Categories
ಚಿಕ್ಕಮಗಳೂರು ಮಲ್ನಾಡ್

ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಿದ ಸಚಿವ ಜಾರ್ಜ್!

ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಿದ ಸಚಿವ ಜಾರ್ಜ್!
– ಚಿಕ್ಕಮಗಳೂರಿನಲ್ಲಿ ತೀರ್ಥಹಳ್ಳಿಯ ಮುಖಂಡರ ನಿಯೋಗದ ಭೇಟಿ
– ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು

NAMMUR EXPRESS NEWS
ಚಿಕ್ಕಮಗಳೂರು : ಮಲೆನಾಡಿನ ಅಡಿಕೆ ಸುಲಿಯುವ ರೈತರಿಗೆ ವಿದ್ಯುತ್ ಇಲಾಖೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರ ನಿಯೋಗ, ರಾಜ್ಯ ಇಂಧನ ಸಚಿವ ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ವೇಳೆ ಅಧಿಕಾರಿಗಳಿಗೆ ಮತ್ತು ಉನ್ನತ ಇಲಾಖೆಗೆ ತಕ್ಷಣ ಕ್ರಮ ವಹಿಸುವಂತೆ ಸಲಹೆ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾರ್ಗದರ್ಶನದಲ್ಲಿ ಜಾರ್ಜ್ ಅವರ ಭೇಟಿಗೆ ನಿಗದಿ ಮಾಡಿದ್ದು, ಈ ವೇಳೆ ತೀರ್ಥಹಳ್ಳಿಯ ಪ್ರಮುಖ ಮುಖಂಡರಾದ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ರೈತ ಪರ ಮುಖಂಡರಾದ ಹಸಿರುಮನೆ ಮಹಾಬಲೇಶ್, ಬಾಳೆಹಳ್ಳಿ ಪ್ರಭಾಕರ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.

ಜಾರ್ಜ್, ಮಧು ಬಂಗಾರಪ್ಪ, ಕಿಮ್ಮನೆಗೆ ಅಭಿನಂದನೆ

ಅಡಿಕೆ ಯಂತ್ರಕ್ಕೆ ವಿದ್ಯುತ್ ಮೀಟರ್ ಅನ್ನು ತಕ್ಷಣ ನಿಲ್ಲಿಸಬೇಕು. ಈ ಬಗ್ಗೆ ರೈತರು ಭಯ ಪಡುವುದು ಬೇಡ ಎಂದ ಜಾರ್ಜ್ ಅವರು ತಕ್ಷಣ ಸಂಬಂಧಿಸಿದ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಮಲೆನಾಡಿನಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್ ಮೀಟರ್ ಅಳವಡಿಕೆಯ ಕ್ರಮದ ಬಗ್ಗೆ ತಕ್ಷಣ ನಿಲ್ಲಿಸುವಂತೆ ಆದೇಶ ಮಾಡಿದ್ದಾರೆ ಎಂದು ಸ್ಥಳೀಯ ನಿಯೋಗದವರು ತಿಳಿಸಿದ್ದಾರೆ. ಈ ವೇಳೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಕೂಡ ಹಾಜರಿದ್ದರು. ಸ್ಥಳೀಯ ಮುಖಂಡರು, ರಾಜ್ಯ ಇಂಧನ ಸಚಿವ ಜಾರ್ಜ್ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮೂಲದ ವ್ಯಕ್ತಿಗೆ ಬಸ್ಸಲ್ಲೇ ಹೃದಯಾಘಾತ!

ತೀರ್ಥಹಳ್ಳಿ ಮೂಲದ ವ್ಯಕ್ತಿಗೆ ಬಸ್ಸಲ್ಲೇ ಹೃದಯಾಘಾತ!
– ಮೈಸೂರಲ್ಲಿ ಹೃದಯಾಘಾತದಿಂದ ಸಾವು
– ಮದುವೆ ಪತ್ರಿಕೆ ಕೊಡಲು ಹೋದವರ ದುರ್ಮರಣ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪದ ಸೀತಾರಾಮ ಎಂಬುವವರು ಮೈಸೂರಿನ ಬನ್ನಿಮಂಟಪದ ಬಳಿ ಬಸ್ಸಿನಲ್ಲಿ ಹೋಗುತ್ತಿರುವ ವೇಳೆ ತೀವ್ರ ಹೃದಯಘಾತದಿಂದ ಸಾವನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕು ಕುಟುಂಬ ಪ್ರಬೋಧನ್ ಗತಿವಿಧಿಯ ಸಂಯೋಜಕರಾದ ಸೀತಾರಾಮ ಸಂತೇಕೊಪ್ಪ ಇವರು ಸಾಮಾಜಿಕವಾಗಿ ಉತ್ತಮ ಕೆಲಸ ಮಾಡಿದ್ದರು. ಕಟ್ಟೆಹಕ್ಲು ಸಮೀಪದ ಸರುವಿನತೋಟದ ಅವರ ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಮೈಸೂರಿನಿಂದ ಸೀತಾರಾಮ ಅವರ ಶರೀರವನ್ನು ತಮ್ಮ ಹುಟ್ಟೂರಿಗೆ ತರುತ್ತಿದ್ದಾರೆ. ಅವರ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಸೀತಾರಾಮ ಅವರ ಆತ್ಮಕ್ಕೆ ಶಾಂತಿ ಸಿಗಲಿ.

Categories
ತೀರ್ಥಹಳ್ಳಿ

ಅಡಿಕೆ ಸುಲಿತಕ್ಕೆ ಕರೆಂಟ್ ಶಾಕ್: ಬಿಜೆಪಿ ಪ್ರತಿಭಟನೆ

ಅಡಿಕೆ ಸುಲಿತಕ್ಕೆ ಕರೆಂಟ್ ಶಾಕ್: ಬಿಜೆಪಿ ಪ್ರತಿಭಟನೆ
– ಅಡಿಕೆ ಬೆಳೆಗಾರರಿಗೆ ಸಂಕಷ್ಟ ನೀಡುತ್ತಿರುವ ಕಾಂಗ್ರೆಸ್
– ಬಿಜೆಪಿ ರೈತ ಮೋರ್ಚಾದಿಂದ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ: ಸಿಎಂಗೆ ಮನವಿ

NAMMUR EXPRESS NEWS
ತೀರ್ಥಹಳ್ಳಿ: ಭೀಕರ ಬರ, ರೋಗಭಾದೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ ಸಂಸ್ಕರಣೆ ಯಂತ್ರಕ್ಕೆ ದುಬಾರಿ ದಂಡ ವಿಧಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತರ ಮೇಲೆ ಸವಾರಿ ನಡೆಸುತ್ತಿದೆ ಎಂದು ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಹಾಗೂ ರೈತನಿಗೆ 15 ಸಾವಿರದಷ್ಟು ಪ್ರತ್ಯೇಕ ಸಂಪರ್ಕ ಶುಲ್ಕ ಮತ್ತು ಮೂರು ತಿಂಗಳು ಉಪಯೋಗಿಸುವ ಯಂತ್ರಕ್ಕೆ 12 ತಿಂಗಳು ಕಡ್ಡಾಯ ಶುಲ್ಕ ವಿಧಿಸಿರುವುದು ರೈತರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಈ ಆದೇಶವನ್ನು ಹಿಂಪಡೆದು ರೈತರ ಪರವಾದ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿಯಲು ಕಾರ್ಮಿಕರ ಕೊರತೆ ಇಲ್ಲೆಡೆ ಇದೆ. ಈ ಸ್ಥಿತಿಯಲ್ಲಿ ಅಡಿಕೆ ಸುಲಿಯಲು ಕುಂಟುವಲ್ಲಿ ವಿಶ್ವನಾಥ್ ಅವರು ಅಡಿಕೆ ಸುಲಿಯುವ ಯಂತ್ರವನ್ನು ಕಂಡುಹಿಡಿದರು. ಅದು ರೈತರಿಗೆ ತುಂಬಾ ಸಹಕಾರಿಯಾಗಿತ್ತು. ಆದರೆ ಈಗ ಅಡಿಕೆ ಬೆಳೆಯುವ ರೈತರಿಗೆ ಅಪಮಾನ ಮಾಡಿದಂತಾಗಿದೆ. ಕಾಂಗ್ರೆಸ್ ದಂಡದ ಹೆಸರಿನಲ್ಲಿ ಅಡಿಕೆ ಬೆಳೆಗಾರರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಮೆಸ್ಕಾಂ ಅಧಿಕಾರಿಗಳಿಗೆ ಇನ್ನು ಎರಡು ಮೂರು ತಿಂಗಳಿನಲ್ಲಿ ನಮ್ಮ ಸಂಬಳ ನಿಲ್ಲಬಹುದು ಎಂಬ ಆತಂಕ ಎದುರಾಗುವ ಸ್ಥಿತಿಗೆ ನೀವು ತಂದಿದ್ದೀರಿ. ಈಗ ಅಡಿಕೆ ಸುಲಿಯುವ ಯಂತ್ರಗಳಿಗೆ ದಂಡ ವಿಧಿಸುವುವ ಕೆಲಸವನ್ನು ಮಾಡುತ್ತಿದ್ದೀರಿ. ಅಡಿಕೆ ಬೆಳೆಗಾರರು ಟ್ಯಾಕ್ಸ್ ಕೊಡುತ್ತಾರೆ. ಪುಕ್ಷಟೆ ಅಡಿಕೆಯನ್ನು ಬೆಳೆಯುತ್ತಿಲ್ಲ. ಈ ರಾಜ್ಯಕ್ಕೆ ಈ ದೇಶಕ್ಕೆ ಟ್ಯಾಕ್ಸ್ ನ ರೂಪದಲ್ಲಿ ಕೊಡುತ್ತಿದ್ದೇವೆ ಎಂದು ಹೇಳಿದರು.

ಸಾಲೆಕೊಪ್ಪ ರಾಮಚಂದ್ರ ಅವರು ಮಾತನಾಡಿ ರೈತರ ಬದುಕು ತುಂಬಾ ಕಷ್ಟವಾಗಿರುವಂತಹ ಈ ಸಂದರ್ಭದಲ್ಲಿ ಸರ್ಕಾರ ಕೇವಲ ಬಿಟ್ಟಿ ಭಾಗ್ಯಗಳನ್ನು ಮಾತ್ರ ಕೊಡುತ್ತದೆ ಎಂದರು. ಪಿಎಪಿಸಿ ಎಂ ಎಸ್ ಅಧ್ಯಕ್ಷರಾದ ನಾಗರಾಜ್, ಸಂಘಟನೆಯ ಹಿರಿಯರಾದ ಆರ್ ಮದನ್, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಹೆದ್ದೂರು ನವೀನ್, ಸಂಚಾಲಕರಾದ ಚಂದುವಳ್ಳಿ ಸೋಮಶೇಖರ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಕಾಸರವಳ್ಳಿ ಶ್ರೀನಿವಾಸ್, ಸಂಘಟನೆಯ ಹಿರಿಯರಾದ ಶಂಕರನಾರಾಯಣ ಐತಾಳ್, ತಾಲೂಕು ರೈತ ಮೋರ್ಚಾದ ಅಧ್ಯಕ್ಷರಾದ ಹೊಳೆಕೊಪ್ಪ ರವೀಂದ್ರ ಸೇರಿದಂತೆ ಎಲ್ಲ ರೈತ ಬಂಧುಗಳು ಇದ್ದರು.

Categories
ಶಿವಮೊಗ್ಗ

ಕುಂಟುವಳ್ಳಿ ವಿಶ್ವನಾಥ್ ಅವರಿಗೆ ರಾಜ್ಯ ಮಟ್ಟದಲ್ಲಿ ಗೌರವ!

ಕುಂಟುವಳ್ಳಿ ವಿಶ್ವನಾಥ್ ಅವರಿಗೆ ರಾಜ್ಯ ಮಟ್ಟದಲ್ಲಿ ಗೌರವ!
– ರಾಜಧಾನಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
– ತೀರ್ಥಹಳ್ಳಿ ಸಾಧಕನಿಗೆ ಒಲಿದ ಗೌರವ
– ನ.29ಕ್ಕೆ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನ

NAMMUR EXPRESS NEWS
ಶಿವಮೊಗ್ಗ: ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ಶ್ರೀ ಕುಂಟವಳ್ಳಿ ವಿಶ್ವನಾಥ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಬೆಂಗಳೂರಿನ ಟೌನ್ ಹಾಲ್ ಅಲ್ಲಿ ಸೋಮವಾರ ಕಾರ್ಯಕ್ರಮ ನಡೆಯಲಿದೆ. ಕೃಷಿ ಉಪಕರಣ ಉತ್ಪಾದನೆ ಮೂಲಕ ಕೃಷಿಕರ ಬೆನ್ನೆಲುಬಾಗಿರುವ ಇವರ ಗುರುತಿಸಿ ಸಾಧನೆ ಸನ್ಮಾನ ಮಾಡಲಾಗುತ್ತಿದೆ.

ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟುವಳ್ಳಿಯ ಪ್ರಗತಿಪರ ಕೃಷಿಕ ಕುಂಟುವಳ್ಳಿ ದತ್ತಾತ್ರಿ ಮತ್ತು ಸರಸ್ವತಿ ದಂಪತಿಗಳ ಪುತ್ರನಾದ ಕುಂಟವಳ್ಳಿ ವಿಶ್ವನಾಥ್ ರವರು ಡಿಪ್ಲೋಮೋ ಇಂಜಿನಿಯರಿಂಗ್ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸ್ವಸ್ಥಳದಲ್ಲಿ ವಿದ್ಯಾಭ್ಯಾಸ ಪೂರೈಸಿ ತಧನಂತರ ತಮ್ಮೂರಿನಲ್ಲೇ ವಿಟೆಕ್ ಇಂಜಿನಿಯರ್ಸ್ ಎಂಬ ಸಂಸ್ಥೆ ಮತ್ತು ಕೈಗಾರಿಕೆಯನ್ನು ಸ್ಥಾಪಿಸಿ ಸುಮಾರು 200 ಜನರಿಗೆ ತಮ್ಮ ಕಾರ್ಖಾನೆಯಲ್ಲಿ ಕೆಲಸ ಒದಗಿಸಿದ್ದಾರೆ. ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಕೆಗೆ ಬಂಡವಾಳ ಹಾಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭಿಸಿ ಕೈಯಿಂದ ಅಡಿಕೆ ಸುಲಿಯುವ ಅತಿಯಾದ ಸಂಕಷ್ಟದಿಂದ ರೈತರಿಗೆ ಸಹಾಯಕವಾಗುವುದರ ಜೊತೆ ಜೊತೆಗೆ ವಿದೇಶಕ್ಕೂ ಈ ಯಂತ್ರಗಳನ್ನು ರಫ್ತು ಮಾಡಿದ ಸಾಹಸಿಗರಾಗಿದ್ದಾರೆ.

ರೈತರಿಗೆ ಅವಶ್ಯಕವಾದ ವಾಣಿಜ್ಯ ಉಪಕರಣಗಳ ಉತ್ಪಾದನೆ ಆರಂಭ ಮಾಡಿದವರ ಸಾಲಿನಲ್ಲಿ ವಿಶ್ವನಾಥ್ ಒಬ್ಬರು. ಡಂಪರ್ ಎಸ್ಕವೇಟರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ 2014ರಲ್ಲಿ ವಿ ಟೆಕ್ ಫುಡ್ ಮತ್ತು ಬೆವರೇಜಸ್ ಇಬ್ಬನಿ ಫುಡ್ ಇಂಡಸ್ಟ್ರೀಸ್ ಆಹಾರೋದ್ಯಮ, ಇಬ್ಬನಿ ಎಂಬ ಹೆಸರಿನಲ್ಲಿ ಪ್ಯಾಕೇಜ್ ಕುಡಿಯುವ ನೀರು, ಮಾಲಿನ್ಯ ಮುಕ್ತ ಕೈಚೀಲ ಡಿಜಿಟಲ್ ಕ್ಯಾಮೆರಾ ಅಳವಡಿಸಿದ್ದ ಅಡಿಕೆ ಮರವೆರುವ ಯಂತ್ರ ಅಭಿವೃದ್ಧಿಪಡಿಸಿರುತ್ತಾರೆ. ಕರೋನ ಸಂಕಷ್ಟ ಕಾಲದಲ್ಲಿ ಕುಂಬಳ ಬೆಳೆಗಾರರ ಸಂಕಷ್ಟಕ್ಕೆ ಆಪದ್ಬಾಂಧವನಂತೆ ನೆರವಿಗೆ ಧಾವಿಸಿದ್ದ ಇದೇ ವಿಶ್ವನಾಥ್ ಕುಂಬಳಕಾಯಿಯಿಂದ ಆರಗ ಪೇಟ ಎಂಬ ಸಿಹಿ ತಿಂಡಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇದಕ್ಕೂ ಉತ್ತಮ ಬೇಡಿಕೆ ಲಭ್ಯವಾಗುವಂತೆ ಮಾಡಿರುತ್ತಾರೆ. ಇವರ ಈ ಪ್ರಯತ್ನಕ್ಕಾಗಿ ಯುವ ಬ್ರಿಗೇಡ್ ಫಿಫ್ತ್ ಪಿಲ್ಲರ್ ವತಿಯಿಂದ ಕರೋನ ಇನ್ನೋವೇಶನ್ ಅವಾರ್ಡ್ ಮತ್ತು ಹಲವು ಸಂಘ ಸಂಸ್ಥೆಯವರು ಸಾಧಕರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನ

ನ.29ರಂದು ತೀರ್ಥಹಳ್ಳಿಯಲ್ಲಿ ನಡೆಯಲಿರುವ ತೀರ್ಥಹಳ್ಳಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನದಲ್ಲೂ ಯುವ ಉದ್ಯಮಿ ವಿಶ್ವನಾಥ್ ಅವರಿಗೆ ಸನ್ಮಾನ ನಡೆಯಲಿದೆ.

Categories
ಕಾರ್ಕಳ

ದೇಶದ ಗಮನ ಸೆಳೆಯಲಿದೆ ಪಾದರಕ್ಷಾ ಅಭಿಯಾನ!

ದೇಶದ ಗಮನ ಸೆಳೆಯಲಿದೆ ಪಾದರಕ್ಷಾ ಅಭಿಯಾನ!
– ಕಾರ್ಕಳದಲ್ಲಿ ಮಹತ್ವಾಕಾಂಕ್ಷೆಯ ಬೃಹತ್‌ ಯೋಜನೆ
– ಉಡುಪಿಯ ಅವಿನಾಶ್‌ ಕಾಮತ್‌ ರಅವರ ಸಾರಥ್ಯದಲ್ಲಿ ಅಭಿಯಾನ
– ಹಳೆಯ ಪಾದರಕ್ಷೆಯ ಕಚ್ಚಾವಸ್ತು ಬಳಸಿ, ಸಂಪೂರ್ಣ ಹೊಸದಾಗಿ ನವೀಕರಿಸಿ ಅಶಕ್ತರಿಗೆ ನೀಡುವ ವಿಶಿಷ್ಟ ಯೋಜನೆ

NAMMUR EXPRESS NEWS
ಕಾರ್ಕಳ: ಮುಂಬಯಿನ ಗ್ರೀನ್‌ ಸೋಲ್ ಸಂಸ್ಥೆಯ ವತಿಯಿಂದ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಕಾರ್ಕಳದ ಸಹಯೋಗದಲ್ಲಿ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಭಾಗದ ಮತ್ತು ಕಡುಬಡವ‌, ಅಶಕ್ತ ಮಕ್ಕಳಿಗೆ ಪಾದರಕ್ಷೆ ಒದಗಿಸುವ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿಯೊಬ್ಬ ಮಗುವಿನ ದೇಹ ಕೂಡ ಸುರಕ್ಷಿತವಾಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕೆಂಬ ಮಹತ್ವಾಕಾಂಕ್ಷೆಯ ಬೃಹತ್‌ ಯೋಜನೆ ಉಡುಪಿಯ ಅವಿನಾಶ್‌ ಕಾಮತ್‌ ರಅವರ ಸಾರಥ್ಯದಲ್ಲಿ ಸಂಘಟನೆಗೊಳ್ಳುತ್ತಿದೆ.

ರಾಜ್ಯದ ಅಶಕ್ತ ಹಾಗೂ ಹಿಂದುಳಿದ ಮಕ್ಕಳಿಗೆ ಒಂದು ವರದಾನವಾಗಿ ಪರಿಣಮಿಸಲಿರುವ ಈ “ನಡಿಗೆ” ಯೋಜನೆಗೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಉಪಯೋಗಿಸಿ ಬೇಡವೆನಿಸಿದ ಹಳೆಯ ಚಪ್ಪಲಿ, ಶೂಗಳನ್ನು (10 ವರ್ಷ ಮೇಲ್ಪಟ್ಟವರ) ನಮಗೆ ದಿನಾಂಕ : 29-11-2023ರ ಒಳಗೆ ತಂದು ಒಪ್ಪಿಸುವಂತೆ ವಿನಂತಿಸಲಾಗಿದೆ.

ಹಳೆಯ ಪಾದರಕ್ಷೆಗಳ ಕಚ್ಚಾ ವಸ್ತುಗಳನ್ನು ಬಳಸಿ, ನವೀಕರಿಸಿ ಸಂಪೂರ್ಣ ಹೊಸದಾದ ಪಾದರಕ್ಷೆಗಳನ್ನು ಅಶಕ್ತರಿಗೆ ನೀಡಲಾಗುವ ವಿಶಿಷ್ಟ ಯೋಜನೆ ಇದಾಗಿದೆ. ಇದರಲ್ಲಿ ಎಲ್ಲರೂ ಕೈಜೋಡಿಸುವಂತೆ ಕೋರುತ್ತಿದ್ದೇವೆ.
ಪಾದರಕ್ಷೆಗಳನ್ನು ತಂದು ಒಪ್ಪಿಸುವ ಸ್ಥಳ.

“ಪುಸ್ತಕ ಮನೆ”ಯ ಮುಂಭಾಗ, ಆದಿಧನ್‌ ಎನ್‌ ಕ್ಲೇವ್‌, ಜೋಡುರಸ್ತೆ, ಕಾರ್ಕಳ
ದೂ. :9606474289

Categories
ಕರಾವಳಿ

ಧರ್ಮಸ್ಥಳ ಲಕ್ಷ ದೀಪೋತ್ಸವ!

ಧರ್ಮಸ್ಥಳ ಲಕ್ಷ ದೀಪೋತ್ಸವ!
– ಡಿ.8ರಿಂದ 12ರವರೆಗೆ ನಡೆಯಲಿರುವ ಕಾರ್ತಿಕ ದೀಪೋತ್ಸವ
– ಡಿ.11ಕ್ಕೆ ಸರ್ವಧರ್ಮ ಸಮ್ಮೇಳನ
– ಇಸ್ರೋದ ಅಧ್ಯಕ್ಷ ಡಾ.ಎಸ್.ಸೋಮನಾಥ್ ಉದ್ಘಾಟನೆ

NAMMUR EXPRESS NEWS
ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮವು ಡಿ. 8ರಿಂದ 12ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ. ಡಿ. 11ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನದ 91 ನೇ ಅಧಿವೇಶನವನ್ನು ವಿದ್ವಾಂಸ ಬೆಂಗಳೂರಿನ ಡಾ.ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದು, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯವಾದಿ ಡಾ.ಎಂ.ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಡಿ.12ರಂದು ಸಂಜೆ 5ಕ್ಕೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ.ಎಸ್.ಸೋಮನಾಥ್ ಉದ್ಘಾಟಿಸಲಿದ್ದು, ಬೆಂಗಳೂರಿನ ಗಮಕಿ ಡಾ.ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ.ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ.ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡಲಿದ್ದಾರೆ.

ಡಿ.8ರಂದು ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸು -ಪ್ರದರ್ಶನವನ್ನು ಪುತ್ತೂರು ಸಹಾಯಕ ಕಮೀಷನ‌ರ್ ಗಿರೀಶ್‌ನಂದನ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 10ರಂದು ರಾತ್ರಿ 7ರಿಂದ 10ರ ವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಡಿ.12ರಂದು ರಾತ್ರಿ 12ರ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ಈ ವೇಳೆ ನಾಡಿನ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಲಿದ್ದು ವೈವಿಧ್ಯಮಯ ಸೇವೆ ಅರ್ಪಿಸಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಕೆ ಎಸ್ ಅರ್ ಟಿಸಿ ರಾಜ್ಯದ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಿದೆ.

ಯಾವತ್ತು ಏನೇನು?

ಡಿ.8: ಹೊಸಕಟ್ಟೆ ಉತ್ಸವ,
ಡಿ.9: ಕೆರೆಕಟ್ಟೆ ಉತ್ಸವ,
ಡಿ. 10: ಲಲಿತೋದ್ಯಾನ ಉತ್ಸವ,
ಡಿ. 11: ಕಂಚಿಮಾರುಕಟ್ಟೆ ಉತ್ಸವ,
ಡಿ. 12: ಗೌರಿಮಾರುಕಟ್ಟೆ ಉತ್ಸವ, ಲಕ್ಷದೀಪೋತ್ಸವ,
ಡಿ. 13ರಂದು ಸಂಜೆ 7ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಮವಸರಣ ಪೂಜೆ
ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

Categories
ತೀರ್ಥಹಳ್ಳಿ

ಒಕ್ಕಲಿಗರ ಸಂಘದ ಪ್ರತಿಭಾ ಪುರಸ್ಕಾರ, ಸನ್ಮಾನದ ಸಂಭ್ರಮ

ಒಕ್ಕಲಿಗರ ಸಂಘದ ಪ್ರತಿಭಾ ಪುರಸ್ಕಾರ, ಸನ್ಮಾನದ ಸಂಭ್ರಮ
– ಆರಗ, ಧರ್ಮೇಶ್ ಸೇರಿ ಹಲವು ಗಣ್ಯರಿಗೆ ಸನ್ಮಾನ
– ಸಾಮಾನ್ಯ ಸಭೆಗೆ ಸಾವಿರಾರು ಜನ: ಸಲಹೆ

NAMMUR EXPRESS NEWS
ತೀರ್ಥಹಳ್ಳಿ: 2022-23ನೇ ಸಾಲಿನ ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ದತ್ತ ನಿಧಿ ವಿತರಣಾ ಕಾರ್ಯಕ್ರಮ ಭಾನುವಾರ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲಾ ಆವರಣದಲ್ಲಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರಿಗೆ ಪ್ರತಿಭಾ ಪುರಸ್ಕಾರ ಮತ್ತು ದತ್ತ ನಿಧಿ ವಿತರಣಾ ಸಮಾರಂಭ ಸಂಘದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸುಜಿನಿ ತಿಮ್ಮಪ್ಪ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ,ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥಗೌಡ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷರಾದ ಸಿರಿಬೈಲ್ ದರ್ಮೇಶ್, ಮಾಜಿ ಶಾಸಕರಾದ ಕಡಿದಾಳ್ ದಿವಾಕರ್, ಉದ್ಯಮಿ ಆರ್ ಮದನ್ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರು, ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ್ ಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಕಂಪದಗದ್ದೆ ನಾಗಪ್ಪ ಗೌಡರು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷರಾದ ಸಿರಿಬೈಲ್ ದರ್ಮೇಶ್, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೋ. ಎನ್ ಕೆ ಲೋಕನಾಥ್ ನೆರಟೂರು ಅವರಿಗೆ ಸನ್ಮಾನಿಸಲಾಯಿತು. ಹಾಗೂ ಗರಗ ಕಿಕ್ಕೇರಿ ಡಾಕಮ್ಮ ಮಂಜಪ್ಪ ಗೌಡ ಅವರ ನೆನಪಿನ ಸ್ಮರಣಾರ್ಥ ಉತ್ತಮ ರೈತ ಪ್ರಶಸ್ತಿಯನ್ನು ಪಿ ಜಿ ತಿಮ್ಮಪ್ಪ ಪುಟ್ಟೋಡ್ಲು ಅವರಿಗೆ ನೀಡಲಾಯಿತು.

ಸಮಾಜದ ಗಣ್ಯರು, ಪ್ರಮುಖರು ಹಾಜರ್

ಆಡಳಿತ ಮಂಡಳಿ ಅಧ್ಯಕ್ಷರಾದ ಸುಜಿನಿ ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾದ ಲೋಕೇಶ್ ಎಸ್ ವಿ ಸರಳ, ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷ ಶಶಿಧರ್ ಎಂ ಆರ್ ಮೇಲಿನ ಕೊಪ್ಪ, ಖಜಾಂಚಿ ಕೆಸಿ ವೀರೇಂದ್ರ ಕೆರೆಕೊಪ್ಪ ,ಸಹ ಕಾರ್ಯದರ್ಶಿ ಆದರ್ಶ ಹೆಚ್ ಎಂ ಹೊಸೂರು,ನಿರ್ದೇಶಕರಾದ ಬಾಳೆಹಳ್ಳಿ ಪ್ರಭಾಕರ್ ಲ್, ಚಂದವಳ್ಳಿ ಸೋಮಶೇಖರ್, ಕೂಳೂರು ಕೃಷ್ಣಮೂರ್ತಿ, ಸುಧೀರ್ ಬಿವಿ, ಯುಡಿ ವೆಂಕಟೇಶ್, ಶೈಲಾ ಡಿ ಎನ್, ಡಾ. ಚೇತನ ನಂದನ್, ಧನ್ಯ ಅಶ್ವಲ್ – ಬೊಬ್ಬಿ, ಸುನಿಲ್ ಗೌಡ, ಸಂದೀಪ್ ಡಿ, ಸಿರಿಬೈಲ್ ಧರ್ಮೇಶ್ – ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಜರಿದ್ದರು.

Categories
ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ
– ಮಾಂಗಲ್ಯ ಭಾಗ್ಯ ಅರ್ಜಿ ಸಲ್ಲಿಸಲು ಡಿ.31 ಕೊನೆ ದಿನ
– ಹೆಚ್ಚು ಕಮ್ಮಿ 2 ಲಕ್ಷ ಸಿಗುತ್ತೆ: ದಾಖಲೆ ಏನೇನು ಬೇಕು..?

NAMMUR EXPRESS NEWS
ಸುಬ್ರಹ್ಮಣ್ಯ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಡಿ. 31ರಂದು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 08257-281224ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.ಅಥವಾ ದೇವಸ್ಥಾನದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಜ. 31ರಂದು ಬೆಳಗ್ಗೆ 11.20ರಿಂದ 12.20ರ ವರೆಗೆ ನೆರವೇರುವ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ಜ. 5ರಂದು ನೋಂದಾಯಿತ ವಧೂ-ವರರ ವಿವರಗಳನ್ನು ದೇವಸ್ಥಾನದಲ್ಲಿ ಪ್ರಕಟಿಸಲಾಗುವುದು. ಜ. 10 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜ. 15ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಅಗತ್ಯ ದಾಖಲೆಗಳು ಏನೇನು ಬೇಕು?

ವಧು-ವರರ ಪೂರ್ಣ ವಿಳಾಸ ದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರದ ಪ್ರತಿ, ಪಾಸ್‌ಪೋರ್ಟ್ ಗಾತ್ರದ 2 ಫೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು

ಏನೇನು ಕೊಡಲಾಗುತ್ತದೆ?

ವರನಿಗೆ ದೇವಸ್ಥಾನದ ವತಿಯಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ 5 ಸಾವಿರ ರೂ. ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ 10 ಸಾವಿರ ರೂ. ನೀಡಲಾಗುವುದು. 40 ಸಾವಿರ ರೂ. ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ. 2 ಚಿನ್ನದ ಗುಂಡನ್ನು ಒದಗಿಸಲಾಗುವುದು. ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಗಳನ್ನು ಮಾಡಲಾಗುವುದು. ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ. ನಿಶ್ಚಿತ ಠೇವಣಿ ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಗುವುದು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿಂದು ಬಿಜೆಪಿ ಪ್ರತಿಭಟನೆ

ತೀರ್ಥಹಳ್ಳಿಯಲ್ಲಿಂದು ಬಿಜೆಪಿ ಪ್ರತಿಭಟನೆ
– ಅಡಿಕೆ ಸಂಸ್ಕರಣೆ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ನಿಯಮಕ್ಕೆ ಆಕ್ರೋಶ
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹೋರಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬಿಜೆಪಿ ವತಿಯಿಂದ ಶಾಸಕರೂ,ಮಾಜಿ ಗೃಹಸಚಿವರಾದ ಆರಗ ಜ್ಞಾನೇಂದ್ರರವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿದ್ಯುತ್ ನಿಯಮ ಖಂಡಿಸಿ ಬೃಹತ್‌ ಪ್ರತಿಭಟನೆ ನಡೆಯಲಿದೆ. 27.11.2023ರ ಸೋಮವಾರ ಬೆಳಿಗ್ಗೆ 10:30 ಗಂಟೆಗೆ ಪಕ್ಷದ ಕಚೇರಿ, ಕೊಪ್ಪ ಸರ್ಕಲ್‌, ತೀರ್ಥಹಳ್ಳಿಯಿಂದ ಮೆಸ್ಕಾಂ ಕಚೇರಿವರೆಗೂ ಪ್ರತಿಭಟನೆ ನಡೆಯಲಿದೆ. ಅಡಿಕೆ ಸಂಸ್ಕರಣೆ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆಯಲು ಒತ್ತಾಯಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸುವ ಸಲುವಾಗಿ ತೀರ್ಥಹಳ್ಳಿ ಮೆಸ್ಕಾಂ ಕಚೇರಿ ಎದುರು 11:30ಕ್ಕೆ ಬೃಹತ್‌ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಸರ್ವರನ್ನು ಬಿಜೆಪಿ ತೀರ್ಥಹಳ್ಳಿ ಹಾಗೂ ಶಾಸಕ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.

Categories
ಬೆಂಗಳೂರು

ಮನೆಗೇ ಬಂದು ಬಿಪಿ, ಶುಗರ್, ಕ್ಯಾನ್ಸ‌ರ್ ಪರೀಕ್ಷೆ!

ಮನೆಗೇ ಬಂದು ಬಿಪಿ, ಶುಗರ್, ಕ್ಯಾನ್ಸ‌ರ್ ಪರೀಕ್ಷೆ!
– ಉಚಿತ ಔಷಧ ಪೂರೈಸಲು ಗೃಹ ಆರೋಗ್ಯ ಯೋಜನೆ
– ಪ್ರತಿ 15 ದಿನಗಳಿಗೊಮ್ಮೆ ಮನೆಗೇ ಬರ್ತಾರೆ ವೈದ್ಯರು
– ಚಿಕ್ಕಮಗಳೂರಿನಿಂದ ಯೋಜನೆ ಶುರು

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆ ಮೂಲಕ ವೈದ್ಯರ ತಂಡ ಪ್ರತಿ ಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ, ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್ ಕಾಯಿಲೆ ಪರೀಕ್ಷೆ ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ.
ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜ ಮತ್ತು ಲಕ್ಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಗೃಹ ಆರೋಗ್ಯ ಯೋಜನೆ ಆರಂಭಿಸಲಾಗುತ್ತಿದೆ.

ರಾಮನಗರ, ಬೆಳಗಾವಿ, ಗದಗ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 30 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಪ್ರತಿ ಮನೆಗೆ ತೆರಳಿ ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸ‌ರ್ ಪರೀಕ್ಷೆ ನಡೆಸಲಾಗುವುದು. ರೋಗಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ತಪಾಸಣೆ ನಡೆಸಿ ಮುಂದಿನ ಚಿಕಿತ್ಸೆಗೆ ಸೂಕ್ತ ಕ್ರಮ ವಹಿಸಲಾಗುತ್ತದೆ.

ಮನೆಗೇ ಭೇಟಿ ನೀಡಿ ತಪಾಸಣೆ

ಪ್ರತಿದಿನ ಮಧ್ಯಾಹ್ನ ಮತ್ತು ಬೆಳಗಿನ ಅವಧಿಯಲ್ಲಿ ವಾರದಲ್ಲಿ ಮೂರು ದಿನ ಆರೋಗ್ಯ ಸಿಬ್ಬಂದಿ 20 ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ನಾಲ್ವರು ಸಿಬ್ಬಂದಿ ತಂಡವಾಗಿ ಪ್ರತಿದಿನ 20 ಮನೆಗೆ ಭೇಟಿ ನೀಡಲಿದ್ದು, ಪ್ರತಿ 15 ದಿನಕ್ಕೊಮ್ಮೆ ಶಿಬಿರ ನಡೆಸಲಾಗುವುದು. ಬಿಪಿ, ಮಧುಮೇಹ ರೋಗಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮಾಸಿಕ ಶಿಬಿರದಲ್ಲಿ ತಪಾಸಣೆ ನಡೆಸಲಾಗುವುದು. ಅಂಗನವಾಡಿ, ಶಾಲೆ, ಪಂಚಾಯಿತಿ ಕಟ್ಟಡ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ವೈದ್ಯಾಧಿಕಾರಿಗಳ ತಂಡ ಶಿಬಿರ ನಡೆಸಲಿದೆ.