Categories
ಶಿವಮೊಗ್ಗ

ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ

ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ
– ಬಂಗಾಳಿ ಸಾಹಿತಿಗೆ ಪ್ರಶಸ್ತಿ ಪ್ರದಾನ
– ಕುಪ್ಪಳಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ?

NAMMUR EXPRESS NEWS
ಶಿವಮೊಗ್ಗ : ಡಿ.29ರಂದು ಕುಪ್ಪಳಿಯ ಹೇಮಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನೋತ್ಸವ, ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಬಂಗಾಳಿ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕುಪ್ಪಳಿಯಲ್ಲಿ ಸಭಾ ಕಾರ್ಯಕ್ರಮ ಅಂದು ಬೆಳಗ್ಗೆ 10 ಗಂಟೆಗೆ ಕವಿಶೈಲದಲ್ಲಿ ಕವಿಯ ಮನೆಗೆ ಅತಿಥಿಗಳು ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್.ಶಂಕರ್‌ ಪ್ರಧಾನ ಭಾಷಣ ಮಾಡಲಿದ್ದಾರೆ. ನೆಫ್ರೋ ಯುರೋಲಜಿ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ

ಅಂದು ಸಂಜೆ 7ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗದ ನಮ್ ಟೀಮ್ ತಂಡದವರಿಂದ ವಾಲ್ಮೀಕಿಯ ಭಾಗ್ಯ ನಾಟಕ ಪ್ರದರ್ಶನವಿರಲಿದೆ. ಇದೇ ಸಮಾರಂಭದಲ್ಲಿ ಕುವೆಂಪುರವರ ಮೊದಲ ಪುಸ್ತಕ ಹಾಗೂ ಶೀರ್ಷೇಂಧು ಮುಖ್ಯೋಪಾಧ್ಯಾಯರವರ ಸಾಮೀಪ್ಯ (ಬಂಗಾಳಿ) ಪುಸ್ತಕ ಬಿಡುಗಡೆಯಾಗಲಿದೆ

ರಾಷ್ಟ್ರಮಟ್ಟದ ಕಾರ್ಯಾಗಾರ

ಡಿ.29ರಿಂದ ಜನವರಿ 01ರವರೆಗೆ ರವರೆಗೆ ಕುಪ್ಪಳಿಯಲ್ಲಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕುವೆಂಪು ಅವರ ವಿಚಾರ ಸಾಹಿತ್ಯ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಲಿದೆ. ಡಾ. ಬಿ.ಎಂ. ಪುಟ್ಟಯ್ಯ ಈ ಶಿಬಿರದ ನಿರ್ದೇಶಕರಾಗಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 28-12-2023

– ಮಂಗಳೂರು: ತೈಲ ಟ್ಯಾಂಕರ್ ಅಲ್ಲಿ ಅಸ್ವಸ್ಥ ಗೊಂಡವ್ಯಕ್ತಿ!
– ಮಂಗಳೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
– ಬೆಳ್ತಂಗಡಿ: ಅಕ್ರಮ ಮರಳು ಸಾಗಾಟ , ಲಾರಿ ವಶ
– ಮಂಗಳೂರು: ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿಯ ಬಂಧನ

NAMMUR EXPRESS NEWS
ಮಂಗಳೂರು: ಎನ್ ಎಂ ಪಿ ಟಿ ಬಂದರಿನಿಂದ 9.5 ನಾಟಿಕಲ್ ಮೈಲಿ ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಲೈಬೀರಿಯಾ ಮೂಲದ ತೈಲ ಟ್ಯಾಂಕರ್ ಹಡಗಿನಲ್ಲಿ ಸಿಬ್ಬಂದಿಯೊರ್ವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂಟಿ ಐವರಿ ರೇ ಎಂಬ ಹೆಸರಿನ ಹಡಗಿನಲ್ಲಿದ್ದ ಸಿಬ್ಬಂದಿಯೋರ್ವರು ಮಂಗಳವಾರ ರಾತ್ರಿ ವಾಶ್ ರೂಮಿನಲ್ಲಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಕರ್ನಾಟಕದ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ರಕ್ಷಣೆ ಕೋರಿ ಮಧ್ಯರಾತ್ರಿ ಕರೆ ಬಂದಿತ್ತು.

ಇನ್ನು ತುರ್ತಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ತಡರಾತ್ರಿ ಬೋಟಿನಲ್ಲಿ ವೈದ್ಯರೊಂದಿಗೆ ಹಡಗಿನ ಬಳಿ ತೆರಳಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಬ್ಬಂದಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನು ಮಂಗಳೂರಿನ ಬಂದರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಐವರಿ ರೇ ಹಡಗು 13 ದಿನಗಳ ಹಿಂದೆ ಲೈಬೀರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರಿನ ಬಂದರಿಗೆ ಆಗಮಿಸಿತ್ತು. ಮಂಗಳೂರು ಬಂದರಿನಲ್ಲಿ ಒಳಬರಲು ಸಿಗ್ನಲ್ ಸಿಗದೇ ಇದ್ದ ಕಾರಣ ಸಮುದ್ರ ಮಧ್ಯೆ ಲಂಗರು ಹಾಕಿತ್ತು ಎನ್ನಲಾಗಿದೆ.

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು: ದನಗಳ ಕಳ್ಳ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ ಹಲವು ಪ್ರದೇಶದಿಂದ ಜಾನುವಾರು ಕಳವು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರನ್ನು ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್ ನಿವಾಸಿ ಇಮ್ರಾನ್ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ನಿವಾಸಿ ನಾಸಿರ್ ಯಾನೆ ನಾಚಿ (26) ಎಂದು ಗುರುತಿಸಲಾಗಿದೆ. ಬಂಧಿತರಿಂದ ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, ರಿಡ್ಜ್ ಕಾರು ಹಾಗೂ ಇನ್ನಿತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳು ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್ ಅವರ ಆದೇಶದಂತೆ ಎಸ್‌ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟ ಲಾರಿ ವಶ

ಕಳ್ಳ ಮಾರ್ಗದಲ್ಲಿ ಮರಳು ಸಾಗಾಟ ಮಾಡುತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಡೆದಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಟ್ ಧನರಾಜ್ ಟಿ ಎಂ ನೇತೃತ್ವದ ಪೊಲೀಸರು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಕೆಎ-21- ಬಿ-5262 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಲಾರಿಯನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ದಾಖಲಾತಿ ಇಲ್ಲದೆ ಚಾಲಕ ಹಾಗೂ ಸಹಚರ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಮಂಗಳೂರು: ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿಯ ಬಂಧನ

ಸಂಬಂಧಿಸಿದಂತೆ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಧರ್ಮಸ್ಥಳದ ಪೊಲೀಸರು ಬಂಧಿಸಿದ್ದಾರೆ. ತೊಕ್ಕೊಟ್ಟು ಕಾಪಿಕಾಡು ನಿವಾಸಿ ಸಂತೋಷ ಬಂಧಿತ ಆರೋಪಿ. ಆರೋಪಿ ಸಂತೋಷನನ್ನು ಬಂಧಿಸಿ, ಮಂಗಳೂರು 5ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆರೋಪಿ ಬೆಳ್ತಂಗಡಿಯ ಛಿಬಿದ್ರೆಗೆ ಬಂದಿರುವ ಮಾಹಿತಿ ಆತನನ್ನು ಡಿ.22ರಂದು ಚಿಛಿದ್ರೆ ಬಸ್ ನಿಲ್ದಾಣದ ಹತ್ತಿರ ಬಂಧಿಸಲಾಗಿದೆ.

Categories
ಶಿವಮೊಗ್ಗ

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ: ಅಪಾಯದಿಂದ ಪಾರು

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ: ಅಪಾಯದಿಂದ ಪಾರು
– ತುಮಕೂರು ಬಳಿ ಘಟನೆ: ಕಾರು ನುಜ್ಜುಗುಜ್ಜು
– ಶಿವಮೊಗ್ಗದಲ್ಲಿ ರೌಡಿ ಮೇಲೆ ಶೂಟೌಟ್!
– ಮೂಡಿಗೆರೆ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿ.ಇ.ಓ!
– ಶಿವಮೊಗ್ಗ: ನಾಯಿ ಗಲಾಟೆ : ನಾಯಿಗೆ ಗುಂಡು?!

NAMMUR EXPRESS NEWS
ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಯಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸಚಿವರು ಪಾರಾದ ಘಟನೆ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ ಸಚಿವ ಮಧು ಬಂಗಾರಪ್ಪ ಅವರು ಕಾರಿನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತವಾಗಿದ್ದು, ಲಾರಿ ಕಾರನ್ನು ತೀವ್ರವಾಗಿ ಉಜ್ಜಿಕೊಂಡಿದೆ. ಸ್ವಲ್ಪ ಅಂತರದಲ್ಲಿ ಸಚಿವರು ಅನಾಹುತದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಸಚಿವರು ಸೇರಿದಂತೆ ಮೂವರು ಇದ್ದರು. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಅಪಘಾತದ ಬಳಿಕ ಬೇರೆ ಕಾರಿನಲ್ಲಿ ಸಚಿವ ಮಧು ಬಂಗಾರಪ್ಪ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ರೌಡಿ ಮೇಲೆ ಶೂಟೌಟ್!

ಶಿವಮೊಗ್ಗ: ಫ್ರೀಡಂಪಾರ್ಕ್‌ನಲ್ಲಿ ನಡೆದಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾನ ಕಾಲಿಗೆ ಪೊಲೀಸ್ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ರೌಡಿಶೀಟ‌ರ್ ಮಂಜುನಾಥ ಅಲಿಯಾಸ್ ವಲಂಗಾನ ಎಡ ಕಾಲಿಗೆ ಶಿವಮೊಗ್ಗ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಜಯನಗರ ಪೊಲೀಸ್‌ ಸ್ಟೇಷನ್ ಇನ್‌ಸ್ಪೆಕ್ಟರ್ ಸಿದ್ದೇಗೌಡ ಸೋಮಿನಕೊಪ್ಪದ ಬಳಿಯಲ್ಲಿ ರೌಡಿಶೀಟರ್ ಕಾಲಿಗೆ ಬುಲೆಟ್ ಫೈರ್ ಮಾಡಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಶಶಿ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾ ಆಗಿದ್ದು ನೇಪಾಳಿ ಮಂಜನ ಜೊತೆ ಸೇರಿಕೊಂಡು ಶಶಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪವಿದೆ. ಇದೀಗ ಇವತ್ತು ಬೆಳಗ್ಗಿನ ಜಾವ ಆರೋಪಿ ಮಹಜರ್ ಪ್ರಕ್ರಿಯೆ ವೇಳೆ ವಲಂಗಾನ ಕಾಲಿಗೆ ಗುಂಡು ಬಿದ್ದಿದೆ.ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಸಹ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಇನ್ನೂ ಈ ಬಗ್ಗೆ ಎಸ್‌ಪಿ ಮಿಥುನ್ ಕುಮಾರ್ ರವರು ವಾಟ್ಸಾಪ್ ಮೆಸೇಜ್ ಮೂಲಕ ಮಾಹಿತಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ಮೂರು ದಿನಗಳ ಹಿಂದೆ ನಡೆದ 307 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ಮಂಜ ಅಲಿಯಾಸ್‌ ವಲಂಗ ಮಂಜನನ್ನು ಬಂಧಿಸಲಾಗಿದೆ. ಗುರುವಾರ ಬೆಳಿಗ್ಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ, ಆತ ಪೊಲೀಸ್ ಸಿಬ್ಬಂದಿ ರವಿ ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ.. ಈ ವೇಳೆ ಇನ್ಸ್‌ ಪೆಕ್ಟ‌ರ್ ಸಿದ್ದನಗೌಡ ಅವರು ಕತ್ತಿಯನ್ನು ಎಸೆಯುವಂತೆ ಎಚ್ಚರಿಕೆ ನೀಡಿದರೂ ವಲಂಗಾ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಸಿಬ್ಬಂದಿ ರವಿ ಗಾಯಗೊಂಡಿದ್ದಾರೆ. ಹೀಗಾಗಿ ಆತ್ಮರಕ್ಷಣೆಗಾಗಿ ಮತ್ತು ನಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಇನ್ಸೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ನಂತರ ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೂಡಿಗೆರೆ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿ.ಇ.ಓ!

ಚಿಕ್ಕಮಗಳೂರು: ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ಶಿಫಾರಸ್ಸು ಮಾಡಲು ಮಹಿಳೆ ಬಳಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಡಿ 27 ರಂದು ನಡೆದಿದೆ. ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಅಧಿಕಾರಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಳ್ಳಿಯೊಂದರ ಮಹಿಳೆಯ ಪತಿ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2023ರ ಮೇ 5 ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಹಾಗಾಗಿ, ಶಿಕ್ಷಕರ ಪತ್ನಿ ಅನುಕಂಪದ ಆಧಾರದ ನೌಕರಿಗೆ ಶಿಫಾರಸ್ಸು ಮಾಡುವಂತೆ ಬಿಇಓಗೆ ಮನವಿ ಮಾಡಿದ್ದರು. ಅವರು ದಾಖಲೆ ಕೇಳುವ ನೆಪದಲ್ಲಿ ದಿನದೂಡುತ್ತಿದ್ದರು. ಮಹಿಳೆ ಬಿಇಓ ಕಚೇರಿಯ ಎಸ್.ಡಿ.ಎ. ಬಳಿ ಕೇಳಿದಾಗ 15000 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮಹಿಳೆ ಬಿಇಓ ಬಳಿ ಮನವಿ ಮಾಡಿದಾಗ ಬಿಇಓ ಹೇಮಂತ್ ರಾಜ್ 15000 ದಿಂದ 10 ಸಾವಿರಕ್ಕೆ ಬಂದಿದ್ದರು. 10 ಸಾವಿರ ಹಣ ಪಡೆದುಕೊಳ್ಳುವಾಗ ಬಿಇಓ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗ: ನಾಯಿ ಗಲಾಟೆ : ನಾಯಿಗೆ ಗುಂಡು?!

ಶಿವಮೊಗ್ಗ: ಶಿವಮೊಗ್ಗದ ಅಮೀರ್‌ ಕಾಲೋನಿಯಲ್ಲಿ ಚಂದ್ರಿಕಾ ಎಂಬುವವರು ಕಳೆದ 8 ವರ್ಷದಿಂದ ಹೆಣ್ಣು ನಾಯಿ ಸಾಕಿದ್ದಾರೆ. ಈಚೆಗೆ ಈ ನಾಯಿ ಅದೇ ಬೀದಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಸಾಕು ನಾಯಿಗೆ ಕಚ್ಚಿತ್ತು. ಇದರಿಂದ ಆಕ್ರೋಶಗೊಂಡ ಆತ, ಚಂದ್ರಿಕಾ ಅವರ ಮನೆ ನಾಯಿಗೆ ಕಲ್ಲು ಮತ್ತು ದೊಣ್ಣೆಯಿಂದ ಹೊಡೆಯುತ್ತಿದ್ದರು. ಹತ್ಯೆ ಮಾಡುವುದಾಗಿ ಹೇಳುತ್ತಿದ್ದರು. ಡಿ.24ರಂದು ಮಧ್ಯಾಹ್ನ ಗುಂಡಿನ ಶಬ್ದ ಕೇಳಿಸಿತ್ತು. ಚಂದ್ರಿಕಾ ಅವರು ಮನೆಯಿಂದ ಹೊರ ಬಂದಾಗ ಅವರ ಸಾಕು ನಾಯಿ ಸೊಂಟದ ಭಾಗದಲ್ಲಿ ಗಾಯವಾಗಿದ್ದು ಕಾಣಿಸಿತು. ಆ ವ್ಯಕ್ತಿ ಏರ್‌ ಗನ್‌ ಹಿಡಿದು ಮನೆ ಕಡೆಗೆ ತೆರಳುತ್ತಿದ್ದ ಎಂದು ಆರೋಪಿಸಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಕೆಳಗೆ ಮಲಗಿದ್ದ ನಾಯಿ ಮೇಲೆ ಆ ವ್ಯಕ್ತಿ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Categories
ತೀರ್ಥಹಳ್ಳಿ

ಅದ್ಧೂರಿ ದೀಪೋತ್ಸವಕ್ಕೆ ತೆರೆ..!

ಅದ್ಧೂರಿ ದೀಪೋತ್ಸವಕ್ಕೆ ತೆರೆ..!
– ಶ್ರೀ ಆಂಜನೇಯಕ್ಕೆ ದೀಪೋತ್ಸವ ಭಕ್ತರ ಸಾಲು
– ಶ್ರೀ ಶಿರುಪತಿ ವ್ಯಾಗ್ರ ನರಸಿಂಹ ದೇಗುಲದಲ್ಲಿ ದೀಪೋತ್ಸವ

ತೀರ್ಥಹಳ್ಳಿ : ತೀರ್ಥಹಳ್ಳಿ ರಥಬೀದಿಯ ಹನುಮ ಸನ್ನಿಧಿಯಲ್ಲಿ ಮಹಾ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಇತ್ತೀಚಿಗೆ ನಡೆಯಿತು. ದೇವರ ಪಲ್ಲಕ್ಕಿ ಉತ್ಸವವನ್ನು ಮೆರವಣಿಗೆ ಮಾಡಿ ಬಳಿಕ ದೀಪೋತ್ಸವ ಮಾಡಲಾಯಿತು.

ಶಿರುಪತಿ ವ್ಯಾಗ್ರ ನರಸಿಂಹ ದೇಗುಲದಲ್ಲಿ ದೀಪೋತ್ಸವ

ಪುರಾಣ ಪ್ರಸಿದ್ಧ ಶ್ರೀ ವ್ಯಾಗ್ರ ನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳಾದಂತ ನಾಗ, ಬ್ರಹ್ಮ, ಭೂತ ರಾಯ, ಚೌಡೇಶ್ವರಿ, ಜಟಕೇಶ್ವರ, ಗಣಪತಿ, ಶ್ರೀ ದುರ್ಗಾಪರಮೇಶ್ವರಿ ಮತ್ತು ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ದಿನಾಂಕ 21 ರಂದು ವಿದ್ಯುತ್ ದೀಪಾಲಂಕೃತವಾಗಿ ವಿಜೃಂಬಣೆಯಿಂದ ದೀಪೋತ್ಸವ ಕಾರ್ಯಕ್ರಮವನ್ನು, ಶಿರುಪತಿ ಟೆಂಕಬೈಲು ನಾಗಪ್ಪ ಗೌಡ ಮತ್ತು ಜಯಮ್ಮ, ಮಕ್ಕಳಾದ ಟಿ ಎನ್ ಮಂಜುನಾಥ್ ಮತ್ತು ಟಿ ಎನ್ ರಾಘವೇಂದ್ರ, ಕವಿತಾ ಮಾಲಿನಿ, ಮನಸ್ವಿ ಮತ್ತು ಕುಟುಂಬದವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಪುರುಷೋತ್ತಮ್ ಮತ್ತು ಸಂಗಡಿಗರು, ಶಾಲೆಯ ಶಿಕ್ಷಕರಾದಂತಹ ಶ್ರೀಲತಾ, ಗಾಯಿತ್ರಿ, ಮುಖಂಡರಾದಂತಹ ಗ್ರಾಮದ ನಾಗರಾಜ್ ಶೆಟ್ರು ,ಕುಟುಂಬದವರು, ಶಿರುಪತಿ, ಟೆಂಕಬೈಲು, ಅತ್ತಿಕೊಡುಗೆ, ಕೊಂಡ್ಲುಕೊಪ್ಪ, ಕೊಪ್ಪಲು, ಸಂಕದ ಹೊಳೆ ಗ್ರಾಮಸ್ಥರು, ಗುಜ್ಜಿನಕೊಡುಗೆ ಕಾರ್ಯಕರ್ತರು, ಮುಖಂಡರು ಭಕ್ತಾದಿಗಳು ಉಪಸ್ಥಿತರಿದ್ದರು.

ತಾಲೂಕಿನ ಹೆಮ್ಮೆಯ ಕಲಾವಿದರಾದ ಚೇತನ್ ತಂಡದವರಿಂದ ಭಜನಾ ಕಾರ್ಯಕ್ರಮ ಪ್ರಸಾದ ವಿನಿಯೋಗವೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಅರ್ಚಕರಾದ ಶಶಾಂಕ್ ಹಾಗೂ ಶಶಿ ಭಟ್ಟರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸರಳ, ಕಿತ್ತಿನ್ಗದ್ದೆ, ಗುಂಡ್ಯಾಹಳ್ಳಿ ಪ್ರಮುಖರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿರುತ್ತಾರೆ. ಈ ವರ್ಷದ ಕಾರ್ತಿಕ ದೀಪೋತ್ಸವವನ್ನು ಎಲ್ಲಡೆಯೂ ಅದ್ಧೂರಿಯಾಗಿ ಆಚರಿಸಿಲಾಗಿದ್ದು ಈ ಮೂಲಕ ಈ ವರ್ಷದ ಕಾರ್ತಿಕ ದೀಪೋತ್ಸವ ಸಮಾಪ್ತಿಯಾಗುತ್ತಿದೆ.

Categories
ತೀರ್ಥಹಳ್ಳಿ

ಮಧ್ಯ ರಸ್ತೆಯಲ್ಲಿ ಶಾಲಾ ಬಾಲಕಿಯೊಂದಿಗೆ ಕುಡುಕನ ಅಸಭ್ಯ ವರ್ತನೆ

ಮಧ್ಯ ರಸ್ತೆಯಲ್ಲಿ ಶಾಲಾ ಬಾಲಕಿಯೊಂದಿಗೆ ಕುಡುಕನ ಅಸಭ್ಯ ವರ್ತನೆ
– ಅತಿಯಾದ ಗಾಂಜಾ, ಮದ್ಯ ಸೇವನೆ!
– ಬೀದಿಯಲ್ಲಿ ಇಲ್ಲ ರಕ್ಷಣೆ!

NAMMUR EXPRESS NEWS
ತೀರ್ಥಹಳ್ಳಿ: ಶಾಲಾ ವಿದ್ಯಾರ್ಥಿನಿ ನಿನ್ನೆ ಶಾಲೆ ಮುಗಿಸಿಕೊಂಡು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿಹೋಕನೊಬ್ಬ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸ್ಥಳೀಯರು‌ ಅವನನ್ನು ಪೋಲೀಸರಿಗೆ ಒಪ್ಪಿಸಿದ್ದು ಪೋಲೀಸರು ಇವನನ್ನು ವಿಚಾರಿಸಿದ್ದಾರೆ. ಇತ್ತೀಚೆಗೆ ಅಂಗಡಿ ಮುಂಗಟ್ಟುಗಳ ಮುಂದೆ, ಬೀದಿ ಬದಿಯಲ್ಲಿ ಗುಂಪುಗಳು ಸೇರಿಕೊಂಡು, ಹೋಗಿ ಬರುವವರಿಗೆ ಅಸಭ್ಯ ಮಾತುಗಳನ್ನಾಡುವ ಕೆಟ್ಟ ನಡತೆ‌ ಸಾರ್ವಜನಿಕವಾಗಿ ಅಲ್ಲಲ್ಲಿ ಕಂಡುಬರುತ್ತಿದೆ. ಈ ಹಿಂದೆಯೂ ಹೀಗೇ ಒಬ್ಬ ಅಸ್ವಸ್ಥನ ಬಗ್ಗೆ ನಮ್ಮೂರ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು. ಆತನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತೀಚೆಗೆ ಮದ್ಯವ್ಯಸನಿಗಳು, ಗಾಂಜಾ ಸೇವನೆ ಹೆಚ್ಚಾಗುತ್ತಿದ್ದು ಈ ದುರ್ವರ್ತನೆ ಅತಿಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಈ ತರದ ಘಟನೆಗಳು ಹೆಚ್ಚಾಗಿದ್ದು ಈ ಬಗ್ಗೆ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ವರದಿ ಮಾಡಿದ್ದು ಪೋಲೀಸರು ಗಮನವಹಿಸಿಲ್ಲ. ಈಗ ತಕ್ಷಣವೇ ಈ ಬಗ್ಗೆ ಪೋಲಿಸ್ ಇಲಾಖೆ ಎಚ್ಚರಗೊಳ್ಳಬೇಕು. ಮತ್ತು ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಪೋಲೀಸರು ಈ ತಕ್ಷಣವೇ ಗಮನವಹಿಸಬೇಕಾಗಿ ನಮ್ಮೂರ್ ಎಕ್ಸ್‌ಪ್ರೆಸ್‌ ಕೇಳಿಕೊಳ್ಳುತ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಜೆಸಿಐ ಸಂಸ್ಥೆಗೆ ನೂತನ ಸಾರಥಿಗಳು!

ತೀರ್ಥಹಳ್ಳಿ ಜೆಸಿಐ ಸಂಸ್ಥೆಗೆ ನೂತನ ಸಾರಥಿಗಳು!
– ಹರೀಶ್ ಸರ್ಜಾ ಅವರಿಗೆ ಅಧ್ಯಕ್ಷಗಿರಿ
– ಪದವಿ ಪ್ರಧಾನ ಸಮಾರಂಭದಲ್ಲಿ ಗಣ್ಯರ ಸಮಾಗಮ

NAMMUR EXPRESS NEWS
ತೀರ್ಥಹಳ್ಳಿ: ಜೆಸಿಐ ತೀರ್ಥಹಳ್ಳಿಯ 2024ನೇ ಸಾಲಿನ ಪದವಿ ಪ್ರಧಾನ ಸಮಾರಂಭ ಡಿ.25ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಉಪಾಧ್ಯಕ್ಷರಾದ ಜೆಸಿ ಡಾಕ್ಟರ್ ಅರವಿಂದ್ ಗಣ್ಯರನ್ನು ವೇದಿಕೆಗೆ ಆಹ್ವಾನಿಸುವುದರ ಮೂಲಕ ಕಾರ್ಯಕ್ರಮ ಆರಂಭವಾಗಿ, ಜೆಸಿ ವಾಣಿಯನ್ನು ಜೆಸಿ ಅರ್ಚನಾ ವಾಚಿಸಿದರು. ಜೆಸಿ ಉಪಾಧ್ಯಕ್ಷರಾದ ಜೆಸಿ ನಟೇಶ್‌ ಕಾಮತ್‌ ಗಣ್ಯರನ್ನು ಸ್ವಾಗತಿಸಿದರು. ಅತಿಥಿಗಳ ಪರಿಚಯವನ್ನು ಜೆ ಸಿ ಭಾರತಿ ಕೆಎಸ್ , ಉಪಾಧ್ಯಕ್ಷರಾದ ಜೆಸಿ ವಸುಧ ಶಿವರಾಂ ವಲಯ ಅಧ್ಯಕ್ಷರನ್ನು, ಜೆಸಿ ಸುಮಾ ಉಪೇಂದ್ರ ವಲಯ ಉಪಾಧ್ಯಕ್ಷರನ್ನು ಹಾಗೂ ಜೆಸಿ ವಿನಂತಿ ಪೈ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ಎಚ್‌ಜಿಎಫ್ ಅಭಿಜಿತ್ ಹಿರಿಯರವರು ತಮ್ಮ ಅಧ್ಯಕ್ಷರ ನುಡಿಯಲ್ಲಿ ತಮ್ಮ ಅವಧಿಯಲ್ಲಿ ಮಾಡಿದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕ್ರಮವಾಗಿ ನೂತನ ಅಧ್ಯಕ್ಷರಿಗೆ ಜೆಸಿ ಚನ್ನ ವೀರೇಶ್‌ ಹಾವಣಗಿ ವಲಯ ಅಧ್ಯಕ್ಷರು ಹಾಗೂ ನೂತನ ಸದಸ್ಯರಿಗೆ ಜೆಸಿ ಸುಷ್ಮಾ ಹಿರೇಮರ್ ವಲಯ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ಜೆಸಿಐ ಡಾ.ನಾಗರಾಜ್ ನೂತನ ಸದಸ್ಯರನ್ನು ಪರಿಚಯಿಸಿದರು. ನೂತನ ಅಧ್ಯಕ್ಷರಾದ ಜೆಸಿ ಹರೀಶ್ ಸರ್ಜಾ ಜೆಸಿ ಸಂಸ್ಥೆಯ ಮುಂದಿನ ಕನಸುಗಳ ಬಗ್ಗೆ, ತರಬೇತಿ ಕಾರ್ಯಕ್ರಮಗಳಿಗೆ ಪ್ರಾಶಸ್ತ್ರ ನೀಡುವುದಾಗಿ ತಮ್ಮ ಆಶಯ ವ್ಯಕ್ತಪಡಿಸಿದರು. ವಲಯ ಅಧ್ಯಕ್ಷರಾದ ಜೆಸಿ ಚೆನ್ನವೀರೇಶ್ ಹಾವಣಗಿ ಮಾತನಾಡುತ್ತಾ, ಮುರುಳಿಧ‌ರ್ ರವರು 33 ವರ್ಷಗಳ ಹಿಂದೆ ಒಂದಿಷ್ಟು ಕನಸುಗಳನ್ನು ಕಂಡು ಘಟಕ ಸ್ಥಾಪಿಸಿ ಭದ್ರ ಬುನಾದಿ ಯೊಂದಿಗೆ ಎಲ್ಲಾ ಪೂರ್ವ ಅಧ್ಯಕ್ಷರುಗಳ ಶ್ರಮದಿಂದ ಇದರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರು ಬಗ್ಗೆ, ಜೆಸಿ ಸಂಸ್ಥೆಯ ಆಶೋತ್ತರಗಳನ್ನು ತಿಳಿಸಿದರು. ವಲಯ ಉಪಾಧ್ಯಕ್ಷರಾದ ಜೆಸಿ ಸುಷ್ಮಾ ಹಿರೇಮಠ ಬಾಲ್ಯದಿಂದಲೇ ಜೆಸಿ ಸೇರುವುದರಿಂದ ಮಕ್ಕಳು ಕ್ರಿಯಾಶೀಲರಾಗಿ ಬೆಳೆಯಲು ಜೆಸಿ ಒಂದು ಒಳ್ಳೆಯ ಸಂಸ್ಥೆ ಹಾಗೂ ತರಬೇತಿಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಹಾಗೂ ವಲಯ ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಒಳ್ಳೆಯ ಅವಕಾಶವೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸಿ ಜೈಎಫ್ ಡಿ ಸುದರ್ಶನ್ ಹೆಚ್ ಪಿ ತಾಯಿಮನೆ ರವರು, ತುಂಗೆಯಲ್ಲಿ ಅಪಾರ ಶಕ್ತಿ ಇದೆ ಹಾಗೆ ಮನೆ ಮನೆಯಲ್ಲಿ ಇಲ್ಲಿ ನಾಯಕರಿದ್ದಾರೆ, ನಮ್ಮೊಂದಿಗೆ ಹೊಸ ನಾಯಕರನ್ನು ಸೃಷ್ಟಿಸಿದ್ದ ಹಲವು ಉದಾಹರಣೆಗಳಿವೆ. ಈ ನೆಲದ ಗುಣವೇ ನನಗೆ ಪ್ರಭಾವ ಬೀರಿದೆ, ಹಾಗೆ ನಾನು ಕೂಡ ತೀರ್ಥಹಳ್ಳಿ ಮಣ್ಣಿನಲ್ಲಿ ಬೆಳೆದವನೆಂದು ತೀರ್ಥಹಳ್ಳಿಯ ಕುರಿತು ಹೆಮ್ಮೆಯ ನುಡಿಗಳನ್ನ ಆಡಿದರು. ಜೆಸಿ ಸದಸ್ಯನಾಗುವ ಉಪಯೋಗಗಳ ಕುರಿತು ಮಾತನಾಡುತ್ತಾ ಜೆಸಿ ಸಂಸ್ಥೆಯ ಬಗೆಗಿನ ಒಳನೋಟವನ್ನು ಹಂಚಿಕೊಂಡು ನೂತನ ಕಾರ್ಯಕಾರಿ ಸಮಿತಿಗೆ ಶುಭಾಶಯ ಕೋರಿದರು.

ಮಹಿಳಾ ಜೆಸಿ ವಿಭಾಗದ ಸಂಯೋಜಕರಾದ ಜೇಸಿ ರೇಣುಕಾ ಹೆಗಡೆ ಹಾಗೂ ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷರಾದ ಜೆಜೆಸಿ ಆತ್ರೆಯ ಸರ್ಜಾ ವೇದಿಕೆಯಲ್ಲಿ ಕಾರ್ಯಕಾರಿ ಸಮಿತಿಗೆ ಶುಭಾಶಯ ಕೋರಿದರು. ಮಹಿಳಾ ಜೆಸಿ ವಿಭಾಗದ ಸಂಯೋಜಕರಾದ ಜೇಸಿ ರೇಣುಕಾ ಹೆಗಡೆ ಹಾಗೂ ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷರಾದ ಜೆಜೆಸಿ ಆತ್ರೆಯ ಸರ್ಜಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಹಾಗೂ ಈ ಕಾರ್ಯಕ್ರಮದ ನಿರ್ದೇಶಕರಾಗಿ ಜೆಸಿ ನಟೇಶ್ ಕಾಮತ್ ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯದರ್ಶಿ ಜೆಸಿ ರವಿ ಆಚಾರ್ಯ ವಂದನಾರ್ಪಣೆ ಮಾಡಿದರು. ಪೂರ್ವ ಅಧ್ಯಕ್ಷರಾದ ವಿನುತಾ ಮುರಳಿಧರ್ ರವರು ಅಭಿನಂದಿಸಿದರು. ಜೆಸಿ ಸಂಸ್ಥೆಯ ತೀರ್ಥಹಳ್ಳಿ ಘಟಕದ ಹಲವು ಪೂರ್ವ ಅಧ್ಯಕ್ಷರು ಹಾಗೂ ಇತರೆ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು ಶುಭಕೋರಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಿ.29ಕ್ಕೆ ವಿಶ್ವಮಾನವ ದಿನಾಚರಣೆ.!

ತೀರ್ಥಹಳ್ಳಿಯಲ್ಲಿ ಡಿ.29ಕ್ಕೆ ವಿಶ್ವಮಾನವ ದಿನಾಚರಣೆ.!
– ಖ್ಯಾತ ದೂರದರ್ಶನ ಹಾಸ್ಯ ಕಲಾವಿದರಿಂದ ನಗೆಹಬ್ಬ!
– ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ಕಾರ್ಯಕ್ರಮ
– ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ಯುವ ಮಿತ್ರರು ತೀರ್ಥಹಳ್ಳಿ ಇವರ ಸಹಕಾರದೊಂದಿಗೆ ಡಿ.29 ರ ಶುಕ್ರವಾರ ಸಂಜೆ 6 ಗಂಟೆಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕರ್ನಾಟಕ ಸಂಭ್ರಮ -50 ಮತ್ತು ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಗುವುದು. ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪನವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರ ರವರು ನೆರವೇರಿಸಲಿದ್ದಾರೆ. ಪ. ಪಂ ಅಧ್ಯಕ್ಷರಾದ ಗೀತಾ ರಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು ಚಲನಚಿತ್ರ ಸಾಹಿತಿಗಳಾದ ಕವಿರಾಜ್ ಕನ್ನಡದ ಬಗೆಗೆ ಮಾತನಾಡಲಿದ್ದಾರೆ.

ಸಂಜೆ 4:30ಕ್ಕೆ ಕುಶಾವತಿಯ ನೆಹರು ಪಾರ್ಕ್ ನಿಂದ ಶಾಂತವೇರಿ ಗೋಪಾಲಗೌಡ ರಂಗಮಂದಿರದವರೆಗೆ ಸಾಂಸ್ಕೃತಿಕ ನಡಿಗೆ ಮಾಡಲಾಗುವುದು. ಇನ್ನು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಜೆ 6 ಗಂಟೆಗೆ ಕನ್ನಡದ ಕಂಪು ಹಾಸ್ಯದ ತಂಪು ಎಂಬ ನಗೆ ಹಬ್ಬ ಕಾರ್ಯಕ್ರಮವನ್ನು ಖ್ಯಾತ ದೂರದರ್ಶನ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ, ಗಂಗಾವತಿ ನರಸಿಂಹ ಜೋಶಿ ಹಾಗೂ ಶ್ರೀ ರಾಜೇಶ್ ರವರು ನಡೆಸಿಕೊಡಲಿದ್ದಾರೆ. ನಂತರ ಸ್ಥಳೀಯ ನೃತ್ಯ ಶಾಲೆಯ ತಂಡಗಳಿಂದ ಕರುನಾಡ ನೃತ್ಯ ವೈಭವ ಎಂಬ ನೃತ್ಯ ಪ್ರದರ್ಶನ ಇರುತ್ತದೆ.

ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಜಿಲ್ಲಾಧಿಕಾರಿಗಳಾದ ಡಾ. ಆರ್ ಸೆಲ್ವಮಣಿ, ಜಿಲ್ಲಾ ನಗರಾಭಿವೃದ್ಧಿ ಯೋಜನೆ ನಿರ್ದೇಶಕರಾದ ಮನೋಹರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರೆಹಮದ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ ಗಣಪತಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುರಿಯ ಕೋಸ್ ರವರು ಆಗಮಿಸಲಿದ್ದಾರೆ.

ಕಾರ್ಯಕ್ರಮವು ಪ. ಪಂ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ (ಯತಿರಾಜ್), ರತ್ನಾಕರ್ ಶೆಟ್ಟಿ, ನಮೃತ್, ಸುಶೀಲ ಶೆಟ್ಟಿ, ಶಬನಂ, ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಗಣೇಶ್, ಸಂದೇಶ್ ಜವಳಿ, ಜ್ಯೋತಿ ಮೋಹನ್, ರವೀಶ್ ಬಾಬಿ, ಮಂಜುಳ ನಾಗೇಂದ್ರ ರವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Categories
ಕರಾವಳಿ

ಗುಜುರಿ ಅಂಗಡಿಯೇ ಈಗ ಲೈಬ್ರರಿ!

ಗುಜುರಿ ಅಂಗಡಿಯೇ ಈಗ ಲೈಬ್ರರಿ!
– ಪುಟಾಣಿಗಳನ್ನು ಓದುವತ್ತ ಸೆಳೆಯುತ್ತಿರುವ ಗುಜರಿ ಲೈಬ್ರರಿ!
-ಗುಜರಿ ಅಂಗಡಿಯಲ್ಲಿ ಪುಸ್ತಕಾಲಯ!!

NAMMUR EXPRESS NEWS
ಕುಂದಾಪುರ: ಗುಲ್ವಾಡಿಯ ಗುಜರಿ ಅಂಗಡಿಯೊಂದರಲ್ಲಿ ಪುಟಾಣಿ ಗ್ರಂಥಾಲಯ ತೆರೆದುಕೊಂಡಿದೆ. ಅಂಗಡಿಗೆ ಬರುವವರು ಕುತೂಹಲದಿಂದ ಇದರತ್ತ ಹೊರಳುತ್ತಿರುವ ನೋಟ ಕಂಡುಬಂದಿದೆ. ಜನರನ್ನು ಓದುವ ಕಡೆ ಆಕರ್ಷಿಸಲು ತನ್ನದೇ ರೀತಿಯಲ್ಲಿ ಪ್ರಯತ್ನ ಮಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾದ ನಿರ್ಮಾಪಕರ ವಿನೂತನ ಮತ್ತು ವಿಶಿಷ್ಟ ಪ್ರಯತ್ನವೆ ಈ ಗುಜರಿ ಲೈಬ್ರರಿ . ಗುಜರಿ ಅಂಗಡಿಯಲ್ಲೇ ಪುಟಾಣಿ ಗ್ರಂಥಾಲಯ ಸ್ಥಾಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಯಾಕೂಬ್ ಖಾದರ್ ಗುಲ್ವಾಡಿ. ತನ್ನ ಅಂಗಡಿಯ ಮೂಲೆಯೊಂದರಲ್ಲಿ ಮರದ ಪೆಟ್ಟಿಗೆಯ ಪುಟ್ಟ ಗ್ರಂಥಾಲಯ ಆರಂಭಿಸಿದ್ದಾರೆ. ಅಕ್ಕಪಕ್ಕದಲ್ಲಿ ಹಳೆಯ ಕಾಲದ ಗುಜರಿ ಟಿವಿಗಳನ್ನು ಇರಿಸಿದ್ದಾರೆ. ಹಳೆಯ ಮಾಡೆಲ್ ಟಿವಿಯನ್ನು ಕುತೂಹಲದಿಂದ ನೋಡಬಯಸುವವರ ಕಣ್ಣು ಇದೀಗ ಪುಟ್ಟ ಗ್ರಂಥಾಲದ ಕಡೆಗೆ ಹೊರಳುತ್ತಿದೆ. ಸಂಜೆಯ ವೇಳೆ ಹಿರಿಯರು ಸಹ ಗ್ರಂಥಾಲಯದತ್ತ ಬರುತ್ತಿದ್ದಾರೆ. ಊರಿನ ಪುಟ್ಟ ಮಕ್ಕಳ ಕುತೂಹಲದ ಕಣ್ಣುಗಳು ಗ್ರಂಥಾಲಯದ ಮೇಲೆ ಬಿದ್ದಿದೆ. ಗುಜುರಿ ಅಂಗಡಿಯಾಗಿದ್ದರೂ ಗುಜುರಿಯಲ್ಲಿಯೂ ಹೊಸತನದ ಕನಸು ಕಟ್ಟಿದ್ದಾರೆ.

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಗ್ರಂಥಾಲಯಕ್ಕೆ ಭೇಟಿ ನೀಡಿ ಯಾಕೂಬ್ ಖಾದರ್ ಅವರ ವಿಭಿನ್ನ ಪ್ರಯತ್ನಕ್ಕೆ ಶುಭಕೋರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಓದಿನಿಂದ ದೂರ ಆಗುತ್ತಿದ್ದಾರೆ. ಮೊಬೈಲ್, ಟಿವಿಯ ಕಾರಣಕ್ಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಎಲ್ಲರೂ ಸಾಮಾಜಿಕ ಜಾಲತಾಣ ಎಂಬ ಅಂಗೈ ಅಗಲದ ಪ್ರಪಂಚದ ಮೊಬೈಲ್ ನ್ನೆ ಅರಸಿದ ಪರಿಮಾಣ ಓದುವ ಜನರ ಸಂಖ್ಯೆ ಕಾಲ ಕ್ರಮೇಣ ಕಡಿಮೆ ಆಗುತ್ತಿದೆ. ಇದರಿಂದ ಓದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸುವುದು ಬಹಳ ಮುಖ್ಯ.

ಅಂಥಹ ಓದಿನ ಮಹತ್ವವನ್ನು ಎಲ್ಲೆಡೆ ತರಲು ತನ್ನದೇ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವ ಯಾಕೂಬ್ ಖಾದರ್ ಅವರ ಈ ವಿನೂತನ ಪ್ರಯತ್ನ ರಾಜ್ಯದ ಜನರ ಗಮನ ಸೆಳೆಯುತ್ತಿದೆ. ‘ತಾನು ಜಾಸ್ತಿ ಓದಿದವನಲ್ಲ ಆದರೆ ನನ್ನೆಲ್ಲಾ ಸಾಧನೆಗಳಿಗೆ ಮುಖ್ಯ ಕಾರಣ ಓದು. ಸಿನಿಮಾದ ಸಲುವಾಗಿ ಬೇರೆ ಬೇರೆ ದೇಶ ಪಯಣ ಬೆಳೆಸಿದವನು. ಅಲ್ಲಿ ಪುಟಾಣಿ ಗ್ರಂಥಾಲಯ ಇರುವುದನ್ನು ಕಂಡಿದ್ದೆ. ಇಂತಹುದ್ದೇ ಒಂದು ಪುಟ್ಟ ಗ್ರಂಥಾಲಯ ನನ್ನ ಅಂಗಡಿಯಲ್ಲಿ ತೆರೆಯಬೇಕೆಂದು ಬಯಸಿ ತೆರೆದಿದ್ದೇನೆ’ ಎಂದು ಓದಿನ ಬಗ್ಗೆ ತಮಗಿರುವ ಅಭಿಮಾನವನ್ನು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮಧ್ಯ ರೋಡಿನಲ್ಲಿ ನಿಂತ ಬ್ರಿಝಾ ಕಾರು!

ತೀರ್ಥಹಳ್ಳಿಯಲ್ಲಿ ಮಧ್ಯ ರೋಡಿನಲ್ಲಿ ನಿಂತ ಬ್ರಿಝಾ ಕಾರು!
– ಸಂಪೂರ್ಣ ಟ್ರಾಫಿಕ್ ಜಾಮ್, ಸಾರ್ವಜನಿಕರು ಕೆಂಡಾಮಂಡಲ!
– ಟೊಯಿಂಗ್ ಮೂಲಕ ಪೊಲೀಸ್ ಠಾಣೆಗೆ ರವಾನೆ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದಂತೆಯೇ ವಾಹನಗಳ ದಟ್ಟಣೆಯೂ ಅಧಿಕಗೊಳ್ಳುತ್ತಿರುವುದರಿಂದ ಪಟ್ಟಣದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಸಂಚಾರ ನಿಯಮವನ್ನು ಪಾಲಿಸದೆ ನಿಯಮಕ್ಕೆ ಬೆಲೆ ಇಲ್ಲದಂತೆ ವರ್ತಿಸಿ ಟ್ರಾಫಿಕ್ ಜಾಮ್ ಆಗುವಂತೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿ ಇಲ್ಲದ ಕಾರಣ ವಾಹನ ಸವಾರರು ಪಾರ್ಕಿಂಗ್ ಗೆ ಪರದಾಡುವಂತ ಸ್ಥಿತಿ ತಲುಪಿದೆ. ಹೀಗಿರುವಾಗ ಪಟ್ಟಣದ ಪ್ರಮುಖ ರಸ್ತೆಯಾದ ಗಾಂಧಿ ಚೌಕದ ಸಮೀಪ ರಥಬೀದಿಗೆ ಹೋಗುವ ರಸ್ತೆಯಲ್ಲಿ ಬ್ರಿಝಾ ಕಾರೊಂದನ್ನು ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ಕಾರಿನಲ್ಲಿ ಯಾರೂ ಇಲ್ಲದ ಕಾರಣ ಸ್ವಲ್ಪ ಸಮಯ ಸಂಪೂರ್ಣ ಟ್ರಾಫಿಕ್‌ ಜಾಮ್ ಆಗಿದ್ದು ಇದರಿಂದ ಸಾರ್ವಜನಿಕರು ಕೆಂಡಾ ಮಂಡಲವಾಗಿದ್ದಾರೆ.

ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಟೊಯಿಂಗ್ ಮೂಲಕ ಕಾರನ್ನು ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪಟ್ಟಣದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಈ ರೀತಿ ರಸ್ತೆಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವಂತ ದೃಶ್ಯಗಳು ಕಂಡುಬರುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ನಿತ್ಯ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಂಚೆ ಕಛೇರಿಯಲ್ಲಿ ಆಧಾರ್ ಮೇಳ

– ತೀರ್ಥಹಳ್ಳಿ ಅಂಚೆ ಕಛೇರಿಯಲ್ಲಿ ಆಧಾರ್ ಮೇಳ
– ತೀರ್ಥಹಳ್ಳಿ ಗಾಯಕಿ ಉಷಾ ಅವರಿಗೆ ರಾಷ್ಟ್ರೀಯ ಗಾನ ಕೋಗಿಲೆ ರತ್ನ ಪ್ರಶಸ್ತಿ

NAMMUR EXPRESS NEWS
ತೀರ್ಥಹಳ್ಳಿ: ಇಲ್ಲಿನ ಮುಖ್ಯ ಅಂಚೆ ಕಛೇರಿಯಲ್ಲಿ ಡಿಸೆಂಬರ್ 26 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 9-30 ರಿಂದ ಸಂಜೆ 4-30ರ ವರೆಗೆ ‘ಆಧಾರ್ ಮೇಳ’ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಹೊಸ ಆಧಾರ್ ಕಾರ್ಡ್, ಆಧಾರ್ ತಿದ್ದುಪಡಿ, ಆಧಾರ್ ಅಪ್ ಗ್ರೇಡೆಷನ್ ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಈ ಸದವಕಾಶ ಬಳಸಿಕೊಳ್ಳುವಂತೆ ಅಂಚೆ ಇಲಾಖೆ ಕೋರಿದೆ.

ತೀರ್ಥಹಳ್ಳಿ ಗಾಯಕಿ ಉಷಾ ಅವರಿಗೆ ರಾಷ್ಟ್ರೀಯ ಗಾನ ಕೋಗಿಲೆ ರತ್ನ ಪ್ರಶಸ್ತಿ!

ತೀರ್ಥಹಳ್ಳಿ: ಧಾರವಾಡದ ಕುಂದಗೋಳದ ಪ್ರತಿಷ್ಠಿತ ಚಿರಾಯು ಅಸೋಸಿಯೇಷನ್ (ರಿ) ಕರ್ನಾಟಕ ಸಂಸ್ಥೆ ವತಿಯಿಂದ ಪ್ರತಿ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧನೆಗೈದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಬಿರುದು ನೀಡಿ ಸನ್ಮಾನಿಸಲಾಗುತ್ತದೆ, ಹಾಗೇ ಶಿವಮೊಗ್ಗ ಜಿಲ್ಲೆಯಿಂದ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ತೀರ್ಥಹಳ್ಳಿ ಬಾಳೆಬೈಲ್ ನಿವಾಸಿಗಳು, ಪ್ರಶಸ್ತಿ ಪುರಸ್ಕೃತ ಉತ್ತಮ ಗಾಯಕಿ ಶ್ರೀಮತಿ ಉಷಾ.ಹೆಚ್‌.ಎಸ್‌. ಇವರಿಗೆ ಸಂಸ್ಥೆ ವತಿಯಿಂದ ರಾಷ್ಟ್ರೀಯ ಗಾನಕೋಗಿಲೆ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯು ದಿನಾಂಕ 28.01.2024ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಗಣ್ಯರ ಅಮೃತ ಹಸ್ತದಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಉಷಾ ಅವರು ಸಹ್ಯಾದ್ರಿ ಶಾಲೆಯ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖ್ಯಾತ ಗಾಯಕಿ ಉಷಾ ಅವರಿಗೆ ಹಾರ್ದಿಕ ಅಭಿನಂದನೆಗಳು.