Categories
ಬೆಂಗಳೂರು ರಾಜ್ಯ

ಗ್ರಾ.ಪಂ ಸದಸ್ಯರಿಗೆ ಕೈಕೊಟ್ಟ ಸರ್ಕಾರ!

ಗ್ರಾ.ಪಂ ಸದಸ್ಯರಿಗೆ ಕೈಕೊಟ್ಟ ಸರ್ಕಾರ!
– ಬರೋಬ್ಬರಿ 7 ತಿಂಗಳಿನಿಂದ ಸಿಗದ ಗೌರವಧನ
– ಕುಟುಂಬ ನಿರ್ವಹಣೆಗೆ ಅನೇಕ ಸದಸ್ಯರ ಪರದಾಟ
ವಿಶೇಷ ವರದಿ: ರಂಜಿತ್ ಕೋಲಾರ

NAMMUR EXPRESS NEWS
ಬೆಂಗಳೂರು: ಬರೋಬ್ಬರಿ 7 ತಿಂಗಳಿಂದ ಗೌರವಧನವಿಲ್ಲದೆ ಗ್ರಾ.ಪಂ ಸದಸ್ಯರಿಗೆ ದಿಕ್ಕು ತೋಚದಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ 7 ತಿಂಗಳಿನಿಂದ ಗೌರವಧನ ವಿಳಂಬವಾಗುತ್ತಿದ್ದು, ಸಕಾಲಕ್ಕೆ ಸಂಬಳ ಸಿಗಬೇಕೆಂಬ ಗ್ರಾ.ಪಂ ಸದಸ್ಯರ ಹಕ್ಕೊತ್ತಾಯಕ್ಕೆ ನೂತನ ಸರಕಾರ ನೀರೆರೆಯಬೇಕಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ಅವರ ಸೇವೆಗಾಗಿ ಗೌರವ ಧನ ನೀಡಲಾಗುತ್ತದೆ. ಅಧ್ಯಕ್ಷರಿಗೆ 6000 ರೂ. ಉಪಾಧ್ಯಕ್ಷರಿಗೆ 4000 ರೂ.ಹಾಗೂ ಸದಸ್ಯರಿಗೆ 2000 ರೂ. ತಿಂಗಳಿಗೆ ನೀಡಲಾಗುತ್ತಿದೆ. ಆದರೆ ಜುಲೈ ಬಳಿಕ ಸಂಬಳ ಬಂದಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ರಾಜ್ಯದ 6020 ಗ್ರಾಮ ಪಂಚಾಯತ್ ಸದಸ್ಯರಿಗೆ ಸಂಬಳ ಇಲ್ಲದೆ ಜನರ ಬಳಿಗೆ ಹೋಗಲು ಕಷ್ಟವಾಗಿದೆ.

ಕುಟುಂಬ ನಿರ್ವಹಣೆ ಕಷ್ಟ:

ಸಕಾಲಕ್ಕೆ ಗೌರವಧನ ಸಿಗದ ಕಾರಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರಾಗಿರುವ ಸದಸ್ಯರಿಗೆ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಜನರ ಕೆಲಸಕ್ಕಾಗಿ ಮನೆ ಮನೆ ಓಡಾಡಬೇಕಿದೆ. ಆದರೆ ಪೆಟ್ರೋಲ್ ಖರ್ಚಿಗೂ ಹಣ ಇಲ್ಲದಾಗಿದೆ. ಸಾವಿರಾರು ಸದಸ್ಯರ ನಾನಾ ಕುಟುಂಬಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಶಾಲೆಗಳಿಗೆ ಹೋಗುವ ಮಕ್ಕಳ ಶುಲ್ಕ, ಸಮವಸ್ತ್ರ ಮೊದಲಾದ ಖರ್ಚುಗಳಿಗೆ ಹಣಭರಿಸುವುದು ಕಷ್ಟವಾಗಿದೆ. ಸರಕಾರಿ ಶಾಲೆಗೆ ಕಳುಹಿಸುತ್ತಿದ್ದರೂ ನೋಟ್ ಪುಸ್ತಕ, ಬ್ಯಾಗ್‌ ಸೇರಿದಂತೆ ಪೂರೈಸಲೇಬೇಕಿರುವ ಮಕ್ಕಳ ಬೇಡಿಕೆ ಈಡೇರಿಕೆ ಕಷ್ಟವಾಗಿದೆ. ಗ್ರಾಮ ಪಂಚಾಯತ್ ಸದಸ್ಯರ ಹಿತವನ್ನು ಸರಕಾರ ಕಾಯಬೇಕು, ಪ್ರತಿ ತಿಂಗಳು ಗೌರವಧನ ಸಿಗಬೇಕು ಎಂದು ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಹೋರಾಟಕ್ಕೂ ಸಿದ್ಧವಾಗಿದ್ದಾರೆ.

ಕೆಲವು ಕಡೆ ಸ್ಥಳೀಯ ಗ್ರಾಮಪಂಚಾಯಿತಿ ನಿಧಿಯಿಂದ ಹಣ

ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ನಿಧಿಯಿಂದ ಸಂಬಳ ಹಾಕಿದ್ದಾರೆ. ಸರ್ಕಾರ ಜಿಲ್ಲಾ ಪಂಚಾಯತ್ ಮೂಲಕ ತಾಲೂಕು ಪಂಚಾಯತ್ ಬಳಿಕ ಗ್ರಾಮ ಪಂಚಾಯತ್ ಅಕೌಂಟಟಿಗೆ ಹಣ ಹಾಕಿ ಸಂಬಳ ಕೊಡಬೇಕಿದೆ.

Categories
ಅಪರಾಧ ತೀರ್ಥಹಳ್ಳಿ ಬೆಂಗಳೂರು ರಾಜ್ಯ

8 ನಿಮಿಷದಲ್ಲೇ ಗಣಿ ಅಧಿಕಾರಿ ಪ್ರತಿಮಾ ಕೊಲೆ!

8 ನಿಮಿಷದಲ್ಲೇ ಗಣಿ ಅಧಿಕಾರಿ ಪ್ರತಿಮಾ ಕೊಲೆ!
– ಹಂತಕ ಕಿರಣ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
– ರಾತ್ರಿಯೇ ಹತ್ಯೆಗೆ ಸಂಚು: ಹೇಗೆ ಮಾಡಿದ್ದ ಕೊಲೆ!

NAMMUR EXPRESS NEWS
ಬೆಂಗಳೂರು: ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕೆ.ಎಸ್‌.ಪ್ರತಿಮಾ ಅವರ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಆರೋಪಿ ಕಾರು ಚಾಲಕ ಕಿರಣ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದೊಡ್ಡ ಕಲ್ಲಸಂದ್ರದ ಕುವೆಂಪು ನಗರದಲ್ಲಿ ನ.4ರಂದು ರಾತ್ರಿ ನಡೆದಿದ್ದ ಪ್ರತಿಮಾ ಅವರ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ ಎನ್‌ ಜಗದೀಶ್‌ ಅವರು, ಆರೋಪಿ ಕಿರಣ್‌ನಿಂದ ಪಡೆದಿದ್ದ ಸ್ವ ಇಚ್ಛಾ ಹೇಳಿಕೆ, 70 ಸಾಕ್ಷಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ, ಡಿಜಿಟಲ್‌ ಸಾಕ್ಷ್ಯಾಧಾರ, ಸಾಂದರ್ಭಿಕ ಸಾಕ್ಷ್ಯ ಸೇರಿ ಸುಮಾರು 600 ಪುಟಗಳ ದೋಷಾರೋಪ ಪಟ್ಟಿಯನ್ನು ನಗರದ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ನ್ಯಾಯಾಲಯವು ಈ ದೋಷಾರೋಪ ಪಟ್ಟಿಯನ್ನು ಅಂಗೀಕರಿಸಿದೆ ಎಂಬುದು ತಿಳಿದು ಬಂದಿದೆ. ಅಪರಾಧ ಪ್ರವೃತ್ತಿ ಹಿನ್ನೆಲೆಯ ಕಿರಣ್‌, ಕಾರು ಚಾಲಕನ ಕೆಲಸದಿಂದ ವಜಾಗೊಳಿಸಿದ್ದ ವೈಷಮ್ಯದಿಂದ ಪ್ರತಿಮಾ ಅವರನ್ನು ಕೊಲೆಗೈದು ಚಿನ್ನಾಭರಣ, ನಗದು ದೋಚಿದ್ದ. ಆರೋಪಿ ದೋಚಿದ್ದ ಆಭರಣ, ನಗದನ್ನು ಜಪ್ತಿ ಮಾಡಲಾಗಿದೆ. ಕಿರಣ್‌ ಕೃತ್ಯ ಎಸಗಿರುವುದಕ್ಕೆ ಪೂರಕ ಸಾಕ್ಷ್ಯಾಧಾರಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

8 ನಿಮಿಷದಲ್ಲೇ ಕೊಂದು ಹೊರಬಂದಿದ್ದ ಹಂತಕ!

ಹಲವು ಬಾರಿ ಅಶಿಸ್ತು, ದುರ್ನಡತೆ ತೋರಿದ್ದ ಕಾರಣಕ್ಕೆ ಪ್ರತಿಮಾ ಅವರ ಸೂಚನೆ ಮೇರೆಗೆ ಅಕ್ಟೋಬರ್‌ನಲ್ಲಿ ಕಿರಣ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಮಧ್ಯೆ ಪುನಃ ಕೆಲಸ ಕೊಡಿಸುವಂತೆ ಕಿರಣ್‌ ಕೇಳಿಕೊಂಡಿದ್ದ. ಆದರೆ, ಪ್ರತಿಮಾ ಅವರು ಒಪ್ಪಿರಲಿಲ್ಲ. ಪ್ರತಿಮಾ ಒಂಟಿಯಾಗಿ ನೆಲೆಸಿರುವುದು ಆರೋಪಿಗೆ ಗೊತ್ತಿತ್ತು. ಹೀಗಾಗಿ ಸಂಚು ರೂಪಿಸಿ ನ 3ರಂದು ರಾತ್ರಿ ಕೂಡ ಪ್ರತಿಮಾ ಅವರ ಮನೆ ಬಳಿ ತೆರಳಿದ್ದ. ಆದರೆ ಭೇಟಿ ಸಾಧ್ಯವಾಗದೆ ವಾಪಸಾಗಿದ್ದ. ನ 4ರಂದು ರಾತ್ರಿ 8 ಗಂಟೆ ಸುಮಾರಿಗೆ ತೆರಳಿ, ಮನೆಯ ಟೆರೇಸ್‌ನಲ್ಲಿ ಅವಿತು ಕುಳಿತಿದ್ದ. ರಾತ್ರಿ 8.30ರ ಸುಮಾರಿಗೆ ಪ್ರತಿಮಾ ಅವರು ಮನೆ ಬಳಿ ಬಂದಿದ್ದರು.

ಪ್ರತಿಮಾ ಅವರು ಮನೆಯ ಬಾಗಿಲು ತೆರೆದು ಒಳಹೋಗುತ್ತಿದ್ದಂತೆಯೇ ಹಿಂದೆಯೇ ಧಾವಿಸಿ ಬಂದ ಕಿರಣ್‌, ಏಕಾಏಕಿ ಪ್ರತಿಮಾರ ಬಾಯಿ ಮುಚ್ಚಿ ವೇಲ್‌ನಿಂದ ಕತ್ತು ಬಿಗಿದಿದ್ದ. ಪ್ರಜ್ಞೆ ತಪ್ಪಿದ ಪ್ರತಿಮಾರನ್ನು ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದಿದ್ದ. ಬಳಿಕ ಪ್ರತಿಮಾ ಅವರ ಕೈಗಳಲ್ಲಿದ್ದ ಚಿನ್ನದ ಬಳೆ, ಬ್ರೇಸ್ಲೇಟ್‌, ಮೂಗುತಿ ಕಿತ್ತುಕೊಂಡಿದ್ದ. ಕಬೋರ್ಡ್‌ನಲ್ಲಿದ್ದ ಐದು ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದ. ಬಳಿಕ ಸ್ನೇಹಿತನೊಬ್ಬನಿಗೆ ನಗದು ನೀಡಿ, ಮತ್ತಿಬ್ಬರ ಜತೆ ಮಲೆಮಹದೇಶ್ವರ ಬೆಟ್ಟಕ್ಕೆ ಪರಾರಿಯಾಗಿದ್ದ ವಿಚಾರ ತನಿಖೆಯಲ್ಲಿ ಧೃಡಪಟ್ಟಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Categories
ಚಿಕ್ಕಮಗಳೂರು ಮಲ್ನಾಡ್

ಶೃಂಗೇರಿ: ಮಂಗನ ಕಾಯಿಲೆಗೆ ಮೊದಲ ಬಲಿ‌!

ಶೃಂಗೇರಿ: ಮಂಗನ ಕಾಯಿಲೆಗೆ ಮೊದಲ ಬಲಿ‌!
– ಮೂವರಲ್ಲಿ ಸೋಂಕು ಪತ್ತೆ: ಇದೀಗ ವೃದ್ಧ ಸಾವು
– ಕೊಪ್ಪ: ಮರಕ್ಕೆ ಕಟ್ಟಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

NAMMUR EXPRESS NEWS
ಶೃಂಗೇರಿ: ಮಂಗನ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆಯಲ್ಲಿ ನಡೆದಿದೆ. 79 ವರ್ಷದ ವೃದ್ಧ ಮೃತ ವ್ಯಕ್ತಿ. ಈತನ ತಪಾಸಣೆ ಮಾಡಿದಾಗ ಕೆ.ಎಫ್.ಡಿ ಪತ್ತೆಯಾಗಿದೆ. ಮಣಿಪಾಲ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೆ.ಎಫ್.ಡಿ ಜೊತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಕೊಪ್ಪ, ಶೃಂಗೇರಿ ಸೇರಿ ಮಲೆನಾಡಿನಲ್ಲಿ ಮೂವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ವೃದ್ಧನ ಸಾವಿನಿಂದಾಗಿ ಆತಂಕ ಹೆಚ್ಚಾಗಿದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಣುತ್ತಿದ್ದ ಮಂಗನ ಕಾಯಲೆ ಈ ವರ್ಷ ಪಕ್ಕದ ಜಿಲ್ಲೆಗೂ ವ್ಯಾಪಿಸಿದೆ.

ಮರಕ್ಕೆ ಕಟ್ಟಿ ಹಾಕಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಹಣದ ವಿಚಾರಕ್ಕೆ ಹೊಡೆದಾಟ ನಡೆದು ಓರ್ವನಿಗೆ ಮರಕ್ಕೆ ಕಟ್ಟಿ ಹಾಕಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಕೊಪ್ಪದ ಸೋಮ್ಲಪುರ ರಸ್ತೆಯ ಬಳಿ ಪ್ಲಾಂಟೇಶನ್ ಬಳಿ ವರದಿಯಾಗಿದೆ. ಕಬ್ಬಿಣದ ರಾಡ್ ಮತ್ತು ಕೈಯಿಂದ ಕರ್ಕಶ್ವರದ ಸತೀಶ್ ಎನ್ನುವವರ ಮೇಲೆ6 ಜನರ ತಂಡ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಮಹೇಶ್, ವಿಠಲ್, ಸಿರಿಲ್,ಸುನಿಲ್, ಮಂಜು, ಕಟ್ಟೆಹಕ್ಲು ಸುನಿಲ್ ಅವರ ಮೇಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಸತೀಶ್ ದೂರು ದಾಖಲಿಸಿ ಅವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Categories
ಬೆಂಗಳೂರು ರಾಜ್ಯ

ಹೆಚ್ಚುತ್ತಿದೆ ಆನ್‌ಲೈನ್ ವಂಚನೆ: ಕೋಟಿ ಕೋಟಿ ಮೋಸ!

ಹೆಚ್ಚುತ್ತಿದೆ ಆನ್‌ಲೈನ್ ವಂಚನೆ: ಕೋಟಿ ಕೋಟಿ ಮೋಸ!
– ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್, ವೆಬ್ ಅಸ್ತ್ರ
– ಖದೀಮರ ಜಾಲಕ್ಕೆ ಬೀಳದಿರಿ ಹುಷಾ‌ರ್!
– ಜಾಗೃತಿ ಬಗ್ಗೆ ಬರಲಿದೆ ವಿಶೇಷ ಸರಣಿ ವರದಿ

NAMMUR EXPRESS NEWS
ಬೆಂಗಳೂರು: ಕಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಆನ್‌ಲೈನ್ ಸುಲಿಗೆ, ವಂಚನೆ ಕೇಸುಗಳ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರಕ್ಕೆ ಬಹುತೇಕರು ಆನ್‌ಲೈನ್ ಸಂಪರ್ಕವನ್ನೇ ಅವಲಂಬಿಸಿದ್ದಾರೆ. ನಗದು ಕಳುಹಿಸುವುದು ಹಾಗೂ ಪಡೆಯುವುದು ಆನ್‌ಲೈನ್‌ನಲ್ಲಿ ಸುಲಭ ಎಂಬುದು ಇದಕ್ಕೆ ಮುಖ್ಯ ಕಾರಣ. ಇದನ್ನೇ ಬಂಡವಾಳವಾಗಿಟ್ಟುಕೊಂಡಿರುವ ಖದೀಮರು ಆನ್‌ಲೈನ್ ಮೂಲಕವೇ ದೋಖಾ ಮಾಡುತ್ತಿದ್ದಾರೆ. ಫೇಸ್ಬುಕ್ ಪೇಜ್ ಹ್ಯಾಕ್ ಮಾಡಿ ಅಲ್ಲೇ ಮೆಸೇಜ್ ಮಾಡಿ ಹಣವನ್ನು ಕೇಳಲಾಗುತ್ತಿದೆ. ವಾಟ್ಸಪ್ ಮೂಲಕ ಸಂಪರ್ಕಿಸಿ, ಲಿಂಕ್ ಕಳುಹಿಸಿ ಹಣ ಕಟ್ ಮಾಡಿಕೊಳ್ಳಲಾಗುತ್ತಿದೆ. ಕರೆ ಮಾಡಿ ಸುಳ್ಳು ಮಾಹಿತಿ ನೀಡಿ ಮೋಸ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಆನ್ಲೈನ್ ಮೋಸ

ಗ್ರಾಮೀಣ ಭಾಗದಲ್ಲಂತೂ ವಂಚನೆ ಪ್ರಕರಣ ಹೆಚ್ಚಾಗಿವೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಇಂದಿಗೂ ಬಹುತೇಕರಿಗೆ ಆನ್‌ಲೈನ್ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಹಾಗಾಗಿ ವಂಚನೆ ಪ್ರಕರಣ ಹೆಚ್ಚುತ್ತಲೇ ಇವೆ. ನಗರ ಮತ್ತು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸೈಬ‌ರ್ ಪೊಲೀಸ್ ಠಾಣೆಯನ್ನು ತೆರೆದರೂ ವಂಚನೆ, ಸುಲಿಗೆ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಎಲ್ಲೋ ಕುಳಿತ ವ್ಯಕ್ತಿಗಳು ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸುತ್ತಿದ್ದಾರೆ. ವೆಬ್‌ಸೈಟ್, ಎಟಿಎಂಗಳಿಗೂ ಕನ್ನ ಹಾಕಿ ಅತ್ಯಮೂಲ್ಯ ಮಾಹಿತಿ ಕಳವು ಮಾಡುತ್ತಿದ್ದಾರೆ.

ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ಪ್ ಮೂಲಕ ವಂಚನೆ, ಸುಲಿಗೆ ಮಾಡಲು ನಿತ್ಯ ಅನಗತ್ಯ ಕರೆಗಳು ನಿಮ್ಮ ಮೊಬೈಲ್‌ಗೆ ಬರುತ್ತಲೇ ಇರುತ್ತವೆ. ನಿಮಗೆ ಯಾವುದೋ ಸ್ಕೀಮ್ ನಲ್ಲಿ ಉಡುಗೊರೆ ಬಂದಿದೆ, ನಿಮ್ಮ ಖಾತೆಗೆ 1 ಲಕ್ಷ ರೂ. ಬಹುಮಾನ ಬಂದಿದೆ. ನಿಮ್ಮ ಆಧಾರ್ ಕಾರ್ಡ್, ಅಕೌಂಟ್ ಮಾಹಿತಿ ಕೊಡಿ, ಎಟಿಎಂ ಕಾರ್ಡ್ ನಂಬರ್ ನೀಡಿ, ಒಟಿಪಿ ನಂಬರ್‌ ಕೊಡಿ ಎಂದು ಹೇಳಿಕೊಂಡು ಕರೆಗಳು ಬಂದರೆ ಅದಕ್ಕೆ ಉತ್ತರಿಸಬೇಡಿ. ಯಾರಾದರೂ ಕರೆ ಮಾಡಿ ನಿಮ್ಮ ಖಾಸಗಿ ಮಾಹಿತಿ ಕೇಳಿದರೆ ಕೊಡಬೇಡಿ. ಕೂಡಲೇ ಸ್ಥಳೀಯ ಠಾಣೆ ಗಮನಕ್ಕೆ ತನ್ನಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಸಾರ್ವಜನಿಕರು ಆನ್‌ಲೈನ್‌ ಖದೀಮರ ಬಗ್ಗೆ ಜಾಗರೂಕರಾಗಿರಬೇಕು. ಬ್ಯಾಂಕಿಗೆ ನೇರ ಹೋಗಿ ವ್ಯವಹಾರ ಮಾಡಬೇಕು. ಫೋನ್ ಮೂಲಕ ಬ್ಯಾಂಕ್ ಮಾಹಿತಿ ಕೇಳಿದರೆ ಕೊಡಬೇಡಿ. ಒಟಿಪಿ, ಎಟಿಎಂ ಕಾರ್ಡ್‌ ನಂಬರ್ ಶೇರ್ ಮಾಡಬಾರದು. ಮೊಬೈಲ್‌ನಲ್ಲೂ ನಿಮ್ಮ ಖಾಸಗಿ ಮಾಹಿತಿಯನ್ನು ಸೇವ್ ಮಾಡಬಾರದು. ಎಟಿಎಂಗೆ ಹೋಗುವ ಮುನ್ನ ಯಾವುದಾದರೂ ಗೌಪ್ಯ ವಸ್ತು ಇಟ್ಟಿದ್ದಾರಾ? ಎಂಬುದನ್ನು ಪರಿಶೀಲಿಸಬೇಕು. ಸೆಕ್ಯೂರಿಟಿ ಇರುವ ಎಟಿಎಂಗಳನ್ನೇ ಬಳಸಬೇಕು ಹೀಗೆ ಅನೇಕ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ.

Categories
ತೀರ್ಥಹಳ್ಳಿ

ಟಿ. ಎಸ್.ಟಿ ಹೈಪರ್ ಮಾರ್ಟ್ 2 ನೇ ಶಾಖೆಯ ಶುಭಾರಂಭ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ ವತಿಯಿಂದ ನೂತನವಾಗಿ ಶುಭಾರಂಭಗೊಳ್ಳಲಿದೆ.

ಟಿ. ಎಸ್.ಟಿ ಹೈಪರ್ ಮಾರ್ಟ್ 2 ನೇ ಶಾಖೆಯ ಶುಭಾರಂಭ

ಆತ್ಮೀಯರೇ,

ದಿನಾಂಕ 04-02-2024 ರ ಭಾನುವಾರದಂದು ಬೆಳಿಗ್ಗೆ 8-00 ಗಂಟೆಗೆ ನಮ್ಮ ಸಂಸ್ಥೆಯ ವತಿಯಿಂದ ತೀರ್ಥಹಳ್ಳಿಯ ಕೆ.ಸಿ. ರಸ್ತೆಗೆ ಹೊಂದಿಕೊಂಡಿರುವ ಕುವೆಂಪು ನಗರ ಬಡಾವಣೆಯ ನಮ್ಮ ಸಹಕಾರಿಯ ಸ್ವಂತ ಕಟ್ಟಡದಲ್ಲಿ ಟಿ.ಎಸ್.ಟಿ. ಹೈಪರ್ ಮಾರ್ಟ್ 2 ನೇ ಶಾಖೆಯನ್ನು ಆರಂಭಿಸಲಾಗುತ್ತದೆ.

ತಾವುಗಳು ಆ ಸಮಯದಲ್ಲಿ ಆಗಮಿಸಿ ನಮ್ಮ ಈ ನೂತನ ಉದ್ಯಮಕ್ಕೆ ಶುಭ ಹಾರೈಸಿ, ಸಹಕರಿಸಬೇಕಾಗಿ ವಿನಂತಿಸುತ್ತೇವೆ

ಸರ್ವರಿಗೂ ಆದರದ ಸುಸ್ವಾಗತ

ಶ್ರೀ ಮಹಾಬಲೇಶ್ವರ ಹೆಗಡೆ

ಅಧ್ಯಕ್ಷರು

ಶ್ರೀ ತಿಮ್ಮಪ್ಪ ಎಂ.ಎಸ್.

ಉಪಾಧ್ಯಕ್ಷರು

ಮತ್ತು ಆಡಳಿತ ಮಂಡಳಿ, ನೌಕರ ವರ್ಗ, ಕ.ರಾ.ಪ್ರಾ.ಶಾ.ಶಿ.ಸೌ.ಸ.ಸಂ.ನಿ., ತೀರ್ಥಹಳ್ಳಿ ಹಾಗೂ ವ್ಯವಸ್ಥಾಪಕರು, ಸಿಬ್ಬಂದಿವರ್ಗ, ಟಿ.ಎಸ್.ಟಿ. ಹೈಪರ್ ಮಾರ್ಟ್, ತೀರ್ಥಹಳ್ಳಿ

Home Delivery

ಹೋಂ ಡೆಲವರಿ ಸೌಲಭ್ಯವಿರುತ್ತದೆ.

8867635275

Categories
ರಾಜ್ಯ

ಹುಣಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಹುಣಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ
-ಕೇರಳಕ್ಕೆ ನುಗ್ಗಿದ ಗಜರಾಜ ಬಂಡೀಪುರದ ಆನೆ ಶಿಬಿರದಲ್ಲಿ ಸಾವು
-ಮೈಸೂರಿನ ಕೋಳಿ ಫಾರಂನಲ್ಲಿ ಬೋನಿಗೆ ಬಿದ್ದ ಚಿರತೆ

NAMMUR EXPRESS NEWS
ಮೈಸೂರು: ಮೈಸೂರಿನಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರಿದೆ. ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದು, ರೈತರೊಬ್ಬರು ಬಲಿಯಾಗಿದ್ದಾರೆ. ಚಲುವಯ್ಯ (65) ಮೃತ ರೈತ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ.

ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು, ರೈತರ ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು. ಜೀವ ಹೋದ ಮೇಲೆ ಬಂದು ಏನು ಹೇಳಿದರೂ, ಪರಿಹಾರ ಕೊಟ್ಟರೂ ಹೋದ ಜೀವ ಮರಳಿ ಬಾರದು. ಹೀಗಾಗಿ ಪ್ರಾಣಿಗಳ ದಾಳಿಯಿಂದ ರಕ್ಷಣೆ ನೀಡಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡಾಯಿಸಿದ್ದಾರೆ.

ಕೇರಳಕ್ಕೆ ನುಗ್ಗಿದ ಗಜರಾಜ ಬಂಡೀಪುರದ ಆನೆ ಶಿಬಿರದಲ್ಲಿ ಸಾವು.

ಚಾಮರಾಜನಗರ: ಕೇರಳಕ್ಕೆ ನುಗ್ಗಿ ದಾಂಧಲೆ ಮಾಡಿ ಸೆರೆ ಸಿಕ್ಕಿದ್ದ ಆನೆ ಬಂಡೀಪುರದ ರಾಮಾಪುರ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ಬೇಸರವನ್ನು ಹೊರಹಾಕಿದ್ದಾರೆ. ಆನೆ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ರಾಮಾಪುರ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರ ಅರಣ್ಯಕ್ಕೆ ಈ ಆನೆಯನ್ನು ಬಿಡಲಾಗಿತ್ತು. ಕೊನೆಗೆ ಅದೇ ಆನೆಯನ್ನು ಪುನಃ ಬಂಡೀಪುರದ ರಾಮಾಪುರ ಅನೆ ಶಿಬಿರಕ್ಕೆ ಕರೆತಂದು ಬಿಡಲಾಗಿತ್ತು. ಇದೀಗ ಆನೆ ಸವಾಗಿದ್ದು, ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

 ಮೈಸೂರಿನ ಕೋಳಿ ಫಾರಂನಲ್ಲಿ ಬೋನಿಗೆ ಬಿದ್ದ ಚಿರತೆ

ಮೈಸೂರಿನ ದಾರಿಪುರ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಮೈಸೂರಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು.ದಾರಿಪುರದಲ್ಲಿ ಚಿರತೆ ಕಾಣಿಸಿಕೊಂಡು, ಆತಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ದಾರಿಪುರದ ಕೋಳಿ ಫಾರಂನಲ್ಲಿ ಬೋನು ಇರಿಸಿದ್ದರು. ಕೋಳಿ ಬೇಟೆಯಾಡಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಸ್ಥಳಕ್ಕೆ ಆರ್‌ಎಫ್‌ಓ ಸುರೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಸುರಕ್ಷಿತವಾಗಿ ರವಾನಿಸಿದ್ದಾರೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಕೆಎಎಸ್‌ ನೇಮಕಕ್ಕೆ ದಿನಗಣನೆ ಶುರು

ಕೆಎಎಸ್‌ ನೇಮಕಕ್ಕೆ ದಿನಗಣನೆ ಶುರು
– 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ

NAMMUR EXPRESS NEWS
ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ (KAS) ಹುದ್ದೆಗಳ ನೇಮಕಕ್ಕಾಗಿ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಲೋಕ ಸೇವಾ ಆಯೋಗವು ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ ಈ ನೇಮಕಾತಿಯ ಅಧಿಸೂಚನೆ ಹೊರಡಿಸಲಿದೆ. ಆದರೆ ಈ ಹಿಂದೆ ಪ್ರಕಟಿಸಿದಂತೆ 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಗ್ರೂಪ್‌ ʻಎʼಯ 159 ಹುದ್ದೆಗಳಾದರೆ ಗ್ರೂಪ್‌ ʻಬಿʼಯ 225 ಹುದ್ದೆಗಳಾಗಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ರಿಕ್ತ ಸ್ಥಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಫೆಬ್ರವರಿ 2 ಶುಕ್ರವಾರದಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸಲ್ಲಿಸಿದೆ. ಅಲ್ಲದೆ, ನೇಮಕಾತಿಯನ್ನು ಆರಂಭಿಸಲು ಅಧಿಸೂಚನೆಯನ್ನು ಹೊರಡಿಸುವಂತೆ ಸಹ ಕೋರಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

ಗ್ರೂಪ್‌ ʻಎʼ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 36 ಹುದ್ದೆಗಳು ಮೀಸಲಾಗಿದ್ದರೆ, ಗ್ರೂಪ್‌ ʻಬಿʼ ಹುದ್ದೆಗಳಲ್ಲಿ 41 ಹುದ್ದೆಗಳು ಮೀಸಲಾಗಿವೆ. ಒಟ್ಟು ಏಳು ಇಲಾಖೆಗಳಲ್ಲಿ ಗ್ರೂಪ್‌ ʻಎʼ ಹುದ್ದೆಗಳಿಗೆ ಈಗ ನೇಮಕ ನಡೆಯಲಿದೆ. ಇದರಲ್ಲಿ ಹೆಚ್ಚು ಹುದ್ದೆಗಳು (41 ಹುದ್ದೆಗಳು) ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 40 ಹುದ್ದೆಗಳಿಗೂ ನೇಮಕ ನಡೆಯಲಿದೆ. 9 ಡಿವೈಎಸ್‌ಪಿ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು 15 ಇಲಾಖೆಗಳಲ್ಲಿನ ಗ್ರೂಪ್‌ ʻಬಿʼಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಎಂದರೆ 59 ಹುದ್ದೆಗಳು ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. 51 ತಹಶೀಲ್ದಾರ್‌ (ಗ್ರೇಡ್‌-2) ಹುದ್ದೆಗಳಿಗೂ ನೇಮಕ ನಡೆಯಲಿದೆ. ಆರ್ಥಿಕ ಇಲಾಖೆಯ ಸಹಾಯಕ ಖಜಾನಾಧಿಕಾರಿ 46 ಹುದ್ದೆಗಳಿಗೂ ಈಗ ನೇಮಕ ಮಾಡಿಕೊಳ್ಳಲಾಗುತ್ತದೆ.

ಕೆಎಎಸ್‌ ನೇಮಕಾತಿ ಕುರಿತು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟು 16 ಇಲಾಖೆಗಳಲ್ಲಿನ ಒಟ್ಟು 656 ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿದೆ. ಆರ್ಥಿಕ ಇಲಾಖೆಯು ಒಟ್ಟು 504 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದರು. ಹೀಗಾಗಿ ಈ ಬಾರಿ 504 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದೇ ನಿರೀಕ್ಷಿಸಲಾಗುತ್ತಿತ್ತು. 2017-18ನೇ ಸಾಲಿನಲ್ಲಿ 106 ಕೆಎಎಸ್‌ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆ ನಂತರ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಅಭ್ಯರ್ಥಿಗಳು ಈ ನೇಮಕ ಪ್ರಕ್ರಿಯೆಗಾಗಿ ಕಾದು ಕುಳಿತಿದ್ದರು. ಈಗ ನೇಮಕ ಪ್ರಕ್ರಿಯೆ ಆರಂಭವಾಗುವ ಸೂಚನೆ ಕಂಡು ಬಂದಿದ್ದರೂ, ಹುದ್ದೆಗಳ ಸಂಖ್ಯೆ ಕಡಿಮೆಯಾಗಿರುವುದು ಅಭ್ಯರ್ಥಿಗಳಿಗೆ ಬೇಸರವನ್ನುಂಟು ಮಾಡಿದೆ.

Categories
ಶಿವಮೊಗ್ಗ ಸಾಗರ ಹೊಸನಗರ

ಟಾಪ್ ನ್ಯೂಸ್ ಶಿವಮೊಗ್ಗ

ನಶೆಯಲ್ಲಿದ್ದ ಮೆಡಿಕಲ್‌ ವಿದ್ಯಾರ್ಥಿಯಿಂದ ಆಕ್ಸಿಡೆಂಟ್!
– ಶಿವಮೊಗ್ಗದಲ್ಲಿ ಘಟನೆ: ಜನರಿಂದ ಧರ್ಮದೇಟು
– ಹೊಸನಗರ: 15ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು!
– ಶಿಕಾರಿಪುರ: ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ : ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌
– ಸಾಗರ: ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!
– ಸಾಗರ: ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ

NAMMUR EXPRESS NEWS
ಶಿವಮೊಗ್ಗ: ನಶೆಯಲ್ಲಿದ್ದ ಮೆಡಿಕಲ್‌ ವಿದ್ಯಾರ್ಥಿಯೊಬ್ಬ ಕಾರಿನಲ್ಲಿ ಐದಾರು ಕಡೆ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಮೆಡಿಕೆಲ್‌ ವಿದ್ಯಾರ್ಥಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಖಾಸಗಿ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯೊಬ್ಬ ಹೊಳೆಹೊನ್ನೂರು ರಸ್ತೆಯಲ್ಲಿ ಜಾವಳ್ಳಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುವಾಗ ನಾಲ್ಕೈದು ಕಡೆ ಅಪಘಾತ ಮಾಡಿದ್ದಾನೆ. ಗುರುಪುರದ ಶಾಂತಮ್ಮ ಲೇಔಟ್‌ನಲ್ಲಿ ಭದ್ರಾವತಿಯ ಲೋಯರ್‌ ಹುತ್ತದ ನವೀನ್‌ ಕುಮಾರ್‌ ಮತ್ತು ಅವರ ಪತ್ನಿ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದಾರೆ. ಅಷ್ಟು ಹೊತ್ತಿಗೆ ಮೆಡಿಕಲ್‌ ವಿದ್ಯಾರ್ಥಿಯನ್ನು ಹಿಂಬಾಲಿಸಿ ಬಂದ ಸಾರ್ವಜನಿಕರು ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿದ್ದ ಮೆಡಿಕೆಲ್‌ ವಿದ್ಯಾರ್ಥಿಯನ್ನು ಪೊಲೀಸರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್‌ ವಿದ್ಯಾರ್ಥಿ ನಶೆಯಲ್ಲಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಮದ್ಯ ಸೇವಿಸಿದ್ದನೊ, ಗಾಂಜಾ ಮತ್ತಿನಲ್ಲಿದ್ದನೊ ಅನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು

15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆ 25 ವರ್ಷದ ಯುವಕನಿಗೆ ಇಲ್ಲಿನ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. 2022ರಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ನೊಂದ ಬಾಲಕಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಹೊಸನಗರ ಠಾಣೆ ಸಿಪಿಐ ಬಿ.ಸಿ.ಗಿರೀಶ್‌ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿ ದರು. ವಿಚಾರಣೆ ನಡೆಸಿದ ನ್ಯಾಯಾಧಿಶರಾದ ಲತಾ ಆರೋಪಿಗೆ ಶಿಕ್ಷೆ ವಿಧಿಸಿ ಅದೇಶಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ 4 ತಿಂಗಳು ಸಾದಾ ಸೆರೆವಾಸದ ಶಿಕ್ಷೆ ವಿಧಿಸಿದ್ದಾರೆ.

ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌

ಶಿಕಾರಿಪುರ : ದೂರು ನೀಡಿದ ನಾಲ್ಕೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಎರಡು ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾಳೆಕೊಪ್ಪ ಗ್ರಾಮದ ಹನುಮಂತ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಹನುಮಂತ ನಾಯ್ಕ ಅವರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಘಟನೆ ಸಂಭವಿಸಿತ್ತು. ಮನೆ ಬಾಗಿಲಿನ ಬೀಗ ಹಾಕಿ ಅದನ್ನು ಬಾಗಿಲಿನ ಬಳಿ ಇರಿಸಿದ್ದರು. ಅದೇ ಬೀಗ ಬಳಸಿ ಮನೆಯೊಳಗೆ ಹೋಗಿದ್ದ ಯುವಕ 2,05,000 ರೂ. ನಗದು ಕಳವು ಮಾಡಿ ಯುವಕ ತಲೆಮರೆಸಿಕೊಂಡಿದ್ದ.

ಸಿಸಿಟಿವಿ ಪರಿಶೀಲಿಸಿದಾಗ ತಮ್ಮೂರಿಗೆ ಆಗಾಗ ಬರುತ್ತಿದ್ದ ಚನ್ನಗಿರಿ ಮೂಲದ ಕಾಲೇಜು ವಿದ್ಯಾರ್ಥಿ ಎಂದು ಗೊತ್ತಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದೂರು ದಾಖಲಾದ ಕೇವಲ 4 ಗಂಟೆಯ ಒಳಗಾಗಿ ಆರೋಪಿಯ ಬಂಧನವಾಗಿದೆ. ಐಫೋನ್ ಖರೀದಿಗಾಗಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಇನ್ಸ್‌ಪೆಕ್ಟರ್‌ ಆರ್.ಆರ್ ಪಾಟೀಲ್‌ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿ ಕಟ್ಟಿ. ಓಸಿ (ಮಟ್ಕಾ) ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮ್‌ರೆಡ್ಡಿ ಹಾಗೂ ಶಿವಮೊಗ್ಗ ಜಿಲ್ಲಾ 2ನೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಕಾರಿಯಪ್ಪರವರ ಆದೇಶದ ಮೇರೆಗೆ ಸಾಗರ ಪೊಲೀಸ್ ಉಪಾಧಿಕ್ಷಕರಾದ ಗೋಪಾಲ ಕೃಷ್ಣ ಟಿ.ನಾಯಕ್ ಇವರ ಮಾರ್ಗದರ್ಶನದಂತೆ ಸಾಗರ ಪೇಟೆ ಪೊಲೀಸ್ ಠಾಣೆಯ ಸಿಪಿಐ ಸೀತಾರಾಂ ಜೆ.ಬಿ. ರವರ ಮಾರ್ಗದರ್ಶನದಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ ಪಿ. ಎಸ್.ಐ ನಾಗರಾಜ ಟಿ.ಎಂ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ ಶ್ರೀನಿವಾಸ ಪಿಸಿ ಮಂಜುನಾಥ್ ಮತ್ತು ಯೋಗೀಶ್ ಅವರನ್ನೊಳಗೊಂಡ ತಂಡ ಕಾನೂನು ಬಾಹಿರವಾಗಿ ಓಸಿ ಮಟ್ಕಾ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ.ಮಂಜಪ್ಪ ನಾಯ್ಕ ಮತ್ತು ಶಿವಕುಮಾರ ಎಂಬ ಇಬ್ಬರನ್ನು ಬಂಧಿಸಿ ಅರೋಪಿತರಿಂದ 3000/- ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಇಬ್ಬರು ಆರೋಪಿಗಳ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ!

ಸಾಗರ ತಾಲೂಕು ಕೆರೆಹಳ್ಳಿ ವರದಾ ನದಿ ಬ್ರಿಡ್ಜ್ ಕೆಳಗೆ ಅಪರಿಚಿತ ಮೃತ ದೇಹ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣ ಸೊರಬ ಅಗ್ನಿಶಾಮಕದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ದೇಹವನ್ನು ಮೇಲಕ್ಕೆ ಎತ್ತಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿಯಾದ ಮಹಾಬಲೇಶ್ವರ, ಮಂಜುನಾಥ್, ಶ್ರೀಶೈಲ ತ್ರಿಫಲಕಟ್ಟಿ ,ಅರುಣ್ ಕೆ ಎಂ ,ಚೇತನ್ ಸಂದಿಪ್ ರಾಥೋಡ್, ವಿಜಯ್ ನೆಸರಗಿ ಹಾಜರಿದ್ದರು.

Categories
ಚಿಕ್ಕಮಗಳೂರು

26 ಕಾಡಾನೆಗಳಿಗೆ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾವಲು!

26 ಕಾಡಾನೆಗಳಿಗೆ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾವಲು!
– ಚಿಕ್ಕಮಗಳೂರು ನಗರ ಸಮೀಪವೇ ಆನೆಗಳ ಓಡಾಟ
– ಕಾಫಿ, ಅಡಿಕೆ ಮರೆತ ಕೇಂದ್ರ ಬಜೆಟ್: ಅಸಮಾಧಾನ
– ಮೂಡಿಗೆರೆ, ಚಿಕ್ಕಮಗಳೂರಿಗೆ ಬಂದ್ರು ತಹಸೀಲ್ದಾರ್

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಬಳಿ 26 ಕಾಡಾನೆ ಕಾಯಲು ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ.ದುಂಗೆರೆ, ವಸ್ತಾರೆ, ಕೆಸುವಿನ ಮನೆ, ಮಾರಿಕಟ್ಟೆ ಗ್ರಾಮಗಳ ಸುತ್ತಮುತ್ತಲ ನೆಡುತೋಪಿಗೆ ಬಂದಿವೆ. ರೇಡಿಯೊ ಕಾಲರ್ ಅಳವಡಿಕೆಯಾಗಿರುವ ‘ಬೀಟಮ್ಮ’ ಎಂಬ ಹೆಣ್ಣಾನೆಯ ಹೆಜ್ಜೆಯನ್ನು ಉಳಿದ 25 ಆನೆಗಳು ಹಿಂಬಾಲಿಸುತ್ತಿವೆ. ಸಲಗ ‘ಭೀಮ’ ಸೇರಿ ನಾಲ್ಕು ಗಂಡಾನೆಗಳು ಇಡೀ ಗುಂಪನ್ನು ರಕ್ಷಣೆ ಮಾಡುತ್ತಿವೆ. ಭೀಮ ಆನೆ ಮದದಲ್ಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆಯಿಂದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಆನೆಗಳ ಹಿಂಡಿರುವ ಜಾಗಕ್ಕೆ ಸಾರ್ವಜನಿಕರು ಹೋಗದಂತೆ ಸುತ್ತಲೂ ಕಾವಲಿದ್ದಾರೆ. ಅವುಗಳ ಚಲನ-ವಲನದ ಮೇಲೆ ಸಂಪೂರ್ಣ ನಿಗಾ ವಹಿಸಿದ್ದಾರೆ. ನಗರದ ಕಡೆಗೆ ಬಂದರೆ ಮಾತ್ರ ಸಾಕಾನೆಗಳನ್ನು ಬಳಸಿಕೊಂಡು ಹಿಮ್ಮೆಟ್ಟಿಸಲು ನಿರ್ಧರಿಸಿದ್ದಾರೆ.

ಅದರ ಹೊರತಾಗಿ ದೊಡ್ಡ ಸಂಖ್ಯೆಯಲ್ಲಿರುವ ಕಾಡಾನೆಗಳನ್ನು ಬೆದರಿಸಿದರೆ ಅಪಾಯವೇ ಹೆಚ್ಚು ಎಂಬುದನ್ನು ಅಧಿಕಾರಿಗಳು ಅರಿತಿದ್ದಾರೆ. ಎಲ್ಲವೂ ಒಟ್ಟಿಗೆ ಇರುವುದರಿಂದ ಆನೆಗಳು ತಮ್ಮ ಪಾಡಿಗೆ ಪ್ರತಿರಾತ್ರಿ ಒಂದೆಡೆಯಿಂದ ಮತ್ತೊಂಡೆಗೆ ಸಾಗುತ್ತಿವೆ. ಅವು ಮತ್ತೆ ಹಾಸನ ಜಿಲ್ಲೆಯ ಬೇಲೂರು ಕಡೆಗೆ ಹೋಗುವಂತೆ ಕಾಣಿಸುತ್ತಿಲ್ಲ. ಆಲ್ಲೂರು ಭಾಗಕ್ಕೆ ಮುಖ ಮಾಡಿದಂತಿದೆ. ಗರ್ಭಿಣಿ ಆನೆಗಳು, ಮರಿಗಳು ಇರುವುದರಿಂದ ಸಾಗುವ ದಾರಿಯ ಗುರಿಯನ್ನು ಅವು ಹೊಂದಿವೆ. ದಾರಿಯಲ್ಲಿ ಜನರಿಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 26 ಆನೆಗಳು ಒಟ್ಟಿಗೆ ಇರುವುದರಿಂದ ಯಾವ ಆನೆಯನ್ನು ಹಿಡಿದು ಸ್ಥಳಾಂತರ ಮಾಡುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಹಾಗೆ ಮಾಡಿದರೆ ಆನೆಗಳು ಗಾಬರಿಗೊಳ್ಳುತ್ತವೆ. ಅದರಿಂದ ತೊಂದರೆಯೇ ಹೆಚ್ಚು. ಸದ್ಯಕ್ಕೆ ಅವುಗಳನ್ನು ಕಾಡಿನ ಕಡೆಗೆ ಸಾಗಿಸುವುದಷ್ಟೇ ಗುರಿ’ ಎಂದು ಸ್ಪಷ್ಟಪಡಿಸಿದರು.

ಕಾಫಿ, ಅಡಿಕೆ ಮರೆತ ಕೇಂದ್ರ ಬಜೆಟ್

ಚಿಕ್ಕಮಗಳೂರು: ಹವಾಮಾನ ವೈಪರಿತ್ಯ, ಕಾರ್ಮಿಕರಕೊರತೆಯಿಂದ ಕಂಗೆಟ್ಟು ಕೇಂದ್ರ ಬಜೆಟ್ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದ ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ದೇಶಕ್ಕೆ ಹೆಚ್ಚಾಗಿ ವಿದೇಶಿ ವಿನಿಮಯ ತಂದುಕೊಡುವ ಉದ್ಯಮವಾಗಿದೆ. ಕಾಫಿ ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆ ಸೇರಿ ಹಲವು ಸಮಸ್ಯೆಗಳಿಂದ ನಲುಗಿದೆ. ಸಮಸ್ಯೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಾಫಿ ಮಂಡಳಿ ಮೂಲಕ ಬೆಳೆಗಾರರು ಸಲ್ಲಿಸಿದ್ದರು.ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ಬ್ಯಾಂಕ್‌ ಅಧಿಕಾರಿಗಳು ಬೆಳೆಗಾರರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಾಲ ಮರುಪಾವತಿಸದ ಬೆಳೆಗಾರರ ತೋಟಗಳನ್ನು ಹರಾಜು ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಕಾಫಿ ಉದ್ಯಮವನ್ನು ಹೊರಗಿಡಬೇಕು ಎಂಬುದು ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆ.

ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಬೆಳೆ ವೈಫಲ್ಯದಿಂದ ಕಂಗೆಟ್ಟಿರುವ ಬೆಳೆಗಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಹವಾಮಾನ ವೈಪರಿತ್ಯದಿಂದ ಫಸಲು ಕೈಸೇರದಂತಾಗಿದೆ. ಬೆಲೆ ಇದ್ದರೂ ಬೆಳೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹವಾಮಾನ ಆಧರಿತ ವಿಮೆ ವ್ಯಾಪ್ತಿಗೆ ಕಾಫಿಯನ್ನೂ ಸೇರಿಸಬೇಕು ಎಂಬುದು ಬೆಳೆಗಾರರ ಮನವಿ. ಈ ಎಲ್ಲಾ ಬೇಡಿಕೆಗಳನ್ನು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಬೆಳೆಗಾರರು ಸಲ್ಲಿಸಿದ್ದರು. ಆದರೆ, ಕೇಂದ್ರ ಬಜೆಟ್‌ನಲ್ಲಿ ಕಾಫಿ ಬೆಳೆಯ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಬೆಳೆಗಾರರನ್ನು ನಿರಾಸೆಗೆ ದೂಡಿದೆ.ರೋಗ ಬಾಧೆಯಿಂದ ನರಳುತ್ತಿರುವ ಅಡಿಕೆ ಬೆಳೆಗಾರರು ಕೇಂದ್ರ ಸರ್ಕಾರದಿಂದ ಪ್ಯಾಕೇಜ್ ನೀರೀಕ್ಷೆ ಮಾಡಿದ್ದರು. ಕೇಂದ್ರದ ತಂಡಕ್ಕೂ ಮನವಿ ಸಲ್ಲಿಸಿದ್ದರು. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಪ ಇಲ್ಲದಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ರೈತರು.

ಮೂಡಿಗೆರೆ, ಚಿಕ್ಕಮಗಳೂರಿಗೆ ಬಂದ್ರು ತಹಸೀಲ್ದಾರ್

ಚಿಕ್ಕಮಗಳೂರು: ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 67 ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿ ದಯಾನಂದ ಕೆ.ಎಸ್, ಮೂಡಿಗೆರೆ ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಆಗಿ ಶೈಲೇಶ್ ಎಸ್ ಪರಮಾನಂದ ಅವರನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

Categories
ರಾಷ್ಟ್ರೀಯ ವಾರ್ತೆ

ಎಲ್.ಕೆ.ಅಡ್ವಾಣಿ ಭಾರತ ರತ್ನ.!

ಎಲ್.ಕೆ.ಅಡ್ವಾಣಿ ಭಾರತ ರತ್ನ.!
– ಪ್ರಧಾನಿ ಮೋದಿ ಘೋಷಣೆ: ಅಡ್ವಾಣಿ ವ್ಯಕ್ತಿತ್ವ ಬಣ್ಣನೆ
– ದೇಶ ಕಂಡ ಅಪರೂಪದ ರಾಜಕಾರಣಿಗೆ ಸಂದ ಗೌರವ

NAMMUR EXPRESS NEWS
ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಎಲ್.ಕೆ.ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕೀಯ ತಜ್ಞರಲ್ಲಿ ಒಬ್ಬರಾದ ಲಾಲ್​ ಕೃಷ್ಣ ಅಡ್ವಾಣಿ ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಪಕ್ಷದ ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ದೇಶದ ಉಪ ಪ್ರಧಾನಿಯಾಗಿ ರಾಷ್ಟ್ರದ ಸೇವೆ ಮಾಡುವವರೆಗಿನ ಅವರ ಜೀವನ ಆದರ್ಶಮಯ. ಅವರು ನಮ್ಮ ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಹೆಸರು ಗಳಿಸಿಕೊಂಡವರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಅನುಕರಣೀಯ ಹಾಗೂ ಬೌದ್ಧಿಕ ಒಳನೋಟಗಳಿಂದ ತುಂಬಿವೆ” ಎಂದು ಅವರು ಹೇಳಿದರು.

ಅಡ್ವಾಣಿ ಅವರ ಸಾರ್ವಜನಿಕ ಜೀವನದಲ್ಲಿ ದಶಕಗಳ ಸೇವೆಯು ಪಾರದರ್ಶಕತೆ ಮತ್ತು ಸಮಗ್ರತೆಗೆ ಅಚಲ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ರಾಜಕೀಯ ನೈತಿಕತೆಯಲ್ಲಿ ಅನುಕರಣೀಯ ಮಾನದಂಡವನ್ನು ಅವರು ಹೊಂದಿದ್ದರು. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಅಸಾಮಾನ್ಯ ಪ್ರಯತ್ನಗಳನ್ನು ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ನನಗೆ ಬಹಳ ಭಾವನಾತ್ಮಕ ಕ್ಷಣವಾಗಿದೆ. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿದ್ದು ನನ್ನ ಸುಯೋಗ ಎಂದು ನಾನು ಯಾವಾಗಲೂ ಪರಿಗಣಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.