Categories
ಚಿತ್ರದುರ್ಗ ಜಿಲ್ಲಾ ವಾರ್ತೆ ರಾಜಕೀಯ

ಹೊಸದುರ್ಗದಲ್ಲಿ ಬಿಜೆಪಿ ವಿಜಯೋತ್ಸವ!

ಹೊಸದುರ್ಗದಲ್ಲಿ ಬಿಜೆಪಿ ವಿಜಯೋತ್ಸವ!

– ದೇಶದ ಸುಭದ್ರತೆಗೆ ಮೋದಿ ಆಡಳಿತ ಅನಿವಾರ್ಯ: ಬಿಜೆಪಿ ಮುಖಂಡ ಸದ್ಗುರು ಪ್ರದೀಪ್
– ಗೋವಿಂದ್ ಎಂ ಕಾರಜೋಳ ಗೆಲುವಿಗೆ ಸಂಭ್ರಮ

NAMMUR EXPRESS NEWS
ಹೊಸದುರ್ಗ: ಹೊಸದುರ್ಗದಲ್ಲಿ ಬಿಜೆಪಿ ವಿಜಯೋತ್ಸವ ಸಂಭ್ರಮದಿಂದ ನಡೆಯಿತು.
ಚಿತ್ರದುರ್ಗ ನೂತನ ಸಂಸದ ರಾಗಿ ಗೋವಿಂದ್ ಎಂ ಕಾರಜೋಳ ಗೆಲುವಿಗೆ ಕ್ಷೇತ್ರದಲ್ಲಿ ಎಲ್ಲೆಡೆ ಸಂಭ್ರಮ ವ್ಯಕ್ತವಾಗಿದೆ.

ದೇಶದ ಭದ್ರತೆ ಹಾಗೂ ನರೇಂದ್ರ ಮೋದಿ ಅವರ ಸುಭದ್ರ ಆಡಳಿತಕ್ಕೆ ಮತ್ತೊಮ್ಮೆ ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಬಸವಣ್ಣನವರ ನಾಡಿನಿಂದ ಬಂದಿರುವ ಗೋವಿಂದ್ ಎಂ ಕಾರಜೋಳ ಅವರು ಕಲ್ಲಿನಕೋಟೆ ಚಿತ್ರದುರ್ಗದ ಜನರು ಹಾಗೂ ಕಾರ್ಯಕರ್ತರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಉದ್ಯಮಿ ಪ್ರದೀಪ್ ಡಿ.ಎಸ್. ಸಂತಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಗೋವಿಂದ್ ಎಂ.ಕಾರಜೋಳ ಅವರು ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಟಿ.ಬಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಪಟ್ಟಣದ ಟಿ.ಬಿ. ವೃತ್ತದಿಂದ ಮದಕರಿ ವೃತ್ತದವರೆಗೂ ಮೆರವಣಿಗೆ ನಡೆಸಿ ಅವರು ಮಾತನಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿಗೆ ಈ ನಿಟ್ಟಿನ ಬೆಂಬಲವನ್ನು ನೀಡಿರುವುದು ಚಿತ್ರದುರ್ಗ.

ಲೋಕಸಭಾ ಕ್ಷೇತ್ರದ ಮತದಾರರ ಪ್ರಬುದ್ಧತೆಯನ್ನು ಮೆರೆದಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನ ಕೆಲಸವೇ ಈ ಗೆಲುವಿಗೆ ಕಾರಣ. ನರೇಂದ್ರ ಮೋದಿ ಹಾಗೂ ಸಜ್ಜನ ವ್ಯಕ್ತಿತ್ವದ ಗೋವಿಂದ ಕಾರಜೋಳರವರ ವ್ಯಕ್ತಿತ್ವವನ್ನು ಮೆಚ್ಚಿ ಈ ಬಾರಿ ಹೊಸದುರ್ಗದ ಮತದಾರ ಅತ್ಯಂತ ಹೆಚ್ಚು ಮತ ಹಾಕುವುದರ ಮೂಲಕ ಸಹಕರಿಸಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಎಸ್.ಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಿಹಟ್ಟಿ ಕೃಷ್ಣಮೂರ್ತಿ, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಗಣೇಶ್‌ ಮೂರ್ತಿ, ಪುರಸಭಾ ಸದಸ್ಯರುಗಳಾದ ಶ್ರೀನಿವಾಸ್, ದಾಳಿಂಬೆ ಗಿರೀಶ್, ಕೆ. ಎಲ್ ನಾಗರಾಜ್, ಸರೋಜಮ್ಮ, ಮೀನಾಕ್ಷಿ ನಂದೀಶ್, ಪಾರ್ವತಮ್ಮ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಂಪ, ಬಿಜೆಪಿ ಉಪಾಧ್ಯಕ್ಷ ಲಿಂಗದೇವರು ಸಾ,ಚ ಮಂಜಯ್ಯ, ಬಿಜೆಪಿ ಮುಖಂಡರುಗಳಾದ ಆರ್ ಹನುಮಂತಪ್ಪ, ಜಿ.ಎನ್.ಕೆರೆ ಎಸ್. ಶಿವಪ್ರಸಾದ್, ನರೇಂದ್ರ, ಮದುರೆ ಪ್ರವೀಣ್, ರವಿಕಿರಣ್ ಪಾಟೀಲ್, ಸಿದ್ದೇಶ್, ವಿರುಪಾಕ್ಷಪ್ಪ, ಮಾವಿನಕಟ್ಟೆ ಮಲ್ಲಿಕಾರ್ಜುನ್ ಸೇರಿದಂತೆ ಕಾರ್ಯಕರ್ತರಿದ್ದರು.

Categories
ಚಿಕ್ಕಮಗಳೂರು ಜಿಲ್ಲಾ ವಾರ್ತೆ ರಾಜಕೀಯ

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಟಾಪ್ ನ್ಯೂಸ್

ಶ್ರೀನಿವಾಸ್ ಪೂಜಾರಿ 100 ಕೋಟಿ ಅವ್ಯವಹಾರ: ಆರೋಪ
– ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್‌ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖ‌ರ್ ಆರೋಪ
– ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ!

NAMMUR EXPRESS NEWS
ಚಿಕ್ಕಮಗಳೂರು: ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖ‌ರ್ ಅವರು ಕೋಟ ಶ್ರೀನಿವಾಸ್‌ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ನೂತನ ಸಂಸದರಾದ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಲಾಗಿದೆ. ಪ್ರಕರಣ ಸಂಬಂಧ ಇಬ್ಬರ ಕೊಲೆ ಆಗಿದೆ ಎಂದು ಗೂಳಿಹಟ್ಟಿ ಶೇಖ‌ರ್ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ಬೇಡ, ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಕೋಟ ಶ್ರೀನಿವಾಸ್‌ ಪೂಜಾರಿಯಂಥ ಪ್ರಾಮಾಣಿಕರು ದೇಶದಲ್ಲಿಲ್ಲ. ಈಗ 50-60 ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್‌ಟಿ ನಿಗಮ, ಬೋವಿ ನಿಗಮ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಬಿಎಸ್ ಯಡಿಯೂರಪ್ಪ ಕೇಸ್ ತನಿಖೆ ಮಾಡದೆ ಯಾಕೆ ಮುಚ್ಚಿ ಹಾಕಿದ್ರಿ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ. ಪ್ರಜ್ವಲ್ ಕೇಸ್ ಮಾತ್ರ ತನಿಖೆ ಮಾಡ್ತೀರಾ ಎಂದು ಶೇಖರ್ ಕಿಡಿಕಾರಿದ್ದಾರೆ.

ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ : 28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ವಶಕ್ಕೆ:

ಚಿಕ್ಕಮಗಳೂರು : ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಆತನಿಂದ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಹಾಸನ ನಗರದ ರಿಯಾಝ್ ಖಾನ್ (54) ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬಂಧಿತನಿಂದ 350 ಗ್ರಾಂ.ಚಿನ್ನಾಭರಣ, 1ಕೆ.ಜಿ.788 ಗ್ರಾಂ. ಬೆಳ್ಳಿಯ ಆಭರಣ ಹಾಗೂ 4ಕೆ.ಜಿ ಕಂಚಿನ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ನಗರ ಠಾಣಾ ವ್ಯಾಪ್ತಿಯ ಕೋಟೆ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಮನೆಗೆ ಬೀಗಹಾಕಿ ಬೇರೆ ಕಡೆಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಮನೆಯ ಹಿಂಬಾಗಿಲು ಮುರಿದು ಲಾಕರ್ ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿ ರಿಯಾಝ್ ಖಾನ್‍ನನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆ ಕಳ್ಳತನದ ಆರೋಪಿ ರಿಯಾಝ್ ಖಾನ್ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ 12 ಪ್ರಕರಣ, ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣ ಸೇರಿದಂತೆ ಒಟ್ಟು 17 ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

Categories
ಅಪಘಾತ ಕಾರ್ಕಳ ಜಿಲ್ಲಾ ವಾರ್ತೆ

ಪುತ್ತೂರು: ಮರದಿಂದ ಬಿದ್ದು ವ್ಯಕ್ತಿ ಮೃತ್ಯು..!

ಪುತ್ತೂರು: ಮರದಿಂದ ಬಿದ್ದು ವ್ಯಕ್ತಿ ಮೃತ್ಯು..!
– ಕಾರ್ಕಳ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!

ಮಣಿಪಾಲ: ಅಕ್ರಮ ಮದ್ಯ ಮಾರಾಟ
– ಆರೋಪಿಗಳಿಬ್ಬರು ಅರೆಸ್ಟ್..!

NAMMUR EXPRESS NEWS
ಪುತ್ತೂರು: ಮರ ಕಡಿಯುವ ವೇಳೆ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಮೂಲತಃ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ಪ್ರಸ್ತುತ ಕೂರ್ನಡ್ಕದಲ್ಲಿ ವಾಸವಿರುವ ಖಲಂದರ್ ಎಂದು ಗುರುತಿಸಲಾಗಿದೆ. ಮಡಿಕೇರಿಯ ತೋಟವೊಂದರಲ್ಲಿ ಮರ ಕೆಡಿಯಲೆಂದು ಹೋದವರು ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

– ಕಾರ್ಕಳ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!

ಕಾರ್ಕಳ: ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿ ಕಾರ್ಕಳದ ನಲ್ಲೂರು ಗ್ರಾಮದ ಸುರೇಶ್ ಎಂದು ಗುರುತಿಸಲಾಗಿದೆ. ಇವರು ಮೇ.25 ರಂದು ಎಲ್ಲಿಗಾದರೂ ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಇದುವರೆಗೆ ವಾಪಸ್ಸು ಮನೆಗೆ ಬಾರದೆ ಸಂಬಂದಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ನಾಪತ್ತೆಯಾಗಿರುವವರ ಮಗ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಅಕ್ರಮ ಮದ್ಯ ಮಾರಾಟ
– ಆರೋಪಿಗಳಿಬ್ಬರು ಅರೆಸ್ಟ್..!

ಮಣಿಪಾಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ ಮಣಿಪಾಲ 80 ಬಡಗಬೆಟ್ಟು ಗ್ರಾಮದ ದಶರಥ ನಗರ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಅಬ್ದುಲ್ ರಜಾಕ್ (26) ಹಾಗೂ ಮುದುಕಪ್ಪ(39) ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 75 ಮದ್ಯದ ಪ್ಯಾಕೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರೋಪಿಗಳು ಲೋಕಸಭಾ ಚುನಾವಣಾ ಮತ ಎಣಿಕೆ ಪ್ರಯುಕ್ತ ಮದ್ಯ ಮಾರಾಟ ನಿಷೇದ ಇದ್ದರೂ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಪಘಾತ ಉಡುಪಿ

ಉಡುಪಿ: ಹೃದಯಾಘಾತವಾಗಿದ್ದ ಬಸ್‌ ಚಾಲಕ ಸಾವು!

ಉಡುಪಿ: ಹೃದಯಾಘಾತವಾಗಿದ್ದ ಬಸ್‌ ಚಾಲಕ ಸಾವು!

– ಬ್ರಹ್ಮಾವರದ ಖಾಸಗಿ ಶಾಲೆಯ ಬಸ್‌ ಚಾಲನೆ ವೇಳೆ ಘಟನೆ
– 65 ಮಕ್ಕಳನ್ನು ಪಾರು ಮಾಡಿ ಇಹಲೋಕ ತ್ಯಜಿಸಿದ ಡ್ರೈವರ್!

NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಶಾಲಾ ಬಸ್‌ ಚಾಲನೆ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಬಸ್‌ ಚಾಲಕ ಅಲ್ವಿನ್‌ ಡಿಸೋಜಾ(53) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬ್ರಹ್ಮಾವರದ ಖಾಸಗಿ ಶಾಲೆಯ ಬಸ್‌ನಲ್ಲಿ ಮಕ್ಕಳನ್ನು ಮಣಿಪಾಲಕ್ಕೆ ಕರೆದೊಯ್ಯುತ್ತಿರುವ ವೇಳೆ ಪೆರಂಪಳ್ಳಿ ಬಳಿ ಅವರಿಗೆ ಲಘು ಹೃದಯಾಘಾತವಾಗಿತ್ತು. ಕೂಡಲೇ ಸಮಯಪ್ರಜ್ಞೆ ಮೆರೆದಿದ್ದ ಅಲ್ವಿನ್‌ ಅವರು ಬಸ್‌ನ್ನು ಚರಂಡಿಗೆ ಇಳಿಸಿ ದೊಡ್ಡ ಮಟ್ಟದಲ್ಲಿ ಆಗುವ ಅಪಘಾತವನ್ನು ತಪ್ಪಿಸಿದ್ದರು. ಈ ಘಟನೆಯಲ್ಲಿ ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ದೊಡ್ಡ ದುರಂತವನ್ನು ತಪ್ಪಿಸಿ ಮಕ್ಕಳನ್ನು ಪಾರು ಮಾಡಿರುವುದಕ್ಕೆ ಅಲ್ವಿನ್‌ ಅವರಿಗೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಎಲ್ಲರೂ ಲಘು ಹೃದಯಾಘಾತವೆಂದು ತಿಳಿದುಕೊಂಡಿದ್ದರು. ಆದರೆ ಇದೀಗ ವಿಧಿಯಾಟಕ್ಕೆ ಬಲಿಯಾಗಿದ್ದು, ಮಕ್ಕಳ ಜೀವ ಉಳಿಸಿದ ಅಲ್ವಿನ್‌ ಡಿಸೋಜಾ ಕೊನೆಯುಸಿರೆಳೆದಿದ್ದಾರೆ.

65 ಮಕ್ಕಳು ಪಾರು: ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!

ಚಾಲನೆಯಲ್ಲಿರುವಾಗಲೇ ಶಾಲಾ ವಾಹನದ ಬಸ್‌ ಚಾಲಕರೊಬ್ಬರಿಗೆ ಹೃದಯಾಘಾತವಾಗಿದ್ದು, ಈ ವೇಳೆ ಸಮಯಪ್ರಜ್ಞೆ ತೋರಿದ ಹಿನ್ನಲೆಯಲ್ಲಿ ಹಲವು ಮಕ್ಕಳು ಅಪಾಯದಿಂದ ಪಾರಾಗಿದ್ದರು.
ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಸುಮಾರು 65 ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಸಂಚರಿಸುತ್ತಿತ್ತು. ದಾರಿ ಮಧ್ಯೆ ಐವರು ಮಕ್ಕಳನ್ನು ಬಸ್‌ನಿಂದ ಇಳಿಸಲಾಗಿತ್ತು. ಬಳಿಕ ಸಬ್‌ ಪೆರಂಪಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಆಲ್ವಿನ್‌ ಡಿಸೋಜ ಅವರಿಗೆ ಲಘು ಹೃದಯಾಘಾತವಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಬಸ್‌ ಚಾಲಕ ಬಸ್‌ನ್ನು ರಸ್ತೆಯ ಬದಿಯ ಚರಂಡಿಗೆ ಸರಿಸಿ ನಿಲ್ಲಿಸಿದ್ದಾರೆ. ಇದರಿಂದ ಬಸ್‌ನಲ್ಲಿ ಕುಳಿತಿದ್ದ ಕೆಲವು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ

Categories
ಪ್ರತಿಭೆಗಳು ರಾಜ್ಯ ರಾಷ್ಟ್ರೀಯ ವಾರ್ತೆ ಶಿಕ್ಷಣ

ನೀಟ್ ಪರೀಕ್ಷೆ: ನ್ಯೂ ವೈಬ್ರೆಂಟ್ ಕಾಲೇಜು ಅಮೋಘ ಸಾಧನೆ

ನೀಟ್ ಪರೀಕ್ಷೆ: ನ್ಯೂ ವೈಬ್ರೆಂಟ್ ಕಾಲೇಜು ಅಮೋಘ ಸಾಧನೆ

– ಕಾಲೇಜಿನ 28 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
– ವೈಬ್ರೆಂಟ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ
– ನೀಟ್ ಲಾಂಗ್ ಟರ್ಮ್ ಕೋರ್ಸ್ ಅಲ್ಲಿ ವಿಶೇಷ ಸೇವೆ

– ಮಹೇಶ್ 695 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಹಾಗೂ ಕೆಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 73ನೇ Rank ಅನ್ನು ಪಡೆದಿರುತ್ತಾರೆ

NAMMUR EXPRESS NEWS
ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಪಿಯುಸಿ ಮತ್ತು ಒಂದು ವರ್ಷದ ನೀಟ್ ಲಾಂಗ್‌ರ್ಮ್ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದು ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾರೆ.

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ಮೆಡಿಕಲ್ ಸೀಟ್ ಸಾಧ್ಯತೆ

ಸಂಸ್ಥೆಯಿಂದ ಪರೀಕ್ಷೆ ಬರೆದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್ ಲಭಿಸುವ ನಿರೀಕ್ಷೆ ಇದೆ. ಮಹೇಶ್ 695 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಕೆಟಗೆರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 73ನೇ ಬ್ಯಾಂಕ್ ಗಳಿಸಿ ಸಾಧನೆಗೈದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳು ಇವರೇ..!

ಚಂದನ್ ಆರ್ 690, ಮಹೇಂದ್ರ ರೆಡ್ಡಿ 675, ಪ್ರಜ್ವಲ್ 662, ಜಿ.ಟಿ. ಸೃಷ್ಟಿ ಕೋಟಿ 661, ಬೆನಕ ಟಿ.ಎಸ್ 648, ರಾಹುಲ್ ಕೆ.ಎಸ್ 646, ಸೂರಜ್ ಎಂ. ಸಾಗರ್ 643, ಐರೋಲ್ ಡೀನಾ ರೋಡ್ರಿಗಸ್ 642, ಸುಜಯ್ ಪಿ.ವಿ 632, ಅಕ್ಷತಾ ಪಿ ಬಿರದರ್ 632, ಇ ಧನುಶ್ರೀ 631, ಎಂ. ಸುಹಾಸ್ 630. ಕೆ. ಪ್ರಗತಿ 630. ವಿಕಾಸ್ ಬಿ.ಆರ್ 630, ಪ್ರೀತಮ್ ನಾಯ್ಡ್ 627. ಹೆಚ್.ಎಸ್ ಪ್ರಜ್ವಲ್ 620, ಎನ್.ಎಸ್ ಹರ್ಷಿತ್ 620. ವಿಶಾಲ್ ವಿ ಪಟ್ಟಣಶೆಟ್ಟಿ 617, ಬೀರಪ್ಪ ಎಂ.ಕೆ 615. ಸಿಂಚನಾ ಅರಸ್ 612. ಪಿ.ಎಸ್ ಚಂದನ್ ಕುಮಾರ್ 612, ಮುಹಮ್ಮದ್ ರುಹೈಬ್ 611. ಅಶ್ವಿನ್ ಸಿ.ನಾಯ್ಕ 609, ಅಭಿಷೇಕ್ ಶೇಟ್ 606, ಅನಿಲ್ ಕುಮಾರ್ 606, ಮಲ್ಲಿಕಾರ್ಜುನ್ ಜೆ.ಕಂಬಾರ್ 604, ಕಾರ್ತಿಕ್ ಕರೋಲಿ 600.
650ಕ್ಕಿಂತ ಹೆಚ್ಚು ಅಂಕಗಳನ್ನು 5 ವಿದ್ಯಾರ್ಥಿಗಳು, 600ಕ್ಕಿಂತ ಹೆಚ್ಚು ಅಂಕ 28, 550ಕ್ಕಿಂತ ಹೆಚ್ಚು ಅಂಕ 86, 500 ಕ್ಕಿಂತ ಹೆಚ್ಚು ಅಂಕ 162 ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಆರು ಜನ ನುರಿತ ಉಪನ್ಯಾಸಕರ ತಂಡ ಕಟ್ಟಿ ಬೆಳೆಸಿದ ಸಂಸ್ಥೆ!

ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದೆರಡು ವರ್ಷದ ಹಿಂದೆ ಆರು ಜನ ನುರಿತ ಉಪನ್ಯಾಸಕರ ತಂಡವು ಕಟ್ಟಿ ಬೆಳೆಸಿದ ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ಪಿಯು ಬೋರ್ಡ್ ಪರೀಕ್ಷೆಯ ತಯಾರಿಯೊಂದಿಗೆ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಉತ್ತಮ ತರಬೇತಿಯನ್ನು ನೀಡುವ ಇಂಟಿಗ್ರೇಟೆಡ್ ಕೋಚಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿಯಲ್ಲೂ ಬೆಸ್ಟ್ ಕಾಲೇಜು

ಪಿಯುಸಿ ಶಿಕ್ಷಣದೊಂದಿಗೆ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಪ್ರವೇಶದ ಅರ್ಹತೆಗೆ ಬೇಕಾದಷ್ಟು ಅಂಕ ಗಳಿಸಲು ವಿಫಲರಾದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡಲಾಗುತ್ತಿದೆ. ಕಾಲೇಜಿನಿಂದ ತರಬೇತಿ ಪಡೆದು ಕಠಿಣ ಪರಿಶ್ರಮದಿಂದ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ

Categories
ಜಿಲ್ಲಾ ವಾರ್ತೆ ಮಲ್ನಾಡ್ ರಾಜಕೀಯ ಶಿವಮೊಗ್ಗ ಸಾಗರ ಹೊಸನಗರ

ಮಲ್ನಾಡ್ ಟಾಪ್ 4 ನ್ಯೂಸ್..!

ಮಲ್ನಾಡ್ ಟಾಪ್ 4 ನ್ಯೂಸ್..!

– ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಂದ ಯುವಕ!
– ಸಾಗರ: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ
– ಹೊಸನಗರ: ಕಿಡಿಗೇಡಿಗಳಿಂದ ತೆಂಗಿನ ಗಿಡ ನಾಶ
– ಸಾಲ ವಸೂಲಾತಿ ವಿಳಂಬ: ಖಾಸಗಿ ಬ್ಯಾಂಕ್ ನಿಂದ ದಾಳಿ ರೋಗಪೀಡಿತರನ್ನ ಹೊರಹಾಕಿ ಮನೆ ಸೀಜ್!

NAMMUR EXPRESS NEWS
ಶಿವಮೊಗ್ಗ: ಇದೇ ಜೂ. 3ರ ಬೆಳ್ಳಂ ಬೆಳಗ್ಗೆ ಭದ್ರಾವತಿಯ ಅರಳ್ಳಿಹಳ್ಳಿ ಗ್ರಾಮದಲ್ಲಿ ವೃದ್ದೆಯೊಬ್ಬರ ಬರ್ಬರ ಹತ್ಯೆ ನಡೆದಿತ್ತು. ಆ ದಿನ ಬೆಳಗ್ಗೆ ಗ್ರಾಮದ ವೃದ್ದೆ ಫಜಲುನ್ನಿಸಾ(74), ಮನೆ ಬಳಿ ಇರುವ ಕೊಟ್ಟಿಗೆಗೆ ಹೋಗಿ ಹಸುವಿಗೆ ಆಹಾರ ನೀಡಲು ತೆರೆಳಿದ್ದಳು. ಹಸುವಿಗೆ ಆಹಾರ ಕೊಟ್ಟು ವಾಪಸ್ ಬರುವಾಗ ಅದೇ ಬೀದಿಯ ಮಂಜುನಾಥ್ (45) ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗುತ್ತಿದ್ದನು. ಇದನ್ನು ನೋಡಿದ ಅಜ್ಜಿಯು ಯಾಕೇ ಕೈಯಲ್ಲಿ ಮಚ್ಚು ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ವಿಚಲಿತನಾದ ಮಂಜುನಾಥ್ ಅಜ್ಜಿಯ ಮೇಲೆ ಕೋಪಗೊಂಡು, ಕೈಯಲ್ಲಿರುವ ಮಚ್ಚು ಹಿಡಿದುಕೊಂಡು ಅಜ್ಜಿಯ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾನೆ. ಇತನ ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳಲು ಅಜ್ಜಿಯು ಹಸುವಿನ ಕೊಟ್ಟಿಗೆಯಿಂದ ಸುಮಾರು ಎರಡ್ಮೂರು ಮನೆ ದೂರ ಗೀತಮ್ಮ ಎನ್ನುವವರ ಮನೆಯ ಒಳಗೆ ಹೋಗುತ್ತಾರೆ. ಈ ನಡುವೆ ಗೀತಮ್ಮಳ ಮೇಲೆ ಹಲ್ಲೆಗೆ ಮಂಜುನಾಥ್ ಮಂದಾಗುತ್ತಾನೆ. ಆದರೆ, ಗೀತಮ್ಮ ಆತನಿಗಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾಳೆ. ಸಿಕ್ಕ ವೃದ್ಧೆಯನ್ನು ಗೀತಮ್ಮಳ ಮನೆಯ ಒಳಗೆ ನುಗ್ಗಿ ಮಂಜುನಾಥ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲಿಂದ ಮಚ್ಚು ಸಮೇತ ಎಸ್ಕೇಪ್ ಆಗುತ್ತಾನೆ. ಇನ್ನು ಆರೋಪಿ ಪರಾರಿಯಾಗುತ್ತ ಕೊಲೆ ಮಾಡಿದ ಮಚ್ಚನ್ನು ಪಕ್ಕದ ಬೀದಿಯಲ್ಲಿ ಬಚ್ಚಿಡುತ್ತಾನೆ. ಇದನ್ನು ನೋಡಿದ ಗ್ರಾಮಸ್ಥರು ಮಂಜುನಾಥ್​ಗೆ ಧರ್ಮೇದೇಟು ಕೊಟ್ಟು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಮಂಜುನಾಥ್ ಏಕಾಏಕಿ ವೃದ್ಧೆಯನ್ನು ಮರ್ಡರ್ ಮಾಡಿದ್ದು ಯಾಕೆ? ಎನ್ನುವುದು ಆರಂಭದಲ್ಲಿ ಯಾರಿಗೂ ಗೊತ್ತಾಗಿಲ್ಲ.
ಈ ಕುರಿತು ಪೊಲೀಸರು ತನಿಖೆ ಶುರು ಮಾಡಿದಾಗ, ‘ಮಂಜುನಾಥ್ ಕಳೆದ ಎರಡು ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತನಿಗೆ ಮದುವೆ ಆಗಿಲ್ಲ. ತಂದೆ ತೀರಿ ಹೋಗಿದರೆ, ತಾಯಿ ಒಬ್ಬಳೇ ಇದ್ದಾಳೆ. ಈ ನಡುವೆ ಗ್ರಾಮದಲ್ಲಿ ಮಂಜುನಾಥ್ ಹುಚ್ಚಾಟ ದಿನೇ ದಿನೇ ಜಾಸ್ತಿ ಆಗಿತ್ತು. ಯುವತಿಯರಿಗೆ ಮತ್ತು ಮಹಿಳೆಯರ ಜೊತೆ ಈತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಅರೆ ನಗ್ನನಾಗಿ ಓಡಾಡಿಕೊಂಡು ಯುವತಿಯರಿಗೆ ಮತ್ತು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದನು. ಇನ್ನು ಗ್ರಾಮದ ಓರ್ವ ಕಾಲೇಜ್ ಯುವತಿಯ ಜೊತೆ ಕೆಲ ದಿನಗಳ ಹಿಂದೆ ಅಸಭ್ಯವಾಗಿ ವರ್ತನೆ ಮಾಡಿದ್ದನು. ಗ್ರಾಮಸ್ಥರು ಮಾನಸಿಕ ಅಸ್ವಸ್ಥನ ತಾಯಿಗೆ ಕರೆದು ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು.

ಬಳಿಕ ಮಂಜುನಾಥ್ ನಿರಂತರವಾಗಿ ಮದ್ಯ ಸೇವಿಸಿ ತನ್ನ ಮಾನಸಿಕ ಸಿಮೀತ ಕಳೆದುಕೊಂಡಿದ್ದ. ಕುಡಿದ ಅಮಲಿನಲ್ಲಿ ಆತ ಆಡಿದ್ದೇ ಆಟ ಎನ್ನುವಂತೆ ಗ್ರಾಮದಲ್ಲಿ ಹುಚ್ಚಾಟ ಮಾಡುತ್ತಿದ್ದನು. ಜೂ. 3 ರಂದು ಮಂಜುನಾಥ್ ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗಿದ್ದನ್ನು ವೃದ್ದೆಯು ಪ್ರಶ್ನೆ ಮಾಡಿದ್ದೇ ತಪ್ಪಾಗಿತ್ತು. ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಂಜುನಾಥ್ ಹತ್ಯೆ ಮಾಡಿದ್ದನು. ಸದ್ಯ ಈತನ ಮಾನಸಿಕ ಅಸ್ವಸ್ಥನೋ ಅಥವಾ ನಾಟಕ ಮಾಡುತ್ತಾನೆಯೋ ಎನ್ನುವ ಸಂದೇಹವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ವೃದ್ದೆಯ ಕೊಲೆ ಮಾಡಿರುವ ಮಂಜುನಾಥ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಹಾಗೂ ಮೃತಳ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. ವಿನಾಕಾರಣ ವೃದ್ದೆಯನ್ನು ಅಟ್ಟಾಡಿಸಿಕೊಂಡು ವ್ಯಕ್ತಿಯು ಹತ್ಯೆ ಮಾಡಿದ್ದಾನೆ. ಈ ಕೊಲೆಯ ಬಳಿಕ ಗ್ರಾಮಸ್ಥರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹಂತಕನ ಬಂಧನವಾಗಿದೆ. ಆದ್ರೆ ,ಆತ ಮಾನಸಿಕ ಅಸ್ವಸ್ಥನೆಂದು ಮತ್ತೆ ವಾಪಸ್ ಬಂದರೆ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ವೃದ್ದೆ ಕೊಲೆ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆಯಾಗುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯಸಿಗಬೇಕಿದೆ.

ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ!

ಸಾಗರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಹೋಗಿದ್ದ ಮತದಾರರೊಬ್ಬರ ಮೊಬೈಲ್ ಕಳ್ಳತನವಾಗಿರುವ ಘಟನೆ ಸೋಮವಾರ ನಡೆದಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಉದ್ಯಮಿ ವಿನಯ್ ಎನ್‌.ಆ‌ರ್.

ಸೋಮವಾರ ಮತದಾನ ಮಾಡಲು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬೆಳಿಗ್ಗೆ 9:30ಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮತದಾನದ ಕೊಠಡಿ ಹೊರಗಿದ್ದ ಆರಕ್ಷಕರು ಮೊಬೈಲ್‌ ಇರಿಸಿ ಹೋಗುವಂತೆ ತಿಳಿಸಿದ್ದಾರೆ. ವಿನಯ್ ಮೊಬೈಲ್ ತೆಗೆದು ಆರಕ್ಷಕರು ಸೂಚಿಸಿದ ಜಾಗದಲ್ಲಿ ಇರಿಸಿ ಮತದಾನಕ್ಕೆ ಹೋಗಿದ್ದಾರೆ. ಮತದಾನ ಮಾಡಿ ಹೊರಗೆ ಬಂದಾಗ ಬೆಲೆಬಾಳುವ ಮೊಬೈಲ್ ನಾಪತ್ತೆಯಾಗಿತ್ತು. ಇಟ್ಟ ಮೊಬೈಲ್ ನಾಪತ್ತೆಯಾಗಿರುವ ಬಗ್ಗೆ ಆರಕ್ಷಕರಿಗೆ ಕೇಳಿದರೆ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮತಗಟ್ಟೆ ಹತ್ತಿರ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಿನಯ್ ಚುನಾವಣೆ ಅಧಿಕಾರಿಗಳ ಬಳಿ ಸಿಸಿ ಕ್ಯಾಮರಾ ಫುಟೇಜ್ ಕೇಳಿದರೆ ಸಿಸಿ ಕ್ಯಾಮರಾ ಹಾಳಾಗಿದ್ದಾಗಿ ತಿಳಿಸಿದ್ದಾರೆ. ಪ್ರಮುಖವಾದ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿ ಅದರ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಮತದಾನ ಕೇಂದ್ರದಲ್ಲಿ ಗಲಾಟೆ ನಡೆದರೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಚುನಾವಣಾಧಿಕಾರಿಗಳ ಬೇಜವಾಬ್ದಾರಿತನ ಇಲ್ಲಿ ಎದ್ದು ಕಾಣುತ್ತಿದೆ ಎಂದು ವಿನಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಕಳವಿಗೆ ಸಂಬಂಧಪಟ್ಟಂತೆ ವಿನಯ್ ನಗರ ಠಾಣೆಗೆ ದೂರು ನೀಡಿದ್ದಾರೆ.

ಹೊಸನಗರ: ಕಿಡಿಗೇಡಿಗಳಿಂದ ತೆಂಗಿನ ಗಿಡ ನಾಶ!

ಹೊಸನಗರ: ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವರ ತೋಟದಲ್ಲಿ 10ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿ ದುಷ್ಖೃತ್ಯ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಡಾಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಮ್ಮ ಕೋಂ ಗೋಪಾಲ ರವರ ತೋಟದ ಮಧ್ಯ ಮತ್ತು ಅಂಚುಗಳಲ್ಲಿ ತೆಂಗಿನ ಮರಗಳನ್ನು ಕಡಿಯಲಾಗಿದೆ. ತೋಟದ ಅಂಚಿನಲ್ಲಿ ಮನೆ ಇದ್ದು ಬುಧವಾರ ತಡರಾತ್ರಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಡಾಹೊಸಳ್ಳಿ ಗ್ರಾಮದ ಸ.ನಂ.28ರಲ್ಲಿ 1-20 ಎಕರೆ ಜಮೀನನ್ನು ಸುಮಾರು ವರ್ಷಗಳಿಂದ ಬಗಹುಕುಂ ಸಾಗುವಳಿ ಮಾಡುತ್ತಿರುವ ಲಕ್ಷ್ಮಮ್ಮ ಸದರಿ ಜಮೀನಿಗೆ ಸುತ್ತಲು ಕಲ್ಲು ಕಂಬದ ಬೇಲಿ ನಿರ್ಮಿಸಿದ್ದಾರೆ. ಸದರಿ ಜಮೀನಿನ ಮಂಜೂರಾತಿಗಾಗಿ ಈ ಹಿಂದೆಯೇ ಫಾರಂ 53ಯಡಿ ಅರ್ಜಿ ಸಲ್ಲಿಸಿದ್ದಾರೆ. ಕಿಡಿಗೇಡಿಗಳು ಮಾಲೀಕರು ಮಲಗಿರುವ ವೇಳೆಯಲ್ಲಿ ಹತ್ತು ತೆಂಗಿನ ಗಿಡಗಳನ್ನು ಕಿತ್ತು ಕಡಿದು ಹಾಕಿದ್ದಾರೆ.

ಸಾಲ ವಸೂಲಾತಿ ವಿಳಂಬ: ಖಾಸಗಿ ಬ್ಯಾಂಕ್ ನಿಂದ ಮನೆಗೆ ದಾಳಿ. ರೋಗಪೀಡಿತರನ್ನ ಹೊರಹಾಕಿ ಮನೆ ಸೀಜ್:

ಶಿಕಾರಿಪುರ: ಪಟ್ಟಣದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕಳೆದ ಆರು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದ ಲತಾ ನಾಗರಾಜಪ್ಪ 3.60 ಲಕ್ಷ ರೂ. ಸಾಲ ಸಾಲ ಪಡೆದಿದ್ದರು. ಅದರಲ್ಲಿ ಈಗಾಗಲೆ 3.10ಲಕ್ಷ ರೂ. ಮರುಪಾವತಿಸಿದ್ದಾರೆ. ಇನ್ನೂ 3.65ಲಕ್ಷ ರೂ. ಬಾಕಿ ಇದ್ದು ಅದನ್ನು ಕಟ್ಟುವುದಕ್ಕೆ ಸಮಯ ಕೇಳಿದರೂ ಪ್ರಯೋಜವಾಗಿಲ್ಲ. ಮನೆಯಲ್ಲಿ ಹೆಂಡತಿ, ಮಗ, ಇಲ್ಲದ ಸಂದರ್ಭದಲ್ಲಿ ಪ್ಯಾರಲಿಸಿಸ್ ಪೀಡಿತ ನಾಗರಾಜಪ್ಪ ಅವರಿಗೆ ಮನೆಯಿಂದ ಹೊರಗೆ ಕಳುಹಿಸಿ ಮನೆಯ ಹಿಂಬಾಗಿಲು, ಮುಂಬಾಗಿಲು ಸೀಜ್ ಮಾಡಲಾಗಿದ್ದು ಕುಟುಂಬ ಕಂಗಾಲಾಗಿದೆ. ಇಡೀ ಕುಟುಂಬ ಅವರಿವರ ಮನೆಯಲ್ಲಿ ಊಟ ಮಾಡುತ್ತಿದ್ದು ಮಗ ದೇವಸ್ಥಾನ ಕಟ್ಟೆಮೇಲೆ ಮಲಗಿದರೆ, ಗಂಡ ಹೆಂಡತಿ ಮತ್ತೊಬ್ಬರ ಮನೆಯಲ್ಲಿ ರಾತ್ರಿ ಆಶ್ರಯ ಪಡೆದಿದ್ದಾರೆ. ಬೆಳಗ್ಗೆ ಆಗುತ್ತಿದ್ದಂತೆ ಹೆಂಡತಿ, ಮಗ ಕೂಲಿ ಕೆಲಸಕ್ಕೆ ಹೋದರೆ ನಾಗರಾಜಪ್ಪ ಅವರಿವರ ಮನೆ ಕಟ್ಟೆ ಮೇಲೆ ಕಾಲಕಳೆಯುತ್ತಿದ್ದಾರೆ.

ಕುಟುಂಬದ ಯಜಮಾನ ನಾಗರಾಜಪ್ಪ ಅವರಿಗೆ 2 ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಅಂದಿನಿಂದ ಸಾಲದ ಕಂತು ಕಟ್ಟುವುದು ವಿಳಂಬವಾಗಿದೆ. ಕುಟುಂಬಕ್ಕೆ ಇದ್ದ 10 ಗುಂಟೆ ಜಮೀನು ಮಾರಾಟ ಮಾಡಿದ್ದು ಹಣ ಬಾರದೆ ಸಮಸ್ಯೆ ಇನ್ನಷ್ಟು ಬಿಗುಡಾಯಿಸಿದೆ. ನಿತ್ಯ ನುಂಗುವ ಗುಳಿಗೆಯೂ ಮನೆಯೊಳಗೆ ಇದ್ದು ಅದನ್ನಾದರೂ ತೆಗೆದುಕೊಡಿ ಎನ್ನುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಮನೆಯಿದ್ದರೂ ಬೇರೊಬ್ಬರ ಮನೆ ಆಶ್ರಯದಲ್ಲಿ ಇರಬೇಕಾದ ಅನಿವಾರ್‍ಯ ಸ್ಥಿತಿಗೆ ತಲುಪಿರುವ ಕುಟುಂಬಕ್ಕೆ ತಾಲೂಕು ಆಡಳಿತ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ

Categories
ಉದ್ಯೋಗ ಸುದ್ದಿ ಬೆಂಗಳೂರು

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!
– ಬ್ಯಾಕ್ ಲಾಗ್‌ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌!

NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಬ್ಯಾಕ್‌ಲಾಗ್‌ ಹುದ್ದೆಯನ್ನು ಭರ್ತಿ ಮಾಡುವಂತೆ ಕೋರಿರುವ ಮನವಿಗೆ ಸ್ಪಂದಿಸಿದ್ದು, ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ. ಕೃಷ್ಣಮೂರ್ತಿ ಇವರು ಉಲ್ಲೇಖ- 1ರನ್ನಯ ಬ್ಯಾಕ್‌ಲಾಗ್ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು ಯಾವುದೇ ಬ್ಯಾಕ್ ಲಾಗ್‌ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದೇ ಇದ್ದು ಈ ಸಂಬಂಧ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದು ಕೋರಿರುತ್ತೀರಿ.

ಪರಿಶೀಲಿಸಲಾಗಿ ಉಲ್ಲೇಖ(2)ರ ಸರ್ಕಾರದ ಅಧಿಸೂಚನೆಯಂತೆ, ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ವರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಿಗಳಿಂದಲೇ ಅಧಿಸೂಚನೆ / ಪ್ರಕಟಣೆಯನ್ನು ಹೊರಡಿಸಬೇಕಾಗಿರುತ್ತದೆ. ಈ ಸಂಬಂಧವಾಗಿ, ಮಾನ್ಯ ಸಚಿವ ಸಂಪುಟದ ಉಪ ಸಮಿತಿ ಸಭೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನೂಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗಳಲ್ಲಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಹಾಗೂ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅದ ಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಉಲ್ಲೇಖ(3)ರ ವಿವಿಧ ದಿನಾಂಕಗಳ ಈ ಕಛೇರಿ ವತ್ರಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂಬ ಅಂಶವನ್ನು ಈ ಮೂಲಕ ತಿಳಿಸಿದೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
-ಬೆಳ್ತಂಗಡಿ : ಬಿಜೆಪಿ ಯುವ ಮುಖಂಡ ರಾಜೇಶ್ ನಿಡ್ಡಾಜೆ ಮೇಲೆ ತಲವಾರು ದಾಳಿ ಪ್ರಕರಣ: ಆರೋಪಿ ಕಾಂಗ್ರೇಸ್ ಮುಖಂಡ ಅರೆಸ್ಟ್
– ಬಂಟ್ವಾಳ: ಕಾಂಕ್ರೀಟ್ ಕೆಲಸದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಸಾವು
– ಉಳ್ಳಾಲ: ಪಟಾಕಿ ಸಿಡಿಸಿದ ವಿಚಾರ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ
– ಬೆಳ್ತಂಗಡಿ: ಬೈಕ್ ಗೆ ಕಾರು ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು!

NAMMUR EXPRESS NEWS

ಬೆಳ್ತಂಗಡಿ: ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ(33) ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ತಲವಾರಿನಿಂದ ದಾಳಿ ನಡೆದಿದೆ. ಬೆಳ್ತಂಗಡಿ ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಜೂ.4 ರಂದು ರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಕಾಂಗ್ರೆಸ್ ಮುಖಂಡ ಕಳೆಂಜ ನಿವಾಸಿ ಕುಶಾಲಪ್ಪ ಗೌಡ ಕಜೆ(48) ಎಂಬವರು ರಾಜೇಶ್ ಎಮ್.ಕೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.5 ರಂದು ಆರೋಪಿ ಕುಶಾಲಪ್ಪ ಗೌಡ ಅವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

– ಬಂಟ್ವಾಳ: ಮನೆಯೊಂದರ ಮಹಡಿಯಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಕಾರ್ಮಿಕರೋರ್ವರು ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ತಡ್ಯಾಲು ನಿವಾಸಿ ಪ್ರಕಾಶ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕೂಡಲೇ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಅಮ್ಟಾಡಿ ಗ್ರಾ.ಪಂ.ಸದಸ್ಯನಾಗಿದ್ದ ಇವರು ಸಾಮಾಜಿಕವಾಗಿ ಉತ್ತಮ ಕೆಲಸಗಾರನಾಗಿದ್ದರು‌. ಬಡಾಜೆ ಎಂಬಲ್ಲಿ ಮನೆಯೊಂದರ ಎರಡನೇ ಮಹಡಿಗೆ ಇವರು ಸೇರಿ ಒಟ್ಟು ಮೂರು ಮಂದಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಆದರೆ ಏಕಾಏಕಿ ಕಾಂಕ್ರೀಟ್ ಹಲಗೆಗಳು ಮತ್ತು ಜಾಕ್ ಗಳು ಮುರಿದು ಬಿದ್ದ ಪರಿಣಾಮ ಇಬ್ಬರು ಕೆಳಗೆ ಹಾರಿದ್ದಾರೆ. ಪ್ರಕಾಶ್ ಮಾತ್ರ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಸಾವನ್ನಪ್ಪಿದ ಬಗ್ಗೆ ತಿಳಿಸಿದ್ದಾರೆ. ಉಳಿದಂತೆ ಇನ್ನಿಬ್ಬರು ಕೆಲಸಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

– ಉಳ್ಳಾಲ: ಪಟಾಕಿ ಸಿಡಿಸಿದ ವಿಚಾರ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ

ಉಳ್ಳಾಲ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿರುವ ಘಟನೆ ಕುಂಪಲ ಕೇಸರಿನಗರ ಎಂಬಲ್ಲಿ ಸಂಭವಿಸಿದೆ. ಕುಂಪಲ ನಿವಾಸಿ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಎಂಬವರ ಮೇಲೆ ಹಲ್ಲೆ ನಡೆದಿದೆ. ಇವರಿಗೆ ಸ್ಥಳೀಯ ಸಂಘವೊಂದರಲ್ಲಿ ಸದಸ್ಯರಾಗಿರುವ ಪ್ರಸ್ತುತ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಗೌತಮ್ ಹಲ್ಲೆ ನಡೆಸಿದ ಆರೋಪಿ ಜೂ. 4 ರಂದು ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಸ್ಥಳೀಯ ಸಂಸ್ಥೆಯೊಂದರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂಬಂಧ ಕೆಲಸದಿಂದ ವಾಪಸ್ಸಾಗುತ್ತಿದ್ದ ಪ್ರವೀಣ್ ಪೂಜಾರಿ ಅವರನ್ನು ಅಡ್ಡಗಟ್ಟಿದ ಗೌತಮ್ ಹಲ್ಲೆ ನಡೆಸಿ ದೂಡಿದ್ದು, ಪರಿಣಾಮ ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

– ಬೆಳ್ತಂಗಡಿ: ಬೈಕ್ ಗೆ ಕಾರು ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಬೈಕ್‌ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೆಖ್ಯ ಗ್ರಾಮದ ನೇಲ್ಯಡ್ಕ ಎಂಬಲ್ಲಿ ನಡೆದಿದೆ.ಮೃತ ಸವಾರನನ್ನು‌ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮ ನಿವಾಸಿ ರವೀಂದ್ರ (48) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಎಂಜಿರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮನೆ ಕಡೆಗೆ ಬರುತ್ತಿದ್ದ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Categories
ಆರೋಗ್ಯ

ಕ್ಯಾನ್ಸರ್ ರೋಗಕ್ಕೆ ಇನ್ಮುಂದೆ ಔಷಧ ಲಭ್ಯ!

ಕ್ಯಾನ್ಸರ್ ರೋಗಕ್ಕೆ ಇನ್ಮುಂದೆ ಔಷಧ ಲಭ್ಯ!
– ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ
– ಶೀಘ್ರದಲ್ಲಿ ಎಲ್ಲಾ ಕ್ಯಾನ್ಸರ್ ಚಿಕಿತ್ಸೆ?

NAMMUR EXPRESS NEWS

ಕ್ಯಾನ್ಸರ್‌ಗೆ ಹೊಸ ಔಷಧವೊಂದನ್ನು ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಂಪರ್ಲಿ ದೋಸ್ಟರಲಿಮ್ಸ್-ಜಿಎಕ್ಸ್‌ಎಲ್ ವೈ ಎಂಬ ಕ್ಯಾನ್ಸ‌ರ್ ಗುಣಪಡಿಸುವ ಔಷಧ ಗುದನಾಳದ ಕ್ಯಾನ್ಸರ್ ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಹೇಳಿದ್ದಾರೆ.
ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.
ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಆಂಕೊಲಾಜಿಸ್ಟ್ ಡಾ. ಆಂಡ್ರಿಯಾ ಸೆರ್ಸೆಕ್ ಅವರ ಪ್ರಕಾರ Dostarlimab-gxly ಕ್ಯಾನ್ಸರ್ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ವಿಕಿರಣದ ಅಗತ್ಯ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದು ಚಿಕಿತ್ಸಾ ಆಯ್ಕೆಯ ಭರವಸೆಯನ್ನು ನೀಡುತ್ತದೆ, ಇವೆರಡೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಅಡ್ಡ ಪರಿಣಾಮ ಕಡಿಮೆ.!

ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸಾಮಾನ್ಯವಾಗಿ ಕರುಳು, ಮೂತ್ರ, ಲೈಂಗಿಕ ಕ್ರಿಯೆಯಲ್ಲಿ ತೊಂದರೆ, ಎರಡನೇ ಬಾರಿ ಮತ್ತೆ ಕ್ಯಾನ್ಸರ್ ಬರುವ ಅಪಾಯ ಮತ್ತು ಬಂಜೆತನವನ್ನು ಉಂಟು ಮಾಡುತ್ತದೆ. ಇದು ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಇಮ್ಯುನೊಥೆರಪಿಯನ್ನು ಬಳಸಿಕೊಂಡು ಈ ಔಷಧವು ಕಾರ್ಯನಿರ್ವಹಿಸುತ್ತದೆ. ಇದು ಸಾಂಪ್ರದಾಯಿಕ ಕಿಮೊಥೆರಪಿಗಿಂತ ಭಿನ್ನವಾಗಿದೆ. ಈ ಔಷಧವು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ತೋರಿಸಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ!

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಯನ್ನು ಉಂಟು ಮಾಡಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್‌ಎಲ್ ವೈ ಔಷಧದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ವಿವಿಧ ಕೊಲೊರೆಕ್ಟಲ್ ಕ್ಯಾನ್ಸರ್ ಮೇಲೆ ಪ್ರಯೋಗಗಳನ್ನು ಮುಂದುವರಿಸಲಾಗುತ್ತದೆ.
ಎರಡನೇ ಹಂತದ ಯಶಸ್ವಿ ಪ್ರಯೋಗದ ಬಳಿಕ ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್‌ಎಲ್ ವೈ ಅನ್ನು ಚಿಕಾಗೋದ 2024 ರ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಕಳೆದ ವರ್ಷ ಎಂಡೊಮೆಟ್ರಿಯಲ್ ಕ್ಯಾನ್ಸರ್ ಗೆ ಕಿಮೊಥೆರಪಿ ಜೊತೆಗೆ ಪೂರಕ ಚಿಕಿತ್ಸೆಯಾಗಿ ಔಷಧೀಯ ಕಂಪೆನಿಯಾದ ಎಫ್ ಡಿಎಯಿಂದ ಔಷಧವನ್ನು ಅನುಮೋದಿಸಲಾಗಿದೆ. ಇದೀಗ ಔಷಧೀಯ ಕಂಪೆನಿ ಜಿಎಸ್ ಕೆ ಇತರ ರೀತಿಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಧ್ಯಯನವನ್ನು ನಡೆಸುತ್ತಿದೆ. ಔಷಧ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಜಿಎಸ್‌ಕೆ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಹೆಶಮ್, 42 ರೋಗಿಗಳಲ್ಲಿ ಔಷಧ ಬೀರಿರುವ ಪರಿಣಾಮ ಅತ್ಯದ್ಭುತವಾಗಿದೆ. ಈ ಫಲಿತಾಂಶಗಳು ನಮ್ಮನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ತಿಳಿಸಿದ್ದಾರೆ.

Categories
ಕರಾವಳಿ ಮಂಗಳೂರು

ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ದಾಳಿ!

ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ದಾಳಿ!
– ಆಸ್ಪತ್ರೆಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

NAMMUR EXPRESS NEWS

ಮಂಗಳೂರು: ಲೋಕಸಭೆ ಫಲಿತಾಂಶದ ಬಳಿಕ ಬೆಳ್ತಂಗಡಿಯ ಕಳಂಜ ಗ್ರಾಮದ ಬಳಿ ಬಿಜೆಪಿ ಮುಖಂಡ ರಾಜೇಶ್‌ ಎಂಕೆ ಅವರ ಮೇಲೆ ತಲವಾರಿನಿಂದ ದಾಳಿ ನಡೆದಿತ್ತು. ಮಾರಕಾಸ್ತ್ರದ ದಾಳಿಯಿಂದ ಗಾಯಗೊಂಡಿರುವ ರಾಜೇಶ್‌ ಅವರು ಸದ್ಯ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೂತನವಾಗಿ ಆಯ್ಕೆಗೊಂಡಿರುವ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ ರಾಜೇಶ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಂಸದರ ಜತೆಗೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ಜತೆಗಿದ್ದರು.
ಕ್ಲುಲ್ಲಕ ಕಾರಣಕ್ಕೆ ಮಂಗಳವಾರ ರಾತ್ರಿ ರಾಜೇಶ್‌ ಅಚರ ಮೇಲೆ ಕಾಯರ್ತಡ್ಕ ಕಜೆ ನಿವಾಸಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕುಶಾಲಪ್ಪ ಗೌಡ ಎಂಬವರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.