Categories
ಜಾತಕ

ಇಂದು ರಾಶಿ ಭವಿಷ್ಯ ಹೇಗಿದೆ?

ಇಂದು ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?
– ರಾಶಿಗಳ ಫಲಾಫಲ ಇಲ್ಲಿದೆ

NAMMUR EXPRESS NEWS
2024 ಮೇ 05ರ ಭಾನುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ :
ಧನ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ಅಲ್ಪ ಅನಾರೋಗ್ಯದ ಸಮಸ್ಯೆಗಳನ್ನು ಉಂಟಾಗುತ್ತವೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬದ ವಾತಾವರಣ ಸಮಸ್ಯಾತ್ಮಕವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಕುಟುಂಬ ಸದಸ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿ ಉದ್ಯೋಗಗಳು ಮಿಶ್ರಮವಾಗಿ ಸಾಗುತ್ತವೆ.

** ವೃಷಭ ರಾಶಿ :
ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ. ದೀರ್ಘಾವಧಿಯ ಸಾಲಗಳನ್ನು ತೀರಿಸಲಾಗುತ್ತದೆ. ಸಮಾಜದಲ್ಲಿ ಹಿರಿಯರೊಂದಿಗೆ ಹೊಸ ಪರಿಚಯವಾಗುತ್ತದೆ. ಎಲ್ಲ ವರ್ಗದವರಿಗೂ ಅನುಕೂಲಕರ ವಾತಾವರಣವಿರುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.

** ಮಿಥುನ ರಾಶಿ :
ಇತರರೊಂದಿಗೆ ಆತುರದಿಂದ ಮಾತನಾಡುವುದು ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸೂಕ್ತತೆ ಹೆಚ್ಚಾಗುತ್ತದೆ. ಹೊಸ ಮನೆ ನಿರ್ಮಾಣ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಸ್ಥಿರ ಆಸ್ತಿಗಳ ಮಾರಾಟಗಳು ಮಂದಗತಿಯಲ್ಲಿ ಸಾಗುತ್ತವೆ. ಸಂಬಂಧಿಕರಿಂದ ಅನಿರೀಕ್ಷಿತ ವಿವಾದಗಳು ಉದ್ಭವಿಸುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

** ಕಟಕ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದ ಮುಕ್ತಿ ದೊರೆಯುತ್ತದೆ. ಬಂಧು ಮಿತ್ರರಿಂದ ವಿವಾದಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಮನೆಯಲ್ಲಿ ಭೋಜನ ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೂಡಿರುತ್ತವೆ. ಮಕ್ಕಳು ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸುತ್ತಾರೆ.

** ಸಿಂಹ ರಾಶಿ :
ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳಿಗೆ ವಾತಾವರಣ ಅನುಕೂಲಕರವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ವಿಸ್ತಾರಗೊಳ್ಳುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.

** ಕನ್ಯಾ ರಾಶಿ :
ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತೀರಿ. ಅಗತ್ಯಕ್ಕೆ ಹಣ ದೊರೆಯುತ್ತದೆ. ದೀರ್ಘಾವಧಿಯ ಸಾಲಗಳನ್ನು ತೀರಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳು ಕಂಡುಬರುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ.

** ತುಲಾ ರಾಶಿ :
ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು ಸಿಗುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುತ್ತವೆ.

** ವೃಶ್ಚಿಕ ರಾಶಿ :
ಮನೆಯಲ್ಲಿ ಮಕ್ಕಳ ಮದುವೆಯ ಶುಭ ಕಾರ್ಯದ ಪ್ರಸ್ತಾಪವಿರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹಣಕಾಸಿನ ವಿಷಯಗಳು ಕೂಡಿ ಬರುತ್ತವೆ. ವಾಹನಗಳನ್ನು ಚಾಲನೆ ಮಾಡುವಾಗ ಜಾಗರೂಕರಾಗಿರಿ. ವೃತ್ತಿಪರ ಉದ್ಯೋಗಗಳಲ್ಲಿ ಸಕಾರಾತ್ಮಕ ವಾತಾವರಣಗಳು ಇರುತ್ತವೆ.

** ಧನುಸ್ಸು ರಾಶಿ :
ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳು ಹೆಚ್ಚಿನ ಉತ್ಸಾಹದಿಂದ ಸಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶುಭ ಸುದ್ದಿ ದೊರೆಯುತ್ತದೆ. ದೂರದ ಪ್ರದೇಶದಿಂದ ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಲ್ಲಾ ಕಡೆಯಿಂದ ಆದಾಯ ಬರುತ್ತದೆ.

** ಮಕರ ರಾಶಿ :
ಹಳೆ ಸಾಲಗಳು ಸ್ವಲ್ಪ ಮಟ್ಟಿಗೆ ಇತ್ಯರ್ಥವಾಗುತ್ತವೆ. ದೂರದ ಬಂಧು ಮಿತ್ರರಿಂದ ದೊರೆಯುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಹಣಕಾಸಿನ ತೊಂದರೆಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಅಜಾಗರೂಕತೆ ಒಳ್ಳೆಯದಲ್ಲ.

** ಕುಂಭ ರಾಶಿ :
ಕೆಲವು ವಿಚಾರಗಳಲ್ಲಿ ಬಾಲ್ಯದ ಗೆಳೆಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೈಗೊಂಡ ಕೆಲಗಳಲ್ಲಿ ವಿಳಂಬ ಉಂಟಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹೊಸ ಗೃಹೋಪಯೋಗಿ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಉದ್ಯೋಗ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.

** ಮೀನ ರಾಶಿ :
ಆತ್ಮೀಯರೊಂದಿಗೆ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಹಿಂದಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡಾಗ ಬೇಸರವಾಗುತ್ತದೆ. ಮನೆಯ ಹೊರಗೆ ಅನುಕೂಲತೆ ಹೆಚ್ಚಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ. ಸಹೋದರರೊಂದಿಗೆ ದೃಢವಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ.

Categories
ರಾಜ್ಯ

ರೇವಣ್ಣ ಅರೆಸ್ಟ್!

ರೇವಣ್ಣ ಅರೆಸ್ಟ್!
– ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
– ಜೆಡಿಎಸ್ ಶಾಸಕ ರೇವಣ್ಣ ಜೈಲುಪಾಲು?
– ಪ್ರಜ್ವಲ್ ಬಂಧನಕ್ಕೂ ಸಿದ್ಧತೆ

NAMMUR EXPRESS NEWS
ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳೆವಣಿಗೆ ನಡೆದಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಇಂದು ರಾತ್ರಿಯೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಅವರಿಗೆ ಜನಪ್ರತಿನಿಧಿ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಜಾಮೀನು ಸಿಗದ ಬೆನ್ನಲ್ಲೇ ಅವರನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.

ಎಚ್ ಡಿ ರೇವಣ್ಣರನ್ನು ವಶಕ್ಕೆ ಪಡೆದ ಅಧಿಕಾರಿಗಳು ನೇರವಾಗಿ ಎಸ್‌ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಮಹಿಳೆಯರಲ್ಲಿ ಒಬ್ಬರಾಗಿದ್ದ ತನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು 20 ವರ್ಷದ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ಕೆಆರ್ ನಗರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅಪಹರಣ, ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣರನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.

ಮಗನ ಅರೆಸ್ಟ್ ಸಾಧ್ಯತೆ?

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಎಸ್‌ಐಟಿ ಶನಿವಾರ ಎರಡನೇ ಲುಕ್‌ಔಟ್ ನೋಟಿಸ್‌ ಜಾರಿ ಮಾಡಿದೆ. ಇದರ ಜೊತೆಗೆ ಕೇಂದ್ರ ತನಿಖಾ ದಳವು ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌ ಜಾರಿ ಮಾಡುವ ಸಾಧ್ಯತೆಯಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದೆ.

ರೇವಣ್ಣ ಸಹಚರರ ಬಂಧನ

ಎಚ್ ಡಿ ರೇವಣ್ಣ ಅವರ ಸಹಚರರು ತಮ್ಮ ತಾಯಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ 20 ವರ್ಷದ ಯುವಕನೊಬ್ಬ ಪೊಲೀಸ್ ದೂರು ದಾಖಲಿಸಿದ್ದಾರೆ. ಮಹಿಳೆಯನ್ನು ಹುಣಸೂರಿನಲ್ಲಿ ಪತ್ತೆಹಚ್ಚಲಾಗಿದೆ ಮತ್ತು ಪ್ರಸ್ತುತ, ಅವರು ಮಹಿಳೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪಹರಣ ಪ್ರಕರಣದ ಆರೋಪಿ ಸತೀಶ್ ಬಾಬು ಅಲಿಯಾಸ್ ಸತೀಶ್‌ ಬಾಬಣ್ಣನನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಿಳೆಯರ ಗೌರವ ಕಾಪಾಡಿದ್ದೇವೆ: ಸರ್ಕಾರದ ಪೋಸ್ಟ್!

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಮ್ಮ ಸರ್ಕಾರ ಮಹಿಳೆಯರ ಘನತೆ ಕಾಪಾಡಿದೆ. ಮಹಿಳೆಯರ ರಕ್ಷಣೆ ನಮ್ಮ ಹೊಣೆ ಎಂದು ಸರ್ಕಾರ ಪೋಸ್ಟ್ ಮಾಡಿದೆ.

ಜೆಡಿಎಸ್ ತಜ್ಞರ ತುರ್ತು ಸಭೆ

ರೇವಣ್ಣ ಬಂಧನದ ಬೆನ್ನಲ್ಲೇ ಜೆಡಿಎಸ್ ನಾಯಕರು, ಕಾನೂನು ತಜ್ಞರು ತಾಜ್ ವೆಸ್ಟ್ ಎಂಡ್ ಹೋಟೆಲಲ್ಲಿ ತುರ್ತು ಸಭೆ ಕರೆದಿದ್ದಾರೆ.

Categories
ಕಾರ್ಕಳ ತೀರ್ಥಹಳ್ಳಿ

ದ್ವಿತೀಯ ಪಿಯುಸಿ: ತೀರ್ಥಹಳ್ಳಿ ಹುಡುಗನಿಗೆ 8ನೇ ರ್‍ಯಾಂಕ್

ದ್ವಿತೀಯ ಪಿಯುಸಿ: ತೀರ್ಥಹಳ್ಳಿ ಹುಡುಗನಿಗೆ 8ನೇ ರ್‍ಯಾಂಕ್
– ಉಡುಪಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಸಾಗರ್ ಸಾಧನೆ
– ಉದ್ಯಮಿ ಷಣ್ಮುಖ, ಸಾವಿತ್ರಿ ದಂಪತಿಯ ಪುತ್ರ
– ಐಎಎಸ್ ಅಧಿಕಾರಿಯಾಗುವ ಆಸೆ ಎಂದ ಸಾಗರ್

NAMMUR EXPRESS NEWS
ತೀರ್ಥಹಳ್ಳಿ/ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ಸಂಸ್ಥೆ ಉಡುಪಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಸಾಗರ್ ಇದೀಗ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಮರು ಮೌಲ್ಯಮಾಪನದಲ್ಲಿ 8ನೇ ರ್‍ಯಾಂಕ್ ಪಡೆದಿದ್ದು ಇದೀಗ ತೀರ್ಥಹಳ್ಳಿಗೆ ಹೆಮ್ಮೆತರುವ ವಿಷಯವಾಗಿದೆ. ಇವರು ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಉದ್ಯಮಿ ಷಣ್ಮುಖ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿದ್ದಾರೆ. ಇವರು ಕಠಿಣವಾಗಿ ಶ್ರಮವಹಿಸುತ್ತಿದ್ದು, ಪ್ರತಿದಿನ ವಿದ್ಯಾಭ್ಯಾಸದ ಮೇಲೆ ಗಮನಹರಿಸುತ್ತಿದ್ದರು. ಇವರು ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಾಗ್ದೇವಿಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ್ದು, ಕ್ರಿಯೇಟಿವ್ ಕಾಲೇಜು ಉಡುಪಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಇದೀಗ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದಿದ್ದಾರೆ.

ಇವರಿಗೆ ತೀರ್ಥಹಳ್ಳಿಯ ಸ್ಥಳೀಯರು ಹಾಗೂ ಶಿಕ್ಷಕ ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ. ಸಾಗರ್ ಉತ್ತಮವಾಗಿ ಓದಿದ್ದಾನೆ. ಆತನಿಗೆ ಐಎಎಸ್ ಅಧಿಕಾರಿಯಾಗುವ ಆಸೆ ಇದೆ. ನಮ್ಮ ಮಗನ ಓದಿಗೆ ಆತನ ಪರಿಶ್ರಮ, ಕಾಲೇಜಿನ ಉಪನ್ಯಾಸಕರು, ಕಾಲೇಜಿನ ಉತ್ತಮ ವ್ಯವಸ್ಥೆ ಕಾರಣ ಎಂದಿದ್ದಾರೆ.

Categories
ತೀರ್ಥಹಳ್ಳಿ

ಕಟ್ಟೆಹಕ್ಕಲು ಆಸ್ಪತ್ರೆಗೆ ಬಂತು ಇಸಿಜಿ ಮಿಷನ್..!

ಕಟ್ಟೆಹಕ್ಕಲು ಆಸ್ಪತ್ರೆಗೆ ಬಂತು ಇಸಿಜಿ ಮಿಷನ್..!
– ಮಂಗಳೂರಿನ ಕ್ಯಾಡ್ ಫೌಂಡೇಶನ್ ಟ್ರಸ್ಟ್ ಸೇವಾ ಹೆಜ್ಜೆ
– ಹಳ್ಳಿ ಹಳ್ಳಿಗಳಿಗೂ ವೈದ್ಯಕೀಯ ವಸ್ತುಗಳ ದಾನ
– ಯಡೂರು ಪ್ರೇಮ್ ಮತ್ತು ಸ್ನೇಹಿತರ ಸಮಾಜ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಮಂಗಳೂರಿನ ಕ್ಯಾಡ್ ಫೌಂಡೇಶನ್ ಟ್ರಸ್ಟ್ ಪ್ರಮುಖರಾದ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ
ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಕಟಗಾರು ಸರ್ಕಾರಿ ಆಸ್ಪತ್ರೆಗೆ ಇಸಿಜಿ ಮಿಷನ್ ನೀಡಲಾಗಿದೆ. ಡಾ.ಪದ್ಮನಾಭ ಕಾಮತ್ ಅವರು ಪ್ರಸಿದ್ಧ ಹೃದಯ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 55 ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಮಿಷನ್ ಗಳನ್ನು ನೀಡಿ ಅದರ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಒಂದು ಇಸಿಜಿ ಮಿಷನ್ನಿಗೆ ಸುಮಾರು 35,000 ಇದೆ. ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಲು ಕಟ್ಟೆಗಾರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಇಸಿಜಿ ಮಿಷನ್ ನೀಡಿದ್ದು ಈ ಸಂಸ್ಥೆ ಸೇವೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಯಡೂರು ಮೆಡಿಕಲ್ಸ್ ಮಾಲೀಕ ಪ್ರೇಮ್ ಮತ್ತು ಹಕಿಮ್ ಹಾಗೂ ಸ್ನೇಹಿತರು ಬಿಪಿ ಮಿಷನ್ ಅನ್ನು ಕೂಡ ನೀಡಿದ್ದಾರೆ.

ಈ ಮಿಷನ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಈ ಮಿಷನ್ ನಿಂದ ರಿಪೋರ್ಟನ್ನು ತೆಗೆದು ತಜ್ಞ ವೈದ್ಯರ ಗ್ರೂಪ್ ಗಳಲ್ಲಿ ಮಾಹಿತಿಯನ್ನು ಪಡೆಯಲಾಗುತ್ತದೆ. ಈ ಮೂಲಕ ಗ್ರಾಮಾಂತರ ಭಾಗದ ಜನತೆಗೆ ಸೇವೆಯನ್ನ ಸಲ್ಲಿಸಲಾಗುತ್ತಿದೆ. ಇನ್ನು ಕಟ್ಟೆಹಕ್ಲು ಕಟ್ಟೆಗಾರ ಆಸ್ಪತ್ರೆಯ ಡಾ. ಶ್ರೀರಾಮ್ ಕೂಡ ಉತ್ತಮ ಸೇವೆಯನ್ನು ನೀಡುತ್ತಿದ್ದು ರಾತ್ರಿ ಮತ್ತು ಹಗಲು ತಮ್ಮ ಸೇವೆಯನ್ನು ಮುಂದುವರಿಸುತ್ತಾರೆ ಅವರ ಬಗ್ಗೆ ಕೂಡ ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ನರ್ಸ್ ಸ್ವಾತಿ ಪಿ ಆರ್, ಸುಜಯ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅನೇಕ ಸ್ನೇಹಿತರು ಈ ಮಾನವೀಯತೆ ಕೆಲಸಕ್ಕೆ ಕೈಜೋಡಿಸಿದ್ದಾರೆ.

ಯಡೂರು ಪ್ರೇಮ್ ಸೇವೆ

ತೀರ್ಥಹಳ್ಳಿಯ ಯುವ ಬಳಗ ಪ್ರೇಮ್ ಯಡೂರು ನೇತೃತ್ವದಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ, ಇತ್ತೀಚೆಗಷ್ಟೇ ಯಡೂರು ಸರ್ಕಾರಿ ಆಸ್ಪತ್ರೆಯ ವಸ್ತುಗಳನ್ನು ದಾನಿಗಳಿಂದ ಕೊಡುಗೆ ನೀಡಿಸುವ ಮೂಲಕ ಹೈಟೆಕ್ ಆಸ್ಪತ್ರೆಯಾಗಿ ನಿರ್ಮಾಣ ಮಾಡುವಲ್ಲಿ ಈ ಹುಡುಗರು ಶ್ರಮವಹಿಸಿದ್ದರು. ಜೊತೆಗೆ ಇದರಿಂದಾಗಿ ಸಾವಿರಾರು ಜನರಿಗೆ ಅನುಕೂಲವಾಗಿತ್ತು. ಇದೀಗ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲಿನ ಕಟಗಾರು ಪ್ರಾಥಮಿಕ ಆಸ್ಪತ್ರೆಗೆ ಇಸಿಜಿ ಮಿಷನ್ ಅನ್ನು ದಾನಿಗಳ ಮೂಲಕ ಕೊಡಿಸಿದ್ದಾರೆ

Categories
Uncategorized

ಬಿಸಿಲ ಝಳಕ್ಕೆ ಒಂದೇ ದಿನ 6 ಸಾವು..!

ಬಿಸಿಲ ಝಳಕ್ಕೆ ಒಂದೇ ದಿನ 6 ಸಾವು..!
– ಬಿಸಿಲಿನ ತಾಪ ತಾಳಲಾರದೆ ವಿವಿಧ ಕಾಯಲೆಯಿಂದ ಸಾವು
– ಬಿಸಿಲಿನ ಬಗ್ಗೆ ಹುಷಾರ್

NAMMUR EXPRESS NEWS
ರಾಯಚೂರು: ಕರ್ನಾಟಕದಲ್ಲಿ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಆರು ಜನ ಸಾವನ್ನಪ್ಪಿದ್ದು, ಉಡುಪಿಯಲ್ಲಿ ಸೆಕೆ ಎಂದು ಟೆರೇಸ್‌ನಲ್ಲಿ ಮಲಗಿದ್ದ ಶಿಕ್ಷಕರೊಬ್ಬರು ಅಲ್ಲಿಂದ ಕೆಳಕ್ಕೆ ಬಿದ್ದು ಮೃತ ಪಟ್ಟ ಘಟನೆ ವರದಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಾಖದ ಅಲೆ, ಬಿಸಿಲ ಝಳ ಈ ಸಲ ಸ್ವಲ್ಪ ಹೆಚ್ಚೇ ಇತ್ತು. ಮಾರ್ಚ್ 1 ರಿಂದ ಏಪ್ರಿಲ್ 3 ರ ಅವಧಿಯಲ್ಲಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿತ್ತು. ರಾಜ್ಯದಲ್ಲಿ ಕಳೆದ ತಿಂಗಳು 500ಕ್ಕೂ ಹೆಚ್ಚು ಬಿಸಿಲಾಘಾತ ಪ್ರಕರಣ ಸಂಭವಿಸಿದ್ದವು.

ಈ ತಿಂಗಳ ಆರಂಭದಲ್ಲೇ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಒಂದೇ ದಿನ (ಮೇ 3) ಐವರು ಮೃತಪಟ್ಟಿದ್ದಾರೆ. ಇದಲ್ಲದೆ, ಬಿಎಂಟಿಸಿ ನಿರ್ವಾಹಕರೊಬ್ಬರು ಮೃತಪಟ್ಟಿರುವ ವರದಿಯೂ ಬಂದಿದೆ. ಈ ನಡುವೆ, ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆಯೂ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಝಳ ತುಸು ಹೆಚ್ಚೇ ಇದೆ. ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿರುವುದು ಕೂಡ ಇದೇ ಜಿಲ್ಲೆಯಲ್ಲಿ.

ರಾಯಚೂರು ಜಿಲ್ಲೆಯಲ್ಲಿ ಒಂದೇ ದಿನ ಬಿಸಿಲ ಝಳಕ್ಕೆ 6 ಸಾವು

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಿಸಿಲಿನ ಝಳ ಮತ್ತು ನಿರ್ಜಲೀಕರಣದಿಂದಾಗಿ ನಾಲ್ವರು ಮೃತಪಟ್ಟಿದ್ಧಾರೆ. ಮೃತರನ್ನು ವೀರೇಶ ಹನುಮಂತಪ್ಪ ಮಡಿವಾಳ(50), ಗಂಗಮ್ಮ ದೇವದಾಸಿ(60) ಹಾಗೂ ಅಂಗವಿಕಲ ಪ್ರದೀಪ ತಿಮ್ಮಣ್ಣ ಪೂಜಾರಿ (15), ಹಸಮಕಲ್ ಮೂಲದ ಮಲ್ಲಯ್ಯ (45), ಜಾಲಿಬೆಂಚಿ ಗ್ರಾಮದ ಹನುಮಂತ (45) ಎಂದು ಗುರುತಿಸಲಾಗಿದೆ.
ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ವೀರೇಶ ಹನುಮಂತಪ್ಪ ಮಡಿವಾಳ ಸಂಜೆ ಅಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಗಂಗಮ್ಮ ದೇವದಾಸಿ ಮತ್ತು ಅಂಗವಿಕಲ ಪ್ರದೀಪ ತಿಮ್ಮಣ ಪೂಜಾರಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ರಾಯಚೂರು ತಾಲೂಕು ಜಾಲಿಬೆಂಚಿ ಗ್ರಾಮದ ಹನುಮಂತ ಅವರು ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಕುಸಿದು ಮೃತಪಟ್ಟಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಸಂಚಲನ!

ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಸಂಚಲನ!
– ಬಿಜೆಪಿ ಜೊತೆಗೆ ಸ್ನೇಹ, ರಾಘವೇಂದ್ರ ಪರ ಪ್ರಚಾರ
– ಮೇದೊಳಿಗೆ ರಾಮಸ್ವಾಮಿ ಸೇರಿದಂತೆ ಸಂಘಟಕರ ಸಾಥ್

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆಗೆ ದಿನ ಗಣನೆ ಶುರುವಾಗಿದೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಎಲ್ಲಾ ಕಡೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಯ ಅಭ್ಯರ್ಥಿಗೆ ಕೆಲಸ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲೂ ಕೂಡ ಬಿಜೆಪಿ ಜೊತೆಗೆ ಜೆಡಿಎಸ್ ಅತ್ಯುತ್ತಮ ಸಂಘಟನೆ ಹಾಗೂ ಪ್ರಚಾರವನ್ನು ಮಾಡುತ್ತಿದೆ. ತೀರ್ಥಹಳ್ಳಿ ಮೂಲದವರೇ ಆದ ಕಡಿದಾಳ್ ಗೋಪಾಲ್ ಅವರು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜತೆಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಜೊತೆಗೆ ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಸಂಘಟಿಸಿದ್ದಾರೆ.

ತೀರ್ಥಹಳ್ಳಿ ಜೆಡಿಎಸ್ ಹೊಸ ಕಳೆ!

ತೀರ್ಥಹಳ್ಳಿಯಲ್ಲೂ ಕೂಡ ಜಿಲ್ಲಾ ಉಪಾಧ್ಯಕ್ಷರಾಗಿ ವಕೀಲ ಮೇದೊಳಿಗೆ ರಾಮಸ್ವಾಮಿ, ಕುಣಜೆ ಕಿರಣ್ ಪ್ರಭಾಕರ್, ಹಾಗೂ ಪಕ್ಷದ ನಗರ ಘಟಕದ ಅಧ್ಯಕ್ಷರಾದ ರವಿ ಗೌಡ ಜೊತೆಗೆ ಸತೀಶ್ ಹಾಗೂ ಇತರ ಜೆಡಿಎಸ್ ಸಂಘಟಕರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಬಿಜೆಪಿ ಪಕ್ಷದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಕೂಡ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಲು ಪ್ರಚಾರದ ಕಣದಲ್ಲಿದ್ದಾರೆ.

Categories
ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆ ಟಾಪ್ 5 ನ್ಯೂಸ್..!

ನವ ವಿವಾಹಿತನ ಬಲಿ ಪಡೆದ ಸಿಡಿಲು!
– ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಘಟನೆ
– ಮಂಗಳೂರು: ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ!
– ಟಿಪ್ಪರ್ ಡಿಕ್ಕಿಯಾಗಿ ಅಪಘಾತ : ಓರ್ವ ಸಾವು!
– ಸಿಬಿಐ ಹೆಸರಿನಲ್ಲಿ ಮೋಸ : 15 ಲಕ್ಷ ರೂ. ವಂಚನೆ!
– ಟೋಲ್ ಗೇಟ್‌ಗೆ ಮುತ್ತಿಗೆ ಪ್ರಕರಣ: 101 ಮಂದಿಗೆ ನ್ಯಾಯಾಲಯ ಸಮನ್ಸ್‌

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು ಸೋಮಸುಂದರ್ (34) ಸಾವು ಮೃತಪಟ್ಟಿದ್ದಾನೆ. ಈತ ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ್ದ. ಈ ವೇಳೆ ಸೋಮ ಸುಂದರ್‌ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾನೆ.

ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ!

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಿಷೇಧಿತ ಡ್ರಗ್ಸ್ ಎಂಡಿಎಂಎ ಮಾರುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ, ಅವರನ್ನು ಸೆರೆಹಿಡಿದಿದ್ದು, ಆರೋಪಿಗಳಿಂದ 16 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000 ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಸೇತುವೆಯಲ್ಲಿ ಅಪಘಾತ: ಸವಾರ ಸಾವು

ಮಂಗಳೂರು: ವಾಹನಗಳ ಅನಿಯಂತ್ರಿತ ವೇಗದಿಂದ ಕಳೆದ ಕೆಲ ದಿನಗಳಿಂದ ತೀರಾ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಬಿ.ಸಿ.ರೋಡಿನ ಸೇತುವೆಯಲ್ಲಿ ಗುರುವಾರ ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಸಾವನ್ನಪ್ಪಿದ್ದಾರೆ. ನರಿಕೊಂಬು ಗ್ರಾಮದ ಪೊಯಿತ್ತಾಜೆ ಎಂಬಲ್ಲಿನ ನಿವಾಸಿ ನರಿಕೊಂಬು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣ ಭಂಡಾರಿ (68) ಅವರು ಸಾವನ್ನಪ್ಪಿದವರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದರು.

ಸಿಬಿಐ ಹೆಸರಿನಲ್ಲಿ ಮೋಸ: ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ!

ಮಂಗಳೂರು: ಗುತ್ತಿಗೆದಾರೊಬ್ಬರಿಗೆ ಸಿಬಿಐ ಅಧಿಕಾರಿ ಎಂದು ಹೇಳಿ ಕರೆ ಮಾಡಿ ನಿಮ್ಮ ಮೇಲೆ ಸಿಬಿಐ ಕೇಸು ಆಗಿದೆ ಎಂದು ಹೇಳಿ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮೊತ್ತ ಲಪಟಾಯಿಸಿರುವ ಕುರಿತಂತೆ ಸೈ ಬರ್‌ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ಒಬ್ಬರಿಗೆ 25ರಂದು ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಕರೆ ಮಾಡಿದಾತ ನಿಮ್ಮ ಮೊಬೈಲ್‌ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಹಣದ ವ್ಯವಹಾರ ಆಗುತ್ತಿರುವ ಬಗ್ಗೆ ಹೇಳಿದ್ದು, ಮೊಬೈಲ್‌ ಸಂಖ್ಯೆಯನ್ನು ಅಮಾನತು ಮಾಡಬೇಕಾಗುತ್ತದೆ. ನಿಮ್ಮ ಮೇಲೆ ಮುಂಬೈ ಸಿಬಿಐ ಕಚೇರಿಯಲ್ಲಿ ಕೇಸು ಆಗಿದೆ ಎಂದು ಹೇಳಿದ್ದ. ಅನಂತರ, ಕರೆಯನ್ನು ಸಿಬಿಐ ಅಧಿಕಾರಿಗೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದು, ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದ. ಆತ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣದ ಅವ್ಯವಹಾರ ಆಗಿದ್ದು ಖಾತೆಯನ್ನು ಮುಟ್ಟುಗೋಲು ಹಾಕಲಾಗುವುದು ಎಂದಿದ್ದ.

ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಬೇಕು. ಅದಕ್ಕಾಗಿ ಸ್ಕೈ ಪ್‌ ಆಯಪ್‌ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದ. ಬಳಿಕ ಸಿಬಿಐ ತನಿಖಾಧಿಕಾರಿ ಎಂದು ಹೇಳಿಕೊಂಡು ನೋಟಿಸ್‌ ಕಳುಹಿಸಿದ್ದು, ನಮ್ಮೊಂದಿಗೆ ಸಹಕರಿಸಿದರೆ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಪ್ರಕರಣದಿಂದ ಮುಕ್ತಗೊಳ್ಳುವ ಉದ್ದೇಶದಿಂದ ಗುತ್ತಿಗೆದಾರರು ಅದಕ್ಕೆ ಮೊದಲಿಗೆ 2.99 ಲಕ್ಷ ರೂ. ಹಾಕಿದ್ದರು. ಬಳಿಕ ವಿವಿಧ ಖಾತೆ ಸಂಖ್ಯೆಗಳನ್ನು ಕಳುಹಿಸಿದ್ದ ಖದೀಮರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಒಟ್ಟು 15,01,049 ರೂಪಾಯಿ ಹಣವನ್ನು ವರ್ಗಾಯಿಸಿ ದ್ದಾರೆ. ಕೊನೆಗೆ ಅನುಮಾನ ಬಂದ ಅವರು ಮೇ 3 ರಂದು ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

101 ಮಂದಿ ಹೋರಾಟಗಾರರಿಗೆ ನ್ಯಾಯಾಲಯ ಸಮನ್ಸ್‌!

ಮಂಗಳೂರು: ಸುರತ್ಕಲ್ ಎನ್‌ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿದ್ದ ಹೋರಾಟ ಸಮಿತಿಯ 101 ಮಂದಿಗೆ ಮಂಗಳೂರು ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದ್ದು, ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದೆ. 2022ರ ನವೆಂಬರ್‌ನಲ್ಲಿ ಟೋಲ್‌ ಗೇಟ್‌ ತೆರವು ಹೋರಾಟ ಸಮಿತಿಯು ಟೋಲ್‌ ಗೇಟ್‌ ತೆರವಿಗಾಗಿ ನೇರ ಕಾರ್ಯಾ ಚಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಟೋಲ್‌ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸುಮಾರು 250 ಕ್ಕೂ ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.
ಈ ಸಂಬಂಧ 2023ರ ಅಕ್ಟೋಬರ್‌ನಲ್ಲಿ ಸುರತ್ಕಲ್‌ ಪೊಲೀಸರು ಮಂಗಳೂರು ಜೆಂಎಫ್‌ಸಿ ನ್ಯಾಯಾಲಯಕ್ಕೆ 101 ಮಂದಿ ಹೋರಾಟಗಾರರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು 101 ಮಂದಿ ಆರೋಪಿತ ಹೋರಾಟಗಾರರು ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.

Categories
ಬೆಂಗಳೂರು ರಾಜ್ಯ

ದೇವೇಗೌಡರ ಆರೋಗ್ಯದಲ್ಲಿ ಏರುಪೇರು.!

ದೇವೇಗೌಡರ ಆರೋಗ್ಯದಲ್ಲಿ ಏರುಪೇರು.!
– ಮನೆಯಲ್ಲೇ ಚಿಕಿತ್ಸೆ: ಕುಟುಂಬದಲ್ಲಿ ಆತಂಕ
– ಸದ್ಯ ವಿಶ್ರಾಂತಿಯಲ್ಲಿರುವ ಮಾಜಿ ಪ್ರಧಾನಿ

NAMMUR EXPRESS NEWS
ಬೆಂಗಳೂರು: ಮಗ ಮತ್ತು ಮೊಮ್ಮಗ ಅವರ ಕೇಸ್‌ನಿಂದ ಚಿಂತೆಯಿಂದ ಮತ್ತು ವಯೋಸಹಜ ಅನಾರೋಗ್ಯದಿಂದ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಸದ್ಯ ಅವರನ್ನು ಮನೆಯಲ್ಲೇ ಕುಟುಂಬದವರು ಹೆಚ್ಚಿನ ನಿಗಾ ವಹಿಸಿ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ಬಗ್ಗೆ ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ ಎನ್ನಲಾಗಿದ್ದು, ದೇವೇಗೌಡರ ಅಳಿಯ ಹಾಗೂ ಹೃದಯ ತಜ್ಞ ಡಾ. ಸಿ.ಎನ್‌ ಮಂಜುನಾಥ್ ಗೌಡರ ಮನೆಗೆ ಭೇಟಿ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮತ್ತು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ದೇವೇಗೌಡರಿಗೆ ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ ಎಂದು ವೈದ್ಯರು ಹೇಳಿದ್ದು, ಸದ್ಯ ದೇವೇಗೌಡರು ವಿಶ್ರಾಂತಿಯಲ್ಲಿದ್ದು ಕುಟುಂಬದ ಆತ್ಮೀಯರು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.

Categories
ರಾಜಕೀಯ ರಾಜ್ಯ

ಮತ್ತೆ ಮತದಾನ ಬಂತು!

ಮತ್ತೆ ಮತದಾನ ಬಂತು!
– 2ನೇ ಹಂತದ ಚುನಾವಣೆಗೆ ಕ್ಷಣಗಣನೆ
– 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ
– ಮತದಾನ ಮಾಡಿ.. ನಿಮ್ಮ ಹಕ್ಕು ಚಲಾಯಿಸಿ!

NAMMUR EXPRESS NEWS
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು ಇದೀಗ ಎರಡನೇ ಹಂತದ ಮತದಾನಕ್ಕೆ ಎರಡು ದಿನ ಬಾಕಿ ಇದೆ. 2ನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಚುನಾವಣಾ ಆಯೋಗ ಸಜ್ಜಾಗಿದೆ. ಇನ್ನು ಮತದಾರರು ಕೂಡ ಮತದಾನಕ್ಕೆ ಸಜ್ಜಾಗಿದ್ದಾರೆ. ರಾಜಕೀಯ ನಾಯಕರು ಅಂತಿಮ ಹಂತದ ಪ್ರಚಾರದಲ್ಲಿ ತೊಡಗಿದ್ದಾರೆ.

ಮತದಾರರಿಗೆ ಅನೇಕ ಸೌಲಭ್ಯ!

ಮತದಾರರು ತಮ್ಮ ಮತಗಳನ್ನು ಆರಾಮವಾಗಿ ಚಲಾಯಿಸಬಹುದು. ಮತದಾರರ ಅನುಕೂಲಕ್ಕಾಗಿ, ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಸೌಲಭ್ಯಗಳು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ನಿಖರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವುದಕ್ಕಾಗಿ ಮತದಾರರ ಜಾಗೃತಿ ಮತ್ತು ಸೌಲಭ್ಯ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ವೃದ್ಧರು/ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನೀರು, ಶೆಡ್, ಶೌಚಾಲಯಗಳು, ಇಳಿಜಾರಿನಂತಹ ಸೌಲಭ್ಯಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್ ನಂತಹ ಕನಿಷ್ಠ ಸೌಲಭ್ಯಗಳನ್ನು ಖಚಿತಪಡಿಸಲಾಗಿದೆ. ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ವಿಶೇಷ ಗಮನ ನೀಡಲಾಗಿದೆ.

14 ಕ್ಷೇತ್ರಗಳು ಯಾವುವು..?

ರಾಜ್ಯದಲ್ಲಿ ಮೇ 7 ರಂದು ಲೋಕಸಭೆ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿವೆ. ಈ ಹಿನ್ನೆಲೆ ಮತದಾನದ ದಿನದಂದು ಸಾರ್ವತ್ರಿಕ ರಜೆ ಘೋಷಿಸಿಲು ಆದೇಶ ಹೊರಡಿಸಿದ್ದು, ಈ ಆದೇಶದ ಅನ್ವಯ ಮೇ 07 ರಂದು ವೇತನ ಸಹಿತ ರಜೆ ನೀಡುವಂತೆ ಡಿಸಿ ಹೇಳಿದ್ದಾರೆ.

Categories
ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಶಿವಮೊಗ್ಗ ಟಾಪ್ ನ್ಯೂಸ್
ಸಾಗರದಲ್ಲಿ ಟೂರಿಸ್ಟ್‌ ಬಸ್‌ ಪಲ್ಟಿ: ಇಬ್ಬರು ಸಾವು!
– ಸಾಗರ: ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ವ್ಯಕ್ತಿ ಸಾವು
– ಶಿವಮೊಗ್ಗ: ಮದುವೆಗೆ 6 ದಿನ ಬಾಕಿ: ಯುವತಿ ನೇಣಿಗೆ

NAMMUR EXPRESS NEWS
ಸಾಗರ : ಟೂರಿಸ್ಟ್‌ ಬಸ್‌ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೋಗ ಜಲಪಾತ ವೀಕ್ಷಣೆ ಮಾಡಿ ಹೊನ್ನಾವರಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಗೇರುಸೊಪ್ಪ – ಹೊನ್ನಾವರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಗೌರಿಬಿದನೂರಿನಿಂದ ಎರಡು ಬಸ್ಸುಗಳಲ್ಲಿ ಪ್ರವಾಸಿಗರು ವಿವಿಧ ಪ್ರವಾಸಿ ತಾಣಕ್ಕೆ ತೆರಳುತ್ತಿದ್ದರು. ಇವತ್ತು ಜೋಗ ಜಲಪಾತಕ್ಕೆ ಭೇಟಿ ನೀಡಿ, ಅಲ್ಲಿಂದ ತೆರಳುವಾಗ ತಿರುವಿನಲ್ಲಿ ಬಸ್‌ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಾಗರ : ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಅಂದಾಸುರ ರೈಲ್ವೆ ಗೇಟ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯ ಮಾಹಿತಿ ಇನ್ನು ತಿಳಿದು ಬಂದಿಲ್ಲ. ತಿಮ್ಮಪ್ಪ ಪುರದಾಳು ಹಾಗೂ ಸೀತಮ್ಮ ಎಂಬವರಿಗೆ ತೀವ್ರ ಗಾಯವಾಗಿದ್ದು ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದುರು ಭಾಗದ ಬೈಕ್ ನಲ್ಲಿದ್ದ ಇನ್ನೂ ಇಬ್ಬರು ಗಾಯಾಳುಗಳ ಮಾಹಿತಿ ಕೂಡ ತಿಳಿದುಬಂದಿಲ್ಲ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

– ಮದುವೆಗೆ 6 ದಿನ ಬಾಕಿಯಿರುವಾಗಲೇ ಯುವತಿ ನೇಣಿಗೆ ಶರಣು

ಶಿವಮೊಗ್ಗ: ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 2 ನೇ ತಿರುವಿನ‌ ಮನೆಯಲ್ಲಿ ಮದುವೆಗೆ ನಿಶ್ಚಿತಗೊಂಡಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದುಕೊಂಡ ಯುವತಿಯನ್ನು ಸಯ್ಯದಾ ಸಿಮ್ರನ್ ಎಂಬ 20 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾಳೆ. ಈಕೆಗೆ ಮೇ. 08 ರಂದು ಮದುವೆ ನಿಶ್ಚತಗೊಂಡಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಮೃತದೇಹವನ್ನ ಶವಗಾರದಿಂದ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.