Categories
ತೀರ್ಥಹಳ್ಳಿ

ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ

ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ
– ಡಿ.29ರ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ
– ಅಶ್ವತ್ ಎಸ್ ಎಲ್ ಅವರಿಂದ ಉದ್ಘಾಟನೆ: ಸಾಧಕರಿಗೆ ಸನ್ಮಾನ
– ವಿಟೆಕ್ ಸಂಸ್ಥಾಪಕ ವಿಶ್ವನಾಥ್ ಕುಂಟುವಳ್ಳಿ, ನಟ ನವನ್ ಶ್ರೀನಿವಾಸ್ ಸೇರಿ ಅನೇಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ತು, ಆಗುಂಬೆ ಹೋಬಳಿ ಘಟಕ ಕಮ್ಮರಡಿ, ಲಯನ್ಸ್ ಕ್ಲಬ್ ಆಗುಂಬೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ, ಹಾಗು ಆಗುಎಜುಸ್ಕೋ ಆಗುಂಬೆ ವತಿಯಿಂದ ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್ ಜಿ ವೆಂಕಟೇಶ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಪಾದಕರಾದ ಅಶ್ವಥ್ ಎಸ್ ಎಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನ ಭಾಷಣವನ್ನು ನಿವೃತ್ತ ಪ್ರಾಂಶುಪಾಲರಾದ ಜೆ ಎಲ್ ಪದ್ಮನಾಥ್ (ಕುವೆಂಪುರವರ ಸಾಹಿತ್ಯ ಮತ್ತು ಬರಹಗಳು), ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಕೀಣಗಿ ಪುಟ್ಟಸ್ವಾಮಿ (ಕುವೆಂಪುರವರ ಬದುಕು), ಉಪನ್ಯಾಸಕರಾದ ಪ್ರಕಾಶ್ ಹೆಚ್ ಎ ( ವಿಶ್ವಮಾನವ ಸಂದೇಶ) ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರಾದ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್ ಅವರಿಗೆ ಸನ್ಮಾನಿಸಲಾಗುವುದು. ಹಾಗೂ ಆಗು ಎಜುಸ್ಕೊ ಆಗುಂಬೆ ಕಾರ್ಯದರ್ಶಿ ರವಿಕುಮಾರ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್, ಆಗು ಎಜುಸ್ಕೊ ಕಾರ್ಯಾಧ್ಯಕ್ಷರಾದ ಸುಧೀಂದ್ರ ಮಲ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಹೆಗ್ಡೆ, ಕಡ್ತೂರು ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಗೌರವಾಧ್ಯಕ್ಷರಾದ ಶ್ರೀನಿವಾಸ್ ಗೌಡ್ರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣಮೂರ್ತಿ ಸಂಪಗೋಡು, ಹಳೇಕೆಸಲೂರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹೇಶ್ ಕೆ ಎಸ್, ಎ ಐ ಟಿ ಟೀಮ್ ಅಲ್ಯೂಮಿ ಬೆಂಗಳೂರಿನ ಪುಷ್ಠನಂದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ ರವರು ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಅರೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಸುರೇಂದ್ರ ಹಾಗೂ ಸದಸ್ಯರಾದ ಯಶಸ್ವಿ, ಗಣೇಶ್ ಕೆ ಸಿ ರವರು ಆಗಮಿಸಲಿದ್ದಾರೆ.

ಸಾಧಕರಿಗೆ ಸನ್ಮಾನ

ವಿ ಟೆಕ್ ಇಂಜಿನಿಯರ್ಸ್ ಸಂಸ್ಥಾಪಕರಾದ ವಿಶ್ವನಾಥ್ ಕುಂಟುವಳ್ಳಿ, ಹೊಸೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ವೀರೇಶ್ ಟಿ, ಬೇಕಪ್ಪ ಗೌಡ್ರು ಮುನ್ನಗಾರ್, ಆಗಸರಕೋಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜ್ಯೋತಿ, ಚಲನಚಿತ್ರ ನಿರ್ದೇಶಕರಾದ ನವನ್ ಶ್ರೀನಿವಾಸ್, ಆರಕ್ಷಕರಾದ ಸುನಿಲ್ ಕುಮಾರ್ ಎಸ್ ವಿ, ವಾಗ್ದೇವಿ ಚಾರಿಟೇಬಲ್ ಟ್ರಸ್ಟ್ (ರಿ ) ತೀರ್ಥಹಳ್ಳಿ, ದೇಶಕ್ಕಾಗಿ ನಾವು ತೀರ್ಥಹಳ್ಳಿ, ಘಟಕ ಕೆ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಮೇಗರವಳ್ಳಿ, ಎಸ್ ಎಸ್ ಎಫ್ ಆಂಬುಲೆನ್ಸ್ ತಂಡ ಕಮ್ಮರಡಿ, ಸಮರ್ಪಣ ತಂಡ ರಾಮಕೃಷ್ಣಪುರ, ವಿನೋದ್ ಡಿಸೈನ್ ಮೇಕರ್ಸ್ ಆರ್ಕಿಟೆಕ್ಸ್ ಇಂಟೀರಿಯರ್ಸ್ ಬೆಂಗಳೂರು ಇವರಿಗೆ ವಿಶ್ವಮಾನವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

Categories
ಬೆಂಗಳೂರು ರಾಜ್ಯ ಸಿನಿಮಾ

ರಾಜ್ಯದ್ಯಂತ ಕಾಟೇರ ಸಿನಿಮಾ ಹಬ್ಬ!

ರಾಜ್ಯದ್ಯಂತ ಕಾಟೇರ ಸಿನಿಮಾ ಹಬ್ಬ!
– ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್‌ಗೆ ಧನ್ಯವಾದ
– ಖುಷಿಯಿಂದ ಕಾಟೇರ ವಿಮರ್ಶೆ ತಿಳಿಸಿದ ಫ್ಯಾನ್ಸ್
– ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೋಷ್

NAMMUR EXPRESS NEWS
ರಾಜ್ಯದ್ಯಂತ ಕಾಟೇರ ಸಿನಿಮಾ ಹಬ್ಬ ಶುರುವಾಗಿದೆ. ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್‌ಗೆ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ಡಿ.29ರಂದು ಸಿನಿಮಾ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೋಷ್ ಕಾಣುತ್ತಿದೆ. ಅದ್ಭುತ ಸಿನಿಮಾ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್‌ಗೆ ಧನ್ಯವಾದ ಎಂದಿದ್ದಾರೆ. ದರ್ಶನ್ ನಟನೆಯನ್ನು ಕೆಲವರು ಹಾಡಿ ಹೊಗಳಿದ್ದಾರೆ.

ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಇಂದು (ಡಿಸೆಂಬರ್ 29) ರಿಲೀಸ್ ಆಗಿದೆ. ಡಿಸೆಂಬರ್ 28ರ ಮಧ್ಯರಾತ್ರಿಯಿಂದಲೇ ಶೋಗಳು ಪ್ರದರ್ಶನ ಕಂಡಿವೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪರ್ಫೆಕ್ಟ್ ಗಿಫ್ಟ್ ಸಿಕ್ಕಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾ ನೋಡಿ ಹೊರ ಬಂದ ಬಳಿಕ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಅದ್ಭುತ ಸಿನಿಮಾ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್‌ಗೆ ಧನ್ಯವಾದ’ ಎಂದಿದ್ದಾರೆ. ದರ್ಶನ್ ನಟನೆಯನ್ನು ಕೆಲವರು ಹಾಡಿ ಹೊಗಳಿದ್ದಾರೆ.

Categories
ಬೆಂಗಳೂರು ರಾಜ್ಯ

ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲೆಡೆ ಸಜ್ಜು!

ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲೆಡೆ ಸಜ್ಜು!
– ಬಾರ್‌, ಪಬ್‌ಗಳಿಗೆ ಬಿಗಿ ನಿಯಮ: ಏನೇನು ನಿಯಮ?
– ಸಿಸಿಟಿವಿ ಕಡ್ಡಾಯ: ಬಾರ್, ವೈನ್ ಶಾಪ್ ಗಳಿಗೆ ನೋಟಿಸ್

NAMMUR EXPRESS NEWS
ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಬಾರುಗಳು ಹಾಗೂ ಪಬ್‌ಗಳಿಗೆ ಬಿಗಿಯಾದ ರೂಲ್‌ಗಳನ್ನು ಜಾರಿ ಮಾಡಿದೆ. ಶಾಂತಿ ಸುವ್ಯವಸ್ಥೆ ಭಂಗಕ್ಕೆ ಕಾರಣವಾದರೆ ಇವುಗಳ ಲೈಸೆನ್ಸೇ ರದ್ದಾಗುವ ಚಾನ್ಸ್‌ ಇದೆ. ಪಬ್‌ಗಳ ಬಗ್ಗೆ ನಗರ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಎಲ್ಲಾ ಪಬ್ ಮಾಲೀಕರ ಜೊತೆ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಹೆಚ್ಚುವರಿ ಸಿಸಿಟಿವಿ, ಹೆಚ್ಚುವರಿ ಸಿಬ್ಬಂದಿ ಹಾಕಲಾಗುತ್ತಿದೆ. ಮದ್ಯ ಸೇವನೆ ಹಾಗೂ ಊಟಕ್ಕೆ ಮಾತ್ರ ಅವಕಾಶವಿದೆ. ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶವಿಲ್ಲ. ಅಂಥದು ನಡೆಯುತ್ತಿರುವುದು ಗೊತ್ತಾದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ತಿಳಿಸದೆ ಇದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪಬ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ಜೊತೆಗೆ ಕ್ರಿಮಿನಲ್ ಕೇಸ್ ಬೀಳುತ್ತದೆ.

ಸಿಸಿಟಿವಿ ಕ್ಯಾಮರಾ ಕಡ್ಡಾಯ..!

ಪಬ್‌ನ ಪ್ರತಿ ಮೂಲೆಯಲ್ಲೂ ಸಿಸಿಟಿವಿ ಅಳವಡಿಸಿರಬೇಕು. ಇರುವ ಕ್ಯಾಮರಾಗಳಿಗಿಂತ 50% ಹೆಚ್ಚುವರಿ ಕ್ಯಾಮರಾ ಅಳವಡಿಸಲು, ಈಗಿರುವ ಕ್ಯಾಮರಾಗಳ ಕಂಡಿಷನ್ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಏನಾದರೂ ಘಟನೆ ಆದರೆ ಸಂಪೂರ್ಣ ಸಿಸಿಟಿವಿಯಲ್ಲಿ ಫುಟೇಜ್ ಸಿಗಬೇಕು. ಸಿಸಿಟಿವಿ ವರ್ಕ್ ಆಗಿಲ್ಲ ಎಂದು ನೆಪ ಹೇಳಿದರೆ ಕೇಸ್ ಬೀಳುವುದು ಗ್ಯಾರಂಟಿ. ಪಬ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದು ಜನಜಂಗುಳಿ ಹಾಗೂ ಯುವಕ-ಯುವತಿಯರ ದಂಡು ಹೆಚ್ಚು ಸೇರಿರುತ್ತದೆ. ಈ ವೇಳೆ ಕುಡಿದ ಮತ್ತಿನಲ್ಲಿ ಜಗಳ ಸೃಷ್ಟಿಯಾಗುವ ಸಾಧ್ಯತೆ ಇದೆ. ಕೆಲವರಿಂದ ಯುವತಿಯರಿಗೆ, ಹೆಣ್ಣುಮಕ್ಕಳಿಗೆ ಕಿರುಕುಳ ಸಾಧ್ಯತೆ ಇದೆ. ಈ ವೇಳೆ ರಕ್ಷಣೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಇರಬೇಕು. ಮಹಿಳಾ ಭದ್ರತಾ ಸಿಬ್ಬಂದಿ ನೇಮಕಕ್ಕೂ ಸೂಚನೆ ನೀಡಲಾಗಿದೆ.

ಬಾರ್, ವೈನ್ ಶಾಪ್ ನೋಟಿಸ್

ಎಲ್ಲ ಬಾರ್‌, ವೈನ್‌ ಶಾಪ್‌ಗಳಿಗೂ ಈ ಬಗ್ಗೆ ನೋಟೀಸ್ ಕೊಡಲು ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಸಂಬಂದ ಪಟ್ಟ ಬಾರ್‌ಗಳ ಮುಂದೆ ಅಥವಾ ಅದರ ಸಮಿಪ ಆಗುವ ದೊಂಬಿ, ಗಲಾಟೆ, ಹುಡುಗಿಯರ ಚುಡಾವಣೆ, ಕುಡಿದ ಅಮಲಿನಲ್ಲಿ ಬಾಟಲ್ ಎಸೆತ, ಹಲ್ಲೆ, ದೊಂಬಿ ಎಬ್ಬಿಸಲು ಯತ್ನ ಇತ್ಯಾದಿ ನಡೆದರೆ ಬಾರ್ ಮಾಲೀಕರೆ ಹೊಣೆಯಾಗುತ್ತಾರೆ. ಜೊತೆಗೆ ಗಲಾಟೆಗೆ ಕಾರಣವಾಗಿರುವ ಬಾರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

Categories
ಬೆಂಗಳೂರು

ಕರವೇ ಕಾಯಕರ್ತರ ಬಂಧನಕ್ಕೆ ರಾಜ್ಯಾದ್ಯಂತ ಹೋರಾಟ

ಕರವೇ ಕಾಯಕರ್ತರ ಬಂಧನಕ್ಕೆ ರಾಜ್ಯಾದ್ಯಂತ ಹೋರಾಟ
– ಇಂಗ್ಲಿಷ್ ನಾಮಫಲಕ ವಿರುದ್ಧ ಹೋರಾಟ ಜೋರು
– ಮಾಲ್‌ಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯ

NAMMUR EXPRESS NEWS
ಬೆಂಗಳೂರು: ಮಾಲ್‌ಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಬೃಹತ್ ಜಾಥಾ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಗುರುವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಕರವೇ ಹೋರಾಟಗಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕೂಡ ಅನೇಕ ಕಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಇಂಗ್ಲಿಷ್ ನಾಮಫಲಕ ವಿರುದ್ಧ ಸಮರ ಸಾರಿರುವ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್‌ನಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ಜಾಥಾ ನಡೆಸಿದ್ದರು. ಜಾಥಾ ಮುಂದುವರಿದಂತೆ ತೀವ್ರ ಸ್ವರೂಪ ಪಡೆದುಕೊಂಡು ಪ್ರತಿಭಟನಾಕಾರರು ಆಂಗ್ಲ ನಾಮಫಲಕ ಧ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರವೇ ಮುಖಂಡರನ್ನು ಬಂಧಿಸಿ ಕರೆದೊಯ್ದು, ಪೊಲೀಸ್‌ ವಾಹನ ಚಾಲನಾ ಮತ್ತು ಸಂರಕ್ಷಣಾ ಶಾಲಾ ಒಳಭಾಗದಲ್ಲಿ ಇರಿಸಿದ್ದರು.

ನಾರಾಯಣಗೌಡ ಸೇರಿ 53 ಹೋರಾಟಗಾರರ ವಿರುದ್ಧ ಕಬ್ಬನ್‌ಪಾರ್ಕ್ ಸೇರಿ ವಿವಿಧ ಠಾಣೆಗಳಲ್ಲಿ 10 ಎಫ್‌ಐಆ‌ರ್ ದಾಖಲಾಗಿತ್ತು. ಇವರೆಲ್ಲರನ್ನೂ ಬಂಧಿಸಿದ್ದ ಪೊಲೀಸರು, ಬುಧವಾರ ತಡರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತರನ್ನು ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ. ಇದರಿಂದ ಸಿಟ್ಟಿಗೆದ್ದ ಕರವೇ ಕಾರ್ಯಕರ್ತರು ನಾರಾಯಣಗೌಡ ಸೇರಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಸನ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನಿಗದಿತ ಗಡುವಿನೊಳಗೆ ವಾಣಿಜ್ಯ ಮಳಿಗೆಗಳು, ಮಾಲ್‌ಗಳ ಹಾಗೂ ಅಂಗಡಿ ಮುಂಗಟ್ಟುಗಳು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು. ಹೋರಾಟಗಾರರನ್ನು ಜೈಲಿಂದ ಬಿಡುಗಡೆಗೊಳಿಸಿ ಪ್ರಕರಣ ವಾಪಸ್‌ ಪಡೆಯಬೇಕೆಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಡುಗಡೆಗೆ ಬಿಜೆಪಿ ಆಗ್ರಹ: ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮತ್ವ ಆಗಬೇಕು. ಕನ್ನಡ ನೆಲದಲ್ಲಿ ಕನ್ನಡವೇ ಉಸಿರಾಗಬೇಕು. ಬಂಧಿಸಿದವರನ್ನು ಬಿಡುಗಡೆ ಮಾಡ ಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಪಾಲಿಕೆ ಸದಸ್ಯರ ಕನ್ನಡ ಕಡೆಗಣನೆಗೆ ಆಕ್ರೋಶ: ಇಲ್ಲಿನ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಸದಸ್ಯರು ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ ಗುರುವಾರ ಪಾಲಿಕೆ ಆವರಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೇಯ‌ರ್ ಸೇರಿ ಬಹುತೇಕ ಸದಸ್ಯರು ಕನ್ನಡ ಕಡೆಗಣಿಸಿ ಹಿಂದಿ, ಮರಾಠಿ ಭಾಷೆಯಲ್ಲೇ ರ್ಚಚಿಸಿದ್ದಾರೆ. ಆಡಳಿತ ಭಾಷೆ ಕನ್ನಡವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Categories
ಬೆಂಗಳೂರು ರಾಜ್ಯ ಶಿವಮೊಗ್ಗ

ಟಾಪ್ ನ್ಯೂಸ್ ಕರ್ನಾಟಕ

ವಿದ್ಯಾರ್ಥಿಯ ಜೊತೆ ಶಿಕ್ಷಕಿ ಫೋಟೋ ಶೂಟ್: ಭಾರೀ ಚರ್ಚೆ!
– ರಿಪ್ಪನ್ ಪೇಟೆ ಬಳಿ ಅಪಘಾತ: ಯುವಕ ಸಾವು!
– ಪಂಪಾ ನದಿಯಲ್ಲಿ ಮುಳುಗಿ ಮಾಲಾಧಾರಿಗಳ ಸಾವು!
– ಸಾಗರ: ಅಭಯಾರಣ್ಯಕ್ಕೆ ವಾಪಸ್ಸಾದ ಆನೆಗಳು!
– ಕರೋನಾ ಪಾಸಿಟಿವ್ ರೋಗಿಗಳಿಗೆ 7 ದಿನ ಹೋಮ್ ಐಸೊಲೇಷನ್!
– ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದ ಹುಚ್ಚು ನಾಯಿ!

NAMMUR EXPRESS NEWS
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯ ಜೊತೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಗಳು ಅಸಭ್ಯವಾಗಿದ್ದು ಇದನ್ನು ಗಮನಿಸಿದ ವಿದ್ಯಾರ್ಥಿಯ ಪೋಷಕರು ಶಾಲೆಯ ಬಳಿ ಬಂದು ಆಕ್ರೋಶ ವ್ಯಕ್ತ ಪಡಿಸಿದ್ದು, ಶಾಲೆಗೆ ಬಿಇಒ ಮತ್ತು ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ರಿಪ್ಪನ್ ಪೇಟೆ ಬಳಿ ಅಪಘಾತ: ಯುವಕ ಸಾವು!

ರಿಪ್ಪನ್ ಪೇಟೆ: ಆನಂದಪುರ- ರಿಪ್ಪನ್ ಪೇಟೆ ರಸ್ತೆಯಲ್ಲಿ ರಿಪ್ಪನ್ ಪೇಟೆಯ ವಡಗೆರೆ ಶಾಲೆಯ ಮುಂಭಾಗದಲ್ಲಿ ಆನಂದಪುರದ ಕಡೆಯಿಂದ ಬರುತ್ತಿದ್ದ ಯುವಕನ ಬೈಕಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಯುವಕ ನೆಲಕ್ಕೆ ಬಿದ್ದು, ತಲೆ ರಸ್ತೆಗೆ ಅಪ್ಪಳಿಸಿದ ಕಾರಣ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಮೃತಪಟ್ಟ ಯುವಕನನ್ನು ಆವಿನಹಳ್ಳಿಯ ಗುರುವಂತೆ ಗ್ರಾಮದ ನವೀನ್ ಕುಮಾರ್ ಜಿ ಕೆ. ಎಂದು ಡ್ರೈವಿಂಗ್ ಲೈಸೆನ್ಸ್ ನೋಡಿ ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಹೊರತು ಅಪಘಾತದ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಪೋಲಿಸ್ ತನಿಖೆ ನಡೆಯುತ್ತಿದೆ.

ಪಂಪಾ ನದಿಯಲ್ಲಿ ಮುಳುಗಿ ಮಾಲಾಧಾರಿಗಳ ಸಾವು!

ಚನ್ನೈ:  ಮೂಲದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪನ ದರ್ಶನದ ನಂತರ ಪಂಪಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದು ಕಾಲುಜಾರಿ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ಮೃತರು ಚೆನ್ನೈನ ಅವಿನಾಶ್(21) ಮತ್ತು ಸಂತೋಷ್(19) ಎಂದು ಗುರುತಿಸಲಾಗಿದೆ. ಒಬ್ಬರು ನೀರಿಗಿಳಿದು ಕಾಲುಜಾರಿ ಮುಳುಗುತ್ತಿದ್ದಾಗ ರಕ್ಷಣೆಗೆ ಬಂದ ಇನ್ನೊಬ್ಬರೂ ಮುಳುಗಿ ಮೃತಪಟ್ಟಿರುತ್ತಾರೆ.

ಅಭಯಾರಣ್ಯಕ್ಕೆ ವಾಪಸ್ಸಾದ ಆನೆಗಳು!

ಸಾಗರ: ಸಾಗರದ ಸುತ್ತ ಮುತ್ತಲಿನ ಗಿಳಾಲಗುಂಡಿ, ಕೋಣೆ, ಹೊಸೂರು, ತಪ್ಪೂರು, ಬೈರಾಪುರ ಭಾಗಗಳಲ್ಲಿ ಹೊಲದಲ್ಲಿ ಬೆಳೆ ಹಾಳು ಮಾಡಿ ರೈತರನ್ನು ಕಂಗಾಲು ಮಾಡುತ್ತಿದ್ದ ಆನೆಗಳನ್ನು, ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಿಂದ ಮರಳಿ ಕಾಡಿಗೆ ಸೇರಿಸಿದ್ದಾರೆ. ಸಾಗರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಮಾವುತರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

ಕೊರೋನಾ ಪಾಸಿಟಿವ್ ರೋಗಿಗಳಿಗೆ ಏಳು ದಿನ ಹೋಮ್ ಐಸೊಲೇಷನ್!

ಬೆಂಗಳೂರು: ಇತ್ತೀಚೆಗೆ ಕೊರೋನಾ ಪಾಸಿಟಿವ್ ಸಂಖ್ಯೆ ಮತ್ತೆ ಏರುತ್ತಿದ್ದು ರಾಜ್ಯದಲ್ಲಿ ಜೆಎನ್1 ರೂಪಾಂತರದ ಮೂವತ್ತಾರು ಪ್ರಕರಣಗಳು ಸಕ್ರಿಯವಾಗಿವೆ. ಈ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಪ್ರಸ್ತುತ ಅತಂಕಕಾರಿ ಪರಿಸ್ಥಿತಿ ಇಲ್ಲ. ಸರ್ಕಾರ ಉತ್ತಮ ಸಿದ್ಧತೆಯನ್ನು ಹೊಂದಿದೆ. ಆದರೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೊರೋನಾ ಪಾಸಿಟಿವ್ ಬಂದಲ್ಲಿ ಏಳು ದಿನಗಳ ಹೋಮ್ ಐಸೊಲೇಷನ್ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.

ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದ ಹುಚ್ಚು ನಾಯಿ!

ಶಿವಮೊಗ್ಗ: ಎಲ್ಲಾ ಕಡೆಯು ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಶಿವಮೊಗ್ಗದ ವಿಶಾಲ್ ಮಾರ್ಟ್ ಬಳಿ ಅಡ್ಡಾಡುತಿದ್ದ ನಾಯಿಯೊಂದು ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದೆ. ಕಚ್ಚಿಸಿಕೊಂಡವರೆಲ್ಲ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೇರೆ ನಾಯಿಗಳಿಗೂ ಕಚ್ಚುವ ಮೂಲಕ ಹುಚ್ಚು ಹರಡಿಸುತ್ತಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಜೊತೆಗೆ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹೀಗೆ ಕಚ್ಚುತ್ತಿದ್ದರೆ ಮುಂದೇನು ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು, ಸ್ಥಳೀಯ ಇಲಾಖೆಗಳು ಗಮನ ವಹಿಸುತ್ತಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Categories
ತೀರ್ಥಹಳ್ಳಿ

ನೂರಾರು ಕನಸು ಹೊತ್ತ ಹುಡುಗನ ಬಲಿ ಪಡೆದ ಕೃಷಿ ಹೊಂಡ!

ನೂರಾರು ಕನಸು ಹೊತ್ತ ಹುಡುಗನ ಬಲಿ ಪಡೆದ ಕೃಷಿ ಹೊಂಡ!
– ಅಗಲಿದ ಪೃಥ್ವಿನ್ ಗೆ ಮಲ್ನಾಡ್ ಕ್ಲಬ್ ಶ್ರದ್ಧಾಂಜಲಿ
– ಸಹೋದರಿ, ತಾಯಿಗೆ ಸಹಾಯ ಹಸ್ತ

NAMMUR EXPRESS NEWS
ತೀರ್ಥಹಳ್ಳಿ: ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿದ್ದ ಹುಡುಗನೊಬ್ಬ ಬದುಕಿಗಾಗೇ ಶ್ರಮಿಸುತ್ತಾ ಜೀವಕಳೆದುಕೊಂಡ ಮನ ಕಲಕುವ ಘಟನೆಯೊಂದು ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಸಮೀಪದ ಉಬ್ಬೂರಿನ ಹಾರ್ಕೋಡು ಎಂಬಲ್ಲಿ ಇತ್ತೀಚೆಗೆ ನಡೆದಿದೆ. ಈಗ ಆತನ ಕುಟುಂಬಕ್ಕೆ ಮಲ್ನಾಡ್ ಕ್ಲಬ್ ಸಹಾಯ ಹಸ್ತ ನೀಡಿದೆ. ಮೋಟಾರ್ ನೀರು ಹಾಕಲು ಹೋಗಿ ಆಯ ತಪ್ಪಿ ಕಾಲುಜಾರಿ ಕೆರೆಗೆ ಬಿದ್ದು, 19 ವರ್ಷದ ಬಾಲಕ ಪೃತ್ವಿನ್ ಮೃತಪಟ್ಟಿದ್ದು, ಈತ ದಿ. ಸುಬ್ರಹ್ಮಣ್ಯ ಮತ್ತು ವೀಣಾ ದಂಪತಿಗಳ ಪುತ್ರ. ಇತ್ತೀಚಿಗೆ ಓದು ಮುಗಿಸಿ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಇನ್ನೇನು ಬದುಕು ಚೆನ್ನಾಗಿ ಹೋಗುತ್ತಿರುವ ವೇಳೆ ವಿಧಿ ಆತನ ಬಲಿ ಪಡೆದಿದೆ. ಪೃಥ್ವಿನ್ ಕಳೆದ ಗುರುವಾರ ಜಮೀನಿಗೆ ನೀರು ಬಿಡಲು ಹೋದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತರಾಗಿರುತ್ತಾರೆ.

ಮಲ್ನಾಡ್ ಕ್ಲಬ್ ಶ್ರದ್ಧಾಂಜಲಿ..!

ಅತ್ಯಂತ ಚುರುಕಿನ ಬುದ್ದಿವಂತ ಹುಡುಗ ಪೃಥ್ವಿನ್, ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಎಲ್ಲರೊಂದಿಗೆ ಬೆರೆತು ಚಟುವಟಿಕೆಯಿಂದಿದ್ದ ಹುಡುಗ. ಭವಿಷ್ಯದ ಬಗ್ಗೆ ಬಹಳ ಕನಸು ಕಂಡಿದ್ದ. ನನಸು ಮಾಡಿಕೊಳ್ಳಲು ಹಾಗೆಯೇ ಶ್ರಮಿಸುತ್ತಿದ್ದ ಕೂಡ. ಈ ಹುಡುಗನ ಅಗಲಿಕೆ ಬಹಳ ನೋವನ್ನುಂಟು ಮಾಡಿದ್ದು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಮಲ್ನಾಡ್ ಕ್ಲಬ್ ವತಿಯಿಂದ ಪೃಥ್ವಿನ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾದ ಕಡಿದಾಳ್ ದಯಾನಂದ್, ಅಧ್ಯಕ್ಷರಾದ ಸುಂದರೇಶ್, ಕಾರ್ಯದರ್ಶಿ ರಾಘವೇಂದ್ರ ಎಸ್, ನಿರ್ದೇಶಕರು ಕುಣಜೆ ಕಿರಣ್, ಲಕ್ಷ್ಮಣ್ ಗಂಟೆಹಕ್ಲು, ಕ್ಲಬ್ ನ ಸದಸ್ಯರು ಮತ್ತು ಸಿಬ್ಬಂದಿಗಳು, ಪೃಥ್ವಿನ್ ಅವರ ಗ್ರಾಮಸ್ಥರು ಹಾಜರಿದ್ದು, ಪೃಥ್ವಿನ್ ಕುಟುಂಬದ ಸಹಾಯಾರ್ಥ ದೇಣಿಗೆ ನೀಡಲು ಕ್ಲಬ್ ನ ಸದಸ್ಯರು ಮತ್ತು ನಿರ್ದೇಶಕರು ನಿರ್ಧರಿಸಿದ್ದು ಈ ವಾರವೇ ಹಣವನ್ನು ಸಂಗ್ರಹ ಮಾಡಲಾಗಿದೆ. ಈವರೆಗೂ ಸುಮಾರು ಮೂರು ಲಕ್ಷ ಹಣ ಸಂಗ್ರಹಿಸಲಾಗಿದೆ. ಕುಟುಂಬದವರಿಗೆ ನೆರವು ನೀಡುವ ಉದ್ದೇಶದಿಂದ ಜೊತೆಗೆ ಪೃಥ್ವಿನ್ ಅವರ ಸಹೋದರಿಗೆ ಉದ್ಯೋಗ ಕೊಡಿಸುವಲ್ಲಿ ಕ್ಲಬ್ ಸದಸ್ಯರು ಕೆಲಸ ಮಾಡುತ್ತಿದ್ದಾರೆ.

Categories
ಶಿವಮೊಗ್ಗ

ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹೆಚ್.ಎಸ್ ಸುಂದರೇಶ್‌

ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹೆಚ್.ಎಸ್ ಸುಂದರೇಶ್‌
– ಅಭಿನಂದಿಸಿದ ಆರ್ ಎಂಎಂ, ರಾಘವೇಂದ್ರ ಶೆಟ್ಟಿ
– ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಐದು ವರ್ಷ ಪೂರೈಸಿದ ಹೆಚ್ ಎಸ್ ಸುಂದರೇಶ್ ಅವರನ್ನು, ಕಾಂಗ್ರೆಸ್‌ ನಾಯಕರು ಮತ್ತು ಡಿಸಿಸಿ ಬ್ಯಾಂಕಿನ ಜಿಲ್ಲಾ ಅಧ್ಯಕ್ಷರಾದ ಡಾ.ಆರ್.ಎಮ್ ಮಂಜುನಾಥ್ ಗೌಡ ಮತ್ತು ಕಾಂಗ್ರೆಸ್ ಪಕ್ಷದ ಜನಪ್ರಿಯ ಯುವ ನಾಯಕ ರಾಘವೇಂದ್ರ ಶೆಟ್ಟಿ ( ಕಂಡಿಲ್ ರಾಘು ), ಗುರುವಾರ ಶಿವಮೊಗ್ಗ ನಗರದಲ್ಲಿರುವ ಕಾಂಗ್ರೆಸ್‌ ಭವನಕ್ಕೆ ತೆರಳಿ, ಅಧ್ಯಕ್ಷರಾಗಿ ಐದು ವರ್ಷ ಯಶಸ್ವಿಯಾಗಿ ಪೂರೈಸಿದ ಹೆಚ್ ಎಸ್ ಸುಂದರೇಶ್‌ ಅವರನ್ನು ಅಭಿನಂದಿಸಿ, ಶಾಲು ಹೊದಿಸಿ ಗೌರವಿಸಿ ಅಭಿನಂದಿಸಿದರು. ಈಗ ಮತ್ತು ಮಂದೆಯು ನಿಮ್ಮ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸದೃಢವಾಗಿ ಬೆಳೆಯಲಿ. ಬರಲಿರುವ ಸಂಸತ್ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ವಿಜಯ ಸಾಧಿಸಲಿ ಎಂದು ಹಾರೈಸಿದರು.

ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೆಚ್ ಎಸ್ ಸುಂದರೇಶ್ ಅವರು ಕಳೆದ ಐದು ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಸದೃಢ ಮಾಡಿಕೊಂಡು ಬಂದಿರುತ್ತಾರೆ. ಕಾರ್ಯಕರ್ತರು ಮತ್ತು ಪಕ್ಷದ ಹಿರಿಯರೊಂದಿಗೆ ಇವರ ಒಡನಾಟ ಉತ್ತಮವಾಗಿದ್ದು ಶಿವಮೊಗ್ಗದ ಹಲವು ಕಡೆ ಪಕ್ಷ ಬಲವರ್ಧನೆಯಾಗಿ ಮರಳಿ ತನ್ನ ಸ್ಥಾನ ಪಡೆಯಲು ಸಹಾಯಕವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಅಭಿನಂದಿಸಿ ಮುಂದೆಯೂ ಅವರ ಸಹಕಾರ ಕೋರಿದ್ದಾರೆ.

Categories
ತೀರ್ಥಹಳ್ಳಿ

ಕೋಣಂದೂರು ಸುರೇಶ್ ಅವರಿಗೆ ಜಿಲ್ಲಾ ಮಟ್ಟದ ” ಶ್ರೇಷ್ಠ ಕೃಷಿ ಪ್ರಶಸ್ತಿ”

ಕೋಣಂದೂರು ಸುರೇಶ್ ಅವರಿಗೆ ಜಿಲ್ಲಾ ಮಟ್ಟದ ” ಶ್ರೇಷ್ಠ ಕೃಷಿ ಪ್ರಶಸ್ತಿ”
– ಶಿವಮೊಗ್ಗದಲ್ಲಿ ನಡೆದ ಸಿರಿ ಧಾನ್ಯ ಹಬ್ಬದಲ್ಲಿ ಗೌರವ
– ಗ್ರಾಮಸ್ಥರ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ : ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಡಿ.27ರ ಬುಧವಾರದಂದು 2023-24 ನೇ ಸಾಲಿನ ಸಿರಿಧಾನ್ಯ ಹಬ್ಬದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಕೆರೆಕೋಡಿ ಗ್ರಾಮದ ಸುರೇಶ್ ಕೆ.ಆರ್ ಬಿನ್ ರಂಗಪ್ಪ ಗೌಡ ಅವರು ಪಡೆದಿರುತ್ತಾರೆ. ಇವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಕುಶಾವತಿ ಬಳಿ ಅಪಘಾತ..!

ತೀರ್ಥಹಳ್ಳಿಯ ಕುಶಾವತಿ ಬಳಿ ಅಪಘಾತ..!
– ಕಾರಿಗೆ ಡಿಕ್ಕಿ ಹೊಡೆದ ಬೈಕ್, ಓರ್ವನಿಗೆ ಗಾಯ
– ಎಚ್ಚರಿಕೆಯ ಬೋರ್ಡ್ ಅಳವಡಿಸುವಂತೆ ಆಗ್ರಹ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಕುಶಾವತಿ ಬಳಿ ಬೈಕು ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು ಓರ್ವನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ಪಟ್ಟಣದ ಕುಶಾವತಿ ಸಮೀಪ ಎಳನೀರು ಕುಡಿಯಲು ನಿಲ್ಲಿಸಿದ್ದ ಕಾರಿಗೆ ಹಿಂಬದಿಯಿಂದ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಬೈಕು ಸಂಪೂರ್ಣ ಜಖಂಗೊಂಡಿದೆ. ಘಟನೆಯೆಲ್ಲಿ ಯುವಕನೊಬ್ಬನಿಗೆ ಗಂಭೀರ ಗಾಯವಾಗಿದ್ದು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಕುಶಾವತಿ ಭಾಗದಲ್ಲಿ ಪದೇ ಪದೇ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಇಲ್ಲಿ ಎಚ್ಚರಿಕೆಯ ಬೋರ್ಡ್ ಅಥವಾ ಕೆಲವು ಸೂಚನೆಗಳನ್ನು ಹಾಕಬೇಕಿದೆ. ಈ ಭಾಗಗಳಲ್ಲಿ ಸಂಚರಿಸುವಾಗ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Categories
ಬೆಂಗಳೂರು ರಾಜ್ಯ

ಸಿಎಂ ಸೋಮಾರಿ ಎಂದಿದ್ದಕ್ಕೆ ಪ್ರತಾಪ್ ಸಿಂಹ ಮೇಲೆ ಕೇಸ್!

ಸಿಎಂ ಸೋಮಾರಿ ಎಂದಿದ್ದಕ್ಕೆ ಪ್ರತಾಪ್ ಸಿಂಹ ಮೇಲೆ ಕೇಸ್!
– ಸೋಮಾರಿ ಸಿದ್ಧ ಎಂಬ ಪದ ಬಳಕೆಗೆ ಸಂಸದರ ಮೇಲೆ ಎಫ್ ಐ ಆರ್!
– ಕಚೇರಿಯ ಮುಂದೆ ಕಾಂಗ್ರೆಸ್ ಪ್ರತಿಭಟನೆ!

NAMMUR EXPRESS NEWS
ಬೆಂಗಳೂರು: ಮೈಸೂರು ಸಂಸದ ಪ್ರತಾಪ್​ ಸಿಂಹ‌ ಅವರ ವಿರುದ್ಧ ಎಫ್ಐಅರ್ ದಾಖಲಾಗಿದೆ. ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗ ಸೋಮಾರಿ ಸಿದ್ದ ಎಂಬ ಪದ ಬಳಕೆ ಮಾಡಿದ ಹಿನ್ನೆಲೆ ಎಫ್‌ಐಆರ್‌ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ನಿನ್ನೆ ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಸಂಸದರ‌ ಕಚೇರಿ ಮುಂದೆ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದು, ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಫ್ಐಆರ್ ದಾಖಲಿಸುವ ಭರವಸೆ ನೀಡಿದ ಬಳಿಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯನ್ನ ವಾಪಸ್ ಪಡೆದಿದ್ದರು. ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಅವರು ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ಗಲಭೆ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಲಿಖಿತ ದೂರು ನೀಡಿದ್ದಾರೆ. ದೇವರಾಜ್ ಪೊಲೀಸ್ ಠಾಣೆಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ 1860 ರ IPC 504 , 153ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.