Categories
ಬೆಂಗಳೂರು

ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಬೇಕಾಗಿದ್ದಾರೆ!

ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಬೇಕಾಗಿದ್ದಾರೆ!
– ರಿಷಬ್ ಶೆಟ್ಟಿಯ ಕಾಂತಾರದಲ್ಲಿ ನಟಿಸಬೇಕೇ?
– ಆಡಿಷನ್ ಕರೆದ ರಿಷಬ್ ಕಾಂತಾರ ಚಿತ್ರತಂಡ: ಇಲ್ಲಿದೆ ಅವಕಾಶ

NAMMUR EXPRESS NEWS
ಬೆಂಗಳೂರು: ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್ ಸಿನಿಮಾದ ಮುಹೂರ್ತ ಹಾಗೂ ಫಸ್ಟ್ ಲುಕ್ ಇತ್ತೀಚೆಗೆ ರಿಲೀಸ್ ಆಗಿದೆ. ಫಸ್ಟ್ ಲುಕ್ ಗೆ ದೊಡ್ಡಮಟ್ಟದ ರೆಸ್ಪಾನ್ಸ್ ವ್ಯಕ್ತವಾಗಿದೆ. ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ‘ಕಾಂತಾರ’ ಕನ್ನಡದಲ್ಲಿ ಹಿಟ್ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು. ಇದೇ ಉತ್ಸಾಹದಲ್ಲಿ ಚಿತ್ರತಂಡ ಸಿನಿಮಾದ ಪ್ರೀಕ್ವೆಲ್ ಅಂದರೆ ಮೊದಲ ಭಾಗವನ್ನು ತರುವುದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಅದರಂತೆ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನ.27 ರಂದು ನೆರವೇರಿತ್ತು. ಇದರೊಂದಿಗೆ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್‌ ಆಗಿತ್ತು.

“ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ” ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಅದರಂತೆ ‘ಕಾಂತಾರ ಚಾಪ್ಟರ್ -1ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ. ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್ ಶೆಟ್ಟಿ ಪೋಸ್ಟ್ ನಲ್ಲಿ ಹೇಳಿದ್ದಾರೆ.

ನೋಂದಣಿಗಾಗಿ Kantara.film ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಡಿ.14 ರವರೆಗೆ ಲಿಂಕ್ ಚಾಲ್ತಿಯಲ್ಲಿರುತ್ತದೆ. ‘ಕಾಂತಾರ’ ಪ್ರೀಕ್ವೆಲ್ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301- 400 ಕಾಲದ ಕಥೆ ಇರಲಿದೆ ಎನ್ನಲಾಗಿದೆ. ಕಾಂತಾರ ಚಾಪ್ಟರ್ 1ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪೊಲೀಸರ ಜಾಗೃತಿ!

ತೀರ್ಥಹಳ್ಳಿಯಲ್ಲಿ ಪೊಲೀಸರ ಜಾಗೃತಿ!
– ಬಸ್, ಆಟೋ ನಿಲ್ದಾಣದಲ್ಲಿ ನಿಯಮ ಪಾಲನೆಗೆ ಆದೇಶ
– ಚಾಲನೆ ಮಾಡುವ ವೇಳೆ ನಿಯಮ ಮೀರಿದ್ರೆ ದಂಡ!

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ವಿಭಾಗ ತೀರ್ಥಹಳ್ಳಿ ವತಿಯಿಂದ ಅಪರಾಧ ತಡೆ ಮಾಸಾಚಾರಣೆ ನಡೆದಿದ್ದು, ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ರಿಂದ ಜಾಗೃತಿ ಮೂಡಿಸಲಾಯಿತು. ಬಸ್ ಡ್ರೈವರ್, ಕಂಡಕ್ಟರ್, ಮತ್ತು ಆಟೋ ಚಾಲಕರಿಗೆ ವಾಹನಗಳನ್ನು ಡ್ರೈವ್ ಮಾಡುವಾಗ ಯಾವ ಯಾವ ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ ಸಮವಸ್ತ್ರ ಕಡ್ಡಾಯ, ಎರಡನೆಯದಾಗಿ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಮೂರನೆದಾಗಿ ವಾಹನದಲ್ಲಿ ಕರ್ಕಶವಾದ ಹಾರನ್ ಗಳ ಜೋಡಣೆ, ಮುಖ್ಯವಾಗಿ ವಾಹನ ಚಲಾವಣೆಯ ಪರವಾನಿಗೆ, ವಾಹನದ ದಾಖಲಾತಿ, ಜೆರಾಕ್ಸ್ ಪ್ರತಿ, ಮತ್ತು ಓವರ್ ಸ್ಪೀಡ್ ಹಾಗೂ ಒನ್ ವೇ ಅಲ್ಲಿ ನುಗ್ಗಬಾರದು ಮತ್ತು ಬಸ್ ಹಾಗೂ ಶಾಲಾ ವಾಹನಗಳ ಪುಟ್ಟ ಬೋರ್ಡ್ ಮೇಲೆ ಮಕ್ಕಳು ನಿಂತು ಪ್ರಯಾಣ ಮಾಡಲು ಬಿಡಬಾರದು.

ಇಂಥದ್ದೇನಾದರೂ ಕಂಡು ಬಂದಲ್ಲಿ ದಂಡ ವಿಧಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ತಾವೆಲ್ಲರೂ ಸೇರಿ ಪೊಲೀಸರಿಗೆ ಸಹಕಾರ ಕೊಡಿ. ನಾವೆಲ್ಲ ಸೇರಿ ಸೇಫ್ ತೀರ್ಥಹಳ್ಳಿ ಮಾಡೋಣ ಜನರಿಗೆ ಸುರಕ್ಷಿತವಾದ ಸಂಚಾರವನ್ನು ಕಲ್ಪಿಸೋಣ ಎಂದರು. ಡಿವೈಎಸ್ಪಿ ಗಜಾನನ ವಾಮನ ಸುತಾರಾ, ತೀರ್ಥಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಮತ್ತು ಬಸ್,ಚಾಲಕರು ಆಟೋ ಚಾಲಕರು,ಸಾರ್ವಜನಿಕರು ಇದ್ದರು.

Categories
ಕಾರ್ಯಕ್ರಮಗಳು

ರಾತ್ರಿ ಯಕ್ಷಗಾನ: ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

ರಾತ್ರಿ ಯಕ್ಷಗಾನ: ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್
– ಕಾಲಮಿತಿಯಲ್ಲಿ ಪ್ರದರ್ಶನ ಮುಂದುವರಿಕೆ
– ಕರಾವಳಿ, ಮಲೆನಾಡ ಕಲೆಗೆ ಗೆಲುವು

NAMMUR EXPRESS NEWS
ಕರಾವಳಿ, ಮಲೆನಾಡು ಭಾಗದ ಐತಿಹಾಸಿಕ ಕಲೆಗಳಲ್ಲಿ ಒಂದಾದ ಯಕ್ಷಗಾನ ಮೇಳಗಳು ರಾತ್ರಿಯಿಡೀ ಪ್ರದರ್ಶನ ನೀಡುವುದಕ್ಕೆ ಇದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್‌ ತೆರವುಗೊಳಿಸಿರುವುದು ಯಕ್ಷಗಾನ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಕಟೀಲು ದೇಗುಲದ ಯಕ್ಷಗಾನ ಮೇಳಗಳ ಪ್ರದರ್ಶನವು ಮುಂದೆಯೂ ಕಾಲಮಿತಿಯಲ್ಲೇ ಮುಂದುವರಿಯಲಿದೆ ಎನ್ನಲಾಗಿದೆ. ಏನಿದು ಕೇಸ್!?: 2022ರ ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಯಕ್ಷಗಾನ ಮೇಳಗಳಿಗೆ ಸಮಯ ನಿರ್ಬಂಧವನ್ನು ವಿಧಿಸಿ, ಸಂಜೆ 5 ರಿಂದ 12.30 ರವರೆಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು. ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಗಳು ‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, 2000’ ರ ಅಡಿಯಲ್ಲಿ ಅನುಮತಿಸಿರುವ ಡೆಸಿಬಲ್ ಮಟ್ಟವನ್ನು ಮೀರುತ್ತದೆ ಎಂಬ ಆತಂಕಗಳು ಇದ್ದ ಕಾರಣ, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಆಧಾರದ ಮೇಲೆ ನಿರ್ಬಂಧ ಹೇರಲಾಗಿತ್ತು.

ರಾತ್ರಿಯಿಂದ ಬೆಳಗಿನ ಜಾವದವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಇರುವ ನಿರ್ಬಂಧ ಪ್ರಶ್ನಿಸಿ ಬೆಂಗಳೂರಿನ ಭಕ್ತ ಹಾಗೂ ದೇವಸ್ಥಾನದ ಭಕ್ತರಾದ ಕೃಷ್ಣ ಕುಮಾ‌ರ್ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ನಿರ್ಬಂಧ ತೆರವುಗೊಳಿಸಿ ಇತ್ತೀಚೆಗೆ ಆದೇಶ ನೀಡಿತ್ತು. ಯಕ್ಷಗಾನವನ್ನು ಹಿಂದಿನಿಂದಲೂ ರಾತ್ರಿಯಿಂದ ಮುಂಜಾನೆಯವರೆಗೆ ಪ್ರದರ್ಶಿಸುತ್ತಾ ಬರಲಾಗಿದೆ. ಕೋವಿಡ್ ನಿರ್ಬಂಧಗಳ ಸಂದರ್ಭದಲ್ಲಿ ಇತ್ತೀಚಿನ ನಿರ್ಬಂಧಗಳು ಹೇರಿಕೆಯಾದವು ಎಂದು ಕೃಷ್ಣ ಕುಮಾ‌ರ್ ಅವರು ಅರ್ಜಿಯಲ್ಲಿ ವಾದ ಮಂಡಿಸಿದ್ದರು. ಶತಮಾನಗಳಷ್ಟು ಹಳೆಯದಾದ ಆಚರಣೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಅವರು ಒತ್ತಿಹೇಳಿದ್ದರು.

Categories
ಉದ್ಯೋಗ ಸುದ್ದಿ

ಕೆ.ಇ.ಬಿಯಲ್ಲಿ ಉದ್ಯೋಗ ಅವಕಾಶ

ಕೆ.ಇ.ಬಿಯಲ್ಲಿ ಉದ್ಯೋಗ ಅವಕಾಶ
– ಬೆಸ್ಕಾಂನಲ್ಲಿ 400 ಹುದ್ದೆಗಳ ನೇಮಕಾತಿಗೆ ಅರ್ಜಿ
– ಏನಿದು ಕೆಲಸ..? ಯಾರು ಅರ್ಜಿ ಹಾಕಬಹುದು?

NAMMUR EXPRESS NEWS
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 400 ಪದವೀಧರ ಮತ್ತು ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಬೆಸ್ಕಾಂ ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್‌ ನೇಮಕಾತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ portal.mhrdnats.gov.in ಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಡಿಸೆಂಬರ್ 31 ರವರೆಗೆ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್ ಲಿಸ್ಟ್ ಮಾಡಿದ ಅರ್ಜಿದಾರರ ಹೆಸರನ್ನು ಜನವರಿ 8, 2024 ರಂದು ಘೋಷಿಸಲಾಗುವುದು. ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಬೆಸ್ಕಾಂ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, 1ನೇ ಮಹಡಿ, ಕ್ರೆಸೆಂಟ್ ಟವ‌ರ್, ಕ್ರೆಸೆಂಟ್ ರಸ್ತೆ, ಮಲ್ಲಿಗೆ ನರ್ಸಿಂಗ್ ಹೋಂ ಬಳಿ, ರೇಸ್ ಕೋರ್ಸ್, ಬೆಂಗಳೂರು-560001 ವಿಳಾಸದಲ್ಲಿ ನಡೆಸಲಾಗುತ್ತದೆ. ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಜನವರಿ 22 ರಿಂದ 24, 2024 ರ ನಡುವೆ ಕೆಲಸದ ದಿನಗಳಲ್ಲಿ ಮಾಡಲಾಗುತ್ತದೆ.

ಗ್ರಾಜುಯೇಟ್ ಅಪ್ರೆಂಟಿಸ್‌ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಎಐಸಿಟಿಇ ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬ್ಯಾಚುಲ‌ರ್ ಆಫ್ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ (ಬಿಇ / ಬಿಟೆಕ್) ಪಡೆದಿರಬೇಕು. ಟೆಕ್ನಿಷಿಯನ್ (ಡಿಪ್ಲೊಮಾ) ನೇಮಕಾತಿಗೆ ಅರ್ಜಿ ಸಲ್ಲಿಸುವವರು ರಾಜ್ಯ ಅಥವಾ ಕೇಂದ್ರ ಸರ್ಕಾರಗಳಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜು ಅಥವಾ ಸಂಸ್ಥೆಯಿಂದ ಮೂರು ವರ್ಷದ ಡಿಪ್ಲೊಮಾ ಪಡೆದಿರಬೇಕು. ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಓದುವ ಮತ್ತು ಬರೆಯುವ ಜ್ಞಾನವನ್ನು ಹೊಂದಿರಬೇಕು.

ಅರ್ಹತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (143), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (116), ಕಂಪ್ಯೂಟರ್ ಸೈನ್ಸ್ (36), ಮಾಹಿತಿ ವಿಜ್ಞಾನ (20) ಮತ್ತು ಸಿವಿಲ್ (5) ಮತ್ತು ಇನ್ಫೋುಮೆಂಟೇಶನ್ ಟೆಕ್ನಾಲಜಿ (5) ವಿಭಾಗಗಳಲ್ಲಿ ಎಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಟೆಕ್ನಿಷಿಯನ್ (ಡಿಪ್ಲೊಮಾ) ನೇಮಕಾತಿಗೆ ಅರ್ಜಿ ಸಲ್ಲಿಸುವವರು ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (55), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (10) ಮತ್ತು ಕಂಪ್ಯೂಟರ್ ಸೈನ್ಸ್‌ (10) ವಿಭಾಗಗಳಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರಾಜುಯೇಟ್ ಅಪ್ರೆಂಟಿಸ್ ಗೆ 9,008 ರೂ., ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್ ಗೆ 8,000 ರೂ.

Categories
ರಾಜ್ಯ

ಮದುವೆ ಮಂಟಪದಲ್ಲೇ ವಧು ವರರ ಕೋಳಿ ಅಂಕ..!

ಮದುವೆ ಮಂಟಪದಲ್ಲೇ ವಧು ವರರ ಕೋಳಿ ಅಂಕ..!
– ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ನವ ಜೋಡಿಗಳು
– ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಜಾಲ
– ಚೂಡಿದಾರ, ಸೀರೆಯಡಿ ಡ್ರಗ್ಸ್ ಸಾಗಣೆ!

NAMMUR EXPRESS NEWS
ಉಡುಪಿ: ಮದುವೆ ಮಂಟಪದಲ್ಲೇ ವಧು ಹಾಗೂ ವರ ಕೋಳಿ ಅಂಕ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಬ್ರಹ್ಮಾವರದಲ್ಲಿ ನಡೆದ ಈ ಡಿಫರೆಂಟ್ ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಿಥುನ್ ಮತ್ತು ಪೂಜಾ ಈ ಡಿಫರೆಂಟ್ ಮದುವೆಯ ವಧು ವರರು. ಜೆಸಿಬಿಯಲ್ಲಿ ಕುಳಿತು ಮದುವೆ ಹಾಲ್ ಗೆ ಗ್ರಾಂಡ್ ಎಂಟ್ರಿ ಕೊಟ್ಟ ವಧು ವರರು, ಮದುವೆ ಮಂಟಪದಲ್ಲಿ ಪರಸ್ಪರ ಹುಂಜಗಳನ್ನು ಕಾಳಗಕ್ಕೆ ಬಿಡುವ ಮೂಲಕ ಕೋಳಿ ಅಂಕ ಆಡಿದ್ದಾರೆ. ಮಧು ಹಾಗೂ ವರ ಕೋಳಿ ಅಂಕ ಆಡುವ ವಿಡಿಯೋ ಸಖತ್ ವೈರಲ್ ಆಗಿದೆ.

ಚೂಡಿದಾರ, ಸೀರೆಯಡಿ ಡ್ರಗ್ಸ್ ಸಾಗಣೆ!

ಬೆಂಗಳೂರಿನಲ್ಲಿ ನಡೆದ ದಾಳಿಯೊಂದರಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್ ವಶವಾಗಿದೆ.ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ರಾಮಮೂರ್ತಿ ನಗರದ ಮನೆಗೆ ದಾಳಿ ಮಾಡಿ ಆಫ್ರಿಕನ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಆತ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಶೇಖರಣೆ ಮಾಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ದಾಳಿ ಮಾಡಿದಾಗ ಅಲ್ಲಿ 21 ಕೋಟಿ ಬೆಲೆಬಾಳುವ 16 ಕೆಜಿ ಎಂಡಿಎಂಎ ಮತ್ತು 500 ಗ್ರಾಂ ಕೊಕೇನ್ ಪತ್ತೆಯಾಗಿದೆ. ವಶವಾದ ಎಂಡಿಎಂಎ ಮೌಲ್ಯ 16 ಕೋಟಿ ರೂ.! ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ ಯಾರಿಗೆಲ್ಲ ಇದನ್ನು ಸಪ್ಪೆ ಮಾಡುತ್ತಿದ್ದ ಎಂಬುದರ ಮಾಹಿತಿಯನ್ನು ಕೂಡಾ ಸಂಗ್ರಹಿಸುತ್ತಿದ್ದಾರೆ.

ಆರೋಪಿಯು ಸೋಪ್ ಬಾಕ್ಸ್, ಚಾಕ್ಲೀಟ್ ಬಾಕ್ಸ್ ನಲ್ಲಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನುವುದು ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ. ಆತ ವರ್ಷವಿಡೀ ಡ್ರಗ್ಸ್‌ ದಂಧೆ ನಡೆಸುತ್ತಾನೆ. ಸೀರೆ, ಚೂಡಿದಾರ, ಬಟ್ಟೆಗಳಲ್ಲಿ ಡ್ರಗ್ಸ್‌ ತರಿಸಿಕೊಳ್ತಿದ್ದ ಎನ್ನಲಾಗಿದೆ. ದೆಹಲಿ, ಮುಂಬೈ ಹಾಗು ಇತರ ರಾಜ್ಯಗಳಿಂದಲೂ ವಿದೇಶಿ ಪ್ರಜೆಗಳ ಮೂಲಕವೇ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಅದನ್ನು ಬೆಂಗಳೂರಿನ ನಾನಾ ಕಡೆಗಳಿಗೆ ಹಂಚುತ್ತಿದ್ದ. ಆತನಿಗೆ ಬೇಡಿಕೆ ಇಡುವ ಮತ್ತು ಅದನ್ನು ಬೇಕಾದವರಿಗೆ ತಲುಪಿಸುವ ಒಂದು ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

Categories
ರಾಜ್ಯ

ಮನೆಯಲ್ಲಿ ಜಾಸ್ತಿ ದುಡ್ಡು ಇಡಂಗಿಲ್ಲ..!

ಮನೆಯಲ್ಲಿ ಜಾಸ್ತಿ ದುಡ್ಡು ಇಡಂಗಿಲ್ಲ..!
– ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ನಿಯಮ
– ಮನೆಯಲ್ಲಿದ್ದ ಹಣಕ್ಕೆ ದಾಖಲೆ ಇಲ್ದಿದ್ರೆ ಭಾರೀ ದಂಡ

NAMMUR EXPRESS NEWS
ಮನೆಯಲ್ಲಿ ಬೇಕಾಬಿಟ್ಟಿ ಹಣ ಇಟ್ಟುಕೊಳ್ಳುವರಿಗೆ ಶಾಕಿಂಗ್ ಸುದ್ದಿ ಇದು. ಮನೆಯಲ್ಲಿ ಹಣವನ್ನು ನಿರ್ದಿಷ್ಟ ಇಟ್ಟುಕೊಳ್ಳಲು ಯಾವುದೇ ನಿರ್ಬಂಧಗಳಿಲ್ಲ. ಆದರೆ ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇದ್ರೆ ಅಂತಹ ಹಣಕ್ಕೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಅಲ್ಲದೇ ಒಬ್ಬ ವ್ಯಕ್ತಿ ಯಾವುದೇ ಸಾಲ ಅಥವಾ ಠೇವಣಿಯಾಗಿ ರೂ 20,000ಕ್ಕಿಂತ ಅಧಿಕ ಹಣವನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ.  ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳಲು ಯಾವುದೇ ಮಿತಿಯನ್ನು ಸರಕಾರ ಹೇರಿಲ್ಲ. ಆದರೆ ಇಟ್ಟುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಯನ್ನು ನೀಡಬೇಕು. ದಾಖಲೆ ರಹಿತವಾಗಿ ಸಂಗ್ರಹ ಮಾಡುವ ಹಣದ ಮೇಲೆ 137% ರಷ್ಟು ದಂಡವನ್ನು ಪಾವತಿಸ ಬೇಕಾಗುತ್ತದೆ. ಅಷ್ಟೇ ಅಲ್ಲ ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆದರೆ ಪ್ಯಾನ್, ಆಧಾರ್ ದಾಖಲೆ ನೀಡಬೇಕು.

ಆದಾಯ ತೆರಿಗೆ ಕಾಯಿದೆಯ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ನಗದು ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನಿಮಗೆ ಬೇಕಾದಷ್ಟು ಹಣವನ್ನು ಇರಿಸಿಕೊಳ್ಳಬಹುದು. ಆದರೆ ಅದಕ್ಕೆ ಸೂಕ್ತ ದಾಖಲೆಯನ್ನು ಹೊಂದದೇ ಇದ್ದರೆ ಆ ಹಣ ನಿಮಗೆ ದಕ್ಕುವುದಿಲ್ಲ. ಅಷ್ಟೇ ಅಲ್ಲ ನಗದು ಸಂಬಂಧ ಸರಕಾರ ಕೇಳುವ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲ, ದಾಖಲೆ ಇಲ್ಲದೆ ಹಣ ಇಟ್ಟರೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಉದಾಹರಣೆಗೆ, ದಾಖಲೆಯಿಲ್ಲದ 1 ಕೋಟಿ ರೂ.ಗಳಿದ್ದರೆ, ಐಟಿ ಇಲಾಖೆಯು 1.37 ಕೋಟಿ ರೂ.ವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ.

ನಗದು, ಹಣ ವರ್ಗಾವಣೆಗೆ ಹೊಸ ನಿಯಮ ಏನು?

– ಯಾವುದೇ ಸಾಲ ಅಥವಾ ಠೇವಣಿಗಾಗಿ ರೂ 20,000 ಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ.
– ವೈಯಕ್ತಿಕ ಆಸ್ತಿಯ ಮಾರಾಟದಲ್ಲಿಯೂ ಸಹ 20,000 ರೂ.ಗಿಂತ ಹೆಚ್ಚಿನ ನಗದು ವರ್ಗಾವಣೆಗೆ ಅವಕಾಶವಿಲ್ಲ.
– ಒಂದು ವಹಿವಾಟಿನಲ್ಲಿ 50,000 ರೂ.ಗಿಂತ ಹೆಚ್ಚು ಠೇವಣಿ ಅಥವಾ ಹಿಂಪಡೆಯುವ ಸಂದರ್ಭದಲ್ಲಿ, ಪ್ಯಾನ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
– ಯಾವುದೇ ಹಣಕಾಸು ವರ್ಷದಲ್ಲಿ ರೂ 20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ಆದರೆ ಪ್ಯಾನ್ ಮತ್ತು ಆಧಾ‌ರ್ ವಿವರಗಳನ್ನು ಒದಗಿಸಬೇಕು.
– ಆಸ್ತಿ ಮಾರಾಟದಲ್ಲಿ ಪಾವತಿಗೆ 30 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಬಳಸಿದರೆ, ಅದು ತನಿಖೆಯನ್ನು ಎದುರಿಸಬೇಕಾಗುತ್ತದೆ.
– ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಒಂದು ವಹಿವಾಟಿನಲ್ಲಿ ನಿಧಿ ವರ್ಗಾವಣೆಯು ರೂ 1 ಲಕ್ಷವನ್ನು ಮೀರುವಂತಿಲ್ಲ.
– ಕುಟುಂಬ ಸದಸ್ಯರು ದಿನಕ್ಕೆ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವುದನ್ನು ನಿರ್ಬಂಧಿಸಲಾಗಿದೆ.

Categories
ರಾಜ್ಯ

ಪೆಟ್ರೋಲ್‌, ಡೀಸೆಲ್ ದರ ಇಳಿಯುತ್ತಾ..?

ಪೆಟ್ರೋಲ್‌, ಡೀಸೆಲ್ ದರ ಇಳಿಯುತ್ತಾ..?
– ಲೋಕ ಸಭಾ ಚುನಾವಣೆ ಮುನ್ನ ದರ ಇಳಿಕೆ
– ಎಷ್ಟು ಇಳಿಯುತ್ತೆ… ಇಲ್ಲಿದೆ ಮಾಹಿತಿ

NAMMUR EXPRESS NEWS
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ವರ್ಷದಿಂದ ಬದಲಾಗಿಲ್ಲ. ಆದರೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆ. ಇಟಿ ನೌ ವರದಿಯ ಪ್ರಕಾರ, 2024ರ ಲೋಕಸಭಾ ಚುನಾವಣೆಗೂ ಮೊದಲು ಜಾಗತಿಕ ಕಚ್ಚಾ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರ ಚರ್ಚಿಸಲು ಪ್ರಾರಂಭಿಸಿದೆ. 2022ರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಮತ್ತು ಡೀಸೆಲ್‌ಗೆ 35 ರೂ.ನಷ್ಟು ಗರಿಷ್ಠ ನಷ್ಟಕ್ಕೆ ವ್ಯತಿರಿಕ್ತವಾಗಿ, ಓ ಎಂಸಿ ಗಳು ಈಗ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ ₹ 8-10 ಮತ್ತು ಡೀಸೆಲ್‌ನಲ್ಲಿ ₹ 3-4 ಲಾಭ ಗಳಿಸುತ್ತಿವೆ.

ವರದಿಯ ಪ್ರಕಾರ, ಸಚಿವಾಲಯವು ಈಗಾಗಲೇ ಓಎಂಸಿ ಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಬೆಲೆಯ ಸನ್ನಿವೇಶಗಳನ್ನು ಚರ್ಚಿಸಿದೆ. ತೈಲ ಮಾರುಕಟ್ಟೆ ಕಂಪನಿಗಳು ಈಗ ಲಾಭಗಳಿಸುತ್ತಿರುವುದರಿಂದ, ಜನರಿಗೆ ಸ್ವಲ್ಪ ಪರಿಹಾರವನ್ನು ನೀಡಲು ಸರ್ಕಾರವು ಈ ವಿಷಯದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿದೆ. ಪ್ರಸ್ತುತ ಕಚ್ಚಾ ತೈಲ ಬೆಲೆಯ ಸನ್ನಿವೇಶದ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚುನಾವಣೆಗೂ ಮುನ್ನ ಪೆಟ್ರೋಲ್‌, ಡೀಸೆಲ್ ಅಗ್ಗವಾಗುವ ಸಾಧ್ಯತೆ ಇದೆ.

Categories
ತೀರ್ಥಹಳ್ಳಿ

ಲೋಕೇಶ್ ಕರಕುಚ್ಚಿ ಅವರಿಗೆ ದೆಹಲಿಯಲ್ಲಿ ಪ್ರಶಸ್ತಿ!

ಲೋಕೇಶ್ ಕರಕುಚ್ಚಿ ಅವರಿಗೆ ದೆಹಲಿಯಲ್ಲಿ ಪ್ರಶಸ್ತಿ!
-ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸದ್ಭಾವನ ಪುರಸ್ಕಾರ
– ಸಹಕಾರ ಕ್ಷೇತ್ರದ ಸಾಧನೆಗೆ ಒಲಿದ ಪ್ರಶಸ್ತಿ

NAMMUR EXPRESS NEWS
ತೀರ್ಥಹಳ್ಳಿ: ಯುವ ಸಹಕಾರಿ ಲೋಕೇಶ ಕರಕುಚ್ಚಿ ಅವರು ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸದ್ಭಾವನ ಪುರಸ್ಕಾರಕ್ಕೆ ಭಾಜನರಾಗಿದ್ದು ದೆಹಲಿಯಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಹಾಲು ಉತ್ಪಾದಕರ ಸಂಘ ಕಲ್ಲುಕೊಪ್ಪ, ಮಾಜಿ ಅಧ್ಯಕ್ಷರಾಗಿ ಹಣಗೆರೆ ಗ್ರಾಮ ಪಂಚಾಯತಿಯಲ್ಲಿ ಸಲ್ಲಿಸಿದ ಸೇವೆ, ಸಾಮಾಜಿಕ ಕೆಲಸ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು ದೆಹಲಿಯಲ್ಲಿ ಸ್ವೀಕಾರ ಮಾಡಿದ್ದಾರೆ. ರಾಜಕೀಯ ಮತ್ತು ಪರಿಸರ ಸಂರಕ್ಷಣೆ ಮತ್ತು ಸಹಕಾರ ಕ್ಷೇತ್ರದ ಸೇವೆಗೆ ಪ್ರಸ್ತುತ ವರ್ಷದ “ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸದ್ಭಾವನ ಪುರಸ್ಕಾರ – 2023 ಪ್ರಶಸ್ತಿ ಲಭಿಸಿದೆ. ಸಹಕಾರಿ ನಾಯಕ ಮಂಜುನಾಥ ಗೌಡ ಶಿಷ್ಯರಾಗಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಕುಮಾರಸ್ವಾಮಿ ಜಾವಗಲ್, ನಾಗರಾಜ್ ಕುರುವಳ್ಳಿ ಇತರರು ಇದ್ದರು.

Categories
ತೀರ್ಥಹಳ್ಳಿ

ಬಿ.ಗಣಪತಿ ಅವರಿಗೆ ಮಹತ್ವದ ಹುದ್ದೆ!

ಬಿ.ಗಣಪತಿ ಅವರಿಗೆ ಮಹತ್ವದ ಹುದ್ದೆ!
– ಪಟ್ಟಣ ಪಂಚಾಯಿತಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ
– ಪತ್ರಕರ್ತರಾಗಿ, ಕಲಾ ಸೇವಕರಾಗಿ ಈಗ ರಾಜಕೀಯಕ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪತ್ರಕರ್ತ ಗಣಪತಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಮಾಜಿಕ ಕಾಳಜಿಯುಳ್ಳ ಪತ್ರಕರ್ತರೊಬ್ಬರಿಗೆ ಮಹತ್ವದ ಹುದ್ದೆ ಸಿಕ್ಕಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಗಣಪತಿ ಅವರನ್ನು ಆಯ್ಕೆ ಮಾಡಲಾಯಿತು. ತೀರ್ಥಹಳ್ಳಿ ಪತ್ರಿಕಾ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗಣಪತಿ ಅವರು ಮೂಲತಃ ಯಕ್ಷಗಾನ ಕಲಾವಿದರರು. ಸಹ್ಯಾದ್ರಿ ವಾರ್ತೆ ಎಂಬ ಪತ್ರಿಕೆಯ ಸಂಪಾದಕರು ಕೂಡ. ಈಗ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗಣಪತಿ ಅವರನ್ನು ಆಯ್ಕೆ ಮಾಡಲಾಗಿದೆ.

ರತ್ನಾಕರ್ ಶೆಟ್ಟಿ ಅವರ ಅಮೂಲ್ಯ ಸೇವೆ

ರತ್ನಾಕರ್ ಶೆಟ್ಟಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದರು. ತೀರ್ಥಹಳ್ಳಿಯ ಎಲ್ಲಾ ಅಭಿವೃದ್ಧಿ ಕೆಲಸ, ಕಾರ್ಯಕ್ರಮಗಳಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.

Categories
ತೀರ್ಥಹಳ್ಳಿ

ಒಕ್ಕಲಿಗ ಸಂಘಕ್ಕೆ ಬಾಳೆಹಳ್ಳಿ ಪ್ರಭಾಕರ್ ಸಾರಥಿ!

ಒಕ್ಕಲಿಗ ಸಂಘಕ್ಕೆ ಬಾಳೆಹಳ್ಳಿ ಪ್ರಭಾಕರ್ ಸಾರಥಿ!
– ನೂತನ ಪದಾಧಿಕಾರಿಗಳ ಆಯ್ಕೆ
– ಅಧ್ಯಕ್ಷರಾಗಿ ಬಾಳೆಹಳ್ಳಿ ಪ್ರಭಾಕರ್, ಉಪಾಧ್ಯಕ್ಷರಾಗಿ ಬಂಡೆ ವೆಂಕಟೇಶ್
– ಸುಧೀರ್ ಬಿ ವಿ ಪ್ರಧಾನಕಾರ್ಯದರ್ಶಿ, ವೀರೇಂದ್ರ ಖಜಾಂಚಿ, ಆದರ್ಶ ಸಹ ಕಾರ್ಯದರ್ಶಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗ ಸಂಘದಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಬಾಳೆಹಳ್ಳಿ ಪ್ರಭಾಕರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಡೆ ವೆಂಕಟೇಶ್ ಅವರು ಉಪಾಧ್ಯಕ್ಷರಾಗಿ, ಸುಧೀರ್ ಬಿ ವಿಹೆಗ್ಗೋಡು ಅವರು ಪ್ರಧಾನಕಾರ್ಯದರ್ಶಿಯಾಗಿ, ಕೆರೆಕೊಪ್ಪ ಶ್ರೀ ವೀರೇಂದ್ರ ಅವರು ಖಜಾಂಚಿಯಾಗಿ ಮತ್ತು ಆದರ್ಶ ಹೆಚ್.ಎಂ ಹೊಸೂರು ಅವರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.