Categories
ತೀರ್ಥಹಳ್ಳಿ

ಗ್ಯಾರಂಟಿಯನ್ನು 420 ಅಂದವರು ಈಗ ಬ್ಯಾನರ್ ಹಾಕಿದರು!

ಗ್ಯಾರಂಟಿಯನ್ನು 420 ಅಂದವರು ಈಗ ಬ್ಯಾನರ್ ಹಾಕಿದರು!
– ಯೋಜನೆಯನ್ನು ಒಪ್ಪಿಕೊಂಡ ಆರಗ.!?
– ಲೇವಡಿ ಮಾಡಿದ ಅಮ್ರಪಾಲಿ ಸುರೇಶ್

NAMMUR EXPRESS NEWS
ತೀರ್ಥಹಳ್ಳಿ: ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೇವಲ ಓಟಿಗಾಗಿ ಜನರ ಮುಂದೆ ಕಾಂಗ್ರೆಸ್ ಗ್ಯಾರಂಟಿಯನ್ನು 420 ಕಾರ್ಡ್ ಎಂದು ಜರಿದು ಜನರ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆರಗ ಇಂದು ತಾವೇ ಮುಂದೆ ನಿಂತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ತಮ್ಮ ದೊಡ್ಡ ಪೋಟೋ ಬಳಸಿದ್ದಾರೆ. ಜತೆಗೆ ಜನರನ್ನು ಸಮಾವೇಶಕ್ಕೆ ಕಳಿಸಿದ್ದು ಗಮನಿಸಿದರೆ ಇಂದು ಕಾಂಗ್ರೆಸ್ ಗ್ಯಾರಂಟಿ ಮಾಡಿರುವ ಜನಪರ ಯೋಜನೆಯನ್ನು ಇವತ್ತು ಒಪ್ಪಿಕೊಂಡಿದ್ದಾರೆ ಎನಿಸುತ್ತಿದೆ. ಇನ್ನಾದರೂ ಆರಗ ಕಾಂಗ್ರೆಸ್ಸಿನ ಜನಪರ ಯೋಜನೆಗಳು ಜನರನ್ನು ಹೇಗೆ ತಲುಪುತ್ತದೆ ಎಂಬುದನ್ನು ಅರಿತು ಅದರಿಂದ ಜನರಿಗಾಗುವ ಉಪಯೋಗಳನ್ನು ಅರ್ಥಮಾಡಿಕೊಂಡು ಮಾತಾಡಬೇಕು ಎಂದು ಕಾಂಗ್ರೆಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್ ಹೇಳಿದ್ದಾರೆ.

Categories
ಬೆಂಗಳೂರು ರಾಜ್ಯ

ರಾಜ್ಯದಲ್ಲಿ ಸುಡು ಬಿಸಿಲು..!

ರಾಜ್ಯದಲ್ಲಿ ಸುಡು ಬಿಸಿಲು..!
– ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳ
– ಮಳೆ ಕೊರತೆ: ತೇವಾಂಶ ಕುಸಿತ, ಬಿಸಿ ಹವೆ
– ಎಳೆ ನೀರು, ತಂಪು ಪಾನೀಯಗಳಿಗೆ ಡಿಮ್ಯಾಂಡ್

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಗಿಂತ ಗರಿಷ್ಠ ಉಷ್ಣಾಂಶ ಏರಿಕೆಯಾಗಿದೆ. ಇದರಿಂದ ಜನ ಜಾನುವಾರು ತತ್ತರಿಸುವಂತಾಗಿದೆ. ಅಲ್ಲದೆ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಇದೆ. ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಭಾರಿ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. ಆಕಾಶವು ಶುಭ್ರವಾಗಿರುವುದರಿಂದ ತಾಪ ಹೆಚ್ಚಳವಾಗಿದೆ.

ಗರಿಷ್ಠ ಉಷ್ಣಾಂಶದ ಜೊತೆಗೆ ಕನಿಷ್ಠ ಉಷ್ಣಾಂಶದಲ್ಲಿಯೂ ಬಾರಿ ಏರಿಕೆ ಕಂಡು ಬಂದಿದೆ. ಗರಿಷ್ಠ ಮೂರು ಡಿಗ್ರಿ ಅಧಿಕ : ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ, ಗುರುವಾರ ಬಾದಾಮಿಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಅದೇ ರೀತಿ ಮಂಡ್ಯ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಡಿಕೆ ಪ್ರಮಾಣಕ್ಕಿಂತ ತಲಾ ಮೂರು ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾದ ಬಗ್ಗೆ ವರದಿಯಾಗಿದೆ. ಉಳಿದಂತೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ, ಬಾಗಲಕೋಟೆ, ಧಾರವಾಡ,ಹಂಪಿ, ಹೊನ್ನಾವರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು ವಾಡಿಕೆ ಪ್ರಮಾಣಕ್ಕಿಂತ ತಲಾ ಎರಡು ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. ಸದಾ ತಣ್ಣಗಿರುತ್ತಿದ್ದ ಮಲೆನಾಡು ಭಾಗದಲ್ಲಿ ಕೂಡ ಬಿಸಿಲು ಹೆಚ್ಚಾಗಿದೆ. ಇದರಿಂದ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ.

ಇನ್ನು ಮುಂದೆ ಎಳನೀರು ಸಿಗುವುದೇ ಕಷ್ಟ

ಬಿಸಿಲು ಹೆಚ್ಚಳ ಹಿನ್ನೆಲೆ ಎಳೆನೀರಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚುತ್ತಿದೆ. ತೋಟಗಳಲ್ಲಿ ಎಳನೀರು ಪ್ರಮಾಣವೂ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚುತ್ತಿದೆ. ಎಳನೀರು ವ್ಯಾಪಾರಿಗಳು ಒಂದು ಸಾವಿರ ಎಳನೀರಿಗೆ ₹15 ಸಾವಿರದಿಂದ ₹17 ಸಾವಿರ ದರದಲ್ಲಿ ಖರೀದಿಸುತ್ತಾರೆ. ರೈತರು ಒಂದು ಸಾವಿರ ಎಳನೀರಿಗೆ 100 ಎಳೆನೀರನ್ನು ಉಚಿತವಾಗಿ ವ್ಯಾಪಾರಿಗಳಿಗೆ ನೀಡಬೇಕು. ರೈತರಿಗೆ ಒಂದು ಸಾವಿರ ಎಳನೀರು ಮಾರಾಟ ಮಾಡಿದಾಗ ₹13,500 ಸಿಗುತ್ತದೆ. ತೆಂಗಿನ ಕಾಯಿಗಿಂತ ಎಳನೀರು ಮಾರಾಟದಲ್ಲೇ ಲಾಭ ಹೆಚ್ಚು ಎನ್ನುತ್ತಾರೆ ರೈತರು.

ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಚಿಲ್ಲರೆ ಮಾರಾಟಗಾರರು ವ್ಯಾಪಾರಿಗಳಿಂದ ಒಂದು ಎಳೆನೀರಿಗೆ ₹23 ರಿಂದ ₹25 ದರದಲ್ಲಿ ಖರೀದಿಸಿ ತಂದು ಮಾರುತ್ತಾರೆ. ಚಿಲ್ಲರೆಯಾಗಿ ಒಂದು ಎಳನೀರಿಗೆ ₹35 ಬೆಲೆ ಇದೆ. ಕೆಲ ವ್ಯಾಪಾರಿಗಳು ಒಮ್ಮೆಗೆ ಸುಮಾರು 6 ಸಾವಿರ ಎಳನೀರನ್ನು ಒಟ್ಟುಗೂಡಿಸಿ ಪಿಕಪ್ ವಾಹನದಲ್ಲಿ ಮಂಗಳೂರಿನ ಕಡೆಗೆ ಕೊಂಡೊಯ್ಯುತ್ತಾರೆ. ಕಾರ್ಕಳ, ಮೂಡಬಿದರೆ, ಮಣಿಪಾಲ ಮುಂತಾದೆಡೆ ಎಳನೀರಿಗೆ ಹೆಚ್ಚಿನ ಬೇಡಿಕೆಯಿದೆ. ಅಲ್ಲಿ ನೂರು ಎಳನೀರಿಗೆ ₹3000 ಬೆಲೆಯಿದೆ. ಎಳನೀರು ಕೆಡವುವ, ವಾಹನದ ಖರ್ಚು ಮುಂತಾದವುಗಳನ್ನು ಕಳೆದು ಒಂದು ಎಳನೀರಿಗೆ ₹4 ರಿಂದ ₹5 ಲಾಭ ದೊರೆಯುತ್ತದೆ. ಮುಂಬೈಗೆ ಎಳನೀರು ಕಳಿಸುವ ವ್ಯಾಪಾರಿಗಳು ಒಂದು ಎಳನೀರಿಗೆ ₹28 ರಿಂದ ₹30 ದರದಲ್ಲಿ ಎಳೆನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಅವರಿಗೆ ಎಳೆನೀರು ನೀಡುತ್ತಿರುವುದರಿಂದಲೂ ಚಿಲ್ಲರೆ ವ್ಯಾಪಾರಿಗಳಿಗೆ ಎಳನೀರು ದೊರೆಯುವುದು ತುಸು ಕಷ್ಟವಾಗಿದೆ.

Categories
ತೀರ್ಥಹಳ್ಳಿ

ಗಡಿಕಲ್ಲಿನಲ್ಲಿ ಪಾಂಚಜನ್ಯ ಯುವ ವೇದಿಕೆ ವಾರ್ಷಿಕೋತ್ಸವ.!

ಗಡಿಕಲ್ಲಿನಲ್ಲಿ ಪಾಂಚಜನ್ಯ ಯುವ ವೇದಿಕೆ ವಾರ್ಷಿಕೋತ್ಸವ.!
– ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ
– ಫೆ.24ರಂದು ಗಡಿಕಲ್ ಸರ್ಕಲಿನಲ್ಲಿ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ: ಪಾಂಚಜನ್ಯ ಯುವ ವೇದಿಕೆ, ಗಡಿಕಲ್ ಸಂಘದ 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ :24-02-2024 ರ ಶನಿವಾರ ಗಡಿಕಲ್ ಸರ್ಕಲ್ ನಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಥಳೀಯ ಶಾಲೆಗಳಲ್ಲಿ 7ನೇ ತರಗತಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ 5:30ರಿಂದ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಶಾಸಕ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಪಾಂಚಜನ್ಯ ಯುವ ವೇದಿಕೆ ಅಧ್ಯಕ್ಷರಾದ ಚೇತನ್ ಗಡಿಕಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸನ್ಮಾನಿತರಿಗೆ ಶಾಸಕ ಟಿ ಡಿ ರಾಜೇಗೌಡ ಅವರು ಸನ್ಮಾನಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಎಸ್ಎನ್ ರಾಮಸ್ವಾಮಿ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ, ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ಮಹಾಮಂಡಳಿ ನಿರ್ದೇಶಕರಾದ ದಿನೇಶ್ ಹೊಸೂರು, ಬಿಜೆಪಿ ತಾಲೂಕು ಅಧ್ಯಕ್ಷ ನವೀನ್ ಹೆದ್ದೂರು, ಗ್ರಾಮ ಪಂಚಾಯತ್ ಸದಸ್ಯರಾದ ಧನ್ಯಶ್ರೀ ವಿಶ್ವ, ಸರೋಜ ನಾಗಪ್ಪ ಗೌಡ, ಬಿ ಜಿ ರವೀಂದ್ರ ಗಣಪತಿಕಟ್ಟೆ, ನಾಗರಾಜ್ ಟಿ ಎಸ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶಿವಶಂಕರ್ ಗಣಪತಿಕಟ್ಟೆ, ಮೆಸ್ಕಾಂ ಕಿರಿಯ ಇಂಜಿನಿಯರ್ ದೇವಪ್ಪ ಕೋರಿ, ನಿವೃತ್ತ ಶಿಕ್ಷಕ ವಿದ್ಯಾನಂದ ಕುಮಾರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 7 ರಿಂದ ಪ್ರಾರಂಭವಾಗಲಿದೆ. ಎಲ್ಇಡಿ ಪರದೆ ಅಳವಡಿಸಿದ ವಿಶಾಲವಾದ ವೇದಿಕೆಯಲ್ಲಿ ಸರಿಗಮಪ ಮತ್ತು ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯದ ಹೆಸರಾಂತ ಕಲಾವಿದರನ್ನೊಳಗೊಂಡ 100% ಮ್ಯಾನುವಲ್ ಸಂಗೀತದೊಂದಿಗೆ ವಿಶೇಷವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ರಿದಮ್ ಲೈವ್ ಮ್ಯೂಸಿಕ್ ತಂಡದಿಂದ ಅಮೋಘ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸರ್ವರನ್ನು ಸ್ವಾಗತಿಸಲಾಗಿದೆ.

Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿಗೂ ಕಾಲಿಟ್ಟ ಮಂಗನ ಕಾಯಲೆ!

ಕರಾವಳಿಗೂ ಕಾಲಿಟ್ಟ ಮಂಗನ ಕಾಯಲೆ!
– ಉಡುಪಿಯಲ್ಲಿ ಈ ವರ್ಷದ ಮೊದಲ ಮಂಗನ ಕಾಯಿಲೆ ಪ್ರಕರಣ ದಾಖಲು
– ರಾಜ್ಯದಲ್ಲಿ ಈವರೆಗೆ 117 ಮಂದಿಗೆ ಪಾಸಿಟಿವ್: 3 ಮಂದಿ ಸಾವು

NAMMUR EXPRESS NEWS
ಉಡುಪಿ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು ಶುಕ್ರವಾರ ಉಡುಪಿಯಲ್ಲಿ 1 ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಉಡುಪಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದೆ. ರಾಜ್ಯದಲ್ಲಿ ಈವರೆಗೆ 117 ಮಂದಿಗೆ ಪಾಸಿಟಿವ್ ಬಂದಿದ್ದು, 82 ಮಂದಿ ಗುಣಮುಖರಾಗಿದ್ದಾರೆ 3 ಮಂದಿ ಮರಣ ಹೊಂದಿದ್ದಾರೆ. 19 ಸಕ್ರಿಯ ಪ್ರಕರಣಗಳಿವೆ. ವಂಡ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 58 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ಈ ಭಾಗದ ಆಸುಪಾಸಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ.ಕುಂದಾಪುರ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. 2019ರಲ್ಲಿ ಒಂದು ಪ್ರಕರಣ ಕಂಡುಬಂದಿತ್ತು. ಆ ಬಳಿಕ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಐ. ಗಡಾದ್ ಹೇಳಿದ್ದಾರೆ.

Categories
ಬೆಂಗಳೂರು ರಾಜ್ಯ

ಗ್ಯಾರಂಟಿ ಸೇವೆಗಾಗಿ 1 ಲಕ್ಷ ಸ್ವಯಂ ಸೇವಕರು!

ಗ್ಯಾರಂಟಿ ಸೇವೆಗಾಗಿ 1 ಲಕ್ಷ ಸ್ವಯಂ ಸೇವಕರು!
– ಮನೆಮನೆಗೂ ತಲುಪಲಿವೆ ಸರಕಾರದ ಗ್ಯಾರಂಟಿ ಯೋಜನೆಗಳು
– ಸರ್ಕಾರಿ ಸೇವೆ ತಲುಪಿಸಲು ಸರ್ಕಾರದ ಮಾಸ್ಟರ್ ಪ್ಲಾನ್

NAMMUR EXPRESS NEWS
ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರ ನೇಮಕಾತಿಗಾಗಿ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಸ್ವಯಂ ಸೇವಕರ ನೇಮಕ ಮಾಡುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದ ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ಉದ್ಯೋಗ ಭಾಗ್ಯ ದೊರೆಯುವುದರ ಜೊತೆಗೆ ಎಲ್ಲಾ ಅರ್ಹ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರೆಯಲಿದೆ.

ಮನೆಮನೆಗೂ ಗ್ಯಾರಂಟಿ ಪ್ರಯೋಜನ

ರಾಜ್ಯದ ಬಡ ಹಾಗೂ ದುರ್ಬಲ ವರ್ಗದ ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು ಇನ್ನು ಹಲವಾರು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಐದು ಗ್ಯಾರಂಟಿ ಯೋಜನೆಗಳನ್ನ ರಾಜ್ಯದ ಮನೆಮನೆಗೂ ಸರಿಯಾದ ರೀತಿಯಲ್ಲಿ ತಲುಪಿಸಲು ಗ್ಯಾರಂಟಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರವು ನಿರ್ಧರಿಸಿದೆ.

ಯಾರು ಗ್ಯಾರಂಟಿ ಸ್ವಯಂ ಸೇವಕರಾಗಬಹುದು?

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಜನರಿಗೆ ಜಾರಿಗೆ ದೊರಕಿಸಿ ಕೊಡಲು ಗ್ಯಾರಂಟಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯ, ಆಶಾ ಕಾರ್ಯಕರ್ತರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳು ಗ್ಯಾರಂಟಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಗ್ಯಾರಂಟಿ ಸ್ವಯಂ ಸೇವಕರ ಕರ್ತವ್ಯವೇನು?

ಗ್ಯಾರಂಟಿ ಸ್ವಯಂ ಸೇವಕರಾಗಿ ನೇಮಕಗೊಂಡವರು ಫಲಾನುಭವಿಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅವರಿಗೆ ತಲುಪಿರುವ ಬಗ್ಗೆ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತ ಜನರ ಅಭಿಪ್ರಾಯ ಹಾಗೂ ಇದರ ಸದ್ಬಳಕೆ ಆಗುತ್ತಿರುವ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಗ್ಯಾರಂಟಿ ಸ್ವಯಂ ಸೇವಕರ ಕರ್ತವ್ಯವಾಗಿರುತ್ತದೆ. ಗ್ಯಾರಂಟಿ ಸ್ವಯಂ ಸೇವಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ಸಂಬಳದ ಜೊತೆಗೆ 10 ರಿಂದ 15 ದಿನಗಳ ಅವಧಿಯಲ್ಲಿ ಒಂದು ಬಾರಿ ಒಬ್ಬರಿಗೆ ಮಾತ್ರ 1000 ರೂಪಾಯಿಯಂತೆ ಪ್ರೋತ್ಸಾಹಧನ ನೀಡಲು ಸರ್ಕಾರವು ತೀರ್ಮಾನ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೃಹಲಕ್ಷ್ಮಿ ಅನುದಾನ ಬಳಕೆ

ಗ್ಯಾರಂಟಿ ಸ್ವಯಂ ಸೇವಕರ ಈ ಸಮೀಕ್ಷೆ ಕಾರ್ಯನ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು; ಪ್ರತಿಯೊಬ್ಬ ಸ್ವಯಂ ಸೇವಕರಿಗೆ 100 ರಿಂದ 120 ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ ಒಟ್ಟು 12 ಕೋಟಿಯಷ್ಟು ವೆಚ್ಚ ತಗುಲಲಿದ್ದು, ಗೃಹಲಕ್ಷ್ಮಿ ಯೋಜನೆಗಾಗಿ ಒದಗಿಸಲಾಗಿರುವ ಅನುದಾನದ ಮೊತ್ತದಲ್ಲಿ ಭರಿಸಲಾಗುವುದೆಂದು ತಿಳಿಸಲಾಗಿದೆ. ಸರಕಾರದ ಪಂಚ ಗ್ಯಾರಂಟಿಗಳ ಪೈಕಿ ‘ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಈಗಲೂ ಸಾಕಷ್ಟು ಗೊಂದಲಗಳು ಮುಂದುರೆದಿದ್ದು; ಲಕ್ಷಾಂತರ ಫಲಾನುಭವಿ ಮಹಿಳೆಯರಿಗೆ ಹಣ ಕೈಸೇರಿಲ್ಲ. ಈ ತೊಡಕು ನಿವಾರಣೆ ಮಾಡುವಲ್ಲಿ ಗ್ಯಾರಂಟಿ ಸ್ವಯಂ ಸೇವಕರು ಶ್ರಮಿಸಲಿದ್ದಾರೆ. ಅದೇ ರೀತಿ ಶಕ್ತಿ, ಯುವನಿಧಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸ್ವಯಂ ಸೇವಕರು ಶ್ರಮಿಸಲಿದ್ದಾರೆ ಎನ್ನಲಾಗುತ್ತಿದೆ.

Categories
ಉಡುಪಿ ಕರಾವಳಿ ಮಂಗಳೂರು

ಅಂಚೆ ಚೀಟಿಯಲ್ಲೂ ಬಂತು ಯಕ್ಷಗಾನ!

ಅಂಚೆ ಚೀಟಿಯಲ್ಲೂ ಬಂತು ಯಕ್ಷಗಾನ!
– ಸಾಂಪ್ರದಾಯಿಕ ಕಲೆಗೆ ರಾಷ್ಟ್ರೀಯ ಗೌರವ
– ಎಂಆರ್‌ಪಿಎಲ್‌ ಪ್ರಾಯೋಜಕತ್ವ
– ಯಕ್ಷಗಾನವೇ ವಿಷಯಾಧಾರಿತವಾಗಿ ಅಂಚೆ ಚೀಟಿ ಇದೇ ಮೊದಲು!

NAMMUR EXPRESS NEWS
ಮಂಗಳೂರು: ರಾಜ್ಯದ ಪ್ರಮುಖ ಜಾನಪದ ಕಲೆಯಾಗಿರುವ ಯಕ್ಷಗಾನ ವಿಶಿಷ್ಟ ಮತ್ತು ಪ್ರಾತಿನಿಧಿಕ ಸಾಂಪ್ರದಾಯಿಕ ಪ್ರದರ್ಶನ ಕಲೆಯಾಗಿದ್ದು, ಈ ಕಲೆಯ ಅಂಚೆ ಚೀಟಿ ಬಿಡುಗಡೆ ಮೂಲಕ ರಾಷ್ಟ್ರೀಯ ಮಟ್ಟದ ಗೌರವ ಸಾಮಾನ್ಯವಾಗಿ ರಾಜ್ಯ, ರಾಷ್ಟ್ರಮಟ್ಟದ ಸಾಧಕರು, ವಿಭಿನ್ನ ಕಲೆಗಳನ್ನು ಗುರುತಿಸಿ ಅಂಚೆ ಇಲಾಖೆ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದೆ. ಭಾರತೀಯ ಕಲೆಗಳಾದ ಕೂಚಿಪುಡಿ, ಭರತನಾಟ್ಯ ಸೇರಿದಂತೆ ಹಲವು ಕಲೆಗಳ ಅಂಚೆ ಚೀಟಿ ಈ ಹಿಂದೆಯೇ ಬಿಡುಗಡೆಯಾಗಿತ್ತು. ಆದರೆ ಕರಾವಳಿ ಕರ್ನಾಟಕದ ಕಲೆಯೊಂದು ಅಂಚೆ ಚೀಟಿಯಲ್ಲಿ ಬಿಡುಗಡೆಯಾಗುವುದು ಇದೇ ಮೊದಲು.

2017ರಲ್ಲಿ ಯಕ್ಷಗಾನ ಕವಿ ನಂದಳಿಕೆ ಮುದ್ರಣ್ಣನ ಅಂಚೆ ಚೀಟಿ, 2023ರ ಡಿಸೆಂಬರ್ನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ವನಿತೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರಿನ ಅಂಚೆ ಚೀಟಿಯೂ ಬಿಡುಗಡೆಗೊಂಡಿದೆ. ಯಕ್ಷಗಾನ ಮೇರು ಕಲಾವಿದರಾದ ಕರಾವಳಿ ಮೂಲದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರ ಕುರಿತ ಅಂಚೆ ಚೀಟಿಗಳು ಹೊರಬಂದಿವೆ. ಆದರೆ ಯಕ್ಷಗಾನವೇ ವಿಷಯಾಧಾರಿತವಾಗಿ ಅಂಚೆ ಚೀಟಿ ಇದುವರೆಗೆ ಬಂದಿರಲಿಲ್ಲ. ಈ ಹಿಂದೆ ವಿಶೇಷ ಅಂಚೆ ಯಕ್ಷಗಾನದ ಚೀಟಿಗಳನ್ನು ಅಂಚೆ ಇಲಾಖೆಯೇ ತನ್ನದೇ ಅನುದಾನದಲ್ಲಿ ಬಿಡುಗಡೆ ಮಾಡಿತ್ತು.

ಮೂರು ವಿಧದ ಅಂಚೆ ಚೀಟಿ: ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಅಂಚೆ ಇಲಾಖೆಯಲ್ಲಿ ಡೆಫಿನೆಟಿವ್, ಮೈ ಸ್ಟ್ಯಾಂಪ್, ಕಮ್ಮೆಮೊರೇಟಿವ್ ಸ್ಟ್ಯಾಂಪ್ ಎಂಬ ಮೂರು ವಿಧದಲ್ಲಿ ಸ್ಟ್ಯಾಂಪ್ ಬಿಡುಗಡೆ ಮಾಡುತ್ತದೆ. ಡೆಫಿನೆಟಿವ್ ಅಂದರೆ ಅಂಚೆ ಇಲಾಖೆಯ ಮಾಮೂಲು ಸ್ಟ್ಯಾಂಪ್, ವ್ಯಕ್ತಿಗತ ಅಂಚೆ ಚೀಟಿ ಬೇಕಾದರೆ 300ರೂ. ಕೊಟ್ಟು ವೈಯಕ್ತಿಕ ಚಿತ್ರವುಳ್ಳ 12 ಸ್ಟ್ಯಾಂಪ್ ಪಡೆದುಕೊಳ್ಳಬಹುದು. ಕಮ್ಮೊರೇಟಿವ್ ಸ್ಟಾಂಪ್ ಗಳನ್ನು ಮುದ್ರಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಬೇಕು. ಅಲ್ಲದೆ ವಿನ್ಯಾಸಕ್ಕೂ ಅಂಚೆ ಇಲಾಖೆ ಒಪ್ಪಿಗೆ ಸೂಚಿಸಬೇಕು.

ಒಂದು ಬಾರಿ ಮಾತ್ರ ಈ ವಿಶೇಷ ಅಂಚೆ ಚೀಟಿ ಮುದ್ರಣಗೊಳಿಸಬಹುದಾಗಿದೆ. 5ರೂ. ಬೆಲೆಯ 5 ಲಕ್ಷ ಅಂಚೆ ಚೀಟಿ: ಕೇಂದ್ರ ಸರಕಾರ ಸ್ವಾಮ್ಯದ ಎಂಆರ್ ಪಿಎಲ್ ಅಂಚೆ ಚೀಟಿ ಪ್ರಾಯೋಜಕತ್ವವನ್ನು ವಹಿಸಿದ್ದು, 5.30ಲಕ್ಷ ರೂ. ಮೊತ್ತವನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. ಈ ಮೊತ್ತದಲ್ಲಿ ಸುಮಾರು 5 ಲಕ್ಷದಷ್ಟು ಯಕ್ಷಗಾನ ಥೀಮ್‌ ಅಂಚೆ ಚೀಟಿ ಮುದ್ರಣಗೊಂಡು ಹೊರಬರಲಿದೆ. ಪ್ರತಿ ಅಂಚೆ ಚೀಟಿ 5 ರೂ. ಮುಖ ಬೆಲೆಯನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಮತ್ತೆ ಶವ ಪತ್ತೆ

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಮತ್ತೆ ಶವ ಪತ್ತೆ
– 3 ದಿನಗಳ ನಂತರ ನೀರಿನಿಂದ ಮೇಲೆ ಬಂದಿರುವ ಶಂಕೆ
– ತುಂಗಾ ನದಿಯಲ್ಲಿ ಪದೇ ಪದೇ ಸಾವು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಅಪರಿಚಿತರ ಶವವೊಂದು ಪತ್ತೆಯಾಗಿದೆ. ಸುಮಾರು ಮೂರು ದಿನಗಳ ಹಿಂದೆ ನೀರಿನಲ್ಲಿ ಬಿದ್ದು ತೇಲಿ ಬಂದಿರಬಹುದು ಅಥವಾ ನೀರಿನಿಂದ ಮೇಲೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾರು ಏನು ಎಂಬ ಬಗ್ಗೆ ಇನ್ನು ತಿಳಿಯಬೇಕಿದೆ. ಸುಮಾರು 45 ವರ್ಷದ ಪುರುಷ ಶವ ಇದಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ತುಂಗಾ ನದಿಯಲ್ಲಿ ಪದೇ ಪದೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

Categories
ಮಲ್ನಾಡ್ ಶಿವಮೊಗ್ಗ ಸಾಗರ

ಟಾಪ್ ನ್ಯೂಸ್ ಮಲ್ನಾಡ್

ಬೈಕಲ್ಲಿ ಹೋಗ್ತಿದ್ದವರ ಮೇಲೆ ಜೇನುನೊಣಗಳ ದಾಳಿ: 10 ಮಂದಿಗೆ ಪೆಟ್ಟು!
– ಹೊಸನಗರ ತಾಲೂಕಿನ ರಿಪ್ಪನ್​ ಪೇಟೆ ಸಮೀಪ ಮೂಗೂಡ್ತಿಯಲ್ಲಿ ಘಟನೆ
– ಒಮಿನಿ-ಟಿಪ್ಪರ್​ ಡಿಕ್ಕಿ, ಆರು ಮಂದಿ ಗಂಭೀರ
– ಯುವತಿಯನ್ನ‌ ಚುಡಾಯಿಸಿದವನ ವಿರುದ್ಧ‌ ಕೆಸ್
– ಡಕಾಯಿತಿಗೆ ಹೊಂಚು ಹಾಕುತ್ತಿದ್ದವರು ಅಂದರ್
– ಅಕ್ರಮ‌ ಗೋಮಾಂಸ ಮಾರಾಟ ಮತ್ತು ಸಾಗಾಣಿಕೆ

NAMMUR EXPRESS NEWS
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಗುಡ್ಡೆಕೊಪ್ಪ ಗ್ರಾಮದ ಬಳಿ ಟಿಪ್ಪರ್ ಹಾಗೂ ಒಮಿನಿ ಡಿಕ್ಕಿಯಾಗಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.‘ಕಾರಿನಲ್ಲಿ 4 ಜನ ಮಹಿಳೆಯರು, 2 ಮಂದಿ ಪುರುಷರು, 4 ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಪ್ರಯಾಣ ಮಾಡುತ್ತಿದ್ದರು.

ಬೈಕ್​ನಲ್ಲಿ ಹೋಗ್ತಿದ್ದವರ ಮೇಲೆ ಜೇನುನೊಣಗಳ ದಾಳಿ, 10 ಮಂದಿಗೆ ಪೆಟ್ಟು!

ರಿಪ್ಪನ್​ ಪೇಟೆ ಸಮೀಪ ಮೂಗೂಡ್ತಿಯಲ್ಲಿ ಜೇನುನೊಣಗಳು ಎದ್ದು ವಾಹನ ಸವಾರರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಜೇನು ಕಚ್ಚಿದೆ. ಒಬ್ಬರು ಗಂಭೀರವಾಗಿದ್ದಾರೆ. ಗಾಯಾಳುಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಓರ್ವರನ್ನ ಶಿವಮೊಗ್ಗದ ಆಸ್ಪತ್ರೆಗೆ
ರವಾನಿಸಲಾಗಿದೆ.

ಯುವತಿ ಚುಡಾಯಿಸಿದವನ ವಿರುದ್ಧ‌ ಕೇಸ್!

ಶಿವಮೊಗ್ಗ: 19 ವರ್ಷದ ಯುವತಿಯನ್ನ ಕಂಡು ಚುಡಾಯಿಸಿ, ಆಕೆಯ ಫೋಟೋವನ್ನು ಅಪ್ಲೋಡ್ ಮಾಡಿ ಅಪ್ಪನ ಮರ್ಯಾದೆ ತೆಗೆಯುತ್ತೇನೆ ಎಂಬ ಯುವಕನ ವಿರುದ್ಧ ಯುವತಿ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಕಲ್ಲಪ್ಪಕೇರಿಯಲ್ಲಿ ವಾಸವಾಗಿದ್ದು ಈಗ ಶಿವಮೊಗ್ಗದಲ್ಲಿಯೇ ಬೇರೆಡೆ ವಾಸವಾಗಿದ್ದರು. ಸೋಮವಾರ ಫೆ.19 ರಂದು ಯುವತಿ ತಮ್ಮ ಹಳೇ ಮನೆಯ ಬಳಿಯಿರುವ ಸ್ನೇಹಿತೆಯನ್ನ ಮಾತನಾಡಿಸಿಕೊಂಡು ಬರೋಣ ಎಂದು ಹೇಳಿ ಕಲ್ಲಪ್ಪನ ಕೇರಿಗೆ ಹೋಗಿದ್ದಾಗ ಸೀಗೆಹಟ್ಟಿಯ ರಮೇಶ್ ಎಂಬಾತ ನೋಡಿರುತ್ತಾನೆ. ಹಿಂಬಾಲಿಸಿಕೊಂಡು ಹೋದ‌ ಯುವಕ ಯುವತಿಯನ್ನ ಕಂಡು ತುಂಬ ಚೆನ್ನಾಗಿ‌ಕಾಣ್ತೀಯ ಎಂದು ಕೆಟ್ಟದೃಷ್ಠಿಯಿಂದ ನೋಡಿರುವುದಾಗಿ‌ ದೂರಿನಲ್ಲಿ ಆರೋಪಿಸಲಾಗಿದೆ. ನಂತರ ನಿನ್ನ ಫೋಟೋ ನನ್ನ ಬಳಿ ಇದೆ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವೆ. ನಿಮ್ಮಪ್ಪನ ಮಾನ ತೆಗೆಯುವೆ ಎಂದು ಗದರಿಸಿದ್ದಾನೆ‌. ಈ ಬಗ್ಗೆ ಯುವತಿ ದೊಡ್ಡೊಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಕಾಯಿತಿಗೆ ಹೊಂಚು ಹಾಕುತ್ತಿದ್ದವರು ಅಂದರ್!

ಶಿವಮೊಗ್ಗ: ಬ್ಯಾಟ್ (ಮಚ್ಚು) ಹಿಡಿದು ಡಕಾಯಿತಿಗಾಗಿ ಹೊಂಚು ಹಾಕುತ್ತಿದ್ದ ಐವರ ಪೈಕಿ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರದ ಮುಸೇಬ್ ಯಾನೆ ತಿಬ್ಬಲ್, ಕೆಳಗಿನ ತುಂಗ ನಗರದ ತೌಸಿಫ್ ಯಾನೆ ಸೋನು ಎಂಬುವರು ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದು ಮೂವರು ಪರಾರಿಯಾಗಿದ್ದಾರೆ. ಗಾಡಿಕೊಪ್ಪದ ಹರ್ಷ ಫರ್ನ್ ನಿಂದ ಪುರದಾಳ್ ಗೆ ಹೋಗುವ ರಸ್ತೆಯಲ್ಲಿ ಐದು ಜನ ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಮಧ್ಯರಾತ್ರಿ ಸುಮಾರಿಗೆ 11-30ರ ಸಮಯದಲ್ಲಿ ಈ ಘಟನೆ ನಡೆದಿದೆ.

ತುಂಗಾ ನಗರ ಪೊಲೀಸರಿಗೆ ಬಂದ ಪಕ್ಕ‌ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಮೂವರಾದ ಜಮೀರ್ ಅಹಮದ್, ಹಜ್ರತ್ ಹುಮಾನ್, ಜಾಫರ್ ಸಾಧಿಕ್ ಎಂಬುವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮುಸೇಬ್ ಯಾನೆ ತಿಬ್ಬಲ್ ಎಂಬ ಯುವಕ ಬ್ಯಾಟ್ ಹಿಡಿದುಕೊಂಡು ನಿಂತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸಿಕ್ಕಿಬಿದ್ದ ಮುಸೇಬ್ ಮತ್ತು ಸೋನುನನ್ನ‌ ವಿಚಾರಿಸಿದಾಗ ಡಕಾಯಿತಿಗಾಗಿ ಮಾರಕಾಸ್ತ್ರ ಮತ್ತು‌ ಖಾರದ ಪುಡಿ ಹಿಡಿಕೊಂಡಿರುವ ಬಗ್ಗೆ ಬಾಯಿ‌ಬಿಟ್ಟಿದ್ದಾರೆ. ಇಬ್ಬರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಅಕ್ರಮ‌ ಗೋಮಾಂಸ ಮಾರಾಟ ಮತ್ತು ಸಾಗಾಣಿಕೆ

ಸಾಗರ: ಸಾಗರ ಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗೋಮಾಂಸವೊಂದು ಪತ್ತೆಯಾಗಿದೆ.ಮೊಪೆಡ್ ವಾಹನದಲ್ಲಿ ಗೋವು ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನನ್ನ ಫಯಾಜ್ (48) ಎಂದು ಗುರುತಿಸಲಾಗಿದೆ. ಆರೋಪಿಯಿಂದ 15 ಕೆಜಿ ಗೋ ಮಾಂಸವನ್ನ ವಶಕ್ಕೆ ಪಡೆಯಲಾಗಿದೆ. ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲೂ ಗೋಮಾಂಸ ಕೇಸ್!

ಭದ್ರಾವತಿ: ಭದ್ರಾವತಿಯಲ್ಲಿ ಎಫ್ಐಆರ್ ಅದೇ ರೀತಿ ಭದ್ರಾವತಿಯಲ್ಲಿ ದನದ‌ ಕೊಟ್ಟಿಯಲ್ಲಿಯೇ ಶೆಡ್ ಮಾಡಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದ ಅಹ್ಮದ್ ಅಲಿ ಮತ್ತು‌ ಮುನಾವರ್ ಎಂಬುವರ ಮೇಲೆ ಸುಮೋಟೋ ಪ್ರಕರಣ ದಾಖಲಾಗಿದೆ

Categories
ಕರಾವಳಿ ರಾಜ್ಯ

ವೇಣೂರು ಬಾಹುಬಲಿ ಮೂರ್ತಿ ಮಹಾಮಜ್ಜನ ಸಂಭ್ರಮ!

ವೇಣೂರು ಬಾಹುಬಲಿ ಮೂರ್ತಿ ಮಹಾಮಜ್ಜನ ಸಂಭ್ರಮ!
– ಮಾ.1ರವರೆಗೂ ನಡೆಯಲಿರುವ ಮಹಾಮಸ್ತಕಾಭಿಷೇಕ
– ಶತಮಾನದ ಮೂರನೇ ಮಹಾಮಸ್ತಕಾಭಿಷೇಕ!

NAMMUR EXPRESS NEWS
ಬೆಳ್ತಂಗಡಿ : ವೇಣೂರಿನ ತಿಮ್ಮಣ್ಣ ಅಜಿಲರು 1604 ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಗುರುವಾರ ಸಂಜೆ 7 ಗಂಟೆಗೆ 108 ಕಲಶಗಳ ಅಭಿಷೇಕ ಆರಂಭಗೊಂಡಿತು. ಸರ್ವೇಶ್ ಜೈನ್ ಮತ್ತು ತಂಡದವರ ಸುಮಧುರ ಸಂಗೀತ ಅಭಿಷೇಕದ ಸಿಂಚನಕ್ಕೆ ಸಾಥ್ ನೀಡಿತು.

ಅಭಿಷೇಕದ ನಂತರ ಮೂರ್ತಿಯ ಜಿಡ್ಡು ತೆಗೆಯಲು ಕಷಾಯದಲ್ಲಿ ನೀರಿನ ಜಳಕ ನಡೆಯಿತು. ಪುಷ್ಪವೃಷ್ಟಿ, ಕನಕವೃಷ್ಟಿ ನಡೆದ ಬಳಿಕ ಬೃಹತ್ ಮಾಲೆಯನ್ನು ಮಹಾ ಮೂರ್ತಿಗೆ ತೊಡಿಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿಯೊಂದಿಗೆ ಮೊದಲ ದಿನದ ಮಹಾಭಿಷೇಕ ಸಂಪನ್ನಗೊಂಡಿತು. ಮೂಡುಬಿದರೆ ಡಾ. ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾರ್ಗದರ್ಶನ ನೀಡಿದರು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉಪಸ್ಥಿತರಿದ್ದರು. ಸಾವಿರಾರು ಮಂದಿ ಅಭಿಷೇಕವನ್ನು ಕಣ್ತುಂಬಿಸಿಕೊಂಡರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹೆಚ್ಚಾದ ಭೂಗಳ್ಳರ ಕೈಚಳಕ..!

ತೀರ್ಥಹಳ್ಳಿಯಲ್ಲಿ ಹೆಚ್ಚಾದ ಭೂಗಳ್ಳರ ಕೈಚಳಕ..!
– ತಾಲೂಕು, ಪಟ್ಟಣದಲ್ಲಿ ಹಲವು ಕೆರೆಗಳ ಒತ್ತುವರಿ
– ಕೆರೆ ನಿರ್ವಹಣೆ ಎಲ್ಲಿ?: ಕೈಕಟ್ಟಿ ಕುಳಿತಿರುವ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಮತ್ತು ಪಟ್ಟಣದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಹಲವಾರು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸದೆ ಕೈಕಟ್ಟಿ ಕುಳಿತಿರುವುದು ಇದೀಗ ಪರಿಸರ ನಾಶಕ್ಕೆ ಕಾರಣವಾಗಿದೆ. ಇನ್ನು ಕೆಲವು ಕೆರೆಗಳಲ್ಲಿ ಜಲಮೂಲಗಳ ನಾಶ, ಗಿಡಗಂಟಿ ತ್ಯಾಜ್ಯ ಸಮಸ್ಯೆಗಳಿಂದ ಸೊರಗಿವೆ. ನಿರ್ವಹಣೆ ಇಲ್ಲದೆ ಕೆರೆಗಳು ಹಾಳಾಗಿವೆ. ಕೆಲವೆಡೆ ಚರಂಡಿ ಕೊಳಕು ಕೆರೆಯ ಒಡಲಿಗೆ ಸೇರುತ್ತಿದೆ. ಇದರಿಂದ ಜನರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಕೆರೆಗಳ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಕ ಮಾಡುವುದರ ಮೂಲಕ ಕೆರೆಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು.

ಅಧಿಕಾರಿಗಳ ನಿರ್ಲಕ್ಷದಿಂದ ಹಲವೆಡೆ ಕೆರೆಗಳು ಒತ್ತುವರಿಯಾಗಿದೆ ಇನ್ನು ಕೆಲವೆಡೆ ಇರುವ ಕೆರೆಗಳು ಕಸದ ತೊಟ್ಟಿಯಂತಾಗಿದೆ. ಕೆರೆಯ ಒಂದು ಬದಿಯಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದು ನೀರನ್ನು ಮಲೀನಗೊಳಿಸುತ್ತಿದೆ. ಕೆರೆಗೆ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು ನೀರಿನ ಕೊಳೆತ ತ್ಯಾಜ್ಯ ದುರ್ನಾತ ಬೀರುತ್ತಿದೆ. ಕೆರೆಗಳ ರಕ್ಷಣೆಗೆ ಶಿಸ್ತು ಕ್ರಮ ಕೈಗೊಳ್ಳಿ : ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ಎಲ್ಲ ಕೆರೆಗಳ ಸರ್ವೇ ನಡೆಸಿ ಕೆರೆಗಳ ಒತ್ತುವರಿ ತೆರವು ಮಾಡಿ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಹಳ್ಳಿ ಹಳ್ಳಿಯಲ್ಲೂ ಒತ್ತುವರಿ?

ತೀರ್ಥಹಳ್ಳಿ ತಾಲೂಕಿನ ಹಲವೆಡೆ ಕೆರೆ ಒತ್ತುವರಿ ಆಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ.