Categories
ಹಾಸನ

ಈಗ ಸಕಲೇಶಪುರಪುರದಲ್ಲಿ ಭೂ ಕುಸಿತ!

ಈಗ ಸಕಲೇಶಪುರಪುರದಲ್ಲಿ ಭೂ ಕುಸಿತ!
– 6 ವಾಹನಗಳು ಮಣ್ಣಿನಡಿ: ಬಾಯಿ ತೆರೆದ ರಸ್ತೆಗಳು!
– ಮಂಗಳೂರು ಸೇರಿ ಹಲವೆಡೆ ಸಂಚಾರ ಬಂದ್

– ವಯನಾಡು ಭೂಕುಸಿತ: 70ಕ್ಕೂ ಹೆಚ್ಚು ಸಾವು
– ಶಿರೂರು ಗುಡ್ಡ ಕುಸಿತ:11 ಮಂದಿ ದುರ್ಮರಣ

NAMMUR EXPRESS NEWS
ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲುನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದ್ದು, ಟಿಪರ್, ಗ್ಯಾಸ್ ಟ್ಯಾಂಕರ್ ಹಾಗೂ ಇನೋವಾ ಕಾರು ಜಖಂಗೊಂಡು ಭಾರೀ ಹಾನಿ ಸಂಭವಿಸಿದೆ. ರಾಜ್ಯದಲ್ಲಿ ಕೂಡ ಭೀಕರ ಕುಸಿತ ಕಾಣುತ್ತಿದೆ.
ಮಂಗಳೂರು –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಸಕಲೇಶಪುರ ದೊಡ್ಡ ತೆಪ್ಲೆಯಲ್ಲಿ ಭಾರಿ ಭೂಕುಸಿತ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಈ ಹೆದ್ದಾರಿಯಲ್ಲಿ ನಿರ್ಭಂಧಿಸಲಾಗಿದೆ..

ಮಂಗಳೂರು, ಶೃಂಗೇರಿ ಭಾಗದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.ಕೇರಳದ ವಯನಾಡಿನಲ್ಲಿ ಬೃಹತ್ ಭೂಕುಸಿತ ಸಂಭವಿಸಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಿನಲ್ಲಿಯೇ, ಹಾಸನದ ಶಿರಾಡಿ ಘಾಟಿಯಲ್ಲಿಯೂ ರಸ್ತೆಯ ಮೇಲೆ ಭಾರೀ ಭೂಕುಸಿತ ಸಂಭವಿಸಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿದ್ದು, ಇನ್ನಷ್ಟು ಕುಸಿತದ ಆತಂಕ ಎದುರಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ.
ಸತತ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲೆ ಬಳಿ ಕಳೆದ ವಾರವೂ ಭೂಕುಸಿತವಾಗಿತ್ತು. ಕಳೆದ ಹದಿನೈದು ದಿನಗಳಿಂದ ಇಲ್ಲಿ ಮಣ್ಣಿನ ರಾಶಿ ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಕುಸಿದಿದೆ. ಹಲವು ಪ್ರಯಾಣಿಕರು ಕಾರಿನಲ್ಲೇ ಸಿಲುಕಿದ್ದಾರೆ. ಕಾರ್ಯಾಚರಣಾ ಸಿಬ್ಬಂದಿ ಜೆಸಿಬಿ ಮೂಲಕ‌ ಮಣ್ಣು ತೆರವು ಮಾಡುತ್ತಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯುವ ಭೀತಿಯಿದೆ. ಸಾಗರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನ ನಡೆಯುತ್ತಿದೆ.
ಇನ್ನು ಮೂವರ ಶವ ಪತ್ತೆ ಆಗಿಲ್ಲ!

ಕಳೆದ ತಿಂಗಳು ಉತ್ತರ ಕನ್ನಡದ ಅಂಕೋಲಾ ಶಿರೂರಿನಲ್ಲಿ ಗುಡ್ಡ ಕುಸಿದು ಹಲವಾರು ವಾಹನಗಳು ಹಾಗೂ ಜನರು ಜಲಸಮಾಧಿಯಾಗಿದ್ದರು. 11 ಜನ ಸತ್ತಿದ್ದು, ಇವರಲ್ಲಿ 8 ಜನರ ದೇಹಗಳು ದೊರೆತಿವೆ. ಇನ್ನೂ ಮೂವರು ದೇಹಗಳು ದೊರೆತಿಲ್ಲ. ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Categories
ಮಂಡ್ಯ

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!
– ಸ್ನಾನಘಟ್ಟ ಮುಳುಗಡೆ, ದೇವಸ್ಥಾನಕ್ಕೆ ಜಲದಿಗ್ಬಂಧನ
– ನೋಡುಗರ ಕಣ್ಣಿಗೆ ಮದ ನೀಡುತ್ತಿರುವ ನದಿಯ ರುದ್ರ ರಮಣೀಯ ದೃಶ್ಯ

NAMMUR EXPRESS NEWS
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದೆ. ಇನ್ನು ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ರುದ್ರ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ.

ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ!

ಒಂದು ಕಡೆ ಕಾವೇರಿ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ದೇವತೆ ಹಾಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಇದೇ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿ ಪ್ರವಾಹದ ಆತಂಕವನ್ನು ತಂದಿದೆ. ಕೆಆರ್‌ಎಸ್‌ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವು ಘಟನೆಗಳು ಜರುಗಿವೆ. ಒಂದು ಕಡೆ ಕಾವೇರಿ ನದಿ ಪಕ್ಕದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡು ಅಲ್ಲಿನ ಬೆಳೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ!

ಈ ಹಿನ್ನಲೆ ನದಿಗೆ ಇಳಿಯಲು ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣ ಕೋಟೆ ಗಣಪತಿ ದೇವಸ್ಥಾನ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ವಿಶ್ವೇಶ್ವರನಿಗೆ ಪೂಜೆ ಇಲ್ಲದ ಹಾಗೆ ಆಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸುಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ ಎದುರಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟಿನ 25 ನಡುಗಡ್ಡೆಗಳ ಪೈಕಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿವೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಗಳಿಗೂ ಸಂಕಷ್ಟ ಎದುರಾಗಿದೆ.

ಇದಲ್ಲದೇ ರಂಗನತಿಟ್ಟಿನ ವಾಕಿಂಗ್ ಪಾಥ್ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಈಗಾಗಲೇ ಬೋಟಿಂಗ್ ವ್ಯವಸ್ಥೆ ಸ್ಥಗಿತ ಮಾಡಲಾಗಿದ್ದು, ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಓ ತಸ್ವೀರ್ ಸೇರ್ ಆಸೀಫ್ ಭೇಟಿ ನೀಡಿದರು. ಮುಂದೆ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜೊತೆಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಿಂತನೆ ಮಾಡಲಾಯಿತು. ಒಟ್ಟಾರೆ ಕಾವೇರಿ ನದಿ ಭೋರ್ಗರೆತವಾಗಿ ಹರಿಯುತ್ತಿರೋದು ಒಂದು ಕಡೆ ಸಂತಸವಾದರೆ, ಇನ್ನೊಂದೆಡೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿಯಿಂದ ಪ್ರವಾಹದ ಸಮಸ್ಯೆಯನ್ನು ಕಾವೇರಿ ಕೊಳ್ಳದ ಜನರು ಎದುರಿಸುತ್ತಿದ್ದಾರೆ.

Categories
ಚಿಕ್ಕಮಗಳೂರು

ಎನ್. ಆರ್. ಪುರ: ಭಾರೀ ಮಳೆ, ಹಲವೆಡೆ ಬಿದ್ದ ಮನೆ!

ಎನ್. ಆರ್. ಪುರ: ಭಾರೀ ಮಳೆ, ಹಲವೆಡೆ ಬಿದ್ದ ಮನೆ!

– ಬಾಳೆಹೊನ್ನೂರು, ಜಯಪುರ ಭಾಗದಲ್ಲಿ ಭಾರೀ ಹಾನಿ
– ಅಪಾಯದತ್ತ ಜನ ಜೀವನ: ಮನೆಯಿಂದ ಹೊರ ಹೋದ್ರೆ ಅಪಾಯ
– ಸೂಕ್ತ ಪರಿಹಾರಕ್ಕೆ ಮಾಜಿ ಶಾಸಕ ಜೀವರಾಜ್ ಪಟ್ಟು

NAMMUR EXPRESS ನ್ಯೂಸ್

ಎನ್ ಆರ್ ಪುರ: ಎನ್ ಆರ್ ಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನೇಕ ಕಡೆ ಭಾರೀ ಹಾನಿ ಸಂಭವಿಸುತ್ತಿದೆ. ಈಗಾಗಲೇ ಹತ್ತಾರು ಮನೆಗಳು ಬಿದ್ದಿವೆ. ರಸ್ತೆಗಳು ಕುಸಿದಿವೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಳುಕೊಪ್ಪದ ಸಾಧು ಪೂಜಾರಿ ಅವರ ಮನೆ ಸಂಪೂರ್ಣ ಕುಸಿತಗೊಂಡಿದೆ. ಮನೆ ಕುಸಿತಗೊಂಡ ಸ್ಥಳಕ್ಕೆ ಮಾಜಿ ಸಚಿವರಾದ ಡಿ.ಎನ್ ಜೀವರಾಜ್‌ರವರು ಭೇಟಿ ನೀಡಿ ಪರಿಶೀಲನೆ ಮಾಡಿ, ತಹಸೀಲ್ದಾರ್ ಅವರಿಗೆ ಕರೆ ಮಾಡಿ ನೆರವು ನೀಡಲು ಸೂಚಿಸಿದರು.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮನೆ ಕಳೆದುಕೊಂಡವರಿಗೆ ಯಡ್ಡಿಯೂರಪ್ಪ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು ಆದರೆ ಈ ಪರಿಹಾರ ಮೊತ್ತವನ್ನ ಕಾಂಗ್ರೆಸ್ 1 ಲಕ್ಷ ರೂಗೆ ಇಳಿಕೆ ಮಾಡಿದೆ. ಕ್ಷೇತ್ರದಲ್ಲಿ ಮನೆ ಹಾನಿಯಾದ ಪ್ರತಿಯೊಬ್ಬರಿಗೂ 5 ಲಕ್ಷ ಕೊಡಬೇಕು ಎಂದು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ವಕ್ತಾರಾದ ಎನ್.ಎಂ.ಕಾಂತ್ ರಾಜ್, ಪಂಚಾಯತ್ ಸದಸ್ಯರಾದ ಪ್ರವೀಣ್, ಬಣಗಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Categories
ಚಿತ್ರದುರ್ಗ

ಆದರ್ಶ ದಂಪತಿಗಳಿಗಾಗಿ ” ಜನುಮದ ಜೋಡಿ” ರಂಗು!

ಆದರ್ಶ ದಂಪತಿಗಳಿಗಾಗಿ ” ಜನುಮದ ಜೋಡಿ” ರಂಗು!

– ಹೊಸದುರ್ಗದಲ್ಲಿ ಒಂದೊಳ್ಳೆ ಕಾರ್ಯಕ್ರಮ: ದಂಪತಿಗಳ ಖುಷ್
– ಪ್ರೇರಣೆ ಮಾತನಾಡಿದ ಯುವ ಉದ್ಯಮಿ ಸದ್ಗುರು ಪ್ರದೀಪ್
– ಕಲರ್ ಫುಲ್ ಕಾರ್ಯಕ್ರಮದಲ್ಲಿ ನಟ ನಟಿಯರ ಮೆರುಗು

NAMMUR EXPRESS NEWS

ಹೊಸದುರ್ಗ: ದಿನೇ ದಿನೇ ನಾವು ನಮ್ಮ ಬದುಕಿನಲ್ಲಿ ಒತ್ತಡಕ್ಕೆ ಸಿಲುಕುತ್ತಿದ್ದೇವೆ. ಬೆಳಿಗ್ಗೆಯಿಂದ ರಾತ್ರಿವರೆಗೂ ನಮ್ಮ ಒತ್ತಡದ ಜೀವನದ ನಡುವೆ ಹೆಂಡತಿ ಮಕ್ಕಳು ನಮ್ಮ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ ನಮ್ಮ ಬದುಕಿನ ಈ ಸುಂದರ ಜೀವನದಲ್ಲಿ ನಮ್ಮ ಕುಟುಂಬದೊಂದಿಗೆ ಬೆರೆಯದಿದ್ದರೆ ನಮ್ಮ ಮಕ್ಕಳು ಬಹುಬೇಗ ನಮ್ಮ ಪ್ರೀತಿ ವಾತ್ಸಲ್ಯ ಮರೆತು ಬಿಡುತ್ತಾರೆ ಎಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸದುರ್ಗ ನಗರದ ಗಣೇಶ ಸದನದಲ್ಲಿ ನಡೆದ ಆದರ್ಶ ದಂಪತಿಗಳಿಗಾಗಿ ನಡೆದ ಜನುಮದ ಜೋಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಿಗ್ಗೆಯಿಂದ ರಾತ್ರಿವರೆಗೂ ಮನೆಯ ಹೆಂಡತಿ ಮಕ್ಕಳ ಪ್ರೀತಿಯಿಂದ ದೂರವಾಗಿ ನಮ್ಮ ವ್ಯವಹಾರಗಳ ಜಂಜಾಟದಲ್ಲಿರುತ್ತೇವೆ. ಇದರಿಂದ ಮುಕ್ತವಾಗಿ ಹೊರ ಬಂದು ಒಂದು ದಿನವಾದರೂ ಸತಿಪತಿಗಳ ಆದರ್ಶದ ಬದುಕಿನ ಅನುಭವವನ್ನು ಹಂಚಿಕೊಳ್ಳಲು ಜನುಮದ ಜೋಡಿ ಕಾರ್ಯಕ್ರಮ ವೇದಿಕೆಯಾಗಿದೆ. ಜೀವನದಲ್ಲಿ ಆದರ್ಶ ದಂಪತಿಗಳಾಗಿ ಬದುಕಲು ಪರಸ್ಪರ ಪ್ರೀತಿ ಸೌಮ್ಯಮ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ ಎಂದರು.

ಇಬ್ಬರು ದಂಪತಿಗಳಿಗೆ ಬಹುಮಾನ

ಜನುಮದ ಜೋಡಿ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಮಮತಾ ಡಾ ರವಿಶಂಕರ್ ಶಾಸ್ತ್ರಿ,ದ್ವಿತೀಯ ಬಹುಮಾನ ರಾಜೇಶ್ವರಿ ಪ್ರಹಾಲ್ಲಾದ್ ಈ ಎರಡು ದಂಪತಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಡಾಕ್ಟರ್ ಸ್ವಾತಿ ಪ್ರದೀಪ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಲನಚಿತ್ರ ನಟರಾದ ಜಗಪ್ಪ,ಸುಶ್ಮಿತಾ ಸಾಗರ್ತು ರುವೇಕೆರೆ, ವಿದ್ಯಾ ಖ್ಯಾತ ನಿರೂಪಕ ಜಿವಿ ಟಿವಿ, ರಾಘು,, ವೀರಶೈವ ಮಹಿಳಾ ಸಂಘದ ಅಧ್ಯಕ್ಷರಾದ ಅನಿತಾ ರಾಜೇಶ್, ಮುಖ್ಯ ತೀರ್ಪುಗಾರರಾದ ವಿವೇಕ್, ನಂದಿನಿ, ರಕ್ಷಿತಾ, ಸಾಯಿ ಕಿಡ್ಸ್ ನವೀನ್, ಅಂಜಲಿ ಎಂ ಶಶಿಧರ್ ಗುಜ್ಜರ್, ಹಾಗೂ ಮುಂತಾದವರಿದ್ದರು.

Categories
ತೀರ್ಥಹಳ್ಳಿ

3ನೇ ಬಾರಿಗೆ ಮತ್ತೆ ಮುಳುಗಿದ ರಾಮ ಮಂಟಪ!

3ನೇ ಬಾರಿಗೆ ಮತ್ತೆ ಮುಳುಗಿದ ರಾಮ ಮಂಟಪ!

– ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಎಲ್ಲೆಡೆ ನೆರೆ
– ಅಪಾರ ನಷ್ಟ: ಮಳೆಗೆ ಹೆದರಿ ಮನೆ ಸೇರಿದ ಜನ

NAMMUR EXPRES NEWS

ತೀರ್ಥಹಳ್ಳಿ/ ಶೃಂಗೇರಿ: ತೀರ್ಥಹಳ್ಳಿಯಲ್ಲಿ ತುಂಗಾ ನದಿ ಮೂರನೇ ಬಾರಿ ಮುಳುಗಡೆ ಆಗಿದೆ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆ ಕಾರಣ ಮಂಗಳವಾರ ಬೆಳಗ್ಗೆ ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗಡೆ ಆಗಿದೆ.ಶೃಂಗೇರಿ ಮತ್ತು ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿದ್ದು ತುಂಗಾ ನದಿ ನೀರಿನ ಹರಿವು ಹೆಚ್ಚಾಗಿದೆ. ಈಗಾಗಲೇ ಎಲ್ಲೆಡೆ ಆಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಶೃಂಗೇರಿಯಲ್ಲಿ ಮುಳುಗಡೆ

ಶೃಂಗೇರಿಯಲ್ಲಿ ಕೂಡ ಮಳೆ ನೀರು ಹೆಚ್ಚಾಗಿ ತುಂಗಾ ಪ್ರವಾಹ ಮಟ್ಟದಲ್ಲಿ ಹರಿಯುತ್ತಿದೆ. ದೇವಸ್ಥಾನ ಸೇರಿ ಪಟ್ಟಣದ ಅನೇಕ ಭಾಗಗಳು ಮುಳುಗಡೆ ಆಗಿದೆ.

Categories
ರಾಜ್ಯ

ಕಿಮ್ಮನೆಗೆ ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್

ಕಿಮ್ಮನೆಗೆ ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್

– ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಶಸ್ತಿ
-ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕ ಕಿಮ್ಮನೆ ರತ್ನಾಕರ್

NAMMUR EXPRESS NEWS

ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2024-25 ಸಾಲಿನ ಕರುನಾಡಿನ ಸಾಧಕರಿಗೆ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024 ಮಾಜಿ ಸಚಿವ, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ಲಭಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರಿಗೆ ಅಹ್ವಾನವನ್ನು ಸಂಸ್ಥೆ ಕೋರಿದೆ. ನಾಡಿನ ರಾಜಕೀಯ ಕ್ಷೇತ್ರದಲ್ಲಿನ ನಿಮ್ಮ ಸಾಧನೆಯನ್ನು ಗುರುತಿಸಿ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024” ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು. ಆಗಸ್ಟ್ 09-2024 ರಂದು ಮಲೇಷ್ಯಾದಲ್ಲಿ ನಡೆಯಲಿದೆ. ತಾವು ದಯವಿಟ್ಟು ಈ ಪುರಸ್ಕಾರವನ್ನು ಸ್ವೀಕರಿಸಲು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಹಾಗೂ ಆಗಸ್ಟ್ 07 ರಿಂದ ಆಗಸ್ಟ್ 11ವರೆಗೆ ನಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸಬೇಕೆಂದು ಸಂಸ್ಥೆ ಪತ್ರದಲ್ಲಿ ತಿಳಿಸಿದೆ. ನಿಮ್ಮ ಸೇವೆ ಸದಾಕಾಲ ನಮ್ಮ ರಾಜ್ಯಕ್ಕೆ ದೂರಕಲಿ, ನಿಮ್ಮ ಕೀರ್ತಿಗೌರವಗಳು ಹೀಗೇ ಎತ್ತರೆತ್ತರಕ್ಕೆ ಬೆಳೆಯುತ್ತಿರಲಿ ಎಂದು ಸಂಸ್ಥೆ ತನ್ನ ಅಹ್ವಾನ ಪತ್ರಿಕೆಯಲ್ಲಿ ತಿಳಿಸಿದೆ.

ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿ!

ಕಿಮ್ಮನೆ ರತ್ನಾಕರ್ ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕರು. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು. ತಮ್ಮ ಸೇವೆ, ಪ್ರಾಮಾಣಿಕ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿ. ಈಗ ಈ ಹಿಂದೆ ಅವರಿಗೆ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರಶಸ್ತಿ ಲಭಿಸಿದ್ದವು. ಇದೀಗ ನಾಡಿನ ಹೆಮ್ಮೆಯ ಮಾಧ್ಯಮ ಸಂಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ತನ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಪತ್ನಿ ಅನಾರೋಗ್ಯ: ಬೆಂಗಳೂರಲ್ಲಿ ಕಿಮ್ಮನೆ

ಪತ್ನಿ ಅನಾರೋಗ್ಯ ಕಾರಣ ಬೆಂಗಳೂರಲ್ಲಿರುವ ಕಿಮ್ಮನೆ ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಮ್ಮೂರ್ ಎಕ್ಸ್ ಪ್ರೆಸ್ ಪ್ರತಿನಿಧಿ ಸಂಪರ್ಕ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

Categories
ಉಡುಪಿ

ಕರ್ನಾಟಕದ ಬಿಜೆಪಿ ಸಂಸದರಿಗೆ ಕೋಟಾ ಲೀಡರ್!

ಕರ್ನಾಟಕದ ಬಿಜೆಪಿ ಸಂಸದರಿಗೆ ಕೋಟಾ ಲೀಡರ್!

– ಸಂಸದೀಯ ಮಂಡಳಿ ಸಂಸತ್ತಿಗೆ 16 ಮುಖ್ಯಸಚೇತಕರಲ್ಲಿ ಕೋಟಾ ಒಬ್ಬರು
– ಉಡುಪಿ ಚಿಕ್ಕಮಗಳೂರು ನಾಯಕರ ಶುಭಾಶಯ

NAMMUR EXPRESS NEWS

ಉಡುಪಿ/ಚಿಕ್ಕಮಗಳೂರು: ಕರ್ನಾಟಕದ ಬಿಜೆಪಿ ಸಂಸದರ ನಾಯಕತ್ವವನ್ನು ಸಿಂಪಲ್ ನಾಯಕ ಚಿಕ್ಕಮಗಳೂರು ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ವಹಿಸಲಿದ್ದಾರೆ.ಭಾರತೀಯ ಜನತಾ ಪಾರ್ಟಿ ಹೈಕಮಾಂಡ್‌ನಿಂದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮಹತ್ವದ ಜವಾಬ್ದಾರಿ ಘೋಷಣೆ ಮಾಡಿದೆ. ಬಿಜೆಪಿ ತನ್ನ ಸಂಸದೀಯ ಮಂಡಳಿಯ ಸಂಸತ್ತಿಗೆ 16 ಮುಖ್ಯಸಚೇತಕರನ್ನ ಘೋಷಿಸಿದ್ದು ಕರ್ನಾಟಕ ರಾಜ್ಯಕ್ಕೆ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ನಿಯೋಜಿಸಿದೆ.

ಈ ಬಗ್ಗೆ ಅಧಿಕೃತ ಆದೇಶವನ್ನು ಬಿಜೆಪಿ ಸಂಸದೀಯ ಮಂಡಳಿ ಕಾರ್ಯದರ್ಶಿಯಾದ ಡಾ.ಶಿವಶಕ್ತಿನಾಥ ಬಾಕ್ಸಿ ಯವರು ಘೋಷಿಸಿದ್ದಾರೆ. ಒಟ್ಟು 16 ಸಂಸದರನ್ನು ಲೋಕಸಭೆಯ ಮುಖ್ಯಸಚೇತಕರನ್ನಾಗಿ ನೇಮಿಸಲಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರ ಆಯ್ಕೆಗೆ ಕರ್ನಾಟಕದ ಎಲ್ಲಾ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದು ಪ್ರಮಾಣಿಕತೆ ಮತ್ತು ಹಿರಿತನಕ್ಕೆ ಪಕ್ಷ ನೀಡಿದ ಗೌರವ ಇದಾಗಿದೆ ಎಂದಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೋಟಾ ಶ್ರೀನಿವಾಸ ಪೂಜಾರಿಯವರು ಈ ಜವಾಬ್ದಾರಿ ನೀಡಿದ ಪಕ್ಷದ ವರಿಷ್ಠರಿಗೆ ಧನ್ಯವಾದ ತಿಳಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಸೇರಿ ಎಲ್ಲೆಡೆ ಕಾರ್ಯಕರ್ತರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

 

Categories
ಕರಾವಳಿ

ಕರಾವಳಿ ನ್ಯೂಸ್

ಕರಾವಳಿ ನ್ಯೂಸ್

ಮಂಗಳೂರಲ್ಲಿ ಶಾಲೆ ಶೀಟ್ ಹಾರಿ ಹೋಯಿತು!
– ಮಕ್ಕಳಿಲ್ಲದ ಕಾರಣ ತಪ್ಪಿದ ದುರಂತ: ಶಾಲೆಗಳೇ ಹುಷಾರ್

– ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ
– ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಮನೆ ಹಾನಿ
– ಬೆಳ್ತಂಗಡಿ, ಚಾರ್ಮಾಡಿ ಘಾಟ್ ಮರ ಬಿದ್ದು ಸಂಚಾರ ಅಡಚಣೆ

NAMMUR EXPRESS NEWS

ಮಂಗಳೂರು: ಕಳೆದ ಎರಡು ದಿನಗಳಿಂದ ಹೆಚ್ಚಾಗಿರುವ ಮಳೆ ಕರಾವಳಿಯಲ್ಲಿ ಮತ್ತಷ್ಟು ಹಾನಿ ಮಾಡುತ್ತಿದೆ. ಈ ನಡುವೆ ಮಂಗಳೂರು ಕೊಟ್ಟಾರ ಸಮೃದ್ಧಿ ಇಂಟೆರ್ ನ್ಯಾಷನಲ್ ಶಾಲೆಯ ಶೀಟುಗಳು ಭಾರೀ ಗಾಳಿ ಮಳೆಗೆ ಹಾರಿ ಹೋಗಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ದುರಂತ ತಪ್ಪಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಶಾಲೆ ಆಡಳಿತ ಮಂಡಳಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿಯಿಂದ ನಿರಂತರ
ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತಿದ್ದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ.ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಿಗೂ ತಹಶೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ. ಭಾರೀ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿಯುತಿದ್ದು ನೀರು ಪಜಿರಡ್ಕ ದೇವಸ್ಥಾನದ ಅವರಣಕ್ಕೆ ನುಗ್ಗುತ್ತಿದೆ,ಯಾವುದೇ ರೀತಿಯ ಪೃಕೃತಿ ವಿಕೋಪ ನೀರಿನಿಂದ ಅಪಾಯ ಎಲ್ಲಿಯೂ ಸಂಭವಿಸದಿರಲಿ ಎಂದು ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಲಾಗಿದೆ.

ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಮನೆ ಹಾನಿ

ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಅವರ ಮನೆಯ ಹಿಂಭಾಗಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಬೆಂಕಿ ಮನೆಗೆ ಆವರಿಸಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಹಾನಿಗೊಂಡ ಮನೆಯಲ್ಲಿ ನಾಲ್ವರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದರ ಭೇಟಿಗೆ ತೆರಳಿದ್ದರು. ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ. ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗಲಿ ಅನಂತರ ಮನೆಯಲ್ಲಿದ್ದ ಪುಸ್ತಕ, ರಬ್ಬರ್‌ಗೆ ಹೊತ್ತಿದ್ದು, ಎಲ್ಲವೂ ಭಸ್ಮವಾಗಿದೆ.

ಚಾರ್ಮಾಡಿ ಘಾಟ್ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ

ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆಯಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಮಲವಂತಿಗೆ ದಿಡುಪೆ,ಕಿಲ್ಲೂರು, ಭಾಗಗಳಲ್ಲಿ ರಾತ್ರಿ ಭಾರೀ ಮಳೆ ಸುರಿದಿದ್ದು ಸೋಮವತಿ, ಮೃತ್ಯುಂಜಯ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜನರ ಆತಂಕಕ್ಕೆ ಕಾರಣವಾಗಿತ್ತು. ಇವತ್ತು ಕೂಡ ಮಳೆ ಹೆಚ್ಚಾಗಿದ್ದು ನದಿ, ತೊರೆಗಳಲ್ಲಿ ನೀರು ಹೆಚ್ಚಾಗುವ ಸಂಭವ ಇದೆ.ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಬ್ಲಾಕ್ ಆಗಿದ್ದು, ಮರ ತೆರವು ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Categories
ಬೆಂಗಳೂರು

ಮದ್ಯಪ್ರಿಯರಿಗೆ ಮತ್ತೆ ಶಾಕ್.!

ಮದ್ಯಪ್ರಿಯರಿಗೆ ಮತ್ತೆ ಶಾಕ್…!
– ಬಿಯರ್ ಪ್ರತಿ ಬಾಟಲ್ ಗೆ 5-20 ರೂ. ಹೆಚ್ಚಳ
– ಒಂದೂವರೆ ವರ್ಷದಲ್ಲಿ 5ನೇ ಬಾರಿ ಬೆಲೆ ಏರಿಕೆ ಬರೆ

NAMMUR EXPRESS NEWS
ಬೆಂಗಳೂರು: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ ಬಾರಿಗೆ ಬಿಯ‌ರ್ ದರ ಹೆಚ್ಚಳವಾಗಿದೆ. ಪ್ರತಿ ಬಾಟಲ್ ಗೆ 5 -20 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.
ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಯಾಗಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಲಿದೆ. ಸರ್ಕಾರ ಬಿಯರ್‌ ಮೇಲಿನ ತೆರಿಗೆಯನ್ನು ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಪ್ರತಿ ಬಾಟಲ್ ಬಿಯರ್ ಬೆಲೆ ಕನಿಷ್ಠ 10 ರೂಪಾಯಿ ಜಾಸ್ತಿಯಾಗಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಕಚ್ಚಾ ಸಾಮಗ್ರಿ ದರ ಹೆಚ್ಚಳ ಕಾರಣ ನೀಡಿ ಪ್ರತಿ ಬಿಯರ್ ಬಾಟಲ್ ಮೇಲೆ ಕನಿಷ್ಠ 5 ರಿಂದ 20 ರೂಪಾಯಿ ಹೆಚ್ಚಳಕ್ಕೆ ತೀರ್ಮಾನಿಸಿವೆ. ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಾಗುವ ಲೆಜೆಂಡ್, ಆರ್ಸಿ ಸ್ಟ್ಯಾಂಗ್, ನಾಕೌಟ್, ಬುಲೆಟ್, ಪವರ್ ಕೂಲ್ ಸೇರಿ ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಏರಿಕೆಯಾಗಲಿದೆ ಎನ್ನಲಾಗಿದೆ.

Categories
ರಾಜ್ಯ

ಮಲೆನಾಡು, ಕರಾವಳಿ ಅಡಿಕೆಗೆ ಈಗ ಆಮದು ಭೂತ!

ಮಲೆನಾಡು, ಕರಾವಳಿ ಅಡಿಕೆಗೆ ಈಗ ಆಮದು ಭೂತ!

– 3 ತಿಂಗಳಲ್ಲಿ 3009 ಟನ್ ವಿದೇಶಿ ಅಡಿಕೆ ಅಕ್ರಮ ಆಮದು!?
– ಅಕ್ರಮ ಅಡಿಕೆ ಆಮದಿಗೆ ಸಂಸದರ ಮೌನವೇಕೆ?
– ಕರ್ನಾಟಕ ಸೇರಿ ಭಾರತದ ರೈತರಿಗೆ ಆತಂಕ
– ಡಾ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ

NAMMUR EXPRESS NEWS

ಬೆಂಗಳೂರು: ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದ ರೈತರ ಉಸಿರು, ವಾಣಿಜ್ಯ ಬೆನ್ನೆಲುಬು ಆಗಿರುವ ಅಡಿಕೆ ಇದೀಗ ವಿದೇಶಿ ಅಡಿಕೆ ಆಮದು ಕಾರಣ ಆತಂಕದಲ್ಲಿದೆ.ಕರ್ನಾಟಕ ಸೇರಿ ಭಾರತದ ಪ್ರಮುಖ ಬೆಳೆ ಅಡಿಕೆ. ಭಾರತದಲ್ಲಿ ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್‌ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ನಡೆಯುತ್ತಿದೆ. ಡ್ರೈ ಫೂಟ್ಸ್ ಹೆಸರಲ್ಲಿ ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು?.

84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್‌ಗಳು!

ಅಂದರೆ, 30,09,000 ಕೆ.ಜಿ ಸರಾಸರಿ ಪ್ರತೀ ಕೆಜಿ ಅಡಿಕೆಗೆ ಈ 400 ಎಂದು ಪರಿಗಣಿಸಿದರೆ, ಈ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ.

ಯಾವ ವರ್ಷ ಎಷ್ಟು ಅಡಿಕೆ ಬಂದಿದೆ?

2020-21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್‌ ವಶಪಡಿಸಿಕೊಂಡಿದ್ದರೆ, 2021-22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್ ವಶಪಡಿಸಿಕೊಳ್ಳಲಾಗಿದೆ. 2022-23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್‌ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023-24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ್‌ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ. ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ ಎಂಬ ಅಗ್ರಹ ವ್ಯಕ್ತವಾಗಿದೆ.