Categories
ತೀರ್ಥಹಳ್ಳಿ ಶಿವಮೊಗ್ಗ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್ ಶಂಕರಘಟ್ಟ ಉಸ್ತುವಾರಿ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್ ಶಂಕರಘಟ್ಟ ಉಸ್ತುವಾರಿ
– ಲೋಕ ಸಭಾ ಚುನಾವಣೆ ಹಿನ್ನೆಲೆ ಜವಾಬ್ದಾರಿ

NAMMUR EXPRESS NEWS
ಶಿವಮೊಗ್ಗ: ಲೋಕಸಭಾ ಚುನಾವಣೆಯ ಸಿದ್ಧತೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ 2018ರ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಇವರು ನೇಮಿಸಿದ್ದಾರೆ. ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಆಯಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಗಳನ್ನು ಆಯೋಜಿಸಿ ಪಕ್ಷದ ಕಾರ್ಯಕರ್ತರನ್ನು ಜಾಗೃತಿಗೊಳಿಸಲು ಜಿಲ್ಲಾ ಅಧ್ಯಕ್ಷರು ನೇಮಕಾತಿ ಅದೇಶದಲ್ಲಿ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಂಟ ಸಮುದಾಯದ ಸುಮಾರು 70 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ತೀರ್ಥಹಳ್ಳಿಯಲ್ಲಿ ಅತೀ ಹೆಚ್ಚು ಬಂಟ ಸಮುದಾಯದ ಮತಗಳು ಇವೆ. ರಮೇಶ್ ಶೆಟ್ಟಿಯವರನ್ನು ಉಸ್ತುವಾರಿಯಾಗಿ ನೇಮಿಸಿರುವ ಉದ್ದೇಶ ಬಿಜೆಪಿ ಪಕ್ಷದೆಡೆಗೆ ಹೆಚ್ಚು ಒಲವು ಹೊಂದಿರುವ ಬಂಟ ಸಮುದಾಯದ ಮತವನ್ನು ಕಾಂಗ್ರೆಸ್ ಪಕ್ಷದೆಡೆಗೆ ಸೆಳೆಯುವ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.

Categories
ರಾಜ್ಯ

ಟಾಪ್ 10 ನ್ಯೂಸ್ ಕರ್ನಾಟಕ

ವಾಟರ್‌ ಟ್ಯಾಂಕರ್‌ನಲ್ಲಿ ಕೊಳೆತ ಶವ: ನೀರು ಕುಡಿದವರು ಕಕ್ಕಾಬಿಕ್ಕಿ..!
– ದಾವಣಗೆರೆ: ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
-ಮೈಸೂರು: ಮೂವರ ಜೀವ ತೆಗೆದ ಬಿಸಿಲು ಕಪಿಲಾ ನದಿಯ ಸುಳಿಗೆ ಸಿಲುಕಿ ಸಾವು
– ಯಾದಗಿರಿ: ಈಜಲು ಹೋಗಿ ನೀರುಪಾಲಾದ ಯುವಕ
– ತುಮಕೂರು : ವಿದ್ಯುತ್ ಶಾಕ್‌ನಿಂದ ದಿನಗೂಲಿ ಕಾರ್ಮಿಕ ಸಾವು
– ತುಮಕೂರು : ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು
– ಚಿಕ್ಕಬಳ್ಳಾಪುರ : ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ!
– ಬೆಂಗಳೂರು: ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ
– ಹಾಸನ : ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

NAMMUR EXPRESS NEWS
ಬೀದರ್: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಶವವೊಂದು ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೀದರ್‌ನ ಆಣದೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ನೀರು ಗಬ್ಬು ನಾರುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಮೊದ ಮೊದಲು ಕುಡಿಯುವ ನೀರಿಗೆ ಚರಂಡಿ ನೀರು ಏನಾದರೂ ಮಿಶ್ರಣ ಎಂದು ಶಂಕಿಸಲಾಗಿತ್ತು. ಮನೆಗೆ ಸರಬರಾಜು ಆಗುತ್ತಿದ್ದ ನೀರಲ್ಲಿ ಕೂದಲು ಬರುತ್ತಿದ್ದವು. ಇತ್ತ ದೂರು ಬಂದ ಕಾರಣಕ್ಕೆ ವಾಟರ್ ಟ್ಯಾಂಕ್ ಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬಮ ಶವ ಪತ್ತೆಯಾಗಿದೆ.

ನೀರಿನ ಟ್ಯಾಂಕರ್‌ನಲ್ಲಿ ಎಷ್ಟು ದಿವಸದಿಂದ ಶವವಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದು ತಿಳಿದು ಬಂದಿಲ್ಲ. ಗ್ರಾಮಸ್ಥರು ಹಲವು ದಿನದಿಂದ ಶವ ಬಿದ್ದಿದ್ದ ಟ್ಯಾಂಕಿನ ನೀರನ್ನೇ ಕುಡಿದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕುಡಿಯುವ ನೀರು ಗಬ್ಬು ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಮಾಹಿತಿ ನೀಡಿದ್ದಾರೆ. ಮೊದಮೊದಲು ನೀರಿನೊಟ್ಟಿಗೆ ಕೂದಲು ಬಂದಿದೆ. ಜತೆಗೆ ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯವನ್ನು ತಿಳಿದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ದಾವಣಗೆರೆ: ಭದ್ರಾ ನಾಲೆಯಲ್ಲಿ ಸ್ನಾನಕ್ಕೆ ಹೋಗಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಮಣಿಕಂಠ (16) ಮೃತಪಟ್ಟ ದುರ್ದೈವಿ. ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದಲ್ಲಿ ಘಟನೆ ನಡೆದಿದೆ. ಹೊನ್ನಾಳಿ ತಾಲೂಕಿನ ನೇರಲಗುಡಿ ಗ್ರಾಮದ ತಿಮ್ಮಪ್ಪ ಅವರ ಮಗ ಮಣಿಕಂಠ ಬಸವಾಪಟ್ಟಣ ಜನತಾ ಪ್ರೌಢಶಾಲೆಯಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲು ಹೋಗಿದ್ದ. ಪರೀಕ್ಷೆ ಮುಗಿಸಿ ವಾಪಸ್‌ ಬರುವಾಗ ಸೆಕೆ ಎಂದು ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದಾನೆ. ಆದರೆ ಆಕಸ್ಮಿಕವಾಗಿ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಸಮೀಪದ ಹರೋಸಾಗರದ ಬಳಿ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ರಾಜ್ಯದಲ್ಲಿ ಸೆಕೆ ವಿಪರೀತವಾಗಿದೆ. ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಕೆಲವರು ನೀರಿನಲ್ಲಿ ಈಜಲೂ ಹೋಗುವುದುಂಟು. ಆದರೆ ಮೈಸೂರಿನಲ್ಲಿ ಬಿಸಿಲ ತಾಪಮಾನವು ಮೂವರ ಜೀವ ತೆಗೆದಿದೆ. ಸೆಕೆ ತಾಳಲಾರದೆ ಮೂವರು ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತ ಕಾರ್ಮಿಕರು. ಈ ಮೂವರು ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹೊರ ಬಂದ ಯುವಕರು ಬೇಸಿಗೆಯ ಸೆಖೆ ತಾಳಲಾರದೆ ಕಪಿಲಾ ನದಿಗೆ ಇಳಿದಿದ್ದಾರೆ. ಆದರೆ ಕಪಿಲಾ ನದಿಗೆ ಇಳಿದವರು ಸುಳಿಗೆ ಸಿಲುಕಿ ಹೊರಬರಲು ಆಗದೆ ಮೃತಪಟ್ಟಿದ್ದಾರೆ.

ಯಾದಗಿರಿ : ಕೆರೆಯಲ್ಲಿ ಈಜಾಡಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಯಾದಗಿರಿ ತಾಲೂಕಿನ ಅರಕೇರಾ ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವಲಿಂಗಪ್ಪ (18) ಮೃತ ದುರ್ದೈವಿ. ಬೆಳಗ್ಗೆ ಸ್ನೇಹಿತರ ಜತೆ ಬಣ್ಣದೋಕಳಿ ಆಡಿ ನಂತರ ತಮ್ಮನೊಟ್ಟಿಗೆ ಕೆರೆಗೆ ಈಜಾಡಲು ತೆರಳಿದ್ದಾನೆ. ಆದರೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳೀಯರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲೆ.

ಆನೇಕಲ್: ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯಲ್ಲಿ ಘಟನೆ ನಡೆದಿದೆ. ರಾಕೇಶ್ (28) ಮೃತ ದುರ್ದೈವಿ. ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಆನೇಕಲ್ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ತೆರಳಿದ್ದರು.

ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ರಾಕೇಶ್ ತಲೆಯ ಮೇಲೆಯೇ ಲಾರಿಯ ಚಕ್ರ ಹರಿದಿದೆ. ಪರಿಣಾಮ ನಜ್ಜುಗುಜ್ಜಾದ ರಾಕೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಪಘಾತದಲ್ಲಿ ವಿನಯ್‌ಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ತುಮಕೂರು : ವಿದ್ಯುತ್‌ ಶಾಕ್‌ ಹೊಡೆದ ಪರಿಣಾಮ ದಿನಗೂಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರಿನ ಕ್ಯಾದಗೊಂಡನಹಳ್ಳಿಯಲ್ಲಿ ಅವಘಡ ನಡೆದಿದೆ. ನರೇಂದ್ರ ಕುಮಾರ್ (25) ಮೃತ ದುರ್ದೈವಿ. ನರೇಂದ್ರ ಕುಮಾರ್‌ ತುಮಕೂರಿನ ಮಧುಗಿರಿ ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ನಿವಾಸಿಯಾಗಿದ್ದಾರೆ. ವಿದ್ಯುತ್ ತಂತಿಗೆ ಅಡ್ಡಿಯಾಗಿದ್ದ ಮರವನ್ನು ಕಡಿಯುವಾಗ ವಿದ್ಯುತ್ ಸ್ಪರ್ಶ ಆಗಿದೆ. ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ. ಇತ್ತ ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಧುಗಿರಿ ಸರ್ಕಾರಿ ಆಸ್ಪತ್ರೆ ಎದುರು ಮೃತ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರು: ಹುಣಸೆ ಮರದಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಕಬ್ಬಿಗೆರೆ ಗ್ರಾಮದಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ಗುಡ್ಡದ ಜೋಗಿಹಳ್ಳಿ ಮೂಲದ ಮಂಜುನಾಥ್ (32) ಮೃತ ದುರ್ದೈವಿ. ಕಬ್ಬಿಗೆರೆ ಗ್ರಾಮದಲ್ಲಿ ಜವರೇಗೌಡ ಎಂಬುವವರ ಜಮೀನಿನಲ್ಲಿ ಹುಣಸೆ ಹಣ್ಣನ್ನು ಕೀಳಲು ಮಂಜುನಾಥ್‌ ಹೋಗಿದ್ದರು. ಮಂಜುನಾಥ್ ಹುಣಸೆ ಹಣ್ಣು ಬಡಿಯಲು ಮರ ಹತ್ತಿದ್ದರು.

ಮರ ಹತ್ತಿ ಕೋಲಿನಿಂದ ಹಣ್ಣು ಬಡಿಯುತ್ತಿದ್ದಾಗ ಆಯತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾರೆ. ಮರದಿಂದ ಕೆಳಗೆ ಬಿದ್ದ ರಭಸಕ್ಕೆ ಮಂಜುನಾಥ್‌ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ‌: ಹೆತ್ತ ತಂದೆ-ತಾಯಿಯನ್ನೇ ವಯಸ್ಸಾಗುತ್ತಲೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಇನ್ನು, ತಾಯಿ ಸಮಾನಳಾದ ಅತ್ತೆ ಮೇಲೆ ಸೊಸೆಯಂದಿರುವ ತೋರುವ ದರ್ಪ, ಹಲ್ಲೆಯ ಸುದ್ದಿಗಳಂತೂ ಆಗಾಗ ಕೇಳಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 80 ವರ್ಷದ ಅತ್ತೆಯನ್ನು ಎಳೆದೊಯ್ದು, ತಿಪ್ಪೆಗೆ ಎಸೆಯುವ ಮೂಲಕ ಅಮಾನವೀಯತೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಸೊಸೆಯು ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ.

80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಿದ್ದಾರೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಹೃದಯಾಘಾತ ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ. ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.

ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ನವರಂಗ್ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ. ಏಕಾಏಕಿ ವ್ಯಕ್ತಿ ಮೃತಪಟ್ಟಿದ್ದು ಕಂಡ ಸಹಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ್ದಾರೆ. ಕೂಡಲೇ ಚಾಲಕ ಹಾಗು ನಿರ್ವಾಹಕರು ಬಿಎಂಟಿಸಿ ಬಸ್‌ನಲ್ಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಬಳಿಕ ಮೃತ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ.

ಹಾಸನ: ಗೋವುಗಳ ಅಕ್ರಮ ಸಾಗಣೆ ಅಕ್ರಮವಾಗಿ ಗೋಮಾಂಸ ಮಾರಾಟ ನಿಯಂತ್ರಣಕ್ಕೆ ಎಷ್ಟೇ ಕಾನೂನು ಜಾರಿಯಲ್ಲಿದ್ದರೂ ಕೆಲವೆಡೆ ಯಥೇಚ್ಛವಾಗಿ ಗೋಮಾಂಸ ಮಾರಾಟ ದಂಧೆ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ, ಹಾಸನದಲ್ಲಿ ಗೋಮಾಂಸದ ಅಕ್ರಮ ಮಾರಾಟದ ಜಾಲವೊಂದು ಬಯಲಾಗಿದೆ. ಮಾಂಸ ಮಾರಾಟಕ್ಕಾಗಿ ದುರುಳರು ಸುಮಾರು 60ಕ್ಕೂ ಅಧಿಕ ಗೋವುಗಳನ್ನು ವಧೆ ಮಾಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಸುಮಾರು 60 ಗೋವುಗಳನ್ನು ಕೊಂದಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಐದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಇನ್ನು 60 ಗೋವುಗಳನ್ನು ಕೊಂದ ದುಷ್ಕರ್ಮಿಗಳು, ಅವುಗಳನ್ನು ನೇತು ಹಾಕಿದ್ದಾರೆ. ಪೊಲೀಸರು ಸುಮಾರು 10 ಸಾವಿರ ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಎರಡು ಹಸುಗಳಿಗೆ ಗುಂಡಿಕ್ಕಿ ಕೊಂದ ಘಟನೆ ಹಾಸನದ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ವಸಂತ್‌‌ಕುಮಾರ್, ಶಿವಮ್ಮ ಎಂಬುವವರಿಗೆ ಸೇರಿದ ಹಸುಗಳು ಕಾಣೆಯಾಗಿದ್ದವು. ವಸಂತ್‌ಕುಮಾರ್, ಶಿವಮ್ಮ ಸೇರಿ ಗೋವುಗಳಿಗಾಗಿ ಹುಡುಕಾಡಿದ್ದರು. ಎರಡು ದಿನಗಳ ಐಬಿಸಿ ಎಸ್ಟೇಟ್‌ನಲ್ಲಿ ಗೋವುಗಳ ಮೃತದೇಹ ಪತ್ತೆಯಾಗಿದ್ದವು. ಕಿರಾಕತರು ಎರಡು ಗಬ್ಬದ ಹಸುಗಳನ್ನು ಗುಂಡು ಹಾರಿಸಿ ಕೊಂದಿದ್ದರು.

Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!
– ಸ್ವಲ್ಪ ಮನುಷ್ಯನಂತೆ ಕಂಡರೂ ತುಂಬಾ ಡೇಂಜರ್ ಈ ಜೀವಿ
– ಮೀನಿನ ವಿಚಿತ್ರ ರೂಪಕ್ಕೆ ದಂಗಾದ ಮೀನುಗಾರರು!

NAMMUR EXPRESS NEWS
ವಿಜಯವಾಡ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಗುರುವಾರ ಮೀನುಗಾರರ ಬಲೆಗೆ ಅಪರೂಪದ ಮೀನು ಸಿಕ್ಕಿದೆ. ಮೀನಿನ ವಿಚಿತ್ರ ರೂಪವನ್ನು ಕಂಡು ಒಂದು ಕ್ಷಣ ಮೀನುಗಾರರೇ ದಂಗಾಗಿದ್ದಾರೆ. ಮೀನಿನ ಬಗ್ಗೆ ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದು, ಇದು ಪಫ್ಫರ್ ಫಿಶ್ ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೀನುಗಾರರು ಇದನ್ನು ಸಮುದ್ರ ಕಪ್ಪೆ ಎಂದು ಭಾವಿಸಿದ್ದರು. ಈ ಮೀನು ಸಮುದ್ರದ ಆಳದಲ್ಲಿ ಅಲೆದಾಡುತ್ತವೆ. ಬಲೆಗೆ ಬಿದ್ದಾಗ ಅಥವಾ ಯಾರಾದರು ದಾಳಿ ಮಾಡಿದಂತಹ ಸಂದರ್ಭದಲ್ಲಿ ತಮ್ಮ ದೇಹವನ್ನು ಬಲೂನ್ ರೀತಿ ಮಾಡಿಕೊಳ್ಳುತ್ತವೆ. ಈ ಮೀನು ನೋಡಲು ಸ್ವಲ್ಪ ಮನುಷ್ಯನ ರೀತಿ ಕಾಣುತ್ತದೆ. ಅಂದಹಾಗೆ ಈ ಪಫ್ಫರ್ ಫಿಶ್ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ. ಇದನ್ನು ಹೆಚ್ಚಾಗಿ ಜಪಾನ್ ಸೇವನೆ ಮಾಡುತ್ತಾರೆ.

Categories
ಚಿಕ್ಕಮಗಳೂರು ಮಲ್ನಾಡ್

ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ..!

ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ..!
– ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ
– 1 ವಾರದೊಳಗೆ ನೋಂದಾಯಿಸಿಕೊಳ್ಳದೆ ಇದ್ದಲ್ಲಿ ಕಾನೂನು ಕ್ರಮ

NAMMUR EXPRESS NEWS
ಚಿಕ್ಕಮಗಳೂರು: ಅಂತರ್ಜಲದ ಮಟ್ಟ ಕುಸಿತದ ಭೀತಿಯ ನಡುವಲ್ಲೇ ಕೊಳವೆ ಬಾವಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಇನ್ಮುಂದೆ ಕೊಳವೆ ಬಾವಿಗಳನ್ನು ಕೊರೆಯುವ ಲಾರಿಗಳು ಇನ್ಮುಂದೆ ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಆದೇಶಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಹಾಗೂ ಏಜೆಂಟರು ಹಾಗೂ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 7(ಎ) ರಂತೆ ನೋಂದಾಯಿಸಿಕೊಂಡಿರುವ ಲಾರಿ ಮಾಲೀಕರು ಕೊಳವೆಬಾವಿ ಯನ್ನು ಕೊರೆಯತಕ್ಕದ್ದು ನೊಂದಾಯಿಸಿಕೊಳ್ಳದೆ ಇರುವ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದಿದ್ದಾರೆ.

ಒಂದು ವಾರದೊಳಗೆ ನೋಂದಾಯಿಸಿಕೊಳ್ಳದೆ ಇರುವ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದಲ್ಲದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದ ಅವರು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಕೊಳವೆಬಾವಿಗಳನ್ನು ಅತಿ ಶೀಘ್ರವಾಗಿ ಕೊರೆದು ಪೂರ್ಣಗೊಳಿಸಬೇಕು ಎಂದಿದ್ದಾರೆ.

Categories
ಬೆಂಗಳೂರು ರಾಜ್ಯ

ಲೋಕ ಸಭಾ ಚುನಾವಣೆಗೆ ಅಲರ್ಟ್!

ಲೋಕ ಸಭಾ ಚುನಾವಣೆಗೆ ಅಲರ್ಟ್!
– ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ನಿಷೇಧಾಜ್ಞೆ
– ಮತದಾನ ಕೇಂದ್ರಗಳ ಪರಿಶೀಲನೆ: ಅಂತಿಮ ಸಿದ್ಧತೆ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು ಎಲ್ಲೆಡೆ ಬಿರುಸಿನ ಪ್ರಚಾರ ಶುರುವಾಗಿದೆ. ಈ ಹಿನ್ನೆಲೆ ಸಾರ್ವತ್ರಿಕ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇದರಿಂದಾಗಿ ಜಿಲ್ಲಾಧಿಕಾರಿಗಳ ಕಛೇರಿಯ 100 ಮೀಟ‌ರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇದಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ 5 ಜನಕ್ಕಿಂತ ಹೆಚ್ಚುಮಂದಿ ಗುಂಪುಗೂಡುವುದು ಅಪಾಯಕಾರಿ ಶಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಷಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬ೦ದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್‌ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಅಂತಹ ಮಾರಾಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು ಅಲ್ಲದೇ ಸಂಬ೦ಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು.

ಮತದಾನ ಕೇಂದ್ರಗಳ ಪರಿಶೀಲನೆ!

ಲೋಕಸಭಾ ಚುನಾವಣೆಯ ಹಿನ್ನಲೆ ಎಲ್ಲೆಡೆ ಮತದಾನ ಕೇಂದ್ರ ಹಾಗೂ ಮತ ಯಂತ್ರಗಳನ್ನು ಇಡುವ ಕಟ್ಟಡಗಳನ್ನು ಮತದಾನ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮತದಾನ ನಡೆಯುವ ಎಲ್ಲಾ ಕಟ್ಟಡಗಳಲ್ಲಿ ವಿದ್ಯುತ್, ಕುಡಿಯುವ ನೀರು, ಕೊಠಡಿಗಳ ಕಿಟಕಿ ಬಾಗಿಲು ಮತ್ತಿತರ ಸೌಕರ್ಯಗಳನ್ನು ಪರಿಶೀಲಿಸುತಿದ್ದು, ಆಕಸ್ಮಾತ್ ಸಮಸ್ಯೆ ಇದ್ದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸ್ಟಿದ್ಧತೆ ನಡೆದಿದೆ.

Categories
ರಾಜ್ಯ

ಹೆಲ್ಮೆಟ್ ಧರಿಸಿ ಜೀವ ಹಾನಿ ತಪ್ಪಿಸಿ..!

ಹೆಲ್ಮೆಟ್ ಧರಿಸಿ ಜೀವ ಹಾನಿ ತಪ್ಪಿಸಿ..!
– ಸರ್ಕಾರ ಬೈಕ್ ಸವಾರ, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ
– ಬೈಕ್ ಅಲ್ಲಿ ಶೋಕಿ ಬೇಡ, ಇರೋದೊಂದೇ ಜೀವನ

NAMMUR EXPRESS
ರಾಜ್ಯದಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಜೀವ ಹಾನಿಯಾಗುವುದನ್ನು ತಪ್ಪಿಸಬೇಕು. ಇತ್ತೀಚೆಗೆ ಅಪಘಾತವಾಗಿರುವ ಪ್ರಕರಣದಲ್ಲಿ ಹೆಚ್ಚಾಗಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ನಡೆಸುತ್ತಿರುವರೇ ಮೃತಪಟ್ಟಿದ್ದಾರೆ. ಅದಕ್ಕಾಗಿ ಸರ್ಕಾರ ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಅದಕ್ಕಾಗಿ ಸರ್ಕಾರ ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಆದರೂ ಕೂಡ ಬೈಕ್‌ ಸವಾರರು ಹೆಲ್ಮೆಟ್ ಧರಿಸದ ಕಾರಣ ಅಪಘಾತ ಸಂಭವಿಸಿ ಸಾವು ನೋವುಗಳು ಸಂಭವಿಸುತ್ತಿವೆ.

ರಸ್ತೆ ಅಪಘಾತದಲ್ಲಿ ಶೇ.70 ರಷ್ಟು ಜನರು ತೆಲೆಗೆ ಪಟ್ಟಾಗಿಯೇ ಸಾವಿಗೀಡಾಗಿದ್ದಾರೆ. ದ್ವಿಚಕ್ರ ವಾಹನ ಸವಾರ ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಶೇ.80 ರಷ್ಟು ಇರುತ್ತದೆ. ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಬಳಸಿ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳುವ ಜತೆಗೆ ತಮ್ಮ ಕುಟುಂಬ ಭದ್ರತೆಯನ್ನು ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಮೋಟಾರ್ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಬೇಕಾಗುವುದು. ಚಿಕ್ಕ ಮಕ್ಕಳು ಬೈಕ್ ಓಡಿಸುವುದು, ಅವರ ಕೈಯಲ್ಲಿ ಬೈಕ್ ಕೊಡುವುದು ಅಪರಾಧವಾಗಿದೆ. ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಏ.1ರಿಂದ 2,000 ರೂ. ನೋಟು ವಿನಿಮಯ

ಏ.1ರಿಂದ 2,000 ರೂ. ನೋಟು ವಿನಿಮಯ
– ಠೇವಣಿ ತಾತ್ಕಾಲಿಕ ಸ್ಥಗಿತ ಆರ್.ಬಿ.ಐ ಘೋಷಣೆ

NAMMUR EXPRESS NEWS
ನವದೆಹಲಿ: ದೇಶಾದ್ಯಂತ ಏ.1ರಿಂದ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಈ ತಾತ್ಕಾಲಿಕ ನಿಲುಗಡೆಯಾಗಿದೆ. ಎಂದು ಮಾಹಿತಿ ನೀಡಿದೆ. ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ 2,000 ರೂ.ಗಳ ನೋಟುಗಳ ವಿನಿಮಯ / ಠೇವಣಿ ಸೌಲಭ್ಯವು ಏ.1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ ಲಭ್ಯವಿರುವುದಿಲ್ಲ. ಮೇ 19, 2023 ರಂದು ಚಲಾವಣೆಯಿಂದ 2,000 ರೂ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಆರ್.ಬಿ.ಐ ಈ ಹಿಂದೆ ಘೋಷಿಸಿತ್ತು. ಫೆಬ್ರವರಿ 29 ರ ಹೊತ್ತಿಗೆ, ಸುಮಾರು 97.62 ಪ್ರತಿಶತದಷ್ಟು 2,000 ರೂ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ. 8,470 ಕೋಟಿ ಮೌಲ್ಯದ ಹಿಂಪಡೆದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ವಶದಲ್ಲಿವೆ.

Categories
ರಾಷ್ಟ್ರೀಯ ವಾರ್ತೆ

238 ಬಾರಿ ಸೋತರೂ ಮತ್ತೆ ಸ್ಪರ್ಧೆ

238 ಬಾರಿ ಸೋತರೂ ಮತ್ತೆ ಸ್ಪರ್ಧೆ
– ಲಿಮ್ಕಾ ದಾಖಲೆ ಬರೆದ ಎಲೆಕ್ಷನ್ ಕಿಂಗ್ ಪದ್ಮರಾಜನ್

NAMMUR EXPRESS NEWS
ಮೆಟ್ಟೂರು: ಒಂದಲ್ಲ ಎರಡಲ್ಲ ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ 65 ವಯಸ್ಸಿನ ವ್ಯಕ್ತಿ ಮರಳಿ ಧರ್ಮಪುರಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸ್ಪರ್ಧೆಗೆ ಸಜ್ಜಾಗಿದ್ದಾರೆ. ತಮಿಳು ನಾಡಿನ ಮೆಟ್ಟೂರು ನಿವಾಸಿ ಕೆ ಪದ್ಮ ರಾಜನ್ (65) ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿದ್ದು, 1988 ರಿಂದ ಚುನಾವಣೆಗಳಲ್ಲಿ ವಿವಿಧ ಚಿಹ್ನೆಗಳ ಮೂಲಕ ಸ್ಪರ್ಧಿಸಿ ಸೋಲುವ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ರಾಷ್ಟ್ರಪತಿಯಿಂದ ಹಿಡಿದು ಪಂಚಾಯಿತಿ ಚುನಾವಣೆವರೆಗೂ ಸ್ಪರ್ಧಿಸಿರುವ ಇವರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ನಾಮಪತ್ರ ಸಲ್ಲಿಸಿ ಸೋಲಿನ ಸರಮಾಲೆ ಹಾಕಿಕೊಂಡಿದ್ದು, ಎಲೆಕ್ಷನ್ ಕಿಂಗ್ ಎಂದು ಜನಪ್ರಿಯತೆ ಗಳಿಸಿದ್ದಾರೆ. ಗೆಲುವು ಮುಖ್ಯವಲ್ಲ, ನನ್ನ ವಿರುದ್ಧದ ಅಭ್ಯರ್ಥಿ ಯಾರೆಂದು ತಲೆಕೆಡಿಸಿ ಕೊಳ್ಳುವುದಿಲ್ಲ. ಫಲಿತಾಂಶದ ವೇಳೆ ಸೋಲು ಘೋಷಣೆಯಾದಾಗ ಸಂತಸವಾಗುತ್ತದೆ. ಸಾಮಾನ್ಯ ಜನರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಾಗೃತಿ ಮೂಡಿಸಿ ಮಾದರಿಯಾಗಲು ಬಯಸುತ್ತೇನೆ ಎಂದು ಪದ್ಮರಾಜನ್ ಹೇಳಿದ್ದಾರೆ.

ಲಕ್ಷಾಂತರ ರೂ. ಠೇವಣಿ ನಷ್ಟ ಕಳೆದ ಬಾರಿ 25 ಸಾವಿರ ರೂ. ಠೇವಣಿ ಕಳೆದುಕೊಂಡಿದ್ದ ಪದ್ಮರಾಜ್ 35 ವರ್ಷಗಳಲ್ಲಿ ವಿವಿಧ ಚುನಾವಣೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಚುನಾವಣೆಯಲ್ಲಿ ಶೇ.16 ಮತ ಪಡೆದರೆ ಮಾತ್ರ ಠೇವಣೆ ಮರಳಿ ಪಡೆಯಬಹುದು. ಚುನಾವಣೆಗೆ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಕಳೆದುಕೊಳ್ಳುವುದು ಪದ್ಮರಾಜ್‌ಗೆ ಸಾಮಾನ್ಯವಾಗಿದೆ.

Categories
ಬೆಂಗಳೂರು ರಾಜ್ಯ

ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲುಸಾಲು ರೋಗ

ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲುಸಾಲು ರೋಗ
– ವಾಂತಿ-ಭೇದಿ, ಚಿಕನ್‌ಫಾಕ್ಸ್, ಸನ್‌ಸ್ಟೋಕ್, ಮೂಗಿನಲ್ಲಿ ರಕ್ತಸ್ರಾವ, ಟೈಫಾಯ್ಡ್ ಏರಿಕೆ
– ಸ್ವಚ್ಛ ನೀರನ್ನು ಮಾತ್ರವೇ ಕುಡಿಯಲು ವೈದ್ಯರಿಂದ ಸಲಹೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿಯ ಆಸುಪಾಸಿನಲ್ಲೇ ಮುಂದುವರೆದಿದೆ. ಅತಿಯಾದ ಒಣಹವೆಯಿಂದ ಸನ್ ಸ್ಪೋಕ್, ಮೈಗ್ರೇನ್, ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಲ್ಲದೆ ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಲೀರಿಯಾ, ವೈರಸ್ ಗಳು ತೀವ್ರವಾಗಿ ಹರಡುವ ಮೂಲಕ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸನ್ ಸ್ಟೋಕ್, ಮೈಗ್ರೇನ್, ಚರ್ಮದ ಸಮಸ್ಯೆಗಳ ಜತೆಗೆ ಟೈಫಾಯ್ಡ್ ಸೇರಿದಂತೆ ವಿವಿಧ ಜ್ವರದ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಮನುಷ್ಯನ ದೇಹದ ಸಾಮಾನ್ಯ ಉಷ್ಣತೆಯು 36.4 ಡಿಗ್ರಿಯಿಂದ 37.2 ಡಿಗ್ರಿ, ಸೆಲ್ಸಿಯಸ್ (97.5 20 98.9 2) .

ಒಳಾಂಗಣ ಹಾಗೂ ಹೊರಾಂಗಣ ಪ್ರದೇಶದಲ್ಲಿ ಇದಕ್ಕಿಂತ ಹೆಚ್ಚಿನ ಉಷ್ಣತೆಯಿದ್ದರೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದೀಗ, ರಾಜ್ಯಾದ್ಯಂತ ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ. ಕರಳುಬೇನೆ, ನಿರ್ಜಲೀಕರಣ, ಮೂಗಿನಲ್ಲಿ ರಕ್ತಸ್ರಾವ, ವಾಂತಿ-ಭೇದಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್ ಫಾಕ್ಸ್, ಟೈಫಾಯ್ಡ್ ಜ್ವರ, ಬಿಸಿಲಿನಿಂದ ತಲೆ ಸುತ್ತು, ಸನ್ ಸ್ಟೋಕ್, ಮೈಗ್ರೇನ್, ಅತಿಯಾದ ಸೂರ್ಯ ಕಿರಣಗಳಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ವೈರಾಣು ಜ್ವರ ಹಾಗೂ ಟೈಫಾಯ್ಡ್ ಜ್ವರ ದಿಂದಾಗಿ ಮೈಕೈ ನೋವು, ಮೂಗಿನಲ್ಲಿ ನೀರು ಸೋರುವಿಕೆಯಂತಹ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಶೇ.20ರಿಂದ 30ರಷ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಜ್ವರದ ಪ್ರಕರಣ: ಬೇಸಿಗೆ ಕಾಲದಲ್ಲಿ ಸಕ್ರಿಯವಾಗುವ ಸಾಲೊನಲ್ಲಾ ಟೈಸಿ ಆ್ಯಂಡ್ ಪ್ಯಾರಾಟೈಸಿ ಬ್ಯಾಕ್ಟಿರಿಯಾದಿಂದ ಟೈಫಾಯ್ಡ್ ಬರುತ್ತದೆ. ಉಳಿದಂತೆ ವ್ಯಾರಿಸೆಲ್ಲಾ ಝಾಸ್ಟರ್ ವೈರಸ್ ನಿಂದ ಚಿಕನ್‌ಫಾಕ್ಸ್ (ಅಮ್ಮ), ಹೆಪಟೈಟಿಸ್ ಎ ಎಂಬ ವೈರಸ್‌ನಿಂದ ಜಾಂಡೀಸ್ ಕಾಯಿಲೆ ಬರುತ್ತದೆ.

ಉಷ್ಣದಿಂದ ಪಾರಾಗಲು ಹೀಗೆ ಮಾಡಿ

1 ಬೆವರಿನಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಅನಾರೋಗ್ಯ ಉಂಟಾಗುತ್ತದೆ. ಹೀಗಾಗಿ ನೀರಿನ ಜತೆಗೆ, ದೇಹಕ್ಕೆ ಶಕ್ತಿ, ಚೈತನ್ಯ ತುಂಬುವಂತಹ ಹಣ್ಣಿನ ರಸ, ಓಆರ್‌ಎಸ್ ಕುಡಿಯಬೇಕು.

2 ಬೇಸಿಗೆಗೆ ಕಾಟನ್ ಉಡುಪು ಧರಿಸುವುದು, ಬಿಸಿಲಿಗೆ ಹೋಗುವಾಗ ತಂಪು ಕನ್ನಡಕ (ಕೂಲಿಂಗ್ ಗ್ಲಾಸ್), ಛತ್ರಿ ಬಳಕೆ, ಅಗತ್ಯ ಪ್ರಮಾಣದ ನೀರು ಕೊಂಡೊಯ್ಯುವಂತಹ ಸಾಮಾನ್ಯ ಕ್ರಮ ಪಾಲಿಸಬೇಕು.

3 ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಆಚೆ ತೆರಳಬೇಕು. ಬಿಸಿಲು ಏರುವುದರೊ ಳಗೆ ಕೆಲಸ ಮಾಡಿಕೊಂಡು ಮನೆ ಸೇರಿಕೊಳ್ಳಬೇಕು. ಮನೆಯಲ್ಲಿದ್ದರೂ, ನೆರಳು ಇರುವ ಕಡೆ, ಚೆನ್ನಾಗಿ ಗಾಳಿ ಬೀಸುವ ಜಾಗದಲ್ಲಿ ಇರಬೇಕು.

4 ಕಂದಮ್ಮಗಳನ್ನು, ಮಕ್ಕಳನ್ನು ಜೋಪಾನ ಮಾಡಬೇಕು. ಗರ್ಭಿಣಿ ಸ್ತ್ರೀಯರು, ಹೊರಗಡೆ ಹೆಚ್ಚು ಕೆಲಸ ಮಾಡುವಂಥವರು, ಮಾನಸಿಕವಾಗಿ ಸಮಸ್ಯೆಗಳು ಇರುವಂಥವರು, ಹೃದಯದ ಸಮಸ್ಯೆಗಳು ಇರುವಂಥವರು, ರಕ್ತದೊತ್ತಡ ಇರುವಂಥವರು ಆದಷ್ಟೂ ಜಾಗ್ರತೆಯಾಗಿ ಇರಬೇಕು.

Categories
ಮಲ್ನಾಡ್ ರಾಜ್ಯ ಸಿನಿಮಾ

ಮೂರನೇ ವಾರಕ್ಕೆ ಕಾಲಿಟ್ಟ ಕೆರೆ ಬೇಟೆ ಸಿನಿಮಾ!

ಮೂರನೇ ವಾರಕ್ಕೆ ಕಾಲಿಟ್ಟ ಕೆರೆ ಬೇಟೆ ಸಿನಿಮಾ!
– ಕೆರೆ ಬೇಟೆಯಲ್ಲಿ ತೀರ್ಥಹಳ್ಳಿಯ ಗೌರಿಶಂಕರ್ ಹೀರೋ
– ರಾಜ್ಯದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಸಿನಿಮಾ

NAMMUR EXPRESS NEWS
ಕನ್ನಡದ ಭರವಸೆಯ ಸಿನಿಮಾ ಕೆರೆ ಬೇಟೆ ಈಗ ಮೂರನೇ ವಾರಕ್ಕೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಲೆನಾಡಿನ ಸೊಬಗು ಕಟ್ಟಿಕೊಟ್ಟ ಸಿನಿಮಾ ಅನ್ನೋ ಹೆಗ್ಗಳಿಕೆ ಇದಕ್ಕೆ ಇದೆ. ಇದಕ್ಕೂ ಹೆಚ್ಚಾಗಿ ಈ ಸಿನಿಮಾದಲ್ಲಿ ಕೆರೆಬೇಟೆ ಅದ್ಭುತ ಆಟದ ಒಂದು ಅಸಲಿ ಚಿತ್ರಣ ಇದೆ. ಇದನ್ನ ಇಲ್ಲಿವರೆಗೂ ಯಾರೂ ಬೆಳ್ಳಿತೆರೆ ಮೇಲೆ ತರೋ ಪ್ರಯತ್ನ ಮಾಡಿರಲಿಲ್ಲ. ಕೆರೆಬೇಟೆ ಸಿನಿಮಾ ಒಳ್ಳೆ ಸಿನಿಮಾ ಆಗಿ ಈಗ ಪ್ರೇಕ್ಷಕರ ಮನ ಸೆಳೆಯುತ್ತಿದೆ. ಮಾ.15ರಂದು ತೆರೆ ಕಂಡ ಈ ಸಿನಿಮಾ ಎರಡನೇ ವಾರ ಉತ್ತಮ ಪ್ರದರ್ಶನ ಕಂಡು ಈಗ ಮೂರನೇ ವಾರಕ್ಕೆ ಸಾಗುತ್ತಿದೆ. ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಲೆನಾಡಿನಲ್ಲಿ ಈಗಲೂ ಬೇಸಿಗೆಯಲ್ಲಿ ಕೆರೆಬೇಟೆ ಆಡುತ್ತಾರೆ. ಅಂತಹ ಒಂದು ವಿಷಯವನ್ನ ಇಟ್ಟುಕೊಂಡು ಅದರ ಸುತ್ತ ಒಂದು ರಿಯಲ್ ಲವ್ ಸ್ಟೋರಿ ಹೆಣೆಯಲಾಗಿದೆ. ಇದನ್ನ ನೋಡಿದ ಜನ ತುಂಬಾ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನ ಚಿತ್ರದ ನಾಯಕ ನಟ ಗೌರಿಶಂಕರ್ ಹೇಳಿಕೊಂಡಿದ್ದಾರೆ. ಈ ಒಂದು ವಿಷಯನ್ನ ಅಷ್ಟೇ ಖುಷಿಯಿಂದಲೇ ತಿಳಿಸಿದ್ದಾರೆ. ಮೂರನೇ ವಾರಕ್ಕೆ ಸಿನಿಮಾ ಬಂದಿದೆ. ಜನ ಇದನ್ನ ಜಾಸ್ತಿ ನೋಡ್ತಾರೆ ಅನ್ನೋ ಭರವಸೆಯಲ್ಲೂ ಇದ್ದಾರೆ. ಇವರ ಭರವಸೆಗೆ ಜನ ಕೂಡ ಸಾಥ್ ಕೊಡ್ತಾರೆ ಅನ್ನೋ ನಂಬಿಕೆ ಸಿನಿಮಾ ತಂಡದಲ್ಲಿ ಜಾಸ್ತಿ ಇದೆ. ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.