Categories
ರಾಜ್ಯ

ಟಾಪ್ ನ್ಯೂಸ್

ಹಾಸನ : ಕೆರೆ ಮೀನು ತಿಂದು ಇಬ್ಬರ ಸಾವು 15ಕ್ಕೂ ಅಧಿಕ ಮಂದಿ ಅಸ್ವಸ್ಥ
– ವಿಜಯಪುರ : ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಾಸುಂಡೆ ಬರುವಂತೆ ಹಲ್ಲೆ
– ಬಳ್ಳಾರಿ : ಚಿನ್ನಾಭರಣ ಮಳಿಗೆಯಲ್ಲಿ AC ಸ್ಪೋಟಗೊಂಡ ಘಟನೆಯನ್ನು ಬಾಂಬ್ ಸ್ಫೋಟ ಎಂದು ಹೇಳಿಕೆ
– ಬೆಂಗಳೂರು : ಎಣ್ಣೆ ಪಾರ್ಟಿಯಿಂದ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌
– ಬೆಂಗಳೂರು : ಪಾದ ಕಟ್‌ ಮಾಡಿ, ರೈಲ್ವೆ ಬ್ರಿಡ್ಜ್‌ಗೆ ಶವ ಬಿಸಾಡಿದ ಹಂತಕರು

NAMMUR EXPRESS NEWS
ಹಾಸನ: ಕೆರೆ ಮೀನು ತಿಂದು ಇಬ್ಬರು ಮೃತಪಟ್ಟು 15ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ. ರವಿಕುಮಾರ (46), ಪುಟ್ಟಮ್ಮ 50) ಮೃತಪಟ್ಟವರು. ನೀರಿಲ್ಲದೆ ಬತ್ತಿ ಹೋಗಿದ್ದ ಬಸವನಹಳ್ಳಿ ಗ್ರಾಮದ ಕೆರೆಯಲ್ಲಿ ಕೆಸರು ತುಂಬಿತ್ತು. ಗ್ರಾಮಸ್ಥರು ಅದರಲ್ಲಿದ್ದ ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದಾರೆ. ಆ ಬಳಿಕ 15ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

– ವಿಜಯಪುರ : ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಾಸುಂಡೆ ಬರುವಂತೆ ಹಲ್ಲೆ

ವಿಜಯಪುರ: ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬೆನ್ನಿನಲ್ಲಿ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿರುವುದು ವರದಿಯಾಗಿದೆ. ಬಂದೇ ನವಾಝ್ ಜಾತಗಾರ ಹಲ್ಲೆಗೊಳಗಾದ ದುರ್ದೈವಿ. ಬಜರಂಗದಳದ ಮುಖಂಡರಾದ ವೀರೇಶ ಹಿರೇಮಠ, ರಾಜು ಬಿರಾದಾರ ಸೇರಿದಂತೆ 15-20 ಮಂದಿಯ ತಂಡ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಬಂದೇ ನವಾಝ್ ಗೂಡ್ಸ್ ವಾಹನದಲ್ಲಿ ಎರಡು ಹೋರಿ, ಒಂದು ಆಕಳು, ಒಂದು ಎಮ್ಮೆಯ ಕರುಗಳನ್ನು ಬಬಲೇಶ್ವರದಿಂದ ವಿಜಯಪುರಕ್ಕೆ ರವಾನಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ತಡೆದು ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ನವಾಝ್ ಮೈಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

– ಬಳ್ಳಾರಿ : ಚಿನ್ನಾಭರಣ ಮಳಿಗೆಯಲ್ಲಿ AC ಸ್ಪೋಟಗೊಂಡ ಘಟನೆಯನ್ನು ಬಾಂಬ್ ಸ್ಫೋಟ ಎಂದು ಹೇಳಿಕೆ

ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ, ಬಳ್ಳಾರಿ ಕರ್ನಾಟಕದ ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಸ್ಫೋಟ,
ಹಲವರಿಗೆ ಗಾಯ ಕಾಂಗ್ರೆಸ್ ಆಡಳಿತದಲ್ಲಿ ಈ ರಾಜ್ಯವು ಕ್ರಮೇಣ ವಾಸಿಸಲು ಅತ್ಯಂತ ಅಸುರಕ್ಷಿತ ರಾಜ್ಯವಾಗುತ್ತಿದೆ. ಇದು 2014 ರ ಹಿಂದಿನ ಭಾರತದ ವಿಲಕ್ಷಣ ಸ್ಥಿತಿಯನ್ನು ನೆನಪಿಸುತ್ತದೆ ಎಂದು ಪ್ರತಿಪಾದಿಸಿ. 2 ಮೇ 2024ರಂದು ಬಳ್ಳಾರಿ ನಗರದ ತೇರು ಬೀದಿಯಲ್ಲಿರುವ ಕಲ್ಯಾಣ್​ ಜ್ಯುವೆಲರ್ಸ್ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಸಿ ಸ್ಪೋಟಗೊಂಡು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್‌ಪಿ, ಬ್ರೂಸ್‌ಪೇಟೆ ಸರ್ಕಲ್‌ ಇನ್ಸ್​ಪೆಕ್ಟ‌ರ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

– ಬೆಂಗಳೂರು : ಎಣ್ಣೆ ಪಾರ್ಟಿಯಿಂದ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

ಬೆಂಗಳೂರು: ಕುಡಿದ ಅಮಲಿನಲ್ಲಿ ಹುಟ್ಟಿಕೊಂಡ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ರೌಡಿ ಶೀಟರ್‌ ಒಬ್ಬಾತ ಸ್ನೇಹಿತ ರಿಕ್ಷಾ ಚಾಲಕನನ್ನು ಇರಿದು ಕೊಂದು ಹಾಕಿದ್ದಾನೆ. ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ತಡರಾತ್ರಿ ಈ ಕೃತ್ಯ ನಡೆದಿದೆ. ಮೂರ್ತಿ (45) ವರ್ಷ ಕೊಲೆಯಾದ ಆಟೋ ಡ್ರೈವರ್. ಶರಣಪ್ಪ ಕೊಲೆ ಮಾಡಿದ ರೌಡಿ. ಮೂರ್ತಿಗೆ ರೌಡಿಶೀಟರ್ ಶರಣಪ್ಪ ಕೆಲ ವರ್ಷಗಳಿಂದ ಪರಿಚಯ. ನಿನ್ನೆ ಇಬ್ಬರೂ ಸ್ನೇಹಿತರು ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಡ್ಯಾಗರ್‌ನಿಂದ ಹಲವು ಬಾರಿ ಮೂರ್ತಿಗೆ ಇರಿದಿದ್ದಾನೆ. ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದು. ಸದ್ಯ ಆರೋಪಿಗಾಗಿ ಸಂಜಯ್ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

– ಬೆಂಗಳೂರು : ಪಾದ ಕಟ್‌ ಮಾಡಿ, ರೈಲ್ವೆ ಬ್ರಿಡ್ಜ್‌ಗೆ ಶವ ಬಿಸಾಡಿದ ಹಂತಕರು

ಬೆಂಗಳೂರಿನ ಶ್ರೀರಾಂಪುರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ಶ್ರೀರಾಂಪುರ ರೈಲ್ವೆ ಬ್ರಿಡ್ಜ್ ಬಳಿ ಶವ ಎಸೆದು ಹೋಗಿದ್ದಾರೆ. ಕ್ರಾಸ್ ಪೆಂಡೆಂಟ್ ಧರಿಸಿರುವ ಸುಮಾರು 35 ವರ್ಷದ ವ್ಯಕ್ತಿ ಪಾದ ಕಟ್ ಮಾಡಿ, ಕುತ್ತಿಗೆಗೆ ಬಲವಾಗಿ ಚುಚ್ಚಿ ಕೊಲೆ ಮಾಡಲಾಗಿದೆ. ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಮೇ 5ರಿಂದ 8ರವರೆಗೆ ‘ಎಣ್ಣೆ ಅಂಗಡಿ’ ಇರಲ್ಲ!

ಮೇ 5ರಿಂದ 8ರವರೆಗೆ ‘ಎಣ್ಣೆ ಅಂಗಡಿ’ ಇರಲ್ಲ!
– ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ಕ್ಷಣಗಣನೆ
– ಬೆಂಗಳೂರು -ಶಿವಮೊಗ್ಗ ವಿಶೇಷ ರೈಲು ಇರುತ್ತೆ
– ಮೇ 7ರ ಮತದಾನಕ್ಕೆ ಸರ್ಕಾರಿ ರಜೆ
– ಎಲ್ಲೆಡೆ ಸಿದ್ಧತೆ: ಗಡಿ ಭಾಗದಲ್ಲಿ ಅಲರ್ಟ್

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನ ಮೇ 7ಕ್ಕೆನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ಶಾಂತಿ-ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಮೇ 5ರ ಸಂಜೆ 5 ಗಂಟೆಯಿಂದ ಮೇ 8ರ ಬೆಳಿಗ್ಗೆ ಗಂಟೆವರೆಗೆ ಜಿಲ್ಲೆಯಲ್ಲಿ ಎಲ್ಲಾ ಬಗೆಯ ಮದ್ಯ ಮಾರಾಟ-ಮದ್ಯ ಸಾಗಾಟ-ಮದ್ಯ ಸಂಗ್ರಹಣೆಯನ್ನು ಸರ್ಕಾರ ನಿಷೇಧಿಸಿದೆ.

ಮೇ 7ರ ಮತದಾನಕ್ಕೆ ಸರ್ಕಾರಿ ರಜೆ

ಮೇ 7ರಂದು ಮತದಾನ ನಡೆಯುವ ಪ್ರಯುಕ್ತ ಅಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಲು ಚುನಾವಣೆ ಆಯೋಗ ಮನವಿ ಮಾಡಿದೆ.

ಎಲ್ಲೆಡೆ ಸಿದ್ಧತೆ: ಗಡಿ ಭಾಗದಲ್ಲಿ ಅಲರ್ಟ್

ಮತದಾನಕ್ಕೆ ವೋಟಿಂಗ್ ಬೂತ್, ಭದ್ರತೆ, ಪೊಲೀಸ್ ಸಿಬ್ಬಂದಿ, ಚುನಾವಣೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಹಣ, ಹೆಂಡ ವಿರುದ್ಧ ಅಲರ್ಟ್ ಇಡಲಾಗಿದೆ.

ಮತದಾನಕ್ಕೆ ಬಂದು ಹೋಗಲು ವಿಶೇಷ ರೈಲು

ಮೇ -6 -2024 ಸೋಮವಾರ ಬೆಂಗಳೂರು ಸೇರಿ ವಿವಿಧ ಭಾಗದಿಂದ ಶಿವಮೊಗ್ಗಕ್ಕೆ ಬಂದು ಹೋಗಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಮೈಸೂರು – ತಾಳಗುಪ್ಪ
ಮೈಸೂರು – ರಾತ್ರಿ 9:30
ಬೆಂಗಳೂರು – ರಾತ್ರಿ 12:00
ಶಿವಮೊಗ್ಗ – ಬೆಳಗ್ಗೆ 6:10
ತಾಳಗುಪ್ಪ – ಬೆಳಗ್ಗೆ 9:00

ಮೇ -7-2024 ಮಂಗಳವಾರ

ತಾಳಗುಪ್ಪ – ಮೈಸೂರು
ತಾಳಗುಪ್ಪ – ಸಂಜೆ 6:30
ಶಿವಮೊಗ್ಗ – ರಾತ್ರಿ 8:30
ಬೆಂಗಳೂರು – ರಾತ್ರಿ 1:00
ಮೈಸೂರು – ಬೆಳಗ್ಗೆ 4:00

Categories
ಜಾತಕ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?
– ಶನಿವಾರ ಯಾರು ಅದೃಷ್ಟವಂತರು?

NAMMUR EXPRESS NEWS
2024 ಮೇ 04ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

** ಮೇಷ :
ಮನೆಯ ಹೊರಗೆ ಗೌರವ ಹೆಚ್ಚಾಗುತ್ತದೆ. ಹೊಸ ವಸ್ತು ಲಾಭ ದೊರೆಯುತ್ತದೆ. ಕೈಗೊಂಡ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುತ್ತದೆ. ಕೆಲವು ವ್ಯವಹಾರಗಳಲ್ಲಿ ಆತ್ಮೀಯ ಸಲಹೆಯನ್ನು ತೆಗೆದುಕೊಳ್ಳಲಾಗುತ್ತದೆ. ಹಳೆಯ ಸ್ನೇಹಿತರ ಭೇಟಿ ಸಂತೋಷವನ್ನು ತರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ.

** ವೃಷಭ ರಾಶಿ :
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ, ಕುಟುಂಬದ ಸದಸ್ಯರ ವರ್ತನೆಯು ಕಿರಿಕಿರಿಯುಂಟುಮಾಡುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. ಆಪ್ತ ಸ್ನೇಹಿತರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಅನಗತ್ಯ ವಿಷಯಗಳಿಗೆ ಹಣ ವ್ಯಯವಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.

** ಮಿಥುನ ರಾಶಿ :
ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ವ್ಯಾಪಾರವನ್ನು ವಿಸ್ತರಿಸುವ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಹೊಸ ಉತ್ಸಾಹದಿಂದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಆದಾಯದ ಮಾರ್ಗಗಳು ಮತ್ತಷ್ಟು ವಿಸ್ತರಿಸುತ್ತವೆ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತದೆ.

** ಕಟಕ ರಾಶಿ :
ಪ್ರಮುಖ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ವ್ಯವಹಾರಗಳಲ್ಲಿ ಹೊಸ ಯೋಜನೆಗಳು ಜಾರಿಯಾಗಿ ಲಾಭ ದೊರೆಯುತ್ತದೆ. ಅನುಕೂಲಕರ ಆರ್ಥಿಕ ವಾತಾವರಣ ಇರುತ್ತದೆ.

** ಸಿಂಹ ರಾಶಿ :
ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೊನೆಯ ಕ್ಷಣದ ಪ್ರಯಾಣವನ್ನು ಮುಂದೂಡಲಾಗುತ್ತದೆ. ಕೈಗೊಂಡ ಕಾರ್ಯಗಳು ಮಧ್ಯದಲ್ಲಿ ನಿಲ್ಲುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ, ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗದೆ. ತೊಂದರೆಗಳನ್ನು ಎದುರಿಸಲಾಗುತ್ತದೆ. ವ್ಯಾಪಾರಗಳು ನಿಧಾನವಾಗುತ್ತವೆ.

** ಕನ್ಯಾ ರಾಶಿ :
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಿ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆಧ್ಯಾತ್ಮಿಕ ಚಿಂತನೆ ಮೂಡುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಏರುಪೇರು ಹೆಚ್ಚಾಗುತ್ತದೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

** ತುಲಾ ರಾಶಿ :
ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಪ್ರಮುಖ ವಿಷಯಗಳಲ್ಲಿ ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ಶೈಕ್ಷಣಿಕ ಅನುಕೂಲತೆ ಉಂಟಾಗುತ್ತದೆ.

** ವೃಶ್ಚಿಕ ರಾಶಿ :
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಶತ್ರು ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಣದ ವಿಷಯದಲ್ಲಿ ಸಹೋದರರೊಂದಿಗೆ ವಿವಾದಗಳು ಉಂಟಾಗುತ್ತವೆ. ವ್ಯಾಪಾರ ಉದ್ಯೋಗಗಳು ಹೆಚ್ಚು ಉತ್ಸಾಹದಾಯಕವಾಗಿರುತ್ತದೆ.

** ಧನುಸ್ಸು ರಾಶಿ :
ಆತ್ಮೀಯರೊಂದಿಗೆ ವಿವಾದ ಉಂಟಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಮಕ್ಕಳು ಶೈಕ್ಷಣಿಕ ಫಲಿತಾಂಶಗಳನ್ನು ಪಡೆಯುತ್ತಾರೆ. ದೂರದ ಪ್ರಯಾಣದ ಸೂಚನೆಗಳಿವೆ. ವ್ಯಾಪಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ.

** ಮಕರ ರಾಶಿ :
ಸಾಲದ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ದೂರ ಪ್ರಯಾಣದಿಂದ ಕೆಲಸದ ಹೊರೆ ಹೆಚ್ಚಾಗುತ್ತದೆ. ಬಂಧುಗಳಿಂದ ಕೇಳಬಾರದ ಮಾತುಗಳನ್ನು ಕೇಳಬೇಕಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸಮಸ್ಯೆಗಳಿರುತ್ತವೆ. ವ್ಯಾಪಾರದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಉದ್ಯೋಗದಲ್ಲಿ ಋಣಾತ್ಮಕ ಪರಿಸ್ಥಿತಿಗಳಿರುತ್ತವೆ.

** ಕುಂಭ ರಾಶಿ :
ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಸಹೋದರರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ. ಉದ್ಯೋಗಗಳು ಹೆಚ್ಚು ಉತ್ಸಾಹದಾಯಕವಾಗಿರುತ್ತವೆ. ದೈವಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಭೂಮಿ ಖರೀದಿ ಮತ್ತು ಮಾರಾಟ ಲಾಭದಾಯಕವಾಗಿರುತ್ತದೆ.

** ಮೀನ ರಾಶಿ :
ಅಗತ್ಯಕ್ಕೆ ಹಣ ಕೈಯಲ್ಲಿ ಇರುವುದಿಲ್ಲ. ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ನೇತ್ರ ಸಂಬಂಧಿ ಖಾಯಿಲೆಗಳು ನೋವುಂಟು ಮಾಡುತ್ತವೆ. ಮನೆಯಲ್ಲಿ ಗೊಂದಲದ ವಾತಾವರಣವಿರುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಪ್ರಯಾಣದಲ್ಲಿ ರಸ್ತೆ ಅಡೆ – ತಡೆ ಉಂಟಾಗುತ್ತವೆ.

Categories
ಅಡಿಕೆ-ದರ

ಅಡಿಕೆ ದರ 03-05-2024

ಅಡಿಕೆ ದರ
03-05-2024
ಸರಕು 49200 85130
ಬೆಟ್ಟೆ 48699 56329
ರಾಶಿ 32130 52338
ಗೊರಬಲು 17109 35199
Nammur Express
Categories
Uncategorized

ಟಾಪ್ ನ್ಯೂಸ್

ಟಾಪ್ ನ್ಯೂಸ್
ಬೆಂಗಳೂರಿನ ಹಲವೆಡೆ ಜೋರು ಮಳೆ..!
– ರಾಜ್ಯದಲ್ಲಿ ಬಿಸಿಲಿನ ನಡುವೆ ರಾಜಧಾನಿಯಲ್ಲಿ ಮಳೆ
– ಬಿಸಿಲಿನ ತಾಪಕ್ಕೆ ಹಾವೇರಿ ಕಾರ್ಮಿಕ ಬಲಿ!
– ಸೆಕೆ ನಡುವೆ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರ ಫೈಟ್.!

NAMMUR EXPRESS NEWS
ಬೆಂಗಳೂರು: ಕಾದು ಕೆಂಡವಾಗಿದ್ದ ಸಿಲಿಕಾನ್​ ಸಿಟಿಯ ಕೆಲವೆಡೆ ವರುಣನ ಆಗಮನವಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಹಲವೆಡೆ ದಿಢೀರ್​ ಮಳೆಯಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಇದರಿಂದ ಮಹಾನಗರ ಕೊಂಚ ಮಟ್ಟಿಗೆ ಕೂಲ್​ ಆಗಿದೆ. ಇನ್ನು ರಾಜ್ಯದಲ್ಲಿ ಕೆಲವು ದಿನಗಳ ಕಾಲ ಬಿಸಿಗಾಳಿಯು ಮುಂದುವರೆಯಲಿದ್ದು, ಈ ಮಧ್ಯೆ ಏ.30 ರಿಂದ ಮೇ.03 ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ.
ಅಕ್ಕಪಕ್ಕದ ಎಲ್ಲಾ ಜಿಲ್ಲೆ

ಬಿಸಿಲಿನ ತಾಪಕ್ಕೆ ಹಾವೇರಿ ಕಾರ್ಮಿಕ ಬಲಿ!

ಬಿಸಿಲಿನ ಹೊಡೆತಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸಾವನ್ನೂರು ತಾಲೂಕಿನ ಶಿರಿಬಿದಿಗೆ ನಿವಾಸಿ, ಕಾರ್ಮಿಕ ವೃತ್ತಿ ನಡೆಸುತ್ತಿದ್ದ ರುದ್ರಪ್ಪ ಲಮಾಣಿ (45)ಮೃತಪಟ್ಟವರು. ಇವರು ಕಾಸರಗೋಡಿನ ಜೆ.ಪಿ ಕಾಲನಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿದ್ದರು. ಮನೆಯಿಂದ ಹೊರಬಂದಿದ್ದ ಇವರು ಕ್ವಾಟ್ರಸ್ ಪಕ್ಕದಲ್ಲಿಯೇ ರಸ್ತೆಬದಿ ಕುಸಿದುಬಿದ್ದಿದ್ದು, ತಕ್ಷಣ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ರುದ್ರಪ್ಪ ಲಮಾಣಿ ಕಳೆದ ಒಂಬತ್ತು ವರ್ಷಗಳಿಂದ ಕಾಸರಗೋಡಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಲಮಾಣಿ ಸಾವಿನೊಂದಿಗೆ ಕೇರಳದಲ್ಲಿ ಬಿಸಿಲಿನ ಆಘಾತಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರ ಫೈಟ್.!

ವಿಜಯಪುರ: ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರು ಫೈಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕ ನಡು ರಸ್ತೆಯಲ್ಲೇ ಬಸ್ ನಿಲ್ಲಿಸಿದ ಘಟನೆ ವಿಜಯಪುರ ನಗರದ ಹೊಸ ಬಬಲೇಶ್ವರ ನಾಕಾ ರಸ್ತೆಯಲ್ಲಿ ನಡೆದಿದೆ. ಬಸ್ ಸೀಟ್‌ಗಾಗಿ ಇಬ್ಬರು ಮಹಿಳೆಯರ ಮಧ್ಯೆ ಕಿತ್ತಾಟ ನಡೆಸಿದ್ದ ದೃಶ್ಯಗಳು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ವಿಡಿಯೋ ಸೆರೆ ಹಿಡಿದಿದ್ದಾರೆ.
ಮಹಿಳೆಯರ ಕಿತ್ತಾಟದಿಂದ ಅರ್ಧ ಗಂಟೆವರೆಗೂ ಬಸ್​ ಬಬಲೇಶ್ವರ ರಸ್ತೆಯಲ್ಲಿ ನಿಂತಲ್ಲೇ ನಿಂತಿತ್ತು. ಇಬ್ಬರು ಮಹಿಳೆಯರಿಗೆ ಸಮಾಧಾನ ಪಡಿಸಿದ ಬಳಿಕ‌ ಚಾಲಕ ಬಸ್ ಚಾಲನೆ ಮಾಡಿದ್ದಾರೆ. ಡ್ರೈವರ್ ಸೀಟ್ ಬಳಿಯೇ ಮಹಿಳೆಯರು ಗಲಾಟೆ ಮಾಡುತ್ತಿದ ಕಾರಣ ಡ್ರೈವರ್ ಬಸ್ ನಿಲ್ಲಿಸಿದ್ದರಂತೆ. ಉಳಿದ ಪ್ರಯಾಣಿಕರು ಮನವಿ ಮಾಡಿದರೂ ಗಲಾಟೆ ಮುಂದುವರೆಸಿದ ಕಾರಣ ಬಸ್​ ನಿಲ್ಲಿಸಿ ಮಹಿಳೆಯರನ್ನು ಸಮಾಧಾನ ಮಾಡುವ ಕಾರ್ಯ ಮಾಡಿದ್ದರಂತೆ. ಇನ್ನು, ಬಸ್ ಸೀಟ್ ಗಲಾಟೆಯಿಂದಾಗಿ ಬಸ್ ನಿಲ್ಲಿಸಿದ ಪರಿಣಾಮ ಸ್ಥಳದಲ್ಲಿ ಸುಮಾರು ಸಮಯ ಟ್ರಾಫಿಕ್ ಜಾಮ್ ಆಗಿತ್ತು.

Categories
ತೀರ್ಥಹಳ್ಳಿ

ಶಿಕ್ಷಕರ ಕ್ಷೇತ್ರದ ಅಖಾಡಕ್ಕೆ ಅರುಣ್ ಹೊಸಕೊಪ್ಪ ಎಂಟ್ರಿ

ಶಿಕ್ಷಕರ ಕ್ಷೇತ್ರದ ಅಖಾಡಕ್ಕೆ ಅರುಣ್ ಹೊಸಕೊಪ್ಪ ಎಂಟ್ರಿ
– ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಘೋಷಣೆ
– ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನು ಆಯ್ಕೆ ಮಾಡಿ: ಡಾ.ಅರುಣ್ ಹೊಸಕೊಪ್ಪ

NAMMUR EXPRESS NEWS
ತೀರ್ಥಹಳ್ಳಿ: ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಗುರುವಾರ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಜೂನ್ 3 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ. ತೀರ್ಥಹಳ್ಳಿ ಮೂಲದ ಬರಹಗಾರ, ಉಪನ್ಯಾಸಕ ಡಾ.ಅರುಣ್ ಹೊಸಕೊಪ್ಪ ಈ ಬಾರಿ ಮತ್ತೆ ಶಿಕ್ಷಕರ ಪ್ರತಿನಿಧಿಯಾಗಲು ಸ್ಪರ್ಧೆ ಮಾಡಲಿದ್ದಾರೆ. ಕಳೆದ ಎರಡು ದಶಕಗಳಿಂದ ಶಿಕ್ಷಕರ ಹಾಗೂ ಉಪನ್ಯಾಸಕರ ಪರವಾಗಿ ರಾಜ್ಯ ಮಟ್ಟದಲ್ಲಿ ದನಿ ಎತ್ತುತ್ತಿರುವ ಡಾ.ಅರುಣ್ ಹೊಸಕೊಪ್ಪ ತೀರ್ಥಹಳ್ಳಿಯ ಅನ್ನಪೂರ್ಣ ಗ್ರಾಂಡ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮತ ಪ್ರಚಾರ ಶುರು ಮಾಡಿದ್ದಾರೆ.

2012 ಮತ್ತು 2018ರಲ್ಲಿ ಸ್ಪರ್ಧೆ, ಮತ ಹಾಕಿದವರಿಗೆ ಧನ್ಯವಾದ

ಪತ್ರಕರ್ತರ ಜತೆ ಮಾತನಾಡಿದ ಅರುಣ್ ಹೊಸಕೊಪ್ಪ ಅವರು, ನಾನು 2012 ಮತ್ತು 2018ರಲ್ಲಿ ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿ ಹೆಚ್ಚು ಮತಗಳನ್ನು ತೆಗೆದುಕೊಂಡರೂ ಕೂಡ ಗೆಲುವು ಸಾಧಿಸಲು ವಿಫಲನಾಗಿದ್ದೆ. ಈಗ ಮತ್ತೆ ಮತ್ತೊಂದು ಬಾರಿ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಎಲ್ಲ ಶಿಕ್ಷಕ ಮಿತ್ರರು ಇದೊಂದು ಸಾರಿ ನನಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಮಾಡಿದರು. ಸುಮಾರು 25 ಸಾವಿರ ಶಿಕ್ಷಕರು ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕನಾಗಿ ಕೆಲಸ ಮಾಡಿರುವಂತಹ ನನಗೆ ಒಂದು ಅವಕಾಶ ಕೊಡುತ್ತಾರೆ ಎಂದು ವಿಶ್ವಾಸವಿದೆ ಎಂದರು.

ಹಿಂದೆ ಗೆದ್ದವರು ಶಿಕ್ಷಕರೇ ಅಲ್ಲ…

ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಇದರ ವ್ಯಾಪ್ತಿಗೆ ಬರುತ್ತದೆ. ಹಿಂದಿನ ಚುನಾವಣೆಯಲ್ಲಿ ಗೆದ್ದಿರುವಂತಹ ಹಾಲಿ ಸದಸ್ಯರು ಅವರು ಶಿಕ್ಷಕರು ಅಲ್ಲದೆ ಹೋದರೂ ಕೂಡ, ಅವರು ಏನೋ ಒಂದು ಕೆಲಸ ಮಾಡುತ್ತಾರೆ ಎಂಬ ಆಲೋಚನೆಯಿಂದ ಶಿಕ್ಷಕರು ಅವರನ್ನು ಗೆಲ್ಲಿಸಿದ್ದರು, ಆದರೆ ಅವರು ಆರು ವರ್ಷದ ಅವಧಿಯಲ್ಲಿ ಶಿಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಯಾವುದೇ ರೀತಿಯ ಸ್ಪಂದನೆಯನ್ನು ಶಿಕ್ಷಕರಿಗೆ ಮಾಡದೇ ಇರುವ ಕಾರಣದಿಂದಾಗಿ ಈ ಬಾರಿ ನನಗೆ ಒಂದು ಅವಕಾಶವನ್ನು ಕೊಡುತ್ತಾರೆ ಎಂದರು.

ಶಿಕ್ಷಕರು ಇಲ್ಲಿ ಮತದಾನ ಮಾಡಲು ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಅವರು ಹೊಂದಿರಬೇಕು. ಈ ಬಾರಿ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಸಣ್ಣಪುಟ್ಟ ಸಮಸ್ಯೆಗಳು ಬಹಳ ಇದೆ. ಇದನ್ನೆಲ್ಲ ಬಗೆಹರಿಸುವ ಕಾರಣದಿಂದಾಗಿ ನನ್ನ ಬಲವಾದ ಉತ್ತರ ಶಿಕ್ಷಕರನ್ನು ಆಯ್ಕೆ ಮಾಡಿ ಎಂದು ಹೇಳಿದರು. ಈ ಶಿಕ್ಷಕರ ಕ್ಷೇತ್ರದಲ್ಲಿ ಇದುವರೆಗೆ ಈ ಆರು ಜಿಲ್ಲೆಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಒಂದೊಂದು ಅವಕಾಶ ಕೊಟ್ಟಿದ್ದು ರಾಜಕೀಯದ ಸೆಂಟರ್ ಶಿವಮೊಗ್ಗ ಜಿಲ್ಲೆಗೆ ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಯಾರೂ ಕೂಡ ಎಂಎಲ್ ಸಿ ಆಗಿಲ್ಲ. ಒಂದು ಬಾರಿ ನಮ್ಮ ಜಿಲ್ಲೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.

Categories
ತೀರ್ಥಹಳ್ಳಿ

ಜೆಸಿಐ ತೀರ್ಥಹಳ್ಳಿ, ಲಾಜಿಕ್ ಅಕಾಡೆಮಿ ಶಿಕ್ಷಣ ಸೇವೆ

ಜೆಸಿಐ ತೀರ್ಥಹಳ್ಳಿ, ಲಾಜಿಕ್ ಅಕಾಡೆಮಿ ಶಿಕ್ಷಣ ಸೇವೆ
– ಮೇ 9- ಮೇ12ರ ಎಸ್.ಎಸ್.ಎಲ್.ಸಿ. ಪಠ್ಯ ವಿಷಯಗಳ ಜಿಲ್ಲಾಮಟ್ಟದ ಕಾರ್ಯಾಗಾರ
– ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ತರಬೇತಿ

NAMMUR EXPRESS NEWS
ತೀರ್ಥಹಳ್ಳಿ: ಸದಾ ವಿಭಿನ್ನ ಚಟುವಟಿಕೆ, ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ಜೆಸಿಐ ತೀರ್ಥಹಳ್ಳಿ ಮತ್ತು ಲಾಜಿಕ್ ಅಕಾಡೆಮಿ (ರಿ) ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮೇ 9ರ ಬುಧವಾರದಿಂದ ಮೇ12ರ ತೀರ್ಥಹಳ್ಳಿಯ ಭಾನುವಾರದವರೆಗೆ ರಥ ಬೀದಿಯಲ್ಲಿರುವ ವಿದ್ಯಾಧಿರಾಜ ಸಭಾಭವನದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪಠ್ಯ ವಿಷಯಗಳ ಜಿಲ್ಲಾಮಟ್ಟದ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತ ಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳನ್ನು ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳು ಸರಳವಾಗಿ ಕಲಿಸಿಕೊಡಲಿದ್ದಾರೆ.

ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಅನುಕೂಲವಾಗುವ ಉಪಯುಕ್ತ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುವುದು. ಈ ಕಾರ್ಯಾಗಾರವು ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿ, ವಿದ್ಯಾರ್ಥಿಗಳು ಮೇ 6 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ಒಳಗಾಗಿ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿರುವ ಐಸಿರಿ ಪೆಟ್ರೋಲ್ ಬಂಕ್ ಮುಂಭಾಗದ ಆರಾಧನಾ ಶಾಲೆಯಲ್ಲಿರುವ ಲಾಜಿಕ್ ಅಕಾಡೆಮಿಯ ಕಚೇರಿಯಲ್ಲಿ ದಿನವೊಂದಕ್ಕೆ 400 ರೂಪಾಯಿಗಳಂತೆ ಪ್ರವೇಶ ಶುಲ್ಕ ನೀಡಿ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. ಪೋಷಕರು ಮತ್ತು ಶಿಕ್ಷಕರಿಗೆ ಉಚಿತ ಪ್ರವೇಶವಿರುತ್ತದೆ.

ವಿವರಗಳಿಗೆ ಸಂಪರ್ಕಿಸಿ 9591068483.

Categories
ತೀರ್ಥಹಳ್ಳಿ

17 ಸ್ಥಾನ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುತ್ತೆ..!

17 ಸ್ಥಾನ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುತ್ತೆ..!
– ಶಿವಮೊಗ್ಗದಲ್ಲಿ ಗೀತಾ ಪರ ಒಲವು: ಜಯಚಂದ್ರ
– ಮೋದಿಗೆ ಬಡವರ ಕಷ್ಟ ಗೊತ್ತಿಲ್ಲ
-ಪ್ರಜ್ವಲ್ ಅಂತವರೇ ಬಿಜೆಪಿ ಸ್ನೇಹಿತರು: ಇವರೆಂತಾ ದೇಶಕ್ಕೆ ಭದ್ರತೆ ಕೊಡ್ತಾರೆ?

NAMMUR EXPRESS NEWS
ತೀರ್ಥಹಳ್ಳಿ: ಶ್ರೀಮಂತರ ಪರ ಇರುವ ಬಿಜೆಪಿಯನ್ನು ತಿರಸ್ಕಾರ ಮಾಡಬೇಕು. ಬಡವರ ಪರವಾಗಿ ಇರುವ ಕಾಂಗ್ರೆಸ್ ಪಕ್ಷವನ್ನು ಪುರಸ್ಕಾರ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಇಂತಹ ಚರ್ಚೆ ಆಗಬೇಕು. 17ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಂಗಾರಪ್ಪ ಮರೆಯಲಾಗದ ನಾಯಕ. ಅವರ ಮಗಳು ಶಿವಮೊಗ್ಗದಲ್ಲಿ ಜನ ಗೆಲ್ಲಿಸುತ್ತಾರೆ ಎಂದು ಮಾಜಿ ಸಚಿವ, ಶಿರಾ ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣೆ ಸಂವಿಧಾನದ ಉಳಿವು ಅಳಿವು ಪ್ರಶ್ನೆ. ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಗೌರವ ಕೊಟ್ಟಿದೆ. ಆದರೆ ಬಿಜೆಪಿ ಯಾವುದೇ ಗೌರವ ಕೊಡುತ್ತಿಲ್ಲ. ದೇಶದಲ್ಲಿ ಭೀಕರ ಬರಗಾಲ ಬಂದಿದೆ. ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಅನುದಾನ ನೀಡಿಲ್ಲ. ಆದರೆ ರಾಜ್ಯದ ಬಗ್ಗೆ ಬಿಜೆಪಿಗೆ ಯಾವುದೇ ಗೌರವ ಇಲ್ಲ.ರೈತರು, ಬಡವರ ಬಗ್ಗೆ ಕನಿಕರ ಇಲ್ಲದ ಕೇಂದ್ರ ಬಿಜೆಪಿ ನಾಯಕರ ನಡೆ ನಿಜಕ್ಕೂ ರಾಜ್ಯಕ್ಕೆ ಮಾಡಿದ ಅನ್ಯಾಯ. ನಮ್ಮ ಬಿಜೆಪಿ ಸಂಸದರು ಯಾವುದೇ ದನಿ ಎತ್ತಿಲ್ಲ. ಇದರಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದರು.

ಸತ್ಯ ಹರಿಶ್ಚಂದ್ರ ವಂಶ ಅನ್ನುವ ಬಿಜೆಪಿಗರು ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ. ಪಿಎಂ ಕೇರ್ ಫಂಡ್ ಇಂದ ಲಕ್ಷ ಲಕ್ಷ ಕೋಟಿ ಹಣ ಕೊಳ್ಳೆ ಹೊಡೆದಿದ್ದಾರೆ. ಇದರಿಂದ ಚುನಾವಣೆ ಗೆ ಹಣ ಹಂಚುತ್ತಿದ್ದಾರೆ. ಶಿವಮೊಗ್ಗ ಅಭ್ಯರ್ಥಿ ರಾಘವೇಂದ್ರ ಅವರು ಯಾವುದೇ ಬಡವರ ಪರವಾಗಿ, ಇಲ್ಲಿನ ರೈತರ ಪರ ದನಿ ಎತ್ತಿಲ್ಲ. ರೈತರ, ಬರದ ಹಣ ಕೊಡಿ ಎಂದು ರಾಜ್ಯ ಸುಪ್ರೀಂ ಕೋರ್ಟ್ ಮುಂದೆ ಹೋದರೂ ಕೇಂದ್ರ ತಲೆ ಕೆಡಿಸಿಕೊಂಡಿಲ್ಲ ಎಂದರು. ಭಾರತದಲ್ಲಿ ಅತೀ ಹೆಚ್ಚು ಟ್ಯಾಕ್ಸ್ 4 ಲಕ್ಷ 36 ಸಾವಿರ ಕೋಟಿ ಹಣ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ ಅಲ್ಲಿಂದ ನಮಗೆ ಏನೂ ಬರುತ್ತಿಲ್ಲ. ಜಿಎಸ್ಟಿ ಹಣ ಕೂಡ ಕೊಡುತ್ತಿಲ್ಲ. ಗುಜರಾತ್, ರಾಜಸ್ತಾನ್ ರಾಜ್ಯಗಳಿಗೆ ಕರ್ನಾಟಕದ ಹಣ ಕೊಡುತ್ತಿದ್ದಾರೆ. ನಮ್ಮ ಹಣಕ್ಕಾಗಿ ನಮ್ಮ ಹೋರಾಟ ತಪ್ಪಾ?.

ಬಿಜೆಪಿಯ ಯಾವ ಪ್ರಣಾಳಿಕೆ ಜನರ ಪರವಾಗಿದೆ ಹೇಳಿ? ಪ್ರಪಂಚದ ದೊಡ್ಡ ಶಕ್ತಿ ಆಗುತ್ತೆ ಅನ್ನೋ ಸುಳ್ಳು ಹೇಳಿದ್ದಾರೆ. ಗುಜರಾತ್ 25 ಉದ್ಯಮಿಗಳ ಶಕ್ತಿ ಇಟ್ಟುಕೊಂಡು ಹೇಳುತ್ತಿದ್ದಾರೆ. ಅವರಿಗೆ ಜನರ ಬದುಕು ಬೇಡ, ದೇಶದ ಸುರಕ್ಷತೆ ಬೇಡ, ಎಲ್ಲವೂ ನಾವು ಕಳೆದುಕೊಳ್ಳುತ್ತಿದ್ದೇವೆ. ಅದಾನಿ, ಅಂಬಾನಿ ಆಸ್ತಿ ಅಭಿವೃದ್ಧಿ ಆಗಿದೆ ಅಷ್ಟೇ ಎಂದರು. ದೇಶದಲ್ಲಿ ಬಿಜೆಪಿ ವಿರುದ್ಧ ಮಾತನಾಡುವ ನಾಯಕರನ್ನು ಎಲ್ಲರನ್ನು ಜೈಲಿಗೆ ಕಳುಹಿಸುವ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದೆ. ಗದ್ದುಗೆ ಇಳಿದು ನ್ಯಾಯ ರೀತಿಯಲ್ಲಿ ಚುನಾವಣೆ ಮಾಡಲಿ ಎಂದರು.

ಮೋದಿ ಸರ್ಕಾರ ಒಂದೇ ಒಂದು ಒಳ್ಳೆ ಯೋಜನೆ ಕೊಟ್ಟಿಲ್ಲ!

ಬಡವರ ಬದುಕಿಗೆ ಬೇಕಾದ ಯೋಜನೆಯನ್ನು ಕೊಟ್ಟಿದ್ದೇವೆ. 5 ಗ್ಯಾರಂಟಿ ಕೋಟಿ ಕೋಟಿ ಜನರಿಗೆ ತಲುಪುತ್ತಿವೆ. ಆದರೆ ಮೋದಿ ಸರ್ಕಾರದ ಒಂದೇ ಒಂದು ಯೋಜನೆ ಜನರಿಗೆ ತಲುಪಲಿಲ್ಲ. ಬರೀ ಭಾಷಣ, ಕೋಮು ದ್ವೇಷದ ಮೂಲಕ ರಾಜಕಾರಣ ಮಾಡುತ್ತಾರೆ. ಜನರ ಬದುಕು, ಅಭಿವೃದ್ಧಿ ಎರಡು ಮುಖ್ಯ ಎಂದು ಜಯಚಂದ್ರ ಹೇಳಿದರು.

ಪ್ರಜ್ವಲ್ ಬಿಜೆಪಿ ಸ್ನೇಹಿತರು: ಇವರೆಂತಾ ದೇಶಕ್ಕೆ ಭದ್ರತೆ ಕೊಡ್ತಾರೆ..!

ಬಿಜೆಪಿ, ಜೆಡಿಎಸ್ ಪ್ರಜ್ವಲ್ ಅಂತ ವ್ಯಕ್ತಿಯನ್ನು ಪಕ್ಷದಲ್ಲಿಟ್ಟುಕೊಂಡು ಇಡೀ ದೇಶದಲ್ಲಿ ಇಷ್ಟು ಹೆಣ್ಣು ಮಕ್ಕಳ ಅನ್ಯಾಯ, ಇವರಿಗೆ ಗೊತ್ತಿಲ್ವಾ? ಕಾವೇರಿ ವಿವಾದದಲ್ಲಿ ರಾಜ್ಯದ ಪರವಾಗಿ ನರೇಂದ್ರ ಮೋದಿ ಮಾತನಾಡಲ್ಲ. ರಾಜ್ಯ ರಾಜ್ಯದ ನಡುವೆ ಸಂಬಂಧ ಅವರಿಗೆ ಬೇಡ ಎಂದರು.

ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ತಿಪಟೂರು ಶಾಸಕರಾದ ಷಡಕ್ಷರಿ, ಕಡಿದಾಳ್ ದಿವಾಕರ್, ಗೀತಾ ರಮೇಶ್, ಕೆಸ್ತೂರು ಮಂಜುನಾಥ್, ಅಮರನಾಥ್ ಶೆಟ್ಟಿ, ಸುಶೀಲಾ ಶೆಟ್ಟಿ, ವಿಲಿಯಮ್ ಮಾರ್ಟೀಸ್, ಅಶ್ವಲ್, ಸಂದೀಪ್ ಕುಡುಮಲ್ಲಿಗೆ, ಶ್ರೇಯಸ್ ರಾವ್, ಆಸೀಫ್ ಸೀಬಿನಕೆರೆ ಇತರರು ಇದ್ದರು

ಸ್ಟಾರ್ಟ್ ಅಪ್ ಸಹಾಯ ಮಾಡಿಲ್ಲ ಮೋದಿ!

ಬೆಂಗಳೂರಲ್ಲಿ 6500 ಸ್ಟಾರ್ಟ್ ಅಪ್ ಇಂದು ವಿದೇಶ ಅಥವಾ ಕಾಪೋರೇಟ್ ಕಂಪನಿಗಳಿಗೆ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಸಹಾಯ ಮಾಡಿದ್ರೆ ನಾವು ವಿಶ್ವದಲ್ಲೇ ನಂಬರ್ 1 ಆಗ್ತಿದ್ದವು. ಬೆಂಗಳೂರು ಪ್ರಪಂಚದಲ್ಲೇ ನಂಬರ್ 2 ಇದೆ. ಆದರೆ ಕೇಂದ್ರ ಹಾಗೂ ಬಿಜೆಪಿ ಸ್ಟಾರ್ಟ್ ಅಪ್, ಸಣ್ಣ ಉದ್ಯಮಗಳಿಗೆ ಬೆಳೆಸಿದರೆ ಇವತ್ತು ಪ್ರಪಂಚದ ನಂಬರ್ 1 ನಾವು ಆಗುತ್ತಿದ್ದವು ಎಂದರು.

Categories
ತೀರ್ಥಹಳ್ಳಿ ಮಲ್ನಾಡ್

ಮತದಾನ ಬಹಿಷ್ಕಾರ ಹಿಂಪಡೆದ ಜನ!

ಮತದಾನ ಬಹಿಷ್ಕಾರ ಹಿಂಪಡೆದ ಜನ!
– ಉಳುಮಡಿ ಗ್ರಾಮಸ್ಥರ ಮನವೊಲಿಸಿದ ಆರಗ
– ಇನ್ನು ಹಲವೆಡೆ ಬಹಿಷ್ಕಾರ: ಏನಾಗುತ್ತೆ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಪಂಚಾಯತ್ ಉಳುಮಡಿ ಗ್ರಾಮಸ್ಥರು ಮೂಲಬೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ತೀರ್ಮಾನ ಮಾಡಿದ್ದರು. ವಿಷಯ ತಿಳಿದ ಶಾಸಕರು ಶುಕ್ರವಾರ ಬೆಳಗ್ಗೆ 8 ರ ಸುಮಾರಿಗೆ ಉಳುಮಡಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಮತದಾನದ ಅನಿವಾರ್ಯತೆ ತಿಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿ ಗ್ರಾಮಸ್ಥರನ್ನು ಮತದಾನ ಮಾಡಲು ವಿನಂತಿಸಿದರು. ಗ್ರಾಮಸ್ಥರು ಪೂರಕವಾಗಿ ಸ್ಪಂದಿಸಿ ಮತದಾನ ಮಾಡುವ ತೀರ್ಮಾನ ತೆಗೆದುಕೊಂಡರು. ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡಗಿನಮಕ್ಕಿ, ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿ ಸೇರಿ ಅನೇಕ ಕಡೆ ಕೂಡ ಬಹಿಷ್ಕಾರ ಹಾಕಿದ್ದು ಶಾಸಕರು ಮನವೊಲಿಸುವ ಸಾಧ್ಯತೆ ಇದೆ.

Categories
inspiration ತೀರ್ಥಹಳ್ಳಿ ಪ್ರತಿಭೆಗಳು ಬೆಂಗಳೂರು ಮಲ್ನಾಡ್ ರಾಜ್ಯ ಸಿನಿಮಾ

ರಕ್ಷಿತ್ ತೀರ್ಥಹಳ್ಳಿ ಅವರಿಗೆ ರಾಷ್ಟ್ರ ಮಟ್ಟದ ಗೌರವ!

ರಕ್ಷಿತ್ ತೀರ್ಥಹಳ್ಳಿ ಅವರಿಗೆ ರಾಷ್ಟ್ರ ಮಟ್ಟದ ಗೌರವ!
– ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ
– ಮಲೆನಾಡ ಅನೇಕ ಕಲಾವಿದರ ನಟನೆ

NAMMUR EXPRESS NEWS
ಬೆಂಗಳೂರು: ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಹದಿನಾಲ್ಕನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ Honorable Jury Mention Award ದೊರೆತಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರ ತಂಡ ಪ್ರಶಸ್ತಿ ಸ್ವೀಕರಿಸಿತು. ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಬರೆದ ‘ಕಾಡಿನ ನೆಂಟರು’ ಪುಸ್ತಕ ಆಧರಿಸಿದ ಕಥೆ ತಿಮ್ಮನ ಮೊಟ್ಟೆಗಳು (Timmana Mottegalu) . ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಮಾಸ್ಟರ್ ಹರ್ಷ, ರಾಮಣ್ಣ ರಘು ರಾಮನಕೊಪ್ಪ ಸೇರಿದಂತೆ ಹಲವಾರು ನಟರು ತಾರಾಗಣದಲ್ಲಿ ಇದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಳಿಂಗ ಸರ್ಪದ ಬಗ್ಗೆ ವಿಶೇಷ ಮಾಹಿತಿ ಕೂಡ ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ