Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಮಂಗಳೂರು : ಮನೆಯ ಮೇಲೆ ಸಿಸಿಬಿ ದಾಳಿ
– ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
– ಉಪ್ಪಿನಂಗಡಿ: ಮಗು ಸಹಿತ ಮಹಿಳೆ ನಾಪತ್ತೆ
– ಉಡುಪಿ: ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ.!
– ಬೆಳ್ತಂಗಡಿ: ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ

NAMMUR EXPRESS NEWS
ಮಂಗಳೂರು : ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಕೋಟೆಕಾ‌ರ್ ಬೀರಿ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮೊಹಮ್ಮದ್ ಇಶಾನ್ (35), ಜಾಫರ್ ಸಾಧಿಕ್ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿಗಳಿಂದ 9,00,000/- ರೂ ಮೌಲ್ಯದ 407 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 16,13,800/- ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳಲ್ಲಿ ಜಾಫರ್ ಸಾದಿಕ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಗಾಂಜಾ ಮಾರಾಟ, ಹಲ್ಲೆ ಹಾಗೂ ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಕುಶಾಲ ನಗರ ಠಾಣೆಯಲ್ಲಿ ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 09 ಪ್ರಕರಣಗಳು ದಾಖಲಾಗಿರುತ್ತವೆ. ಮೊಹಮ್ಮದ್ ಇಶಾನ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ MDMA ಮಾರಾಟ ಪ್ರಕರಣ ದಾಖಲಾಗಿರುತ್ತದೆ.

– ಉಪ್ಪಿನಂಗಡಿ: ಮಗು ಸಹಿತ ಮಹಿಳೆ ನಾಪತ್ತೆ

ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಕಟ್ಟೆ ಮಜಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್ ಎಂಬವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ಎಂಬಿಬ್ಬರು ನಾಪತ್ತೆಯಾಗಿ ರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಟಿರಿಯರ್ ಡೆಕೊರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋನು ಸೋಂಕರ್ ಉತ್ತರ ಪ್ರದೇಶದ ಅಜಾಮ್ ಘರ್ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬವರ ಬಾಡಿಗೆ ಮನೆಯಲ್ಲಿ ಕುಟುಂಬ ದೊಂದಿಗೆ ವಾಸವಿದ್ದರು. ಸೋನು ಸೋಂಕರ್ ಎ.22 ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದು ವಾಪಸ್ಸು ಸಂಜೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು.

ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಮನೆಯಲ್ಲಿ ಪತ್ನಿ ರೀಮಾ ಸೋಂಕರ್ ಮತ್ತು 1 ವರ್ಷ ಪ್ರಾಯದ ಮಗು ರಿಯಾ ಮನೆಯಲ್ಲಿ ಇಲ್ಲದೇ ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ ನೆಲದಲ್ಲಿ ಬಿದ್ದುಕೊಂಡಿತ್ತು. ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ರೀಮಾಳ ಬಗ್ಗೆ ವಿಚಾರಿಸಿ ದಾಗ ಅವಳು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಮಗುವಿನೊಂದಿಗೆ ಹೋಗುವುದನ್ನು ಕಂಡಿರುವುದಾಗಿ ತಿಳಿಸಿದ್ದು ನಂತರ ಎಲ್ಲಾ ಕಡೆ ಹುಡುಕಿದರು ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ವಿಳಂಬಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ನಾಪತ್ತೆಯಾಗಿರುವ ತಾಯಿ ಮಗುವಿನ ಬಗ್ಗೆ ಯಾರಿಗಾರದರೂ ಸುಳಿವು ಸಿಕ್ಕಲ್ಲಿ ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.

– ಉಡುಪಿ: ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ.!

ಉಡುಪಿ : ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದ ಬಾಲಕನೊಬ್ಬ ಸಮುದ್ರಪಾಲಾಗುತ್ತಿದ್ದ ವೇಳೆ ಲೈಫ್ ಗಾರ್ಡ್ ಬಾಲಕನ ರಕ್ಷಣೆ ಮಾಡಿದ ಘಟನೆ ನಿನ್ನೆ ನಡೆದಿದೆ. ಕುಟುಂಬದೊಂದಿಗೆ ಬಂದಿದ್ದ ಚಿಕ್ಕಬಳ್ಳಾಪುರ ಮೂಲದ ಶ್ರೇಯಸ್ (12), ನೀರಿನಲ್ಲಿ ಆಟವಾಡಲು ಸಮುದ್ರಕ್ಕಿಳಿದಿದ್ದ. ಈ ವೇಳೆ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತ ಮಲ್ಪೆ ಲೈಫ್ ಗಾರ್ಡ್ ಸಿಬ್ಬಂದಿಗಳು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಬಾಲಕ ಕುಟುಂಬದವರೊಂದಿಗೆ ತೆರಳಿದಿದ್ದಾನೆ. ಈ ಕುರಿತು ಮಲ್ಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಬೆಳ್ತಂಗಡಿ: ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ

ಬೆಳ್ತಂಗಡಿ: ತಂಡವೊಂದು ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆಂಜ ಗ್ರಾಮದ ನಿವಾಸಿ ಸೇಸಮ್ಮ ಎಂಬವರ ಮನೆಯಲ್ಲಿ ಎ.30ರಂದು ರಾತ್ರಿ ಪೂಜಾ ಕಾರ್ಯ ನಡೆಯುತ್ತಿದ್ದ ಸಂದರ್ಭ ಅವರ ಸಂಬಂಧಿಕರೇ ಆದ ಯೋಗೀಶ್, ಆನಂದ ಬೀಜದಡಿ, ಶೇಖ‌ರ್, ಆನಂದ ಕುಲಾಡಿ, ಅಣ್ಣು ಗೌಡ, ಹರೀಶ್ ಹಾಗೂ ಇತರರು ಮನೆ ಬಳಿ ಬಂದು ಸೇಸಮ್ಮ ಅವರ ಮಗ ಹರೀಶ್ ನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದಾರೆ. ಇದಾದ ಬಳಿಕ ಯೋಗೀಶ್ ಎಂಬಾತ ಬಂದು ಹರೀಶ್ ಹಾಗೂ ದೀಕ್ಷಿತ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಇದನ್ನು ನೋಡಿ ತಡೆಯಲು ಹೋದ ಸೇಸಮ್ಮ ಅವರನ್ನು ಆರೋಪಿಗಳು ಸೇರಿ ದೂಡಿ ಹಾಕಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 28/2024, ಕ್ರ : 448,504, 323,506 3 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Categories
ಕರಾವಳಿ

ಕರಾವಳಿ ಟಾಪ್ 5 ನ್ಯೂಸ್..!

ಕರಾವಳಿ ಟಾಪ್ 5 ನ್ಯೂಸ್..!
– ವಿವಿ ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ: ವಿದ್ಯಾರ್ಥಿಗಳ ಪ್ರತಿಭಟನೆ!
– ಎಂಡಿಎಂಎ ಮಾರಾಟ – ಇಬ್ಬರು ಅರೆಸ್ಟ್.!
– ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ!
– ಕಾರ್ಕಳ: ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ.!
– ಹಿರ್ಗಾನ: ಕೀಟನಾಶಕ ಸೇವಿಸಿ ವ್ಯಕ್ತಿ ಸಾವು!

NAMMUR EXPRESS NEWS
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬುಧವಾರ ರಾತ್ರಿ ಉಪಕುಲಪತಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ವಿಸಿ ನಿವಾಸದ ಮುಂದೆ ಹಳಸಿದ ಅಕ್ಕಿ ಇರುವ ಪಾತ್ರೆಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.ಕೆಲ ಸಮಯದಿಂದ ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಅಡುಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಬೆಂಗಳೂರಿಗೆ ಬಂದಿದ್ದ ವಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಎಂಡಿಎಂಎ ಮಾರಾಟ – ಇಬ್ಬರು ಅರೆಸ್ಟ್.!

ಮಂಗಳೂರು : ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ಮೊಹಮ್ಮದ್ ಇಶಾನ್ (35), ಜಾಫ‌ರ್ ಸಾಧಿಕ್ (35) ಎಂದು ಗುರುತಿಸಲಾಗಿದೆ. ಆರೋಪಿಗಳು ದಿನಾಂಕ 01-05-2024 ರಂದು ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್‌ ಪ್ರಮಾಣದಲ್ಲಿ ಅಕ್ರಮವಾಗಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ಆರೋಪಿತರು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000/- ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ!

ಕಾರ್ಕಳ: ಟಿಪ್ಪರ್‌ ಚಾಲಕ ಟಿಪ್ಪರನ್ನು ಮುನ್ಸೂಚನೆ ನೀಡದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್‌ ಸ್ಕೂಟರ್‌ ಮೇಲೆ ಚಲಿಸಿ ಸ್ಕೂಟರ್‌ ಜಖಂಗೊಂಡ ಘಟನೆ ಮುಲ್ಲಡ್ಕ ಗ್ರಾಮದಲ್ಲಿ ನಡೆದಿದೆ. ಸೋಮನಾಥ ಮುಂಡ್ಕೂರು ಅವರು ಸ್ಕೂಟರ್‌ ಅನ್ನು ಸಂಕಲಕರಿಯ ಕಡೆಯಿಂದ ಮುಲ್ಲಡ್ಕದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಅದೇ ದಾರಿಯಲ್ಲಿ ಮುಂಡ್ಕೂರಿನಿಂದ ಮುಲ್ಲಡ್ಕ ಕಡೆಗೆ ಟಿಪ್ಪರ್‌ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ.!

ಕಾರ್ಕಳ: ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಆರೋಪದಲ್ಲಿ ನಿಟ್ಟೆ ಸೆವೆರಿನ್‌ ಡಿ ಸೋಜಾ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ಲೋರಿನ್‌ ಸಲ್ದಾನ ಅವರು ತಮ್ಮ ಮನೆಯ ಶೌಚಾಲಯ ಗುಂಡಿಯನ್ನು ಜೆಸಿಬಿ ಮೂಲಕ ಮುಚ್ಚುತಿದ್ದಾಗ ಸೆವೆರಿನ್‌ ಡಿ ಸೋಜಾ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ನಡೆದಿರುವ ಹಲ್ಲೆಯಿಂದ ಫ್ಲೋರಿನ್‌ ಸಲ್ದಾನ ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರ್ಗಾನ: ಕೀಟನಾಶಕ ಸೇವಿಸಿ ಸಾವು!

ಕಾರ್ಕಳ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿರ್ಗಾನ ನಿವಾಸಿ ಧರ್ಣಪ್ಪ (61) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಿಂದ ಅವರ ಕೈಗೆ ಗಾಯವಾಗಿತ್ತು. ಆಗಾಗ್ಗೆ ನೋವು ಬರುತ್ತಿದ್ದುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ನೊಂದು ಅವರು ಎ.24ರಂದು ಕೀಟನಾಶಕ ಸೇವಿಸಿದ್ದರು. ಬಳಿಕ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಎ.28ರಂದು ಮೃತಪಟ್ಟರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಟಾಪ್ ನ್ಯೂಸ್

ಟಾಪ್ ನ್ಯೂಸ್
ಈಶ್ವರಪ್ಪ ಚುನಾವಣ ಕಚೇರಿ ಮುಂದೆ ಮಾಟ ಮಂತ್ರ!
– ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳವು
– ಭದ್ರಾವತಿ: ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪ 14 ಮಹಿಳೆಯರ ವಿರುದ್ಧ ಪ್ರಕರಣ ದಾಖಲು
– ಹೊಸನಗರ : ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ಅಕ್ರಮದ ಶಂಕೆ

NAMMUR EXPRESS NEWS
ಶಿಕಾರಿಪುರ : ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈ‍ಶ್ವರಪ್ಪ ಅವರ ಶಿಕಾರಿಪುರದ ಚುನಾವಣ ಕಚೇರಿ ಮುಂದೆ ವಾಮಾಚಾರ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರಭಕ್ತರ ಬಳಗದ ಶಿಕಾರಿಪುರ ಕಚೇರಿಯ ಬಾಗಿಲಿನ ಮುಂದೆ ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿ ಹಲವು ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ವಾಮಾಚಾರ ಮಾಡಿಸಲಾಗಿದೆ ಎಂದು ಈಶ್ವರಪ್ಪ ಅವರು ವಾಟ್ಸಪ್‌ ಮೂಲಕ ಮಾಧ್ಯಮಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.‌

– ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳವು

ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳ್ಳತನವಾಗಿದೆ. ಕಸ್ತೂರ ಬಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಕಾರಿಪುರ ತಾಲೂಕು ತಾಳಗುಂದದ ಸಿಂಚನಾ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಅಂದಾಜು 44 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಸರ ಕಳುವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏ.18 ಮತ್ತು 19ರಂದು ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಸಿಂಚನಾ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೊಠಡಿಯೊಳಗೆ ಸರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ತನ್ನ ಕೊರಳಲ್ಲಿದ್ದ ಚಿನ್ನದ ಸರ ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದಳು. ಎಲ್ಲ ವಿದ್ಯಾರ್ಥಿಗಳು ಬ್ಯಾಗ್‌ ಇಟ್ಟಿದ್ದ ಸ್ಥಳದಲ್ಲೇ ತನ್ನ ಬ್ಯಾಗ್‌ ಇಟ್ಟಿದ್ದಳು. ಏ.19 ರಂದು ಪರೀಕ್ಷೆ ಮುಗಿಸಿ ಬಂದು ಬ್ಯಾಗಿನಲ್ಲಿ ಪರಿಶೀಲಿಸಿದಾಗ ಚಿನ್ನದ ಸರವಿರಲಿಲ್ಲ. ಪೋಷಕರಿಗೆ ವಿಷಯ ತಿಳಿಸಿ ತಡವಾಗಿ ದೂರು ನೀಡಿದ್ದಾರೆ.

– ಭದ್ರಾವತಿ: ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪ 14 ಮಹಿಳೆಯರ ವಿರುದ್ಧ ಪ್ರಕರಣ ದಾಖಲು

ಭದ್ರಾವತಿ : ದಾನವಾಡಿಯಲ್ಲಿ ಎಂಪಿಎಂಗೆ ಗುತ್ತಿಗೆ ನೀಡಿರುವ ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪದ ಹಿನ್ನೆಲೆ 14 ಮಹಿಳೆಯರ ವಿರುದ್ಧ ಭದ್ರಾವತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಏ.26ರಂದು ಮರ ಕಡಿಯುತ್ತಿರುವ ಶಬ್ದ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಮಹಿಳೆಯರು ಅಕ್ರಮವಾಗಿ ಮರ ಕಡಿಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆಯರು ಮರ ಕಡಿ ತಲೆ ಮಾಡಿದ್ದರಿಂದ ಸರ್ಕಾರಕ್ಕೆ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು, ಮಹಿಳೆಯರ ವಿರುದ್ಧ ಸಹಾಯಕ ಅರಣ್ಯಾಧಿಕಾರಿ ಕೃಷ್ಣ ಹನುಮಂತಪ್ಪ ಸಾರಥಿ ಎಂಬುವವರು ದೂರು ನೀಡಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹೊಸನಗರ : ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ಅಕ್ರಮದ ಶಂಕೆ

ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ ನಿವಾಸಿ, ಆರ್‌ಟಿಐ ಕಾರ್ಯಕರ್ತ ಹರೀಶ್ ಆಚಾರ್ ಆರೋಪಿಸಿದ್ದಾರೆ. ಅವರು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದು, ರಾಮಗಿರಿಯಿಂದ ಇತ್ತೀಚೆಗೆ ಸಾಗುವಾನಿ ಹಾಗೂ ಕಾಡುಜಾತಿಯ ಮರಗಳನ್ನು ಹೊಸನಗರದ ವುಡ್ ಇಂಡಸ್ಟ್ರೀಸ್ ಮೂಲಕ ಕೊಂಡುಕೊಂಡಿರುವುದಾಗಿ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಅದೇ ಪರವಾನಗಿಯಲ್ಲಿ ನಾಟಾವನ್ನು ಕುಂದಾಪುರಕ್ಕೆ ಸಾಗಿಸಲಾಗಿದೆ. ಒಂದೇ ಪರವಾನಗಿಯಲ್ಲಿ ಎರಡು ಕಡೆಗಳಿಗೆ ಹೇಗೆ ನಾಟಾ ಸಾಗಿಸಲು ಅನುಮತಿ ನೀಡಲಾಗಿದೆ?. ಕುಂದಾಪುರಕ್ಕೆ ಸಾಗಿಸಿದ ನಾಟಾ ಪರವಾನಗಿ ಇಲ್ಲದೇ ಮತ್ತೆ ಪುಣಜೆ ಗ್ರಾಮಕ್ಕೆ ಬಂದದ್ದು ಹೇಗೆ? ಎನ್ನುವುದು ತಿಳಿಯುತ್ತಿಲ್ಲ. ಅಲ್ಲದೇ ಕಟ್ಟಡದಲ್ಲಿ ಬಳಸಿರುವ ನಾಟಾದ ಅಳತೆಗೂ ಪರವಾನಗಿಯಲ್ಲಿ ತೋರಿಸಿರುವ ಅಳತೆಗೂ ತಾಳೆಯಾಗುತ್ತಿಲ್ಲ. ಪರವಾನಗಿಯಲ್ಲಿ ಕಾಡುಜಾತಿಯ ಮರಗಳು ಎಂದು ತೋರಿಸಲಾಗಿದೆ. ಆದರೆ ಇಲ್ಲಿ ಬೆಲೆಬಾಳುವ ಮತ್ತಿ, ನಂದಿ, ಹೊನ್ನೆ ಜಾತಿಯ ನಾಟಾ ಬಳಸಲಾಗಿದೆ. ಇದರಲ್ಲಿ ಅಕ್ರಮ ನಡೆದಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಯುತ್ತಿದೆ. ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆಯಿದೆ. ಕೂಡಲೇ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Categories
ಕರಾವಳಿ ಮಂಗಳೂರು

ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ
– ಪಾತ್ರ ನಿರ್ವಹಣೆ ಮುಗಿಸಿ ವೇಷ ಕಳಚುವಾಗ ಹೃದಯಾಘಾತ
– ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆ

NAMMUR EXPRESS NEWS
ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(60) ಅವರು ರಂಗಸ್ಥಳದಲ್ಲಿ ತನ್ನ ಪಾತ್ರ ನಿರ್ವಹಣೆ ಮುಗಿಸಿ ವೇಷ ಕಳಚುವ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ಬುಧವಾರ ರಾತ್ರಿ ನಡೆದಿದೆ. ತೆಂಕು ತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಮೇಳ ಎಂದೇ ಜನಜನಿತವಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಕಳೆದ 42 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದ ಅವರು ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ಅಪರೂಪದ ಕಲಾವಿದ. ಬುಧವಾರ ರಾತ್ರಿ ಕೋಟ ಗಾಂಧಿ ಮೈದಾನದಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರ ಮಹಾತ್ಮೇೆಯ ಕುಕ್ಕಿತ್ತಾಯ ದೈವದ ಪಾತ್ರ ನಿರ್ವಹಿಸಿ, ಚೌಕಿಗೆ ಮರಳಿ ವೇಷ ಕಳಚಿಟ್ಟು ಮುಖವರ್ಣಿಕೆಯನ್ನು ತೆಗೆಯುವ ವೇಳೆ ತೀವ್ರ ಹೃದಯಾಘಾತದಿಂದ ನಿಧನರಾದರು. ಚೌಕಿಯಲ್ಲಿ ಮಂಗಳ ಪದ ಆಗುತ್ತಿದ್ದ ವೇಳೆಗೆ ಈ ಘಟನೆ ನಡೆದಿದೆ. ಅವರಿಗೆ ಪತ್ನಿ ಕುಶಾಲಾಕ್ಷಿ, ಪುತ್ರ ಜ್ಞಾನೇಶ್, ಬಂಧು ಬಳಗ, ಅಪಾರ ಅಭಿಮಾನಿಗಳು ಇದ್ದಾರೆ. ಸವ್ಯಸಾಚಿ ಕಲಾವಿದರಾಗಿದ್ದ ಅವರ ಅಕಾಲಿಕ ಮತ್ತು ಅನಿರೀಕ್ಷಿತ ಸಾವಿಗೆ ಯಕ್ಷಗಾನ ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗೆ ಪುತ್ರನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ 1981ರಲ್ಲಿ ತರಬೇತಿ ಪಡೆದು ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾದರು. ಬಾಲಗೋಪಾಲ ವೇಷದಿಂದ ಹಿಡಿದು ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದರು. ಗಂಗಾಧರ ಪುತ್ತೂರು ಅವರು ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಪ್ರಧಾನ ಭಾಗವತರು ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದವರು. ಒಂದು ದಿನದಲ್ಲಿ ಎಷ್ಟು ವೇಷಗಳನ್ನೂ ಮಾಡಬಲ್ಲರು. ಯಾವ ವೇಷವನ್ನೂ ಮಾಡಬಲ್ಲವರಾಗಿದ್ದರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ. ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸಬಲ್ಲ ಸಾಮರ್ಥ್ಯ ಅವರಲ್ಲಿತ್ತು. ಹಿರಿಯ ಕಲಾವಿದನಾದರೂ ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಅವರು.

– ಎಲ್ಲ ರೀತಿಯ ಪಾತ್ರ ನಿರ್ವಹಣೆ

ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯಲ್ಲಿ ಕುಂಬಳೆ ಸುಂದರ ರಾಯಯ ಗೋವಿಂದ ದೀಕ್ಷಿತ ಪಾತ್ರಕ್ಕೆ ಇವರ ಮಾಲತಿ ಪಾತ್ರ ಬಹಳ ಹೆಸರುವಾಸಿಯಾಗಿತ್ತು. ಅಲ್ಲದೆ ಅನೇಕ ಸ್ತ್ರೀಪಾತ್ರಗಳಲ್ಲಿ ಇವರು ಮಿಂಚಿದರು. ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿದ ಇವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಕರಗತವಾಗಿದೆ. ದೆಹಲಿ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುದಾಭಿ ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 26 ವರ್ಷ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಅವರು ನಿರಂತರ ವಹಿಸಿರುತ್ತಾರೆ. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಧರ್ಮಸ್ಥಳ ಮೇಳದ ಯಜಮಾನರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿದ್ದಾರೆ.

Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಭೆಗಳಿಗೆ ಸುವರ್ಣ ಅವಕಾಶ

ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಭೆಗಳಿಗೆ ಸುವರ್ಣ ಅವಕಾಶ
– ಕೋಡ್ಲು ರಾಮಕೃಷ್ಣ ಅವರ ಅನ್ವೇಷಣೆ” ಚಿತ್ರ ಸಂಸ್ಥೆಯಿಂದ ತೀರ್ಥಹಳ್ಳಿ ಮೂಲದ ಸಿನಿಮಾ ಮಾಡಲು ಮೊದಲ ಹೆಜ್ಜೆ
– ತೀರ್ಥಹಳ್ಳಿಯ ಕಲಾವಿದರು,ತಂತ್ರಜ್ಞರು, ಕಥೆಗಾರರಿಗೆ ಅವಕಾಶ: ಕಥೆ ನೀವೂ ಕಳುಹಿಸಬಹುದು

NAMMUR EXPRESS NEWS
ತೀರ್ಥಹಳ್ಳಿ ತಾಲ್ಲೂಕು ಕರ್ನಾಟಕ ರಾಜ್ಯದ ಜನಮಾನಸದಲ್ಲಿ ವಿಶೇಷ ಸ್ಥಾನಗಳಿಸಿದ ಪ್ರದೇಶವಾಗಿದೆ. ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ, ಸಾಂಸ್ಕೃ ತಿಕ ಕ್ಷೇತ್ರಕ್ಕೆ, ಸಹಕಾರಿ ಕ್ಷೇತ್ರಕ್ಕೆ ಹಾಗೂ ಸಾಹಿತ್ಯ ಮತ್ತು ಇತರ ಕಲಾ ರಂಗಗಳಿಗೆ ಇಲ್ಲಿನ ಜನ ನೀಡಿದ ಕೊಡುಗೆ ಅಪಾರ. ಕನ್ನಡಿಗರು ಹೆಚ್ಚು ಸಂವೇದನಾಶೀಲರೂ, ವೈಚಾರಿಕವಾಗಿ ಜಾಗೃತರೂ ಆಗಿರುವುದಕ್ಕೆ ಈ ತಾಲ್ಲೂಕಿನ ಕಾಣಿಕೆ ಅಸಾಧಾರಣ. ಈ ಸಾಧನೆಗಳನ್ನು ದೃಶ್ಯ ಮತ್ತು ಶ್ರವ್ಯ ಮಾಧ್ಯಮವಾದ ಸಿನಿಮಾದಲ್ಲಿ ಮುದ್ರಿಸಿಡುವ ಅಗತ್ಯ ಮನಗಂಡ ಸಮಾನ ಮನಸ್ಕರು ಹುಟ್ಟು ಹಾಕಿದ ವೇದಿಕೆಯೇ “ಅನ್ವೇಷಣೆ” ಚಿತ್ರ ಸಂಸ್ಥೆ, ಈ ದಿಕ್ಕಿನಲ್ಲಿಟ್ಟ ಮೊದಲ ಹೆಜ್ಜೆಯೇ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಭೆಗಳನ್ನೇ ಬಳಸಿ ಕೊಂಡು ಮೊದಲ ಚಿತ್ರ ಮಾಡುವ ಪ್ರಯತ್ನ. ಈ ಚಿತ್ರದ ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ಗಾಯಕ- ಗಾಯಕಿಯರು, ಸಂಗೀತ ನಿರ್ದೇಶಕರು ಎಲ್ಲರೂ ತೀರ್ಥಹಳ್ಳಿ ತಾಲ್ಲೂಕಿನವರೇ ಆಗಿರಬೇಕೆಂಬುದು ಈ ಸಂಸ್ಥೆಯ ಉದ್ದೇಶ.

ಕಥೆ ನೀವೂ ಕಳುಹಿಸಬಹುದು!

ತೀರ್ಥಹಳ್ಳಿ ತಾಲ್ಲೂಕು ಮಲೆನಾಡಿನ ಸಾಮಾಜಿಕ ಸಮಸ್ಯೆಗಳಿರುವ ಮತ್ತು ಕಥಾ ವಸ್ತು ವಿಷಯಕ್ಕಾಗಿ ಹುಡುಕಾಟ ನಡೆದಿದೆ. ಮಲೆನಾಡಿಗರ ಅನುದಿನದ ಜೀವನ ಕ್ರಮ, ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಅಲ್ಲಿನ ಜನರಲ್ಲಿರುವ ತೆರೆದ ಮನಸ್ಸು, ಆಹ್ಲಾದಕರ ಪರಿಸರ- ಇವುಗಳ ಬಗ್ಗೆ ಅಥವಾ ಇವುಗಳ ಮೇಲೆ ಆಗುತ್ತಿರುವ ಪ್ರಹಾರದ ಬಗ್ಗೆ ಆದ್ಯತೆ ಇರುವ ಯಾವುದಾದರೂ ಪ್ರಕಟಿತ ಅಥವಾ ಅಪ್ರಕಟಿತ ಕತೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಈ ಮೂಲಕ ಕೋರುತ್ತೇವೆ. ಅದು ಖ್ಯಾತ ಸಾಹಿತಿಗಳ ಕತೆಗಳಾಗಿರಬಹುದು ಅಥವಾ ಉದಯೋನ್ಮುಖ ಲೇಖಕರ ಕೃತಿಯೂ ಆಗಿರಬಹುದು. ಅಥವಾ ಹೊಸ ಮಾದರಿಯ ಆಲೋಚನೆ ಆಗಿರಬಹುದು. ಆದರೆ ಅದು ತೀರ್ಥಹಳ್ಳಿಗೆ ಸಂಬಂಧಿಸಿದ್ದಾಗಿರಬೇಕು. ಈ ಕೆಳಗೆ ಸೂಚಿಸಿದ ಈಮೈಲ್ ಕೊಂಡಿಗೆ ಆ ಕಥೆ ಮತ್ತು ಅದರ ಲೇಖಕ / ಕಿರು ಹೆಸರನ್ನು ತಿಳಿಸಿ, ಒಂದು ವೇಳೆ ಆ ಕೃತಿಯ PDF ಪ್ರತಿ ನಿಮ್ಮ ಬಳಿ ಇದ್ದರೆ ದಯವಿಟ್ಟುಈ ಮೈಲ್ ಮಾಡಿ, ನಮ್ಮ ಇಮೈಲ್ : anveshanees@gmail.com.

Categories
ಶಿಕ್ಷಣ

ಈಗ ಶಾಲಾ ಕಾಲೇಜು ಪ್ರವೇಶದ ಸಮಯ

ಈಗ ಶಾಲಾ ಕಾಲೇಜು ಪ್ರವೇಶದ ಸಮಯ
– ಜೂನ್ 1ರಿಂದ ಶಾಲೆಗಳು ಪ್ರಾರಂಭ
– ಮೇ 8ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ?
– ಕಾಲೇಜು, ಶಾಲೆ ಪ್ರವೇಶಕ್ಕೆ ಕ್ಯೂ!

NAMMUR EXPRESS NEWS
ಶಾಲಾ ಕಾಲೇಜುಗಳಿಗೆ ಈಗಾಗಲೇ ಬೇಸಿಗೆ ರಜಾ ಆರಂಭವಾಗಿದೆ ಆದರೆ ಯಾವಾಗಿನಿಂದ ಶಾಲೆ, ಕಾಲೇಜು ಮತ್ತೆ ಆರಂಭವಾಗುತ್ತದೆ ಎಂಬ ಕುತೂಹಲ ಹಲವಾರು ವಿದ್ಯಾರ್ಥಿಗಳಲ್ಲಿದೆ.ಈಗಾಗಲೇ ಹಲವೆಡೆ ಶಾಲಾ, ಕಾಲೇಜು, ಇತರೆ ಕೋರ್ಸ್ ಅಡ್ಮಿಷನ್ ಪ್ರಾರಂಭವಾಗಿದೆ. ಪದವಿಪೂರ್ಶ ಶಿಕ್ಷಣ ಇಲಾಖೆಯಿಂದ 2023- 24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಈಗ ಮತ್ತೆ ಪರಿಷ್ಕರಿಸಿದ ವೇಳಾಪಟ್ಟಿಯನ್ನು ಬಿಡಗಡೆ ಮಾಡಲಾಗಿದೆ. ಹೊಸದಾಗಿ ಈಗ ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ ಮತ್ತೆ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜೂನ್ 1, 2023ರಿಂದ ಶಾಲೆಗಳು ಆರಂಭಗೊಳ್ಳಲಿದೆ. ಪ್ರಥಮ ಪಿಯುಸಿಗೆ ಮೇ.22ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಬಂಧ ಪರಿಷ್ಕೃತ ಸುತ್ತೋಲೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಿಸಿದ್ದಾರೆ. ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಹಿತದೃಷ್ಠಿಯಿಂದ ಪರಿಷ್ಕೃತ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗಿದೆ ಇದರ ಪ್ರಕಾರ ಜೂನ್ 1 ರಿಂದ ಆರಂಭವಾಗಲಿದೆ. ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯಂತೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಯನ್ನು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಅಡ್ಮಿಷನ್‌ ಆರಂಭವಾದ ತಕ್ಷಣ ಹೀಗೆ ಮಾಡಿ:

ವಿದ್ಯಾರ್ಥಿಗಳಿಗೆ ಇದರ ಅನುಸಾರವೇ ತರಗತಿಗಳು ಆರಂಭವಾಗಲಿದೆ ಮಧ್ಯಂತರ ರಜೆ ದೊರೆಯಲಿದೆ. ನೀವು ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆದು ಕಾಲೇಜು ಮೆಟ್ಟಿಲು ಹತ್ತುವ ತವಕದಲ್ಲಿದ್ದರೆ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಲಿದೆ. ಅಡ್ಮಿಷನ್‌ಗೆ ಬೇಕಾದ ದಾಖಲಾತಿಗಳು ಮತ್ತು ನಿಮ್ಮ ಹಳೆಯ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಂಡಿರಿ ನಂತರ ಆದಷ್ಟು ಬೇಗ ನಿಮಗೆ ಯಾವ ಕಾಲೇಜಿನಲ್ಲಿ ಸೀಟ್‌ ಬೇಕು ಎಂದಿದೆಯೋ ಅಲ್ಲಿ ಅಡ್ಮಿಷನ್ ಮಾಡಿಸಿ. ಈ ಬಾರಿ ಹೊಸ ಶಿಕ್ಷಣ ನೀತಿ ಚೌಕಟ್ಟಿನಲ್ಲಿ ಹೊಸ ನಿಯಮ ಬಿಡುಗಡೆಯಾಗಿರುವುದು ನಿಮಗೆಲ್ಲಾ ತಿಳಿದೇ ಇದೆ. ಇನ್ಮುಂದೆ ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮಿಷ್ಟದ ಕೋರ್ಸ್ ಮಾಡಹುದು. ಯಾವ ವಿಷಯವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗಿರುತ್ತದೆ.

Categories
ಕೃಷಿ ಚಿಕ್ಕಮಗಳೂರು ಮಲ್ನಾಡ್

ಸಾರ್ವಕಾಲಿಕ ದಾಖಲೆ ಬೆಲೆಯತ್ತ ಕಾಫಿ!

ಸಾರ್ವಕಾಲಿಕ ದಾಖಲೆ ಬೆಲೆಯತ್ತ ಕಾಫಿ!
– ರೈತರು ಖುಷ್… ಇನ್ನು ದರ ಹೆಚ್ಚಳ ಸಾಧ್ಯತೆ ?
– ಬರದ ನಡುವೆ ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿ
– ಫಸಲು ಕಡಿಮೆ: ಒಣಗುತ್ತಿರುವ ಕಾಫಿ ಗಿಡಗಳು!

NAMMUR EXPRESS NEWS
ಚಿಕ್ಕಮಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ರೊಬಸ್ಟಾ ಕಾಫಿಗೆ ಶುಕ್ರದೆಸೆ ಶುರುವಾಗಿದೆ. ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದು, ರಾಜ್ಯದ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ವರ್ಷದ ಕಾಫಿ ಬೆಲೆ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ. ಇನ್ನು ಮುಂದೆ ಕೂಡ ಕಾಫಿ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

ವ್ಯಾಪಾರಿಗಳಿಗೆ ಬಂಪರ್ ಲಾಭ.!

ಈ ವರ್ಷ ಬೆಳೆಗಾರರಿಂದ ಫೆಬ್ರವರಿ ಆರಂಭದಲ್ಲಿ 6,000 ರೂ.ನಿಂದ 7,000 ರೂ.ಗೆ ಕಾಫಿ ಖರೀದಿಸಿದ ಮಾರಾಟಗಾರರು ಈಗ 10,000 ರೂ.ನಿಂದ 11,000 ರೂ.ಗೆ ಮಾರಾಟ ಮಾಡುತ್ತಿದ್ದು, ಬಂಪರ್ ಲಾಭ ಗಳಿಸುತ್ತಿದ್ದಾರೆ. ಇದರ ಜತೆ ಬೆಲೆ ಏರಿಕೆ ಆಗಿರುವುದರಿಂದ ಕಾರ್ಮಿಕರು ಸಂಬಳ ಹೆಚ್ಚಿಸಿಕೊಂಡಿದ್ದು, ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.

ಭಾರತಕ್ಕೆ ನಾಲ್ಕನೇ ಸ್ಥಾನ:

ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ವಿಯೆಟ್ನಾಂ ಶೇ 42, ಬ್ರೆಜಿಲ್ ಶೇ 24ರಷ್ಟು ಕಾಫಿ ರಫ್ತು ಮಾಡುತ್ತಿವೆ. ಇಂಡೋನೇಷ್ಯಾ, ಭಾರತ, ಉಗಾಂಡ, ಮಲೇಶಿಯಾ, ಐವರಿ ಕೋಸ್ಟ್ ಥೈಲ್ಯಾಂಡ್, ತಾಂಜೇನಿಯ ನಂತರದ ಸ್ಥಾನದಲ್ಲಿವೆ. ವಿಶ್ವದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ನಾಲ್ಕನೇ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಬ್ರೆಜಿಲ್ ಕಾಫಿಗೂ ಭಾರತೀಯ ಕಾಫಿಗೂ ಯಾವುದೇ ಸಂಬಂಧ ಇಲ್ಲ, ಬ್ರೆಜಿಲ್‌ನಲ್ಲಿ ಅರೆಬಿಕಾ ಕಾಫಿ ಮಾತ್ರ ಬೆಳೆಯಲಾಗುತ್ತಿದ್ದು ಹೆಚ್ಚಾಗಿ ಅಮೆರಿಕ ಮಾರುಕಟ್ಟೆಯನ್ನು ಅವಲಂಬಿಸಿದೆ. ಇದರಿಂದ ಭಾರತೀಯ ಕಾಫಿ ಬೆಳೆಗೆ ಯಾವುದೇ ತೊಂದರೆ ಇಲ್ಲ.

ಫಸಲು ಕಡಿಮೆ: ಒಣಗುತ್ತಿರುವ ಕಾಫಿ ಗಿಡಗಳು!

ಕಾಫಿ ಗಿಡಗಳಿಗೆ ನೀರು ಇಲ್ಲದೆ ಚಿಕ್ಕಮಗಳೂರು, ಹಾಸನ, ಕರಾವಳಿ, ಶಿವಮೊಗ್ಗ ಸೇರಿ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಬೆಳೆ ಒಣಗುತ್ತಿದೆ. ಇದರಿಂದ ಫಸಲು ಕೂಡ ಕಡಿಮೆ ಇದೆ.

Categories
ಜಾತಕ

ರಾಶಿ ಭವಿಷ್ಯ ಹೇಗಿದೆ?

ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?
– ಮೇ ತಿಂಗಳ 2 ರಂದು ನಿಮಗೇನು ಒಳ್ಳೆಯದು?

NAMMUR EXPRESS NEWS
2024 ಮೇ 02ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ…?

** ಮೇಷ :
ವೃತ್ತಿಪರ ವ್ಯವಹಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತೀರಿ. ನಿರೀಕ್ಷಿಸಿದಷ್ಟು ಆದಾಯ ದೊರೆಯುವುದಿಲ್ಲ. ಬಂಧು ಮಿತ್ರರೊಂದಿಗೆ ಹಠಾತ್ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ತೊಂದರೆಗಳು ಉಂಟಾಗುತ್ತವೆ. ಉದ್ಯೋಗದ ವಾತಾವರಣವು ಸ್ವಲ್ಪ ಗೊಂದಲಮಯವಾಗಿರುತ್ತದೆ.

** ವೃಷಭ ರಾಶಿ :
ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತವೆ. ವ್ಯಾಪಾರಗಳು ವಿಸ್ತರಿಸಿ ಹೊಸ ಲಾಭವನ್ನು ಪಡೆಯುತ್ತೀರಿ. ಮನೆಯ ಹೊರಗೆ ಹೊಸ ವಿಷಯಗಳು ತಿಳಿದು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ. ಆರ್ಥಿಕ ಪ್ರಗತಿ ಉಂಟಾಗುತ್ತದೆ.

** ಮಿಥುನ ರಾಶಿ :
ಕೈಗೆತ್ತಿಕೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಕುಟುಂಬ ಸದಸ್ಯರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹಗಳನ್ನು ಸ್ವೀಕರಿಸುತ್ತೀರಿ. ಉದ್ಯೋಗಿಗಳು ನಿರೀಕ್ಷಿಸಿದ ಫಲಿತಾಂಶಗಳನ್ನು ಪಡೆಯುತ್ತಾರೆ.

** ಕಟಕ ರಾಶಿ :
ಹಠಾತ್ ಪ್ರಯಾಣವನ್ನು ಮಾಡಬೇಕಾಗುತ್ತದೆ. ವೃತ್ತಿಪರ ವ್ಯವಹಾರವು ನಿಧಾನವಾಗಿ ಸಾಗುತ್ತವೆ. ಹಣಕಾಸಿನ ವ್ಯವಹಾರಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ ಮತ್ತು ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದವಿರುತ್ತದೆ.

** ಸಿಂಹ ರಾಶಿ :
ದೂರ ಪ್ರಯಾಣಗಳನ್ನು ಮುಂದೂಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಮಂದಗತಿಯಲ್ಲಿ ಇರುತ್ತದೆ. ಸಂಗಾತಿಯೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತೀರಿ. ಪ್ರಮುಖ ಕೆಲಸಗಳಲ್ಲಿ ಅಡಚಣೆಗಳು ಉಂಟಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಹಣದ ಸಮಸ್ಯೆಗಳಿರುತ್ತವೆ.

** ಕನ್ಯಾ ರಾಶಿ :
ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಪ್ರಮುಖ ವಿಚಾರಗಳನ್ನು ಚರ್ಚಿಸುತ್ತೀರಿ. ಅವರು ಸಂಬಂಧಿಕರೊಂದಿಗೆ ಮನೆಯಲ್ಲಿ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಮಕ್ಕಳು ಹೊಸ ಶೈಕ್ಷಣಿಕ ಅವಕಾಶಗಳನ್ನು ಪಡೆಯುತ್ತೀರಿ. ವ್ಯಾಪಾರ ಉದ್ಯೋಗಗಳು ತೃಪ್ತಿಕರವಾಗಿರುತ್ತದೆ. ಆದಾಯ ಮತ್ತಷ್ಟು ಹೆಚ್ಚಾಗುತ್ತದೆ.

** ತುಲಾ ರಾಶಿ :
ಪ್ರಮುಖ ವಿಷಯಗಳಲ್ಲಿ ಆತ್ಮೀಯರ ಸಲಹೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಭೂಮಿ ಖರೀದಿ ಪ್ರಯತ್ನ ಫಲ ನೀಡುತ್ತವೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಪರಿಸ್ಥಿತಿ ಹೆಚ್ಚು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಸಿಗುತ್ತದೆ.

** ವೃಶ್ಚಿಕ ರಾಶಿ :
ಮನೆಯ ಹೊರಗಿನ ಸಮಸ್ಯೆಗಳು ಹೆಚ್ಚಾಗುತ್ತವೆ. ವೃತ್ತಿ ಮತ್ತು ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ದೂರದ ಪ್ರಯಾಣದ ಸೂಚನೆಗಳಿವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕಾರ್ಯಕ್ರಮಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ.

** ಧನುಸ್ಸು ರಾಶಿ :
ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಾದ ವಿವಾದಗಳು ಉಂಟಾಗುತ್ತವೆ. ಪ್ರಮುಖ ಕಾರ್ಯಗಳಲ್ಲಿ ಸ್ಥಿರತ್ವ ಇಲ್ಲದ ಆಲೋಚನೆಗಳಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಹೆಚ್ಚಿನ ಶ್ರಮದಿಂದ ಸ್ವಲ್ಪ ಫಲಿತಾಂಶ ದೊರೆಯುತ್ತದೆ.

** ಮಕರ ರಾಶಿ :
ಮನೆಯಲ್ಲಿ ಶುಭಕಾರ್ಯದ ವಾತಾವರಣವಿರುತ್ತದೆ. ಹಣಕಾಸಿನ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಕೈಗೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಭೂ ವಿವಾದಗಳು ಉದ್ಭವಿಸುತ್ತವೆ. ಭೂಮಿ ಸಂಬಂಧಿತ ಮಾರಾಟದಲ್ಲಿ ಹೊಸ ಲಾಭ ದೊರೆಯುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ವೇಗಗೊಳ್ಳುತ್ತವೆ.

** ಕುಂಭ ರಾಶಿ :
ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದ ಮುಖ್ಯಸ್ಥರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳು ಕಿರಿಕಿರಿಗಳು ಹೆಚ್ಚಾಗುತ್ತವೆ.

** ಮೀನ ರಾಶಿ :
ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳೊಂದಿಗಿನ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗಿರುತ್ತದೆ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಖರ್ಚು ಹೆಚ್ಚಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಒತ್ತಡವನ್ನು ನಿವಾರಿಸಿ ಮತ್ತು ಲಾಭವನ್ನು ಪಡೆಯುತ್ತೀರಿ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ರೈತರಿಂದ ಚುನಾವಣೆ ಬಹಿಷ್ಕಾರ!

ತೀರ್ಥಹಳ್ಳಿಯಲ್ಲಿ ರೈತರಿಂದ ಚುನಾವಣೆ ಬಹಿಷ್ಕಾರ!
– ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕತೆ ವಿರೋಧಿಸಿ ಸ್ವಘೋಷಿತ ನಿರ್ಧಾರ
– ತೀರ್ಥಹಳ್ಳಿ ತಾಲೂಕಿನ ಹಲವೆಡೆ ಮತ ಬಹಿಷ್ಕಾರ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಇದೀಗ ಮೂಲ ಸೌಲಭ್ಯ ಅವ್ಯವಸ್ಥೆ ಖಂಡಿಸಿ ಜನತೆ ಮತ ಬಹಿಷ್ಕಾರ ಮಾಡಲಾಗುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ರಾಷ್ಟ್ರೀಯ ಜಲ ಜೀವನ್ ಮಿಷನ್ ಅಡಿಯಲ್ಲಿ ಉದ್ದೇಶಿಸಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ ಕೇಂದ್ರೀಕೃತ ಹಾಗೂ ಜನ ವಿರೋಧಿ ಮತ್ತು ಪ್ರಕೃತಿ ವಿರೋಧಿ ಯೋಜನೆ ಆಗಿದೆ. ಇದನ್ನು ವಿರೋಧಿಸಿ ತುಂಗಾ ನದಿ ಮತ್ತು ಮಾಲತಿ ನದಿ ದಡಗಳ ರೈತರು, ಸಾರ್ವಜನಿಕರು ಕಳೆದ ಎಂಟು

ಪ್ರತಿಭಟನೆ ನಡೆಸಿ ಸರ್ಕಾರಗಳ ಗಮನವನ್ನು ಹಲವು ರೀತಿಯಲ್ಲಿ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಈ ಯೋಜನೆಯ ಕಾಮಗಾರಿ ನಡೆಸಲು ಸರ್ಕಾರಗಳು ಜನತಂತ್ರ ವಿರೋಧಿ ಮಾರ್ಗ ಹಿಡಿದು ಶಸ್ತ್ರಸಜ್ಜಿತ ಪೋಲೀಸರನ್ನು ನೇಮಿಸಿ ಜನರ ಮೇಲೆ ದಬ್ಬಾಳಿಕೆ ನಡೆಸಿವೆ. ಇದನ್ನು ವಿರೋಧಿಸಿ ಸ್ಥಳೀಯ ಜನತೆ ಕಳೆದ ಒಂದು ತಿಂಗಳ ಕಾಲ ಆ ಸ್ಥಳದಲ್ಲೇ ಧರಣಿ ಸತ್ಯಾಗ್ರಹದ ನಿರಶನದಲ್ಲಿ ನಿರತರಾಗಿದ್ದರೂ ಸರ್ಕಾರಗಳು ಚಳವಳಿಯನ್ನು ನಿರ್ಲಕ್ಷ್ಯದಿಂದ ನೋಡಿವೆ. ಇದರ ವಿರುದ್ಧದ ಪ್ರತಿಭಟನೆಯ ಇನ್ನೊಂದು ಮಾರ್ಗವಾಗಿ ನಾನು/ನನ್ನ ಕುಟುಂಬ 2024 ರ ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂಬ ನನ್ನ/ನಮ್ಮ ನಿರ್ಧಾರವನ್ನು ಈ ಮೂಲಕ ಘೋಷಿಸುತ್ತೇನೆ/ಘೋಷಿಸುತ್ತೇವೆ.

Categories
ತೀರ್ಥಹಳ್ಳಿ

ಇನ್ನೋವಾ-ಇಕೋ ಕಾರು ನಡುವೆ ಅಪಘಾತಕ್ಕೆ ಮಹಿಳೆ ಸಾವು!

ಇನ್ನೋವಾ-ಇಕೋ ಕಾರು ನಡುವೆ ಅಪಘಾತಕ್ಕೆ ಮಹಿಳೆ ಸಾವು!
– ಮಂಗಳೂರು ಆಸ್ಪತ್ರೆ ಹೋಗುವ ವೇಳೆ ನಡೆದ ದುರಂತ
– ಕಾರು ಮೂರು ಪಲ್ಟಿಯಾಗಿ ಮಹಿಳೆ ಸ್ಥಳದಲ್ಲೇ ದುರ್ಮರಣ

NAMMUR EXPRESS NEWS
ತೀರ್ಥಹಳ್ಳಿ: ಇನ್ನೋವಾ ಮತ್ತು ಇಕೋ ಕಾರುಗಳ ನಡುವೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನು ಕಂಡಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆಯಲ್ಲಿ ನಡೆದಿದೆ. ಮೃತರು ಅಕ್ಕಿ ಆಲೂರು ರಾಣಿಬೆನ್ನೂರು ಮೂಲದ ಸಂಶದ್ ಭಾನು (50) ಎನ್ನಲಾಗಿದೆ. ಮೂವರು ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಎಲ್ಲರೂ ಮಂಗಳೂರು ಆಸ್ಪತ್ರೆ ಹೋಗುವವರು ಎನ್ನಲಾಗಿದೆ. ಕುಡುಮಲ್ಲಿಗೆ ಮಿಲ್ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಕಾರು 3 ಪಲ್ಟಿಯಾಗಿ ಸಾವನ್ನು ಕಂಡಿದ್ದಾರೆ ಎಂದು ಹೇಳಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.