Categories
ಮಲ್ನಾಡ್

ಮಲೆನಾಡಿನಲ್ಲಿ ಮೋಡ ಕವಿದ ವಾತಾವರಣ..!

ಮಲೆನಾಡಿನಲ್ಲಿ ಮೋಡ ಕವಿದ ವಾತಾವರಣ..!
– ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ಮುನ್ಸೂಚನೆ
– ಆಕಾಶದತ್ತ ಮುಖ ಮಾಡಿರುವ ಮಲೆನಾಡಿಗರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ಮುನ್ಸೂಚನೆ ಸಿಕ್ಕಿದೆ. 2-3 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದ್ದು, ಭಾಗಶಃ ಮೋಡ ಕವಿದ ವಾತಾವರಣ ಇದ್ದು ಮಲೆನಾಡು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಆಕಾಶದತ್ತ ಮುಖ ಮಾಡಿರುವ ಮಲೆನಾಡಿಗರು: ಮಾರ್ಚ್ 20 ಅಥವಾ 21 ರಿಂದ, ಎರಡರಿಂದ ಮೂರು ದಿನಗಳವರೆಗೆ ತುಂತುರು ಮಳೆ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರಂತೆ ಇಂದು ತೀರ್ಥಹಳ್ಳಿಯಲ್ಲಿ ಮೋಡ ಕವಿದ ವಾತಾವರಣ ಇದೆ. ಆದ್ದರಿಂದ ಮಲೆನಾಡಿಗರು ಇಂದಾದರೂ ಮಳೆ ಬರುವುದೇ ಎಂದು ಆಕಾಶದತ್ತ ಮುಖ ಮಾಡಿದ್ದಾರೆ. ಆದರೆ, ಈ ಮಳೆ ಅಣೆಕಟ್ಟುಗಳನ್ನು ತುಂಬಲು ಅಥವಾ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದಿಲ್ಲ. ಅಲ್ಪಸ್ವಲ್ಪ ಮಳೆ ಸ್ವಲ್ಪ ಸಮಯದವರೆಗೆ ತಾಪಮಾನವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಒಂದೆಡೆ ಮಳೆಯ ಲಕ್ಷಣಗಳು ಇದ್ದರೆ, ಇನ್ನೊಂದೆಡೆ ಮಳೆ ಇಲ್ಲದೇ ಇರುವ ಸಂದರ್ಭ ತಾಪಮಾನ ಏರಿಕೆಯನ್ನು ಕಾಣುತ್ತಿದೆ.

Categories
ರಾಜಕೀಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹವಾ.!

ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹವಾ.!
– ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತ
– ಹಾಡು ಹೇಳಿ ಪತ್ನಿಯ ಸ್ಪರ್ಧೆಯನ್ನ ಹುರಿದುಂಬಿಸಿದ ನಟ

NAMMUR EXPRESS NEWS
ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದು ಭದ್ರಾವತಿಯ ಬಾರಂದೂರಿನಿಂದ ಭವ್ಯ ಸ್ವಾಗತವನ್ನ ಕಾಂಗ್ರೆಸ್‌ ಪಕ್ಷದ ನಾಯಕರು, ಕಾರ್ಯಕರ್ತರು ಜೈಕಾರ ಹಾಕಿ ತೆರೆದ ವಾಹನದಲ್ಲಿ ಕರೆತರಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾ‌ರ್ ಎಂಟ್ರಿ ಕೊಟ್ಟಿದ್ದಾರೆ. ಭದ್ರಾವತಿಯಲ್ಲಿ ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಶಾಸಕ ಬಿ.ಕೆ. ಸಂಗಮೇಶ್ವ‌ರ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಈ ವೇಳೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಹ ಜೊತೆಗೆ ಇದ್ದರು. ಕಾರ್ಯಕರ್ತರು ಕಾಂಗ್ರೆಸ್ ಮತ್ತು ಗೀತಾ ಶಿವರಾಜ್‌ಕುಮಾರ್ ಪರ ಜಯಘೋಷ ಹಾಕಿದರು.

ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್‌ಕುಮಾ‌ರ್ ಎಂಟ್ರಿ ಕೊಟ್ಟಿದ್ದಾರೆ. ಓಪೆನ್‌ ಜೀಪ್‌ನಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಗ್ಯಾರಂಟಿ ಪರ ಘೋಷಣೆಗಳು ಈ ಸಂದರ್ಭದಲ್ಲಿ ಮೊಳಗಿದವು. ಬೈಕ್‌ನಲ್ಲಿ ನೂರಾರು ಕಾರ್ಯಕರ್ತರು ನಡೆಸಿದ್ದಾರೆ.

ವೇದಿಕೆಯ ಮೇಲೆ ಹಾಡು ಹೇಳಿ ಪತ್ನಿಯ ಸ್ಪರ್ಧೆಯನ್ನ ಹುರಿದುಂಬಿಸಿದ ನಟ ಶಿವರಾಜ್ ಕುಮಾ‌ರ್:

ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಹಾಡು ಹೇಳುವ ಮೂಲಕ ಮತ್ತೊಂದು ಅಗ್ನಿ ಪರೀಕ್ಷೆಗೆ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಗೀತಾರ ಪರ ಪ್ರಚಾರ ಆರಂಭಿಸಿದ್ದಾರೆ. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ಎಂಬ ದಿ.ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ಹಾಡನ್ನ ಹೇಳಿ ಪತ್ನಿಯ ಮತ್ತೊಮ್ಮೆ ಸ್ಪರ್ಧೆಯನ್ನ ಬೆಂಬಲಿಸಿದ್ದಾರೆ.

ಹೆಣ್ಣಿನ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ನಟ ಡಾ.ಶಿವರಾಜ್ ಕುಮಾರ್, ಹೆಣ್ಣು ಭೂಮಿ ತಾಯಿಗೆ ಸಮಾನ, ಹೆಣ್ಣು ಕುಟುಂಬದ ಜವಬ್ದಾರಿ ನಿಭಾಯಿಸಿ ಪತಿಗೆ ಸಹಕಾರ ನೀಡುತ್ತಾಳೆ. ಈ ರೀತಿಯ ಜವಬ್ದಾರಿ ನಿಭಾಯಿಸುವುದರಿಂದಲೇ ಹೆಣ್ಣು ಕುಟುಂಬದ ಮತ್ತು ಸಮಾಜದ ಕಣ್ಣಾಗುತ್ತಾಳೆ ಎಂದು ಹೇಳಿ ಪತಿಯನ್ನ ವೇದಿಕೆಯ ಮೇಲೆಯೇ ಹುರಿದುಂಬಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಾನು ಇರ್ತೀನಿ. ಆದರೆ ಕೆಲವೊಂದು ದಿನಗಳು ಗೈರು ಆದರೆ ಬೇಸರಸಿಕೊಳ್ಳದಂತೆ ಮನವಿ ಮಾಡಿದ ಶಿವರಾಜ್ ಕುಮಾರ್, ಎಲ್ಲಾ ಊರಿಗೂ ಬರುತ್ತೇವೆ. ಗೆದ್ದ ನಂತರ ನಿಮ್ಮ ಕೆಲಸ ಮಾಡದಿದ್ದರೆ ಆಗ ನನಗೆ ಹೇಳಿ ಆಗ ನಾನು ಏನು ಅಂತ ತೊರಿಸುವುದಾಗಿ ಹಾಸ್ಯ ಚಟಾಕಿ ಹಾಕಿದರು.

ನಾನು ಈ ಜಿಲ್ಲೆಯ ಮಗಳು-ಗೀತಾ ಶಿವರಾಜ್ ಕುಮಾರ್:

ಕಳೆದ ಬಾರಿ 17 ದಿನ ಪ್ರಚಾರ ಮಾಡಿದ್ದೆ. ಸಮಯವಿರಲಿಲ್ಲ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು. ಲಗಾನ್ ಕಲ್ಯಾಣ ಮಂದಿರದಲ್ಲಿ ಚುನಾವಣೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ಸರ್ಕಾರ ನುಡಿದಂತೆ ನೆಡೆದ ಸರ್ಕಾರವಾಗಿದೆ. ಐದು ಗ್ಯಾರೆಂಟಿ ನೀಡುವ ಭರವಸೆ ನೀಡಲಾಗಿತ್ತು.ಆದರೆ ಬಿಜೆಪಿಯ ಹೆಸರಳೇದೆ ಈಗಿನ ಕೇಂದ್ರ ಸರ್ಕಾರ ಏನು ಭರವಸೆ ನೀಡಿದರೋ ಅದನ್ನ ನೀಡಿಲ್ಲ ಎಂದರು. ಮಧು ಬಂಗಾರಪ್ಪನವರು ಶ್ರಮ ಪಟ್ಟು ತಂದೆ ಸ್ಥಾನಕ್ಕೆ ಬೆಳೆದು ಬಂದಿದ್ದೇನೆ. ನಾನು ಈ ಜಿಲ್ಲೆಯ ಮಗಳು. ನೀವು ನನಗೆ ಮತ ಹಾಕಲೇಬೇಕು. ಜಿಲ್ಲೆಯ ಮಗಳನ್ನ ಬರಿ ಕೈಯಲ್ಲಿ ಕಳುಹಿಸಬಾರದು ಎಂದು ತಿಳಿಸಿದರು. ನಾನು ಮಹಿಳೆಯರ ಮತ್ತು ಮಕ್ಕಳ ಹಾಗೂ ಜಿಲ್ಲೆಯ ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಮೋದಿ ಹೆಸರು ದುರ್ಬಳಕೆ: ಸೈಬರ್ ಕಳ್ಳರ ಹೊಸ ಪ್ಲಾನ್!

ಮೋದಿ ಹೆಸರು ದುರ್ಬಳಕೆ: ಸೈಬರ್ ಕಳ್ಳರ ಹೊಸ ಪ್ಲಾನ್!
– ಸಾರ್ವಜನಿಕರೆ ಎಚ್ಚರ, ಎಚ್ಚರ: ಮೋದಿ ಹೆಸರಲ್ಲಿ ಬರಲಿದೆ ಫೇಕ್ ಮೆಸೇಜ್
– ನಂಬಿ ರಿಪ್ಲೈ ಕೊಟ್ರೆ ಖಾತೆಗೆ ಕನ್ನ ಗ್ಯಾರಂಟಿ!

NAMMUR EXPRESS NEWS
ಬೆಂಗಳೂರು: ಜನರೇ ಎಚ್ಚರ… ಎಚ್ಚರ… ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ನಕಲಿ ಮೆಸೇಜ್ ಬರುತ್ತಿದ್ದು, ನೀವು ಈ ಮೆಸೇಜ್ ನಂಬಿ ರಿಪ್ಲೈ ಕೊಟ್ಟರೆ ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ. ಹೌದು, ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ₹4750 ರೂ ನಕಲಿ ಮೆಸೆಜ್ ಬರುತ್ತಿದ್ದು, ಸಾರ್ವಜನಿಕರ ಖಾತೆಗೆ ಕನ್ನ ಹೊಡೆಯಲು ಸೈಬ‌ರ್ ಕಳ್ಳರು ಹೊಸ ಪ್ಲಾನ್ ರೂಪಿಸಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಮೊಬೈಲ್ ಗೆ ಸಂದೇಶ ಕಳುಹಿಸಿ ಚಾಲಾಕಿಗಳು ವಂಚಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫೇಕ್ ಮೆಸೇಜ್ ಹಾವಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಹೆಸರು ಹಾಗೂ ಫೋಟೋ ಬಳಸಿ ಫೇಕ್ ಮೆಸೇಜ್ ಕಳಿಸಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯಿಂದ ₹4950 ರೂಪಾಯಿ ಬರಲಿದೆ ಅನ್ನೋ ಫೇಕ್ ಸಂದೇಶ ಕಳಿಸಲಾಗುತ್ತಿದೆ.

ಈ ಹಣವನ್ನು ನಿಮ್ಮ ಅಕೌಂಟ್ ಗೆ ಹಾಕಲು ಅಕೌಂಟ್ ಲಿಂಕ್ ಮಾಡಿ ಎಂದು ಖದೀಮರಿಂದ ಕರೆ ಬರುತ್ತಿದೆ. ಕರೆ ಮಾಡಿ OTP ರವಾನೆ, ಬಳಿಕ ಸಾರ್ವಜನಿಕರ ಖಾತೆಗೆ ಕನ್ನ ಹಾಕುತ್ತಿದ್ದಾರೆ. ನೂತನ ಮಾರ್ಗವಾಗಿ ಜನರ ಖಾತೆಗೆ ಕನ್ನ ಹಾಕಲು ಆನ್ ಲೈನ್ ವಂಚಕರು ಮುಂದಾಗಿದ್ದಾರೆ. ಪ್ರಧಾನಿ ಹೆಸರಲ್ಲಿ ಆನ್ ಲೈನ್ ನಲ್ಲಿ ಹಾವಳಿ ಹಿನ್ನೆಲೆ, ಸಾರ್ವಜನಿಕರು ಇಂತಹ ವಂಚಕರಿಂದ ದೂರ ಇರುವಂತೆ ಮನವಿ ಮಾಡಲಾಗಿದೆ. ಆನ್ ಲೈನ್ ಕಳ್ಳರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಚಾಮರಾಜನಗರದಲ್ಲಿ ಆನೆ ದಾಳಿಗೆ ಯುವಕ ಬಲಿ
– ನಿಧಿ ಆಸೆಗೆ ದೇವರಿಗೆ ವಾಮಾಚಾರ ಗರ್ಭ ಗುಡಿಗೆ ಕನ್ನ
– ತುಮಕೂರು ಬಳಿ ಗಣಪತಿ ಬಸ್ಸಿನಲ್ಲಿ ನಿಗೂಢ ಸ್ಫೋಟ
– 50 ಸಾವಿರ ರೂ. ಲಂಚ ಕೇಳಿದ್ದ ಸಬ್‌ ರಿಜಿಸ್ಟ್ರಾರ್‌ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!‌

NAMMUR EXPRESS NEWS
ಚಾಮರಾಜನಗರ : ಆನೆ ದಾಳಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಚಾಮರಾಜನಗರದ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಕತ್ತೆಕಾಲು ಪೋಡು ಗ್ರಾಮದ ಮಾದ (23) ಮೃತ ದುರ್ದೈವಿ. ಮಾದ ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಾಸ್ ಬರುತ್ತಿರುವಾಗ ಆನೆಯು ದಾಳಿ ನಡೆಸಿದೆ. ಆನೆ ದಾಳಿಯಿಂದ ಗಂಭೀರ ಗಾಯಗೊಂಡ ಮಾದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿ ಬೈಲೂರು ವಲಯದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮಸ್ಥರು ಆನೆಗಳನ್ನು ಕಾಡಿಗೆ ಓಡಿಸುವಂತೆ ಮನವಿ ಮಾಡಿದ್ದಾರೆ. ಜಮೀನು ಕೆಲಸಗಳಿಗೆ ಭಯದಲ್ಲೇ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

– ನಿಧಿ ಆಸೆಗೆ ದೇವರಿಗೆ ವಾಮಾಚಾರ ಗರ್ಭ ಗುಡಿಗೆ ಕನ್ನ

ವಿಜಯನಗರ: ನಿಧಿ ಇರಬಹುದು ಎಂಬ ಆಸೆಗೆ ಖದೀಮರು ದೇವಸ್ಥಾನದ ಗರ್ಭ ಗುಡಿಗೆ ಕನ್ನ ಹಾಕಿರುವ ವಿದ್ಯಮಾನ ವಿಜಯನಗರದ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಜಮೀನನಲ್ಲಿ ಘಟನೆ ನಡೆದಿದೆ. ನಿಧಿಗಾಗಿ ಪುರಾತನ ಕಾಲದ ದೇವಸ್ಥಾನಕ್ಕೆ ರಾತ್ರೋರಾತ್ರಿ ಬಂದ ಚೋರರು ಜೆಸಿಬಿ ಮೂಲಕ ದೇಗುಲ ಗರ್ಭ ಗುಡಿಯನ್ನು ಅಗೆದಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಭೀರಪ್ಪ ದೇವಸ್ಥಾನದಲ್ಲಿ ಸುಮಾರು ಹತ್ತು ಅಡಿಗಳಷ್ಟು ಮಣ್ಣು ಅಗೆದಿದ್ದಾರೆ. ಪುರಾತನ ದೇವಸ್ಥಾನ ಎಂಬ ಕಾರಣಕ್ಕೆ ಕೆಳಗೆ ನಿಧಿ ಇರಲೇಬೇಕೆಂದು ಅಂದುಕೊಂಡಿರುವ ದುಷ್ಕರ್ಮಿಗಳು ಬುಧವಾರ ಮಧ್ಯ ರಾತ್ರಿ ನಂತರ ದೇಗುಲಕ್ಕೆ ನುಗ್ಗಿದ್ದಾರೆ. ದೇವಸ್ಥಾನದ ಮುಂಭಾಗ ಮಣ್ಣು ಅಗೆದು ಕೊನೆಗೆ ನಿಧಿ ಸಿಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಪುರಾತನ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ಹೊಂಚು ಹಾಕಿ ಗರ್ಭ ಗುಡಿ ಮುಂದೆ ಅಗೆದು ನಿಧಿ ಶೋಧಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ನಿಧಿಗಾಗಿ ಅಗೆದ ಸ್ಥಳದಲ್ಲಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಮಣ್ಣು ಅಗೆದ ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ ಇನ್ನಿತರ ಸಾಮಾಗ್ರಿ ಪತ್ತೆಯಾಗಿದೆ. ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜೆಗೆಂದು ಬಂದಾಗ ಕಳ್ಳರ ಕೃತ್ಯ ಬಯಲಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿಧಿಗಾಗಿ ದೇವಸ್ಥಾನ ಅಗೆದ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಪುರಾತನ ಕಾಲದ ದೇಗುಲವನ್ನು ಅಗೆದು ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ಪಟ್ಟು ಹಿಡಿದರು.

– ತುಮಕೂರು ಬಳಿ ಗಣಪತಿ ಬಸ್ಸಿನಲ್ಲಿ ನಿಗೂಢ ಸ್ಫೋಟ

ತುಮಕೂರು: ತುಮಕೂರಿನ ಗೂಳೂರು ಎಂಬಲ್ಲಿ ಕುಣಿಗಲ್‌ನಿಂದ ತುಮಕೂರಿಗೆ ಬರುತ್ತಿದ್ದ ಶ್ರೀ ಗಣಪತಿ ಎಂಬ ಹೆಸರಿನ ಖಾಸಗಿ ಬಸ್‌ನಲ್ಲಿ ಬುಧವಾರ ಸಂಜೆ ನಿಗೂಢ ಸ್ಫೋಟವೊಂದು ಸಂಭವಿಸಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಸ್ಲಿಂ ಮಹಿಳೆಯೊಬ್ಬರ ಕೈಯಲ್ಲಿದ್ದ ಆ್ಯಸಿಡ್ ಬಾಟಲ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಬರ್ತಿದ್ದ ಮಹಿಳೆ ಶಕೀಲಾ ಬಾನು (48) ಕೈಯಲ್ಲಿ ಟಾಯ್ಲೆಟ್‌ಗೆ ಬಳಸುವ ಆ್ಯಸಿಡ್ ತುಂಬಿದ್ದ ಬಾಟಲನ್ನು ‌ ಹಿಡಿದುಕೊಂಡಿದ್ದರು ಎನ್ನಲಾಗಿದೆ.

ಅದು ಒಮ್ಮೆಗೇ ಸ್ಫೋಟಗೊಂಡು ಸದ್ದಿನೊಂದಿಗೆ ಸಿಡಿದಿದೆ. ಘಟನೆಯಿಂದಾಗಿ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಶಾಕ್‌ಗೆ ಒಳಗಾಗಿದ್ದಾರೆ. ಸಣ್ಣ ಪುಟ್ಟ ಗಾಯವಾದವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಪ್ರಾಣಾಪಾಯವಿಲ್ಲ. ಮೇಲ್ನೋಟಕ್ಕೆ ಇದು ಆಸಿಡ್‌ ಒತ್ತಡಕ್ಕೆ ಒಳಗಾಗಿ ಸ್ಫೋಟಿಸಿದೆ ಎಂದು ನಂಬಲಾಗಿದೆ. ಸದ್ಯ ಜಿಲ್ಲೆಯಲ್ಲಿ ಆಸಿಡ್‌ ಮಾರಾಟಕ್ಕೆ ನಿಷೇಧವಿದೆ. ಈ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಗುಜರಿ ಅಂಗಡಿಯಿಂದ ಆ್ಯಸಿಡ್ ತಂದಿರುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– 50 ಸಾವಿರ ರೂ. ಲಂಚ ಕೇಳಿದ್ದ ಸಬ್‌ ರಿಜಿಸ್ಟ್ರಾರ್‌ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!‌

ಕೊಡಗು: ಅಧಿಕಾರಿಗಳಿಗೆ ಕೈ ತುಂಬಾ ಸಂಬಳ ಬಂದರೂ ಲಂಚದ ಮೇಲೆ ಆಸೆ ನಿಂತಿಲ್ಲ. ಅದರಲ್ಲೂ ಸರ್ಕಾರಗಳು ಪಾರದರ್ಶಕ ಆನ್‌ಲೈನ್‌ ಸಿಸ್ಟಮ್‌, ಲಂಚರಹಿತ ವ್ಯವಸ್ಥೆ ಎಂದೆಲ್ಲ ಹೇಳುತ್ತಿದ್ದರೂ ಖದೀಮ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಲೇ ಇದ್ದಾರೆ. ಇಂಥವರನ್ನು ಹಿಡಿದು ಹಾಕುವ ಕೆಲಸಗಳು ಆಗಾಗ ನಡೆಯುತ್ತವೆ. ಕೊಡಗಿನಲ್ಲಿ ಲಂಚವನ್ನೇ ಹಾಸಿ ಹೊದೆಯುತ್ತಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ಸಬ್‌ ರಿಜಿಸ್ಟ್ರಾರ್‌ ಸೌಮ್ಯಲತಾ ಎಸ್ಕೇಪ್‌ ಆಗಿದ್ದರೆ, ಬ್ರೋಕರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮಡಿಕೇರಿಯ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ರಿಜಿಸ್ಟ್ರಾರ್‌ ಆಗಿರುವ ಸೌಮ್ಯಲತಾ ಅವರು ಪೌತಿ ಖಾತೆ ರಿಜಿಸ್ಟ್ರೇಷನ್‌ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಕೋರಂಗಾಲ ಗ್ರಾಮದ ನಂಗಾರು ಕುಮಾರ್ ಅವರು ಪೌತಿ ಖಾತೆ ನೋಂದಣಿ ಮಾಡಿಸಲು 50,000 ರೂ. ಕೇಳಿದ್ದರು. ಕಳೆದ ಎರಡು ತಿಂಗಳುಗಳಿಂದ ರಿಜಿಸ್ಟ್ರೇಷನ್‌ ಮಾಡಲು ಸತಾಯಿಸುತ್ತಿದ್ದ ಸೌಮ್ಯಲತಾ ಅವರು ಕೊನೆಗೆ ಬ್ರೋಕರ್‌ ಮೂಲಕ ಹಣ ಕೇಳಿದ್ದರು. ಅದರಂತೆ ಹಣ ಕೊಡಲು ಕುಮಾರ್‌ ಒಪ್ಪಿದ್ದರು. ಬುಧವಾರ ಹಣ ಕೊಡಲು ದಿನ ನಿಗದಿಯಾಗಿತ್ತು. ಇದರ ನಡುವೆ ‌ ಲೋಕಾಯುಕ್ತ ಪೊಲೀಸರಿಗೆ ಈ ರೀತಿಯ ನಿರ್ದಿಷ್ಟ ಹಣ ನೀಡುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ನಂಗಾರು ಕುಮಾರ್‌ ಅವರು ಹಣ ಕೊಡಲು ಸಿದ್ಧವಾಗುವ ಹೊತ್ತಿಗೆ ಎಂಟ್ರಿ ಕೊಟ್ಟರು. ಕುಮಾರ್‌ ಅವರು ಬ್ರೋಕರ್‌ ಹರಿದತ್ತ ಅವರಿಗೆ ಹಣ ನೀಡುತ್ತಿದ್ದಂತೆಯೇ ಹಿಡಿದುಕೊಂಡರು.

ಈ ನಡುವೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ರಿಜಿಸ್ಟ್ರಾರ್‌ ಸೌಮ್ಯಲತಾ ಅವರನ್ನು ವಿಚಾರಿಸೋಣ ಎಂದು ಹೋದರೆ ಸೌಮ್ಯಲತಾ ಅವರು ಅದ್ಯಾವುದೋ ಮಾಯದಿಂದ ಆಫೀಸಿನಿಂದ ಪರಾರಿಯಾಗಿದ್ದರು. ಲೋಕಾಯುಕ್ತ ಎಸ್ಪಿ ಸುಜಿತ್‌ ಅವರ ನಿರ್ದೇಶನದಂತೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಇನ್ಸ್‌ಪೆಕ್ಟರ್‌ ರೂಪಶ್ರೀ ನೇತೃತ್ವದಲ್ಲಿ ನಡೆದ ದಾಳಿಐಲ್ಲಿ ಏಜೆಂಟ್ ಹರಿದತ್ತ ಸಿಕ್ಕಿಬಿದ್ದಿದ್ದಾನೆ. ಇದೀಗ ಸೌಮ್ಯಲತಾ ಅವರಿಗೂ ನೋಟಿಸ್‌ ನೀಡಲಾಗಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Categories
ತೀರ್ಥಹಳ್ಳಿ

ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು..!

ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು..!
– ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಘಟನೆ
– ಬಾಳೆಬೈಲು ಕಾಲೇಜ್ ಹಿಂಭಾಗದಲ್ಲಿ ನಡೆದ ದುರ್ಘಟನೆ
– ಸೆಲ್ಫಿ ಹುಚ್ಚಿಗೆ ಜೀವವೇ ಹೋಯ್ತು..!

NAMMUR EXPRESS NEWS
ತೀರ್ಥಹಳ್ಳಿ: ಸೆಲ್ಫಿ ಫೋಟೋ ತೆಗೆಯಲು ಹೋಗಿ ತುಂಗಾ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬುಧವಾರ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಡಿಗ್ರಿ ಕಾಲೇಜ್ ಹಿಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಉತ್ತರಪ್ರದೇಶ ಮೂಲದ ಅಬ್ದುಲ್ ಕರೀಂ (24) ಎಂದು ತಿಳಿದು ಬಂದಿದೆ. ಈತ ತನ್ನ ಇಬ್ಬರು ಸ್ನೇಹಿತರೊಂದಿಗೆ ತುಂಗಾ ನದಿ ಬಳಿ ಫೋಟೋ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ್ ಕಾಲು ಜಾರಿ ಅಬ್ದುಲ್ ಕರೀಂ ಹೊಳೆಗೆ ಬಿದ್ದಿದ್ದಾನೆ. ಆತನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದರೂ ಮೃತಪಟ್ಟಿದ್ದಾನೆ.

ಕೆಲಸಕ್ಕೆ ಬಂದಿದ್ದ ಯುವಕ

ಈತ ಉತ್ತರ ಪ್ರದೇಶದ ಮೂಲದವನಾಗಿದ್ದು ಬಾಳೆಬೈಲಿನಲ್ಲಿ ಪಿಒಪಿ ಕೆಲಸ ಮಾಡಲು ಬಂದಿದ್ದ ಎಂದು ತಿಳಿದುಬಂದಿದೆ. ಈತನ ಮರಣೋತ್ತರ ಪರೀಕ್ಷೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಬಳಿಕ ಆತನ ಶವವನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಫಿ ಹುಚ್ಚಿಗೆ ಯುವ ಜನತೆ ಬದುಕು ಬಲಿ!?

ಇತ್ತೀಚೆಗೆ ಸೆಲ್ಫಿ ಹಾಗೂ ಇನ್ಸ್ಟಾಗ್ರಾಮ್ ವಿಡಿಯೋಗಾಗಿ ಯುವಜನತೆ ಹುಚ್ಚಾಟ ಆಡುವ ಘಟನೆ ಪ್ರತಿದಿನ ಒಂದಲ್ಲ ಒಂದು ಕಡೆ ದಾಖಲಾಗುತ್ತಿದೆ. ಈ ಬಗ್ಗೆ ಪೋಷಕರು ಹಾಗೂ ಜನತೆ ಎಚ್ಚರಿಕೆ ವಹಿಸಬೇಕಿದೆ. ಒಂದು ಸೆಲ್ಫಿ ಅಥವಾ ಒಂದು ಇನ್ಸ್ಟಾಗ್ರಾಮ್ ವಿಡಿಯೋ ಬದುಕಲ್ಲ. ಹಾಗಾಗಿ ಈ ಬಗ್ಗೆ ಪೋಷಕರು, ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಿದೆ. ನದಿ ಪ್ರದೇಶಗಳಲ್ಲಿ ಅಥವಾ ಜಲಪಾತಗಳಲ್ಲಿ ಅಥವಾ ಬೆಟ್ಟ ಗುಡ್ಡಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು ಇತ್ತೀಚಿಗೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಇದರಿಂದಾಗಿ ಜೀವ ಜೀವನ ಎರಡು ಹಾಳಾಗುತ್ತಿದೆ. ಇದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಮೊಹಮ್ಮದ್ ಜಬೀರ್‌ಗೆ ಜಾಮೀನು ನಿರಾಕರಣೆ
– ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ
– ಅನಾರೋಗ್ಯಕ್ಕೆ ಬಲಿಯಾದ ಎರಡನೇ ತರಗತಿ ಬಾಲಕಿ.!
– ಪ್ರತ್ಯೇಕ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲೆ

NAMMUR EXPRESS NEWS
ಪುತ್ತೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್‌ ಜಬೀರ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಪುತ್ತೂರು ನಿವಾಸಿಯಾದ ಮೊಹಮ್ಮದ್‌ ಜಬೀರ್‌ ಅವರು ತಮ್ಮ ಕಸ್ಟಡಿ ವಿಸ್ತರಣೆ ಮಾಡಿ ಡಿಫಾಲ್ಟ್‌ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ಕೋರ್ಟ್ 2023ರ ಫೆ. 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ಜಬೀರ್‌ ಅವರು 21ನೇ ಆರೋಪಿಯಾಗಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 302, ಶಸ್ತ್ರಾಸ್ತ್ರ ಕಾಯಿದೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 16, 18, 19 ಮತ್ತು 20ರ ಅಡಿ ಪ್ರಕರಣ ದಾಖಲಿಸಲಾಗಿದೆ. 2022ರ ನವೆಂಬರ್’ನಲ್ಲಿ ಜಬೀರ್‌ ಬಂಧನವಾಗಿದ್ದು, ನವೆಂಬರ್ ೮ ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

2023ರನವರಿ ೨೦ ರಂದು, 20 ಆರೋಪಿಗಳ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿ, ಹೆಚ್ಚುವರಿ ತನಿಖೆಗೆ ಮನವಿ ಮಾಡಿತ್ತು. ಆದರೆ, ಜಬೀರ್‌ ಅವರ ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ಜಬೀರ್‌ ಅವರ 90 ದಿನಗಳ ಬಂಧನ ಅವಧಿ ಮುಗಿದಿದ್ದರೂ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ೨೦೨೩ರ ಪೆಬ್ರವರಿಯಲ್ಲಿ ಪ್ರಕರಣದ ವಿಚಾರಣೆಯ ದಿನ ಜಬೀರ್‌ ಅವರು ಜಾಮೀನು ಕೋರಿರಲಿಲ್ಲ. ಎನ್‌ಐಎ ಕಸ್ಟಡಿ ವಿಸ್ತರಣೆಯನ್ನೂ ಕೋರಿರಲಿಲ್ಲ. 08.02.2023ರಂದು ಎನ್‌ಐಎ ಕಸ್ಟಡಿ ವಿಸ್ತರಣೆ ಕೋರಿದ್ದು, ಅದೇ ದಿನ ಅರ್ಜಿದಾರರು ಡೀಫಾಲ್ಟ್‌ ಜಾಮೀನು ಕೋರಿದ್ದರು. ಇದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಆ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

– ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ

ಉಡುಪಿ : ಉಡುಪಿಯಿಂದ ಕಳೆದ 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕುಟುಂಬ ಕಳೆದ ಐದು ವರ್ಷಗಳ ಹಿಂದೆ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿತ್ತು. ಆದರೆ, ಫ್ಯಾಕ್ಟರಿ ಚೇತರಿಕೆ ಕಾಣುವ ಅವಧಿಯಲ್ಲೇ ಬರಸಿಡಿಲಿನಂತೆ ಬಂದ ಕೋವಿಡ್ ಅವಧಿಯಲ್ಲಿ ನಷ್ಟವಾಗಿ, ಲಕ್ಷಾಂತರ ರೂ. ಸಾಲ ಬೆಳೆಯಿತು. ಈಗ ಸಾಲ ತೀರಿಸಲಾಗದೇ ಕುಟುಂಬದ ಇಬ್ಬರು ದುಡಿಯುವ ಮಕ್ಕಳು ಹಾಗೂ ತಾಯಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯಿಂದ ಬಂದು ಕಷ್ಟಪಟ್ಟು ದುಡಿದು ಕೋವಿಡ್‌ಗಿಂತ ಮುಂಚೆ ಆರಂಭಿಸಿದ್ದ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಲಕ್ಷಾಂತರ ರೂ. ಸಾಲ ಮಾಡಿ ಆರಂಭಿಸಿದ್ದ ಫ್ಯಾಕ್ಟರಿ ಕೋವಿಡ್ ವೇಳೆ ನಷ್ಟ ಅನುಭವಿಸಿತು. ಆದರೆ, ಫ್ಯಾಕ್ಟರಿ ಮುಚ್ಚಿ ಸಾಲ ತೀರಿಸಲು ಇಡೀ ಮನೆ ಮಂದಿಯೆಲ್ಲಾ ದುಡಿದರೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬ್ಯಾಂಕ್‌ನವರು ಸಾಲ ವಸೂಲಿ ಮಾಡುವುದಕ್ಕೆ ನಿನ್ನೆ ಮನೆಯ ಬಳಿಗೆ ಬಂದಿದ್ದರು. ಆದರೆ, ಕೈಯಲ್ಲಿ ಹಣವಿಲ್ಲದೇ ಜೀವನ ಮಾಡುವುದಕ್ಕೂ ಕಷ್ಟ ಪಡುತ್ತಿದ್ದ ಕುಟುಂಬದಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡ0ತೆ ತಾಯಿಯೂ ಸೇರಿ ಒಟ್ಟಿಗೆ ಮೂವರು ಬಾಡಿಗೆ ಮನೆಯಲ್ಲಿಯೇ ಸಾವಿನ ಹಾದಿಯನ್ನು ಹಿಡಿದಿದ್ದಾರೆ. ತಾಯಿ ಸುಕನ್ಯಾ (58), ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳಾಗಿದ್ದಾರೆ. ತಂದೆ ಜಯಾನಂದ್ ಅವರು ಮನೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಅಂಗವಿಕಲ ಆಗಿದ್ದನು. ಆದರೆ, ಚೆನ್ನಾಗಿ ಓದಿಕೊಂಡಿದ್ದು, ಕಡಿಮೆ ಸಂಬಳಕ್ಕೆ ಮನೆಯಲ್ಲಿಯೇ ವರ್ಕ್ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದನು. ಇನ್ನೊಬ್ಬ ಮಗ ನಿಖಿತ್ ಕೂಡ ಬಿಸಿನೆಸ್ ಲಾಸ್ ಆಗಿದ್ದರಿಂದ ಮನನೊಂದಿದ್ದನು.

ಅಪ್ಪನ ಲಾಸ್ ಭರ್ತಿ ಮಾಡುವುದಕ್ಕೆ ತಾನು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು ಏನಾದರೂ ಮತ್ತೊಂದು ಬಿಸಿನೆಸ್ ಮಾಡೋಣ ಎಂದು ಮನೆಯಲ್ಲಿಯೇ ಕುಳಿತಿದ್ದನು. ಫ್ಯಾಕ್ಟರಿ ನಷ್ಟವಾಗಿ ಮುಚ್ಚಿದ್ದರಿಂದ ಲಕ್ಷಾಂತರ ರೂ. ಸಾಲವಿತ್ತು. ಮೈತುಂಬಾ ಸಾಲ ತೀರಿಸುವುದು ಒಂದೆಡೆಯಿರಲಿ, ಜೀವನ ನಡೆಸುವುದೇ ದೊಡ್ಡ ಸವಾಲಾಗಿತ್ತು. ತಂದೆ ಬೇರೆಡೆ ಕೆಲಸ ಮಾಡುತ್ತಿದ್ದರೆ, ತಾಯಿ ತಮ್ಮ ಏರಿಯಾದಲ್ಲಿನ ಮಕ್ಕಳಿಗೆ ಟ್ಯೂಷನ್ ಮಾಡಿ ಮನೆಯನ್ನು ನಿಭಾಯಿಸಲು ಹಣ ಸಂಪಾದನೆ ಮಾಡುತ್ತಿದ್ದಳು. ಎಲ್ಲರೂ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

– ಅನಾರೋಗ್ಯಕ್ಕೆ ಬಲಿಯಾದ ಎರಡನೇ ತರಗತಿ ಬಾಲಕಿ.!

ಬಿ.ಸಿ.ರೋಡ್ : ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತೌಹೀದ್ ಶಾಲಾ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್, ತಲಪಾಡಿಯ ಸಫೀರ್ ಅಹ್ಮದ್ ಎಂಬವರ ಪುತ್ರಿ ಆಯಿಷಾ ಶಹಿಮ (7) ಮೃತಪಟ್ಟ ವಿದ್ಯಾರ್ಥಿನಿ. ಶಹಿಮಾ ಅವರು‌ ಮೂರು ವಾರಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದಿದ್ದರು. ತಕ್ಷಣ ಇವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮೂರು ದಿನ ಕೋಮದಲ್ಲಿದ್ದರು. ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

– ಪ್ರತ್ಯೇಕ ಅಕ್ರಮ ಮದ್ಯ ಮಾರಾಟ ಪ್ರಕರಣ

ಬೆಳ್ತಂಗಡಿ : ಅಕ್ರಮ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು ಮದ್ಯವನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು, ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ, ಸ್ಥಳೀಯ ನಿವಾಸಿ ಸತೀಶ್ (40) ಎಂಬಾತ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣಾ ಪಿಎಸ್ಸೆ ಶ್ರೀಶೈಲ ಡಿ ಮುರಗೋಡ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿತನ ವಶದಲ್ಲಿದ್ದ 90 ಎಂ.ಎಲ್. ಮದ್ಯ ತುಂಬಿದ 32 ಸ್ಯಾಚೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಒಟ್ಟು ಪ್ರಮಾಣ 2.880 ಲೀಟರ್ ಆಗಿದ್ದು, ಅಂದಾಜು ಮೌಲ್ಯ ರೂ 1,312/- ರೂಪಾಯಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಅಕ್ರಮ ಮದ್ಯ ಮಾರಾಟ ಪ್ರಕರಣ ಬೇಧಿಸಿ ಆರೋಪಿ ಸಹಿತ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ಅಳಕೆ-ಮಡ್ಕೊಟ್ಟು ಎಂಬಲ್ಲಿ ಆರೋಪಿ ಬಿರ್ಮಣ್ಣ ಗೌಡ ಎಂಬಾತ ಕುಂಟಪ್ಪ ಮೂಲ್ಯ ಎಂಬವರ ವಾಣಿಜ್ಯ ಸಂಕೀರ್ಣದ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೂಂಜಾಲಕಟ್ಟೆ ಪಿಎಸ್ಸೆ ಉದಯ ರವಿ ಎಂ ವೈ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿ ಮಾರಾಟ ಮಾಡುತ್ತಿದ್ದ 180 ಎಂ ಎಲ್ ನ 17 ಸ್ಯಾಚೆಟ್ ಒಟ್ಟು 3.06 ಲೀಟರ್ ಮದ್ಯವನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ 2,074/- ರೂಪಾಯಿ ಆಗಬಹುದು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್‌ ಪ್ರಕರಣ ದಾಖಲಾಗಿದೆ.

Categories
ಆರೋಗ್ಯ ರಾಜ್ಯ ರಾಷ್ಟ್ರೀಯ ವಾರ್ತೆ

ಕಾನ್ಸರ್ ಔಷಧ ಇನ್ನು ಅಗ್ಗ!

ಕಾನ್ಸರ್ ಔಷಧ ಇನ್ನು ಅಗ್ಗ!
– 72 ಲಕ್ಷ ಮೌಲ್ಯದ ಔಷಧಿ ಈಗ ಕೇವಲ 3 ಲಕ್ಷಕ್ಕೆ.!
– ಪೇಟೆಂಟ್ ಅವಧಿ ಮುಗಿದ ಹಿನ್ನೆಲೆ ಅಗ್ಗ
– ಲೈಫ್‌ಸೈನ್ಸಸ್ ಔಷಧ ಕಂಪನಿ ಮಾಹಿತಿ

NAMMUR EXPRESS NEWS
ನವದೆಹಲಿ: ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಗೆ ಪ್ರಮುಖವಾಗಿ ಬಳಸುವ ಓಲಾಪರಿಬ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಇದುವರೆಗೂ 72 ಲಕ್ಷ ರು. ತಗಲುತ್ತಿದ್ದ ಔಷಧಿ ಇನ್ನು ಕೇವಲ 3 ಲಕ್ಷ ರು.ಗಳಿಗೆ ಲಭ್ಯವಾಗಲಿದೆ ಎಂದು ಝಡಸ್ ಲೈಫ್‌ಸೈನ್ಸಸ್ ಔಷಧ ಕಂಪನಿ ಮಾಹಿತಿ ನೀಡಿದೆ. ಔಷಧ ತಯಾರಿಸಿದ್ದ ಮೂಲ ಕಂಪನಿಯ ಪೇಟೆಂಟ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮೂಲ ಔಷದಧ ಜೆನೆರಿಕ್ ಮಾದರಿ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಭಾರತದಲ್ಲಿ ಪ್ರತಿ ವರ್ಷ 14 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಪೈಕಿ 2.75 ಲಕ್ಷ ಜನರು ಸ್ತನ, ಗರ್ಭಕೋಶ, ಮೇಜೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಲು ಓಲಾಪರಿಬ್ ಅನ್ನು ಬಳಸಲಾಗುತ್ತದೆ. ಒಂದು ವರ್ಷದ ಚಿಕಿತ್ಸೆಗೆ ಇದುವರೆಗೂ 75 ಲಕ್ಷ ರು.ಗಳನ್ನು ಔಷಧಕ್ಕಾಗಿ ವ್ಯಯಿಸಬೇಕಿತ್ತು. ಆದರೆ ಅದೇ ಔಷಧಿ ಇನ್ನು ಕೇವಲ 3 ಲಕ್ಷ ರು. ಗೆ ಸಿಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Categories
ರಾಜಕೀಯ ರಾಜ್ಯ

ಕುರುಡು ಕಾಂಚಾಣ ಕುಣಿತ ಶುರು!

ಕುರುಡು ಕಾಂಚಾಣ ಕುಣಿತ ಶುರು!
– ಲೋಕ ಸಭಾ ಚುನಾವಣೆ: 10 ಕೋಟಿ ಹಣ ವಶ,!
– ರಾಮನಗರ: ಗೋಡೌನ್ ನಲ್ಲಿ ಸಾವಿರಾರು ಸೀರೆ ಪತ್ತೆ
– ಕೊಳ್ಳೇಗಾಲದಲ್ಲಿ ದಾಖಲೆ ಇಲ್ಲದ 1 ಲಕ್ಷ ರೂ. ಹಣ ವಶ
– ಬಾಗಲಕೋಟೆ: ಚೆಕ್‌ ಪೋಸ್ಟ್ ನಲ್ಲಿ 17.2900 ರೂ ಜಪ್ತಿ!
– ರಾಜ್ಯದೆಲ್ಲೆಡೆ ಬಿಗಿ ಬಂದೋಬಸ್ತ್: ಎಲ್ಲೆಡೆ ತಪಾಸಣೆ

NAMMUR EXPRESS NEWS
ಲೋಕಸಭೆ ಚುನಾವಣೆಗೆ ಘೋಷಣೆ ಬೆನ್ನಲ್ಲೇ ಪೊಲೀಸರು ಮತ್ತು ಚುನಾವಣೆ ಆಯೋಗ ಭರ್ಜರಿ ಕಾರ್ಯಾಚರಣೆ ಮಾಡಿದ್ದು,ರಾಜ್ಯಾದ್ಯಂತ 5.85 ಕೋಟಿ ರೂ.ಜಪ್ತಿ ಮಾಡಲಾಗಿದೆ. ವಿವಿಧ ತನಿಖಾ ತಂಡಗಳು 5.85 ಕೋಟಿ ರೂ.ನಗದು ಸೇರಿದಂತೆ ಏಳು ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿವೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 27.62 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯಾದ್ಯಂತ ಈವರೆಗೆ 5.87 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆಗಳು, 6.84 ಲಕ್ಷ ರೂ. ಮೌಲ್ಯದ 2148 ಲಕ್ಷ ಲೀಟರ್ ಮದ್ಯ, 15.21 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 2.93ಕೋಟಿ ರೂ. ನಗದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ 32.92 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ರಾಮನಗರ: ಗೋಡೌನ್ ನಲ್ಲಿ ಸಾವಿರಾರು ಸೀರೆ ಪತ್ತೆ

ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೆ, ರಾಮನಗರದ ದ್ಯಾವರಸೇಗೌಡನ ದೊಡ್ಡಿಯಲ್ಲಿ ಗೋಡೌನ್ ನಲ್ಲಿ ಲೋಡ್ ಆಗಿದ್ದ ಸೀರೆಗಳು ಪತ್ತೆಯಾಗಿದೆ. ಈ ಸೀರೆಗಳು ಕಾಂಗ್ರೆಸ್‌ ಹಾಗೂ ಜೆಡಿಎಸ್ ಗೆ ಸೇರಿದ್ದು ಎಂದು ಉಭಯ ಪಕ್ಷಗಳ ಕಾರ್ಯಕರ್ತರು ಒಬ್ಬರ ಮೇಲೊಬ್ಬರು ಆರೋಪಿಸಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ಟ್ರಕ್ ಸೀಜ್ ಮಾಡಿದ್ದನ್ನು ಖಚಿತಪಡಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ರಾಮನಗರದ ಕಾಂಗ್ರೆಸ್ ಶಾಸಕ ಇಟ್ಬಾಲ್ ಹುಸ್ಸೇನ್ ಆಪ್ತ ಸಹಾಯಕ ವಾಸಿಮ್ ಹೆಸರಿನ ವ್ಯಕ್ತಿ ಸೀರೆಗಳನ್ನು ಲೋಡ್ ಮಾಡಿಸುತ್ತಿದ್ದ. ಸಿಸಿಟಿವಿಯಲ್ಲಿ ಅವನ ಓಡಾಟ ಸೆರೆಯಾಗಿದೆ ಎಂದು ಹೇಳಲಾಗಿದೆ. ವಿಆ‌ರ್ ಎಲ್ ಗೋದಾಮಿನಲ್ಲಿ ಪತ್ತೆಯಾಗಿರುವ ಸೀರೆಗಳು ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೊಳ್ಳೇಗಾಲದಲ್ಲಿ ದಾಖಲೆ ಇಲ್ಲದ ₹1,00,000 ರೂ. ಹಣ ವಶ

ಚಾ ಮರಾಜನಗರ: ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 1 ಲಕ್ಷ ರೂಪಾಯಿ ಹಣವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದಾಸನಪುರ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ದಾಸನಪುರ ಚೆಕ್‌ ಪೋಸ್ಟ್‌ನಲ್ಲಿ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದ ವೇಳೆ ದಾಖಲೆ ಇಲ್ಲದೆ 1 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇನ್ನು ಈ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಚೆಕ್‌ ಪೋಸ್ಟ್’ನಲ್ಲಿ 17.2900ರೂ ಜಪ್ತಿ

ಬಾಗಲಕೋಟೆ : ತೇರದಾಳ ಪಟ್ಟಣದ ನಾಲ್ಕನೇ ಕೆನಾಲ ಬಳಿ ಇರುವ ಚೆಕ್‌ಪೋಸ್ಟ್ ನಲ್ಲಿ ಬಿಗಿಯಾದ ತಪಾಸಣೆ ನಡೆದಿದೆ.ಮಹಾರಾಷ್ಟ್ರ ನೋಂದಣಿ ಇರುವ ಕಾರ್ ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1,72,900 ರೂ. ಹಣವನ್ನು ಪರಿಶೀಲನೆ ಸಂದರ್ಭದಲ್ಲಿ ಜಪ್ತ ಮಾಡಲಾಗಿದೆ. ಇನ್ನು ರಾಜ್ಯದಲ್ಲೆಡೆ ಲೋಕಸಭಾ ಚುನಾವಣೆಯ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಗಿ ಪೋಲಿಸ್ ಬಂದೋಸ್ತ್ ಮಾಡಿಲಾಗಿದೆ ಎಲ್ಲೆಡೆ ಪೊಲೀಸ್ ಹದ್ದಿನ ಗಣ್ಣಿಟ್ಟಿದ್ದು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಮಾ .31ರಂದು ಯಾವುದೇ ‘ಬ್ಯಾಂಕ್’ಗೆ ರಜೆ ಇಲ್ಲ

ಮಾ .31ರಂದು ಯಾವುದೇ ‘ಬ್ಯಾಂಕ್’ಗೆ ರಜೆ ಇಲ್ಲ
– ಆರ್. ಬಿ.ಐ ಮಹತ್ವದ ಆದೇಶ
– ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ.!
– ನೀವು ಆದಾಯ ತೆರಿಗೆ ಕಟ್ಟಿ ದಾಖಲೆ ಪಡೆಯಿರಿ!

NAMMUR EXPRESS NEWS
ನವದೆಹಲಿ : ಮಾರ್ಚ್ 31ರ ಭಾನುವಾರದಂದು ಬ್ಯಾಂಕ್’ನ್ನ ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ವೀಟ್ ಮೂಲಕ ಆರ್ ಬಿ ಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ. ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನ ತೆರೆದಿಡಲು ನಿರ್ಧರಿಸಿತ್ತು. ಗುಡ್ ಫ್ರೈಡೆ ರಜೆ ಸೇರಿದಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳನ್ನ ಇಲಾಖೆ ರದ್ದುಗೊಳಿಸಿತ್ತು.

Categories
ಬೆಂಗಳೂರು ರಾಜಕೀಯ ರಾಜ್ಯ

ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು: ಆಪರೇಷನ್!

ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು: ಆಪರೇಷನ್!
– ವಿದೇಶಿ ವೈದ್ಯರಿಂದ ಹೃದಯ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ
– ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು

NAMMUR EXPRESS NEWS
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದು ಅವರಿಗೆ ಗುರುವಾರ ಹೃದಯ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕುಮಾರಸ್ವಾಮಿ ಅವರಿಗೆ ಗುರುವಾರ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಪರಿಣಿತ ವೈದ್ಯರು ಕುಮಾರಸ್ವಾಮಿಯವರಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದು, ಶಸ್ತ್ರಚಿಕಿತ್ಸೆ ಬಳಿಕ 2-3 ದಿನ ವಿಶ್ರಾಂತಿ ಪಡೆಯುವ ಕುಮಾರಸ್ವಾಮಿ ಮಾ.25 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಜತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿರುವ ಕುಮಾರಸ್ವಾಮಿ ರಾಜ್ಯದ ಹಾಸನ, ಮಂಡ್ಯ, ತುಮಕೂರು ಪೈಕಿ ಯಾವುದಾದ್ರೂ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.