುಷ್ಯ ಬದುಕಿನ ಸಂಬಂಧಗಳ ಶ್ರೇಷ್ಠತೆಯನ್ನು ಅಂದೆ ನಮಗೆ ಸಾರಿ ಹೋದಂತಹ ಒಬ್ಬ ಶ್ರೇಷ್ಠ ವ್ಯಕ್ತಿ, ನಮ್ಮೆಲ್ಲರ ಮಾರ್ಗದರ್ಶಕರಾದ ವಾಲ್ಮೀಕಿ ಅವರು. ಅವರ ಆದರ್ಶಗಳನ್ನು ಸಮಾಜಕ್ಕೆ ಒಳಿತಾಗುವಂತಹ ಮತ್ತು ಸಮಾಜ ಕಟ್ಟುವಂತಹ ಅವರ ಆದರ್ಶವನ್ನು ಬೆಳೆಸಿಕೊಂಡು ಸಮಾಜಕ್ಕೆ ಒಳಿತಾಗಬೇಕು ಮುಂದಿನ ಪೀಳಿಗೆಗೆ ಇವರ ಆದರ್ಶ ದಾರಿದೀಪವಾಗಬೇಕು ಎಂದರು.

ಶಾಸಕ ಆರಗ ಜ್ಞಾನೇಂದ್ರ ಅವರು ಮಂಜು ಬಾಬು ಅವರ ಭಾಷಣವನ್ನು ಕೇಳಿ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು ವಾಲ್ಮೀಕಿ ಮಹರ್ಷಿ ಅವರು ನಮಗೆ ಪವಿತ್ರವಾದಂತಹ ಗ್ರಂಥವನ್ನು ಇವತ್ತಿಗೂ ಪ್ರಸ್ತುತದಲ್ಲಿ ಇರುವಂತಹ ಮಾನವೀಯ ಮೌಲ್ಯವನ್ನು ಜಗತ್ತಿನ ಜನರ ಹೃದಯದಲ್ಲಿ ಅರಳಿಸುವಂತಹ ರೀತಿಯಲ್ಲಿ ಬರೆಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು ಹಾಗೂ ಗುಡ್ಡೆಕೇರಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಪ. ಪಂ ಅಧ್ಯಕ್ಷರಾದ ಗೀತಾ ರಮೇಶ್, ಪ. ಪಂ ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ತಹಶೀಲ್ದಾರ್ ಲಿಂಗರಾಜು,ತಾಲೂಕಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ಶೈಲಾ ಹಾಗೂ ವಾಲ್ಮೀಕಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸೇರಿದಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಡಿಎಸ್ಎಸ್ ಸಂಘದ ಅಧ್ಯಕ್ಷರು, ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಅ.29ಕ್ಕೆ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ

ಅ.29ಕ್ಕೆ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ
– ತೀರ್ಥಹಳ್ಳಿಯ ರೋಟರಿ ಬ್ಲಡ್ ಬ್ಯಾಂಕಲ್ಲಿ ಶಿಬಿರ
– ಸಮಸ್ತ ಜನತೆಗೆ ರಕ್ತದಾನ ಮಾಡಲು ಅವಕಾಶ
– ಪುನೀತ್ ಬ್ರಿಗೇಡ್ ತೀರ್ಥಹಳ್ಳಿ
– ಶ್ರೀ ನಾರಾಯಣ ಗುರು ವಿಚಾರ ವೇದಿಕೆ,
– ವಿಶ್ವ ಮಾನವ ಕನ್ನಡ ವೇದಿಕೆ, ಕುಪ್ಪಳಿ ಕಲ್ಲುಕೊಡಿಗೆ,
– ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಕನ್ನಡದ ಖ್ಯಾತ ನಟ, ತಮ್ಮ ಸಮಾಜ ಸೇವೆ ಮೂಲಕ ಎಲ್ಲರಿಗೂ ಮಾದರಿ ಆಗಿದ್ದ ನಟ ಪುನೀತ್ ಅವರು ನಿಧನರಾದ ದಿನ ಅ.29ರಂದು ಅವರ ಸ್ಮರಣಾರ್ಥ, ಅವರ ಸಾಮಾಜಿಕ ಸೇವೆ ಮುಂದುವರಿಸುವ ಸಲುವಾಗಿ ಪುನೀತ್ ಬ್ರಿಗೇಡ್ ತೀರ್ಥಹಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ವಿಶ್ವ ಮಾನವ ಕನ್ನಡ ವೇದಿಕೆ, ಕುಪ್ಪಳಿ ಕಲ್ಲುಕೊಡಿಗೆ ಇವರ ಸಹಯೋಗದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಅ.29, ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ತೀರ್ಥಹಳ್ಳಿ ರೋಟರಿ ಬ್ಲಡ್ ಬ್ಯಾಂಕ್, ವೆಂಕಟೇಶ್ವರ ಚಿತ್ರಮಂದಿರ ಎದುರು, ತೀರ್ಥಹಳ್ಳಿ ಇಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸಮಸ್ತ ಪುನೀತ್ ಅಭಿಮಾನಿಗಳು, ರಕ್ತದಾನಿಗಳು, ಸಾರ್ವಜನಿಕರು ರಕ್ತದಾನ ಮಾಡಬಹುದು.

ಸರ್ವರೂ ಆಗಮಿಸಿ ರಕ್ತದಾನ ಮಾಡಿ, ಇನ್ನೊಬ್ಬರ ಜೀವ ಉಳಿಸೋಣ. ಪುನೀತ್ ಅವರ ಸೇವೆಯನ್ನು ಅವರ ಸ್ಮರಣಾರ್ಥ ಮುಂದುವರಿಸೋಣ ಎಂದು ಆಯೋಜಕರು ಕರೆ ನೀಡಿದ್ದಾರೆ. ರಕ್ತದಾನದ ಬಳಿಕ ಅಲ್ಲೇ ಪಕ್ಕದಲ್ಲಿರುವ ರೋಟರಿ ಸಮುದಾಯ ಭವನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ತೀರ್ಥಹಳ್ಳಿಯ ಪ್ರತಿಭೆಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.

Categories
ಶಿವಮೊಗ್ಗ

ನ.8ಕ್ಕೆ ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ

ನ.8ಕ್ಕೆ ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ
– 50ಕ್ಕೂ ಹೆಚ್ಚಿನ ಕಂಪನಿಗಳಿಂದ 5000ಕ್ಕೂ ಅಧಿಕ ಯುವಜನರಿಗೆ ಉದ್ಯೋಗಾವಕಾಶ
– ಯಾರಿಗೆಲ್ಲ ಉದ್ಯೋಗ..ಇಲ್ಲಿದೆ ಮಾಹಿತಿ

NAMMUR EXPRESS NEWS
ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ನವೆಂಬರ್ 8ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ 50 ಕ್ಕೂಹೆಚ್ಚಿನ ಬೃಹತ್ ಕಂಪನಿಗಳು ಭಾಗವಹಿಸುತ್ತಿವೆ. 5000ಕ್ಕೂ ಹೆಚ್ಚಿನ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ಆರ್.ಸೆಲ್ವಮಣಿ ಹೇಳಿದ್ದಾರೆ. ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವ ನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹ ಯೋಗದಲ್ಲಿ ಬೃಹತ್ ಉದ್ಯೋಗ ಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾ ದವರು, ಐಟಿಐ, ಡಿಪ್ಲೋಮಾ ಸೇರಿದಂತೆ ಎಲ್ಲ ರೀತಿಯ ಉನ್ನತ ಶಿಕ್ಷಣ, ತರಬೇತಿ ಪಡೆದ ಯುವಕರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಬಹುದು. ಅಲ್ಲದೇ ಮೇಳ ನಡೆಯುವ ದಿನದಂದು ಆಕಾಂಕ್ಷಿಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು. ಈ ಮೇಳದಿ೦ದಾಗಿ ಭವಿಷ್ಯದ ದಿನಗಳಲ್ಲಿ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಅದರ ಪ್ರಾಥಮಿಕ ಪರಿಚಯವಾಗಲಿದೆ. ಅನೇಕ ವಿಷಯಗಳಲ್ಲಿ ಅಲ್ಪಾ ವಧಿ ಮತ್ತು ದೀರ್ಘಾವಧಿ ತರಬೇತಿಗಳ ಮಾಹಿತಿಗಳು ದೊರೆಯಲಿವೆ. ಸ್ವಯಂ ಉದ್ಯೋಗ ಆರಂಭಿಸಲಿಚ್ಛಿಸು ವವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ಹೇಳಿದರು.
ಸಾಫ್ಟ್‌ವೇರ್, ಆಟೋಮೊಬೈಲ್, ಫೌಂಡ್ರಿ ರಿಟೇಲ್‌ ಫಾರ್ಮಸಿ, ಹಣಕಾಸು ವಿಮೆ, ಗಾರ್ಮಂಟ್ಸ್ ಸೇರಿದಂತೆ 50ಕ್ಕೂ ಹೆಚ್ಚಿನ ಸ್ಥಳೀಯ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಬೃಹತ್ ಕಂಪನಿಗಳು ಭಾಗವಹಿಸಲಿವೆ.

ರಾಜ್ಯ ಈ ಮೇಳದಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆ ಯಲಿಚ್ಛಿಸುವವರು, ಕೌಶಲ್ಯ ತರಬೇತಿ ಪಡೆಯುವವರು, ಆಯ್ಕೆಗೊಂಡ ನಂತರ ನಿಗದಿಪಡಿಸಿದ ವಿಷಯದಲ್ಲಿ ತರಬೇತಿ ಪಡೆಯಲಿಚ್ಚಿಸುವವರು ಸ್ವಉದ್ಯೋಗ ಆರಂಭಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಆಸಕ್ತರಿಗೆ ಬ್ಯಾಂಕುಗಳ ಸಾಲ ಸೌಲಭ್ಯ ಮುಂತಾದ ಮಾಹಿತಿಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಮೇಳದಲ್ಲಿ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಭಾಗವಹಿಸುವ ಉದ್ಯೋಗಾ ಕಾಂಕ್ಷಿಗಳು, ಕೈಗಾರಿಕೋದ್ಯಮಿಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Categories
ರಾಷ್ಟ್ರೀಯ ವಾರ್ತೆ

ರಸ್ತೆಗಿಳಿಯಲಿವೆ 10,000 ಎಲೆಕ್ಟ್ರಿಕ್ ಬಸ್!

ರಸ್ತೆಗಿಳಿಯಲಿವೆ 10,000 ಎಲೆಕ್ಟ್ರಿಕ್ ಬಸ್!
– ಮುಂದಿನ ವಾರ ಪಿಎಂ-ಇಬಸ್ ಸೇವಾ ಯೋಜನೆ ಟೆಂಡರ್
– ಇನ್ಮೇಲೆ ಎಲೆಕ್ಟ್ರಿಕಲ್ ವೆಹಿಕಲ್ ಜಮಾನ

NAMMUR EXPRESS NEWS
ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಾರ, ಇತ್ತೀಚೆಗೆ ಘೋಷಿಸಲಾದ ಪಿಎಂ-ಇಬಸ್ ಸೇವಾ ಯೋಜನೆ ಅಡಿಯಲ್ಲಿ 3,000 ಎಲೆಕ್ಟ್ರಿಕ್ ಬಸ್‌ಗಳ ಮೊದಲ ಸೆಟ್ ಟೆಂಡರ್ ಮುಂದಿನ ವಾರ ಹೊರ ಬೀಳಲಿದೆ.
ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡ ಯೋಜನೆಯು ಸಂಘಟಿತ ಸಾರ್ವಜನಿಕ ಬಸ್ ಸೇವೆಯ ಕೊರತೆಯಿರುವ ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸುವ ಗುರಿ ಹೊಂದಿದೆ.
ಪ್ರಸ್ತಾವನೆಗಳನ್ನು ಕಳುಹಿಸಲು ರಾಜ್ಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಶುಕ್ರವಾರ ಹೇಳಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ಉದ್ಘಾಟಿಸಿದ 16 ನೇ ಅರ್ಬನ್ ಮೊಬಿಲಿಟಿ ಇಂಡಿಯಾ (ಯುಎಂಐ) ಕಾನ್ಸರೆನ್ಸ್ ಕಮ್ ಎಕ್ಸ್ ಪೋ 2023 ರ ಉದ್ಘಾಟನಾ ಸಮಾರಂಭದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯಗಳು ಈ ಕುರಿತು ಕೆಲಸ ಮಾಡುತ್ತಿವೆ. ಮುಂದಿನ ವಾರದ ವೇಳೆಗೆ ಟೆಂಡರ್ ಹೊರಬರಲಿದೆ ಎಂದು ತಿಳಿಸಿದರು.
ಪಿಎಂ – ಇ ಬಸ್ ಸೇವಾ ಅಡಿಯಲ್ಲಿ 169 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಇ-ಬಸ್‌ಗಳನ್ನು ನಿಯೋಜಿಸಲಾಗುವುದು. ಜೊತೆಗೆ ಸಂಬಂಧಿತ ಮೂಲಸೌಕರ್ಯ, ಬಸ್ ಡಿಪೋಗಳು ಮತ್ತು ಮೀಟರ್‌ನ ಹಿಂದಿನ ವಿದ್ಯುತ್ ಮೂಲಸೌಕರ್ಯಗಳಿಗೆ ಬೆಂಬಲ ನೀಡಲಾಗುವುದು.

ಇದಲ್ಲದೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಸ್ ಆದ್ಯತೆಯ ಮೂಲಸೌಕರ್ಯ, ಮಲ್ಟಿಮೋಡಲ್ ಇಂಟರ್ಚೇಂಜ್ ಸೌಲಭ್ಯಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ ಅಡಿಯಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಈ ಯೋಜನೆಗೆ 57,613 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರ 20,000 ಕೋಟಿ ರೂ. ನೆರವು ನೀಡಲಿದೆ. ಈ ಯೋಜನೆಯು 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.