Categories
ಕರಾವಳಿ

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು
– ಪ್ರವಾಸ ಬಂದಿದ್ದ ವೇಳೆ ನಡೆದ ದುರಂತ
– ಬೇಸಿಗೆ ಹೆಚ್ಚುತ್ತಿದ್ದ ಹಾಗೆ ಹೆಚ್ಚಿದ ಸಾವು

NAMMUR EXPRESS NEWS
ಧರ್ಮಸ್ಥಳ: ಎರಡು ವಾರದ ಹಿಂದೆ ದಾಂಡೇಲಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರವಾಸ ಹೋಗಿದ್ದ ವೇಳೆ ನದಿಗೆ ಇಳಿದು ಪ್ರಾಣ ಕಳೆದುಕೊಂಡ ಘಟನೆ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇದೇ ಮಾದರಿ ಅನಾಹುತ ಸಂಭವಿಸಿ ಇಬ್ಬರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್‌ ಅವರ ಪುತ್ರಿ ಅಶ್ರಾ(11) ಹಾಗೂ ಇಲಿಯಾಸ್‌ ಅವರ ಪುತ್ರಿ ಮರಿಯಮ್‌ ನಾಶೀಯಾ(14) ಮೃತ ಬಾಲಕಿಯರು.

ಮೂಲತಃ ನಾವೂರ ನಿವಾಸಿಗಳಾದ ಇಲಿಯಾಸ್‌ ಅವರು ಇತ್ತೀಚೆಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದು, ಸಂಜೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಇಬ್ಬರು ಮಕ್ಕಳು ಕೂಡ ಏಕಾಏಕಿ ನೀರಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿಕೊಂಡಿದ್ದರು. ದುರಂತವೆಂದರೆ ಇಬ್ಬರು ಮಕ್ಕಳು ಕೂಡ ತಮ್ಮ ಕಣ್ಣ ಮುಂದೆಯೇ ನೀರಲ್ಲಿ ಮುಳುಗಿ ಪ್ರಾಣ ರಕ್ಷಣೆಗೆ ಅಂಗಲಾಚುತ್ತಿದ್ದರೂ ಮನೆಯವರಿಗೆ ಈಜು ಬರದಿದ್ದ ಕಾರಣ ಅವರ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Categories
ಕರಾವಳಿ ಕಾರ್ಕಳ

ಪರಶುರಾಮ ಥೀಮ್‌ ಪಾರ್ಕ್‌ ಮತ್ತೆ ಮುನ್ನೆಲೆಗೆ!

ಪರಶುರಾಮ ಥೀಮ್‌ ಪಾರ್ಕ್‌ ಮತ್ತೆ ಮುನ್ನೆಲೆಗೆ!
– ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿ ಪ್ರಾರಂಭಿಸಲು ಅಗ್ರಹ
– ತಹಶೀಲ್ದಾರರಿಗೆ ಮನವಿ ಸಲ್ಲಿಸಿದ 6‌ ಗ್ರಾಮ ಪಂಚಾಯತ್‌ ಅಧ್ಯಕ್ಷರು – ಸದಸ್ಯರು

NAMMUR EXPRESS NEWS
ಕಾರ್ಕಳ : ಬೈಲೂರು ಉಮಿಕ್ಕಲ್ ಬೆಟ್ಟದಲ್ಲಿನ ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಪ್ರಾರಂಭಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವಂತೆ ಯರ್ಲಪಾಡಿ ಗ್ರಾಮ ಪಂಚಾಯತ್, ನೀರೆ ಗ್ರಾಮ ಪಂಚಾಯತ್, ಬೈಲೂರು ಗ್ರಾಮ ಪಂಚಾಯತ್, ಪಳ್ಳಿ ಗ್ರಾಮ ಪಂಚಾಯತ್, ಕುಕ್ಕುಂದೂರು ಗ್ರಾಮ ಪಂಚಾಯತ್ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮೇ 6 ರಂದು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲೇನಿದೆ?

ಬೈಲೂರು-ಯರ್ಲಪಾಡಿ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮ ದೃಷ್ಟಿಯಲ್ಲಿ ಗಮನಸೆಳೆದಿದ್ದು, ದಿನಂಪ್ರತಿ ಸಾವಿರಾರು ಜನ ಪ್ರವಾಸಿಗರು ಈ ಬೆಟ್ಟಕ್ಕೆ ಆಗಮಿಸಿ ಥೀಂ ಪಾರ್ಕ್ ವೀಕ್ಷಣೆ ಮಾಡುತ್ತಿದ್ದು, ಒಂದು ಉತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಆದರೆ ಥೀಂ ಪಾರ್ಕ್‌ ಬಗ್ಗೆ ಕೆಲವೊಂದು ಆರೋಪಗಳು ಬಂದಿದ್ದು, ಥೀಂ ಪಾರ್ಕ್‌ ಕಾಮಗಾರಿಯು ಸ್ಥಗಿತಗೊಂಡಿತ್ತು.
2023ರ ಅ. 4 ರಂದು ಜಿಲ್ಲಾಧಿಕಾರಿತವರು ಥೀಂ ಪಾರ್ಕ್‌ನ ಪರಶುರಾಮ ಮೂರ್ತಿಯ ಕೆಲವೊಂದು ಮರುವಿನ್ಯಾಸ ಹಾಗೂ ಬಾಕಿಯಿದ್ದ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಮಿತ್ತ ಕಾಮಗಾರಿ ಆರಂಭಿಸಿ ಶೀಘ್ರ ಮುಕ್ತಾಯಗೊಳಿಸುವಂತೆ ಆದೇಶ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಇದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ನಂತರ ಇದೇ ಮೇ ತಿಂಗಳ ಆರಂಭ ದಿನಗಳಲ್ಲಿ ಮರು ಪ್ರಾರಂಭಗೊಂಡ ಕಾಮಗಾರಿಯನ್ನು ಕೆಲವೇ ಗಂಟೆಗಳಲ್ಲಿ ಮತ್ತೆ ನಿಲ್ಲಿಸಿರುವುದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ನಮಗೆ ಆಘಾತವನ್ನುಂಟುಮಾಡಿದೆ ಹಾಗೂ ಅತೀವ ನೋವನ್ನುಂಟು ಮಾಡಿದೆ ಎಂದಿದ್ದಾರೆ.

ಸ್ಥಾಪಿತ ಹಿತಾಸಕ್ತಿಯ ಕೈವಾಡ

ಕೆಲವೊಂದು ಸ್ಥಾಪಿತ ಹಿತಾಸಕ್ತಿದಾರರು ಉಮಿಕ್ಕಲ್ ಬೆಟ್ಟಕ್ಕೆ ಹೋಗುವ ಸಾರ್ವಜನಿಕ ರಸ್ತೆಗೆ ಹತ್ತಾರು ಲೋಡ್ ಮಣ್ಣನ್ನು ಹಾಕಿ ರಸ್ತೆಗೆ ತಡೆಯನ್ನೊಡ್ಡಿರುತ್ತಾರೆ. ಇದು ಕಾನೂನು ಬಾಹಿರವಾಗಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದಲೇ ಮಾಡಿರುವುದಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖೇದಕರ. ಒಟ್ಟಾರೆ ಪರಶುರಾಮ ಥೀಮ್ ಪಾರ್ಕ್‌ ನಿರ್ಮಾಣ ಕಾಮಗಾರಿ ತಡೆಯುವಲ್ಲಿ ಸ್ಥಾಪಿತ ಹಿತಾಸಕ್ತಿಯ ಕೈವಾಡ ಎದ್ದು ಕಾಣುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಮ್ ಪಾರ್ಕ್ ಮೊದಲಿನಂತೆಯೇ ಜನಾಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳುವುದು ನಮ್ಮೆಲ್ಲ ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಜನರ ಒತ್ತಾಸೆಯಾಗಿದ್ದು. ಇಂತಹ ಪ್ರವಾಸೋದ್ಯಮ ಯೋಜನೆಯನ್ನು ಯಾವುದೇ ಸ್ಥಾಪಿತ ಹಿತಾಸಕ್ತಿಗೆ ಬಲಿಯಾಗಲು ಬಿಡದೆ ಜನತೆಗೆ, ಪ್ರವಾಸಿಗರಿಗೆ ಮುಕ್ತ ಪ್ರವೇಶ ಅತಿ ಶೀಘ್ರವಾಗಿ ದೊರೆಯುವಂತೆ ಮಾಡಬೇಕು. ಆದ್ದರಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸುವಂತೆ ಗ್ರಾಮ ಪಂಚಾಯತ್‌ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

Categories
ಅಡಿಕೆ-ದರ ಕೃಷಿ ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ದೇಶದಲ್ಲಿ ತೀರ್ಥಹಳ್ಳಿ ಅಡಿಕೆ ನಂಬರ್ 1!

ದೇಶದಲ್ಲಿ ತೀರ್ಥಹಳ್ಳಿ ಅಡಿಕೆ ನಂಬರ್ 1!
– ತೀರ್ಥಹಳ್ಳಿ ಸಾಂಪ್ರದಾಯಿಕ ಅಡಿಕೆಗೆ ಭಾರೀ ಡಿಮ್ಯಾಂಡ್
– ರುಚಿ, ಪರಿಮಳ, ಅರೋಗ್ಯದಲ್ಲೂ ಮೇಲುಗೈ

NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಶಿವಮೊಗ್ಗದ ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆಗೆ ಮತ್ತೊಂದು ಗರಿ ಬಂದಿದೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅರೆಕಾ ಸಂಶೋಧನಾ ಕೇಂದ್ರವು ನಡೆಸಿದ ವಿಶ್ಲೇಷಣೆಯಲ್ಲಿ ತೀರ್ಥಹಳ್ಳಿ ಅಡಿಕೆ ಕರ್ನಾಟಕದಲ್ಲಿ ಬೆಳೆಯುವ ತಳಿಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯಾಗಿ ಹೊರಹೊಮ್ಮಿದೆ.

ಶಿವಮೊಗ್ಗದಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅರೆಕಾ ಸಂಶೋಧನಾ ಕೇಂದ್ರವು ನಡೆಸಿದ ತುಲನಾತ್ಮಕ ವಿಶ್ಲೇಷಣೆಯಲ್ಲಿ ತೀರ್ಥಹಳ್ಳಿಯ ಅರೆಕಾವು ಅತ್ಯುತ್ತಮವಾಗಿದೆ ಎಂಬುದು ಸಾಬೀತಾಗಿದೆ. ಇತ್ತೀಚೆಗೆ, ಕೇಂದ್ರದ ವಿಜ್ಞಾನಿಗಳು ವಿವಿಧ ಸ್ಥಳಗಳಲ್ಲಿ ಬೆಳೆದ ಅಡಿಕೆ ಪ್ರಭೇದಗಳನ್ನು 60 ಜನರ ಗುಂಪಿಗೆ ತೋರಿಸಿದ್ದಾರೆ. ತೀರ್ಪಿನಲ್ಲಿ ಯಾವುದೇ ಪಕ್ಷಪಾತವನ್ನು ತಪ್ಪಿಸಲು ಪ್ರಭೇದಗಳನ್ನು ಕೇವಲ ಎಣಿಸಲಾಗಿದೆ.

ಯಾರ ಯಾರ ಸಂಶೋಧನೆ?

ಗ್ರಾಹಕರು, ವ್ಯಾಪಾರಿಗಳು, ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಬೆಳೆಗಾರರನ್ನು ಒಳಗೊಂಡ ಗುಂಪು ವಿಶ್ಲೇಷಣೆಯಲ್ಲಿ ಭಾಗವಹಿಸಿತು. ಪ್ರಶ್ನಾವಳಿಗೆ ಉತ್ತರಿಸುವ ಮೊದಲು ಕಾಯಿಗಳನ್ನು ಸ್ಪರ್ಶಿಸಲು ಮತ್ತು ರುಚಿ ನೋಡಲು ಅವರಿಗೆ ಅವಕಾಶ ನೀಡಲಾಯಿತು. ನೋಟ ಮತ್ತು ಅನುಭವ, ಅಡಿಕೆ ಕಡಿಯುವಾಗ ಆಗುವ ಅನುಭವ, ಪರಿಮಳ ಮತ್ತು ಪ್ರತಿ ವೈವಿಧ್ಯತೆಯ ಬಗ್ಗೆ ಕೆಲವು ವಿವರಗಳ ಬಗ್ಗೆ ತೀರ್ಪುಗಾರರನ್ನು ಕೇಳಲಾಗಿದೆ. ನಾವು ಈ ಗುಂಪಿನಿಂದ ಪಡೆದ ಫಲಿತಾಂಶವು ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಕೆಲವು ಭಾಗಗಳಲ್ಲಿ ಬೆಳೆಯುವ ಅರೆಕಾದಲ್ಲಿ ತೀರ್ಥಹಳ್ಳಿ ತಳಿಯು ಉತ್ತಮವಾಗಿದೆ ಎಂದು ಸೂಚಿಸಿದೆ.

ತೀರ್ಥಹಳ್ಳಿ ಮಣ್ಣು ಕೂಡ ಶಕ್ತಿಯುತವಾದುದು!

ತೀರ್ಥಹಳ್ಳಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶವಾಗಿದೆ. ಬಹುಪಾಲು ಬೆಳೆಗಾರರು ಸಣ್ಣ ಬೆಳೆಗಾರರಾಗಿದ್ದು, ಎರಡರಿಂದ ಐದು ಎಕರೆ ತೋಟವನ್ನು ಹೊಂದಿದ್ದಾರೆ. ಹವಾಮಾನ ಪರಿಸ್ಥಿತಿಗಳು ಕೂಡ ಇಲ್ಲಿನ ಉತ್ಪನ್ನಕ್ಕೆ ಕೊಡುಗೆ ನೀಡುತ್ತವೆ. ಈ ಪ್ರದೇಶದಿಂದ ಹೊರತೆಗೆದು ಬೇರೆಡೆ ಕೃಷಿ ಮಾಡಿದರೆ ಆಗುವುದಿಲ್ಲ” ಎಂದು ಕೇಂದ್ರದ ಪ್ರಧಾನ ತನಿಖಾಧಿಕಾರಿ ಡಾ.ನಾಗರಾಜ್ ಅಡಿವಪ್ಪರ ಮಾಹಿತಿ ನೀಡಿದ್ದಾರೆ. ಅರೆಕಾ ಸಂಶೋಧನಾ ಕೇಂದ್ರವು ತೀರ್ಥಹಳ್ಳಿ ತಳಿಯನ್ನು ಬೆಳೆಯುವ 80 ರೈತರ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಅವರು ತಮ್ಮ ಉತ್ಪನ್ನವನ್ನು ಇತರ ತಳಿಗಳಿಗೆ ಹೋಲಿಸಿ ಹೇಗೆ ಅಂಕ ನೀಡುತ್ತಾರೆ ಎಂಬುದರ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ರೈತರು ತಾವು ಬೆಳೆದ ಉತ್ಪನ್ನದ ಗುಣಮಟ್ಟವನ್ನು ಎತ್ತಿ ತೋರಿಸುತ್ತಾ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಹೀಗಾಗಿ ತೀರ್ಥಹಳ್ಳಿ ತಳಿಯು ಉನ್ನತ ದರ್ಜೆಯ ಅಡಿಕೆಗೆ ಸೂಕ್ತವಾಗಿದೆ.

ತೀರ್ಥಹಳ್ಳಿ ಅಡಿಕೆಗೆ ಭಾರೀ ಬೆಲೆ!

ಅಡಿಕೆಯ ಸಿಪ್ಪೆಯನ್ನು ತೆಗೆದ ನಂತರ, ಅಡಿಕೆ ಕಾಳುಗಳನ್ನು ಕುದಿಸಲಾಗುತ್ತದೆ. ನಂತರ, ಬೀಜಗಳನ್ನು ಒಣಗಿಸಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳ ನಂತರ, ಅಡಿಕೆಗಳನ್ನು ಮಾರುಕಟ್ಟೆಯಲ್ಲಿ ಅವುಗಳ ಮೌಲ್ಯವನ್ನು ಪರಿಗಣಿಸಿ ಹಸ, ರಾಶಿ, ಬೆಟ್ಟೆ ಮತ್ತು ಗೊರಬಲು ಎಂದು ವರ್ಗೀಕರಿಸಲಾಗುತ್ತದೆ. ರಾಶಿ, ಬೆಟ್ಟೆ, ಗೊರಬಲುಗಿಂತ ನುಲಿ, ಹಸ ಅಡಿಕೆಗೆ ಹೆಚ್ಚಿನ ಬೆಲೆ ಸಿಗುತ್ತದೆ. ತೀರ್ಥಹಳ್ಳಿ ತಳಿಯ ಬೆಳೆಗಾರರಿಗೆ ನುಲಿ ಮತ್ತು ಹಸ ಅಡಿಕೆ ಸಿಗುತ್ತದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಏಪ್ರಿಲ್ 29 ರವರೆಗೆ, ರಾಶಿಗೆ ಕ್ವಿಂಟಲ್‌ಗೆ 50,159 ಆದರೆ, ಹಸ ಅಡಿಕೆ ಸರಾಸರಿ 69,600 ಕ್ಕೆ ಮಾರಾಟವಾಯಿತು. ಹಸಗೆ ಗರಿಷ್ಠ ಬೆಲೆ 80,800ಕ್ಕೆ ಏರಿದೆ.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯದ ಹಲವೆಡೆ ಮಳೆ ಆಗುತ್ತೆ!

ರಾಜ್ಯದ ಹಲವೆಡೆ ಮಳೆ ಆಗುತ್ತೆ!
– ದಕ್ಷಿಣ ಒಳನಾಡಿನಲ್ಲಿ ತುಸು ಬಿರುಸು
– ಹಲವು ಜಿಲ್ಲೆಗಳಲ್ಲಿ ಏರಿದ ತಾಪಮಾನ

NAMMUR EXPRESS NEWS
ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 4 ದಿನ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು,ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಮುಂದಿನ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮುಂದಿನ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

ಬಿಸಿಲಿನ ತಾಪ ಏರಿಕೆ!

ಭಾನುವಾರ ಕಲಬುರಗಿಯಲ್ಲಿ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ರಾಯಚೂರು 44.3, ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್​ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ 4 ದಿನ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.

Categories
ಬೆಂಗಳೂರು ರಾಜ್ಯ

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ: ಮತ್ತಷ್ಟು ಕೇಸ್?

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ: ಮತ್ತಷ್ಟು ಕೇಸ್?
– ಸಂತ್ರಸ್ತೆಯರು, ಮಾಹಿತಿದಾರರಿಗೆ ಸಹಾಯವಾಣಿ ಆರಂಭ
– ಬ್ಲೂಕಾರ್ನರ್‌ ನೋಟಿಸ್‌: ವಿದೇಶದಲ್ಲಿದ್ರೂ ಬಿಡಲ್ಲ
– ಪ್ರಜ್ವಲ್‌ ವಿರುದ್ಧ ಪೊರಕೆ ಸೇವೆ ಮಾಡಿದ ಮಹಿಳೆಯರು!

NAMMUR EXPRESS NEWS
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರ ನೆರವಿಗಾಗಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಹಾಯವಾಣಿ ಸ್ಥಾಪಿಸಿದೆ. ತನಿಖೆಯ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ಇರುವುದು ತಿಳಿದು ಬಂದಿದ್ದು, ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದ್ದು, 6360938947 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಎಸ್‌ಐಟಿ ತಿಳಿಸಿದೆ. ಹೆಸರು ಗೌಪ್ಯವಾಗಿಡುವುದು ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

– ಬ್ಲೂಕಾರ್ನರ್‌ ನೋಟಿಸ್‌

ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ. ಇಂಟರ್‌ಪೋಲ್‌ಗೆ ಮಾಹಿತಿ ನೀಡಿ ವಿದೇಶದಲ್ಲಿಎಲ್ಲೇ ಇದ್ದರೂ ಪತ್ತೆ ಹಚ್ಚುವ ಕಾರ್ಯಕ್ಕೆ ಎಸ್‌ಐಟಿ ಕ್ರಮ ವಹಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. . ನಿಯಮಾನುಸಾರ ಪ್ರಜ್ವಲ್‌ನನ್ನು ಕರೆತರುವ ನಿಟ್ಟಿನಲ್ಲಿಎಸ್‌ಐಟಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ಬೇಕಾದ ಸಹಕಾರವನ್ನು ಸರಕಾರ ಕೊಡಲಿದೆ,’’ ಎಂದರು. ಸರಕಾರ ರಾಜಕೀಯ ದುರುದ್ದೇಶದಿಂದ ಕೆಲವು ಕ್ರಮ ಕೈಗೊಳ್ಳುತ್ತಿದೆ ಎಂಬ ಜೆಡಿಎಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ‘‘ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಬೇಸರದಲ್ಲಿದ್ದು, ಸಹಜವಾಗಿ ಆ ರೀತಿ ಹೇಳಿರಬಹುದು. ಕಾನೂನಿನ ಪ್ರಕಾರ ಶಾಸಕ ಎಚ್‌.ಡಿ. ರೇವಣ್ಣ ಅವರ ಬಂಧನವಾಗಿದೆ. ಇಲ್ಲದಿದ್ದರೆ ಮುಂದೆ ಎಸ್‌ಐಟಿ ವಿರುದ್ಧವೂ ಆರೋಪ ಮಾಡುವ ಸಾಧ್ಯತೆ ಇದೆ,’’ ಎಂದು ತಿಳಿಸಿದರು.

– ಪ್ರಜ್ವಲ್‌ ವಿರುದ್ಧ ಪೊರಕೆ ಸೇವೆ ಮಾಡಿದ ಮಹಿಳೆಯರು!

ಮಂಡ್ಯದಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ನಗರದಲ್ಲಿಪ್ರಜ್ವಲ್‌ ಪ್ರತಿಕೃತಿಗೆ ಪೊರಕೆ ಸೇವೆ ಮಾಡಿ ಪ್ರತಿಭಟನೆ ನಡೆಸಿದರು. ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಯರು, ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ನನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಅಗ್ರಹಿಸಿದರು. ಇದೇ ವೇಳೆ ಪ್ರಜ್ವಲ್‌ ಪ್ರತಿಕೃತಿಯನ್ನು ಪೆಟ್ರೋಲ್‌ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

Categories
ಉಡುಪಿ ತೀರ್ಥಹಳ್ಳಿ ಮಲ್ನಾಡ್

ಆಗುಂಬೆ ಘಾಟಿ ರಸ್ತೆ ತಡೆಗೋಡೆಯಲ್ಲಿ ಬಿರುಕು?!

ಆಗುಂಬೆ ಘಾಟಿ ರಸ್ತೆ ತಡೆಗೋಡೆಯಲ್ಲಿ ಬಿರುಕು?!
– ಘನ ವಾಹನಗಳ ಓಡಾಟದಿಂದ ತಡೆಗೋಡೆಗಳಿಗೆ ಹಾನಿ
– ಮಳೆಗಾಲಕ್ಕೂ ಮುನ್ನ ಒಮ್ಮೆ ಪರಿಶೀಲಿಸಿ..!

NAMMUR EXPRESS NEWS
ಉಡುಪಿ: ಶಿವಮೊಗ್ಗ-ಉಡುಪಿ ಜಿಲ್ಲೆಗಳ ಪ್ರಮುಖ ಘಟ್ಟ ಪ್ರದೇಶ ಆಗುಂಭೆ ಘಾಟಿಯಲ್ಲಿ ಈ ಸಲ ಮತ್ತೆ ರಸ್ತೆ ತಡೆಗೋಡೆ ಕುಸಿತದ ಆತಂಕ ಎದುರಾಗಿದೆ. ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆ ಬಳಿ ಬಿರುಕು ಬಿಟ್ಟಿದ್ದು ಘನವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ. ಘಾಟಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು ಅದು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘನ ವಾಹನಗಳ ಓಡಾಟದಿಂದ ತಡೆಗೋಡೆಗಳಿಗೆ ಹಾನಿಯಾಗುತ್ತಿದ್ದು, ವಾಹನಗಳು ತಡೆಗೋಡೆಗೆ ಡಿಕ್ಕಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ವರದಿಯಲ್ಲಿ ಹೇಳಲಾಗಿದೆ.

ಮಳೆಗಾಲದಲ್ಲಿ ಘಾಟಿ ಬಂದ್ ಆಗದಿರಲಿ!

ಮಳೆಗಾಲದಲ್ಲಿ ಪದೇ ಪದೇ ಆಗುಂಬೆ ಘಾಟಿ ಬಂದ್ ಆಗುವುದರಿಂದ ಸಾವಿರಾರು ಜನರಿಗೆ ಸಮಸ್ಯೆ ಆಗುತ್ತಿದೆ. ಇದರಿಂದ ಅಧಿಕಾರಿಗಳು ತಕ್ಷಣ ಪರಿಶೀಲನೆ ಮಾಡಬೇಕು ಎಂದು ಜನತೆ ಅಗ್ರಹಿಸಿದ್ದಾರೆ.

Categories
ಜಾತಕ

ರಾಶಿ ಭವಿಷ್ಯ ಹೇಗಿದೆ?

ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?

NAMMUR EXPRESS NEWS
2024 ಮೇ 6ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ :
ಅಗತ್ಯಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ. ವಾಹನ ಖರೀದಿಯ ಪ್ರಯತ್ನಗಳು ಕೂಡಿ ಬರುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಉಂಟಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯುತ್ತದೆ. ಉದ್ಯೋಗಗಳು ಹೆಚ್ಚು ಉತ್ಸಾಹದಯಕವಾಗಿರುತ್ತವೆ.

** ವೃಷಭ ರಾಶಿ :
ಕೈಗೊಂಡ ಕೆಲಸದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹೊಸ ಪ್ರಯತ್ನಗಳು ಕೂಡಿ ಬರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಯೋಚಿಸುವುದು ಉತ್ತಮ. ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ವೃತ್ತಿಪರ ವ್ಯವಹಾರದಲ್ಲಿ ಅಧಿಕಾರಿಗಳೊಂದಿಗೆ ಕಿರಿಕಿರಿಗಳು ಉಂಟಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ.

** ಮಿಥುನ ರಾಶಿ :
ಕುಟುಂಬ ಸದಸ್ಯರಿಂದ ಬೆಂಬಲ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳ ನೆರವಿನಿಂದ ಕೆಲವು ಕಾರ್ಯಗಳು ಪೂರ್ಣಗೊಳಿಸುತ್ತೀರಿ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ನಿರ್ಧಾರಗಳನ್ನು ಕೊಂಡು ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

** ಕಟಕ ರಾಶಿ :
ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಿ ಮತ್ತು ಕಿರಿಕಿರಿಗಳು ಹೆಚ್ಚಾಗುತ್ತವೆ. ಮನೆಯ ಹೊರಗೆ ಋಣಾತ್ಮಕ ವಾತಾವರಣವಿರುತ್ತದೆ. ಪ್ರಯಾಣಗಳು ಶ್ರಮದಾಯಕವಾಗಿರುತ್ತವೆ. ಆರ್ಥಿಕವಾಗಿ ಗೊಂದಲಮಯ ಪರಿಸ್ಥಿತಿಗೊಳಿರುತ್ತವೆ.

** ಸಿಂಹ ರಾಶಿ :
ವ್ಯಾಪಾರ ಉದ್ಯೋಗಗಳು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತವೆ. ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಕೈಗೆತ್ತಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ರಾಜಕೀಯ ಸಭೆಗಳಿಗೆ ಆಹ್ವಾನಗಳು ದೊರೆಯುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಕಾಲದಲ್ಲಿ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ.

** ಕನ್ಯಾ ರಾಶಿ :
ಪ್ರಮುಖ ವಿಷಯಗಳಲ್ಲಿ ಕುಟುಂಬದ ಹಿರಿಯರಿಂದ ಸಲಹೆ ಪಡೆಯುವುದು ಒಳ್ಳೆಯದು. ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಮೇಲಧಿಕಾರಿಗಳೊಂದಿಗೆ ಸಾಮರಸ್ಯ ಇರುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ.

** ತುಲಾ ರಾಶಿ :
ವಾಹನ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ದೀರ್ಘಾವಧಿಯ ಸಾಲದ ಒತ್ತಡಗಳಿಂದ ಹೊಸ ಸಾಲದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಸೇವಾ ಚಟುವಟಿಕೆಗಳತ್ತ ಗಮನ ಹರಿಸುತ್ತೀರಿ. ವೃತ್ತಿ ವ್ಯವಹಾರಗಳಲ್ಲಿ ಲಾಭ ಪಡೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.

** ವೃಶ್ಚಿಕ ರಾಶಿ :
ವ್ಯಾಪಾರ ವ್ಯವಹಾರಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ದಿಢೀರ್ ನಿರ್ಧಾರ ಕೈಗೊಳ್ಳುತ್ತಾರೆ. ಕೈಗೆತ್ತಿಕೊಂಡ ಕಾಮಗಾರಿ ವಿಳಂಬವಾದರೂ ನಿಧಾನಗತಿಯಲ್ಲಿ ಮುಗಿಯುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ವ್ಯಾಪಾರಗಳು ಮಂದಗತಿಯಲ್ಲಿವೆ. ಉದ್ಯೋಗದ ವಿಷಯದಲ್ಲಿ ಮಾಡುವುದು ಒಳ್ಳೆಯದಲ್ಲ. ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

** ಧನುಸ್ಸು ರಾಶಿ :
ಮನೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸಂತೋಷದಾಯಕ ವಾತಾವರಣವನ್ನು ಹೊಂದಿರುತ್ತವೆ. ಉದ್ಯೋಗದ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ವ್ಯವಹರಿಸಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.

** ಮಕರ ರಾಶಿ :
ಹೊಸ ಮನೆ ವಾಹನ ಯೋಗವಿದೆ. ನಿರುದ್ಯೋಗಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಾರೆ. ಬಂಧುಗಳೊಂದಿಗೆ ಸಹಕಾರದ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ನಿರೀಕ್ಷೆಗಳನ್ನು ಈಡೇರಿಸಲಾಗುತ್ತದೆ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ.

** ಕುಂಭ ರಾಶಿ :
ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಬರಬೇಕಾದ ಸಕಾಲಕ್ಕೆ ಹಣ ಸಿಗದೇ ನಿರಾಶೆ ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ವ್ಯಾಪಾರ ಉದ್ಯೋಗಗಳಲ್ಲಿ ಕೆಲವು ಅನಾನುಕೂಲ ಪರಿಸ್ಥಿತಿ ಗಳಿರುತ್ತವೆ.

** ಮೀನ ರಾಶಿ :
ಪ್ರಮುಖ ವಿಷಯಗಳು ಮುಂದೂಡಲ್ಪಡುತ್ತವೆ. ಹೊಸ ವ್ಯಾಪಾರ ಆರಂಭಿಸಲು ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಕೌಟುಂಬಿಕ ವಿಷಯಗಳಲ್ಲಿ ಅಸ್ಥಿರ ಆಲೋಚನೆಗಳಿಂದ ವಿವಾದಗಳು ಉಂಟಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳಿರುತ್ತವೆ. ಹೊಸ ಸಾಲವನ್ನು ತೆಗೆದುಕೊಳ್ಳದಿರುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ.

Categories
ಕರಾವಳಿ

ಇದೀಗ ಮೂಡುಬಿದಿರೆಯಲ್ಲೂ ಕ್ರಿಯೇಟಿವ್ ನ ಪುಸ್ತಕ ಮನೆ

ಇದೀಗ ಮೂಡುಬಿದಿರೆಯಲ್ಲೂ ಕ್ರಿಯೇಟಿವ್ ನ ಪುಸ್ತಕ ಮನೆ
– ಡಾ.ಮೋಹನ್ ಆಳ್ವಾ, ಎಕ್ಸಲೆಂಟ್ ಸಂಸ್ಥೆ ಮುಖ್ಯಸ್ಥರಾದ ಯುವರಾಜ್ ಜೈನ್, ರಶ್ಮಿತಾ ಜೈನ್ ಉದ್ಘಾಟನೆ
– ಕನ್ನಡ ಪುಸ್ತಕ ಲೋಕದಲ್ಲಿ ಮತ್ತೊಂದು ಮೈಲುಗಲ್ಲು

NAMMUR EXPRESS NEWS
ಮೂಡುಬಿದಿರೆ: ಪುಸ್ತಕ ಓದುವ ಅಭಿರುಚಿ ಜತೆಗೆ ಶಿಕ್ಷಣ, ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಶುರುವಾದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ “ಪುಸ್ತಕ ಮನೆ” ಮೂಡುಬಿದಿರೆಯಲ್ಲಿ ತನ್ನ ಎರಡನೇ ಪುಸ್ತಕ ಮಳಿಗೆಯನ್ನು ಲೋಕಾರ್ಪಣೆ ಮಾಡಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವಾ, ಎಕ್ಸಲೆಂಟ್ ಸಂಸ್ಥೆ ಮುಖ್ಯಸ್ಥರಾದ ಯುವರಾಜ್ ಜೈನ್ , ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಗಣನಾಥ ಶೆಟ್ಟಿ, ಅಮೃತ್ ರೈ, ಅಶ್ವಥ್ ಎಸ್.ಎಲ್, ಆದರ್ಶ, ವಿಮಲ್ ರಾಜ್, ಗಣಪತಿ ಕೆ. ಎಸ್ ಇದ್ದರು. ಗಣ್ಯರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕದಲ್ಲಿ ಪುಸ್ತಕ ಲೋಕದಲ್ಲಿ ಪುಸ್ತಕಮನೆ ಹೊಸ ಮೈಲುಗಲ್ಲು ಸಾಧಿಸಿದ್ದು, ಕರಾವಳಿಯಲ್ಲಿ ತನ್ನ ಎರಡನೇ ಮಳಿಗೆ ಶುರುಮಾಡಿದೆ. ನೂರಾರು ಬರಹಗಾರರ ಪುಸ್ತಕಗಳು, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿ ಎಲ್ಲಾ ಕ್ಷೇತ್ರದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳು, ಮಕ್ಕಳ ಶಿಕ್ಷಣ, ಆಟಿಕೆ, ಗಿಫ್ಟ್, ಅಧ್ಯಯನ ಸಾಮಾಗ್ರಿಗಳ ಬೃಹತ್ ಮಳಿಗೆ ಇದಾಗಿದೆ.

ಪುಸ್ತಕ ಲೋಕಕ್ಕೆ ಬಹಳ ದೊಡ್ಡ ಕೊಡುಗೆ: ಡಾ.ಮೋಹನ್ ಆಳ್ವಾ

ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವಾ ಮಾತನಾಡಿ, ಪುಸ್ತಕ ಮನೆ ನೂತನ ಒಳ್ಳೆಯ ಅಭಿರುಚಿ ಮತ್ತು ವ್ಯಕ್ತಿತ್ವ ಬೆಳೆಸುವ ಪುಸ್ತಕಗಳ ಓದಿಗೆ ಅನುಕೂಲವಾಗುವಂತೆ ಕ್ರಿಯೇಟಿವ್ ಪುಸ್ತಕ ಮನೆ ಪುಸ್ತಕ ಮಳಿಗೆ ಆರಂಭವಾಗಿದ್ದು ಸಂತಸದ ವಿಷಯ. ಮೂಡಬಿದಿರೆಯಲ್ಲಿ ಪುಸ್ತಕಗಳ ಸಿಗುವ ವ್ಯವಸ್ಥೆಯಲ್ಲಿ ನ್ಯೂನ್ಯತೆ ಇತ್ತು. ಈಗ ಮೊದಲ ಪುಸ್ತಕ ಮಳಿಗೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಆರಂಭಿಸಿ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಬಣ್ಣಿಸಿದರು.
ಮೂಡಬಿದಿರೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 45 ಸಾವಿರ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರಿರುವ ವಿದ್ಯಾವಂತರ ಊರು. ಇಂದಿನ ಯುವ ಜನತೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.

ಡಿಜಿಟಲ್ ಅಥವಾ ಮೊಬೈಲ್ ಶಾಶ್ವತವಲ್ಲ. ಪುಸ್ತಕಗಳು ಈಗ ಅನಿವಾರ್ಯ. ಗಾಳಿ, ನೀರು, ಮಣ್ಣು ಹೇಗೋ ಹಾಗೆ ಪುಸ್ತಕಗಳು ವಿದ್ಯಾವಂತರಿಗೆ ಅಗತ್ಯ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಬಹಳ ಒಳ್ಳೆಯ ಕೆಲಸ ಎಂದರು. ನಮ್ಮಲ್ಲಿ ಪುಸ್ತಕ ಬರೆಯುವ ಬೇಕಾದಷ್ಟು ಲೇಖಕರಿದ್ದಾರೆ. ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಓದುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಡಿಜಿಟಲ್ ಬಲಿಪಶು ಆಗಿದ್ದಾರೆ. ಎಲ್ಲರೂ ಓದಬೇಕು, ಪುಸ್ತಕ ನಮ್ಮ ಬದುಕನ್ನು ಬದಲಾವಣೆ ಮಾಡುತ್ತಿದೆ. ಪುಸ್ತಕ ಮನೆ ವಿದ್ಯಾರ್ಥಿಗಳಿಗೆ, ಜ್ಞಾನಿಗಳಿಗೆ ಅವಕಾಶ ನೀಡಲಿ ಎಂದು ಹಾರೈಸಿದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಧನೆಗೆ ಮೆಚ್ಚುಗೆ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಯುವರಾಜ್ ಜೈನ್ ಮಾತನಾಡಿ, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 7 ಜನ ಸಂಸ್ಥಾಪಕರು ಪುಸ್ತಕ ಓದಿಸುವ ಮಾದರಿ ಕೆಲಸ ಮಾಡಿದ್ದಾರೆ. ಮೂಡುಬಿದಿರೆಯ ಜನತೆಗೆ ಜ್ಞಾನದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಪುಸ್ತಕ ಸೇವೆ: ಸರಸ್ವತಿಯನ್ನು ಭಾರತದಲ್ಲಿ ಪುಸ್ತಕದ ಮೂಲಕ ನೋಡುತ್ತೇವೆ. ಮೂಡಬಿದ್ರೆಯಲ್ಲಿ ಪುಸ್ತಕಗಳನ್ನು ಸಿಗುವಂತೆ ಮಾಡಿದ ಪುಸ್ತಕ ಮನೆ ಸಂಸ್ಥೆಗೆ ಧನ್ಯವಾದಗಳು. ಮೋಹನ್ ಆಳ್ವಾ ಅವರು ವಿದ್ಯೆ, ಸಂಸ್ಕೃತಿ ನೀಡಿದ್ದಾರೆ. ಈಗ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪುಸ್ತಕ ಸೇವೆ ನೀಡುತ್ತಿದೆ ಎಂದರು.

 

Categories
ಮಲ್ನಾಡ್

ಅಯ್ಯೋ ಮಲೆನಾಡಲ್ಲಿ ಬಿಸಿಲ ಕೆಂಡ!

ಅಯ್ಯೋ ಮಲೆನಾಡಲ್ಲಿ ಬಿಸಿಲ ಕೆಂಡ!
– ಇತಿಹಾಸದಲ್ಲೇ ದಾಖಲೆ ತಾಪಮಾನ
– ಕೃಷಿಗೂ ನೀರಿಲ್ಲ… ಕುಡಿಯಲು ನೀರಿಲ್ಲ

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಬಿಸಿಲಿನ ಪ್ರಮಾಣ ದಿನೇದಿನ ಏರುತ್ತಿದ್ದು, ಹಗಲಿನಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಮನೆಯೊಳಗೂ ಕೂಡ ಉರಿ ಬಿಸಿಲಿನ ಶಾಖ ತಟ್ಟುತ್ತಿದೆ. ಫ್ಯಾನ್ ಬಳಸದೆ ಮನೆಯೊಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಇತಿಹಾಸದಲ್ಲೇ ಮೊದಲ ಬಾರಿ 40 ಡಿಗ್ರಿಸೆಲ್ಸಿಯಸ್ ತಾಪಮಾನ ಮಲೆನಾಡಲ್ಲಿ ದಾಖಲಾಗುತ್ತಿದೆ.
ಮಧ್ಯರಾತ್ರಿಯವರೆಗೂ ಮನೆಯೊಳಗೆ ಶಾಖದ ವಾತಾವರಣ ಉಂಟಾಗುತ್ತಿದೆ. ಕೃಷಿ, ಬ್ಯುಸಿನೆಸ್ ಸೇರಿ ಎಲ್ಲಾ ಕ್ಷೇತ್ರದ ಮೇಲೂ ಬಿಸಿಲು ಅಡ್ಡ ಪರಿಣಾಮ ಬೀರಿದೆ.

ತಂಪು ಪಾನೀಯಗಳಿಗೆ ಡಿಮ್ಯಾಂಡ್!

ಬಿಸಿಲು ಹೆಚ್ಚಾಗಿರುವುದರಿಂದ ತಂಪು ಪಾನೀಯ, ಎಳನೀರು, ಕಬ್ಬಿನ ರಸ, ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಗಲ್ಲಿಗಳಲ್ಲಿಯೂ ಹಣ್ಣಿನ ಅಂಗಡಿಗಳು, ಜ್ಯೂಸ್ ಸೆಂಟರ್‌ಗಳು ತಲೆಎತ್ತಿವೆ. ಬಿಸಿಲು ಏರಿದಂತೆ ಹಣ್ಣಿನ ಬೆಲೆಯೂ ಏರತೊಡಗಿದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಕೆಲಸಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ‌ ಝಳಕ್ಕೆ ನದಿ, ಹಳ್ಳಗಳಲ್ಲಿ ನೀರು ಗಣನೀಯವಾಗಿ ಬತ್ತತೊಡಗಿದ್ದು, ಜಲಮೂಲಗಳು ಒಣಗತೊಡಗಿವೆ. ಬಹಳ ವರ್ಷಗಳ ಬಳಿಕ ಮಲೆನಾಡಿನಲ್ಲಿ ತೀವ್ರ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಬಿಸಿಲಿನ ತಾಪಕ್ಕೆ ಸಿಲುಕಿ ನೀರಾಯಿಸಿದ ಕಾಫಿ, ಅಡಿಕೆ ಗಿಡಗಳು ಸಹ ಒಣಗತೊಡಗಿವೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಾರು ಕಾರು.!

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಾರು ಕಾರು.!
– ರಾತ್ರಿ ಆಗುತ್ತಿದ್ದಂತೆ ಬೆಂಗಳೂರು ಬಸ್ಸುಗಳಿಗೆ ಅಡ್ಡಿ
– ಟ್ರಾಫಿಕ್ ಪೊಲೀಸ್, ಪ. ಪಂ ನಿಯಮ ಮಾಡದಿದ್ದರೆ ತೊಂದರೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಟ್ರಾಫಿಕ್ ಸಮಸ್ಯೆಯು ಜೋರಾಗಿದೆ. ವಾಹನಗಳ ಸಂಖ್ಯೆಯು ಹೆಚ್ಚಾಗಿದೆ. ಈ ನಡುವೆ ಪ್ರತಿದಿನ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಾರು,ಬೈಕ್ ಎಲ್ಲೆಂದರಲ್ಲಿ ನಿಲ್ಲಿಸುವವರು ಮತ್ತು ಬಸ್ ಸಿಬ್ಬಂದಿಗಳ ನಡುವೆ ಜಟಾಪಟಿ ಇದೀಗ ನಡೆಯುತ್ತಿದೆ. ಕಾರಣ ಇಡೀ ಬಸ್ ನಿಲ್ದಾಣದ ಒಳಗೆ ಕಾರುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಪಾರ್ಕಿಂಗ್ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್ ಜಾಗವನ್ನು ಬಸ್ ನಿಲ್ದಾಣದಲ್ಲಿ ಗುರುತಿಸಬೇಕೆಂಬ ಆಗ್ರಹ ಇದೀಗ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ ಸಿಬ್ಬಂದಿಗಳಿಂದ ವ್ಯಕ್ತವಾಗಿದೆ. ಕಾರಣವೇನೆಂದರೆ ತೀರ್ಥಹಳ್ಳಿಯಿಂದ ಶಿವಮೊಗ್ಗ ಹಾಗೂ ಬೆಂಗಳೂರಿಗೆ ಪ್ರತಿದಿನ 20ಕ್ಕೂ ಹೆಚ್ಚು ಬಸ್ಸುಗಳು ತೀರ್ಥಹಳ್ಳಿಯಿಂದ ಪ್ರಯಾಣ ಬೆಳೆಸುತ್ತದೆ. ಕೆಲವು ರಜೆ ದಿನಗಳಲ್ಲಿ ಸಾವಿರಾರು ಪ್ರಯಾಣಿಕರು ಇಲ್ಲಿಂದ ಬೆಂಗಳೂರಿಗೆ ತೆರಳುತ್ತಾರೆ.

ಈ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ಗಳನ್ನು ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಪ್ರಯಾಣಿಕರನ್ನು ಬಿಡಲು ಬರುವ ಕಾರುಗಳು ಹಾಗೂ ಬೈಕುಗಳನ್ನು ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಖಾಸಗಿ ಬಸ್ ಗಳಿಗೆ ನಿಲ್ಲಿಸಲು ಹಾಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಿಗೆ ಖಾಸಗಿ ಬಸ್ ಸಿಬ್ಬಂದಿ ಹಾಗೂ ಇಲ್ಲಿನ ಏಜೆಂಟ್ ಗಳು ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಪ್ರಕಟಣೆಯನ್ನು ಕೊಡಬೇಕು. ಜೊತೆಗೆ ನಿಗದಿಪಡಿಸಿದ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಬೇಡಿ ಎಂಬ ಮನವಿ ವ್ಯಕ್ತವಾಗಿದೆ. ಇದರಿಂದಾಗಿ ಪದೇ ಪದೇ ಗಲಾಟೆಗಳು ನಡೆಯುತ್ತಿವೆ. ಹೀಗಾಗಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಖಾಸಗಿ ಬಸ್ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.