Categories
ತೀರ್ಥಹಳ್ಳಿ

ರೈತನಿಗೆ ಗುದ್ದಿದ ಕಾಡು ಕೋಣ!

ರೈತನಿಗೆ ಗುದ್ದಿದ ಕಾಡು ಕೋಣ!
– ಬಿದರಗೋಡು ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ
– ಗಂಭೀರ ಗಾಯಗೊಂಡ ರೈತ ಆಸ್ಪತ್ರೆಗೆ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣವೊಂದು ರೈತನಿಗೆ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಳಾನೆ ಎಂಬಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕಾಡುಕೋಣ ಒಂದು ಗುದ್ದಿದ್ದು, ಉಳ್ಳಾನೆಯ ಮಂಜಪ್ಪ ಗೌಡ (60 ವರ್ಷ) ಎಂಬುವವರು ಗಂಭೀರ ಗಾಯಗೊಂಡಿದ್ದು, ಅವರನ್ನು ತೀರ್ಥಹಳ್ಳಿಯ ಸರ್ಕಾರಿ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದರಗೋಡು, ಆಗುಂಬೆ ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪದೇ ಪದೇ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿವೆ.

ಇನ್ನು ಇತ್ತೀಚೆಗೆ ತಾನೇ ಕುಂದಾದ್ರಿ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡುಕೋಣ ಒಂದು ದಾಳಿ ಮಾಡಿತ್ತು, ಆ ವೇಳೆ ಸಣ್ಣಪುಟ್ಟ ಗಾಯಗಳಿಂದ ವ್ಯಕ್ತಿ ಪಾರಾಗಿದ್ದಾನೆ. ಇದೀಗ ಮತ್ತೊಂದು ಘಟನೆ ನಡೆದಿದೆ. ಹೀಗಾಗಿ ಸ್ಥಳೀಯರು, ಅರಣ್ಯ ಇಲಾಖೆಯವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆಗುಂಬೆ ಭಾಗದ ಪ್ರಮುಖ ಮುಖಂಡರಾದ ಬಾಳೆಹಳ್ಳಿ ಪ್ರಭಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದ್ದಾರೆ.

Categories
ಕರಾವಳಿ

ಹೆದ್ದಾರಿಯಲ್ಲಿ ಕಾರನ್ನು ಎತ್ತಿ ನೆಲಕ್ಕೆ ಕುಟ್ಟಿದ ಕಾಡಾನೆ!

ಹೆದ್ದಾರಿಯಲ್ಲಿ ಕಾರನ್ನು ಎತ್ತಿ ನೆಲಕ್ಕೆ ಕುಟ್ಟಿದ ಕಾಡಾನೆ!
– ಕಾರಿನಲ್ಲಿದ್ದ ಇಬ್ಬರಿಗೆ ಗಾಯ: ಅಪಾಯದಿಂದ ಪಾರು
– ಬೆಳ್ತಂಗಡಿಯ ಕಕ್ಕಿಂಜೆಯ ಬತ್ತಿಯಲ್ಲಿ ನಡೆದ ಘಟನೆ

NAMMUR EXPRESS NEWS
ಬೆಳ್ತಂಗಡಿ: ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರನ್ನು ಕಾಡಾನೆಯೊಂದು ಎತ್ತಿ ನೆಲಕ್ಕೆ ಕುಟ್ಟಿದ ಘಟನೆ ದಕ್ಷಿಣ ಕನ್ನಡ ಬೆಳ್ತಂಗಡಿಯ ಕಕ್ಕಿಂಜೆಯ ಬತ್ತಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಪುತ್ತೂರು ಮೂಲದ ಅಬ್ದುಲ್ ರೆಹಮಾನ್ ಮತ್ತು ನಾಸಿಯ ಗಾಯಾಳುಗಳು. ರೆಹಮಾನ್ ಅವರ ತಲೆ ಮತ್ತು ಕಾಲಿಗೆ ಹಾಗೂ ನಾಸಿಯಾ ಅವರ ಕಾಲಿಗೆ ಗಾಯವಾಗಿದೆ. ಇವರಿಗೆ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನಲ್ಲಿ ಮಗು ಸಹಿತ ಏಳು ಮಂದಿ ನೆರೆಯದ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದರು. ಆನೆಯೂ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ತಿಳಿದಿದ್ದ ಸ್ಥಳೀಯರು ಆಗ ಆ ದಾರಿಯಾಗಿ ಬಂದ ಕಾರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ನಿಲ್ಲಿಸುವಂತೆ ಸೂಚಿಸಿದರು.

ಕಾರನ್ನು ಕಟ್ಟಡ ಒಂದರ ಬದಿ ನಿಲ್ಲಿಸುವಷ್ಟರಲ್ಲಿ ಆನೆ ಅದೇ ಪರಿಸರಕ್ಕೆ ಆಗಮಿಸಿತ್ತು. ಕಾರಿನಲ್ಲಿದ್ದ ಕೆಲವರು ಅಷ್ಟರಲ್ಲಿ ಕೆಳಗೆ ಇಳಿದು ಪಕ್ಕದ ಮನೆಯಲ್ಲಿ ರಕ್ಷಣೆ ಪಡೆದರು. ಆನೆಯು ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಗುದ್ದಿ ಜಖಂಗೊಳಿಸಿ ಆನಂತರ ಅಲ್ಲಿಂದ ಮನೆಯ ಕಾಂಪೌಂಡ್ ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಬಳಿಕ ನದಿಯ ಪರಿಸರದಲ್ಲಿ ಕಂಡಿದ್ದಾಗಿ ತಿಳಿಸಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನ ಅಟ್ಟಲು ಕ್ರಮ ಕೈಗೊಂಡಿದ್ದಾರೆ.

ಈ ಘಟನೆಗೆ ಪೂರ್ವದಲ್ಲಿ ಆನೆಯ ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು ಒಬ್ಬರ ಮನೆಯಂಗಳಕ್ಕೂ ಹೋಗಿದ್ದು ಹಾಗೂ ರಸ್ತೆ ಬದಿ ಇರುವ ಮನೆಯೊಂದರ ಗೇಟ್ ಅನ್ನು ಮುರಿಯಲು ಯತ್ನಿಸಿತ್ತು. ಆಗ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದ ಕಾರಣ ಮತ್ತೆ ರಸ್ತೆಗೆ ಬಂದಿತ್ತು. ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು, ಇದೇ ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆದಿದೆ.

Categories
ತೀರ್ಥಹಳ್ಳಿ

ತುಂಗಾ ಕಾಲೇಜಲ್ಲಿ ರಾಜ್ಯೋತ್ಸವದ ಕಂಪು!

ತುಂಗಾ ಕಾಲೇಜಲ್ಲಿ ರಾಜ್ಯೋತ್ಸವದ ಕಂಪು!
– ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು
– ಮೊಬೈಲ್ಗೆ ದಾಸರಾದರೆ ಕಷ್ಟ: ಕವಿತಾ ಸುಧೀಂದ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ರವರು ಆಗಮಿಸಿ ಹಾಸ್ಯಭರಿತ ಶೈಲಿಯಲ್ಲಿ ವಿದ್ಯಾರ್ಥಿಗಳನ್ನು ಕುರಿತು ಹಿತವಚನಗಳನ್ನಾಡಿದರು.
ಪಂಪ, ರನ್ನ, ಜನ್ನ, ಕುವೆಂಪು, ಮಾಸ್ತಿ ಮೊದಲಾದ ಕವಿಗಳ ಕಾವ್ಯಗಳನ್ನು ಓದಿದರೆ ಅದು ಎಲ್ಲಾ ಸಂಪತ್ತಿಗಿಂತ ಮಿಗಿಲಾದ ಆಸ್ತಿಯಾಗುತ್ತದೆ, ಆದ್ದರಿಂದ ಹೆಚ್ಚು ಹೆಚ್ಚು ಕೃತಿಗಳನ್ನು ಓದಬೇಕು, ಹಾಗೂ ಚಿಂತೆಯನ್ನು ಬಿಡಬೇಕು, ಚಿಂತೆ ನಮ್ಮ ಶಕ್ತಿಯನ್ನು ಕುಂದಿಸುತ್ತದೆ, ಚಿಂತೆಯನ್ನು ಬಿಟ್ಟರೆ ನಾವು ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತದೆ, ಇದೆಲ್ಲದರ ಜೊತೆಗೆ ನಾವು ಸಮಾಜಮುಖಿಗಳಾಗಿ ಬೆಳೆಯಬೇಕು, ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು, ಮೊಬೈಲ್ಗೆ ದಾಸರಾದರೆ ಅದು ನಮ್ಮನ್ನು ಸಂಕುಚಿತಗೊಳಿಸುತ್ತದೆ, ಪೋಷಕರು ಕೂಡ ತಮ್ಮ ಮಕ್ಕಳನ್ನು ಅಂಕಗಳ ದಾಸರನ್ನಾಗಿ ಮಾಡಬಾರದು ಬದಲಾಗಿ ಕ್ರಿಯಾಶೀಲ ಬದುಕನ್ನು ಕಟ್ಟಿಕೊಳ್ಳಲು ಪ್ರೋತ್ಸಾಹಿಸಬೇಕೆಂದರು.

ವಿದ್ಯಾರ್ಥಿಗಳು ಮುಖ್ಯ ಅತಿಥಿಗಳನ್ನು ಬಾಗಿನ ನೀಡಿ ವಿಶಿಷ್ಟವಾಗಿ ಗೌರವಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಕೆ ಅಂಜನಪ್ಪ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿ ಒಂದುಗೂಡಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷದಾಯಕ ವಿಷಯವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಕನ್ನಡ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪಟಮಕ್ಕಿ ಮಹಾಬಲೇಶ್ ಹಿರಿಯ ಉಪನ್ಯಾಸಕರಾದ ಪ್ರೊ.ಕೆ ಟಿ ರಮೇಶ್ ಐಕ್ಯುಎಸಿ ಸಂಚಾಲಕರಾದ ಡಾ.ಆರ್ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಕೆಎಲ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕುಮಾರಿ ಸಿಂಧೂರ ದ್ವಿತೀಯ ಬಿಕಾಂ ವಂದನಾರ್ಪಣೆಯನ್ನು ವೈಷ್ಣವಿ ದ್ವಿತೀಯ ಬಿಕಾಂ ನಿರೂಪಣೆಯನ್ನು ಸಹನಾ ಜಿ ಎಸ್, ಸಾಕ್ಷಿ ಟಿ ಡಿ ದ್ವಿತೀಯ ಬಿಕಾಂ ನಡೆಸಿಕೊಟ್ಟರು.

ಕಾಲೇಜು ತುಂಬಾ ಕನ್ನಡದ ಕಂಪು

ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ವೇತ ವಸ್ತ್ರವನ್ನು ಧರಿಸಿ, ಕೆಂಪು ಹಳದಿ ಶಾಲನ್ನು ಹೊದ್ದು ಉತ್ಸಾಹದಿಂದ ಭಾಗವಹಿಸಿರುವುದು ವಿಶೇಷವಾಗಿತ್ತು.

Categories
ಬೆಂಗಳೂರು

ನಾಲ್ಕು ದಿನ ಮಳೆ: ರೈತರೇ ಎಚ್ಚರ!

ನಾಲ್ಕು ದಿನ ಮಳೆ: ರೈತರೇ ಎಚ್ಚರ!
– ಮೂನ್ಸೂಚನೆ ನೀಡಿದ ಹವಾಮಾನ ಇಲಾಖೆ
– ಕರಾವಳಿ, ಮಲೆನಾಡು ಸೇರಿ ಹಲವೆಡೆ ಮಳೆ
– ಅಡಿಕೆ, ಭತ್ತದ ಕೊಯ್ಲು: ರೈತರ ಮೊಗದಲ್ಲಿ ಆತಂಕ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ ಮೈಸೂರು, ಚಾಮರಾಜನಗರ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ನ.28ರಿಂದ ಡಿ.1ರವರೆಗೆ ಹಗುರವಾದ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಅಡಿಕೆ, ಭತ್ತದ ಕೊಯ್ಲು: ರೈತರ ಮೊಗದಲ್ಲಿ ಆತಂಕ

ರಾಜ್ಯದ ಬಹುತೇಕ ಭಾಗದಲ್ಲಿ ಕೃಷಿ ಚುರುಕುಗೊಂಡಿದೆ. ಈ ಸಮಯದಲ್ಲಿ ಅಕಾಲಿಕ ಮಳೆ ಸೂಚನೆ ರೈತರನ್ನು ಆತಂಕಕ್ಕೆ ತಳ್ಳಿದೆ. ಅದ್ರಲ್ಲೂ ಮಲೆನಾಡು, ಕರಾವಳಿ ಭಾಗದ ವಾರ್ಷಿಕ ಬೆಳೆ ಅಡಿಕೆ ಕೊಯ್ಲು ನಡೆಯುತ್ತಿದೆ. ಭತ್ತ ಕೂಡ ಕೊಯ್ಲಿಗೆ ಬಂದಿದೆ. ಈ ಹಂತದಲ್ಲಿ ಮಳೆ ಆತಂಕ ತಂದಿದೆ.

Categories
ತೀರ್ಥಹಳ್ಳಿ

ಪುತ್ತಿಗೆ ಮಠದಲ್ಲಿ ದೀಪೋತ್ಸವ ರಂಗು!

ಪುತ್ತಿಗೆ ಮಠದಲ್ಲಿ ದೀಪೋತ್ಸವ ರಂಗು!
– ರಥೋತ್ಸವ ಸಂಭ್ರಮ: ನೂರಾರು ಭಕ್ತರ ಸಮಾಗಮ
– ಆಂಜನೇಯ ದೇಗುಲದಲ್ಲಿ ರಂಗ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪುತ್ತಿಗೆ ಮಠದಲ್ಲಿ ದೀಪೋತ್ಸವ ಸಂಭ್ರಮದಿಂದ ನೆರವೇರಿತು. ಆಂಜನೇಯ ರಥೋತ್ಸವ, ದೀಪೋತ್ಸವದಲ್ಲಿ ಭಜನೆ, ಚಂಡೆ ಕಲಾವಿದರ ನೃತ್ಯ ಗಮನ ಸೆಳೆಯಿತು. ಪಟಾಕಿ ಹೊಡೆಯಲಾಯಿತು. ನೂರಾರು ಮಂದಿ ಭಾಗವಹಿಸಿದ್ದರು. ಆಂಜನೇಯ ದೇಗುಲದಲ್ಲಿ ರಂಗಪೂಜೆ ಮಾಡಲಾಯಿತು. ಭಕ್ತಾದಿಗಳಿಗೆ ಅನ್ನ ಪ್ರಸಾದ ನೀಡಿದ್ದು, ಭಕ್ತರು ಖುಷಿಯಿಂದ ಪಾಲ್ಗೊಂಡರು.

[embedyt] https://www.youtube.com/watch?v=gu97FnDmmyQ%5B/embedyt%5D

Categories
ಹೊಸನಗರ

ಗೋಪೂಜೆಗಿಟ್ಟಿದ್ದ ಬಂಗಾರದ ಸರ ನುಂಗಿತು ಹಸು!

ಗೋಪೂಜೆಗಿಟ್ಟಿದ್ದ ಬಂಗಾರದ ಸರ ನುಂಗಿತು ಹಸು!
– ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ಘಟನೆ
– ಕೋಣಂದೂರು ವೈದ್ಯರಿಂದ ದನದ ಆಪರೇಷನ್

NAMMUR EXPRESS NEWS
ಹೊಸನಗರ: ಆರೆರೆ ಬಂಗಾರದ ಸರವನ್ನೇ ಹಸುವೊಂದು ನುಂಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಹಸುವೊಂದು ನುಂಗಿದ ಪರಿಣಾಮ ಪಶುವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಬಂಗಾರದ ಸರವನ್ನು ಹೊರತೆಗೆದ ಘಟನೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ನೆಡೆದಿದೆ. ಮತ್ತಿಮನೆ ವಿನಾಯಕನ ಉಡುಪರ ಸಹೋದರ ದಿ.ಶ್ಯಾಮ ಉಡುಪರ ಮನೆಯಲ್ಲಿ ಈ ಘಟನೆ ನಡೆದಿದೆ.ಗೋಪೂಜೆಯ ನಂತರ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ಆದರೆ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಕುಟುಂಬಸ್ಥರು ಖಚಿತ ಪಡಿಸಿಕೊಂಡಿದ್ದಾರೆ. ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ.ಆನಂದ.ಜಿ ಯವರಿಗೆ ಮಾಹಿತಿ ನೀಡಿ ಕಳೆದ ಭಾನುವಾರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ 70 ಸಾವಿರ ಮೌಲ್ಯದ ಬಂಗಾರದ ಸರವನ್ನು ಪಶು ವೈದ್ಯರು ಹೊರ ತೆಗೆದಿದ್ದಾರೆ. ಸದ್ಯ ಹಸುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Categories
ಸಿನಿಮಾ

ಈಗ ಮತ್ತೆ ಕಾಂತಾರ 1 ಅಲೆ ಶುರು!

ಈಗ ಮತ್ತೆ ಕಾಂತಾರ 1 ಅಲೆ ಶುರು!
– ಮುಹೂರ್ತ ಫಿಕ್ಸ್..ಫಸ್ಟ್‌ ಲುಕ್ ರಿಲೀಸ್!
– ರಿಷಬ್ ಶೆಟ್ಟಿ ಅವತಾರ ಹೊಸ ಸಂಚಲನ
– ಆನೆಗುಡ್ಡೆ ದೇಗುಲದಲ್ಲಿ ಸಿನಿಮಾ ಮುಹೂರ್ತ

NAMMUR EXPRESS NEWS
ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ, ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಫಸ್ಟ್ ಲುಕ್‌ ಸೋಮವಾರ ಬಿಡುಗಡೆಯಾಗಿದೆ. ಈ ಮೂಲಕ ಮತ್ತೆ ಕಾಂತಾರ 1 ಅಲೆ ಶುರುವಾಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಹೊಂಬಾಳೆ ಫಿಲಂಸ್‌, ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದ ಆರಂಭದಲ್ಲಿ ರಿಷಬ್ ಶೆಟ್ಟಿ ಬೆಳಕು ಹಿಡಿದು ಕಾಡಿನೊಳಗೆ ಓಡಿ ಹೋಗುತ್ತಾರೆ. ರಿಷಬ್ ಒಂದ ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ

ಆನೆಗುಡ್ಡೆ ದೇಗುಲದಲ್ಲಿ ಸಿನಿಮಾ ಮುಹೂರ್ತ

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕೋಟ ಸಮೀಪದ ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಹಿಂದೆ ಸೂಪರ್ ಹಿಟ್ ಆದ ಕಾಂತಾ ಸಿನಿಮಾ ಮುಹೂರ್ತವನ್ನು ಕೂಡ ಇದೇ ಕೆರಾಡಿಯ ಆನೆಗುಡ್ಡ ದೇವಸ್ಥಾನದಲ್ಲಿ ನೆರವೇರಿತ್ತು. ಕಾಂತಾರ ಸೀಕ್ವೆಲ್‌ಗಾಗಿ ಅದ್ಭುತವಾಗಿ ಕಥೆಯನ್ನು ಹೆಣೆದಿರುವ ನಟ ರಿಷಬ್ ಶೆಟ್ಟಿ ನ.27ರಂದು ಮುಹೂರ್ತ ಇಟ್ಟು ಡಿಸೆಂಬರ್ 2ನೇ ವಾರ ಶೂಟಿಂಗ್ ಆರಂಭಿಸಲಿದ್ದಾರೆ. ಇದು ಕಾಂತಾರ ಸೀಕ್ವೆಲ್ ಆಗಿರುವ ಕಾರಣ ಇದನ್ನು ಕಾಂತಾರ 1 ಎಂದು ಕರೆದಿದ್ದಾರೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಪ್ರೀತಿಸಿ ಕೈಕೊಟ್ಟ: ಮಾತ್ರೆ ನುಂಗಿ ಯುವತಿ ಆತ್ಮಹತ್ಯೆ ಯತ್ನ..!
– ಹೊಸನಗರದಲ್ಲಿ ನಡೆದ ಘಟನೆ: ಏನಿದು ಕೇಸ್
– ಸೊರಬ: ಮಧು ಬಂಗಾರಪ್ಪ ಹೆಸರಲ್ಲಿ ನಕಲಿ ಅಕೌಂಟ್!
– ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಾಣಿ ಕೊಂಬು: ಮತ್ತೊಂದು ಕೇಸ್
– ಹೊಸನಗರ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

NAMMUR EXPRESS NEWS
ಹೊಸನಗರ: ಪ್ರೀತಿಸಿದ್ದ ಯುವಕ ನಂಬಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ಯುವತಿ ತನಗೆ ವಂಚಿಸಿದ ಯುವಕನಿಗೆ ಹಾಗೂ ಆತನ ಭಾವನಿಗೆ ಶಿಕ್ಷೆ ವಿಧಿಸಬೇಕು ಎಂದು ವೀಡಿಯೋ ಮೂಲಕ ಹೇಳಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೊಸನಗರ ಮೂಲದ ಸುಧಾ (27) ಹಾಗೂ ಶ್ರೀಕಾಂತ್ (30) ಇಬ್ಬರು ಪರಸ್ಪರ 6 ವರ್ಷಗಳಿಂದ ಪ್ರೀತಿಸುತ್ತಿದ್ದರು.ತಾನು ಸುಧಾಳನ್ನು ವಿವಾಹವಾಗುವುದಾಗಿ ನಂಬಿಸಿದ್ದ ಶ್ರೀಕಾಂತ್ ಆಕೆಯೊಡನೆ ದೈಹಿಕ ಸಂಪರ್ಕ ಸಹ ಮಾಡಿದ್ದ. ಯುವತಿ ಸುಧಾ ಸಹ ತನ್ನ ಪ್ರೇಮಿಯನ್ನು ಬಹಳವೇ ನಂಬಿದ್ದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೆ ಈಗ ನೀನು ಕೆಳ ಜಾತಿಯವಳೆಂದು ಎಂದು ಹೇಳಿ ಸುಧಾಳನ್ನು ಮದುವೆಯಾಗಲು ಯುವಕ ನಿರಾಕರಿಸಿದ್ದಾನೆ.ಹಾಗಾಗಿ ಯುವತಿ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸಚಿವರ ನಕಲಿ ಫೇಸ್ ಬುಕ್ ಅಕೌಂಟ್ ಒಪನ್

ಸೊರಬ: ಮಧು ಬಂಗಾರಪ್ಪಾಜಿ ಮಾಜಿ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು ಎಂಬ ನಕಲಿ ಫೇಸ್ ಬುಕ್ ಅಕೌಂಟ್ ನಿಂದ ಕಾಂಗ್ರೆಸ್ ನಾಯಕರನ್ನ ಅಪಮಾನಿಸುವುದು, ರಾಜ್ಯ ಸರ್ಕಾರದ ಗ್ಯಾರೆಂಟಿಗಳನ್ನ ಅವಹೇಳನ ಮಾಡುತ್ತಿರುವುದರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್ ಬುಕ್ ಅಕೌಂಟ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಜಿ ಅವರ ನಕಲಿ ಅಕೌಂಟ್ ನಲ್ಲಿ 58 ಸಾವಿರ ಜನ ಸಬ್ ಸ್ಕ್ರೈಬರ್ ಗಳಿದ್ದು, ಅದರಲ್ಲಿ ಕುಂದಾಪುರ ವಿರಾಟ್ ಎಂಬಾತ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಫೋಟೋ ಹಾಕಿ 5000 ಕೋಟಿ ರೂ. ಹಣವನ್ನ ಒಂದೇ ಏಟಿಗೆ ಗುಳುಂ ಎಂದು ಉಲ್ಲೇಖಿಸಿ ಹರಿ ಬಿಟ್ಟಿದ್ದಾನೆ. ಸಚಿವ ಮಧು ಬಂಗಾರಪ್ಪನವರೇ ಈ ಗ್ರೂಪ್ ನ್ನ ಕ್ರಿಯೆಟ್ ಮಾಡಿ ಅದರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಅವಹೇಳನ ಮಾಡಿದಂತೆ ಪೋಸ್ಟ್ ಹಾಕುತ್ತಿರುವುದರ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಚಾಲಕ ಮತ್ತು ಸಚಿವರ ಆಪ್ತ ಜಿ.ಡಿ.ಮಂಜುನಾಥ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಾಣಿ ಕೊಂಬು: ಮತ್ತೊಂದು ಕೇಸ್

ತೀರ್ಥಹಳ್ಳಿ : ಕಳೆದ ನವೆಂಬರ್ ಒಂದರು ತೀರ್ಥಹಳ್ಳಿ ಬಸವನಗದ್ದೆಯಲ್ಲಿ ಪ್ರಸನ್ನ ಎಂಬವರ ಮನೆಗೆ ಅರಣ್ಯ ಇಲಾಖೆಯವರು ದಾಳಿ ನಡೆಸಿದ್ದ ಪ್ರಕರಣದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ. ಬಸವನಗದ್ದೆಯಲ್ಲಿ ನಡೆದಿದ್ದ ದಾಳಿ ವೇಳೆ ಲಭ್ಯವಾದ ನಾಡ ಬಂದೂಕಿನ ವಿಚಾರದಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ. ತನಿಖೆ ಮಾಡಲು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ತೀರ್ಥಹಳ್ಳಿ ರವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಬಂದೂಕನ್ನ ಸುಪರ್ಧಿಗೆ ಪಡೆದು ಕೇಸ್ ದಾಖಲಿಸಲಾಗಿದೆ.

ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಶವಂತ್ (19) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಅನಾರೋಗ್ಯ ಹಿನ್ನಲೆಯಲ್ಲಿ ಮನನೊಂದು ಶನಿವಾರ ಮಧ್ಯಾಹ್ನ ವಿಷ ಸೇವಿಸಿದ್ದಾನೆ ತಕ್ಷಣ ಕುಟುಂಬಸ್ಥರು ಯುವಕನನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಯುವಕನು ಭಾನುವಾರ ತಡರಾತ್ರಿ ಮೃತಪಟ್ಟಿದ್ದಾನೆ.

Categories
ತೀರ್ಥಹಳ್ಳಿ

ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಬೇಡ

ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಬೇಡ
– ಆದೇಶ ಹಿಂಪಡೆಯುತೆ ಸರ್ಕಾರಕ್ಕೆ ಪತ್ರ ಬರೆದ ಸಚಿವ ಮಧು ಬಂಗಾರಪ್ಪನವರಿಗೆ ಕೃತಜ್ಞತೆ
– ಕಿಮ್ಮನೆ, ಮಂಜುನಾಥ ಗೌಡರಿಗೂ ಅಭಿನಂದನೆ
– ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಮಳಲೇಕೊಪ್ಪ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಅತಿವೃಷ್ಟಿ, ಅನಾವೃಷ್ಟಿ, ಪ್ರಾಣಿಗಳ ಹಾವಳಿ ಮತ್ತು ಅಡಿಕೆ ಬೆಳೆಗೆ ತಗುಲಿರುವ ರೋಗಗಳಿಂದ ಮಲೆನಾಡಿನ ಅಡಿಕೆ ಬೆಳೆಗಾರರು, ರೈತರು ತತ್ತರಿಸಿಹೋಗಿದ್ದಾರೆ. ಇಂತಹ ದುಃಸ್ಥಿತಿಯಲ್ಲಿ ಗಾಯದ ಮೇಲೆ  ಬರೆ ಎಳೆಯುವ ರೀತಿಯಲ್ಲಿ ಮೆಸ್ಕಾಂ ಅಡಿಕೆ ಸುಲಿಯುವ ಯಂತ್ರ ಬಳಸುವ ರೈತರ ಮೇಲೆ ಕೇಸು ಹಾಕಿ, ೫೦-೬೦ ಸಾವಿರದಷ್ಟು ದುಬಾರಿ ದಂಡ ವಿಧಿಸುತ್ತಿದೆ. ವರ್ಷದಲ್ಲಿ ಒಂದರಿಂದ ೨ ತಿಂಗಳು ಅಡಿಕೆ ಸುಲಿತ ನಡೆಯುತ್ತದೆ. ಕಾರ್ಮಿಕರ ಸಮಸ್ಯೆಯಿಂದ ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಉಪಯೋಗ ಅನಿವಾರ್ಯವಾಗಿದೆ. ಸರ್ಕಾರ ರೈತರ ಅಡಿಕೆ ಸುಲಿಯುವ ಯಂತ್ರಗಳಿಗೆ ರಿಯಾಯಿತಿ ದರದ ವಿದ್ಯುತ್ ಒದಗಿಸಬೇಕು. ಇಲ್ಲವೆ ತಾತ್ಕಾಲಿಕ ಕಮರ್ಷಿಯಲ್ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು.

ಆದರೆ ಮೆಸ್ಕಾಂ ಖಾಯಂ ಕಮರ್ಷಿಯಲ್ಲ ಸಂಪರ್ಕ ಪಡೆಯುವಂತೆ ರೈತರಿಗೆ ಒತ್ತಡ ಹೇರುತ್ತಿದೆ. ಕೇವಲ ಒಂದೆರಡು ತಿಂಗಳು ಮಾತ್ರ ಉಪಯೋಗಿಸುವ ಅಡಿಕೆ ಸುಲಿಯುವ ಯಂತ್ರಕ್ಕೆ ವರ್ಷಪೂರ್ತಿ ವಿದ್ಯುತ್ ಬಿಲ್ ಕಟ್ಟುವ ದುಸ್ಥಿತಿಯಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಸಚಿವರು ಹಾಗೂ ಶಾಸಕರುಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ತೀರ್ಥಹಳ್ಳಿ ತಾಲ್ಲೂಕು ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಮಳಲೇಕೊಪ್ಪ ಒತ್ತಾಯಿಸಿದ್ದ ಪತ್ರಿಕಾ ಹೇಳಿಕೆಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ನಾಯಕರುಗಳಾದ ತೀರ್ಥಹಳ್ಳಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥ ಗೌಡ ಈ ವಿಚಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರ ಗಮನಕ್ಕೆ ವಿಷಯವನ್ನು ತಂದಿದ್ದರು.

ಇದಕ್ಕೆ ಸ್ಪಂದಿಸಿದ ಸಚಿವ ಮಧುಬಂಗಾರಪ್ಪನವರು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೆ ಅಧಿಕೃತವಾಗಿ ಪತ್ರ ಬರೆದು ರೈತಗರ ಸಮಸ್ಯೆಯನ್ನು ತಿಳಿಸಿದ್ದು ಪ್ರತ್ಯೇಕ ಮೀಟರ್ ಅಳವಡಿಸುವ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ತಿಳಿಸಿದ್ದಾರೆ. ಎಲ್ಲಾ ನಾಯಕರಿಗೂ ಅಭಿನಂದನೆಗಳು

Categories
ಕರಾವಳಿ ಕಾರ್ಕಳ

ಕ್ರಿಯೇಟಿವ್‌ ಕಾಲೇಜಲ್ಲಿ ವಾರ್ಷಿಕೋತ್ಸವದ ರಂಗು!

ಕ್ರಿಯೇಟಿವ್‌ ಕಾಲೇಜಲ್ಲಿ ವಾರ್ಷಿಕೋತ್ಸವದ ರಂಗು!
– ವಿದ್ಯಾರ್ಥಿಗಳ ಸಾಧನೆಗೆ ವೇದಿಕೆಯಾದ ಕಾರ್ಯಕ್ರಮ
– ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಝಲಕ್

NAMMUR EXPRESS NEWS
ಕಾರ್ಕಳ: ವಸುದೈವ ಕುಟುಂಬಕಂ ಪರಿಕಲ್ಪನೆಯ ಮೂಲಕ ಎಲ್ಲ ಭಾಷೆಗಳನ್ನು ಗೌರವಿಸುವ ಮತ್ತು ಪರಿಚಯಿಸುವ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಕಳ ಹಿರ್ಗಾನದ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಗೀತಾಂಜಲಿ ಸಭಾಭವನದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ವಾಗ್ಮಿ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಜೀವನದ ಎಲ್ಲ ಹಂತಗಳಲ್ಲಿ ಹೋರಾಟ ಇರುತ್ತದೆ. ಕಠಿಣ ಪರಿಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ, ಬಂದ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿ. ಆಗ ಯಶಸ್ಸು ಹಿಂಬಾಲಿಸಿ ಬರುತ್ತದೆ. ಸಾಧಕರ ಸಾಧನೆಗಳು ಕೇಳಲು ರೋಮಾಂಚನ ಉಂಟುಮಾಡುತ್ತದೆ. ಆದರೆ ಅದರ ಹಿಂದೆ ಬಹುದೊಡ್ಡ ತ್ಯಾಗವಿರುತ್ತದೆ. ಅದು ಕ್ರಿಯೇಟಿವ್ ವಿದ್ಯಾರ್ಥಿಗಳಿಂದ ಸಾಧ್ಯವಾಗಲಿ ಎಂದು ಹಾರೈಸಿದರು.

ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಸಾಧಕ ಪುರಸ್ಕಾರ” ನೆರವೇರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನಲ್ಲಿ ವಾಸಂಗ ಮಾಡಿ ರಾಜ್ಯದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರಾದ ವಿದ್ವಾನ್‌ ಗಣಪತಿ ಭಟ್ ಸಂಸ್ಥೆಯ ಸಾಧನೆಗಳನ್ನು ತಿಳಿಸುವ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಡಾ. ಗಣನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಯೇಟಿವ್ ಕಾಲೇಜು ಪ್ರಾರಂಭವಾದ ಮೂರೇ ವರ್ಷದ ಅವಧಿಯಲ್ಲಿ ಅನೇಕ ಹೊಸ ಸಾಧನೆಗಳನ್ನು ಮಾಡಿದೆ.

ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನವಚೇತನ ನೀಡುವ ಕಾರ್ಯ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಅವರು ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕಲೆ, ಸಂಸ್ಕೃತಿಯ ಮೂಲಕ ಶ್ರೀಮಂತ ಮೌಲ್ಯಗಳನ್ನು ತಿಳಿಸಲಾಗುತ್ತದೆ ಎಂದು ನುಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ. ಕೆ, ಅಶ್ವತ್ ಎಸ್. ಎಲ್, ಹೆಚ್.ಕೆ.ಎಸ್ ನ ಪ್ರಾಂಶುಪಾಲರಾದ ವಿಮಲ್ ರಾಜ್. ಜಿ, ಗಣಪತಿ ಕೆ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ ಕಾರ್ಯಕ್ರಮ ನಿರೂಪಿಸಿದರು. “ಸಾಧಕರ ಸನ್ಮಾನ” ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಕಾರ್ಯಕ್ರಮ ವಿನಾಯಕ ವಂದನಾರ್ಪಣೆಗೈದರು.