Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಸರ್ವಾರ್ಥ ಸಿದ್ಧಿ ಯೋಗದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನೀವು ಜೀವನದಲ್ಲಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹೊಸ ಜನರನ್ನು ಭೇಟಿ ಮಾಡಿ. ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವ ಅವಕಾಶವನ್ನು ಪಡೆಯುತ್ತೀರಿ. ಕೆಲವು ಜನರು ಹೊಸ ವಾಹನವನ್ನು ಖರೀದಿಸಲು ಯೋಜಿಸಬಹುದು.

** ವೃಷಭ ರಾಶಿ :
ಆಧ್ಯಾತ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ರಜೆಯ ಮೇಲೆ ಹೋಗಬಹುದು. ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಕೆಲವರು ಕೆಲಸ ಬದಲಾಯಿಸಬಹುದು. ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.

** ಮಿಥುನ ರಾಶಿ
ನೀವು ಹೊಸ ಮನೆಗೆ ಶಿಫ್ಟ್ ಆಗಬಹುದು. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುವುದು. ಕೆಲವರಿಗೆ ಹೊಸ ಉದ್ಯೋಗ ಆಫರ್ ಬರಬಹುದು. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳು ಹೆಚ್ಚಾಗುತ್ತವೆ. ನಿಮ್ಮ ಆಲೋಚನೆಗಳು ನಿಮ್ಮ ಸಂಗಾತಿಯೊಂದಿಗೆ ಹೊಂದಿಕೆಯಾಗುವುದಿಲ್ಲ, ಇದು ಸಂಘರ್ಷಕ್ಕೆ ಕಾರಣವಾಗಬಹುದು. ಇಂದು ನೀವು ಹೊಸ ವಾಹನವನ್ನು ಖರೀದಿಸಬಹುದು.

** ಕರ್ಕಾಟಕ ರಾಶಿ :
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಐಷಾರಾಮಿ ವಸ್ತುಗಳ ಖರೀದಿಗೆ ಸಾಕಷ್ಟು ಹಣ ಲಭ್ಯವಾಗಲಿದೆ. ಇಂದು ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ತಡರಾತ್ರಿಯಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಿ. ಇಂದು ಆಸ್ತಿಯ ಬಗ್ಗೆ ವಾದ ಮಾಡಬೇಡಿ. ವೃತ್ತಿ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗಾಧ ಯಶಸ್ಸನ್ನು ಪಡೆಯುತ್ತಾರೆ.

** ಸಿಂಹ ರಾಶಿ :
ಅನಿರೀಕ್ಷಿತ ಆದಾಯದ ಮೂಲಗಳಿಂದ ಲಾಭವಾಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ನೀವು ಆರೋಗ್ಯಕರ ಮತ್ತು ಫಿಟ್ ಆಗಿ ಉಳಿಯುತ್ತೀರಿ. ಜೀವನದ ಸಮಸ್ಯೆಗಳನ್ನು ಸಕಾರಾತ್ಮಕ ಮನೋಭಾವದಿಂದ ನಿಭಾಯಿಸಿ. ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಮನ್ವಯವನ್ನು ಸುಧಾರಿಸಲು ಪ್ರಯತ್ನಿಸಿ. ಇಂದು ನೀವು ವೃತ್ತಿ ಪ್ರಗತಿಗೆ ಅನೇಕ ಅವಕಾಶಗಳನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಇರುತ್ತದೆ. ಆರೋಗ್ಯ ಸುಧಾರಿಸಲಿದೆ. ಶೀಘ್ರದಲ್ಲೇ ನೀವು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು. ಕೆಲವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ.

** ತುಲಾ ರಾಶಿ :
ನಿಮಗೆ ತುಂಬಾ ಶುಭ ದಿನವಾಗಿರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನೀವು ಆರೋಗ್ಯಕರ ಮತ್ತು ಶಕ್ತಿಯುತವಾಗಿ ಉಳಿಯುತ್ತೀರಿ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಲಾಗುವುದು. ಕೆಲವರು ಹೊಸ ಮನೆ ಖರೀದಿಸಬಹುದು. ಇಂದು ನೀವು ಇದ್ದಕ್ಕಿದ್ದಂತೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ.

** ವೃಶ್ಚಿಕ ರಾಶಿ :
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಆಸ್ತಿ ಸಂಬಂಧಿತ ವಿವಾದಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಜೀವನದಲ್ಲಿ ಧನಾತ್ಮಕ ಶಕ್ತಿಯ ಒಳಹರಿವು ಇರುತ್ತದೆ. ಕುಟುಂಬದ ಸದಸ್ಯರೊಂದಿಗೆ ಅಭಿಪ್ರಾಯಗಳು ಹೊಂದಿಕೆಯಾಗುವುದಿಲ್ಲ.

** ಧನಸ್ಸು ರಾಶಿ :
ನೀವು ಶೈಕ್ಷಣಿಕ ಕೆಲಸದಲ್ಲಿ ಪ್ರಮುಖ ಸಾಧನೆಗಳನ್ನು ಮಾಡುತ್ತೀರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಹೊಸ ಬಜೆಟ್ ರಚಿಸಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಕಚೇರಿಯ ಒತ್ತಡವನ್ನು ಮನೆಗೆ ತರಬೇಡಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇಂದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ನೀವು ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ.

** ಮಕರ ರಾಶಿ :
ಕಚೇರಿಯಲ್ಲಿ ತುಂಬಾ ಬಿಡುವಿಲ್ಲದ ಕೆಲಸ ಇರುತ್ತದೆ. ಪ್ರಮುಖ ಕಾರ್ಯಗಳ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ವೃತ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ. ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹದ ವಾತಾವರಣ ಇರುತ್ತದೆ. ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುವುದು. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಹೊಸ ಹೂಡಿಕೆ ಅವಕಾಶಗಳೂ ದೊರೆಯಲಿವೆ

** ಕುಂಭ ರಾಶಿ :
ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ, ಎಲ್ಲಾ ಕೆಲಸಗಳು ಗಡುವಿನ ಮೊದಲು ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಇಂದು ನೀವು ಹೊಸ ಯೋಜನೆಯನ್ನು ಪ್ರಾರಂಭಿಸಬಹುದು.

** ಮೀನ ರಾಶಿ :
ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ, ಆದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಕಛೇರಿಯಲ್ಲಿ ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ವ್ಯಾಪಾರ ಪ್ರವಾಸಕ್ಕೆ ಹೋಗಬಹುದು. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು. ಇಂದು ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ಹೆಚ್ಚಾಗುತ್ತದೆ.

Categories
ಬೆಂಗಳೂರು

ಅಯ್ಯೋ ದೇವರೇ ಕಾಪಾಡು… 5 ದಿನ ಭಾರೀ ಮಳೆ!

ಅಯ್ಯೋ ದೇವರೇ ಕಾಪಾಡು… 5 ದಿನ ಭಾರೀ ಮಳೆ!

– ಪ್ರವಾಹ, ನೆರೆ ಬಗ್ಗೆ ಗಮನ ಕೊಡದ ಸರ್ಕಾರಗಳು
– ಭೂಕುಸಿತ, ಅಪಾಯದ ಸೂಚನೆ ನೀಡಿದ ವಿಪತ್ತು ಪ್ರಾಧಿಕಾರ

NAMMUR EXPRESS NEWS

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ರೌದ್ರವತಾರ ತಾಳಿದೆ.
ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯಲು ಕಾರಣವಾಗಿರುವ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯದ ತೀವ್ರ ಇಳಿಕೆ ಆದಂತಿಲ್ಲ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟಿಸುವ ಮುನ್ಸೂಚನೆ ದೊರೆತಿದೆ. ಆದ್ದರಿಂದ ಇನ್ನಷ್ಟು ಅಪಾಯಕಾರಿಯಾಗಲಿದೆ ಮಳೆ.

ಹವಾಮಾನ ಇಲಾಖೆ ಪ್ರಕಾರ, ಕಳೆದ ಎರಡು ದಿನದಲ್ಲಿ ಮುಂಗಾರು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳಿಕೆ ಆದಂತೆ ಕಂಡು ಬಂದಿತ್ತು. ಆದರೆ ವೈಪರಿತ್ಯಗಳ ತೀವ್ರತೆ ಹೆಚ್ಚಾಗಿದ್ದು, ಮತ್ತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ದೊರಕಿದೆ.

ನಿರಂತರ ಸುರಿದ ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯಲು, ಜಲಾಶಯಗಳು ಭರ್ತಿಯಾಗಿವೆ. ತಗ್ಗು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗೆ ಗುಡ್ಡ ಕುಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ನದಿ ತೀರದ ಪ್ರದೇಶಗಳಲ್ಲಿ ಗ್ರಾಮಗಳು ಮುಳುಗಡೆ ಆಗಿವೆ. ನೂರಾರು ಸೇತುವೆಗಳು ನೆಲಕಚ್ಚಿವೆ. ಗುಡ್ಡಗಳು, ಹೆದ್ದಾರಿಗಳು ಕುಸಿದು ಸಂಚಾರ ಅಸ್ತವೆಸ್ತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ, ಜನರು ಪಡಬಾರದ ಕಷ್ಟವನ್ನೆಲ್ಲ ಪಟ್ಟಿದ್ದಾರೆ.

ಎಲ್ಲೆಲ್ಲಿ ಭಾರಿ ಮಳೆ, ಸಾಧಾರಣೆ ಮಳೆ?

ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಅಲರ್ಟ್ ಕೊಡಲಾಗಿದೆ.ನಂತರ ಆಗಸ್ಟ್ 4ರವರೆಗೆ ಸಾಧಾರಣದಿಂದ ಭಾರೀ ಮಳೆ ಬರಲಿದೆ. ಇನ್ನೂ ಭಾರಿ ಮಳೆ ಹೊರತುಪಡಿಸಿದ ರಾಜ್ಯದ ಉತ್ತರ ಒಳನಾಡು, ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿದೆ. ಬಿಟ್ಟು ಬಿಡದಂತೆ ನಿತ್ಯವು ಮಳೆ ದರ್ಶನವಾಗುತ್ತಿದೆ. ಮುಂದಿನ ಐದು ದಿನವು ಆಯಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ. ಭೂಕುಸಿತ, ಅಪಾಯದ ಸೂಚನೆಯನ್ನು ವಿಪತ್ತು ಪ್ರಾಧಿಕಾರ ನೀಡಿದೆ.

Categories
ಚಿಕ್ಕಮಗಳೂರು ಶಿವಮೊಗ್ಗ

ಶಿವಮೊಗ್ಗ, ಚಿಕ್ಕಮಗಳೂರು ಮಳೆ ಡೇಂಜರ್: ರಜೆ ಘೋಷಣೆ

ಶಿವಮೊಗ್ಗ, ಚಿಕ್ಕಮಗಳೂರು ಮಳೆ ಡೇಂಜರ್: ರಜೆ ಘೋಷಣೆ

– ಕೆಲವು ತಾಲೂಕಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
-ಯಾವ ಯಾವ ತಾಲೂಕು ರಜೆ? ಇಲ್ಲಿದೆ ಡೀಟೇಲ್ಸ್
– ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿ

NAMMUR EXPRESS NEWS

ಶಿವಮೊಗ್ಗ /ಚಿಕ್ಕಮಗಳೂರು: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಅದರಲ್ಲೂ ಶೃಂಗೇರಿ, ಮೂಡಿಗೆರೆ, ತೀರ್ಥಹಳ್ಳಿ, ಹೊಸನಗರ ಭಾಗ ಜನಜೀವನ ಸಂಪೂರ್ಣ ಕಷ್ಟವಾಗಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್. ಆರ್. ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ತಾಲೂಕು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನದಿಗಳು, ಹಳ್ಳಗಳು ತುಂಬಿ, ಅಪಾಯಮಟ್ಟವನ್ನು ತಲುಪಿ ಹರಿಯುತ್ತಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಅಣೆಕಟ್ಟುಗಳು, ಜಲಪಾತಗಳು ಮತ್ತು ನದಿ ನೀರಿಗೆ ಇಳಿಯುವುದು, ಈಜಾಡುವುದು ಮತ್ತು ಸೆಲ್ಪಿಗಳನ್ನು ತೆಗೆದುಕೊಳ್ಳುವುದನ್ನು ಹಾಗೂ ಈ ರೀತಿಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಭೇಟಿಯನ್ನು ನೀರಿನ ಹರಿವು ಕಡಿಮೆಯಾಗುವವರೆಗೆ ಸಂಭಂದಪಟ್ಟ ಇಲಾಖೆಗಳಿಂದ ನಿಷೇದಿಸಲಾಗಿರುತ್ತದೆ.

Categories
ತೀರ್ಥಹಳ್ಳಿ

ತುಂಗಾ ನದಿ ತೀರಕ್ಕೆ ಹೋಗಬೇಡಿ ಹುಷಾರ್..!

ತುಂಗಾ ನದಿ ತೀರಕ್ಕೆ ಹೋಗಬೇಡಿ ಹುಷಾರ್..!

– ತೀರ್ಥಹಳ್ಳಿಯಲ್ಲಿ ಅಪಾಯಕಾರಿಯಾದ ನದಿ
– ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಎಚ್ಚರಿಕೆ

NAMMUR EXPRESS NEWS

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತುಂಗಾ ನದಿ ರಾಮ ಮಂಟಪ ಮುಳುಗಿದ್ದು, ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ನದಿ ಸೇರಿದಂತೆ ಯಾವುದೇ ನದಿ ತೀರದಲ್ಲಿ ನದಿ ನೋಡುವುದು, ಸೆಲ್ಫಿ ತೆಗೆಯುವುದು ಅಪಾಯಕಾರಿ. ತೀರ್ಥಹಳ್ಳಿ ಜನ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಈಗಾಗಲೇ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಜನತೆ ನದಿ ಹಾಗೂ ಹಳ್ಳ, ಕೊಳ್ಳಗಳ ತೀರಗಳ ಬಳಿ ಜನ ಹೋಗಬಾರದು ಎಂದು ಗಜಾನನ ವಾಮನ ಸುತಾರ ಮನವಿ ಮಾಡಿದ್ದಾರೆ.

ತೀರ್ಥಹಳ್ಳಿಯ ಎಲ್ಲಾ ನದಿಗಳು ಫುಲ್

ತೀರ್ಥಹಳ್ಳಿ ತಾಲೂಕಿನ ತುಂಗಾ ನದಿ ಸೇರಿದಂತೆ ಮಾಲತಿ, ಕುಶಾವತಿ, ಶರಾವತಿ ಸೇರಿ ಎಲ್ಲಾ ನದಿಗಳು ಹಳ್ಳಗಳು ಈ ಸಲ ಅತೀ ಹೆಚ್ಚು ಮಳೆ ಸುರಿದಿದೆ.

Categories
ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಬೆಂಗಳೂರು -ಮಂಗಳೂರು ರೈಲು ಇನ್ನು 15 ದಿನ ಇಲ್ಲ!
– ಭಾರೀ ಗುಡ್ಡ ಕುಸಿತ: ಕುಸಿದ ರೈಲು ಮಾರ್ಗ

– ಮೂಡುಬಿದಿರೆ: ಗ್ಯಾಸ್ ಗೀಸರ್ ಸೋರಿಕೆ: ಸಾವು
– ಕಾರ್ಕಳ: ಟಿಪ್ಪರ್-ಬೈಕ್‌ ಢಿಕ್ಕಿ ಯುವಕ ದುರ್ಮರಣ
– ಮಂಗಳೂರು: ವಾಹನ ವೇಗವಾಗಿ ಚಲಿಸಿದ್ರೆ ಕೇಸ್!

NAMMUR EXPRESS ನ್ಯೂಸ್

ಮಂಗಳೂರು: ಭಾರೀ ಭೂಕುಸಿತ ಸಂಭವಿಸಿರುವ ಶಿರಾಡಿ ಘಾಟ್‌ನ ಎಡಕುಮೇರಿ ಮತ್ತು ಕಡಗರಳ್ಳಿ ನಡುವಿನ ರೈಲ್ವೆ ಹಳಿ ದುರಸ್ತಿ ಕಾಮಗಾರಿಯು ಯುದ್ಧೋಪಾದಿಯಲ್ಲಿ ಪ್ರಗತಿಯಲ್ಲಿದೆ. ಶುಕ್ರವಾರ ಸಂಜೆ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ. ಹಲವು ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ರೈಲು ಹಳಿಗಳ ಪುನಶ್ಚೇತನಕ್ಕೆ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ರೈಲು ಹಳಿ ಮರುಸ್ಥಾಪನೆಗೆ ಇನ್ನೂ 15 ದಿನ ಬೇಕಾಗಬಹುದು.ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 30 ಮತ್ತು 31 ರಂದು ಬೆಂಗಳೂರಿಗೆ ಎರಡು ವಿಶೇಷ ರೈಲುಗಳು ಸಂಚರಿಸಲಿವೆ. ದಕ್ಷಿಣ ರೈಲ್ವೆಯು ಜುಲೈ 30 ರಂದು ಮಡಗಾಂವ್-ಬೆಂಗಳೂರು ಏಕಮುಖ ವಿಶೇಷ ರೈಲನ್ನು ಒದಗಿಸಿದ್ದು ಅದು ಮಂಗಳೂರು ಜಂಕ್ಷನ್ ಮೂಲಕ ಹೋಗಲಿದೆ. ಈ ರೈಲು ಜುಲೈ 30 ರಂದು ಸಂಜೆ 4.30 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ತ್ರಿಶೂರು, ಪಾಲಕ್ಕಾಡ್ ಜಂಕ್ಷನ್ ಮೂಲಕ ಚಲಿಸುತ್ತದೆ. , ಕೊಯಮತ್ತೂರು ಜಂಕ್ಷನ್, ಕೃಷ್ಣರಾಜಪುರಂ ಮತ್ತು ಮರುದಿನ ಮಧ್ಯಾಹ್ನ 3.30 ಕ್ಕೆ ಬೆಂಗಳೂರು ತಲುಪುತ್ತದೆ.

ಅದೇ ರೀತಿ ಜುಲೈ 31 ರಂದು ಕಾರವಾರದಿಂದ ಯಶವಂತಪುರಕ್ಕೆ ಏಕಮುಖ ರೈಲು ಸಂಚರಿಸಲಿದ್ದು, ಸಂಜೆ 5.30ಕ್ಕೆ ಕಾರವಾರದಿಂದ ಪ್ರಯಾಣ ಆರಂಭಿಸಿ ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮೂಲಕ ಸಂಚರಿಸಲಿದೆ. ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ಕೊಯಮತ್ತೂರು ಜಂಕ್ಷನ್, ಕೃಷ್ಣರಾಜಪುರಂ ಮತ್ತು ಮರುದಿನ ಮಧ್ಯಾಹ್ನ 2.15 ಕ್ಕೆ ಬೆಂಗಳೂರು ತಲುಪುತ್ತದೆ.

ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆ: ಯುವಕ ಸಾವು

ಮೂಡುಬಿದಿರೆ: ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ. ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ದಿ. ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಬಳಸಿದ್ದರಿಂದ ವಿಷಾನಿಲ ಬಿಡುಗಡೆ ಆಗಿದೆ. ಇದನ್ನು ಆಕಸ್ಮಿಕವಾಗಿ ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿದ್ದು, ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದಿದ್ದರು ಎಂದು ತಿಳಿದುಬಂದಿದೆ.

ಕಾರ್ಕಳ: ಟಿಪ್ಪರ್-ಬೈಕ್‌ ಢಿಕ್ಕಿ ಯುವಕ ಸಾವು

ಕಾರ್ಕಳ : ಟಿಪ್ಪರ್ ಮತ್ತು ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾರ್ಕಳ ಪುಕ್ಕೇರಿ ಬಳಿಯ ಫುಡ್ ಬಾಸ್ಕೆಟ್ ಮುಂಭಾಗದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಪಾಸ್ ನಿವಾಸಿ, ಕಾರ್ ಮೆಕ್ಯಾನಿಕ್ ನಿಝಾಮ್ (21) ಎಂದು ತಿಳಿದುಬಂದಿದೆ. ಸಾಣೂರಿನಿಂದ ಕೆಲಸಕ್ಕೆಂದು ಬೆಳಗ್ಗೆ 10:30ರ ಸುಮಾರಿಗೆ ಕಾರ್ಕಳ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪುರಿಯ ಬಳಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾವನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ ಅತಿವೇಗದಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವಾಹನ ವೇಗವಾಗಿ ಚಲಿಸಿದ್ರೆ ಕೇಸ್!

ಮಂಗಳೂರ : ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಪೊಲೀಸರು ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ಗಳ ಬಳಕೆ ಆರಂಭಿಸಿದ್ದು, ಸೋಮವಾರ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು 5 ಮೊಬೈಲ್ ಸ್ಪೀಡ್ ಡಿಟೆಕ್ಷನ್ ಗನ್’ಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ವಾಹನಗಳ ವೇಗ ಪತ್ತೆ ಮಾಡಲು ಪೊಲೀಸರಿಗೆ ಒದಗಿಸಲಾಗಿರುವ ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ. ಈಗಾಗಲೇ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಮಿಷನರೆಟ್ ವ್ಯಾಪ್ತಿಗೆ ಇಂತಹ 3 ಗನ್‌ಗಳನ್ನು ಒದಗಿಸಲಾಗಿದೆ. ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್‌ಕಟ್ಟೆ ಭಾಗದಲ್ಲಿ ಸ್ಪೀಡ್ ಡಿಟೆಕ್ಷನ್‌ ರಾಡಾರ್ ಗನ್ ಕೆಮರಾ ಬಳಸುವ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು.

Categories
ಮಂಡ್ಯ

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!

– ಸ್ನಾನಘಟ್ಟ ಮುಳುಗಡೆ, ದೇವಸ್ಥಾನಕ್ಕೆ ಜಲದಿಗ್ಬಂಧನ
– ನೋಡುಗರ ಕಣ್ಣಿಗೆ ಮದ ನೀಡುತ್ತಿರುವ ನದಿಯ ರುದ್ರ ರಮಣೀಯ ದೃಶ್ಯ

NAMMUR EXPRESS NEWS

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದೆ. ಇನ್ನು ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ರುದ್ರ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ.

ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ!

ಒಂದು ಕಡೆ ಕಾವೇರಿ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ದೇವತೆ ಹಾಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಇದೇ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿ ಪ್ರವಾಹದ ಆತಂಕವನ್ನು ತಂದಿದೆ. ಕೆಆರ್‌ಎಸ್‌ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವು ಘಟನೆಗಳು ಜರುಗಿವೆ. ಒಂದು ಕಡೆ ಕಾವೇರಿ ನದಿ ಪಕ್ಕದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡು ಅಲ್ಲಿನ ಬೆಳೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ!

ಈ ಹಿನ್ನಲೆ ನದಿಗೆ ಇಳಿಯಲು ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣ ಕೋಟೆ ಗಣಪತಿ ದೇವಸ್ಥಾನ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ವಿಶ್ವೇಶ್ವರನಿಗೆ ಪೂಜೆ ಇಲ್ಲದ ಹಾಗೆ ಆಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸುಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ ಎದುರಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟಿನ 25 ನಡುಗಡ್ಡೆಗಳ ಪೈಕಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿವೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಗಳಿಗೂ ಸಂಕಷ್ಟ ಎದುರಾಗಿದೆ. ಇದಲ್ಲದೇ ರಂಗನತಿಟ್ಟಿನ ವಾಕಿಂಗ್ ಪಾಥ್ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಈಗಾಗಲೇ ಬೋಟಿಂಗ್ ವ್ಯವಸ್ಥೆ ಸ್ಥಗಿತ ಮಾಡಲಾಗಿದ್ದು, ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಓ ತಸ್ವೀರ್ ಸೇರ್ ಆಸೀಫ್ ಭೇಟಿ ನೀಡಿದರು. ಮುಂದೆ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜೊತೆಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಿಂತನೆ ಮಾಡಲಾಯಿತು. ಒಟ್ಟಾರೆ ಕಾವೇರಿ ನದಿ ಭೋರ್ಗರೆತವಾಗಿ ಹರಿಯುತ್ತಿರೋದು ಒಂದು ಕಡೆ ಸಂತಸವಾದರೆ, ಇನ್ನೊಂದೆಡೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿಯಿಂದ ಪ್ರವಾಹದ ಸಮಸ್ಯೆಯನ್ನು ಕಾವೇರಿ ಕೊಳ್ಳದ ಜನರು ಎದುರಿಸುತ್ತಿದ್ದಾರೆ.

Categories
ಚಿಕ್ಕಮಗಳೂರು

ನೆರೆಗೆ ಬಾಳೆಹೊನ್ನೂರು ಮುಳುಗಡೆ: ಬೋಟ್ ಸಂಚಾರ!

ನೆರೆಗೆ ಬಾಳೆಹೊನ್ನೂರು ಮುಳುಗಡೆ: ಬೋಟ್ ಸಂಚಾರ!

– ಬೋಟ್ ಮೂಲಕ ಜನರ ರಕ್ಷಣೆ: ಹಲವೆಡೆ ಕುಸಿತ
– ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್

NAMMUR EXPRESS NEWS

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ. ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ.

ಕೊಪ್ಪದ ಹಲವೆಡೆ ಅನಾಹುತ

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ. 2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿದಿದೆ. ಬಾಳೆಹೊಳೆ, ಚನ್ನಹಡ್ಡು, ಬಾಳೆಹೊನ್ನೂರು ರಸ್ತೆಯಲ್ಲಿ ಘಟನೆ ನಡೆದಿದೆ.

ಎನ್.ಆ‌ರ್.ಪುರ ತಾಲೂಕಿನ ಮಹಲ್ಲೋಡು ಸೇತುವೆ ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ.ಕಳೆದ ಮೂರು ದಿನದಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣ ಸೋಮವಾರ ರಾತ್ರಿಯಿಡೀ ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ಹರಿಯುತ್ತಿರುವ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತವಾಗಿದೆ. ಟಿಪ್ಪರ್ ಲಾರಿ ಚಾಲಕ ಸೇತುವೆ ಮೇಲೆ ಸಂಚರಿಸಲು ಹೋಗಿ ಭಯಗೊಂಡು ವಾಪಾಸ್ ಆಗಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ.

Categories
ರಾಜ್ಯ

ಚಿನ್ನದ ಹುಡುಗಿ ಮನು ಭಾಕರ್: ಮತ್ತೆ ಗೆದ್ದ ಭಾರತ!

ಚಿನ್ನದ ಹುಡುಗಿ ಮನು ಭಾಕರ್: ಮತ್ತೆ ಗೆದ್ದ ಭಾರತ!

– ಒಂದೇ ಒಲಿಂಪಿಕ್ಸಲ್ಲಿ 2 ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು
– ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಸಾಧನೆ

NAMMUR EXPRESS NEWS

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬೋಜತ್ ಸಿಂಗ್ ಮತ್ತು ಮನು ಭಾಕರ್ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಈ ಮೂಲಕ ಭಾರತ ಮತ್ತೊಂದು ಪದಕ ಸಾಧನೆ ಮಾಡಿದೆ. 2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

2 ಪದಕ ಗೆದ್ದ ಮನು ಬಾಕರ್

ಮಂಗಳವಾರ ನಡೆದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು. ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್-ಸರಬೋಜತ್‌ ಸಿಂಗ್ ಒಟ್ಟು 580 ಅಂಕ ಸಂಪಾದಿಸಿದ್ದರು. ಕೊರಿಯಾದ ಜೋಡಿ 579 ಅಂಕ ಗಳಿಸಿತು. ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

2 ಪದಕ ಗೆದ್ದ ಶೂಟಿಂಗ್ ಕ್ರೀಡಾಪಟುಗಳು!

ಸದ್ಯ ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಪದಕ ತನ್ನದಾಗಿಸಿಕೊಂಡಿದೆ. 2 ಪದಕ ಕೂಡ ಶೂಟಿಂಗ್ ವಿಭಾಗದಲ್ಲಿ ಬಂದಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್‌ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್‌ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈ ಬಾರಿ ಪ್ಯಾರಿಸ್‌ನಲ್ಲಿ 2 ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನೇ ಮಾಡಿ ತಮ್ಮ ಎಲ್ಲ ನೋವನ್ನು ಮರೆತಿದ್ದಾರೆ.

Categories
ಕರಾವಳಿ

ಕರಾವಳಿಯಲ್ಲಿ ಭಾರಿ ಮಳೆ: ಜನರೇ ಅಲರ್ಟ್!

ಕರಾವಳಿಯಲ್ಲಿ ಭಾರಿ ಮಳೆ: ಜನರೇ ಅಲರ್ಟ್!

– ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು
– ಕುಸಿದು ಬೀಳುವ ಸ್ಥಿತಿಯಲ್ಲಿ ಗುಡ್ಡಗಳು
– ಅಂಬುಲೆನ್ಸ್ ಮೀಸಲಿರಿಸುವಂತೆ ಸಾರ್ವಜನಿಕರ ಮನವಿ

ವಿಶೇಷ ವರದಿ: ಗಣೇಶ್ ಮಂಗಳೂರು

NAMMUR EXPRESS NEWS

ಉಡುಪಿ /ಮಂಗಳೂರು: ಕರಾವಳಿಯಾದ್ಯಂತ ಕಳೆದ ಎರಡು ದಿನದಿಂದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ನದಿ, ತೊರೆಗಳು ಭೋರ್ಗರೆಯುತ್ತಿದ್ದು, ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದೆ. ಇನ್ನು ಗುಡ್ಡಗಳೆಲ್ಲವೂ ಮೆತ್ತಗಾಗಿದ್ದು, ಮಣ್ಣು, ಕಾಮಗಾರಿಗಳು ಕುಸಿದುಬೀಳುವ ಸಂಭವ ಹೆಚ್ಚಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬೆಳ್ತಂಗಡಿ ಭಾಗದಲ್ಲಿ ಸಂಚಾರ ಕಷ್ಟವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ. ಈ ಹಿನ್ನಲೆ ದಕ್ಷಿಣ ಕನ್ನಡ ಹಾಗೂ ಉಡುಪಿಗೆ ಆಗಸ್ಟ್ 2 ರವರೆಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಗುಡ್ಡ ಕುಸಿತ ಅಪಾಯ: ಎಚ್ಚರ ಎಚ್ಚರ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 169 ರ ಕೆತ್ತಿಕಲ್ ಮತ್ತು ಗುರುಪುರ ಪ್ರದೇಶವು ಇದೇ ರೀತಿಯ ಅಪಾಯಕಾರಿ ಗುಡ್ಡಗಳಾಗಿದ್ದು, ಈ ಹೆದ್ದಾರಿಯಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು, ವಾಹನ ಚಾಲಕರು ಹೆಚ್ಚಿನ ನಿಗಾ ವಹಿಸುವುವ ಅಗತ್ಯವಿದೆ. ಮತ್ತು ಈ ಪ್ರದೇಶದಲ್ಲಿ ಜಿಲ್ಲಾಡಳಿತವು ಸಾರ್ವಜನಿಕರ ಮುಂಜಾಗ್ರತೆಯ ನಿಟ್ಟಿನಲ್ಲಿ ಪೋಲೀಸರನ್ನು ಮತ್ತು ಆಂಬುಲೆನ್ಸ್ ಅನ್ನು ಮೀಸಲುಗೊಳಿಸಿ ಇಡುವ ಅಗತ್ಯ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಶಿರೂರಲ್ಲಿ ಗುಡ್ಡ ಕುಸಿದು ನಾಪತ್ತೆ: ಶೋಧಕ್ಕೆ ಮಳೆ ಅಡ್ಡಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಶಿರೂರಲ್ಲಿ ಗುಡ್ಡ ಕುಸಿದು ನಾಪತ್ತೆ ಅದವರ ರಕ್ಷಣೆಗೆ ಭಾರೀ ಮಳೆ ಅಡ್ಡಿಯಾಗಿದೆ. ಈಗಾಗಲೇ ಜಿಲ್ಲಾಡಳಿತ ಶೋಧ ಕಾರ್ಯ ನಿಲ್ಲಿಸಿದೆ.

ಅಪಾಯದತ್ತ ನೇತ್ರಾವತಿ ನದಿ!

ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7.9 ಮೀಟರ್‌ಗೆ ತಲುಪಿದೆ. ಈಗಾಗಲೇ ಅಜಿಲಮೊಗರು ಮುಖ್ಯರಸ್ತೆ ಸೇರಿದಂತೆ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ನೀರು ರಸ್ತೆಗೆ ನುಗ್ಗಿದೆ. ನೀರಿನ ಮತ್ತಷ್ಟು ಏರಿಕೆಯಾದರೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. ಪ್ರವಾಹದ ಅಪಾಯವಿರುವ ಶಾಲೆಗಳ ಸಿಆರ್‌ಪಿ ಮತ್ತು ಎಸ್‌ಟಿಎಂಸಿ ಸಮಿತಿಗಳಿಗೆ ಅಗತ್ಯಕ್ಕೆ ತಕ್ಕಂತೆ ರಜೆ ಘೋಷಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.

ಭಾರೀ ಗಾಳಿ: ಹಲವೆಡೆ ಅನಾಹುತ

ಭಾರೀ ಗಾಳಿ ಕರಾವಳಿಯಲ್ಲಿ ಅನಾಹುತ ಸೃಷ್ಟಿ ಮಾಡುತ್ತಿದೆ. ಮಂಗಳೂರಲ್ಲಿ ಶಾಲೆಯ ಶೀಟುಗಳು ಹಾರಿ ಹೋಗಿವೆ. ಕಡಲ ಕೊರೆತ ಕೆಲವೆಡೆ ಅಪಾಯಕ್ಕೆ ಕಾರಣವಾಗಿದೆ. ಸಮುದ್ರ ತೀರ, ಬೀಚ್ ಪ್ರವಾಸ ನಿರ್ಬಂಧ ಹೇರಲಾಗಿದೆ.

Categories
ಚಿಕ್ಕಮಗಳೂರು

ಕಾಫಿ ನಾಡಲ್ಲಿ ಮಳೆಗೆ ಕಂಗೆಟ್ಟ ಜನ!

ಕಾಫಿ ನಾಡಲ್ಲಿ ಮಳೆಗೆ ಕಂಗೆಟ್ಟ ಜನ!

– ಎಲ್ಲೆಡೆ ಮಳೆ, ಭೂಕುಸಿತ, ಪ್ರವಾಹ, ಜೀವನ ಕಷ್ಟ ಕಷ್ಟ
– ಅತೀ ಹೆಚ್ಚು ಮಳೆ: ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ
– ಹೊರನಾಡಿನ ಸಂಪರ್ಕ ಕಡಿತ: ಮತ್ತಷ್ಟು ಕಡೆ ಅಪಾಯ
– ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ: ಜನರಿಗೆ ಭಯ!

ವಿಶೇಷ ವರದಿ: ಸಚಿನ್ ಶೃಂಗೇರಿ

NAMMUR EXPRESS NEWS

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಬ್ಬರಿಸುತ್ತಿರುವ ಪುಷ್ಯ. ಭಾರೀ ಮಳೆಗೆ ಮತ್ತೆ ಪ್ರವಾಹ,ಭೂಕುಸಿತ,ರಸ್ತೆ ಸಂಪರ್ಕ ಬಂದ್ ಎಲ್ಲೆಡೆ ಕೈಕೊಟ್ಟ ವಿದ್ಯುತ್ ಹಾಗೂ ನೆಟ್ವರ್ಕ್. ಎಲ್ಲಾ ಕಡೆ ಅಪಾಯದ ಭೀತಿ. ಕೊಚ್ಚಿಕೊಂಡು ಹೋಗುತ್ತಿರುವ ತೋಟಗಳು. ಮತ್ತೆ ಶಾಲೆ, ಕಾಲೇಜುಗಳಿಗೆ ರಜೆ. ಹೌದು. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 15 ಗಂಟೆಗಳಿಂದ ಒಂದೇ ಸಮನೆ ಬಿಡದೆ ಸುರಿಯುತ್ತಿದೆ.

ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಗೆ ಜಿಲ್ಲೆಯ ಪ್ರಮುಖ ನದಿಗಳು,ಹಳ್ಳ ಕೊಳ್ಳಗಳು ತುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವೆಡೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಷ್ಟಕರವಾಗಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹೊರನಾಡಿನ ಸಂಪರ್ಕ ಕಡಿತ: ಮತ್ತಷ್ಟು ಕಡೆ ಅಪಾಯ

ಕಳಸ – ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಹೊರನಾಡಿನ ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದೆ ರಸ್ತೆ ಮೇಲೆ ನದಿ ನೀರು ಬಂದ ಪರಿಣಾಮ ಬಾಳೆಹೊನ್ನೂರು-ಕಳಸ ಸಂಪರ್ಕ ಸ್ಥಗಿತವಾಗಿದೆ.

ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ: ಜನರಿಗೆ ಭಯ!

ಶೃಂಗೇರಿಯಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು ಅಂಗಡಿ ಮಳಿಗೆಗಳಿಗೆ ನೀರುನುಗ್ಗಿದೆ. ಶೃಂಗೇರಿ ಶ್ರೀಮಠದ ಹಿಂಭಾಗದಿಂದ ವಿದ್ಯಾರಣ್ಯಪುರ ಸಂಪರ್ಕಿಸುವ ರಸ್ತೆಯ ಮೇಲೆ ನದಿ ನೀರು ಬಂದಿದ್ದು ಸಂಪರ್ಕ ಸ್ಥಗಿತಗೊಂಡಿದೆ. ಶೃಂಗೇರಿಯ ಕುರುಬಗೇರಿ ರಸ್ತೆ ಮೇಲೆ ತುಂಗಾ ನದಿ ನೀರು ಬಂದಿದ್ದು ಸಂಚಾರ ಸ್ಥಗಿತಗೊಂಡಿದೆ.

ಶೃಂಗೇರಿ- ಮಂಗಳೂರು ಸಂಪರ್ಕ ಭಾಗಶಃ ಸ್ಥಗಿತ?

ಶೃಂಗೇರಿಯಿಂದ ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ಮೇಲೆ ನೆಮ್ಮಾರಿನಲ್ಲಿ ತುಂಗಾ ನದಿ ನೀರು ಬಂದಿದ್ದು ಶೃಂಗೇರಿ- ಮಂಗಳೂರು ಸಂಪರ್ಕ ಭಾಗಶಃ ಸ್ಥಗಿತಗೊಂಡಿದೆ.ಹರಿಹರಪುರದಲ್ಲಿ ತುಂಗಾ ಪ್ರವಾಹಕ್ಕೆ ಕೃಷಿಭೂಮಿಗೆ ನೀರು ನುಗ್ಗಿದೆ. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಮಳೆಯಿಂದ ಗೋಡೆ ಕುಸಿತ,ಭೂ ಕುಸಿತದಂತ ಘಟನೆಗಳು ವರದಿಯಾಗಿದೆ.

ಅಡಿಕೆ, ಕಾಫಿ ಬೆಳೆ ಉದುರುವ ಭೀತಿ

ಮಳೆ ಹೆಚ್ಚಾಗತೊಡಗಿದೆ. ತೋಟಗಳಲ್ಲಿ ಮೊದಲೇ ಫಸಲು ಇಲ್ಲದೆ ಕಾಫಿ ನಾಡ ಕೊಪ್ಪ, ಶೃಂಗೇರಿ, ಮೂಡಗೆರೆ ರೈತರು ಕಂಗಾಲಾಗಿದ್ದಾರೆ. ಇದೀಗ ಕೊಳೆ ಭೀತಿ ಶುರುವಾಗಿದೆ. ಕಾಫಿಗೂ ಆತಂಕ ಎದುರಾಗಿದೆ.