Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– 50 ಸಾವಿರ ಸನಿಹದತ್ತ ರಾಶಿ?
– ಬೆಟ್ಟೆ ಎಷ್ಟು? ಗೊರಬಲು ಎಷ್ಟು..?

ಬೆಟ್ಟೆ- 44110-54789
ಗೊರಬಲು- 18000-37869
ರಾಶಿ – 24406-48759
ಸರಕು – 48200-81660
ಸಿಪ್ಪೆಗೋಟು – 14215-18099
ಚಾಲಿ- 30899-33899
ಕೋಕಾ – 24989-28099
ಕರೆ ಗೋಟು – 30299-34189
ಬಿಳೆ ಗೋಟು-23499-25409

Categories
ಕರಾವಳಿ ರಾಜಕೀಯ ರಾಜ್ಯ

ಕರಾವಳಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುತೇಕ ಫೈನಲ್!?

ಕರಾವಳಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುತೇಕ ಫೈನಲ್!?
– ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಅಧಿಕೃತ ಘೋಷಣೆಯಷ್ಟೇ ಬಾಕಿ
– ಎರಡೂ ಕಡೆ ಚುನಾವಣಾ ಕಣಕ್ಕಿಳಿಯಲು ಸಿದ್ಧರಾದ ಆಕಾಂಕ್ಷಿಗಳು
– ದಕ್ಷಿಣ ಕನ್ನಡದಲ್ಲಿ ಪದ್ಮರಾಜ್‌, ಉಡುಪಿಯಲ್ಲಿ ಜಯಪ್ರಕಾಶ್‌ ಹೆಗ್ಡೆಗೆ ಟಿಕೆಟ್‌ ಖಚಿತ

NAMMUR EXPRESS NEWS
ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಕ್ಷಣ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ನ ಸಿಇಸಿ ಸಭೆಯಲ್ಲಿ ಕರ್ನಾಟಕದ ಸುಮಾರು 15ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಆ ಪೈಕಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕೂಡ ಸೇರಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿಯಾಗಿರುವ, ಬಿಲ್ಲವ ಸಮಾಜದ ಮುಖಂಡ ಪದ್ಮರಾಜ್‌ ರಾಮಯ್ಯ ಅವರ ಹೆಸರು ಅಂತಿಮಗೊಂಡಿದ್ದು, ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್‌ ಅವರು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ಧುರೀಣ ಜನಾರ್ದನ ಪೂಜಾರಿ ಅವರ ಅಪ್ಪಟ ಶಿಷ್ಯ ಕೂಡ ಆಗಿದ್ದಾರೆ. ಬಿಜೆಪಿಯಿಂದ ನಿವೃತ್ತ ಸೇನಾಧಿಕಾರಿಯಾಗಿರುವ ಬೃಜೇಶ್‌ ಚೌಟ ಅವರಿಗೆ ಟಿಕೆಟ್‌ ಲಭಿಸಿದ್ದು, ಈಗಾಗಲೇ ಬಿರುಸಿನ ಪ್ರಚಾರ ಕೂಡ ಪ್ರಾರಂಭಿಸಿದ್ದಾರೆ. ಪದ್ಮರಾಜ್‌ ಹೆಸರು ಘೋಷಣೆಯಾದರೆ, ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಬಿಲ್ಲವ ವರ್ಸಸ್‌ ಬಂಟ ಸಮುದಾಯದ ನಡುವಿನ ಫೈಟ್‌ ಆಗಲಿದೆ. ಇಬ್ಬರೂ ಹೊಸ ಮುಖವಾಗಿರುವ ಕಾರಣ ಮತದಾರರಿಗೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಈ ಬಾರಿ ಅವಕಾಶ ಲಭಿಸಿದೆ.

ಇನ್ನು ತಮಗೆ ಟಿಕೆಟ್‌ ಲಭಿಸುವ ಕುರಿತು ಪದ್ಮರಾಜ್‌ ಪ್ರತಿಕ್ರಿಯಿಸಿದ್ದು, ದೇಶದ ಭಾವನೆಗಳಿಗೆ ಬೆಲೆ ಕೊಡುವ ಪಕ್ಷ ಅದು ಕಾಂಗ್ರೆಸ್. ನನಗೆ ಈ ಬಾರಿ ಟಿಕೆಟ್‌ ಲಭಿಸುತ್ತದೆ ಎನ್ನುವ ಭರವಸೆ ಇದೆ. ನಾನು ಜನರ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ನಾನು ನಾರಾಯಣ ಗುರುಗಳ ತತ್ತ್ವ ಸಂದೇಶ ಹಾಗೂ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಜಿಲ್ಲೆಯ ಬಗ್ಗೆ ನನಗೆ ಬಹಳ ಕನಸು ಇದೆ. ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವಾಗುತ್ತದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಅದನ್ನು ಅತ್ಯುತ್ತಮವಾಗಿ ಎದುರಿಸುವುದಕ್ಕೆ ನಾವು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಜಯಪ್ರಕಾಶ್‌ ಹೆಗ್ಡೆ!

ಅತ್ತ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಹಿರಿಯ ನಾಯಕ ಜಯಪ್ರಕಾಶ್‌ ಅವರಿಗೆ ಟಿಕೆಟ್‌ ಫೈನಲ್‌ ಆಗಿರುವುದಾಗಿ ಹೇಳಲಾಗುತ್ತಿದೆ. ಈ ಹಿಂದೆ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಜಯಪ್ರಕಾಶ್‌ ಅವರಿಗೆ ಸುಧೀರ್ಘ ರಾಜಕೀಯ ಅನುಭವವಿದೆ. ಅಷ್ಟೇಅಲ್ಲ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಈ ಹಿಂದೆಯೂ ಚುನಾವಣೆ ಎದುರಿಸಿರುವ ಕಾರಣ ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಯ ಪ್ರಕಾಶ್‌ ಅವರ ಹೆಸರು ಘೋಷಣೆಯಾದರೆ, ಈ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್‌ ಪಡೆದು ಪ್ರಚಾರ ಆರಂಭಿಸಿರುವ ಮಾಜಿ ಸಚಿವ, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.

ಇಬ್ಬರು ಅಭ್ಯರ್ಥಿಗಳಿಗೂ ರಾಜಕೀಯವಾಗಿ ಉತ್ತಮ ವರ್ಚಸ್ಸು, ಅನುಭವ ಹಾಗೂ ಜಾತಿ ಬಲವಿದೆ. ಜಾತಿ ಲೆಕ್ಕಾಚಾರದಲ್ಲಿಯೂ ಕೋಟ ಬಿಲ್ಲವ ಸಮುದಾಯಕ್ಕೆ ಸೇರಿದ್ದರೆ ಜಯಪ್ರಕಾಶ್‌ ಹೆಗ್ಡೆ ಬಂಟ ಸಮುದಾಯಕ್ಕೆ ಸೇರಿದ್ದಾರೆ. ಹೀಗಿರುವಾಗ, ಈ ಕ್ಷೇತ್ರದಲ್ಲಿಯೂ ಬಂಟ ವರ್ಸಸ್‌ ಬಿಲ್ಲವರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ತಮಗೆ ಟಿಕೆಟ್‌ ಲಭಿಸುವ ಕುರಿತಂತೆ ಜಯಪ್ರಕಾಶ್‌ ಹೆಗ್ಡೆ ಕೂಡ ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾವು ಜಾತ್ಯತೀತ ಸಮಾಜದಲ್ಲಿ ಇದ್ದೇವೆ. ಇಲ್ಲಿ ಜನರ ಅಭಿಪ್ರಾಯ ಮುಖ್ಯ. ನಾನು ಯಾವುದೇ ಚುನಾವಣೆಯಲ್ಲಿ ಎದುರಾಳಿಯನ್ನು ಟೀಕಿಸುವುದಿಲ್ಲ. ನನ್ನ ಹೆಸರಿನಲ್ಲೇ ಮತ ಕೇಳುತ್ತೇನೆ ಹಾಗೂ ನನ್ನ ಬಗ್ಗೆ ಗೊತ್ತಿಲ್ಲದವರ ಬಳಿ ಪರಿಚಯ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಕ್ಷೇತ್ರದ ಜನಪ್ರತಿನಿಧಿ ಮುಖ್ಯ ಅಂದುಕೊಂಡು ಮತದಾರರು ತಮ್ಮ ಮತ ಚಲಾಯಿಸಬೇಕು ಎಂದಿದ್ದಾರೆ.

ಒಟ್ಟಿನಲ್ಲಿ ಕರಾವಳಿಯ ಎರಡೂ ಕ್ಷೇತ್ರದಲ್ಲಿ ಇನ್ನು ಕೂಡ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡದಿದ್ದರೂ ಪ್ರಬಲ ಆಕಾಂಕ್ಷಿಗಳಾಗಿ ಪದ್ಮರಾಜ್‌ ಹಾಗೂ ಜಯಪ್ರಕಾಶ್‌ ಹೆಗ್ಡೆ ಚುನಾವಣಾ ಕಣಕ್ಕಿಳಿಯುವುದಕ್ಕೆ ಸಿದ್ಧರಾಗಿ ನಿಂತಿರುವುದು ಗಮನಾರ್ಹ.

Categories
ಕರಾವಳಿ ಮಂಗಳೂರು

ಲೋಕ ಸಭಾ ಚುನಾವಣೆಗೆ ಕರಾವಳಿಯಲ್ಲಿ ಕಟ್ಟೆಚ್ಚರ!

ಲೋಕ ಸಭಾ ಚುನಾವಣೆಗೆ ಕರಾವಳಿಯಲ್ಲಿ ಕಟ್ಟೆಚ್ಚರ!
– ಮಂಗಳೂರು ಪೊಲೀಸರಿಂದ 19 ರೌಡಿಗಳ ಗಡಿಪಾರು
– ಮೂವರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ

NAMMUR EXPRESS NEWS
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಬಹಳ ಶಾಂತಿಯುತವಾಗಿ ಮತದಾನ ಮಾಡುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯು ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು 19 ರೌಡಿಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿಂದಿನ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಹಿನ್ನಲೆ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಮೂವರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ:

ಇನ್ನೊಂದೆಡೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೂವರು ಕ್ರಿಮಿನಲ್‌ ಹಿನ್ನಲೆ ಹೊಂದಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಅತ್ತೆಗೆ ಅರಿವು ನಾಟಕ..!

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಅತ್ತೆಗೆ ಅರಿವು ನಾಟಕ..!
– ಮಹಿಳಾ ದಿನಾಚರಣೆ ಅಂಗವಾಗಿ ಲೂರ್ದು ಮಾತೆ ದೇವಾಲಯದಲ್ಲಿ ಪ್ರದರ್ಶನ
– ಮಂಜುನಾಥ್ ಶಿರುಪತಿ ನಿರ್ದೇಶನದ ನಾಟಕ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಾ.17ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅತ್ತೆಗೆ ಅರಿವು ನಾಟಕವನ್ನು ತೀರ್ಥಹಳ್ಳಿಯ ಲೂರ್ದು ಮಾತೆ ದೇವಾಲಯದ ಯೂನಿಟ್ ಹಾಲ್ ನಲ್ಲಿ ಪ್ರದರ್ಶಿಸಲಾಯಿತು. ಲುರ್ದು ಮಾತೆ ದೇವಾಲಯದ ಹಿರಿಯ ಮತ್ತು ಕಿರಿಯ ಫಾದರ್ ಸಿಸ್ಟರ್ ಹಾಗೂ ವಿವಿಧ ಸಂಘಟನೆಯ ಸಮಿತಿಯ ಮಹಿಳಾ ಲುರ್ದು ಮಾತೆ ಸಂಘಟನೆ, ಮಹಿಳೆಯರು,ಅಧ್ಯಕ್ಷರಾದ ಪ್ಲೀ ಟಾ ಶ್ರಾವು, ಮಹಿಳಾ ಸಮಿತಿಯ ಸದಸ್ಯರು,ಮಹಿಳೆಯರು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು. ಅತ್ತೆಗೆ ಅರಿವು ನಾಟಕವು ಮಂಜುನಾಥ್ ಶಿರುಪತಿ ಕಥೆ ನಿರ್ದೇಶನದಲ್ಲಿ ಹಾಗೂ ಸಹ ನಿರ್ದೇಶಕರಾಗಿ ಸಹ್ಯಾದ್ರಿ ಚೇತನ್ ಮೇಕಪ್ ಪ್ರಸಾದನ ಸಹಕರಿಸಿದರು. ಕಲಾವಿದ ಗುರು ಇವರುಗಳ ಸಂಯೋಜನೆಯಲ್ಲಿ ನಾಟಕ ಯಶಸ್ವಿಯಾಗಿ ನಡೆಯಿತು. ಕಾರ್ಯದರ್ಶಿ ಓವಿನ್ ಡಿಸೋಜ ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ
ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ
– ಸರ್ಕಾರ ಹಾಗೂ ಕ್ಷೇತ್ರದ ಶಾಸಕರಿಗೆ ಅಭಿನಂದನೆ
– ಗ್ರಾಮ ಪಂಚಾಯತಿ ಒಕ್ಕೂಟದ ಅಧ್ಯಕ್ಷ ಅನಿಲ್

NAMMUR EXPRESS NEWS
ತೀರ್ಥಹಳ್ಳಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭವಾಗಿದ್ದು ಜಾಕ್ವೆಲ್ ಅನ್ನು ಮಾಣಿ ಡ್ಯಾಂ ನ ಹಿನ್ನೀರಿನಲ್ಲಿ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿಲ್ಲ ಎಂಬ ಕಾರಣ ನೀಡಿ ಯೋಜನೆಯನ್ನೇ ರದ್ದುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ತಾಲೂಕಿನ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಏರ್ಪಟ್ಟಿದ್ದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಯಾವಾಗ ನೀರು ದೊರಕುತ್ತದೆಂಬ ಆಶಾಕಂಗಳಲ್ಲಿ ಗ್ರಾಮೀಣ ಭಾಗದ ಜನತೆ ನೋಡುತ್ತಿದ್ದಾರೆ.

ಮುಳುಬಾಗಿಲು,ಹೆಗ್ಗೋಡು ಗ್ರಾಮದ ರೈತರನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನ ಜನತೆಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ದೃಷ್ಟಿಯಿಂದ ಕ್ಷೇತ್ರದ ಶಾಸಕರು ಜಾಕ್ವೆಲ್ ನಿರ್ಮಾಣವನ್ನು ಮಾಣಿ ಡ್ಯಾಂ ನ ಹಿನ್ನೀರಿನಲ್ಲಿ ನಿರ್ಮಿಸಲು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲು ಸರ್ಕಾರಕ್ಕೆ ವಿನಂತಿಸಿದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸಲು ಮುಂದಾದ ಸರ್ಕಾರ ಹಾಗೂ ಕ್ಷೇತ್ರದ ಶಾಸಕರಾದಂತಹ ಆರಗ ಜ್ಞಾನೇಂದ್ರರವರಿಗೆ ತಾಲೂಕು ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಅನಿಲ್ ಟಿಜೆ ಎಲ್ಲಾ ಗ್ರಾಮೀಣ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Categories
ರಾಜ್ಯ

ರಾಜ್ಯದ ಎಲ್ಲಾ ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ..!

ರಾಜ್ಯದ ಎಲ್ಲಾ ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ..!
– ಎಡಿಜಿಪಿ ಅಲೋಕ್ ಕುಮಾ‌ರ್ ಆದೇಶ!

NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸರು ದ್ವಿಚಕ್ರ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?; ರಾಜ್ಯದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದೇ ರಸ್ತೆ ಅವಘಾತಗಳು ಉಂಟಾಗಿ, ಕೆಲವು ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಮತ್ತು ಕೆಲವರು ಮೃತಪಟ್ಟಿರುವ ಘಟನೆಗಳು ಸಂಭವಿಸಿರುವುದು ಕಂಡು ಬಂದಿದೆ.

ಅಪಘಾತದಿಂದ ಆಗುವ ಸಾವು ನೋವುಗಳನ್ನು ತಪ್ಪಿಸಲು, ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮೋಟರು ವಾಹನ ಕಾಯ್ದೆ ನಿಯಮಗಳನ್ನು ಪಾಲಿಸಬೇಕು. ತಮ್ಮ ವ್ಯಾಪ್ತಿಯ ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನೋಡಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಎಡಿಜಿಪಿ ಅಲೋಕ್ ಕುಮಾ‌ರ್ ಅವರು ಆದೇಶ ಹೊರಡಿಸಿದ್ದಾರೆ.

Categories
ತೀರ್ಥಹಳ್ಳಿ

ತುಂಗಾನದಿಯಲ್ಲಿ ಈಜಾಡುತ್ತಿದ್ದ ಯುವಕರ ಮೇಲೆ ದಾಳಿ!

ತುಂಗಾನದಿಯಲ್ಲಿ ಈಜಾಡುತ್ತಿದ್ದ ಯುವಕರ ಮೇಲೆ ದಾಳಿ!
– ಓರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
– ಸ್ಥಳೀಯರು ಸ್ಥಳಕ್ಕೆ ಬಂದು ರಕ್ಷಣೆ

NAMMUR EXPRESS NEWS
ಶಿವಮೊಗ್ಗದ ಮತ್ತೂರು ಸಮೀಪ ತುಂಗಾ ಹೊಳೆಯಲ್ಲಿ ಈಜಾಡುತ್ತಿದ್ದ ಯುವಕರನ್ನ ಏಳೆಂಟು ಮಂದಿ ಸೇರಿಕೊಂಡು ವಿನಾಕಾರಣ ಹಲ್ಲೆ ಮಾಡಿದ ಸಂಬಂಧ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆ ಏತಕ್ಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ . ಹಾಗೆಯೇ ಪ್ರಕರಣದ ಆರೋಪಿಗಳು ಯಾರು ಎಂಬುದು ಸಹ ಹಲ್ಲೆಗೊಳಗಾದವರಿಗೆ ತಿಳಿದಿಲ್ಲ.

ಮಾರ್ಚ್ 18 ರಂದು ತುಂಗಾ ನದಿಯಲ್ಲಿ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈ ವೇಳೇ ಅಕ್ರಮ ಕೂಟ ಕಟ್ಟಿಕೊಂಡು ಬಂದ ಗುಂಪೊಂದು, ಈಜಾಡುತ್ತಿದ್ದವರ ಪೈಕಿ ಓರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ತಡೆಯಲು ಬಂದ ಆತನ ಸ್ನೇಹಿತರ ಮೇಲೂ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಒಬ್ಬಾತ ತನ್ನ ಉಂಗುರದಿಂದ ಯುವಕನ ಹಣೆಗೆ ಹೊಡೆದಿದ್ದು, ಇದರಿಂದ ಆತನ ತಲೆಯಲ್ಲಿ ಗಂಭೀರ ಗಾಯವಾಗಿದೆ. ಇನ್ನೂ ಕೂಗಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಓಡಿಬರುತ್ತಲೇ ಹಲ್ಲೆ ಮಾಡಿದ ಅಪರಿಚಿತರು ಸ್ಥಳದಿಂದ ಓಡಿ ಹೋಗಿದ್ದಾರೆ. ಸದ್ಯ ಪ್ರಕರಣ ಸಂಬಂಧ ಅಕ್ರಮ ಕೂಟ, ಉದ್ದೇಶ ಪೂರ್ವ ಹಲ್ಲೆ, ಉದ್ದೇಶ ಪೂರ್ವಕವಾಗಿ ಮಾರಕಾಸ್ತ್ರದಿಂದ ಹಲ್ಲೆ ಆರೋಪದ ಅಡಿಯಲ್ಲಿ IPC 1860 (U/s-323,324,149) ಕೇಸ್‌ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸ್ತಿದ್ದಾರೆ.

Categories
ಚಿಕ್ಕಮಗಳೂರು

ಟಾಪ್ 3 ನ್ಯೂಸ್ ಚಿಕ್ಕಮಗಳೂರು

ಮೇಯುತ್ತಿದ್ದ ಕುರಿಗಳ ಕಳ್ಳತನ ಆರೋಪಿ ಬಂಧನ
– ಆಲ್ದೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಗ್ರಾಂ ಚಿನ್ನದ ಉಂಗುರಗಳು ಸೀಜ್
– ಕಡೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಹೊತ್ತಿ ಉರಿದ ಮನೆ

NAMMUR EXPRESS NEWS
ಕೊಟ್ಟಿಗೆಹಾರ: ಮೇಯುತ್ತಿದ್ದ ಕುರಿಗಳನ್ನು ಕಳ್ಳತನ ಮಾಡಿ ಅಪರಿಹರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ನಡೆದಿದೆ. ಶಿವಮೊಗ್ಗ ಮೂಲದ ಭದ್ರಾವತಿಯ ಜಬೀವುಲ್ಲಾ ಮತ್ತು ಕುಟುಂಬದವರು ಕಾರಿನಲ್ಲಿ ಕೊಟ್ಟಿಗೆ ಹಾರದ ಅತ್ತಿಗೆರೆ ಸಮೀಪ ಮೇಯುತ್ತಿದ್ದ ಮೊಹಮ್ಮದ್ ಎಂಬುವವರ 5 ಕುರಿಗಳನ್ನು ಕಾರಿನಲ್ಲಿ ತುಂಬಿದಾಗ ಸ್ಥಳೀಯರೊಬ್ಬರು ಕುರಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸ್ಥಳೀಯರು ಜಮಾಯಿಸಿ ಆರೋಪಿ ಜಬೀವುಲ್ಲಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಪೊಲೀಸ್ ಸಿಬ್ಬಂದಿ ಜಗದೀಶ್ ಮತ್ತಿತರ ಸಿಬ್ಬಂದಿಗಳು ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆಲ್ದೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಗ್ರಾಂ ಚಿನ್ನದ ಉಂಗುರಗಳು ಸೀಜ್

ಆಲ್ದೂರು: ಲೋಕಸಭೆ ಚುನಾವಣೆಗೆ 2024 ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಆಲ್ದೂರಿನ ವಸ್ತಾರೆ ಜಂಕ್ಷನ್ ಬಳಿ ದಾಖಲೆ ಇಲ್ಲದೆ ಬಲೆನೋ ವಾಹನದಲ್ಲಿ ಸಾಗಿಸುತ್ತಿದ್ದ 90 ಗ್ರಾಂ ಮೌಲ್ಯದ 18 ಚಿನ್ನದ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ. ಚಿನ್ನದ ವ್ಯಾಪಾರಿ ಒಬ್ಬರು ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ನೀಡಲು ತೆರಳುತ್ತಿದ್ದರು ಎನ್ನಲಾಗಿದ್ದು, ತಪಾಸಣೆ ನಡೆಸಿದ ಪೊಲೀಸರು ಚಿನ್ನದ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.

ಕಡೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ: ಹೊತ್ತಿ ಉರಿದ ಮನೆ

ಕಡೂರು: ಮನೆ ಮೇಲೆ ತುಂಡಾಗಿ ವಿದ್ಯುತ್ ತಂತಿ ಬಿದ್ದ ಪರಿಣಾಮ ಮನೆಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬ್ಯಾಗಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯವರು ತೋಟಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಮಂಜಮ್ಮ, ಚಂದ್ರಪ್ಪ ಎಂಬುವರ ಮನೆ ಬೆಂಕಿಯಿಂದ ಸಂಪೂರ್ಣ ಹಾನಿಯಾಗಿ, ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಿಯರು ಹಾಗೂ ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸಿದ್ದು. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ಬೆಂಗಳೂರು ರಾಜ್ಯ

ಆಭರಣ ಪ್ರಿಯರಿಗೆ ಬಿಗ್ ಶಾಕ್..!

ಆಭರಣ ಪ್ರಿಯರಿಗೆ ಬಿಗ್ ಶಾಕ್..!
– ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಿನ್ನದ ಬೆಲೆ!
– ದೀಪಾವಳಿ ಹೊತ್ತಿಗೆ 70 ಸಾವಿರ ಗಡಿ ದಾಟುವ ಸಾಧ್ಯತೆ..!

NAMMUR EXPRESS NEWS
ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಬಡವರು, ಮಧ್ಯಮ ವರ್ಗದವರು ಚಿನ್ನದ ಅಂಗಡಿಯ ಕಡೆ ತಲೆ ಹಾಕಿ ಮಲಗುವಂತೆಯೂ ಇಲ್ಲ, ಆ ರೀತಿ ಬೆಲೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 66 ಸಾವಿರದ ಗಡಿ ದಾಟಿದೆ. ಇದು ಬೇರೆ ಮದುವೆ ಮುಂಜಿ ಸಮಯ, ಇನ್ನೆರಡು ತಿಂಗಳು ಕಳೆದರೆ, ಅಕ್ಷಯ ತೃತೀಯ ಕೂಡ ಬರುತ್ತದೆ. ಈ ಹೊತ್ತಲ್ಲಿ, ಚಿನ್ನದ ಬೆಲೆ ಇನ್ನೂ ಏರಲಿದೆ. ಇನ್ನು ದೀಪಾವಳಿ ಹೊತ್ತಲ್ಲಿ ಚಿನ್ನದ ಬೆಲೆ 70 ಸಾವಿರ ದಾಟಬಹುದು ಎನ್ನಲಾಗಿದೆ. ಇನ್ನು ಐದಾರು ತಿಂಗಳ ಹಿಂದೆಯೇ, ಮಾರ್ಚ್ ಏಪ್ರಿಲ್‌ನಲ್ಲಿ ಚಿನ್ನದ ಬೆಲೆ 65 ಸಾವಿರ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿತ್ತು.

ಇನ್ನು ಯಾಕೆ ಚಿನ್ನದ ಬೆಲೆ ಇಷ್ಟು ಹೆಚ್ಚಾಗುತ್ತಿದೆ ಅಂತಾ ಹೇಳುವುದಾದರೆ, ವಿಶ್ವದ ಹಲವು ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನ ಖರೀದಿ ಹೆಚ್ಚು ಮಾಡಿದೆ. ಹಾಗಾಗಿ ಚಿನ್ನದ ಬೆಲೆ ಏರುತ್ತಿದೆ. ಇನ್ನು ಸೆಂಟ್ರಲ್ ಬ್ಯಾಂಕ್‌ ಬಡ್ಡಿದರ ಹೆಚ್ಚಾದರೆ, ಚಿನ್ನದ ದರ ಕಡಿಮೆಯಾಗುತ್ತದೆ. ಅದೇ ರೀತಿ ಬಡ್ಡಿದರ ಕಡಿಮೆಯಾದರ, ಚಿನ್ನದ ದರ ಹೆಚ್ಚುತ್ತದೆ. ಇಡೀ ಪ್ರಪಂಚದಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇರುವುದೇ ನಮ್ಮ ಭಾರತ ದೇಶದಲ್ಲಿ. ಇನ್ನು ಮೇನಲ್ಲಿ ಅಕ್ಷಯ ತೃತೀಯ ಮುಗಿದು ಭಾರತದಲ್ಲಿ ಚಿನ್ನ ಖರೀದಿಸುವ ಸಂಖ್ಯೆ ಕಡಿಮೆಯಾಗುತ್ತದೆ. ಈ ವೇಳೆ ಜೂನ್ ಜುಲೈ ಸಮಯದಲ್ಲಿ ಚಿನ್ನದ ದರ ಇಳಿಯಬಹುದು.

Categories
ತೀರ್ಥಹಳ್ಳಿ

ಇಂದು ತೀರ್ಥಹಳ್ಳಿಯಲ್ಲಿ ಕೊನೆಯ ದಿನದ ಮಾರಿ ಜಾತ್ರೆ..!

ಇಂದು ತೀರ್ಥಹಳ್ಳಿಯಲ್ಲಿ ಕೊನೆಯ ದಿನದ ಮಾರಿ ಜಾತ್ರೆ..!
– ರಾತ್ರಿ ಭೋಜನ ಪ್ರಸಾದಕ್ಕೆ 10 ಸಾವಿರ ಜನ ಸೇರುವ ನಿರೀಕ್ಷೆ
– ಮಧ್ಯಾಹ್ನ 3 ಗಂಟೆಯಿಂದ ವಿವಿಧ ವೇಷ ಭೂಷಣಗಳೊಂದಿಗೆ ಮಾರಿಗೊಂಬೆಯ ಮೆರವಣಿಗೆ

NAMMUR EXPRESS NEWS
ತೀರ್ಥಹಳ್ಳಿ: ಮಾರ್ಚ್12ರಂದು ಆರಂಭಗೊಂಡು ವೈಭವದಿಂದ ನಡೆಯುತ್ತಿರುವ ಮಾರಿ ಜಾತ್ರೆಗೆ ಇಂದು 9ನೇ ದಿನದ ಕೊನೆಯ ದಿನದ ಮಾರಿ ಜಾತ್ರೆಯಾಗಿದೆ. ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮಾರ್ಚ್ 20ರ ಇಂದು ತೆರೆ ಬೀಳಲಿದೆ. ಇಂದು ಬೆಳಗ್ಗಿನಿಂದಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಮಧ್ಯಾಹ್ನ 1 ಗಂಟೆಗೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ವಿವಿಧ ದಾನಿಗಳ ಸಹಯೋಗದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಜಾತ್ರೆಯ ಎಂಟನೇ ದಿನವಾದ ನಿನ್ನೆ ರಾತ್ರಿ ಎಣ್ಣೆ ಭಂಡಾರವನ್ನು ದೇವಸ್ಥಾನದಿಂದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಧನಂಜಯ್ ಮನೆಗೆ ಕೊಂಡೊಯ್ದು ನಂತರ ಸ್ಥಳೀಯರಿಂದ ಮಡಿಲು ತುಂಬುವ ಕಾರ್ಯಕ್ರಮ ನಡೆದಿದೆ.

ನಂತರ ಎಣ್ಣೆ ಭಂಡಾರವನ್ನು ದೇವಸ್ಥಾನಕ್ಕೆ ತರಲಾಯಿತು. ನಂತರ ಗೊಂಬೆಗಳಿಗೆ ಸಭಾ ಭವನದಲ್ಲಿ ಅದ್ಧೂರಿಯಾಗಿ ಸಾವಿರಾರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ, ಅಲ್ಲಿಂದ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತಂದು ಬೆಳಗಿನ ಜಾವದ ಸಮಯದಲ್ಲಿ ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿ, ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಸಾರ್ವಜನಿಕರು ಇಂದು ಬೆಳಗಿನ ಜಾವದಿಂದಲೇ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಸಂಜೆಯವರೆಗೆ ಈ ಮಾತಂಗಿ ಪೂಜೆ ನಡೆಯುತ್ತದೆ. ಬೆಳಗ್ಗಿನಿಂದ ಮಾರಿಗೊಂಬೆ ಪೂಜೆ, ಭಕ್ತಾದಿಗಳಿಂದ ಹಣ್ಣುಕಾಯಿ ನೈವೇದ್ಯ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ವಿವಿಧ ವೇಷ ಭೂಷಣಗಳೊಂದಿಗೆ ಮಾರಿಗೊಂಬೆಯ ಅದ್ದೂರಿ ಮೆರವಣಿಗೆ ನಡೆಸಿ ಕುಶಾವತಿ ತುಂಗಾನದಿಯಲ್ಲಿ ವಿಸರ್ಜನೆ ಮಾಡಲಾಗುವುದು.

ರಾತ್ರಿ 7 ಗಂಟೆಯಿಂದ ನಾಡ್ತಿಯಲ್ಲಿರುವ ಮಾರಿಕಾಂಬಾ ಸಭಾಭವನದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ತಾಲ್ಲೂಕಿನ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದೇವಸ್ಥಾನ ಆಡಳಿತ ಸೂಕ್ತ ವ್ಯವಸ್ಥೆಗಳನ್ನು ಪೂರೈಸಿದೆ.