Categories
ಮಂಗಳೂರು ರಾಜ್ಯ

ಬಿಸಿಲಿನಿಂದ ಮನೆ ತಂಪಾಗಿಡಲು ಸಗಣಿಯಿಂದ ಪೇಂಟ್!

ಬಿಸಿಲಿನಿಂದ ಮನೆ ತಂಪಾಗಿಡಲು ಸಗಣಿಯಿಂದ ಪೇಂಟ್!
– ಸನ್ನಿಧಿ ಪ್ರಕೃತಿ ಎಂದು ಬ್ರಾಂಡ್ ಮಾಡಲಾದ ಬಣ್ಣ
– ಬೇಸಿಗೆಯಲ್ಲಿ ತೀವ್ರ ಶಾಖ ತಡೆಯುತ್ತೆ, ಮಳೆಯಲ್ಲೂ ಓಕೆ!

NAMMUR EXPRESS NEWS
ಮಂಗಳೂರು: ಮಂಗಳೂರು ಸಮೀಪದ ಹಳೆಯಂಗಡಿ ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಸಗಣಿಯಿಂದ ಮಾಡಿದ ಪರಿಸರ ಸ್ನೇಹಿ ಬಣ್ಣವು ಕರಾವಳಿ ಪ್ರದೇಶದಲ್ಲಿ ಜನಪ್ರಿಯವಾಗುತ್ತಿದೆ. ಇದು ಬೇಸಿಗೆಯಲ್ಲಿ ತೀವ್ರ ಶಾಖ ಮತ್ತು ಮಾನ್ಸೂನ್ ಸಮಯದಲ್ಲಿ ಭಾರಿ ಮಳೆಯಿಂದ ಮನೆಯನ್ನು ರಕ್ಷಿಸುತ್ತದೆ. “ಸನ್ನಿಧಿ ಪ್ರಕೃತಿ ಎಂದು ಬ್ರಾಂಡ್ ಮಾಡಲಾದ ಬಣ್ಣವು ಆಂಟಿಫಂಗಲ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ವಾಸನೆಯಿಲ್ಲದೆ ಪರಿಣಾಮಕಾರಿಯಾಗಿದೆ. ನೈಸರ್ಗಿಕ ಬಣ್ಣವು ಥರ್ಮಲ್ ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸಿ, ವಿಕಿರಣವನ್ನು ತಡೆಯುತ್ತದೆ. ಇದರಿಂದಾಗಿ ಬೇಸಿಗೆಯಲ್ಲಿ ಮನೆ ತಂಪಾಗಿತ್ತದೆ” ಎಂದು ಘಟಕದ ಮಾಲೀಕರಾದ ಆಕ್ಷತಾ ವಿ ಹೇಳುತ್ತಾರೆ.

ಅಕ್ಷತಾ ಅವರು 2022 ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್‌ ಮೇಡ್ ಪೇಪರ್ ಇನ್‌ಸ್ಟಿಟ್ಯೂಟ್‌ನಲ್ಲಿ (ಕೆಎನ್‌ಎಚ್‌.ಪಿಐ) ಉದ್ಯಮಶೀಲತಾ ತರಬೇತಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಘಟಕವನ್ನು ಪ್ರಾರಂಭಿಸಿದರು. “ಉತ್ಪಾದನಾ ಪ್ರಕ್ರಿಯೆಯಲ್ಲಿ ಟ್ರೈ-ಡಿಸ್ಕ್ ರಿಫೈನರ್ ಅಥವಾ ಡಬಲ್- ಡಿಸ್ಕ್, ರಿಫೈನರ್ ಬಳಸಿ ಹಸುಗಳ ಸಗಣಿಯನ್ನು ಸಂಸ್ಕರಿಸಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಸಗಣಿಯನ್ನು ನೀರಿಗೆ ಸೇರಿಸಿ, ಸರಿಯಾಗಿ ಮಿಶ್ರಣ ಮಾಡಲಾಗುತ್ತದೆ. ನಂತರ ದ್ರವ ಮಿಶ್ರಣವು ಬಿಳಿಯಾಗಲು ಬೀಚಿಂಗ್ ಒಳಗಾಗುತ್ತದೆ. ಸೋಡಿಯಂ ಹೈಡ್ರಾಕ್ಸೆಡ್ ಮತ್ತು ಹೈಡೋಜನ್ ಪೆರಾಕ್ಸೆಡ್ ಅನ್ನು ಬೀಚಿಂಗ್ ಗಾಗಿ ಬಳಸಲಾಗುತ್ತದೆ. ಬೀಚಿಂಗ್ ನಂತರ, ಮಿಶ್ರಣವು ಸಿಎಂಸಿ ಅಥವಾ ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ ರೂಪಾಂತರಗೊಳ್ಳುತ್ತದೆ. ಇದರ ನಂತರ, ಕ್ಯಾಲ್ಸಿಯಂ ಕಾರ್ಬೋನೇಟ್ ಅಥವಾ ಸುಣ್ಣವನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ.

ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಲು ಬೈಂಡರ್ ಅನ್ನು ಸೇರಿಸಲಾಗುತ್ತದೆ. ಅದರ ನಂತರ ಪರಿಸರ ಸ್ನೇಹಿ ಬಣ್ಣವು ಬಳಕೆಗೆ ಸಿದ್ದವಾಗಿದೆ. ಅಕ್ಷತಾ ಅವರು ಘಟಕದ ಮೇಲೆ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಕೊಯಮತ್ತೂರಿನಿಂದ ಘಟಕಕ್ಕೆ ಎಲ್ಲಾ ಉಪಕರಣಗಳನ್ನು ಖರೀದಿಸಿದ್ದಾರೆ. ‘ಸನ್ನಿಧಿ ಪ್ರಕೃತಿ’ ಬಳಸಿದ ನಂತರ ಜನರು ತಮ್ಮ ಮನೆಗಳಲ್ಲಿ ಶಾಖದಲ್ಲಿ ತೀವ್ರ ಇಳಿಕೆ ಕಂಡಿದ್ದಾರೆ.

Categories
ಬೆಂಗಳೂರು ರಾಜ್ಯ ಶಿಕ್ಷಣ

ಸಿಇಟಿ ಪ್ರವೇಶ: ಕೊನೆ ಕ್ಷಣದಲ್ಲಿ ಸಮಸ್ಯೆ ಸಾಧ್ಯತೆ

ಸಿಇಟಿ ಪ್ರವೇಶ: ಕೊನೆ ಕ್ಷಣದಲ್ಲಿ ಸಮಸ್ಯೆ ಸಾಧ್ಯತೆ
– ಸಿಇಟಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ

NAMMUR EXPRESS NEWS
ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಪರೀಕ್ಷೆಯ 50,000 ವಿದ್ಯಾರ್ಥಿಗಳು ಇನ್ನೂ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಒಟ್ಟಾರೆ 3.27 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಶುಕ್ರವಾರದವರೆಗೆ 2,76,495 ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡಿದ್ದು, ಇನ್ನೂ 50,889 ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದುಕೊಳ್ಳಬೇಕಿದೆ ಎಂದು ಹೇಳಲಾಗಿದೆ. ಕೊನೆ ಕ್ಷಣದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಪಾರಾಗಲು ಆದಷ್ಟು ಮೊದಲೇ ಪ್ರವೇಶ ಪತ್ರ ಪಡೆದುಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Categories
ಮಂಗಳೂರು ರಾಜಕೀಯ

ಮೋದಿ ಮಂಗಳೂರು ಆಗಮನಕ್ಕೆ ಕೌಂಟ್‌ಡೌನ್‌!

ಮೋದಿ ಮಂಗಳೂರು ಆಗಮನಕ್ಕೆ ಕೌಂಟ್‌ಡೌನ್‌!
– ರೋಡ್‌ ಶೋಗೆ ಅಂತಿಮ ಹಂತದ ಸಿದ್ಧತೆ
– ಸಂಚಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ
– ಎಲ್ಲೆಲ್ಲಿ ವಾಹನ ಹೋಗಬೇಕು… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಮಂಗಳೂರು: ಪ್ರಧಾನಿ ಮೋದಿ ಅವರು ಮಂಗಳೂರಿನಲ್ಲಿ ಬೃಹತ್‌ ರೋಡ್‌ಶೋ ಮಾಡುವುದಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ನಗರದೆಲ್ಲೆಡೆ ಪೊಲೀಸ್‌ ಸರ್ಪಗಾವಲು ಹಾಕಲಾಗುತ್ತಿದೆ. ಮೋದಿ ಅವರು ಭಾನುವಾರ ಸಂಜೆ 5 ಗಂಟೆಗೆ ನಗರದ ಲೆಡೀಲ್‌ ಬಳಿಯಿರುವ ನಾರಾಯಣಗುರು ವೃತ್ತದಿಂದ ನವ ಭಾರತ ಸರ್ಕಲ್‌ವರೆಗೆ ರೋಡ್‌ಶೋ ನಡೆಸಲಿದ್ದು, ಭಾರೀ ಸಂಖ್ಯೆಯಲ್ಲಿ ಮೋದಿ ಅವರ ಅಭಿಮಾನಿಗಳನ್ನು ಕರೆತರುವ ಮೂಲಕ ಈ ರೋಡ್‌ಶೋ ಅನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಬದಲಾಯಿಸುವುದಕ್ಕೆ ಬಿಜೆಪಿ ಪಾಳೆಯದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ.

ಮೋದಿ ಅವರು ರೋಡ್‌ ಶೋ ನಡೆಸುವ ರಸ್ತೆಗಳ ಇಕ್ಕೆಲಗಳಲ್ಲಿ ಈಗಾಗಲೇ ಬ್ಯಾರಿಕೇಡ್‌ ಮಾದರಿ ಕಬ್ಬಿಣದ ತಡೆ ಗೋಡೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅದರೊಳಗೆ ನಿಂತುಕೊಂಡು ಮೋದಿ ಆಗಮನದ ವೇಳೆ ಜೈಕಾರ ಹಾಕುವುದು, ಕೈಬೀಸುವ ಮೂಲಕ ಸ್ವಾಗತ ಕೋರಬೇಕಿದೆ. ಮೋದಿ ಅವರ ರೋಡ್‌ ಶೋ ಹಿನ್ನಲೆ ಈಗಾಗಲೇ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ನಗರದಲ್ಲಿ ಠಿಕ್ಕಾಣಿ ಹೂಡಿದ್ದು, ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ನಿಗಾ ವಹಿಸುತ್ತಿದ್ದಾರೆ.

ಸಂಚಾರದಲ್ಲಿ ಅಮೂಲಾಗ್ರ ಬದಲಾವಣೆ

ಇನ್ನೊಂದೆಡೆ ಮೋದಿ ಅವರ ಆಗಮನದಲ್ಲಿ ಯಾವುದೇ ರೀತಿ ಸಂಚಾರ ದಟ್ಟಣೆ ಉಂಟಾಗದಂತೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಹುತೇಕ ರಸ್ತೆಗಳಲ್ಲಿ ಸಂಚಾರದಲ್ಲಿ ಮಾರ್ಪಾಟು ಮಾಡಲಾಗಿದೆ. ಪ್ರಧಾನಿ ಮೋದಿ ರೋಡ್‌ಶೋ ಹಿನ್ನಲೆ ಉಡುಪಿಯಿಂದ ಮಂಗಳೂರಿಗೆ ಬರುವ ಎಲ್ಲ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್, ಕೆಪಿಟಿ ಜಂಕ್ಷನ್, ನಂತೂರು ಜಂಕ್ಷನ್, ಶಿವಭಾಗ್ ಜಂಕ್ಷನ್, ಸೆಂಟ್ ಆಗ್ನೇಸ್, ಕಂಕನಾಡಿ ಜಂಕ್ಷನ್, ಅವೇರಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್, ಹಂಪನಕಟ್ಟ ಜಂಕ್ಷನ್, ಕ್ಲಾಕ್ ಟವರ್ ಮೂಲಕ ಸಂಚರಿಸಬೇಕು. ಅದೇರೀತಿ ಸ್ಟೇಟ್‌ಬ್ಯಾಂಕ್ ಕಡೆಯಿಂದ ಉಡುಪಿ ಕಡೆ ಹೋಗುವ ವಾಹನಗಳು ಲೇಡಿ ಗೋಷನ್, ಕ್ಲಾಕ್ ಟವರ್, ರೈಲ್ವೇ ಸ್ಟೇಷನ್ ಜಂಕ್ಷನ್, ನಂದಿಗುಡ್ಡ ರೋಡ್, ಕೋಟಿ ಚೆನ್ನಯ್ಯ ಸರ್ಕಲ್, ಕಂಕನಾಡಿ ಜಂಕ್ಷನ್ ಮೂಲಕ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರು ನಗರಕ್ಕೆ ಬರುವ ವಾಹನ ಹೇಗೆ ಹೋಗಬೇಕು?

ಪಂಪ್‌ವೆಲ್‌ನಿಂದ ಮಂಗಳೂರು ನಗರಕ್ಕೆ ಬರುವ ವಾಹನ ಕರಾವಳಿ ಜಂಕ್ಷನ್‌, ಕಂಕನಾಡಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್, ಹಂಪನಕಟ್ಟ, ಕ್ಲಾಕ್ ಟವರ್ ಮೂಲಕ ಚಲಿಸಬೇಕು. ಸ್ಟೇಟ್‌ಬ್ಯಾಂಕ್‌ನಿಂದ ಪಂಪ್‌ವಲ್ ಕಡೆ ಹೋಗುವ ವಾಹನ ಲೇಡಿಗೋಷನ್‌, ಕ್ಲಾಕ್ ಟವರ್‌, ರೈಲ್ವೇ ಸ್ಟೇಷನ್ ಜಂಕ್ಷನ್, ನಂದಿಗುಡ್ಡ, ಕೋಟಿಚೆನ್ನಯ್ಯ ಸರ್ಕಲ್, ಕಂಕನಾಡಿ ಜಂಕ್ಷನ್ ಮೂಲಕ ಸಂಚರಿಸಬೇಕು. ಕಾರ್‌ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ವಾಹನ ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್, ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ &ಬಿಜೈ ಚರ್ಚ್ ಕಡೆಯಿಂದ ಬರುವ ವಾಹನ ಕೆಎಸ್‌ಆರ್‌ಟಿಸಿ ಜಂಕ್ಷನ್ ಮೂಲಕ ಸಂಚರಿಸಬೇಕು.

ಬಲ್ಮಠ ರೋಡ್, ರೂಪಾ ಹೋಟೆಲ್ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಕಲೆಕ್ಟರ್ಸ್್ ಗೇಟ್ ವೃತ್ತ, ಹಾರ್ಟಿಕಲ್ಚರ್ ಜಂಕ್ಷನ್, ಸೈಂಟ್ ಆಗ್ನೇಸ್, ಶಿವಭಾಗ್, ನಂತೂರು ವೃತ್ತ, ಪದುವಾ – ಕೆಪಿಟಿ, ಬಿಜಿ ಜಂಕ್ಷನ್, ಜೈಲ್ ರೋಡ್ – ಬಿಜೈ ಚರ್ಚ್ ರೋಡ್, ಕಾವೂರು, ಪಂಜಿಮೊಗೆರು, ಕೂಳೂರು 4ನೇ ಮೈಲು, ಕೊಟ್ಟಾರಚೌಕಿವರೆಗೆ ರಸ್ತೆಯ ಎರಡು ಬದಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಬಜಪೆ ವಿಮಾನ ನಿಲ್ದಾಣದಿಂದ ಹೇಗೆ ಬರಬೇಕು?

ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು-ಮರವೂರು, ಕಾವೂರು, ಬೊಂದೇಲ್, ಮೇರಿಹಿಲ್, ಕೆಪಿಟಿ, ಕೊಟ್ಟಾರ ಚೌಕಿ, ಉರ್ವ ಸ್ಟೋರ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಕೊಡಿಯಾಲ್ ಗುತ್ತು, ಬಿಜಿ ಸ್ಕೂಲ್ ಜಂಕ್ಷನ್, ಪಿವಿಎಸ್‌, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಎಲ್‌ಎಚ್‌ಎಚ್‌, ಬಾವುಟಗುಡ್ಡ, ಡಾ.ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಭಾರತ್ ಬೀಡಿ, ಕದ್ರಿ ಕಂಬಳ, ಭಟ್ಟಗುಡ್ಡೆ ಹಂಪನಕಟ್ಟ ರಸ್ತೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Categories
ತೀರ್ಥಹಳ್ಳಿ

ಮೊದಲ ಮಳೆಗೆ ಎರಡು ಮನೆ ಹಾನಿ

ಮೊದಲ ಮಳೆಗೆ ಎರಡು ಮನೆ ಹಾನಿ
– ತೀರ್ಥಹಳ್ಳಿ ತಾಲೂಕಿನ ಕಿಕ್ಕೇರಿ ಹಾರ್ಕೋಡು ಗ್ರಾಮದಲ್ಲಿ ಘಟನೆ
– 60-70 ವಿದ್ಯುತ್ ಕಂಬಗಳು ನೆಲಕ್ಕೆ: ಪರಿಹಾರಕ್ಕೆ ಪಟ್ಟು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಮೊದಲ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಸುಮಾರು 60-70 ವಿದ್ಯುತ್ ಕಂಬ ಹಾನಿಯಾಗಿವೆ. ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಭಾರೀ ಮಳೆ ಗಾಳಿಗೆ 2 ಮನೆ ಹಾನಿಯಾಗಿವೆ. ವೆಂಕಟೇಶ್ ಆಚಾರ್ಯ ಮನೆ ಸೇರಿ ಇಬ್ಬರ ಮನೆಗೆ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಘಟನೆ ನಡೆದ ಜಾಗ ಪರಿಶೀಲನೆ ಮಾಡಿದ್ದಾರೆ. ಬಿಜೆಪಿ ನಾಯಕರಾದ ಸಾಲೆಕೊಪ್ಪ ರಾಮಚಂದ್ರ, ಹೊನ್ನಸ್ ಗದ್ದೆ ಸವೀನ್, ಮಧುರಾಜ್ ಹೆಗ್ಡೆ ಸೇರಿದಂತೆ ಹಲವರು ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಭಾನುವಾರ ಫೋಟೋ ಸಿನಿಮಾ ಪ್ರದರ್ಶನ..!

ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಭಾನುವಾರ ಫೋಟೋ ಸಿನಿಮಾ ಪ್ರದರ್ಶನ..!
– ವಿವಿಧ ಸಂಘ ಸಂಸ್ಥೆಗಳ ಸಹಯೋಗ
– ಲಾಕ್ ಡೌನ್ ಸಂಕಷ್ಟ ಕಟ್ಟಿಕೊಟ್ಟ ಚಿತ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಏಪ್ರಿಲ್ 14 ರಂದು (ಅಂಬೇಡ್ಕ‌ರ್ ಜಯಂತಿ ) ರಂದು ತುಂಗಾ ಕಾಲೇಜಿನ ರಜತ ಸಭಾಂಗಣದಲ್ಲಿ ಸಂಜೆ 6-00 ಗಂಟೆಗೆ ಫೋಟೋ ಸಿನಿಮಾದ ಪ್ರದರ್ಶನವನ್ನು ತುಂಗಾ ವಿದ್ಯಾವರ್ಧಕ ಸಂಘ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ, ಕನ್ನಡ ಸಾಹಿತ್ಯ ಪರಿಷತ್‌, ತೀರ್ಥಹಳ್ಳಿ, ಸಾಹಿತ್ಯಾಸಕ್ತರ ಬಳಗ, ತೀರ್ಥಹಳ್ಳಿ, ಮಲ್ನಾಡ್ ಕ್ಲಬ್, ತೀರ್ಥಹಳ್ಳಿ, ರೋಟರಿ ಕ್ಲಬ್‌, ತೀರ್ಥಹಳ್ಳಿ, ಲಯನ್ಸ್ ಕ್ಲಬ್, ತೀರ್ಥಹಳ್ಳಿ, ವಿಹಂಗಮ ಪರಿಸರ ಅಧ್ಯಯನ ಕೇಂದ್ರ, ತೀರ್ಥಹಳ್ಳಿ ಇವರ ಸಹಭಾಗಿತ್ವದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು.

ಕೊರೋನ ರೋಗದ ಆರಂಭಿಕ ದಿನಗಳಲ್ಲಿ ಭಾರತ ಸರ್ಕಾರವು ದಿಢೀರನೆ ಲಾಕ್‌ಡೌನ್ ಘೋಷಣೆ ಮಾಡುತ್ತದೆ. ಆ ಸಮಯದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಿಂದ ಬೆಂಗಳೂರಿಗೆ ದಿನಗೂಲಿ ಕೆಲಸಕ್ಕಾಗಿ ವಲಸೆ ಬಂದಿದ್ದ ಕಾರ್ಮಿಕ ಮತ್ತು ಆತನ ಮಗ ವಾಪಾಸು ತಮ್ಮ ಊರಿಗೆ ಹೋಗಲು ನಿರ್ಧರಿಸುತ್ತಾರೆ. ವಾಹನಗಳಿಲ್ಲದೇ ಊರ ದಾರಿ ಕಡೆಗೆ ನಡೆಯತೊಡಗುತ್ತಾರೆ. ದಾರಿ ಸವೆದಂತೆ ಎದುರಾಗುವ ಬಿರು ಬಿಸಿಲು ಮತ್ತು ಕಷ್ಟಕರವಾದ ಹವಮಾನ ಹಾಗೂ ಹಸಿವು ತಂದೆ-ಮಗನ ಬದುಕು ನಲುಗುವಂತೆ ಮಾಡುತ್ತದೆ.

ಕನ್ನಡದ ಅಪರೂಪದ ಒಂದು ಸಿನಿಮಾ ಫೋಟೋ ಈಗಾಗಲೇ ಬಿಡುಗಡೆಗೊಂಡಿದೆ. ನಮ್ಮ ನಡುವಿನ ಜ್ವಲಂತ ಸಂಗತಿಯೊಂದರ ಸಂವೇದನಾಶೀಲ ಅಭಿವ್ಯಕ್ತಿ ಈ ಫೋಟೋ ಸಿನಿಮಾ. ಇದನ್ನು ರಚಿಸಿ ನಿರ್ದೇಶಿಸಿದ್ದು ಕರ್ನಾಟಕದ ಬಿಸಿಲು ನಾಡಾದ ರಾಯಚೂರಿನ ಮಸ್ಕಿ ತಾಲ್ಲೂಕಿನ ಹುಡುಗ ಉತ್ಸವ್ ಗೋನಾವರ ಅವರು. ಕೇವಲ ಒಂದೂವರೆ ಗಂಟೆಗಳ ಈ ಸಿನಿಮಾ ಮನುಷ್ಯನ ಇಕ್ಕಟ್ಟುಗಳನ್ನು ವಿವರಿಸುತ್ತಾ ನಾವೇ ಸೃಷ್ಟಿಸಿಕೊಳ್ಳುವ ಅಸೂಕ್ಷ್ಮ ಆವರಣವನ್ನು ಬಹಳ ಸೊಗಸಾಗಿ ಮತ್ತು ಮನಮಿಡಿಯುವಂತೆ ಚಿತ್ರಿಸುತ್ತದೆ.

ಇಂಥದೊಂದು ಕಥಾ ಹಂದರವನ್ನೊಳಗೊಂಡ ಒಂದೂವರೆ ಗಂಟೆಗಳ ಅಪರೂಪದ ಸಿನಿಮಾ ಫೋಟೋ ಇದನ್ನು ರಚಿಸಿ ಸ್ವತಃ ನಿರ್ದೇಶಿಸಿ ನಿರ್ಮಿಸಿದವರು ಉತ್ಸವ್ ಗೋನಾವರ. ಇವರೊಂದಿಗೆ ಹೆಗಲೆಣೆಯಾಗಿ ನಿಂತು ದೃಶೀಕರಣ ಮಾಡಿದ್ದು ದಿನೇಶ್ ದಿವಾಕರನ್. ಸಿನಿಮಾವನ್ನು ನೋಡುಗರಿಗೆ ಅನುವಾಗುವಂತೆ ಸಂಕಲನ ಮಾಡಿದ್ದು ಶಿವರಾಜ್ ಮೋಹು. ಕಲಾ ನಿರ್ದೇಶನ ಮಾಡಿದ್ದು ಗೌತಮ್ ಸೊರಟೂರು. ಸದ್ದು ಗದ್ದಲವಾಗದಂತೆ ಮಾಡಿದವರು ರವಿ ಹಿರೇಮಠ. ಇವರೆಲ್ಲರ ಸಂವೇದನೆಗೆ ಜೀವ ತುಂಬಿ ಅಭಿನಯಿಸಿದವರು ಸಂಧ್ಯಾ ಅರಕೆರೆ. ಮಹಾದೇವ ಹಡಪದ್, ಎಂ.ಎಸ್. ಜಹಾಂಗೀರ್ ಮತ್ತು ದುರುಗ್ಯಾನ ಪಾತ್ರದಲ್ಲಿ ಚಿಕ್ಕ ಹುಡುಗನಾಗಿ ವೀರೇಶ ಗೋನಾವರ.

ಪ್ರವೇಶ ದರ ರೂ. 100-00

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಸ್ವಿಮ್ಮಿಂಗ್ ಪೂಲಲ್ಲಿ ಮುಳುಗಿ ಬಾಲಕ ದುರ್ಮರಣ!
– ಈದ್ ಸಂಭ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳಿದ್ದಾಗ ಅವಘಡ
– ಮಂಗಳೂರು ಬೆಂಗಳೂರು ಎಸಿ ಕೋಚಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು!
– ಸಹ ಪ್ರಯಾಣಿಕನಿಂದ ಕೃತ್ಯದ ಶಂಕೆ

NAMMUR EXPRESS NEWS
ಶಂಕರನಾರಾಯಣ: ಈದ್ ಉಲ್ ಫಿತರ್ ಹಬ್ಬದ ಸಂಭ್ರಮದ ಹಿನ್ನಲೆ ಖಾಸಗಿ ರೆಸಾರ್ಟ್ ನಲ್ಲಿ ರಿಲಾಕ್ಸ್ ಮಾಡಲು ಕುಟುಂಬವೊಂದು ತೆರಳಿದ್ದ ಸಂದರ್ಭದಲ್ಲಿ ಬಾಲಕನೋರ್ವ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ದಾರುಣ ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ಏ.11ರಂದು ನಡೆದಿದೆ. ಹೂಡೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಅರೀಝ್ (10) ಮೃತ ಬಾಲಕನಾಗಿದ್ದಾನೆ. ಹೂಡೆಯ ಇಬಾದುಲ್ಲ ಅವರು ಕುಟುಂಬ ಸಮೇತರಾಗಿ ಹೆಂಗವಳ್ಳಿ ಯ ಖಾಸಗಿ ರೆಸಾರ್ಟ್ ಹೋಗಿದ್ದು, ಈ ವೇಳೆ ಮಕ್ಕಳೊಂದಿಗೆ ಆಟವಾಡುತ್ತಾ ನೀರಿನಲ್ಲಿ ಬಿದ್ದಿದ್ದಾನೆ. ಈಜುಕೊಳದ ಸುತ್ತಲೂ ಹತ್ತಾರು ಜನರಿದ್ದರೂ ಎಲ್ಲರೂ ಸಂಭ್ರಮದಲ್ಲಿದ್ದರು. ಕಿರುಚಾಟ ಕೇಳೀ ಕುಟುಂಬ ಸದಸ್ಯರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ವೈದ್ಯರು ಅದಾಗಲೇ ಮೃತಪಟ್ತಿರುವುದಾಗಿ ತಿಳಿಸಿದ್ದಾರೆ.

ಮಗುವಿನ ಸಾವಿಗೆ ರೆಸಾರ್ಟ್ ಅವರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ.ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆಯೆಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಶಂಕರನಾರಾಯಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿಯು ತಂದೆ, ತಾಯಿ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಈತ ಹೂಡೆಯ ದಾರುಸ್ಟಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯಾಗಿದ್ದ ಶಾಲಾ ಆಡಳಿತ ಮಂಡಳಿಯೂ ಸಂತಾಪ ವ್ಯಕ್ತಪಡಿಸಿದೆ.

ಮಂಗಳೂರು ಬೆಂಗಳೂರು ಎಸಿ ಕೋಚ್ ನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವ

ಮಂಗಳೂರು: ಮಂಗಳೂರು -ಬೆಂಗಳೂರು ರೈಲಿನ ಎಸಿ ಕೋಚಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳೂರಿನ ಜಪ್ಪುವಿನ 74 ವರ್ಷದ ವೃದ್ಧೆ, ಆಕೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಎಪ್ರಿಲ್ 7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಎಸಿ ಕೋಚಿನಲ್ಲಿ ಪ್ರಯಾಣಿಸಿದ್ದರು. ಮರುದಿನ ಮಂಗಳೂರು ತಲುಪಿ ಬೆಳಗ್ಗೆ ಮನೆಗೆ ಹೋಗಿ ನೋಡಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.

ಸಹ ಪ್ರಯಾಣಿಕನಿಂದ ಕೃತ್ಯದ ಶಂಕೆ :

ಇನ್ನು ವೃದ್ಧೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ರಾತ್ರಿ 11.30ಕ್ಕೆ ಮಲಗಿದ್ದರು. ವೃದ್ಧೆ ಎಚ್ಚರವಾಗಿದ್ದರು. ರೈಲು ಮೈಸೂರು ಬಿಟ್ಟ ಬಳಿಕ ಓರ್ವ ಪ್ರಯಾಣಿಕ ಅವರ ಪಕ್ಕದ ಸೀಟಿನಲ್ಲಿ ಬಂದು ಕುಳಿತಿದ್ದ. ಆತನ ಟಿಕೆಟ್‌ ಅನ್ನು ಟಿಟಿಇ ಪರಿಶೀಲಿಸಿ ಹೋಗಿದ್ದ. ಆ ವ್ಯಕ್ತಿ ಮಲಗದೆ ಲಗೇಜ್‌ಗಳನ್ನೇ ನೋಡುತ್ತಿದ್ದ. ಮೊಮ್ಮಕ್ಕಳ ಬ್ಯಾಗ್‌ಗಳನ್ನು ಕೂಡ ಮುಟ್ಟಿ ನೋಡುತ್ತಿದ್ದ. ಪ್ರಶ್ನಿಸಿದಾಗ ಸುಬ್ರಹ್ಮಣ್ಯದಲ್ಲಿ ಇಳಿಯುವುದಾಗಿ ಹೇಳಿದ್ದ. ಅನಂತರ ವೃದ್ಧೆಗೆ ನಿದ್ದೆ ಬಂದಿತ್ತು ಎಂದು ರೈಲ್ವೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳೂರಿನಲ್ಲಿ ಇಳಿದು ಮನೆ ತಲುಪಿ ನೋಡಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಎರಡು ಬಳೆಗಳು, ಸರ ಸೇರಿ ಒಟ್ಟಾರೆ 3.91 ಲಕ್ಷ ರೂ. ಮೌಲ್ಯದ 59.885 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Categories
ತೀರ್ಥಹಳ್ಳಿ ಶಿಕ್ಷಣ

ಸರ್ಕಾರಿ ಶಾಲೆಯಲ್ಲಿ ರಜಾ ಮಜಾ ಬೇಸಿಗೆ ಶಿಬಿರ!

ಸರ್ಕಾರಿ ಶಾಲೆಯಲ್ಲಿ ರಜಾ ಮಜಾ ಬೇಸಿಗೆ ಶಿಬಿರ!
– 1500ಕ್ಕೂ ಹೆಚ್ಚು ಮಕ್ಕಳು ಭಾಗಿ: ಎಲ್ಲರ ಮೆಚ್ಚುಗೆ
– ತನ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಹೊನ್ನೇತಾಳು ಸರ್ಕಾರಿ ಶಾಲೆ ಎಲ್ಲರಿಗೂ ಮಾದರಿ

NAMMUR EXPRESS NEWS
ತೀರ್ಥಹಳ್ಳಿ: ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಳಿಂಗ ಫೌಂಡೇಶನ್ ಗುಡ್ಡೇಕೇರಿ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಖಾಸಗಿ ಶಾಲೆ, ಸಂಘ ಸಂಸ್ಥೆಗಳು ಶಿಬಿರ ಮಾಡೋದು ಮಾಮೂಲಿ. ಆದರೆ ಇಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿಕಸನಕ್ಕೆ ಶಿಬಿರ ಮಾಡಿದ್ದು ಮಾದರಿ ಕಾರ್ಯಕ್ರಮವಾಯಿತು. ವಿವಿಧ ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಆಯೋಜಿಸಿರುವ ರಜಾ ಮಜಾ ಬೇಸಿಗೆ ಶಿಬಿರ ಕ್ಕೆ ಸಹಕಾರವನ್ನು ಮೇಧಾ ಚಾರಿಟೇಬಲ್ ಟ್ರಸ್ಟ್, ಕ್ವೆಸ್ ಫೌಂಡೇಶನ್ ಬೆಂಗಳೂರು ಮತ್ತು ಕಾಳಿಂಗ ಫೌಂಡೇಶನ್ ಗುಡ್ಡೇಕೇರಿ ನೀಡಿದ್ದರು.

ದಿನಾಂಕ 1-04-24 ರಿಂದ 11-04-24ರವರೆಗೆ ಬೇಸಿಗೆ ಶಿಬಿರ ಕಾರ್ಯಕ್ರಮವು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿದೆ. ಪ್ರತಿ ಬೇಸಿಗೆಯಲ್ಲೂ ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಜೇವನಾನುಭವ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳನ್ನು ಇಂತಹ ಶಿಬಿರ ಗಳಿಗೆ ಕಳುಹಿಸುವುದರಿಂದ ಅನುಕೂಲಗಳು ಬಹಳಷ್ಟು. ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು. ಹೀಗೆ ಮಗುವೊಂದರ ವಿಕಸನಕ್ಕೆ ಸುಂದರವಾದ ವೇದಿಕೆಯಾಗಿತ್ತು.

ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಗಳಿಂದ ಸರಳ ಗಣಿತ, ಜ್ಞಾಪಕ ಶಕ್ತಿ ವೃದ್ಧಿ, ಮಕ್ಕಳ ಮನೋಆರೋಗ್ಯ ವಿಚಾರಗಳ ಬಗ್ಗೆ ವಿಶೇಷ ತರಬೇತಿಯನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ನೀಡಲಾಯಿತು. ಒಟ್ಟು 10 ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ಮಕ್ಕಳು ಆಗಮಿಸಿದ್ದರು. ಹಾಗೂ ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ಶಿವಾನಂದ್ ಕರ್ಕಿ ಮತ್ತು ಡಾ. ರವಿಶಂಕರ್ ಉಡುಪ ಮತ್ತು ಡಾ.ನಮಿತಾ ಉಡುಪ ಇವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಹಾಗೂ 25 ಜನ ಸಂಪನ್ಮೂಲ ವ್ಯಕ್ತಿ ಗಳು ಮಕ್ಕಳಿಗೆ ಜ್ಞಾನ ವಿಕಾಸದ ಬಗ್ಗೆ ಮಾಹಿತಿಯನ್ನು ನೀಡಿದರುವುದು ಈ ಶಿಬಿರದ ವಿಶೇಷವಾಗಿತ್ತು.

1500 ಮಕ್ಕಳು ಶಿಬಿರದಲ್ಲಿ ಭಾಗಿ!

ಒಂದುವರೆ ಸಾವಿರದಷ್ಟು ಮಕ್ಕಳು ಪೋಷಕರು ಸಂಪನ್ಮೂಲ ವ್ಯಕ್ತಿಗಳು ಹತ್ತು ದಿನದಲ್ಲಿ ಅನ್ನ ದಾಸೋಹದಲ್ಲಿ ಭಾಗವಹಿಸಿದ್ದಾರೆ. ಒಟ್ಟು 40 ಜನ ಸ್ವಯಂಸೇವಕರು 10 ದಿನ ಅಡಿಗೆಯನ್ನು ಮಾಡಿರುತ್ತಾರೆ ಮತ್ತು ಬಿಸಿ ಊಟದ ವ್ಯವಸ್ಥೆಗೆ ತುಂಬಾ ಜನ ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡಿ ಸಹಕಾರವನ್ನು ನೀಡಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸ್ಪೋಕನ್ ಕ್ಲಾಸ್

ಕಾಳಿಂಗ ಫೌಂಡೇಶನ್ ಇವರು ನಿರಂತರವಾಗಿ ಕಳೆದ ಮೂರು ವರ್ಷಗಳಿಂದ ಹಳ್ಳಿ ಗಾಡಿನ ಸರ್ಕಾರಿ ಶಾಲಾ ಮಕ್ಕಳಿಗೆ ನಿರಂತರವಾಗಿ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ನೀಡುತ್ತಾ ಬಂದಿರುತ್ತಾರೆ. ಇವರಿಂದ ಈ ಎಲ್ಲಾ ಶಾಲೆಗಳಿಗೂ ಸಹಕಾರಿಯಾಗಿದೆ.

Categories
ಬೆಂಗಳೂರು ರಾಜ್ಯ

ಶಂಕಿತ ಉಗ್ರರು ಸೆರೆ: ಬೆಂಗಳೂರಿಗೆ ಕರೆ ತಂದ ಎನ್‌ ಐ ಎ !

ಶಂಕಿತ ಉಗ್ರರು ಸೆರೆ: ಬೆಂಗಳೂರಿಗೆ ಕರೆ ತಂದ ಎನ್‌ ಐ ಎ !
– 42 ದಿನಗಳ ಎನ್‌ಐಎ ಆಪರೇಷನ್‌: ಕೊನೆಗೂ ಸಿಕ್ಕ ಶಂಕಿತರು
– ಮಲೆನಾಡಿಗೆ ಕರೆ ತಂದು ವಿಚಾರಣೆ ಸಾಧ್ಯತೆ?!

NAMMUR EXPRESS NEWS
ರಾಜಧಾನಿಯಲ್ಲಿ ಬಾಂಬ್ ಸ್ಫೋಟ ನಡೆಸಿ ಪರಾರಿಯಾಗಿದ್ದ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದು ಇದೀಗ ಎನ್‌ ಐ ಎ ಅಧಿಕಾರಿಗಳು ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆ ವಹಿಸಿಕೊಂಡ ಎನ್‌ಐಎ ಮೊದಲಿಗೆ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್ ಮುನೀರ್‌ನನ್ನು ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿತ್ತು. ನಂತರ ಮುನೀರ್ ಸೆಲ್ ಮೇಲೆ ದಾಳಿ ಮಾಡಿತ್ತು. ಆಗ ಅಲ್ಲಿ ಒಂದು ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್ ಪರಿಶೀಲಿಸಿದಾಗ ಹಲವು ಕೋಡ್ ವರ್ಡ್ ಸಿಕ್ಕಿತ್ತು. ಈ ಕೋಡ್ ವರ್ಡ್ ಡಿಕೋಡ್ ಮಾಡಿದಾಗ ಆರೋಪಿಗಳ ಕುರಿತು ಮಾಹಿತಿ ಸಿಕ್ಕಿತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾದ ಶಿವಮೊಗ್ಗದ ಮುಸಾವಿರ್‌ & ಅಬ್ದುಲ್ ಮತೀನ್ ತಾಹನನ್ನು ಎನ್‌ಐಎ ಅಧಿಕಾರಿಗಳು ಕಳೆದ 42ದಿನಗಳಿಂದ 7 ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇವರಿಬ್ಬರ ಪತ್ತೆಗೆ ಸಾವಿರಾರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು ನಕಲಿ ದಾಖಲೆ ಸೃಷ್ಟಿಸಿ ಓಡಾಡುತ್ತಿದ್ದ ಶಂಕಿತ ಉಗ್ರರ ಚಲನ-ವಲನದ ಜಾಡು ಹಿಡಿಯುವುದ ದೊಡ್ಡ ಸವಾಲಾಗಿತ್ತು. ಶಂಕಿತರು ಬಸ್‌ ಹೊರತುಪಡಿಸಿ ರೈಲು, ಟ್ಯಾಕ್ಸಿ ಸೇರಿ ಇತರೆ ಯಾವುದೇ ಸಾರಿಗೆ ಬಳಸುತ್ತಿರಲಿಲ್ಲ. ಕೊಲ್ಕತ್ತಾ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿದೆ.

ಶಿವಮೊಗ್ಗ, ತೀರ್ಥಹಳ್ಳಿಗೂ ಕರೆ ತರುತ್ತಾರಾ?

ತನಿಖೆ ಮೇಲೆ ಎನ್‌ಐಎ ಸದ್ಯದಲ್ಲಿಯೇ ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದೆ. ಮತೀನ್‌ ಹಾಗೂ ಶಾಜೀಬ್‌ನ ಕರೆದುಕೊಂಡು ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದ್ದು, ಮಹಜರ್‌ ಹಾಗೂ ಸಾಕ್ಷ್ಯ ಕಲೆ ಹಾಕಲಿದೆ ಎನ್ನಲಾಗುತ್ತಿದೆ.

Categories
ಮಲ್ನಾಡ್

ಮಳೆಯಿಂದ ಮಲೆನಾಡಿನೆಲ್ಲೆಡೆ ಕೂಲ್‌ ಕೂಲ್‌..!

ಮಳೆಯಿಂದ ಮಲೆನಾಡಿನೆಲ್ಲೆಡೆ ಕೂಲ್‌ ಕೂಲ್‌..!
– ರಾಜ್ಯಾದ್ಯಂತ ಮಳೆ ವಾತಾವರಣ: ನಿಟ್ಟುಸಿರು ಬಿಟ್ಟ ಜನತೆ
– ಇನ್ನಷ್ಟು ಮಳೆ ಬರುವ ಸೂಚನೆ: 2 ದಿನ ಎಲ್ಲೋ ಅಲರ್ಟ್
– ಒಂದೇ ದಿನ ಸಿಡಿಲಿಗೆ ಮೂವರು ಬಲಿ, ಕುರಿ, ಜಾನುವಾರು ಸಾವು

NAMMUR EXPRESS NEWS
ರಾಜ್ಯದ ಬಹುತೇಕ ಕಡೆ ಸೇರಿ ಕರಾವಳಿ, ಮಲೆನಾಡಿನೆಲ್ಲೆಡೆ ವಿಪರೀತ ತಾಪಮಾನ, ಶಾಖದ ಅಲೆಯಿಂದಾಗಿ ಬೇಸತ್ತಿದ್ದ ಜನರು ಇದೀಗ ಕೂಲ್ ಕೂಲ್ ವಾತಾವರಣವನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ರಾಜ್ಯಾದ್ಯಂತ ವಾತಾವರಣ ಸಹಜ ಸ್ಥಿತಿಯತ್ತ ಬರುತ್ತಿದೆ. ಕೊಂಚ ತಂಪಿನ ವಾತಾವರಣ ಸೃಷ್ಟಿ ಆಗುತ್ತಿದೆ. ದೈನಂದಿನವಾಗಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆದರೆ, ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿತ್ತು. ಇದರಿಂದ ಬೆಳಗ್ಗೆ 8ಗಂಟೆಯಿಂದ ಸಂಜೆ ವರೆಗೆ ಶಾಖದ ಅಲೆ ಬೀಸಿದರೆ, ರಾತ್ರಿ ಸೆಕೆಯ ವಾತಾವರಣ ಕಂಡು ಬರುತ್ತಿತ್ತು. ತಂಪು ವಾತಾವರಣವೇ ಇಲ್ಲದೇ ಹೈರಾಣಾಗಿದ್ದ ಜನರಿಗೆ ರಾಜ್ಯ ವಿವಿಧೆಡೆ ಮಳೆ ಸುರಿಯುವ ಮೂಲಕ ತಂಪು ವಾತಾವರಣ ನಿರ್ಮಿಸಿದೆ.

ಎಲ್ಲೆಲ್ಲಿ ಮಳೆ?

ಕೊಡಗು, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ಬೀದರ್, ಕಲಬುರಗಿ, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ಮಳೆಯ ಆಗಮನವಾಗುತ್ತಿದೆ. ಅಕ್ಕಪಕ್ಕದ ಪ್ರದೇಶಗಳಲ್ಲಿ ಬಿದ್ದ ಮಳೆಯಿಂದಲೂ ವಾತಾವರಣ ತಂಪು ಆಗಿದೆ.

ವಿಜಯಪುರದಲ್ಲಿ ಸಿಡಿಲಿಗೆ ಮೂವರು ಸಾವು

ವಿಜಯಪುರ ಜಿಲ್ಲೆಯಲ್ಲಿ ಸಿಡಿಲಬ್ಬರದೊಂದಿಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಕೆಲಕಾಲ ಸಾಧಾರಣ ಮಳೆಯಾಗಿದ್ದು, ಮೂವರನ್ನು ಬಲಿಪಡೆದಿದೆ. ಇಂಡಿ ತಾಲೂಕಿನಲ್ಲಿ ಗಿಡದ ಕೆಳಗೆ ಆಡು ಕಟ್ಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಬೀರಪ್ಪ, ಮಸಳಿ ಬಿ.ಕೆ.ಗ್ರಾಮದಲ್ಲಿ ಹೊಲದಲ್ಲಿ ಈರುಳ್ಳಿ ತುಂಬುತ್ತಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಹಾಗೂ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇದರ ಜತೆಗೆ ಎಮ್ಮೆ ಸೇರಿ ಕೆಲ ಜಾನುವಾರುಗಳೂ ಸಿಡಿಲಬ್ಬರಕ್ಕೆ ಬಲಿಯಾಗಿವೆ.

ಸಿಡಿಲು ಬಡಿದು ಜಾನುವಾರು, ಕುರಿ ಸಾವು

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗಿದ್ದು ಸಿಡಿಲು ಬಡಿದು ಐದು ಜಾನುವಾರುಗಳು ಮೃತಪಟ್ಟರೆ ಶಿವಮೊಗ್ಗದಲ್ಲಿ ಸಿಡಿಲು ಬಡಿದು 18ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಇನ್ನು ಕರಾವಳಿ ಭಾಗದಲ್ಲಿಯೂ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮಳೆಯಾಗುವ ಸಾಧ್ಯತೆಯಿದೆ.

Categories
ಮಂಗಳೂರು

ಕಾಡು ಕೋಣ ಮಂಗ ಓಡಿಸಲು ಪೊಲೀಸರೇ ಬರ್ಬೇಕು!

ಕಾಡು ಕೋಣ ಮಂಗ ಓಡಿಸಲು ಪೊಲೀಸರೇ ಬರ್ಬೇಕು!
– ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಟ್ಟ ಹಿನ್ನಲೆ 112ಗೆ ಕರೆ
– ಫಚೀತಿಗೆ ಸಿಲುಕಿದ ಕರಾವಳಿ ಪೊಲೀಸರು
– ದಕ್ಷಿಣ ಕನ್ನಡದಲ್ಲಿ ಗಮನಸೆಳೆದಿರುವ ಕೋವಿ ಅಭಿಯಾನ

NAMMUR EXPRESS NEWS
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕೃಷಿ ಉದ್ದೇಶಗಳ ಬಳಕೆ ನೀಡಲಾಗಿದ್ದ ಕೋವಿಗಳನ್ನು ರೈತರು ಪೊಲೀಸ್‌ ಠಾಣೆಗಳಲ್ಲಿ ಠೇವಣಿ ಇಡಬೇಕಾಗಿದೆ. ಆದರೆ, ದಕ್ಷಿಣ ಕನ್ನಡದಲ್ಲಿ ಈಗ ಕೋವಿಗಳನ್ನು ಠೇವಣಿ ಇಟ್ಟಿರುವ ಕಾರಣ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವುದಕ್ಕೆ ರೈತರು ಕೋರ್ಟ್‌ ಮೊರೆ ಹೋಗುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಆದರೆ, ಕೋವಿಗಳಿಗೆ ವಿನಾಯಿತಿ ನೀಡುವಂತೆ ಮಾಡಿರುವ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಕಾಡುಪ್ರಾಣಿಗಳು ತೋಟಕ್ಕೆ ಬಂದ ತಕ್ಷಣ ಪೊಲೀಸರ 112 ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ಈ ಸುದ್ದಿ ಈಗ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕಾಡುಪ್ರಾಣಿಗಳಿಂದ ಬೆಳೆ, ಸಂರಕ್ಷಣೆಗಾಗಿ ನೀಡಲಾಗಿರುವ ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಟ್ಟಿರುವ ಕಾರಣ ಈಗ ಪೊಲೀಸರೇ ತಮಗೆ ರಕ್ಷಣೆ ಒದಗಿಸಬೇಕೆಂದು ರೈತರ ವಾದವಾಗಿದೆ. ಅದರಂತೆ ಪುತ್ತೂರು ಭಾಗದ ರೈತರು ಈಗಾಗಲೇ ಅಭಿಯಾನವನ್ನು ಆರಂಭಿಸಿದ್ದು, ತಮ್ಮ ತೋಟಗಳಿಗೆ ಕೋವಿಗಳ ಅನಿವಾರ್ಯತೆ ಕಂಡುಬಂದಾಗ 112 ಸಹಾಯವಾಣಿಗೆ ಕರೆಗಳನ್ನು ಮಾಡಿ ಪೊಲೀಸರ ನೆರವು ಕೇಳುತ್ತಿದ್ದಾರೆ.

ಮಂಗ ಬಂದಿದಕ್ಕೆ ಪೊಲೀಸರಿಗೆ ಕಾಲ್

ವಿಟ್ಲದ ರೈತರೊಬ್ಬರು ತಮ್ಮ ತೋಟಕ್ಕೆ ಮಂಗ ಬಂದಾಗ 112ಗೆ ಕರೆ ಮಾಡಿ ನಮ್ಮ ತೋಟಕ್ಕೆ ಮಂಗ ಬಂದಿದ್ದು ತಾವು ಕೂಡಲೇ ಬರಬೇಕೆಂದು ಹೇಳಿದ್ದು, ಅದರಂತೆ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮರುದಿನ ಕೋವಿಯನ್ನು ಕೂಡ ವಾಪಾಸ್‌ ತಂದು ಕೊಟ್ಟಿದ್ದಾರೆ. ಆ ಕುರಿತ ರೈತ ಮಾತನಾಡಿರುವ ಆಡಿಯೋ ಈಗ ವೈರಲ್‌ ಕೂಡ ಆಗಿದೆ.

ಚುನಾವಣೆಯೂ ಬಿಡಂಗಿಲ್ಲ… ಜನರನ್ನು ಬಿಡಂಗಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ರೈತರು ಕೃಷಿ ಉದ್ದೇಶಗಳಿಗೆ ಕೋವಿಯನ್ನು ಕಾನೂನು ರೀತಿಯಲ್ಲಿ ಪಡೆದುಕೊಂಡಿದ್ದಾರೆ. ಆದರೆ, ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಎಲ್ಲ ರೈತರು ಕಡ್ಡಾಯವಾಗಿ ಠಾಣೆಗಳಲ್ಲಿ ಠೇವಣಿ ಇಡಬೇಕು. ಇದರಿಂದ ಚುನಾವಣೆ ಮುಗಿಯುವವರೆಗೆ ಏನೇ ಕಾಡುಪ್ರಾಣಿಗಳ ಉಪಟಳ ಉಂಟಾದರೂ ಕೋವಿಗಳು ಇಲ್ಲದೆ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಈ ಬಾರಿ ಠಾಣೆಗಳಿಗೆ ಕೋವಿಗಳನ್ನು ಒಪ್ಪಿಸಿದ ಬಳಿಕ 112ಗೆ ಕರೆ ಮಾಡುವ ಅಭಿಯಾನ ಆರಂಭಿಸಿದ್ದಾರೆ. ಕರ್ನಾಟಕ ಹಸಿರು ಸೇನೆಯ ದಕ್ಷಿಣ ಕನ್ನಡ ಘಟಕವು ಈ ಅಭಿಯಾನದ ನೇತೃತ್ವ ವಹಿಸಿದೆ. ಆದರೆ, ಚುನಾವಣಾ ಕರ್ತವ್ಯದ ಒತ್ತಡದಲ್ಲಿರುವ ಪೊಲೀಸರಿಗೆ ಈ ಕೋವಿ ಅಭಿಯಾನವು ಹೊಸ ಸಮಸ್ಯೆ-ಸವಾಲನ್ನು ಸೃಷ್ಟಿಸಿದೆ.