Categories
ಉಡುಪಿ

ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸೋಮಾರಿತನ!

ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸೋಮಾರಿತನ!

– ಲೀಡ್‌ ಬ್ಯಾಂಕ್‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಉಡುಪಿ ಜಿಲ್ಲಾ ಪಂ. ಸಿಇಒ ತೀವ್ರ ಆಕ್ರೋಶ
– ಯೋಜನೆ ಆಸಕ್ತಿ ಇಲ್ಲ: ಮಣಿಪಾಲದ ಸಭೆಯಲ್ಲಿ ಬೇಸರ

NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲಾ ಮಟ್ಟದ ಡಿಸಿಸಿ ಹಾಗೂ ಡಿಎಲ್‌ಆರ್‌ಸಿ ಸಭೆಗಳಲ್ಲಿ ಭಾಗವಹಿಸುವ ಕುರಿತಂತೆ ನಿರಾಸಕ್ತಿ ಹಾಗೂ ಸರಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲೆಯ ಬ್ಯಾಂಕ್‌ಗಳು, ಅದರ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್‌ ಬಾಯಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣಿಪಾಲದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಡಿಸಿಸಿ ಹಾಗೂ ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಇವುಗಳು ಅಧ್ಯಕ್ಷರೂ ಆಗಿರುವ ಪ್ರತೀಕ್‌ ಬಾಯಲ್‌ ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಮಹತ್ವದ ಸಭೆಗೆ ಗೈರುಹಾಜರಾಗಿರುವ ಬಗ್ಗೆ ಪ್ರಾರಂಭದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇನ್ನೊಂದು ವಾರದಲ್ಲಿ ಎಲ್ಲ ಬ್ಯಾಂಕ್‌ಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ಕರೆದು ಚರ್ಚಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಲೀಡ್‌ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ ನೇತೃತ್ವದಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ಈ ಸಭೆಯಲ್ಲಿ ಪಾಲ್ಗೊಂಡು ಚರ್ಚೆಯಲ್ಲಿ ಭಾಗವಹಿಸುವ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ತೋರುತ್ತಿರುವ ನಿರಾಸಕ್ತಿಯನ್ನು ಬಾಯಲ್‌ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತಾನು ಕೇಂದ್ರ ಆರ್ಥಿಕ ಸಚಿವಾಲಯ, ರಾಜ್ಯ ಸರ್ಕಾರ ಹಾಗೂ ಆರ್‌ಬಿಐನ ಓಂಬುಡ್ಸ್‌ಮನ್‌ಗೂ ಪತ್ರ ಬರೆಯುವುದಲ್ಲದೆ ಬ್ಯಾಂಕ್‌ಗಳ ಲೈಸೆನ್ಸ್‌ ರದ್ದುಪಡಿಸುವುದಕ್ಕೂ ಅವಕಾಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಸರಕಾರಿ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾ ಪಂಚಾಯತ್‌ ಮೂಲಕ ವಿವಿಧ ಇಲಾಖೆಗಳು ಕಳುಹಿಸುವ ಯೋಜನಾ ಫಲಾನುಭವಿಗಳ ಅರ್ಜಿಗಳ ವಿಲೇವಾರಿಗೆ ಬ್ಯಾಂಕ್‌ಗಳು ತೋರುತ್ತಿರುವ ನಿರ್ಲಕ್ಷ್ಯದ ಧೋರಣೆ ಬಗ್ಗೆ ಅವರು ಸಭೆಯಲ್ಲಿ ಪದೇಪದೇ ಕಿಡಿಕಾರಿದ್ದಾರೆ.

ಜಿಲ್ಲೆಯ ಬ್ಯಾಂಕ್‌ ಅಧಿಕಾರಿಗಳು ಬ್ಯಾಂಕ್‌ ವ್ಯವಹಾರವೆಂದರೆ ಕೇವಲ ಹಣಕಾಸಿನ ಲೇವಾದೇವಿ ಮಾತ್ರ ಎಂದು ತಿಳಿದಿರಬೇಕು. ಬ್ಯಾಂಕ್‌ಗಳಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂಬುದನ್ನು ಅವರೆಲ್ಲ ಮರೆತಿದ್ದಾರೆ. ಅಲ್ಲಿರುವ ಹಣ ಜನರ ದುಡಿಮೆಯ ಫಲ. ಇವರಿಗೆ ಜನರಿಗಾಗಿ ಇರುವ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯೇ ಇದ್ದಂತೆ ಇಲ್ಲ. ಈ ಬಗ್ಗೆ ನಾನು ಕೇಂದ್ರ ಆರ್ಥಿಕ ಸಚಿವಲಾಯಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು. ಇದೇವೇಳೆ ಸಿಇಒ ಅವರು ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳನ್ನು ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೃಷಿ ಮೂಲಸೌಕರ್ಯ ವೃದ್ಧಿಗೆ ಇರುವ 330.43 ಕೋಟಿ ರೂ.ಗಳಲ್ಲಿ ಕೇವಲ 22.97 ಕೋಟಿ ಖರ್ಚಾಗಿ ಶೇ.6.95 ಪ್ರಗತಿಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ಇರುವ ಎಫ್‌ಪಿಒಗಳು ಏನು ಮಾಡುತ್ತಿವೆ? ಎಂದು ಅಧಿಕಾರಿಯನ್ನು ಕೇಳಿದಾಗ ಅವುಗಳು ಕೊಂಡು ಮಾರುವ ಕೆಲಸವಷ್ಟೇ ಮಾಡುತ್ತಿವೆ ಎಂದು ಉತ್ತರಿಸಿದರು. ಇದಕ್ಕೂ ಬಾಯಲ್‌ ಆಕ್ಷೇಪ ವ್ಯಕ್ತಪಡಿಸಿದರು.

Categories
ಮಂಗಳೂರು

ಮಿಥುನ್ ಕೊಡೆತ್ತೂರ್‌ಗೆ ‘ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿ!

ಮಿಥುನ್ ಕೊಡೆತ್ತೂರ್‌ಗೆ ‘ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿ!

– ಹೊಸದಿಗಂತ ದಿನಪತ್ರಿಕೆಯ ಮೂಲ್ಕಿ ವರದಿಗಾರ ಮಿಥುನ್
– ಜೂ. 27ಕ್ಕೆ ಮಂಗಳೂರು ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪ್ರದಾನ

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ಹೊಸದಿಗಂತ ದಿನಪತ್ರಿಕೆಯ ಮೂಲ್ಕಿ ವರದಿಗಾರ ಮಿಥುನ ಕೊಡೆತ್ತೂರ್‌ ಆಯ್ಕೆಯಾಗಿದ್ದಾರೆ.

ಹೊಸ ದಿಗಂತ ಪತ್ರಿಕೆಯಲ್ಲಿ 2023 ನವೆಂಬರ್‌ 7ರಂದು ಪ್ರಕಟವಾದ ಮಿಥುನ್‌ ಅವರ “ಬಾರಾಡಿಯಲ್ಲಿ ಬೆಳೆದಿದೆ 840 ತಳಿ ಭತ್ತʼ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 5,001 ರು., ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಮಂಗಳೂರು ಸುದ್ದಿವಿಭಾಗ ಮುಖ್ಯಸ್ಥ ಹರ್ಷ ಮತ್ತು ಆಳ್ವಾಸ್‌ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ನೇತೃತ್ವದ ಸಮಿತಿಯು ಈ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸದಿಗಂತ ದೈನಿಕದಲ್ಲಿ ಬಿಡಿ ಸುದ್ದಿ ಸಂಗ್ರಹಕಾರರಾಗಿ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರರಾಗಿ, ಅನಂತ ಪ್ರಕಾಶ ಮಾಸಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುವ ಮಿಥುನ್‌, 2022ರ ಪಗೋ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷರು.

ಜೂ. 27ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ

ಜೂ.27ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಭವನದಲ್ಲಿ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರವಾಲ್‌ ಪ್ರಶಸ್ತಿ ಪ್ರದಾನ ಮಾಡುವರು. ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಜಿಲ್ಲಾ ಆಯುಷ್‌ ಅಧಿಕಾರಿ ಇಕ್ಬಾಲ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸುವರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿರುವರು.

Categories
ಮಾಹಿತಿ

ಐಟಿ ರಿಟರ್ನ್ಸ್‌ ಸಲ್ಲಿಕೆ ಆಗಿಲ್ವಾ? ಈಗ್ಲೇ ಮಾಡ್ಕೊಳ್ಳಿ..!

ಐಟಿ ರಿಟರ್ನ್ಸ್‌ ಸಲ್ಲಿಕೆ ಆಗಿಲ್ವಾ? ಈಗ್ಲೇ ಮಾಡ್ಕೊಳ್ಳಿ..!

– ಜುಲೈ 31 ಕೊನೆಯ ದಿನ: ಈಗಲೇ ಮಾಡಿದ್ರೆ ಓಕೆ
– ಐಟಿ ರಿಟರ್ನ್ಸ್‌ ಸಲ್ಲಿಕೆ ಮಾಡದಿದ್ರೆ ಏನಾಗುತ್ತೆ…?

NAMMUR EXPRESS NEWS
2023-24ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಲು ಜುಲೈ 31, 2024 ಕೊನೆಯ ದಿನಾಂಕವಾಗಿದೆ. ಆದರೆ, ಇದಕ್ಕಿನ್ನೂ ಬೇಕಾದಷ್ಟು ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದಕ್ಕಿಂತ ಮೊದಲೇ ಫೈಲ್‌ ಮಾಡುವುದು ಉತ್ತಮ. ಇದರಿಂದ ಹಲವು ಲಾಭಗಳಿವೆ.

2023-24ನೇ ಹಣಕಾಸು ವರ್ಷದ ಐಟಿಆರ್‌ ಸಲ್ಲಿಕೆ ಮಾಡಲು ಜುಲೈ 31, 2024 ಕೊನೆಯ ದಿನ ಇದಕ್ಕಿನ್ನೂ ಬೇಕಾದಷ್ಟು ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದು ಒಳ್ಳೆಯದಲ್ಲ ಮೊದಲೇ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡುವುದು ಉತ್ತಮ, ಇದರಿಂದ ಇದೆ ಹಲವು ಲಾಭ.. 2023-24ರ ಹಣಕಾಸು ವರ್ಷದ ಆದಾಯ ತೆರಿಗೆ (ಐಟಿ) ರಿಟರ್ನ್ಸ್‌ ಫೈಲ್ ಮಾಡಲು ಮುಂದಿನ ತಿಂಗಳು ಅಂದ್ರೆ ಜುಲೈ 31, 2024 ಅಂತಿಮ ದಿನಾಂಕವಾಗಿದೆ. ಆದರೆ, ಇದಕ್ಕಿನ್ನೂ ಸಮಯ ಇದೆ ಎಂದು ಕೊನೆಯ ದಿನಾಂಕದವರೆಗೂ ಕಾಯುವುದಕ್ಕಿಂತ ಮೊದಲೇ ಫೈಲ್‌ ಮಾಡುವುದು ಬಹಳ ಜಾಣತನ. ಕೊನೆಯ ಸಮಯದಲ್ಲಿ ಸರ್ವರ್ ವೇಗ ಕಡಿಮೆ ಆಗಲಿದೆ. ನಿಮ್ಮ ಆಡಿಟರ್ ಬ್ಯುಸಿ ಆಗಬಹುದು. ನಿಮಗೆ ದಾಖಲೆ ನೀಡಲು ಒತ್ತಡ ಆಗಬಹುದು.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ

– ಜೈಲಲ್ಲಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ , ಮೇಕಪ್ ಅವಕಾಶ: ಮಹಿಳಾ ಪೊಲೀಸ್ ಅಧಿಕಾರಿಗೆ ನೋಟಿಸ್

– ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಪ್ತನಿಂದಲೇ ದೂರು

– ಜೈ ಹಿಂದ್ ಹೇಳದ ಓ ವೈ ಸಿ ವಿರುದ್ಧ ದೂರು ದಾಖಲಿಸಿದ ಶೋಭ ಕರಂದ್ಲಾಜೆ!

NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡ ಪೊಲೀಸ್ ವಶದಲ್ಲಿದ್ದ ವೇಳೆ, ಆಕೆಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಆಕೆಯ ಭದ್ರತಾ ಉಸ್ತುವಾರಿ ಹೊತ್ತಿದ್ದ ಮಹಿಳಾ ಪೊಲೀಸರಿಗೆ ಇದೀಗ ಸಂಕಷ್ಟ ಎದುರಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಪ್ತ ಪವಿತ್ರಾ ಗೌಡ ಸುಮಾರು 10 ದಿನಗಳ ಕಾಲ ಪೊಲೀಸ್‌ ವಶದಲ್ಲಿದ್ದಳು. ಈ ಸಂದರ್ಭ ಆಕೆಗೆ ಸೌಂದರ್ಯವರ್ಧಕಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎನ್ನುವುದು ಕೇಳಿ ಬರುತ್ತಿರುವ ಆರೋಪ. ಪೊಲೀಸರು ಪವಿತ್ರಾಗೌಡಳನ್ನು ತನಿಖೆ ಸಲುವಾಗಿ 10 ದಿನ ಕಸ್ಟಡಿಗೆ ಪಡೆದಿದ್ದರು. ಆ ವೇಳೆ ಆಕೆ ತುಟಿಗಳಿಗೆ ಲಿಪ್ಪಿಕ್ ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದಳು. ಪವಿತ್ರಾ ತುಟಿಗಳಿಗೆ ಲಿಪ್ ಸ್ಟಿಕ್ ಹಾಕಿಕೊಂಡಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ವಿಸ್ತಾರವಾಗಿದ್ದವು. ಈ ಹಿನ್ನಲೆಯಲ್ಲಿ ಪವಿತ್ರಾ ಗೌಡಳ ಭದ್ರತಾ ಉಸ್ತುವಾರಿ ಹೊತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರಿಗೆ ಈ ಸಂಬಂಧ ವಿವರಣೆ ಕೇಳಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮೆಮೋ ಕೊಟ್ಟಿದ್ದಾರೆ. ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಗಿರೀಶ್ ಅವರು ಕಸ್ಟಡಿಯಲ್ಲಿದ್ದಾಗ ಕೊಲೆ ಪ್ರಕರಣದ ಆರೋಪಿಗೆ ಲಿಪ್ಪಿಕ್ ಸೇರಿ ಸೌಂದರ್ಯವರ್ಧಕ ಬಳಸಲು ಅವಕಾಶ ಕೊಟ್ಟಿದ್ದು ಹೇಗೆ ಎಂಬ ಕುರಿತು ವಿವರಣೆ ನೀಡುವಂತೆ ಪಿಎಸ್‌ಐಗೆ ಮೆಮೋ ಕೊಟ್ಟಿದ್ದಾರೆ. ಆದರೆ ಇದುವರೆಗೆ ಮೆಮೋಗೆ ಪಿಎಸ್‌ಐ ಉತ್ತರ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.

ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಪ್ತನಿಂದಲೇ ದೂರು

ಹಾಸನ: ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಸಲಿಂಗ ಕಾಮ ದೌರ್ಜನ್ಯದ ದೂರು ದಾಖಲಾಗಿದೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
4 ದಿನಗಳ ಹಿಂದೆಯಷ್ಟೇ ಸೂರಜ್ ಪರವಾಗಿ ದೂರು ನೀಡಿದ್ದ ಶಿವಕುಮಾ‌ರ್ ಉಲ್ಟಾ ಹೊಡೆದಿದ್ದು, ಮೂರು ವರ್ಷದ ಹಿಂದೆ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದಾರೆ.
ಜೂನ್ 21ರಂದು ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ್ದ ಆಪ್ತ ಶಿವಕುಮಾ‌ರ್ ನಾಪತ್ತೆಯಾಗಿದ್ದರು. ಇದೀಗ ಉಲ್ಟಾ ಹೊಡೆದಿದ್ದು ಮೂರು ವರ್ಷಗಳ ಹಿಂದೆ ತನ್ನ ಮೇಲೆಯೂ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಮೂಲಕ ಸೂರಜ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ.

– ಜೈ ಹಿಂದ್ ಹೇಳದ ಓ ವೈ ಸಿ ವಿರುದ್ಧ ದೂರು ದಾಖಲಿಸಿದ ಶೋಭ ಕರಂದ್ಲಾಜೆ

NAMMUR EXPRESS NEWS
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಸಂಸತ್ತಿನಲ್ಲಿ 18ನೇ ಲೋಕಸಭೆಯ ಅಧಿವೇಶನದ ಎರಡನೇ ದಿನದಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಅವರ ಮಾತುಗಳು ಬಿಜೆಪಿಯ ಕೋಪಕ್ಕೆ ಕಾರಣವಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾರೆ. ಒವೈಸಿಯ ಭಾಷಣವನ್ನು ಸಂಸತ್ತಿನ ದಾಖಲೆಯಿಂದ ತೆಗೆದುಹಾಕುವಂತೆ ಸ್ಪೀಕರ್ ಮತ್ತು ಗೃಹ ಸಚಿವರಿಗೆ ಪತ್ರ ಬರೆದು ಕರಂದ್ಲಾಜೆ ಅವರು ಓವೈಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರು. ಘೋಷವಾಕ್ಯವಿಲ್ಲದೆ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

Categories
ಹವಾಮಾನ ಸುದ್ದಿ

ಮುಂಗಾರು ಮಳೆಯೇ ಏನು ನಿನ್ನ ಲೀಲೆ..!’

ಮುಂಗಾರು ಮಳೆಯೇ ಏನು ನಿನ್ನ ಲೀಲೆ..!’

– ರಾಜ್ಯದಲ್ಲಿ5 ದಿನ ಭಾರೀ ಮಳೆ ಅಲರ್ಟ್!
– ಕೃಷಿ ಚಟುವಟಿಕೆ ಚುರುಕು: ತುಂಬಿದ ನದಿಗಳು
– ಉತ್ತಮ ಮಳೆ, ಜಲಾಶಯಗಳಿಗೆ ಜೀವಕಳೆ

NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ವ್ಯಾಪಕ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಇನ್ನು ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಬತ್ತಿ ಹೋಗಿದ್ದ ಜಲಾಶಯಗಳು, ಈ ವರ್ಷ ಸುರಿಯುತ್ತಿರುವ ಮಳೆಗೆ ಮೈದುಂಬಿವೆ. ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ 2ರಂದು ರಾಜ್ಯಕ್ಕೆ ಮುಂಗಾರು ಆಗಮಿಸಿದ್ದು, 145 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಗಿಂತ ಶೇ 6ರಷ್ಟು ಅಧಿಕ ಮಳೆ ಬಿದ್ದಿದೆ. ಇದರಿಂದ ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ 16 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನು 5 ದಿನ ಬಾರಿ ಮಳೆ ಎಚ್ಚರಿಕೆ.!

ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

Categories
ತುಮಕೂರು

ಇಲ್ಲೊಂದು ದುರಂತ ಲವ್ ಸ್ಟೋರಿ!

ಇಲ್ಲೊಂದು ದುರಂತ ಲವ್ ಸ್ಟೋರಿ!

– ಪ್ರೀತಿ ಕುರುಡು: 50ರ ಅಂಕಲ್ ಜತೆ 19ರ ಬಾಲಕಿ ಲವ್!
– 50 ವರ್ಷ ವಯಸ್ಸಿನ ವಿವಾಹಿತನ ಜೊತೆ ಪರಾರಿಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

NAMMUR EXPRESS NEWS
ತುಮಕೂರು : 50 ವರ್ಷ ವಯಸ್ಸಿನ ವಿವಾಹಿತ ಪುರುಷನ ಜೊತೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅನನ್ಯ (19) ಎಂಬ ಕಾಲೇಜು ವಿದ್ಯಾರ್ಥಿನಿ ರಂಗಶಾಮಣ್ಣ (50) ಎಂಬುವವರನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಕೆ ಕಳೆದ 3 ದಿನದ ಹಿಂದೆ ಪ್ರಿಯಕರನ ಜೊತೆ ಓಡಿಹೋಗಿದ್ದಳು. ಆದರೆ ಕೆರೆಯ ದಡದಲ್ಲಿ ಕಾರು, ಇಬ್ಬರ ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

– ತುಮಕೂರು : ಆರೋಪಿಗಳ ಜತೆ ಸಂಪರ್ಕ ಕಾನ್‌ಸ್ಟೇಬಲ್ ಅಮಾನತು

ತುಮಕೂರು : ಆರೋಪಿಗಳ ಜತೆ ಸಂಪರ್ಕ, ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಹೊಸ ಬಡಾವಣೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹ್ಮದ್ ಗನಿ, ಕ್ಯಾತ್ಸಂದ್ರ ಠಾಣೆಯ ಕಾನ್‌ಸ್ಟೇಬಲ್ ಕಿರಣ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕೆ.ವಿ.ಆಶೋಕ್ ಆದೇಶಿಸಿದ್ದಾರೆ.

ವ್ಯಾಪಾರಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ, 40 ಸಾವಿರ ಹಣ ಕಿತ್ತುಕೊಂಡ ಆರೋಪದ ಮೇರೆಗೆ ಉದ್ಯಮಿ ಮಂಜುನಾಥ ರೆಡ್ಡಿ ಇತರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ಸಮಯದಲ್ಲಿ ಮಂಜುನಾಥ್ ರೆಡ್ಡಿಗೆ ಇಬ್ಬರು ಕಾನ್ ಸ್ಟೇಬಲ್ ಜತೆ ಸಂಪರ್ಕ ಇರುವ ಮಾಹಿತಿ ಹೊರ ಬಂದಿದೆ. ಇದೇ ಆಧಾರದ ಮೇಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಜುನಾಥ್ ರೆಡ್ಡಿ ವಿರುದ್ಧ ತಿಲಕ್ ಪಾರ್ಕ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ಪ್ರಕರಣದಲ್ಲಿ ಜೂನ್ 10ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಿಬ್ಬಂದಿ ಸೇರಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು,

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಪತ್ನಿ ಸೀಮಂತಕ್ಕೆಂದು ವಿದೇಶದಿಂದ ಊರಿಗೆ ಬಂದಿದ್ದ ಅಪಘಾತಕ್ಕೆ ಬಲಿ!
– ಕುಂಬಳೆ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು!
– ಬೆಳ್ತಂಗಡಿ: ಅನಾರೋಗ್ಯ ಬೇಸರ: ಯುವತಿ ನೇಣಿಗೆ ಶರಣು!

NAMMUR EXPRESS NEWS
ಕುಂಬಳೆ: ಎರಡು ದಿನಗಳ ಹಿಂದೆಯಷ್ಟೇ ವಿದೇಶದಿಂದ ಊರಿಗೆ ಬಂದಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಆರಿಕ್ಕಾಡಿಯಲ್ಲಿ ನಡೆದಿದೆ.

ಕುಂಬಳೆ ಬಂಬ್ರಾಣ ಉಜಾರಿನ ಅಜಿತ್ ಶೆಟ್ಟಿ (31) ಮೃತಪಟ್ಟವರು. ಅಜಿತ್ ಅವರು ಕತಾರ್ ನಲ್ಲಿ ಉದ್ಯೋಗದಲ್ಲಿದ್ದು ಜೂನ್ 21 ರಂದು ಊರಿಗೆ ಬಂದಿದ್ದರೆ. ಜೂ. 23 ರಂದು ಪತ್ನಿಯ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಆದರೆ ಸೋಮವಾರ ರಾತ್ರಿ ಕುಂಬಳೆ ಪೇಟೆಗೆ ಬಂದು ಸಾಮಾಗ್ರಿ ಖರೀದಿಸಿ ಮರಳುತ್ತಿದ್ದಾಗ ಆರಿಕ್ಕಾಡಿ ಸಮೀಪ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಅಜಿತ್ ನನ್ನು ಕುಂಬಳೆ ಆಸ್ಪತ್ರೆಗೆ ಸಾಗಿಸಿ ನಂತರ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿಯಲ್ಲಿ ಯುವತಿ ನೇಣಿಗೆ ಶರಣು!

ಯುವತಿಯೊಬ್ಬಳು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವಿ ಸಮೀಪದ ಕೊಳಂಬೆ ಎಂಬಲ್ಲಿ ನಡೆದಿದೆ. ಇಲ್ಲಿನ ಉಮೇಶ್‌ ಗೌಡರ ಪುತ್ರಿ ವಿದ್ಯಾ(22) ಸಾವಿಗೆ ಶರಣಾಗಿರುವ ಯುವತಿ. ವಿದ್ಯಾ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Categories
ತೀರ್ಥಹಳ್ಳಿ

ಕುವೆಂಪು ಶಾಲೆ ಎಸ್. ಡಿ. ಎಂ. ಸಿಗೆ ಸತೀಶ್ ಶೆಟ್ಟಿ ಸಾರಥ್ಯ

ಕುವೆಂಪು ಶಾಲೆ ಎಸ್. ಡಿ. ಎಂ. ಸಿಗೆ ಸತೀಶ್ ಶೆಟ್ಟಿ ಸಾರಥ್ಯ

– 18 ಜನ ಸದಸ್ಯರನ್ನು ಒಳಗೊಂಡ ಹೊಸ ಸಮಿತಿ ರಚನೆ
– ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ
– ಬೆಂಗಳೂರಿನ ಶ್ರೀಗಂಧ ಫೌಂಡೇಶನ್ ವತಿಯಿಂದ ಸೇವಾ ಕಾರ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕುವೆಂಪು ಶಾಲೆ ತೀರ್ಥಹಳ್ಳಿಯ ಪೋಷಕರ ಸಭೆಯಲ್ಲಿ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆಯಾಯಿತು. ಎಲ್ಲಾ ಪೋಷಕರು ಹಾಗೂ ಹೊಸದಾಗಿ ಆಯ್ಕೆ ಆದ ಎಲ್ಲಾ ಸದಸ್ಯರ ಸರ್ವಾನುಮತದಿಂದ ಸತೀಶ್ ಶೆಟ್ಟಿ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ನೇತ್ರಾವತಿ ಅವರನ್ನು ಆಯ್ಕೆ ಮಾಡಲಾಯಿತು ಒಟ್ಟಾರೆ 18 ಜನ ಸದಸ್ಯರನ್ನು ಒಳಗೊಂಡ ಹೊಸ ಸಮಿತಿ ರಚನೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಎಲ್ಲಾ ಶಿಕ್ಷಕರ ಪರವಾಗಿ ಹೃತ್ಪೂರ್ವಕದಂತಹ ಅಭಿನಂದನೆಗಳನ್ನು ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಕುವೆಂಪು ಶಾಲೆ ತೀರ್ಥಹಳ್ಳಿ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ
– ಬೆಂಗಳೂರಿನ ಶ್ರೀಗಂಧ ಫೌಂಡೇಶನ್ ವತಿಯಿಂದ ಸೇವಾ ಕಾರ್ಯ

ತೀರ್ಥಹಳ್ಳಿ : ತೀರ್ಥಹಳ್ಳಿಯ ಅತಿ ಹಿರಿಯ ಶಾಲೆ, ಕುವೆಂಪು ಓದಿದ ಶಾಲೆ ಮುಖ್ಯ ಬಸ್ ನಿಲ್ದಾಣದ ಹಿಂಭಾಗದ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಗಂಧ ಫೌಂಡೇಶನ್ ವತಿಯಿಂದ ಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನು ಇತ್ತೀಚಿಗೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀಗಂಧ ಫೌಂಡೇಶನ್ ಪ್ರಮುಖರು ಹಾಜರಿದ್ದರು, ಈ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೂ ಪುಸ್ತಕ, ನೋಟ್ ಬುಕ್ ಹಾಗೂ ಪೆನ್ನು, ಪೆನ್ಸಿಲ್ ಸೇರಿದಂತೆ ಓದಲು ಬೇಕಾದಂತಹ ಪರಿಕರಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಗಂಧ ಫೌಂಡೇಶನ್ ಅಧ್ಯಕ್ಷರಾದ ರವಿ ಪೂಜಾರ್ ಅವರು ಮಾತನಾಡಿ, ರಾಜ್ಯದಲ್ಲಿ ಶ್ರೀಗಂಧ ಪೌಂಡೇಶನ್ ವತಿಯಿಂದ ಅನೇಕ ಸರ್ಕಾರಿ ಶಾಲೆಗಳಿಗೆ ಹಾಗೂ ಮಕ್ಕಳಿಗೆ ಪುಸ್ತಕ ಪೆನ್ ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ.ಶಾಲೆಯ ಅಭಿವೃದ್ಧಿಗೆ ಸೇರಿದಂತೆ ಶೌಚಾಲಯ ಸೇರಿದಂತೆ ಹೈಟೆಕ್ ವ್ಯವಸ್ಥೆಗಳನ್ನ ನೀಡಲಾಗಿದೆ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಜೊತೆಗೆ ಸರ್ಕಾರಿ ಶಾಲೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ನಾವು ವರ್ಷಕ್ಕೆ ಇಂತಿಷ್ಟು ಶಾಲೆಗಳಿಗೊಂದು ನಾವು ನೆರವನ್ನು ನೀಡುತ್ತಿದ್ದೇವೆ. ನಮ್ಮ ಈ ನೆರವಿಗೆ ಅನೇಕ ನಮ್ಮ ಸಹೋದ್ಯೋಗಿಗಳು ನಮಗೆ ಸಹಕಾರ ನೀಡಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 200ಕ್ಕೂ ಹೆಚ್ಚು ಮಂದಿ ಸೇರಿ ಸಂಸ್ಥೆಯನ್ನು ಕಟ್ಟಿದ್ದೇವೆ.ಈಗಾಗಲೇ ಸರ್ಕಾರಿ ಶಾಲೆಗಳಿಗೆ ನೆರವು ನೀಡುತ್ತಿದ್ದೇವೆ ಎಂದರು. ಶ್ರೀಗಂಧ ಫೌಂಡೇಶನ್ ರವಿ ಪೂಜಾರಿ, ರಾಜೇಶ್ ಎಸ್ ವ, ಚೇತನ್ ಮಂಜ, ಚಂದ್ರಕಾಂತ್ ಮಂಜ, ಶಾಲಾ ಅಭಿವೃದ್ಧಿ ಸಮಿತಿಯ ಪ್ರಮುಖರು, ಶಿಕ್ಷಕ, ಶಿಕ್ಷಕಿ ಸಿಬ್ಬಂದಿಗಳು ಹಾಜರಿದ್ದರು.

 

Categories
ಮಲ್ನಾಡ್

ಟಾಪ್ 6 ನ್ಯೂಸ್ ಮಲ್ನಾಡ್

ಟಾಪ್ 6 ನ್ಯೂಸ್ ಮಲ್ನಾಡ್

ಟ್ಯಾಂಕರ್‌ – ಒಮಿನಿ ನಡುವೆ ಡಿಕ್ಕಿ:ಸ್ಥಳದಲ್ಲಿಯೇ ಸಾವು
– ಸಾಗರದ ಆನಂದಪುರದಲ್ಲಿ ಘಟನೆ: ತೀರ್ಥಹಳ್ಳಿ ಮೂಲದ ವ್ಯಕ್ತಿ ದುರ್ಮರಣ

– ತೀರ್ಥಹಳ್ಳಿ: ಹಾಸ್ಟೆಲ್‌’ನ ಅಡುಗೆಯಲ್ಲಿ ಪತ್ತೆಯಾದ ಸತ್ತ ಹಲ್ಲಿ!
– ಶಿವಮೊಗ್ಗ: ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
– ಶಿವಮೊಗ್ಗ : ಬಸ್ ನಲ್ಲಿರುವಾಗಲೇ ಲ್ಯಾಪ್ ಟ್ಯಾಪ್ ಕಳುವು
– ಭದ್ರಾವತಿ: ಪೊಲೀಸರ ಅಮಾನತು
– ಹೊಸನಗರ: ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಕಾರ್ಮಿಕ!

NAMMUR EXPRESS NEWS
ಸಾಗರ: ನಂದಿನಿ ಹಾಲಿನ ಟ್ಯಾಂಕರ್‌ – ಒಮಿನಿ ನಡುವೆ ಡಿಕ್ಕಿ ಅಪಘಾತವೊಂದು ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಸಂಭವಿಸಿದೆ. ಘಟನೆಯಲ್ಲಿ ತೀರ್ಥಹಳ್ಳಿ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ತಡರಾತ್ರಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ಇಲ್ಲಿ ವರದಿಯಾಗಿದೆ. ಸಾಗರ ತಾಲ್ಲೂಕು ಆನಂದಪುರದಿಂದ ಶಿಕಾರಿಪುರದ ಕಡೆಗೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಹಾಗೂ ಶಿಕಾರಿಪುರದಿಂದ ಕೋಣಂದೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕ ಕುಳಿತಿದ್ದ ಈರಪ್ಪ(58) ಎಂಬವರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರ ನಿವಾಸಿಯಾಗಿರುವ ಈರಪ್ಪ ಸಾವನ್ನಪ್ಪಿದರೇ, ಘಟನೆಯಲ್ಲಿ ನಾಗಾರ್ಜುನ, ಶಮಂತ್, ರುದ್ರೇಶ್, ನಿತಿನ್ ಅವರಿಗೆ ಗಾಯಗಳಾಗಿವೆ. ಇನ್ನೂ ಈ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ತೀರ್ಥಹಳ್ಳಿ: ಹಾಸ್ಟೆಲ್‌’ನ ಅಡುಗೆಯಲ್ಲಿ ಪತ್ತೆಯಾದ ಸತ್ತ ಹಲ್ಲಿ!

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಲ್ಲಿ ಬಿದ್ದಿದ್ದ ಸಾರನ್ನೇ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಇತ್ತೀಚಿಗೆ ಊಟಕ್ಕಾಗಿ ತಟ್ಟೆ ಹಿಡಿದ ಸಂದರ್ಭದಲ್ಲಿ ನಾಲೈದು ವಿದ್ಯಾರ್ಥಿನಿಯರಿಗೆ ಹಲ್ಲಿಯ ತಲೆ, ಕಾಲು, ಬಾಲದ ತುಂಡುಗಳು ಸಿಕ್ಕಿರುವುದಾಗಿ ಮಾತು ಕೇಳಿ ಬಂದಿದ್ದು ಇದು ಇನ್ನಷ್ಟು ಆತಂಕ ಮೂಡಿಸಿದೆ.

– ಶಿವಮೊಗ್ಗ: ಬಂದ ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಶಿವಮೊಗ್ಗ : ತುಮಕೂರು ಟು ಶಿವಮೊಗ್ಗ ಟ್ರೈನ್‌ 16567 ನಲ್ಲಿನ ಬೋಗಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ. ಜೂನ್ 25 ರಂದು ನಡೆದ ಘಟನೆ ಇದಾಗಿದೆ. ಅಂದು ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ನಂ 16567 ರೈಲುಗಾಡಿ ಬಂದು ನಿಂತಿತ್ತು. ಆ ರೈಲಿನ ಕೋಚ್ ನಂ ಜಿಎಸ್‍ಆರ್‍ಡಿ/ಎಸ್‍ಡಬ್ಲ್ಯುಆರ್/144211 ರಲ್ಲಿ ಸುಮಾರು 65 ವರ್ಷದ ಪುರುಷನ ಶವ ಪತ್ತೆಯಾಗಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಆದರೆ ಇದುವರೆಗೂ ಮೃತರ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಪ್ರಕಟಣೆಯನ್ನ ನೀಡಲಾಗಿದೆ. ಮೃತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೃಶವಾದ ಶರೀರ, ಕಪ್ಪು ಮೈಬಣ್ಣ, ಕೋಲುಮುಖ, ನೀಳ ಮೂಗು, ಸುಮಾರು ಒಂದು ಇಂಚು ಉದ್ದದ ಕಪ್ಪುಬಿಳಿ ಕೂದಲು,ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ತಿಳಿ ನೀಲಿ ಬಣ್ಣದ ಕಾಟನ್ ಚಡ್ಡಿ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್‍ಇನ್ಸಪೆಕ್ಟರ್ ದೂ.ಸಂ: 08182 222974 ಮತ್ತು 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆ ತಿಳಿಸಿದಾರೆ.

– ಶಿವಮೊಗ್ಗ : ಬಸ್ ನಲ್ಲಿರುವಾಗಲೇ ಲ್ಯಾಪ್ ಟ್ಯಾಪ್ ಕಳುವು

ಶಿವಮೊಗ್ಗ: ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪ್ರಕರಣ ಕಡಿಮೆ. ಈ ವರ್ಷದಲ್ಲಿ ಇದು 5-7 ನೇ ಪ್ರಕರಣವಿರಬಹುದು. ಸುಮಾರು 3 ವರ್ಷಗಳಿಂದ ಬೆಂಗಳೂರಿನಲ್ಲಿ ಟೆಗೂಟೆಕ್ ಇಂಡಿಯಾ ಪ್ರೈವೇಟ್ ಲಿ. ಕಂಪನಿಯಲ್ಲಿ ಪ್ರೋಡಕ್ಷನ್ ಪ್ಲಾನರ್ & ಕಂಟ್ರೋಲರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರ ಕಂಪನಿ ವತಿಯಿಂದ ಕೆಲಸಕ್ಕಾಗಿ ನೀಡಿದ್ದ HP Pavilion Ryzen 5 Hex ಲ್ಯಾಪ್ ಟಾಪ್ ಕಳುವಾಗಿದೆ. ಶನಿವಾರ & ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದ ಯುವತಿ‌ ವಾಪಾಸ್ ಬೆಂಗಳೂರಿಗೆ ಹೋಗಲು ತನ್ನ ಅಕ್ಕಳ ಜೊತೆ ಪ್ರಯಾಣ ಬೆಳೆಸಿದ್ದಾರೆ. ಜೂ.23 ರಂದು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ನಲ್ಲಿ ಬೆಂಗಳೂರಿಗೆ ಹೋಗುವ ಕೆಎ-17 ಎಫ್-1487 ಬಸ್ ಹತ್ತಿ ಕುಳಿತಿದ್ದರು. ಲಗೇಜ್ ಕ್ಯಾರಿಯರ್ ನಲ್ಲಿ, ಲಗೇಜ್ ಇದ್ದ ಒಂದು ಬ್ಯಾಗ್ ಮತ್ತು ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಇಟ್ಟಿದ್ದರು, ಜನರು ಹೆಚ್ಚಾಗಿದ್ದು, ಬಸ್ ತುಂಬಾ ರಶ್ ಆಗಿದೆ. ಜನರು ಸ್ಟ್ಯಾಂಡಿಂಗ್ ನಲ್ಲಿದ್ದರು, ನೀರು ಕುಡಿಯಲು ಲಗೇಜ್ ಬ್ಯಾಗ್ನಲ್ಲಿಟ್ಟಿದ್ದ ನೀರಿನ ಬಾಟಲ್ ತೆಗೆಯಲು ಹೋದಾಗ ಲಗೇಜ್ ಕ್ಯಾರಿಯರ್ ನಲ್ಲಿಟ್ಟಿದ್ದ ಲ್ಯಾಪ್ ಟಾಪ್ ಇದ್ದ ಬ್ಯಾಗ್ ಇರಲಿಲ್ಲ. ನಂತರ ಬಸ್ಸಿನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಬ್ಯಾಗ್ ಇರಲಿಲ್ಲ. ಪ್ರಯಾಣಿಕರಂತೆ ಬಂದು ಲ್ಯಾಪ್ ಟಾಪ್ ಇದ್ದ ಬ್ಯಾಗ್ ನ್ನು ಕಳವು ಮಾಡಲಾಗಿದೆ.

– ಭದ್ರಾವತಿ: ಪೊಲೀಸರ ಅಮಾನತು

ಭದ್ರಾವತಿ: ಭದ್ರಾವತಿಯ ಎರಡು ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನ ಅಮಾನತುಗೊಳಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಆದೇಶಿಸಿದ್ದಾರೆ. ಭದ್ರಾವತಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಉಲ್ಲಾಸ್ ಎಂಬುವರನ್ನ ಅಮಾನತುಗೊಳಿಸಿದರೆ, ಬಹಳ ಕುತೂಹಲ ಮೂಡಿಸಿದ್ದ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯ ಗಿರೀಶ್ ರನ್ನ ಅಮಾನತುಗೊಳಿಸಿ ಎಸ್ಪಿ ಅವರು ಆದೇಶಿಸಿದ್ದಾರೆ. ಅಪಘಾತಗೊಂಡಿದ್ದ ವಾಹನವನ್ನ ಅದಲು ಬದಲು ಮಾಡಿದ ಪ್ರಕರಣದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಉಲ್ಲಾಸ್ ವಿರುದ್ಧ ಎಸ್ಪಿ ಅವರಿಗೆ ಮಾಹಿತಿ ಹೋಗಿತ್ತು. ಕರ್ತವ್ಯದಲ್ಲಿ ನಿರ್ಲಕ್ಷತೆಯ ಹಿನ್ನಲೆಯಲ್ಲಿ ಅವರನ್ನ ಅಮಾನತುಗೊಳಿಸಲಾಗಿದೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಗೆ ರೌಡಿ ಎಲಿಮೆಂಟ್ಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಅಮಾನತುಗೊಳಿಸಲಾಗಿದೆ.

– ರಿಪ್ಪನಪೇಟೆ : ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಕಾರ್ಮಿಕ

ರಿಪ್ಪನಪೇಟೆ : ವಿದ್ಯುತ್‌ ಕಂಬವೇರಿದ ಗುತ್ತಿಗೆ ಕಾರ್ಮಿಕನೊಬ್ಬನಿಗೆ ಕರೆಂಟ್ ಶಾಕ್ ಆಗಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟಾಣಿಜೇಡ್ಡು ಗ್ರಾಮದಲ್ಲಿ ನಡೆದಿದೆ. ಶಿಗ್ಗಾಂವ್ ಮೂಲದ ರಮೇಶ್(24) ಗಂಭೀರ ಗಾಯಗೊಂಡಿರುವ ವಿದ್ಯುತ್‌ ಗುತ್ತಿಗೆ ಕಾರ್ಮಿಕನಾಗಿದ್ದಾನೆ.

ಬಟಾಣಿಜೆಡ್ಡು ಗ್ರಾಮದಲ್ಲಿ ಕಾಮಗಾರಿ ನಿಮಿತ್ತ ಗುತ್ತಿಗೆ ಕಾರ್ಮಿಕ ರಮೇಶ್ ಲೈಟ್ ಕಂಬವೇರಿದ್ದು ಈ ಸಂಧರ್ಭದಲ್ಲಿ ಆತನಿಗೆ ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.ಕೂಡಲೇ ಆತನನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಮೂಲಗಳ ಪ್ರಕಾರ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯತನದಿಂದ ಫೋನಿನಲ್ಲಿ ಯುವತಿಯೊಂದಿಗೆ ಮಾತನಾಡುತ್ತಾ ಲೈಟ್ ಕಂಬವೇರಿದ್ದ ಗುತ್ತಿಗೆ ನೌಕರ ರಮೇಶ್ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Categories
ಕರಾವಳಿ

ಕರಾವಳಿಯಲ್ಲಿ ಮಳೆಗೆ ನಾಲ್ವರು ಬಲಿ!

ಕರಾವಳಿಯಲ್ಲಿ ಮಳೆಗೆ ನಾಲ್ವರು ಬಲಿ!

– ಮನೆ ಗೋಡೆ ಕುಸಿದು ಒಂದೆ ಕುಟುಂಬದ ನಾಲ್ವರು ಸಾವು
– ಮೊದಲ ಮಳೆಗೆ ದುರಂತ: ಕುಟುಂಬದ ಆಕ್ರಂದನ

NAMMUR EXPRESS NEWS
ಉಳ್ಳಾಲ: ಮಳೆಗೆ ಕರಾವಳಿಯಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದಲ್ಲಿ ಮಳೆಗೆ ಮನೆ ಕುಸಿದು ಒಂದೇ ಕುಟುಂದ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಹಾಗೂ ಮಕ್ಕಳಾದ ರಿಯಾನ, ರಿಫಾನ ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಮಳೆ ಶುರುವಾಗುತ್ತಿದ್ದಂತೆ ಮೊದಲ ದುರಂತ ಸಂಭವಿಸಿದೆ.