Categories
ಮಂಗಳೂರು

ಮಂಗಳೂರು ಹಲವೆಡೆ ಜಲಾವೃತ!

ಮಂಗಳೂರು ಹಲವೆಡೆ ಜಲಾವೃತ!

– ಜಪ್ಪಿನಮೊಗೆರು ದೊಂಪದಬಲಿ ಪ್ರದೇಶ ಜಲಾವೃತ
– ದಕ್ಷಿಣ ಕನ್ನಡದ ಅಪಾಯಕಾರಿ ಮನೆಗಳ ಬಗ್ಗೆ ಸರ್ವೆ: ಸಚಿವ ಕೃಷ್ಣ ಬೈರೇಗೌಡ
– ಮುನ್ನೂರು ಗ್ರಾಮದ ದುರಂತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು

NAMMUR EXPRESS NEWS
ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಅನಿವಾರ್ಯವಾಗಿ ಇಂತಹ ಇಳಿಜಾರು ಮತ್ತು ತಗ್ಗು ಪ್ರದೇಶದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ದುರಂತಗಳಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮೊದಲೃ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಉಳ್ಳಾಲದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಬುಧವಾರ ತಡೆಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿರುವ ಅಪಾಯಕಾರಿ ಮನೆಗಳ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಸೂಚನೆ ಮೇರೆಗೆ ನಾನಿಲ್ಲಿಗೆ ಭೇಟಿ ನೀಡಿದ್ದೇನೆ.

ಸ್ಥಳೀಯ ಶಾಸಕರೂ ಆದ ಸ್ಪೀಕರ್‌ ಯುಟಿ ಖಾದರ್‌ ಘಟನೆ ನಡೆದ ತಕ್ಷಣ ನನಗೆ ಮಾಹಿತಿ ನೀಡಿದ್ದರು. ಮಳೆಗಾಲದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ರೀತಿಯ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಮಂಗಳವಾರ ರಾತ್ರಿ ಸತತವಾಗಿ ಮಳೆ ಸುರಿದಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ. ನನಗೆ ತಿಳಿದ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ ಸುಮಾರು 3ರಿಂದ 4ರ ಮಧ್ಯೆ ಈ ಘಟನೆಯು ನಡೆದಿರುವ ಸಾಧ್ಯತೆಯಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರದಿಂದ ಗರಿಷ್ಠ ಪರಿಹಾರ ಕೊಡಿಸಲು ಜರಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಜಪ್ಪಿನಮೊಗೆರು ದೊಂಪದಬಲಿ ಪ್ರದೇಶ ಜಲಾವೃತ

ಮಂಗಳೂರು: ಮಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಪ್ಪಿನಮೊಗೆರು ಪ್ರದೇಶದಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಗೂ ಮನೆಗಳು ಜಲಾವೃತಗೊಂಡಿದೆ. ಇಲ್ಲಿನ ದೊಂಪದಬಲಿ ಎಂಬಲ್ಲಿನ ರಾಜಾಕಾಲುವೆ ಬ್ಲಾಕ್ ಆಗಿ ನೀರು ನದಿ ಸೇರದೆ ಈ ಕೃತಕ ನೆರೆ ಉಂಟಾಗಿದೆ.

ಹಲವಾರು ವರ್ಷಗಳಿಂದ ಇಲ್ಲಿ ರಸ್ತೆ ಸಮಸ್ಯೆ ಇದ್ದು, ಇತ್ತೀಚೆಗೆ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಕಾಂಕ್ರೀಟ್ ರಸ್ತೆಯ ಇಕ್ಕೆಲೆಗಳಲ್ಲಿ ನಿರ್ಮಿಸಬೇಕಾದ ಚರಂಡಿಯನ್ನು ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣ ಎಂದು ಸ್ಥಳಿಯರು ದೂರಿದ್ದಾರೆ. ಮೊದಲೇ ತಗ್ಗು ಪ್ರದೇಶದಲ್ಲಿ ಇರುವ ದೊಂಪದ ಬಲಿ ಪ್ರದೇಶ ರಸ್ತೆಗಿಂತ ಕೆಳಗೆ ಇರುವ ಕಾರಣ ರಸ್ತೆಯಲ್ಲಿ ಹರಿಯುವ ನೀರು ನೇರ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಚರಂಡಿ ನಿರ್ಮಾಣ ಮಾಡಿದ್ದೇ ಆಗಿದ್ದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಕಾರ್ಪೋರೇಟರ್ ವೀಣಾಮಂಗಳ ಸ್ಥಳೀಯ ನಿವಾಸಿಗಳು ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸದೇ ಇರುವುದು ಈ ಸಮಸ್ಯೆಗೆ ಮೂಲಕ ಕಾರಣ ಎಂದು ಹೇಳಿದ್ದಾರೆ. ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಲ್ಲಿನ ಚರಂಡಿಗೆ ಎಸೆಯುವ ಕಾರಣ ಇವುಗಳುರಾಜಾಕಾಲುವೆಯಲ್ಲಿ ಶೇಖರಣೆಯಾಗಿ ಈ ರೀತಿ ಅವಾಂತರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ನೀರು ಸರಾಗವಾಗಿ ಹರಿದು ರಾಜಕಾಲುವ ಸೇರಲು ಚರಂಡಿ ನಿರ್ಮಾಣದ ವೇಳೆ ಕೆಲವರು ಅನಗತ್ಯವಾಗಿ ಸ್ಟೇ ತಂದು ಕಾಮಗಾರಿ ತಡೆ ಹಿಡಿದಿದ್ದಾರೆ ಎಂದು ಸ್ಥಳಿಯರ ಅಸಹಕಾರದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.

Categories
ಮಂಗಳೂರು

ಮಂಗಳೂರು : ಕಣ್ಣೂರ್ ವಾರ್ಡಿನಲ್ಲಿ ಉಚಿತ ಆರೋಗ್ಯ ಶಿಬಿರ

ಮಂಗಳೂರು : ಕಣ್ಣೂರ್ ವಾರ್ಡಿನಲ್ಲಿ ಉಚಿತ ಆರೋಗ್ಯ ಶಿಬಿರ

– ಕಾರ್ಪೊರೇಟರ್ ಚಂದ್ರಾವತಿ ವಿಶ್ವನಾಥ್ ಅವರ ಉಪಸ್ಥಿತಿ
– ವಾರ್ಡ್ ವ್ಯಾಪ್ತಿಯಲ್ಲಿ ಅನೇಕ ಸಾಮಾಜಿಕ ಕೆಲಸ

NAMMUR EXPRESS NEWS
ಮಂಗಳೂರು: ಕಣ್ಣೂರ್ ವಾರ್ಡಿನ ವೀರನಗರ ಅಂಗನವಾಡಿ ಕೇಂದ್ರದಲ್ಲಿ ಪಡೀಲ್ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಪೊರೇಟರ್ ಚಂದ್ರಾವತಿ ವಿಶ್ವನಾಥ್ ಕಾರ್ಯಕ್ರಮವನ್ನು ಉದ್ಘಾಟಸಿದರು. ಈ ವೇಳೆ ನೂರಾರು ಮಂದಿಗೆ ಉಚಿತ ಅರೋಗ್ಯ ತಪಾಸಣೆ ಮಾಡಲಾಯಿತು. ಈ ವೇಳೆ ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು, ಸಿಬ್ಬಂದಿ ಹಾಜರಿದ್ದರು.

ವಾರ್ಡ್ ವ್ಯಾಪ್ತಿಯಲ್ಲಿ ಅನೇಕ ಸಾಮಾಜಿಕ ಕೆಲಸ

ಮಂಗಳೂರು ಬೃಹತ್ ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ವಾರ್ಡ್ ಸದಸ್ಯೆ ಚಂದ್ರಾವತಿ ವಿಶ್ವನಾಥ್ ಅವರು ತಮ್ಮ ವಾರ್ಡ್ ವ್ಯಾಪ್ತಿ ಸೇರಿ ನಗರದಲ್ಲಿ ಮಹಿಳಾ ಸ್ವಾವಲಂಬನೆ, ಅರೋಗ್ಯ, ಸಮುದಾಯ ಸೇವೆ, ಸ್ವಚ್ಛತೆ ಸೇರಿ ಅನೇಕ ಸಾಮಾಜಿಕ ಕೆಲಸ ಮಾಡುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Categories
ಕರಾವಳಿ

ಟಾಪ್ 5 ನ್ಯೂಸ್ ಕರಾವಳಿ

ಟಾಪ್ 5 ನ್ಯೂಸ್ ಕರಾವಳಿ

– ಹಲಸಿನಕಾಯಿ ಜೀವ ತೆಗೆಯಿತು!

– ವಿಟ್ಲ: ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವಾಗ ತಲೆ ಮೇಲೆ ಬಿದ್ದ ಹಲಸಿನ ಕಾಯಿ: ಹಿರಿಯ ನಾಗರಿಕ ಸಾವು
– ಬಂಟ್ವಾಳ: ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಮಂಗಳೂರು: ಎಮ್ಮೆಕೆರೆ ಕೊಳ ಒತ್ತುವರಿ ಮಾಡಿ ಈಜುಕೊಳ ನಿರ್ಮಾಣ: ಸಮಗ್ರ ತನಿಖೆಗೆ ಎನ್‌ಇಸಿಎಫ್‌ ಸಂಸ್ಥೆ ಪಟ್ಟು
– ಸುರತ್ಕಲ್ : ಮನೆ ಕದಿಯುತ್ತಿದ್ದ ಕಳ್ಳ ಅಂದರ್!

NAMMUR EXPRESS NEWS
ವಿಟ್ಲ: ಹಲಸಿನ ಕಾಯಿ ತಲೆ ಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೃತರು ಕಾಶ್ಮೀರ್ ಮಿನೇಜಸ್ (80) ಎಂದು ಹೇಳಲಾಗಿದೆ. ವಿಟ್ಲ ಕಸಬಾ ಗ್ರಾಮದ ದಾಸರಬೆಟ್ಟಿನಲ್ಲಿ ಇಲ್ಲಿನ ನಿವಾಸಿ ಮಿನೇಜಸ್ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಈ ವೇಳೆ ಹಲಸಿನ ಮರದಿಂದ ಹಲಸಿನ ಕಾಯಿ ಬಿದ್ದಿದೆ. ಅದು ಮಿನೇಜಸ್‌ರವರ ತಲೆಯ ಮೇಲೆ ಬಿದ್ದಿದೆ. ತಕ್ಷಣವೇ ಅಸ್ವಸ್ಥರಾದ ಅವರ ಮೂಗಿನಿಂದ ರಕ್ತ ಬರಲಾರಂಭಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

– ಬಂಟ್ವಾಳ: ಕಿಟಕಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಬಂಟ್ವಾಳ : ಯುವಕನೋರ್ವ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನರಿಕೊಂಬು ಎಂಬಲ್ಲಿ ನಡೆದಿದೆ. ಬಂಟ್ವಾಳ ನಿವಾಸಿ ಶೇಖರ ಪೂಜಾರಿ ಅವರ ಎರಡನೇ ಮಗ ರಮೇಶ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ರಮೇಶ್ ಯಾವುದೋ ವಿಷ ಪದಾರ್ಥ ಸೇವಿಸಿ ಬಳಿಕ ಕಿಟಕಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಈವರೆಗೆ ತಿಳಿದುಬಂದಿಲ್ಲ. ಅತ್ಯಂತ ಸೌಮ್ಯ ಸ್ವಭಾವದ ಶ್ರಮ ಜೀವಿಯಾಗಿದ್ದ ರಮೇಶ್ ಇಲ್ಲಿನ ಸ್ಥಳೀಯ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಅಣ್ಣ ಕೂಡ ಕಳೆದ ವರ್ಷ ಇವರ ಹಳೆಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಶೇಖರ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳು, ಇದೀಗ ಇಬ್ಬರು ಕೂಡ ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಹಾಗೂ ಊರಿನ ಅನೇಕರು ಭೇಟಿ ನೀಡಿದ್ದಾರೆ. ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರಿನ ಎಮ್ಮೆಕೆರೆ ಕೊಳ ಒತ್ತುವರಿ ಮಾಡಿ ಈಜುಕೊಳ ನಿರ್ಮಾಣ: ಸಮಗ್ರ ತನಿಖೆಗೆ ಎನ್‌ಇಸಿಎಫ್‌ ಸಂಸ್ಥೆ ಪಟ್ಟು

ಮಂಗಳೂರು ನಗರದ ತೋಟ ಗ್ರಾಮದ ಸರ್ವೆ ನಂಬರ್‌ 108ರಲ್ಲಿ ಐತಿಹಾಸಿಕ ಎಮ್ಮೆಕೆರೆ ಹೊಂಡವನ್ನು ಅತಿಕ್ರಮಿಸಿ ಈಜುಕೊಳ ನಿರ್ಮಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್‌)ವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸ್ಮಾಟಿ ಸಿಟಿ ನಿರ್ದೇಶಕರು ಸೇರಿದಂತೆ ಸಂಬಂಧ ಇಲಾಖೆಗಳ ಮುಖ್ಯಸ್ಥರಿಗೆ ದೂರು ಸಲ್ಲಿಸಿದೆ.
ಶತಮಾನದಷ್ಟು ಹಳೇಯ ಎಮ್ಮೆಕೆರೆ ಹೊಂಡದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ಕರ್ನಾಟಕ ಟ್ಯಾಂಕ್‌ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಅತಿಕ್ರಮಣ ಮಾಡಲಾಗಿದೆ. ಈಜುಕೊಳವನ್ನು 2023ರ ನವೆಂಬರ್‌ 24ರಂದು ಉದ್ಘಾಟಿಸಲಾಗಿದೆ. ಆರ್‌ಟಿಐಯಲ್ಲಿ ಪಡೆದ ಮಾಹಿತಿಯ ವೇಳೆ ಕೆಟಿಸಿಡಿಎನಿಂದ ಈಜುಕೊಳ ನಿರ್ಮಾಣಕ್ಕೆ ಪೂರ್ವಾನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಇದು ನಿಯಂತ್ರಕ ಮಾನದಂಡಗಳ ಉಲ್ಲಂಘನೆಯಾಗಿದ್ದು, ಇದರಿಂದ ಪರಿಸರ ಅಸಮತೋಲನ ಮತ್ತು ಪ್ರದೇಶದ ಜಲ ಸಂಪನ್ಮೂಲಕ್ಕೆ ಧಕ್ಕೆಯಾಗಲಿದೆ. ಈ ಅಕ್ರಮ ಆರೋಪಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಎನ್‌ಇಸಿಎಫ್‌ನಿಂದ ಒತ್ತಾಯಿಸಲಾಗಿದೆ.
ಅಕ್ರಮ ಒತ್ತುವರಿಯನ್ನು ತೆಗೆದು ಕೊಳವನ್ನು ಮರುಸ್ಥಾಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಬೇಕು. ಈ ಎಮ್ಮೆಕೆರೆ ಒತ್ತುವರಿಯಿಂದ ಸರ್ಕಾರಕ್ಕೆ ಉಂಟು ಮಾಡಿರುವ ನಷ್ಟಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಮನೆಗಳ್ಳನ ಬಂಧನ: ಮೊಬೈಲ್, ನಗದು ಎಗರಿಸಿದ್ದ ಆರೋಪಿ

ಸುರತ್ಕಲ್ : ಕಳವು ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳದ ಮಹಮ್ಮದ್ ಅಶ್ರಫ್ ಅಲಿಯಾಸ್ ಚೋಟಾ ಅಶ್ರಫ್ (26) ಎಂದು ಗುರುತಿಸಲಾಗಿದೆ.
ಜೂನ್ 14ರಂದು ಸುರತ್ಕಲ್ಲಿನ ಬಾಡಿಗೆ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ ಅಲ್ಲಿದ್ದ ಮೂರು ಮೊಬೈಲ್ ಮತ್ತು ಎರಡು ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದ.ಆಸುಪಾಸಿನ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು ಆರೋಪಿ ಮಹಮ್ಮದ್ ಅಶ್ರಫ್ ನನ್ನು ಬಂಧಿಸಿದ್ದು, ಕಳವುಗೈದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆ ಮೂರು ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ತಡಂಬೈಲ್ ಬಸ್ ನಿಲ್ದಾಣದ ಬಳಿ ಜೂನ್ 24ರಂದು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Categories
ಶಿವಮೊಗ್ಗ

ಟಾಪ್ 4 ನ್ಯೂಸ್ ಶಿವಮೊಗ್ಗ ಜಿಲ್ಲೆ

ಟಾಪ್ 4 ನ್ಯೂಸ್ ಶಿವಮೊಗ್ಗ ಜಿಲ್ಲೆ

– ಮೀನು ಹಿಡಿಯಲು ಹೋದವರ ಕಾರು ಆಕ್ಸಿಡೆಂಟ್!
– ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಘಟನೆ

– ಸಾಗರ : ಅಪಘಾತದಲ್ಲಿ ಗಾಯಗೊಂಡಿದ್ದ ಯಕ್ಷಗಾನ ಭಾಗವತ ವೇಣುಗೋಪಾಲ ಸಾವು
– ಶಿವಮೊಗ್ಗ: ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆ: ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
– ಹೊಸ ನಗರ: ಪುನೀತ್ ಧ್ವಜಸ್ಥಂಭ ಕೆಡವಿ ವಿಕೃತ ಮೆರೆದ ಕಿಡಿಗೇಡಿಗಳು!

NAMMUR EXPRESS NEWS
ತೀರ್ಥಹಳ್ಳಿ: ಮೀನು ಹಿಡಿಯಲು ಹೋಗಿದ್ದ ಐದು ಮಂದಿಯಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಮೀನು ಹಿಡಿಯಲು ಹೋದವರ ಕಾರು ಲೈಟ್ ಕಂಬ ಹಲಸಿನ ಮರಕ್ಕೆ ಗುದ್ದಿದೆ. ಕಂಬ ಬಿದ್ದಿದೆ, ಇಬ್ಬರು ಗಂಭೀರ ಹಾಗೂ ಮೂವರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ಕೌರಿಬೈಲು ಮೂಲದ ಐವರು ಸ್ನೇಹಿತರು ಮರ ಗೆಲಸ ಮಾಡಿಕೊಂಡಿದ್ದರು. ಮತ್ತಗ ಹಿನ್ನೀರಲ್ಲಿ ಮೀನು ಹಿಡಿಯಲು ಹೋಗಿದ್ದರು ಎಂದು ತಿಳಿದು ಬಂದಿದೆ. ಆಗುಂಬೆ ಠಾಣೆ ಪೊಲೀಸರು ಪ್ರಕರಣ ದಾಖಳಿಸಿದ್ದಾರೆ.

– ಸಾಗರ : ಯಕ್ಷಗಾನ ಭಾಗವತ ವೇಣುಗೋಪಾಲ ಇನ್ನಿಲ್ಲ

ಸಾಗರ : ಅಪಘಾತದಲ್ಲಿ ಗಾಯಗೊಂಡಿದ್ದ ಸಿಗಂದೂರು ಶ್ರೀ ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊಸನಗರ ತಾಲೂಕಿನ ಪುರಪ್ಪೆಮನೆ ಕೆಳಮನೆ ಗ್ರಾಮದ ಕೆ.ಜಿ. ವೇಣುಗೋಪಾಲ (44) ಸಾವನ್ನಪ್ಪಿದ್ದಾರೆ. ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹಸು ಅಡ್ಡ ಬಂದಿದ್ದು ಆಯತಪ್ಪಿ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಮೃತರು ತಂದೆ, ಭಾಗವತ ಕೆ.ಜಿ.ರಾಮರಾವ್, ತಾಯಿ ಹಾಗೂ ಓರ್ವ ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ, ಮಂದಾರ್ತಿ ಮೇಳದ ಭಾಗವತರಾಗಿಯೂ ಕೆಲಸ ಮಾಡಿದ್ದರು. ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಗುರುಗಳಾಗಿಯೂ ಕೆಲಸ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದರು. ರಂಗ ಪ್ರದರ್ಶನ ಹಾಗೂ ಭಾಗವತಿಕೆಗಳೆರಡರಲ್ಲೂ ಅವರು ತಮ್ಮ ಛಾಪು ತೋರಿಸಿದ್ದರು. ಬಯಲಾಟದ ಪ್ರಸಂಗಗಳಿಗೂ ಭಾಗವತರಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಗಮನ ಸೆಳೆದಿದ್ದರು.

– ಶಿವಮೊಗ್ಗ : ಸರ್ಕಾರಿ ಶಾಲೆ ಸಮೀಪ ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು!

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರ ಬಳಿ ಪತ್ತೆಯಾದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಆಕೆ ಮೃತಳಾಗಿದ್ದು, ಆಕೆಯ ಗುರುತು ಪತ್ತೆಗಾಗಿ ತುಂಗಾನಗರ ಪೊಲೀಸ್‌ ಠಾಣೆ ಪೊಲೀಸರು ಪ್ರಕಟಣೆಯನ್ನ ನೀಡಿದ್ದಾರೆ. ಅದರ ವಿವರ ಹೀಗಿದೆ. ಕಳೆದ ಜೂನ್ 10 ರಂದು ಬೆಳಗ್ಗೆ 10.00 ಕ್ಕೆ ಶಿವಮೊಗ್ಗದ ಸೋಗಾನೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸುಮಾರು 60 ರ ವಯಸ್ಸಿನ ಮಹಿಳೆ ಅನಾರೋಗ್ಯದಿಂದ ನರಳುತ್ತಿದ್ದನ್ನ ಸ್ಥಳೀಯರು ಗಮನಿಸಿದ್ದಾರೆ. ಆ ಬಳಿಕ ಸಾರ್ವಜನಿಕರ ಸಹಾಯದಿಂದ ಆಕೆಯುನ್ನು ಅಂಬ್ಯುಲೇನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇದುವರೆಗೂ ಈಕೆಯ ಊರು ಹೊನ್ನಾಳಿ ಎಂದು ತಿಳಿದಬಂದಿದ್ದು ಹೆಸರು, ವಿಳಾಸ, ವಾರಸುದಾರರ ಪತ್ತೆಯಾಗಿರುವುದಿಲ್ಲ ಈ ಸಂಬಂಧ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

– ಹೊಸನಗರ: ಪುನೀತ್ ಧ್ವಜಸ್ಥಂಭ ಕೆಡವಿದ ಕಿಡಿಗೇಡಿಗಳು!

ಹೊಸನಗರ : ಪಟ್ಟಣದ ನಗರ ರಸ್ತೆಯ ರಾಜ್ಯ ಹೆದ್ದಾರಿ 766 ಸಿ ಮೆಸ್ಕಾಂ ಕಛೇರಿ ಎದುರಿನ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿದ್ದ 70 ಅಡಿ ಎತ್ತರದ ಧ್ವಜಸ್ಥಂಭವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಹೊಸನಗರದ ಮಿತ್ರಕೂಟ ಕನ್ನಡ ಸಂಘ ಹಾಗೂ ರಾಜರತ್ನ ಡಾ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದವರು ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ 70 ಗಾಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿದ್ದರು. ರಾಷ್ಟ್ರೀಯ ದಿನಾಚರಣೆಗಳಲ್ಲಿ ರಾಷ್ಟ್ರಧ್ವಜ ಹಾಗೂ ಇತರೆ ದಿನಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು ಮಂಗಳವಾರ ರಾತ್ರಿ ತೀವ್ರ ವರ್ಷಧಾರೆ ನಡುವೆಯೂ ಯಾರೋ ಕಿಡಿಗೇಡಿಗಳು ಧ್ವಜಸ್ತಂಭವನ್ನು ಧ್ವಂಸಗೊಳಿಸಿರುವ ಘಟನೆ ಸಂಭವಿಸಿದೆ. ಈ ಘಟನೆ ಬೆಳಿಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇಂತಹ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 

Categories
ಚಿಕ್ಕಮಗಳೂರು

ಟಾಪ್ 5 ನ್ಯೂಸ್ ಚಿಕ್ಕಮಗಳೂರು

ಟಾಪ್ 5 ನ್ಯೂಸ್ ಚಿಕ್ಕಮಗಳೂರು

– ಮುಳ್ಳಯ್ಯನಗಿರಿಗೆ ತೆರಳಲು ಆನ್‌ಲೈನ್ ನೋಂದಣಿ ಕಡ್ಡಾಯ
– ಪ್ರವಾಸಿಗರೇ, ನೋಂದಣಿ ಮಾಡದಿದ್ರೆ ಪ್ರವೇಶ ಇಲ್ಲ: ಮುಂದಿನ ವಾರದಿಂದ ಜಾರಿ

– ತರೀಕೆರೆ: ಅಕ್ರಮ ಗೋದಾಮಿನ ಮೇಲೆ ದಾಳಿ, ಲಕ್ಷಾಂತರ ಮೊತ್ತದ ಕೀಟ ನಾಶಕ ಜಪ್ತಿ
– ಚಿಕ್ಕಮಗಳೂರು : ಮದ್ಯದ ಅಂಗಡಿ ಟಾರ್ಗೆಟ್: ಮೂವರು ಅರೆಸ್ಟ್!
– ಎನ್.ಆರ್.ಪುರ: ವಿಷ ಸೇವಿಸಿ, ಚಿಕಿತ್ಸೆ ಫಲಕಾರಿಯಾಗದೆ ಸಾವು
– ಎನ್.ಆರ್.ಪುರ: ಕಾಡಾನೆಗಳ ಕಾಟ: ಅಡಿಕೆ, ಬಾಳೆ ದ್ವಂಸ

NAMMUR EXPRESS NEWS
ಚಿಕ್ಕಮಗಳೂರು : ರಾಜ್ಯದ ಪ್ರಸಿದ್ದ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರು ಕಡ್ಡಾಯವಾಗಿ ಇನ್ನುಮುಂದೆ ಆನ್‌ಲೈನ್ ನಲ್ಲಿ ನೋಂದಣಿ ಮಾಡಬೇಕು. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಮುಂದಿನ ವಾರದಿಂದಲೇ ನಿಯಮ ಜಾರಿಗೆ ಬರಲಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಗಿರಿಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತಿದ್ದು,ಪರಿಸರಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಪರಿಸರಾಸಕ್ತರು ಅಸಮಾಧಾನ ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆನ್‌ಲೈನ್ ಮೂಲಕ ನೋಂದಣಿ ಕಡ್ಡಾಯ ಮಾಡಿದೆ. ದಿನಕ್ಕೆ ನಿರ್ದಿಷ್ಟ ಸಂಖ್ಯೆಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲು ಮುಂದಾಗಿದೆ.

ದಿನಕ್ಕೆ 600 ವಾಹನಗಳಿಗೆ ಅವಕಾಶ

ಗಿರಿಭಾಗದಲ್ಲಿ ಜನ ಹಾಗೂ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿನಕ್ಕೆ ಎರಡು ಸಮಯದಲ್ಲಿ 600 ವಾಹನಗಳಿಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಬೆಳಗ್ಗೆ 9 ಗಂಟೆಗೆ 300 ವಾಹನ, ಮಧ್ಯಾಹ್ನ 2 ಗಂಟೆಗೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾ ಯಿತಿ, ಪೊಲೀಸ್ ಇಲಾಖೆಯ ಸಭೆ ನಡೆಸಲಾಗಿದೆ.

– ತರೀಕೆರೆ: ಅಕ್ರಮ ಗೋದಾಮಿನ ಮೇಲೆ ದಾಳಿ: ಕೀಟ ನಾಶಕ ಜಪ್ತಿ

ತರೀಕೆರೆ : ಪಟ್ಟಣದ ಕುಂಭಾರ ಬೀದಿಯಲ್ಲಿರುವ ತೌಸೀಫ್ ಅಹಮದ್ ಎಂಬುವವರಿಗೆ ಸೇರಿದ ಲಕ್ಷಾಂತರ ಬೆಲೆಬಾಳುವ ಪರವನಾಗಿ ಇಲ್ಲದೆ ಅಕ್ರಮವಾಗಿ ಕೀಟನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಂಟಿ ಕೃಷಿ, ನಿರ್ದೇಶಕರಾದ ಸುಜಾತ, ಹೆಚ್. ಎಲ್. ಇವರ ನೇತೃತ್ವದ ತಂಡ ದಾಳಿ ಮಾಡಿ ಶೋಧಕಾರ್ಯ ನಡೆಸಲಾಯಿತು. ಈ ಸಂಧರ್ಭದಲ್ಲಿ 06 ಕಂಪನಿಗಳಿಗೆ ಸೇರಿದ ಒಟ್ಟು 5 ಲಕ್ಷ 71 ಸಾವಿರ ಮೌಲ್ಯದ ಕೀಟನಾಶಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡುಬಂದಿದ್ದು, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಕೀಟನಾಶಕಗಳನ್ನು ಜಪ್ತಿ ಮಾಡಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಕ್ರಮವಹಿಸಲಾಗಿದೆ. ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರುಗಳಾದ ತಿಮ್ಮನಗೌಡ ಎಸ್ ಪಾಟೀಲ್, ಎಸ್ ವೆಂಕಟೇಶ ಚವ್ಹಾಣ್, ಕೃಷಿ ಅಧಿಕಾರಿ ಶ್ರೀನಿವಾಸ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

– ಚಿಕ್ಕಮಗಳೂರು : ಎಣ್ಣೆ ಬಾಟಲಿ ಜೊತೆ ಮೂವರು ಬಂಧನ

ಚಿಕ್ಕಮಗಳೂರು: ತಾಲೂಕು ಮರ್ಲೆ ಗ್ರಾಮದಲ್ಲಿರುವ ಎಂ. ಎಸ್. ಐ. ಎಲ್. ಮದ್ಯದಂಗಡಿಯ ರೋಲಿಂಗ್ ಷಟರ್ ಬೀಗ ಮುರಿದು, ರೂ. 7.41 ಲಕ್ಷ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ರೂ. 52 ಸಾವಿರ ನಗದು, ಮದ್ಯದ ಬಾಟಲಿಗಳು ಮತ್ತು ಕೃತ್ಯವೆಸಗಲು ಬಳಿಸಿದ್ದ ಉಪಕರಣ ಮತ್ತು ಕಾರು ವಶಪಡಿಸಿಕೊಂಡಿದ್ದು,ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಕಳವು ಮಾಡಿದ್ದಾರೆ.

– ಎನ್.ಆರ್.ಪುರ: ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಎನ್.ಆರ್.ಪುರ: ತಾಲೂಕಿನ ಮೆಣಸೂರು ಗ್ರಾಮದ ಬೈಪಾಸ್ ರಸ್ತೆ ವಾಸಿ ವಾಸು (60) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಾಸು ಅವರು ಜೂ.15 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕತ್ಸೆ ನೀಡಿ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಜೂ.25 ರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ವಾಸು ಮೃತಪಟ್ಟಿದ್ದಾರೆ. ಮೃತ ವಾಸು ಅವರು ಸುಮಾರು 4 ಲಕ್ಷ ರೂಪಾಯಿಯನ್ನು ಬ್ಯಾಂಕ್, ವಿವಿಧ ಸಂಘ ಸಂಸ್ಥೆಯಿಂದ, ಕೈ ಸಾಲ, ಕೃಷಿಗಾಗಿ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲಾಗದೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ವಾಸು ಅವರ ಪುತ್ರ ಅನಿಲ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

– ಎನ್.ಆರ್.ಪುರ: ಕಾಡಾನೆಗಳ ಕಾಟ: ಅಡಿಕೆ, ಬಾಳೆ ದ್ವಂಸ

ಎನ್.ಆರ್.ಪುರ: ತಾಲೂಕಿನ ಕಾನೂರು ಗ್ರಾಮದಲ್ಲಿ ಕಾಡಾನೆಗಳು ಕಾಟ ವಿಪರೀತವಾಗಿದ್ದು ಫಸಲು ಬರುತ್ತಿರುವ ಅಡಿಕೆ, ಬಾಳೆ ತೋಟಗಳನ್ನು ದ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ತೋಟಕ್ಕೆ ನುಗ್ಗಿದ ಕಾಡಾನೆಗಳು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಹಾಳು ಮಾಡಿದೆ. ರಾತ್ರಿ ಸಮಯದಲ್ಲಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಹಗಲು ಸಮಯದಲ್ಲಿ ಸಮೀಪದ ಅಗಳಿ ಕಾಡಿಗೆ ಹೋಗಿ ಅಡಗಿ ಕುಳಿತುಕೊಳ್ಳುತ್ತದೆ. ಪ್ರಾಣ ಹಾನಿ ಆಗುವ ಮುನ್ನ ಅರಣ್ಯ ಇಲಾಖೆ ಯವರು ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ!

ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ!

– ಬಿಜೆಪಿ ಸಂಘಟನೆ, ವಿವಿಧ ತಂತ್ರಗಾರಿಕೆ ಬಗ್ಗೆ ಚರ್ಚೆ
– ರಾಜ್ಯ ರಾಜಕೀಯದಲ್ಲಿ ನಡೆಯುತ್ತಾ ಮ್ಯಾಜಿಕ್?

NAMMUR EXPRESS NEWS
ನವ ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅದರೆ ರಾಜ್ಯದಲ್ಲಿ ಮುಂದಿನ ರಾಜಕೀಯ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಮತ್ತೆ ಸೇರಿದ ಅಮಿತ್ ಶಾ ಅಭಿನಂದಿಸಿದ ರಾಜ್ಯಾಧ್ಯಕ್ಷ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ಕರ್ನಾಟಕದ ಫಲಿತಾಂಶ ಕುರಿತು ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ರಾಜ್ಯದ ರಾಜಕೀಯ ಸ್ಥಿತಿ ಮತ್ತು ಕಾಂಗ್ರೆಸ್ ಸರ್ಕಾರ ಎದುರಿಸಲು ಮಾಡಬೇಕಾದ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮಾತುಕತೆಯ ಪೂರ್ಣ ವಿವರ ಲಭ್ಯವಾಗಿಲ್ಲವಾದರೂ ವಿಜಯೇಂದ್ರರವರಿಗೆ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Categories
ತೀರ್ಥಹಳ್ಳಿ

ವಾಗ್ದೇವಿ ಪಿ.ಯು ಕಾಲೇಜಿನ ಫ್ರೆಶರ್ ಡೇ ನವೀನತೆಗೆ ಸಾಕ್ಷಿ!

ವಾಗ್ದೇವಿ ಪಿ.ಯು ಕಾಲೇಜಿನ ಫ್ರೆಶರ್ ಡೇ ನವೀನತೆಗೆ ಸಾಕ್ಷಿ!

– ಮೊಬೈಲ್, ಇಂಟರ್ನೆಟ್ ಬಳಕೆ ಬಗ್ಗೆ ಅನಂತ ಪ್ರಭು ಟೆಕ್ ಪಾಠ

– ವಿದ್ಯಾರ್ಥಿಗಳಿಗೆ ಜ್ಞಾನದ ಹರಿವು: ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್

NAMMUR EXPRESS NEWS
ತೀರ್ಥಹಳ್ಳಿ : ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವುದು ಎಲ್ಲಾ ಕಾಲೇಜುಗಳಲ್ಲಿ ಸರ್ವೇ ಸಾಮಾನ್ಯ. ಆದರೆ ತೀರ್ಥಹಳ್ಳಿಯ ವಾಗ್ಗೇವಿ ಪಿಯು ಕಾಲೇಜಿನಲ್ಲಿ ವಿನೂತನ ರೀತಿಯಲ್ಲಿ ಪ್ರಥಮ ಪಿ ಯು ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಬೆಳೆಯುತ್ತಿರುವ ನಾಗರಿಕ ಸಮಾಜದ ಮಧ್ಯದಲ್ಲಿ ಈಗ ತಾನೆ ನಾಗರಿಕತ್ವವನ್ನು ಪಡೆದುಕೊಳ್ಳಲಿರುವ ವಿದ್ಯಾರ್ಥಿಗಳನ್ನು ಗುರಿಯಲ್ಲಿಟ್ಟುಕೊಂಡು ಅವರ ಜವಾಬ್ದಾರಿಗಳನ್ನು ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಅವರ ಸಹಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಹಾಗೂ ದಿಕ್ಕೂಚಿ ಭಾಷಣಕಾರರಾಗಿ ಆಗಮಿಸಿದ್ದ ಉಪನ್ಯಾಸಕರು ಹಾಗೂ ಸೈಬ‌ರ್ ಸೆಕ್ಯೂರಿಟಿ ಎಕ್ಸ್‌ರ್ಟ್ ಮತ್ತು ಸೈಬರ್ ಲಾ ಟ್ರೈನರ್‌ ಆಗಿರುವ ಡಾ. ಅನಂತ ಪ್ರಭು ಜಿ ಇವರು, ಹದಿಹರೆಯದ ಯುವಕ-ಯುವತಿಯರು ಅತಿಯಾಗಿ ಬಳಸುವ ಮೊಬೈಲ್ ಮತ್ತು ಇಂಟರ್ನೆಟ್ ಕುರಿತಾಗಿ ಅತ್ಯಮೂಲ್ಯವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಅದರ ಅನನುಕೂಲತೆಗಳನ್ನು ಸೂಕ್ಷ್ಮವಾಗಿ ತಿಳಿಸಿದರು.

ಸೈಬ‌ರ್ ಕ್ರೈಮ್ ಎನ್ನುವುದರ ಕುರಿತಂತೆ ಡೆಬಿಟ್ – ಕ್ರೆಡಿಟ್ ಕಾರ್ಡ್ ಗಳನ್ನು ಯಾವ ರೀತಿ ಬಳಸಬೇಕೆಂದು, ಆಧಾರ್ ಕಾರ್ಡ್ ಬಗ್ಗೆ ಅರಿವು ಮುಂತಾದ ವಿಷಯಗಳನ್ನು ಸವಿಸ್ತಾರವಾಗಿ ಉದಾಹರಣೆ ಸಹಿತ ವಿವರಿಸಿದರು. ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಗಳಿಂದಾಗಿ ಆಗುತ್ತಿರುವ ಅಪರಾಧ, ಅನಾಹುತ ಮತ್ತು ಅನ್ಯಾಯಗಳ ವಿರುದ್ಧ ಇಂದಿನ ಯುವಕ ಯುವತಿಯರು ಹೇಗೆ ಜಾಗರೂಕರಾಗಿರಬೇಕು, ಅವುಗಳನ್ನು ಯಾವ ರೀತಿಯಲ್ಲಿ ಬಳಸಬೇಂಕೆಂಬುದರ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಪಥ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಕೆ.ಎಸ್ ವಹಿಸಿದ್ದರು.

ಉದ್ಘಾಟನೆಯನ್ನು ಟ್ರಸ್ಟ್ ನ ಕಾರ್ಯದರ್ಶಿಗಳಾದ ಆರ್.ಮದನ್‌ ನೆರವೇರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪೂರ್ವಿತಾ ನಿರಂಜನ್, ಖಜಾಂಚಿಗಳಾದ ಶಶಿಧರ್ ಹೆಚ್.ಪಿ, ಸದಸ್ಯರಾದ ಬಿ.ಎಂ ಕೃಷಮೂರ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಶಿವಕುಮಾರ್ ಉಪಸ್ಥಿತರಿದ್ದರು. ಕುಮಾರಿ ಶ್ರದ್ದಾ ಎ ಹಾಗೂ ಸಿಂಚನಾ ಹೆಚ್, ಕಾರ್ಯಕ್ರಮವನ್ನು ನಿರೂಪಿಸಿ, ನಿಧಿ ಎಸ್ ಪ್ರಾರ್ಥಿಸಿ, ಶಾರಂಘ್ರವ ಜವಳಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಭಿನ್ನ ಕಾರ್ಯಕ್ರಮ ಮಕ್ಕಳ ಗಮನ ಸೆಳೆಯಿತು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರೋಟರಿಗೆ ನೂತನ ಸಾರಥಿಗಳು!

ತೀರ್ಥಹಳ್ಳಿ ರೋಟರಿಗೆ ನೂತನ ಸಾರಥಿಗಳು!

– ರೋಟರಿ ಸಂಸ್ಥೆ ಅಧ್ಯಕ್ಷರಾಗಿ ರೊ ಅನಿಲ್, ಕಾರ್ಯದರ್ಶಿಯಾಗಿ ರೊ ಶಿವಪ್ರಸಾದ್ ಆಯ್ಕೆ
– ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಗಿ ಎಚ್ಎಂ ಸುರೇಶ್ ಕೋಣಂದೂರು ಆಯ್ಕೆ
– ರೋಟರಿ ವಲಯ 11ರ ತರಬೇತುದಾರರಾಗಿ ರೊ ಕೆ. ಪಿ. ಎಸ್. ಸ್ವಾಮಿ ಆಯ್ಕೆ

NAMMUR EXPRESS NEWS

ರೋಟರಿ ಸಂಸ್ಥೆ ತೀರ್ಥಹಳ್ಳಿ ಇದರ ನೂತನ ಅಧ್ಯಕ್ಷರಾಗಿ ರೊ.ಅನಿಲ್, ಕಾರ್ಯದರ್ಶಿಯಾಗಿ ರೊ ಶಿವಪ್ರಸಾದ್ ಆಯ್ಕೆಯಾಗಿದ್ದಾರೆ. 2024 – 25ರ ರೋಟರಿ ಜಿಲ್ಲೆ 3182 ವಲಯ 11, ತೀರ್ಥಹಳ್ಳಿ ರೋಟರಿ ಕ್ಲಬ್ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅನಿಲ್ ಕುಮಾರ್ ಇವರು ಕಳೆದ ಹತ್ತು ವರ್ಷಗಳಿಂದ ತೀರ್ಥಹಳ್ಳಿ ರೋಟರಿ ಕ್ಲಬ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು ರೋಟರಿಯಲ್ಲಿ ಕಾರ್ಯದರ್ಶಿಯಾಗಿ ಮತ್ತು ಖಜಾಂಚಿಯಾಗಿ ಉತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ. ವೃತ್ತಿಯಲ್ಲಿ ಇವರು ಸರ್ವೇಯರ್ ಆಗಿದ್ದು ಅರಣ್ಯ ಇಲಾಖೆಯ ವಿವಿಧ ಫಾರೆಸ್ಟ್ ಗಳ ಗಡಿಗಳನ್ನು, ವೈಲ್ಡ್ಲೈಫ್ ಗಡಿಗಳನ್ನು , ನ್ಯಾಷನಲ್ ಪಾರ್ಕ್ ಗಡಿಗಳನ್ನು ಜಿಪಿಎಸ್ ಮೂಲಕ ಗುರುತಿಸುವ ಕಾರ್ಯದಲ್ಲಿ ಉತ್ತಮ ಪರಿಣಿತಿ ಹೊಂದಿದ್ದಾರೆ.
ವಿದೇಶದಲ್ಲೂ ಕೂಡ ಇವರು ವಾಟರ್ ಕನೆಕ್ಷನ್ ಮತ್ತು ಸಿವೇರ್ ಲೈನ್ ಎಂಬ ದೊಡ್ಡ ,ದೊಡ್ಡ ಪ್ರಾಜೆಕ್ಟ್ ನಲ್ಲಿ ಸರ್ವೇಯರ್ ಆಗಿ ಕೆಲಸ ಮಡಿದ ಅನುಭವವನ್ನು ಹೊಂದಿರುತ್ತಾರೆ ಹಾಗೆ ಇವರು ಆವಿಷ್ಕಾರ್ ಸೌಹಾರ್ದ ಎಂಬ ರಾಜ್ಯ ಮಟ್ಟದ ಸೊಸೈಟಿಯಲ್ಲಿ ರಾಜ್ಯಾಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ದಕ್ಷ ಅಧಿಕಾರಿ ಶಿವಪ್ರಸಾದ್ ಅವರಿಗೆ ಹೊಣೆ

ರೊ ಶಿವಪ್ರಸಾದ್ ಇವರು ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ, ಸೊರಬ, ತೀರ್ಥಹಳ್ಳಿ ಮುಂತಾದ ಕಡೆ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಬೆಜ್ಜವಳ್ಳಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಯಾರು ಯಾರು?

ರೊ.ಭರತ್ ಕುಮಾರ್ ಕೋಡ್ಲು ನಿಕಟ ಪೂರ್ವ ಅಧ್ಯಕ್ಷರು, ರೊ ಭರತ್ ಕುಮಾರ್ ಪಿ ವಿ, ನಿಯೋಜಿತ ಅಧ್ಯಕ್ಷ, ರೊ ಶರತ್ಚ್ಂದ್ರ ಬಿ ಎಲ್, ಉಪಾಧ್ಯಕ್ಷ, ರೊ ಅನಿಲ್ ಕುಮಾರ್ ಪೂಜಾರಿ, ಖಜಾಂಚಿ, ರೊ ರಾಘವೇಂದ್ರ ಆಚಾರ್ಯ, ಸಹಕಾರ್ಯದರ್ಶಿ, ರೊ ಎನ್ ಹೆಚ್ ರಮೇಶ್, ಸಾರ್ಜೆಂಟ್ ಅಟ್ ಆರ್ಮ್ಸ್, ರೊ ಪ್ರೊ.ಎಂ ಆರ್ ಮಂಜುನಾಥ್, ಸಂಘ ಸೇವೆ, ರೊ ವಾಣಿ ಗಣೇಶ್, ವೃತ್ತಿ ಸೇವೆ, ರೊ ಸರ್ಜಾ ಕೃಷ್ಣಮೂರ್ತಿ, ಸಮುದಾಯ ಸೇವೆ, ರೊ ರಾಘವೇಂದ್ರ ಎಂ ಕೆ, ಅಂತರಾಷ್ಟ್ರೀಯ ಸೇವೆ, ಮತ್ತು ರೊ ಸಂಜಯ್ ಎಂ ಸಿ, ಯುವಜನ ಸೇವೆ, ಮತ್ತು ವಿವಿಧ ಸಮಿತಿಗಳನ್ನು ರಚಿಸಲಾಯಿತು. ಮುಂದಿನ ಸಾಲಿನಲ್ಲಿ ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಲಿ ಎಂದು ರೊ ಭರತ್ ಕುಮಾರ್ ಕೋಡ್ಲು, ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ತಿಳಿಸಿದ್ದಾರೆ.

ಸಹಾಯಕ ಗವರ್ನರ್ ಆಗಿ ಹೆಚ್ ಎಮ್ ಸುರೇಶ್

ತೀರ್ಥಹಳ್ಳಿ: 2024-25 ನೇ ಸಾಲಿನ ರೋಟರಿ ಜಿಲ್ಲೆ 3182 ಇದರ ವಲಯ 11 ಸಹಾಯಕ ಗವರ್ನರ್ ಆಗಿ ಹೆಚ್ ಎಮ್ ಸುರೇಶ್ ಕೊಣಂದೂರು ,ಅವರನ್ನು ರೊ. ದೇವಾನಂದ ನಿಯೋಜಿತ ಜಿಲ್ಲಾ ಗವರ್ನರ್ ರೋಟರಿ ಜಿಲ್ಲೆ -3182 ಇವರು ಆಯ್ಕೆ ಮಾಡಿರುತ್ತಾರೆ. ಶರಾವತಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು ಇಲ್ಲಿ ಉಪನ್ಯಾಸಕರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ವಿವಿಧ ಇಲಾಖೆಗಳ ಸಂಯೋಜಕರಾಗಿ ಮತ್ತು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜ್ ಶಿವಮೊಗ್ಗ , ಇದರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿರುತ್ತಾರೆ. ಕೋಣಂದೂರು ರೋಟರಿ ಕ್ಲಬಿನ ಸದಸ್ಯರಾಗಿ, ಜಿಲ್ಲಾ ವೈಸ್ ಚೇರ್ಮೆನ್ ಮತ್ತು ಚೇರ್ಮನ್ ಆಗಿ ಜೋನಲ್ ಲೆಫ್ಟಿನೆಂಟಾಗಿ ರೋಟರಿ ಜಿಲ್ಲೆ 31 82 ರಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಇವರ ರೋಟರಿ ಸೇವೆಯನ್ನು ಪರಿಗಣಿಸಿ ರೊ ದೇವಾನಂದ್ ಉಡುಪಿ ಇವರು ವಲಯ 11ರ ಸಹಾಯಕ ಗವರ್ನರ್ ಆಗಿ ನೇಮಕ ಮಾಡಿರುತ್ತಾರೆ. ತೀರ್ಥಹಳ್ಳಿ, ಸಾಗರ ,ಸೊರಬ, ರಿಪ್ಪನ್ಪೇಟೆ ,ಕೋಣಂದೂರು ,ಶಿವಮೊಗ್ಗ ಸೆಂಟ್ರಲ್ ಮತ್ತು ಶಿವಮೊಗ್ಗ ಈಸ್ಟ್ ಕ್ಲಬ್ಬಗಳ ಜವಾಬ್ದಾರಿ ಇವರಿಗೆ ಇರುತ್ತದೆ.ರೋಟರಿ ಕ್ಲಬ್ ಕೋಣಂದೂರು ಇದರ ಸದಸ್ಯರು ಶ್ರೀಯುತರಿಗೆ ಶುಭವನ್ನು ಹಾರೈಸಿದ್ದಾರೆ.

ರೋಟರಿ ವಲಯ 11ರ ತರಬೇತುದಾರರಾಗಿ ರೊ ಕೆ. ಪಿ. ಎಸ್. ಸ್ವಾಮಿ ಆಯ್ಕೆ

2024-25 ರೋಟರಿ ಜಿಲ್ಲೆ 3182 ರ ವಲಯ 11 ಇದರ ಜೋನಲ್ ಲರ್ನಿಂಗ್ ಫೆಸಿಲಿಟೇಟರ್ (ತರಬೇತಿ) ಆಗಿ ರೊ ದೇವಾನಂದ್ ಉಡುಪಿ, ನಿಯೋಜಿತ ಜಿಲ್ಲಾ ಗವರ್ನರ್ ಇವರು ನೇಮಕ ಮಾಡಿರುತ್ತಾರೆ. ವಲಯ 11 ರ ಶಿವಮೊಗ್ಗ ಸೆಂಟ್ರಲ್ ಶಿವಮೊಗ್ಗ ಈಸ್ಟ್ ಸೊರಬ ಸಾಗರ ಪೇಟೆ ರಿಪ್ಪನ್ ಪೇಟೆ ಕೋಣಂದೂರು ತೀರ್ಥಹಳ್ಳಿ ಕ್ಲಬ್ ಗಳ 2024-25 ರ ಕಾರ್ಯಕ್ರಮಗಳನ್ನು ಅವಲೋಕಿಸಲು ಹಾಗೂ ತರಬೇತಿಯನ್ನು ನೀಡಲು ಜಿಲ್ಲಾ ಸಹಾಯಕ ಗವರ್ನರ್ ಒಂದಿಗೆ ಕೆಲಸ ಮಾಡಲು ನೇಮಿಸಿರುತ್ತಾರೆ. 2018-19 ರಲ್ಲಿ ಸಹಾಯಕ ಗವರ್ನರ್ ಆಗಿ, ರೋಟರಿ ಜಿಲ್ಲೆ 3182 ಇದರಲ್ಲಿ ವೈಸ್ ಚೇರ್ ಮನ್ , ಡಿಸ್ಟ್ರಿಕ್ಟ್ ಚೇರ್ಮನ್ ಆಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಪರಿಗಣಿಸಿ ವಲಯ ತರಬೇತುದಾರರಾಗಿ ನೇಮಿಸಿರುತ್ತಾರೆ. ಇವರ ಪ್ರಸ್ತುತ ಸಾಲಿನ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ರೊ ಭರತ್ ಕುಮಾರ್ ಕೋಡ್ಲು ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಮತ್ತು ರೋಟರಿ ಕ್ಲಬ್ ಸದಸ್ಯರು , ತೀರ್ಥಹಳ್ಳಿ ಇವರು ಶುಭಾಶಯಗಳನ್ನು ಕೋರಿದ್ದಾರೆ.

Categories
ತೀರ್ಥಹಳ್ಳಿ

ಭಾರತೀಪುರ ಕ್ರಾಸಿಂಗ್ ಬಳಿ ರಸ್ತೆ ಓಡಾಟ ನಿತ್ಯ ನರಕ..!

ಭಾರತೀಪುರ ಕ್ರಾಸಿಂಗ್ ಬಳಿ ರಸ್ತೆ ಓಡಾಟ ನಿತ್ಯ ನರಕ..!

– ಪ್ರಯಾಣಿಕರ ಗೋಳನ್ನು ಕೇಳುವವರು ಯಾರು?
– ಜೀವ ಭಯದಲ್ಲಿ ವಾಹನ ಸವಾರರ ಓಡಾಟ
– ಗುತ್ತಿಗೆದಾರ ಮಾಡಿದ್ದೇ ಆಟ: ಜನರಿಗೆ ಜೀವ ಸಂಕಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಭಾರತೀಪುರ ಕ್ರಾಸಿಂಗ್ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ನಿತ್ಯ ಸಂಚರಿಸುವುದು ನರಕಯಾತನೆ. ಯಾವಾಗ ಯಮನ ಪಾದ ಸೇರುತ್ತೇವೋ ಎಂಬ ಭಯದಲ್ಲಿ ಜನ ಓಡಾಡುತ್ತಿದ್ದಾರೆ.
ನೂತನ ಫ್ಲೈ ಓವರ್ ಯಾವಾಗ ಆಗುವುದೋ ಗೊತ್ತಿಲ್ಲ. ಬೈಕ್ ಸವಾರರು ದೊಡ್ಡ ವಾಹನಗಳು ಎರಚುವ ಕೆಸರನ್ನು ಮೈತುಂಬ ಮೆತ್ತಿಕೊಂಡು, ಇತ್ತ ಬೈಕ್ ಎಲ್ಲಿ ಸ್ಕಿಡ್ ಆಗುವುದೋ ಎಂದು ಜೀವ ಕೈಯಲ್ಲಿಟ್ಟುಕೊಂಡು ಸಾಗುವ ಪರಿಸ್ಥಿತಿ ಬಂದಿದೆ. ದಿನವೂ ಒಂದಿಷ್ಟು ಕೆಸರು ಮಣ್ಣು ತಂದು ಸುರಿಯುತ್ತಾರೆ. ಮಳೆ ಬಂದ ತಕ್ಷಣ ಅದು ಪಾಕವಾಗಿ ಹರಡುತ್ತದೆ. ಇದರಿಂದ ಪ್ರತಿದಿನ ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಪ್ರಯಾಣಿಸುವವರು ಮತ್ತು ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಪ್ರಾಣಿಸುವ ವಾಹನ ಸಾವರರಿಗೆ ದಿನನಿತ್ಯ ಪ್ರಾಣವನ್ನು ಒತ್ತೆ ಇಟ್ಟು ಪ್ರಯಾಣಿಸುವಂತಾಗಿದೆ. ಇನ್ನು ರಸ್ತೆಗೆ ಕೂಡ ಮಣ್ಣು ಹಾಕಿದ ಕಾರಣ ಅಕ್ಕ ಪಕ್ಕ ಓಡಾಡದಂತೆ ಕೆಸರುಮಯವಾಗಿದೆ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.

Categories
ಮಂಗಳೂರು

ಮಲಗಿದ್ದಲ್ಲೇ ಜೀವ ಬಿಟ್ಟ ನಾಲ್ವರು..!

ಮಲಗಿದ್ದಲ್ಲೇ ಜೀವ ಬಿಟ್ಟ ನಾಲ್ವರು..!

– ಭಾರೀ ಮಳೆಗೆ ಮನೆ ಬಿರುಕು: ನಾಲ್ವರ ಕುಟುಂಬಕ್ಕೆ ಸಂತಾಪ
-ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಕಾಂಪೌಂಡ್ ಕುಸಿದಿತ್ತು!
– ದುರಂತ ಸ್ಥಳಕ್ಕೆ ಸ್ಪೀಕರ್‌ ಯುಟಿ ಖಾದರ್‌ ಭೇಟಿ: ಪರಿಹಾರದ ಭರವಸೆ

NAMMUR EXPRESS NEWS
ಮಂಗಳೂರು: ಭಾರೀ ಮಳೆಗೆ ಮಂಗಳೂರು ಹೊರವಲಯದಲ್ಲಿ ಬೆಳ್ಳಂಬೆಳಗ್ಗೆಯೇ ದುರಂತವೊಂದು ಸಂಭವಿಸಿದ್ದು, ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ-ಗೋಡೆಗಳು ಬಿರುಕು ಬಿಟ್ಟಿವೆ.

ಅದೇರೀತಿ ಉಳ್ಳಾಲ ಸಮೀಪದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಪಕ್ಕದ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ, ಕುಸಿದು ಈ ದುರಂತ ಸಂಭವಿಸಿದೆ. ಮಣ್ಣಿನಡಿ ಸಿಲುಕಿಕೊಂಡಿದ್ದ ಎಲ್ಲ ಮೃತದೇಹಗಳನ್ನು ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿದೆ.

ಮನೆ ಮಾಲೀಕ ಯಾಸೀರ್ ಅವರು ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ವಾಲ್ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಬೇರೆಯವರಿಗೆ ಲೀಸ್‌ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಾಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಯಾಸಿರ್‌ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಹಿರಿಯ ಮಗಳು ರಶೀನಾಳನ್ನು ಕೇರಳಕ್ಕೆ ಮದುವೆ ಮಾಡಿಕೊಡಲಾಗಿದೆ. ಆದರೆ, ರಶೀನಾ ಕೂಡ ಬಕ್ರೀದ್‌ಗೆ ತಾಯಿ ಮನೆಗೆ ಬಂದಿದ್ದು, ನಿನ್ನೆಯಷ್ಟೇ ಗಂಡನ ಮನೆಗೆ ವಾಪಾಸ್‌ ಹೋಗಿದ್ದರು. ಹೀಗಾಗಿ, ಇಡೀ ಕುಟುಂಬದಲ್ಲಿ ಒಬ್ಬರು ಮಾತ್ರ ಈಗ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ.

ದುರಂತ ಸ್ಥಳಕ್ಕೆ ಸ್ಪೀಕರ್‌ ಯುಟಿ ಖಾದರ್‌ ಭೇಟಿ

ಮಂಗಳೂರಿನ ಹೊರ ವಲಯದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಕಾಂಪೌಂಡ್‌ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಇಂದು ಬೆಳಗ್ಗೆ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್‌ ಅವರು ಭೇಟಿ ನೀಡಿದ್ದಾರೆ.ಈ ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ ಅವರು, ಯಾವ ರೀತಿ ದುರಂತ ಸಂಭವಿಸಿದೆ ಎಂಬುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಇಂಥಹ ದುರಂತಗಳು ಸಂಭವಿಸಿದಾಗ ಸರ್ಕಾರದಿಂದ ನೊಂದವರಿಗೆ ಪರಿಹಾರ ನೀಡಬೇಕಾದರೆ ಕೆಲವೊಂದು ಮಾನದಂಡ ಹಾಗೂ ನಿಯಮಗಳಿವೆ. ಆದರೆ, ಈ ಘಟನೆಯು ಬಹಳ ದಾರುಣವಾಗಿ ಸಂಭವಿಸಿದ್ದು, ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಯಾವ ರೀತಿಯಲ್ಲಿ ಹೆಚ್ಚುವರಿ ಪರಿಹಾರ ಕೊಡಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಪಕ್ಕದವರ ಮನೆಯ ಕಾಂಪೌಂಡ್‌ ಗೋಡೆ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡಿದ್ದರು.