Categories
ಹೊಸನಗರ

ಫೆ.25 ರಂದು ಮಲೆನಾಡು ಕೋಳಿ ಸಾಕಾಣಿಕೆದಾರರ ಸಂಘದ ಮಹಾಸಭೆ

ಫೆ.25 ರಂದು ಮಲೆನಾಡು ಕೋಳಿ ಸಾಕಾಣಿಕೆದಾರರ ಸಂಘದ ಮಹಾಸಭೆ
– 2ನೇ ವರ್ಷದ ಮಹಾ ಸಭೆ: ಕೋಳಿ ಸಾಕಾಣಿಕೆ ಮಾಹಿತಿ ಕಾರ್ಯಗಾರ
– ನಗರದ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ಆಯೋಜನೆ: ಸರ್ವರಿಗೂ ಸ್ವಾಗತ

NAMMUR EXPRESS NEWS
ಹೊಸನಗರ: ಮಲೆನಾಡು ಕೋಳಿ ಸಾಕಾಣಿಕೆದಾರರ ಸಂಘ, ಹೊಸನಗರ-ತೀರ್ಥಹಳ್ಳಿ ತಾಲೂಕು ಇದರ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಫೆ.25ರ ಭಾನುವಾರ ಬೆಳಗ್ಗೆ 9ಕ್ಕೆ ನಗರದ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಯು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಒಕ್ಕೂಟದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಜರುಗಲಿದ್ದು, ಸರ್ವ ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೋಳಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷರಾದ ಅಂಕಿತ್ ಮೇಕೆರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕೋಳಿ ಸಾಕಾಣಿಕೆದಾರರ ಒಕ್ಕೂಟದ ಅಧ್ಯಕ್ಷರಾದ ನಂಜುಂಡಪ್ಪ, ಬೇಗಾನೆ ಗ್ರೂಪ್ಸ್ ಸಿಇಓ ವಿಕಾಸ್ ಗೌಡ, ಕೋಳಿ ಸಾಕಾಣಿಕೆದಾರರ ಸಂಘದ ಗೌರವಾಧ್ಯಕ್ಷರಾದ ಕೆ ಬಿ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಉಮೇಶ್, ಬೇಗಾನೆ ಫಾರಂ ವ್ಯವಸ್ಥಾಪಕರಾದ ದೀಪಕ್, ವಿ ಎಚ್ ಎಲ್ ಮ್ಯಾನೇಜರ್ ಶೇಖರ್, ಐಬಿ ಕಂಪನಿ ಮ್ಯಾನೇಜರ್ ವಿಜಯ್ ಕುಮಾರ್, ಭಾರತ್ ಮಲ್ನಾಡ್ ಪೌಲ್ಟ್ರಿ ಫಾರಂ ಮ್ಯಾನೇಜರ್ ಪ್ರದೀಪ್, ಶ್ರೀದೇವಿ ಪೌಲ್ಟ್ರಿ ಫಾರಂ ಮ್ಯಾನೇಜರ್, ಕೆನರಾ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಆಗಮಿಸಲಿದ್ದಾರೆ.

ಕಾರ್ಯಕಾರಿ ಮಂಡಳಿ:

– ಗೌರವಾಧ್ಯಕ್ಷರು – ಕೆ ಬಿ ಕುಮಾರ್ ಕಾನಗದ್ದೆ
– ಅಧ್ಯಕ್ಷರು – ಅಂಕಿತ್ ಮೇಕೇರಿ
– ಉಪಾಧ್ಯಕ್ಷರು – ಶಶಿ ಕಣಕಿ
– ಕಾರ್ಯದರ್ಶಿ – ಮಾರುತಿ ಹೆಚ್ ಜಿ
– ಖಜಾಂಚಿ – ಮಧುಕರ ಶೆಟ್ಟಿ
– ನಿರ್ದೇಶಕರು – ಜಯರಾಮ್ ಸಂಪೆಕಟ್ಟೆ, ಸುರೇಶ ಬೈಸೆ, ಮುಕುಂದ ಬೈಸೆ, ಕೃಷ್ಣಮೂರ್ತಿ ಬೇಳೂರು, ನಾಗರಾಜ ಬೈಸೆ, ಕೋಟೆಶ್ ಯಡೂರು, ಪ್ರಜ್ವಲ್ ಕೊಂಡ್ಲೂರು, ಗಿರೀಶ್ ಅಂಬುತೀರ್ಥ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶಶಿ 9449319626
ಮುಕುಂದ 74110 04157
ನಾಗರಾಜ್ 9481252514

ಸಮಸ್ತ ಕೋಳಿಸಾಕಾಣಿಕೆದಾರರು, ಆಸಕ್ತರನ್ನು ಆಯೋಜಕರು ಸ್ವಾಗತಿಸಿದ್ದಾರೆ.

Categories
ತೀರ್ಥಹಳ್ಳಿ

ಮೇಳಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ

ಮೇಳಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ
– ಫೆ.21ರಿಂದ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
– ಶನಿವಾರ ರಥೋತ್ಸವ: ಸರ್ವರಿಗೂ ಸ್ವಾಗತ

NAMMUR EEXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ದಿನಾಂಕ: 21-02-2024 ರಿಂದ ದಿನಾಂಕ : 26-02-2024 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳು ಆಗಮಿಸಿ, ದೇವರ ಮುಡಿಗಂಧ ಪ್ರಸಾರ ಸ್ವೀಕರಿಸಿ ಪುನೀತರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. ಫೆ. 21ರ ಬುಧವಾರದಂದು ಶ್ರೀ ಗಣೇಶ ಪ್ರಾರ್ಥನೆ, ನಾಂದಿ, ಪುಣ್ಯಹ, ಆದಿವಾಸ ಹೋಮ ಹಾಗೂ ದ್ವಜಾರೋಹಣ ನೆರವೇರಿದ್ದು ಫೆ.22ರ ಗುರುವಾರದಂದು ಅಗ್ನಿ ಪ್ರತಿಷ್ಠ ಆದಿವಾಸ ಹೋಮ, ಉತ್ಸವಾದಿಗಳು, ರಾತ್ರಿ ರಂಗ ಪೂಜೆ ಬಲಿ ಪೂಜೆ ಅಶ್ವರೋಹಣೋತ್ಸವ ಯಶಸ್ವಿಯಾಗಿ ನೆರವೇರಿದೆ.

ಫೆ. 23ರ ಶುಕ್ರವಾರ ರಥಾದಿವಾಸ ಹೋಮ, ಬಲಿ, ಉತ್ಸವದಿಗಳು ರಾತ್ರಿ ರಂಗ ಪೂಜೆ, ಬಲಿ, ಪೂಜೆ ಗಜರೋಹಣೋತ್ಸವ ನಡೆಯಲಿದೆ. ಫೆ. 24ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಸಲುವ ಶುಭ ಮುಹೂರ್ತದಲ್ಲಿ ಶ್ರೀ ಮನ್ಮಹಾರಥಾರೋಹಣ ನಡೆಯಲಿದ್ದು ರಾತ್ರಿ ಭೂತ ಬಲಿ, ಪೂಜೆ ಶಯನೋತ್ಸವ ನಡೆಯಲಿದೆ. ಫೆಬ್ರವರಿ 25ರ ಭಾನುವಾರ ಕುಂಕುಮೋತ್ಸವ, ಕೌತುಕ ವಿಸರ್ಜನ, ಅವಭ್ರತ, ಮೃಗಯಾತ್ರೆ, ರಾತ್ರಿ ಸಂಧಾನ, ಪೂರ್ಣಾಹುತಿ,ಧ್ವಜಾರೋಹಣ ಮಂತ್ರಾಕ್ಷತೆ ನಡೆಯಲಿದೆ. ಫೆಬ್ರವರಿ 26ರ ಸೋಮುವಾರ ಶುದ್ಧ ಸಂಪೊಕ್ಷಣೆ ಗಣಯಾನ, ರಾತ್ರಿ ರಂಗ ಪೂಜೆ ನಡೆಯಲಿದೆ.

ವಿಶೇಷ ಸೂಚನೆ: ದಿನಾಂಕ: 24-02-2024 ನೇ ಶನಿವಾರ ಮಧ್ಯಾಹ್ನ 1 ಗಂಟೆಗೆ ಮೇಳಿಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
(23-02-2024)
ಸರಕು 57320 82700
ಬೆಟ್ಟೆ 46440 53009
ರಾಶಿ 30009 47899
ಗೊರಬಲು 15689 32169

Categories
ಬೆಂಗಳೂರು ರಾಜ್ಯ

ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಹಂಚಿಕೆ!

ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಹಂಚಿಕೆ!
– ವಿಧಾನ ಸಭೆಯಲ್ಲಿ ಮಾಹಿತಿ ನೀಡಿದ ಆಹಾರ ಸಚಿವ
– ಯಾರಿಗೆ ಸಿಗುತ್ತೆ ಬಿಪಿಎಲ್, ಎಪಿಎಲ್ ಕಾರ್ಡ್?
– ರಾಜ್ಯದಲ್ಲಿ 2.95 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆ

NAMMUR EXPRESS NEWS
ಬೆಂಗಳೂರು: ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಏಪ್ರಿಲ್ ತಿಂಗಳಿಂದ ವಿತರಣೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಸದನದಲ್ಲಿ ವಿಪಕ್ಷ ನಾಯಕ ಆ‌ರ್.ಅಶೋಕ್ ರವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎಚ್.ಮುನಿಯಪ್ಪರವರು ಪ್ರಸ್ತುತ ಸದ್ಯಕ್ಕೆ ಸ್ಥಗಿತವಾಗಿರುವ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಪುನಃ 1 ಏಪ್ರಿಲ್ 2024 ರಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬಹುತೇಕ ಕಳೆದ 8-10 ತಿಂಗಳಿನಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಯಾವುದೇ ಬಗ್ಗೆಯ ಹೊಸ ರೇಷನ್ ಕಾರ್ಡಅನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರಲ್ಲಿಲ್ಲ ಈ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕ ಆ‌ರ್.ಅಶೋಕ್ ಮತ್ತಿತರ ಸದಸ್ಯರು ಪ್ರಶ್ನೆ ಮಾಡಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಉತ್ತರ ನೀಡಿದ್ದಾರೆ. ಇನ್ನೂ ಪಡಿತರ ಚೀಟಿ ಪಡೆಯಲು 2.95 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಅರ್ಜಿಗಳ ಪರಿಶೀಲಿಸುವ ಕಾರ್ಯವು ಇಲಾಖೆ ಅಧಿಕಾರಿಗಳಿಂದ ಭರದಿಂದ ಸಾಗುತ್ತಿದ್ದು, ಈ ಪ್ರಕ್ರಿಯೆಯು 31 ಮಾರ್ಚ್ 2024ರ ಒಳಗಾಗಿ ಮುಗಿಯಲಿದ್ದು, ಇವುಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲಾಗುವುದು ಎಂದರು.

Categories
ಕೊಪ್ಪ ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

– ಬಾಲಕನ ಮೇಲೆ ಬೀದಿ ನಾಯಿ ದಾಳಿ!
– ಚಿಕ್ಕಮಗಳೂರು ನಗರದಲ್ಲಿ ನಡೆದ ಘಟನೆ
• ಮೂಡಿಗೆರೆ: ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ
• ಶೃಂಗೇರಿ: ಬೆಳಗ್ಗೆ ಭೀಕರ ಅಪಘಾತ: ಟ್ರಾಫಿಕ್ ಜಾಮ್
• ಕೊಪ್ಪ: ಮರ ಕಡಿದು ಮಂಗನ ಕಾಯಿಲೆ ಬಂತು!

NAMMUR EXPRESS NEWS
ಚಿಕ್ಕಮಗಳೂರು: ಬೀದಿ ನಾಯಿಗಳ ಕಾಟ ಎಲ್ಲೆಡೆ ಹೆಚ್ಚಾಗಿದೆ. ಇದೀಗ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಆದಿಶಕ್ತಿ ನಗರದಲ್ಲಿ ನಡೆದಿದೆ. ಮುಜಾಮಿಲ್(8) ಬೀದಿ ನಾಯಿ ದಾಳಿಗೆ ಒಳಗಾದ ಬಾಲಕ. ರಸ್ತೆಯಲ್ಲಿ ಬರುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿದ್ದು, ತಕ್ಷಣವೇ ಸ್ಥಳಿಯರಿಂದ ಬಾಲಕನ ರಕ್ಷಣೆ ಮಾಡಲಾಗಿದೆ. ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬಾಲಕನಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ: ಅರೆಸ್ಟ್

ಮೂಡಿಗೆರೆ: ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕರ ಕಣ್ಣಿಗೆ ಖಾರದ ಪುಡಿ ಎರಚಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನ್ಸರ್, ಖಲಂದರ್, ಶೈನಿಂಗ್ ಕುಮಾರ್, ಆಶ್ರಫ್, ಉಮೇಶ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಸಮೀಪದ ಹೆಬ್ಬಾರಟ್ಟಿ ಗ್ರಾಮದಲ್ಲಿ 15/02/2024 ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಅನಂತರಾಮ್ ಹೆಬ್ಬಾರ್ ಎಂಬವರ ಮನೆಗೆ ನುಗ್ಗಿದ ನಾಲ್ವರು ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ಹಣ ನೀಡುವಂತೆ ಬೆದರಿಸಿದ್ದಾರೆ.

ಬಳಿಕ ಮನೆಯಲ್ಲಿದ್ದ 5 ಲಕ್ಷ ರೂ. ಹಾಗೂ ಮಹಿಳೆಯ ಕೊರಳಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ದೋಚಿದ್ದಾರೆ. ಈ ವೇಳೆ ಮನೆ ಮಾಲೀಕರನ್ನು ಬಿಡಿಸಲು ಬಂದ ಕೆಲಸಗಾರ ಮಾಣಿಭಟ್ಟ ಎಂಬವರ ಕೈಯನ್ನು ದರೋಡೆಕೋರರು ಕಡಿದಿದ್ದಾರೆ. ಇತ್ತ ಮನೆಯವರು ಕೂಗಾಡುತ್ತಿದ್ದಂತೆ ಅಕ್ಕಪಕ್ಕದ ತೋಟಗಳಲ್ಲಿದ್ದ ಕಾರ್ಮಿಕರು ಮನೆ ಬಳಿ ಆಗಮಿಸುವಷ್ಟರಲ್ಲಿ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆದರೆ ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಓಡಿ ಹೋಗಿದ್ದು, ಓರ್ವ ಆರೋಪಿ ಅರಮನೆ ತಲಗೂರು ಎಂಬ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಅವಿತು ಕುಳಿತಿದ್ದನ್ನು ಆತನನ್ನು ಹಿಂಬಾಲಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

 ಶೃಂಗೇರಿ: ಬೆಳ್ಳಂಬೆಳಗ್ಗೆ ಅಪಘಾತ

ಶೃಂಗೇರಿ ತಾಲ್ಲೂಕಿನ ಮೆಣಸೆ ಸಮೀಪದ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜು ಸಮೀಪ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನಿಂದ ಶೃಂಗೇರಿ‌ಗೆ ಬರುತ್ತಿದ್ದ ಸ್ವಿಫ್ಟ್ ಹಾಗೂ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಆಲ್ಟೋ ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ಹೊಡೆತಕ್ಕೆ ಎರಡೂ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಪೆಟ್ಟಾಗಿವೆ.

ಕೊಪ್ಪ: ಮರ ಕಡಿದು ಮಂಗನ ಕಾಯಿಲೆ ಬಂತು!

ಕೊಪ್ಪ: ಕೊಪ್ಪ ತಾಲ್ಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳು ಮಂಗನ ಕಾಯಿಲೆಯ ಕೇಂದ್ರ ಬಿಂದುವಾಗಿವೆ. ಅರಣ್ಯ ಇಲಾಖೆ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದೇ ರೋಗ ಹರಡಲು ಕಾರಣ ಎಂಬುದು ಬಹಿರಂಗವಾಗಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಒಟ್ಟು 26 ಪ್ರಕರಣ ಇದ್ದು, ಈ ಪೈಕಿ 24 ಪ್ರಕರಣ ಕೊಪ್ಪ ತಾಲ್ಲೂಕಿನಲ್ಲೆ ದಾಖಲಾಗಿವೆ. 79 ವರ್ಷ ವಯಸ್ಸಿನ ಒಬ್ಬರು ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್‌ಡಿ) ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಹರಡಿದ ಮಂಗಗಳಿಗೆ ಕಚ್ಚಿದ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತಿದೆ. ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆ.

Categories
ಕರಾವಳಿ ಕಾರ್ಕಳ

ಅಜೆಕಾರಿನಲ್ಲಿ ಫೆ.25ಕ್ಕೆ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ

ಅಜೆಕಾರಿನಲ್ಲಿ ಫೆ.25ಕ್ಕೆ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ
– ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಅವರ ತಂಡದಿಂದ ತಪಾಸಣೆ

NAMMUR EXPRESS NEWS
ಕಾರ್ಕಳ: ಕರೋನಾ ಕಾಲಘಟ್ಟದ ಬಳಿಕ ದೇಶದಲ್ಲಿ ಹೃದಯ ಘಾತಕ್ಕೆ ಬಲಿಯಾಗುವವರ ಸಂಖ್ಯೆ ತೀವ್ರ ಏರುಗತಿಯಲ್ಲಿ ಸಾಗುತ್ತಿದೆ‌.  ನಗರಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆಗಳು ಇವೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇಲ್ಲ. ಈ ಹಿನ್ನೆಲೆಯಲ್ಲಿ ಹೃದಯಕ್ಕೆ  ಸ್ಥಳೀಯ ಸಂಘಸಂಸ್ಥೆಗಳು  ಸೇರಿದಂತೆ ಈ  ಬೃಹತ್ ಹೃದಯ ತಪಾಸಣಾ ಶಿಬಿರಕ್ಕೆ ಕೈಜೋಡಿಸಿವೆ. ಅಜೆಕಾರು ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರು ಸಾರ್ವಜನಿಕ ಶಾರದಮಹೋತ್ಸವ ಸಮಿತಿ , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಅವರ ತಂಡದಿಂದ ನೇತೃತ್ವದಲ್ಲಿ ಫೆ.25 ರಂದು ಅಜೆಕಾರು ರಾಮಮಂದಿರದಲ್ಲಿ  ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ವು ಬೆ.8 ರಿಂದ ಮಧ್ಯಾಹ್ನ 12.30 ವರೆಗೆ ನಡೆಯಲಿದೆ.

ಅಜೆಕಾರು, ಹಿರ್ಗಾನ ಸುತ್ತಮುತ್ತಲಿನ ಜನರಿಗೆ ಅವಕಾಶ

ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರ್ಗಾನ , ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಪ್ರಯೋಜನ ಪಡೆಯಬಹುದಾಗಿದೆ.  ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೃದ್ರೋಗ ತಪಾಸಣಾ  ಶಿಬಿರಗಳನ್ನು ಆಯೋಜಿಸಿ   ಯಶಸ್ವಿ ಯಾಗಿರುವ ಮಂಗಳೂರಿನ ಡಾ| ಪದ್ಮನಾಭ ಕಾಮತ್ ತಂಡವೆ ನೇತೃತ್ವ ವಹಿಸಿದೆ.

ಯಾರು ಯಾರು ಭಾಗವಹಿಸಬಹುದು?

ಸಮಾನ್ಯ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದೊತ್ತಡ ದಿಂದ ಬಳಲುತ್ತಿರುವವರು,ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರು, ಹೃದಯ ಚಿಕಿತ್ಸೆಗೆ ಒಳಗಾದವರು, ಕೆಂಜಿನಿಟಲ್ ಹಾರ್ಡ್ ರಿಮಾಟಿಕ್ ಹಾರ್ಟ್ ತೊಂದರೆಗೆ ಒಳಗಾದರು, ಹೃದಯ ತೊಂದರೆ ಸಂಬಂದಿತ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ. ಫೆ.19 ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ  ನಿಗದಿ ಪಡಿಸಿದ ಸೋಮವಾರದಿಂದ ಗ್ರಾಮ‌ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರ ಗಳಲ್ಲಿ ಪೂರ್ವ ದಲ್ಲಿ ರಿಜಿಸ್ಟ್ರಾರ್ ಮಾಡಬಹುದು. ಇದರಿಂದಾಗಿ ಸಲಹೆ ಸೂಚನೆಗಳನ್ನು ವೇಗವಾಗಿ ಪಡೆಯಲು ಸಾಧ್ಯವಾಗಲಿದೆ. ಅಜೆಕಾರು ವ್ಯಾಪ್ತಿಯಲ್ಲಿ 4 ಇಸಿಜಿ ಕೇಂದ್ರಗಳಿದ್ದು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ.

ಶಿಬಿರದ ವಿಶೇಷ ಏನು?

ಪ್ರತಿಯೊಂದು ಗ್ರಾಮೀಣ ಅರೋಗ್ಯ ಶಿಬಿರವು  ತನ್ನದೇ ಆದ ಒಂದು ವೈಶಿಷ್ಟ್ಯತೆ ಹೊಂದಿದೆ. ನಾನು ಮಾಡುವ ಪ್ರಯತ್ನ ಕೇವಲ ವೈದ್ಯನಾಗಿ ಅಲ್ಲಾ . ಪ್ರತಿಯೊಂದು ಶಿಬಿರ ದಲ್ಲಿ ನಾನು ಸ್ವಯಂಸೇವಕನಾಗಿ ದುಡಿದಿದ್ದೇನೆ.  ಆರೋಗ್ಯವೇ ನಮ್ಮ ಆಸ್ತಿಯಾಗಿದೆ. ನಾವೆಲ್ಲರೂ ಜಾತಿ ಮತ ಧರ್ಮ ತೊರೆದು ಈ ಶಿಬಿರದಲ್ಲಿ ಭಾಗವಹಿಸೋಣ .

– ಡಾ |ಪದ್ಮನಾಭ ಕಾಮತ್  ಕೆ ಎಂಸಿ  ಮಂಗಳೂರು

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ -ಶಿವಮೊಗ್ಗ ಹೊಸ ಹೈವೇ: ಸಭೆ

ತೀರ್ಥಹಳ್ಳಿ -ಶಿವಮೊಗ್ಗ ಹೊಸ ಹೈವೇ: ಸಭೆ
– ಮಾ.1ರಂದು ಭೂ ಸ್ವಾಧೀನ ಸಂಬಂಧ ಅಹವಾಲು ಸಭೆ
– ಹೈವೇ ಅಧಿಕಾರಿಗಳು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ನೆಲ್ಲಿಸರದಿಂದ ತೀರ್ಥಹಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಈಗಾಗಲೇ ಶುರುವಾಗಲು ಎಲ್ಲಾ ಹಂತದ ಪ್ರಕ್ರಿಯೆ ಮುಗಿದಿದೆ. ಈ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಸ್ತೆಗಾಗಿ ಭೂಮಿಯ ಭೂಸ್ವಾದೀನಕ್ಕೆ ಒಳಪಡುವ ಭೂ ಮಾಲೀಕರು ಭೂ ಸ್ವಾದೀನಾಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಅಹವಾಲು ಮಂಡಿಸಲು ದಿನಾಂಕ 1 ನೇ ಮಾರ್ಚಿನಂದು ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ 1ರವರೆಗೆ ಸಮಯ ನಿಗದಿಪಡಿಸಲಾಗಿದೆ . ಸಂಬಂಧ ಪಟ್ಟವರು ದಯವಿಟ್ಟು ಭಾಗವಹಿಸಲು ಕೋರಿದೆ. ತೀರ್ಥಹಳ್ಳಿ ಕೊಪ್ಪ ಸರ್ಕಲ್ ಇಂದ ನೆಲ್ಲಿಸರವರೆಗೆ ಚತುಷ್ಪತ ರಸ್ತೆ ನಿರ್ಮಾಣ ಆಗಲಿದ್ದು ಅನೇಕರ ಭೂಮಿ ಹಾಗೂ ಮನೆ ಹೋಗಲಿದೆ. ಸರ್ಕಾರದ ಜನರಿಗೆ ಸೂಕ್ತ ಪರಿಹಾರ ನೀಡಬೇಕಿದೆ.

Categories
ಶಿವಮೊಗ್ಗ

ಆಗುಂಬೆ ಘಾಟಿಯಲ್ಲಿ ಸುರಂಗ ನಿರ್ಮಾಣ?!

ಆಗುಂಬೆ ಘಾಟಿಯಲ್ಲಿ ಸುರಂಗ ನಿರ್ಮಾಣ?!
– ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ
– ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್ ಕಾರ್
– 200 ಕೋಟಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ
– ರಾಘವೇಂದ್ರ, ಆರಗ ಮಾತಿಗೆ ಸೈ ಎಂದ ನಾಯಕ!

NAMMUR EXPRESS NEWS
ಶಿವಮೊಗ್ಗ: ಮಲೆನಾಡು ಕರಾವಳಿ ಸಂಪರ್ಕ ಬೆಸೆಯುವ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.  ರಾಷ್ಟ್ರೀಯ ಹೆದ್ದಾರಿ ಪ್ರಕಾರ ಮತ್ತು ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಆಗುಂಬೆ ಘಾಟಿಯಲ್ಲಿ ಆಗುತ್ತಿರುವ ಸಮಸ್ಯೆ ಹಾಗೂ ಅಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ನಂತರ ಸುರಂಗ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜ್ಞಾನೇಂದ್ರ ಅವರ ಕಾಳಜಿಗೆ ಫಲ

ಸಂಸದ ರಾಘವೇಂದ್ರ ಮೂಲಕ ಆರಗ ಜ್ಞಾನೇಂದ್ರ ಅವರು ಆಗುಂಬೆ ಘಾಟಿ ಸಮಸ್ಯೆ ಬಗ್ಗೆ ವಿಚಾರ ಪ್ರಸ್ತಾಪ ಮಾಡುತ್ತಾರೆ. ಅಲ್ಲಿದ್ದ ಅಧಿಕಾರಿಗಳನ್ನು ನಿತಿನ್ ಗಡ್ಕರಿಯವರು ಕರೆದು ಆಗುಂಬೆ ಘಾಟಿ ವಿಚಾರ ಕೇಳುತ್ತಾರೆ,ತಕ್ಷಣವೇ ಅಧಿಕಾರಿಗಳು ತಮ್ಮಲ್ಲಿದ್ದ ನಕ್ಷೆ ಸಹಿತ ಮಾಹಿತಿಯನ್ನು ಗಡ್ಕರಿಯವರಿಗೆ ತೋರಿಸಿ ಶಾಸಕ ಜ್ಞಾನೇಂದ್ರರವರ ಅಪೇಕ್ಷೆಯನ್ನು ದಾಖಲೆಗಳ ಸಹಿತ ಕೇಂದ್ರ ಸಚಿವರ ಮುಂದಿಟ್ಟಿದ್ದಾರೆ. ಈಗಾಗಲೇ ನಡೆಸಿರುವ ಘಾಟಿ ಪರ್ಯಾಯ ರಸ್ತೆ ಕುರಿತಾದ ಪ್ರಯತ್ನಗಳ ಬಗ್ಗೆಯೂ ಚರ್ಚಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಡ್ಕರಿಯವರು ತಮ್ಮ ಭಾಷಣದಲ್ಲಿ ಜ್ಞಾನೇಂದ್ರರವರ ಮನವಿಯನ್ನು ಪ್ರಸ್ತಾಪಿಸಿ ಕೂಡಲೇ ಆಗುಂಬೆ ಘಾಟಿಗೆ ಪರ್ಯಾಯವಾಗಿ ಟೆನಲ್ (ಸುರಂಗ ಮಾರ್ಗ) ನಿರ್ಮಿಸಲು ಬೇಕಾದ ಪ್ರಾಜೆಕ್ಟಿನ ಅಧ್ಯಯನ ಮಾಡಿ ಶೀಘ್ರವೇ ಮಂಜೂರಾತಿ ಕೊಡುವ ಕಾರ್ಯ ಮಾಡಲಾಗುವುದು ಎಂದಿದ್ದಾರೆ.

200 ಕೋಟಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ

ಏಳು ಜಿಲ್ಲೆಗಳಿಗೆ ಸಂಬಂಧಿಸಿದ 6,200 ರೂ ಕೋಟಿ ಮೊತ್ತದ ಒಟ್ಟು 300 ಕಿ.ಮೀ ಉದ್ದದ ಒಟ್ಟು 18 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಉದ್ಘಾಟನೆ ಹಾಗೂ 2,138.30 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಿವಮೊಗ್ಗದಲ್ಲಿ ಚಾಲನೆ ನೀಡಿದರು. ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್ ಕಾರ್ ಯೋಜನೆಯನ್ನು ಸಂಸದ ರಾಘವೇಂದ್ರ ಗಮನಕ್ಕೆ ತಂದಿದ್ದಾರೆ. ಇದೇ ಸೇರಿದಂತೆ ಈ ಭಾಗದ ಹಲವು ಯೋಜನೆಗಳನ್ನು 2028 ರೊಳಗೆ ಪೂರ್ಣ ಗೊಳಿಸಲಾಗುವುದು. ಜೊತೆಗೆ ತುಮಕೂರು- ಶಿವಮೊಗ್ಗದ ನಡುವೆ ನಡೆಯುತ್ತಿರುವ ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. 2024 ರ ಕೊನೆಯಲ್ಲಿ ಇದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು

Categories
ಕೃಷಿ ಮಾಹಿತಿ ಶಿವಮೊಗ್ಗ

20 ವರ್ಷದೊಳಗಿನ ಅಡಿಕೆ ಮರಗಳಿಗೆ ರೋಗ ಬರುತ್ತೆ ಹುಷಾರ್!

20 ವರ್ಷದೊಳಗಿನ ಅಡಿಕೆ ಮರಗಳಿಗೆ ರೋಗ ಬರುತ್ತೆ ಹುಷಾರ್!
– ಹಿಂಗಾರ ಒಣಗುವ ರೋಗ, ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆ: ಅಡಕೆ ಬೆಳೆಗಾರರಿಗೆ ಸೂಚನೆ
– ಏನಿದು ಅಡಿಕೆಗೆ ಮತ್ತೊಂದು ರೋಗ…?

NAMMUR EXPRESS NEWS
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹಿಂಗಾರ ಒಣಗುವ ರೋಗ ಮತ್ತು ಹಿಂಗಾರ ತಿನ್ನುವ ಹುಳುವಿನ ಬಾದೆ ಹೆಚ್ಚಾಗಿ ಕಂಡುಬರುತ್ತಿದ್ದು, ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕೆಂದು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಿಂಗಾರದಲ್ಲಿ ಗಂಡು ಹೂಗಳ ಎಸಳುಗಳ ಹಳದಿ ಆಗುವಿಕೆ ಹಿಂಗಾರ ಒಣಗುವ ರೋಗದ ಮೊದಲ ಲಕ್ಷಣ. ಹಳದಿ ಬಣ್ಣ ಎಸಳುಗಳ ತುದಿಯಿಂದ ಪ್ರಾರಂಭವಾಗಿ ಹಿಮ್ಮುಖವಾಗಿ ಎಡಭಾಗಕ್ಕೆ ಮುಂದುವರೆಯುತ್ತದೆ. ನಂತರ ಎಸಳುಗಳು ಕಂದು ಬಣ್ಣಕ್ಕೆ ತಿರುಗಿ ಒಣಗ ತೊಡಗುತ್ತವೆ. ಈ ಸ್ಥಿತಿಯನ್ನು ಡೈ ಬ್ಯಾಕ್ ಎನ್ನಲಾಗುತ್ತದೆ. ಎಸಳುಗಳ ಹಳದಿಯಾಗುವಿಕೆ ಮತ್ತು ಕಂದಾಗುವಿಕೆ ಮುಂದುವರಿಯದಂತೆ ಹಣ್ಣು ಹೂಗಳು ಉದುರತೊಡಗುತ್ತದೆ. ನಂತರ ರೋಗ ಇಡಿ ಹಿಂಗಾರಕ್ಕೆ ಹರಡಿ ಅಂತಹ ಹಿಂಗಾರಗಳು ಸಾಯುತ್ತವೆ. ರೋಗಪೀಡಿತ ಹಿಂಗಾರಗಳಲ್ಲಿ ಪರಾಗಸ್ಪರ್ಶಕ್ರಿಯೆ ಕಡಿಮೆಯಾಗುವುದರಿಂದ ಎಳೆ ಕಾಯಿಗಳು ಉದುರುತ್ತವೆ. ಇಂತಹ ರೋಗದ ಚಿಹ್ನೆಗಳು ಎಲ್ಲಾ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಹೇಳಿದ್ದಾರೆ.

20 ವರ್ಷದೊಳಗಿನ ಮರಗಳಲ್ಲಿ ಸಮಸ್ಯೆ: ಹಿಂಗಾರ ತಿನ್ನುವ ಹುಳುವಿನ ಬಾಧೆ 20 ವರ್ಷದ ಒಳಗಿನ ಮರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹುಳುಗಳು ಹಿಂಗಾರದ ಹೊಳಹುಕ್ಕು ಬಲೆಗಳನ್ನು ನೇಯ್ದುಕೊಂಡು ಗಂಡು ಮತ್ತು ಹೆಣ್ಣು ಹೂಗಳನ್ನು ತಿನ್ನುತ್ತವೆ. ಹೂ ಅರಳುವ ಮೊದಲೇ ಅವುಗಳನ್ನು ತಿನ್ನುವುದರಿಂದ ಹೊಂಬಾಳೆ ಮೇಲೆ ಒತ್ತಡ ಬರದೆ ಹಿಂಗಾರ ಬಿಚ್ಚಿಕೊಳ್ಳುವುದಿಲ್ಲ. ಸಿಂಗಾರದ ಎಸಳುಗಳನ್ನು ಸೇರಿಸಿಕೊಂಡು ಬಲೆ ನೇಯ್ದು ಹೂಗಳನ್ನು ತಿಂದು ಹಿಕ್ಕಿಗಳು ಅಲ್ಲಿಯೇ ವಿಸರ್ಜಿಸುವುದರಿಂದ ಹಿಂಗಾರ ಕೊಳೆಯುವುದಲ್ಲದೆ ಹುಳು ಸುರಂಗ ಮಾಡಿದ ಜಾಗಗಳಿಂದ ಅಂಟು ದ್ರವ ಹೊರಕ್ಕೆ ಬರುತ್ತದೆ. ಹಾನಿ ಗಿಡದ ಹಿಂಗಾರದಲ್ಲಿ ನೆಯ್ದು ಬಲೆಗಳಿಂದ ಪರಾಗಸ್ಪರ್ಶಕ್ಕೆ ಅಡ್ಡಿ ಉಂಟಾಗುವುದಲ್ಲದೆ ಕಾಯಿ ಕಚ್ಚುವುದಿಲ್ಲ. ತೀವ್ರವಾಗಿ ಕೀಟ ಬಾಧಿಸಿದ ತೋಟಗಳಲ್ಲಿ ಎಳೆಯ ಕಾಯಿಗಳಲ್ಲಿಯೂ ಸದಾ ಇದರಿಂದಾದ ಹಾನಿ ಕಾಣಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Categories
ತೀರ್ಥಹಳ್ಳಿ

ಸರ್ಕಾರಿ ಜೂನಿಯರ್ ಕಾಲೇಜಿನ ಗೇಟಿಗೆ ಬೀಗ ಹಾಕಲ್ಲ!

ಸರ್ಕಾರಿ ಜೂನಿಯರ್ ಕಾಲೇಜಿನ ಗೇಟಿಗೆ ಬೀಗ ಹಾಕಲ್ಲ!
– ಸುತ್ತಮುತ್ತ ಪುಂಡಪೋಕರಿಗಳ, ಗಾಂಜಾ ಸೇವನೆಯ ಅಡ್ಡ
– ಕಾಲೇಜು ಆಡಳಿತ ಮಂಡಳಿ ತಕ್ಷಣ ಗಮನಿಸಲಿ!

NAMMUR EXPRESS NEWS
ತೀರ್ಥಹಳ್ಳಿ: ಸಾವಿರಾರು ವಿದ್ಯಾರ್ಥಿಗಳ ಜೀವನ ಉಜ್ವಲವಾಗಲು ಕಾರಣವಾಗಿರುವ ತೀರ್ಥಹಳ್ಳಿಯ ಪ್ರತಿಷ್ಠಿತ ಜೂನಿಯರ್ ಕಾಲೇಜಿನ ಹೊರ ಗೇಟುಗಳು ಸದಾ ತೆರೆದಿರುವುದು ಇದೀಗ ಪುಂಡಪೋಕರಿಗಳಿಗೆ ಕೆಟ್ಟ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಪುಂಡಪೋಕರಿಗಳು, ಕುಡುಕರು, ಗಾಂಜಾ ಸೇವನೆಯ ಅಡ್ಡವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದು ತಕ್ಷಣ ಆಡಳಿತ ಗಮನ ವಹಿಸಬೇಕಿದೆ.

ಅನೈತಿಕ ಚಟುವಟಿಕೆಗಳ ತಾಣ: ಸಂಜೆ ಯಾಗುತ್ತಿದ್ದಂತೆ ಕುಡುಕರು ಕಾಲೇಜ್ ಮೈದಾನದಲ್ಲಿ ಕುಡಿದು ಅಲ್ಲೇ ಮೂತ್ರ ವಿಸರ್ಜನೆ, ಮಾಡಿ ಗಬ್ಬುನಾರುತ್ತಿದೆ, ಗಾಂಜಾ ಸೇವನೆಗೆ ಕೂಡ ಬಳಸಿಕೊಳ್ಳುತ್ತಿದ್ದಾರೆ. ಕೆಲ ಕುಡುಕರು ಕಾಲೇಜ್ ಮೈದಾನವನ್ನೆ ಮನೆಯನ್ನಾಗಿಸಿ ಕೊಂಡು ರಾತ್ರಿ ಅಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟವರು ತಕ್ಷಣ ಗಮನಿಸಿ: ತಾಲೂಕಿನ ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕಾಲೇಜಿಗೆ ಸಮರ್ಪಕ ಗೇಟ್ ಇಲ್ಲದಿರುವುದು, ಸಂಜೆ ಆಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗವಾಗಿ ಮಾರ್ಪಾಟಾಗಿದೆ. ಕಾಲೇಜಿನ ಈ ದುಸ್ಥಿತಿ ಕಂಡೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರಕಾರದ ಅಧೀನದಲ್ಲಿ ಬರುವ ಈ ಜಾಗ ಈಗ ಹಾಳಾಗುತ್ತಿರುವುದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಸಂಬಂಧಪಟ್ಟವರು ತಕ್ಷಣ ಈ ಬಗ್ಗೆ ಗಮನಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.