Categories
ಜ್ಯೋತಿಷ್ಯ

ನಾಗರ ಪಂಚಮಿ ದಿನ ರಾಶಿ ಭವಿಷ್ಯ ಹೇಗಿದೆ?

ನಾಗರ ಪಂಚಮಿ ದಿನ ರಾಶಿ ಭವಿಷ್ಯ ಹೇಗಿದೆ?
– ನಾಗದೇವನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು?

** ಮೇಷ ರಾಶಿ:
ಇಂದು ತುಂಬಾ ಶುಭ ದಿನವಾಗಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೋಪ ಮತ್ತು ವಾದಗಳನ್ನು ನಿಯಂತ್ರಿಸಿ, ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಇಂದು, ನೀವು ಹೆಚ್ಚು ಕೆಲಸ ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳಿರುವುದಿಲ್ಲ.

** ವೃಷಭ ರಾಶಿ :
ನಿಮಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ, ನಿಮ್ಮ ಪ್ರೇಮ ಜೀವನ ಇಂದು ಸಂತೋಷವಾಗಿರುತ್ತದೆ.

** ಮಿಥುನ ರಾಶಿ :
ನಿಮಗೆ ವ್ಯಾಪಾರದಲ್ಲಿ ಲಾಭವಾಗಬಹುದು. ಹಣ ಬರುವ ಸಾಧ್ಯತೆಗಳಿವೆ. ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ಮಾನಸಿಕ ಸಂತೋಷವನ್ನು ಪಡೆದುಕೊಳ್ಳುವಿರಿ. ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಇಂದು, ಪ್ರೇಮ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

** ಕರ್ಕಾಟಕ ರಾಶಿ :
ನಿಮಗೆ ಬಹಳ ವಿಶೇಷವಾದ ದಿನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿರಬಹುದು. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ, ನೀವು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು.

** ಸಿಂಹ ರಾಶಿ :
ನಿಮಗೆ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧದಲ್ಲಿ ಅಸಮಾಧಾನವಿರಬಹುದು ಆದರೆ ನೀವು ಅದನ್ನು ತಾಳ್ಮೆಯಿಂದ ಜಯಿಸಬೇಕು. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ನಿಮ್ಮ ನಾಯಕತ್ವದ ಗುಣವನ್ನು ಕೆಲಸದ ಸ್ಥಳದಲ್ಲಿ ಪ್ರಶಂಸಿಸಲಾಗುತ್ತದೆ. ಹಾಗಾಗಿ ಇಂದು, ಹೊಸ ಯೋಜನೆಯ ಜವಾಬ್ದಾರಿಯಿಂದ ಹಿಂದೆ ಸರಿಯಬೇಡಿ.

** ಕನ್ಯಾ ರಾಶಿ :
ನಿಮ್ಮ ಪ್ರೇಮ ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಆದರೆ ಇಂದು, ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

** ತುಲಾ ರಾಶಿ :
ನಿಮ್ಮಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ. ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.

** ವೃಶ್ಚಿಕ ರಾಶಿ :
ನಿಮಗೆ ಸಾಮಾನ್ಯ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅಗತ್ಯವಿದ್ದರೆ ಮಾತ್ರ ಹಣ ಖರ್ಚು ಮಾಡಿ. ಕಷ್ಟದ ಸಮಯವನ್ನು ಎದುರಿಸಲು ಹಣವನ್ನು ಉಳಿಸಲು ಮರೆಯದಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

** ಧನಸ್ಸು ರಾಶಿ :
ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಅತಿಯಾದ ಕೋಪವನ್ನು ತಪ್ಪಿಸಿ. ಇಂದು, ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ.

** ಮಕರ ರಾಶಿ:
ಹಣದ ಒಳಹರಿವು ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು, ಆದರೆ ಪರಿಸ್ಥಿತಿಗಳು ಶೀಘ್ರದಲ್ಲೇ ಸಾಮಾನ್ಯವಾಗಬಹುದು. ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವತ್ತ ಗಮನ ಹರಿಸಬೇಕು. ಕೆಲವು ಹೊಸ ಯೋಜನೆಗಳಿಗೆ ಹೆಚ್ಚಿನ ಗಮನ ಬೇಕಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು.

** ಕುಂಭ ರಾಶಿ :
ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸುತ್ತಾರೆ. ಇಂದು ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹಣದ ಒಳಹರಿವಿಗಾಗಿ ಹೊಸ ಮಾರ್ಗಗಳು ಸುಗಮವಾಗುತ್ತವೆ. ಆದರೆ ವಾಹನದ ನಿರ್ವಹಣೆಗೆ ಹಣವನ್ನು ಖರ್ಚು ಮಾಡಬೇಕಾಗಬಹುದು.

** ಮೀನ ರಾಶಿ :
ನೀವು ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ನಿಮ್ಮ ಮನಸ್ಸು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಿರಿ.

Categories
ತೀರ್ಥಹಳ್ಳಿ

ನೂರಾರು ಮಂದಿಗೆ ಉದ್ಯೋಗ ಕೊಡುತ್ತಿರುವ ಸಂಸ್ಥೆಗೆ ರಸ್ತೆ ಇಲ್ಲ!

ನೂರಾರು ಮಂದಿಗೆ ಉದ್ಯೋಗ ಕೊಡುತ್ತಿರುವ ಸಂಸ್ಥೆಗೆ ರಸ್ತೆ ಇಲ್ಲ!
– ತೀರ್ಥಹಳ್ಳಿಯ ಮೇಳಿಗೆ ಗ್ರಾಮದ ಕುಂಟುವಳ್ಳಿ ವಿ ಟೆಕ್ ಸಂಸ್ಥೆಗೆ ಹೋಗುವ ರಸ್ತೆ ಅವ್ಯವಸ್ಥೆ
– ಗ್ರಾಮೀಣ ಉದ್ಯಮಕ್ಕೆ ಬೇಕು ಮೂಲಭೂತ ಸೌಲಭ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ರಸ್ತೆ ಅವ್ಯವಸ್ಥೆ ಇದೀಗ ಭಾರೀ ಚರ್ಚೆ ಆಗುತ್ತಿರುವ ನಡುವೆಯೇ ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು, ಮಲೆನಾಡ ರೈತರಿಗೆ ವರವಾಗಿರುವ ತೀರ್ಥಹಳ್ಳಿಯ ಹೆಮ್ಮೆಯ ಗ್ರಾಮೀಣ ಕೈಗಾರಿಕೆ, ವಿ ಟೆಕ್ ಇಂಜಿನಿಯರ್ಸ್ ಕುಂಟವಳ್ಳಿಗೆ ಒಂದು ಸಮರ್ಪಕ ರಸ್ತೆ ಆಗದಿರುವುದು ಇದೀಗ ರೈತರ ಹಾಗೂ ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ವಿಶ್ವನಾಥ್ ಅವರ ಮಾಲೀಕತ್ವದ ವಿ ಟೆಕ್ ಸಂಸ್ಥೆಗೆ ಸರಿಯಾದ ರಸ್ತೆ ಇಲ್ಲ. ಈ ಬಗ್ಗೆ ಅಲ್ಲಿನ ಸ್ಥಳೀಯರು ದನಿ ಎತ್ತಿದ್ದಾರೆ.
ನೂರಾರು ಸ್ಥಳೀಯ ಜನರಿಗೆ ಉದ್ಯೋಗವನ್ನು ಕಲ್ಪಿಸಿರುವ ಮತ್ತು ಸಾವಿರಾರು ರೈತರು ನಂಬಿರುವ ಹೆಮ್ಮೆಯ ಸಂಸ್ಥೆಗೆ ಹೋಗುವ ದಾರಿ ಸರಿ ಇಲ್ಲದೆ ವಾಹನ ಓಡಾಟ ಕೂಡ ಕಷ್ಟವಾಗಿದೆ. ಪ್ರತಿ ದಿನ ನೂರಾರು ರೈತರು ಇಲ್ಲೇ ಓಡಾಡಬೇಕು. ಜತೆಗೆ ಹತ್ತಾರು ಮನೆಗಳು ಕೂಡ ಇಲ್ಲಿವೆ.

ಗ್ರಾಮೀಣ ಉದ್ಯಮಕ್ಕೆ ಸರ್ಕಾರದ ಸಾಥ್ ಇಲ್ಲ!

ಹಳ್ಳಿಯಲ್ಲಿ ಕೈಗಾರಿಕೆ ಕಟ್ಟೋದು ಸುಲಭದ ಮಾತಲ್ಲ. ಆದರೂ ಹಳ್ಳಿಯಲ್ಲೇ ಕಟ್ಟಬೇಕು. ಇಲ್ಲಿನ ಜನರಿಗೆ ಉದ್ಯೋಗ ಕೊಡಬೇಕು ಎಂಬುದು ವಿಶ್ವನಾಥ್ ಹೆಬ್ಬಯಕೆ. ಆದರೆ ಸರ್ಕಾರ ಮತ್ತು ಆಡಳಿತಗಳು ಉದ್ಯಮಕ್ಕೆ ಸಹಕಾರ ಮಾಡಿರುವುದು, ಮೂಲಭೂತ ಸೌಲಭ್ಯ ಒದಗಿಸದೇ ಇರುವುದು ದುರಂತವೇ ಸರಿ.

ನೂರಾರು ಮಂದಿಗೆ ಉದ್ಯೋಗ: ಮಲೆನಾಡಿನ ಅನ್ನದಾತ

ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಇನ್ನೇನು ಕೃಷಿಯಿಂದ ವಿಮುಖವಾಗುತ್ತಿರುವ ಕಾಲ ಘಟ್ಟದಲ್ಲಿ ಅಡಿಕೆ ಸುಲಿಯುವ ಯಂತ್ರ, ವಿವಿಧ ಯಂತ್ರ ಕಂಡು ಹಿಡಿದು ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರ ಪಾಲಿಗೆ ಆಶಾಕಿರಣವಾಗಿರುವ ವಿಶ್ವನಾಥ್ ಈಗಾಗಲೇ ತಮ್ಮ ಒಂದು ಯುನಿಟ್ ಅನ್ನು ಈ ಎಲ್ಲಾ ಸಮಸ್ಯೆ ಕಾರಣ ಶಿವಮೊಗ್ಗದ ಮಾಚೆನಹಳ್ಳಿಗೆ ಶಿಫ್ಟ್ ಮಾಡಿದ್ದಾರೆ. ನೂರಾರು ಮಂದಿಗೆ ಉದ್ಯೋಗ ಕೊಡುವ ಇಬ್ಬನಿ ಫುಡ್ಸ್ ಮತ್ತು ಇತರೆ ಸಂಸ್ಥೆಗಳು ಇಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ರಸ್ತೆ ಅವ್ಯವಸ್ಥೆ ಇಂದ ಇಲ್ಲಿಗೆ ವಾಹನಗಳು ಓಡಾಡಲು ಕಷ್ಟ ಆಗಿದೆ. ಇನ್ನಾದ್ರೂ ಜಿಲ್ಲಾಡಳಿತ ಗಮನ ಹರಿಸುವುದೇ ಕಾದು ನೋಡಬೇಕಿದೆ.

Categories
ಬೆಂಗಳೂರು

ಮದುವೆ ಮಾರನೇ ದಿನವೇ ಹೊಡೆದಾಡಿಕೊಂಡ ನವಜೋಡಿ: ಇಬ್ಬರೂ ಸಾವು!

ಮದುವೆ ಮಾರನೇ ದಿನವೇ ಹೊಡೆದಾಡಿಕೊಂಡ ನವಜೋಡಿ: ಇಬ್ಬರೂ ಸಾವು!
– ಕೋಲಾರದ ಕೆಜಿಎಫ್ ಎಂಬಲ್ಲಿ ನಡೆದ ವಿಚಿತ್ರ ಘಟನೆ
– ಪ್ರೀತಿ ಮಾಡಿ ಮದುವೆಯಾದ್ರು… ಹುಚ್ಚಾಟಕ್ಕೆ ಬಲಿ ಆದ್ರು..!

NAMMUR EXPRESS NEWS
ಕೋಲಾರ : ಕೋಲಾರದಲ್ಲಿ ಮದುವೆಯಾಗಿ ಮೊದಲ ರಾತ್ರಿ ಮುನ್ನವೇ ಹೊಡೆದಾಡಿಕೊಂಡಿದ್ದ ನವಜೋಡಿ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ವರ ನವೀನ್ ಕೂಡ ಚಿಕಿತ್ಸೆ ಫಲಿಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ನವಜೋಡಿ ಮಚ್ಚಿನಿಂದ ಹೊಡೆದಾಡಿಕೊಂಡು ಬುಧವಾರ ನವವಧು ಸಾವನ್ನಪ್ಪಿ, ವರ ಕೂಡ ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ವಧು ಲಿಖಿತ ಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ಕೆಲ ಗಂಟೆಗಳ ನಂತರ ವಧು, ವರರು ಮನೆಯ ಕೊಠಡಿಗೆ ಹೋಗಿದ್ದಾರೆ. ಕೊಠಡಿ ಹೋದ ಕೆಲ ಹೊತ್ತಿಗೆ ನವೀನ್ ಹಾಗೂ ಲಿಖಿತ ಹೊಡೆದಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೆಜಿಎಫ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಖಿತ ಸಾವನ್ನಪ್ಪಿದ್ದರು. ನವೀನ್ ಕೂಡ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

Categories
ಕರಾವಳಿ

ಮಂಗಳೂರಿನಲ್ಲಿ ರಾತ್ರೋರಾತ್ರಿ ಉದ್ಯಮಿ ಕಿಡ್ನಾಪ್!

ಮಂಗಳೂರಿನಲ್ಲಿ ರಾತ್ರೋರಾತ್ರಿ ಉದ್ಯಮಿ ಕಿಡ್ನಾಪ್!
– 10 ಲಕ್ಷ ಹಣಕ್ಕೆ ಬೇಡಿಕೆ: ಕಾರಿನಲ್ಲಿ ಬಂದ ಗ್ಯಾಂಗ್‌’ನಿಂದ ಕೃತ್ಯ
– ಮಂಗಳೂರನ್ನು ಬೆಚ್ಚಿ ಬೀಳಿಸಿದೆ ಈ ಕೇಸ್!

NAMMUR EXPRESS NEWS
ಮಂಗಳೂರು : ಮಂಗಳೂರಿಗೆ ವ್ಯವಹಾರ ನಿಮಿತ್ತ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸಕ್ಕಾಗಿ ಕೇರಳದಿಂದ ಬಂದಿದ್ದ ಶರತ್ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳವಾರ ರಾತ್ರಿ ನಗರದ ಪಿವಿಎಸ್ ಬಳಿ ಬಸ್ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ಶರತ್‌ ಅವರನ್ನು ಬಲವಂತವಾಗಿ ಕಾರಿಗೆ ಹಾಕಿ ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಆತನ ಮನೆಯಯವರಿಗೆ ಫೋನ್ ಮಾಡಿ 10 ಲಕ್ಷ ರೂಪಾಯಿಗಳ ಡಿಮಾಂಡ್‌ ಇಟ್ಟಿದ್ದಾರೆ.
10 ಲಕ್ಷ ಕೊಟ್ಟರೆ ಆತನನ್ನು ಬಿಡುಗಡೆ ಮಾಡುವುದಾಗಿ ಅವಾಜ್ ಹಾಕಿದ್ದಾರೆ. ಶರತ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿ ಸಿಸಿ టివి ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ತನಿಖೆ ಕೈಗೊಂಡಿದ್ದಾರೆ.ಸದ್ಯ ಈ ಪ್ರಕರಣ ಸಂಚಲನ ಮೂಡಿಸಿದೆ. ಹಲವು ಸಮಯಗಳಿಂದ ಕಳ್ಳತನ ಪ್ರಕರಣಗಳು ಮಂಗಳೂರು ನಗರದಾದ್ಯಂತ ನಡೆದು ಜನರನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಕಿಡ್ನಾಪ್ ಪ್ರಕರಣ ತಲ್ಲಣ ಮೂಡಿಸಿದೆ. ಸದ್ಯ ಅಪಹರಣಕಾರರು 10 ಲಕ್ಷಕ್ಕೆ ಬೇಡಿಕೆಯಿಟ್ಟಿರುವುದು ಅಷ್ಟೇ ತಿಳಿದುಬಂದಿದೆ. ಇನ್ನೂ ಇದರ ಹಿಂದೆ ಯಾರಿದ್ದಾರೆ.? ಯಾವುದು ಈ ಹೊಸ ಕಿಡ್ನಾಪ್ ಗ್ಯಾಂಗ್ ಎನ್ನುವುದು ತನಿಖೆ ಬಳಿಕವಷ್ಟೇ ತಿಳಿದುಬರಬೇಕಿದೆ.

Categories
ತೀರ್ಥಹಳ್ಳಿ

600 ವರ್ಷ ಇತಿಹಾಸವಿರುವ ನಾಗರಹಳ್ಳಿ ನಾಗ ದೇಗುಲ!

600 ವರ್ಷ ಇತಿಹಾಸವಿರುವ ನಾಗರಹಳ್ಳಿ ನಾಗ ದೇಗುಲ!
– ನಾಗರ ಪಂಚಮಿ ವಿಶೇಷ ಪೂಜೆ: ಆ. 9,10,ಕ್ಕೆ ಜಾತ್ರೆ
– ನಾಗ ಸಮಸ್ಯೆ ಇದ್ದವರು ಒಮ್ಮೆ ದೇಗುಲಕ್ಕೆ ಭೇಟಿ ನೀಡಿ!

NAMMUR EXPRESS NEWS
ಹೊಸನಗರ/ ತೀರ್ಥಹಳ್ಳಿ: ಸುಮಾರು 600 ವರ್ಷಗಳ ಇತಿಹಾಸ ಇರುವ ನಾಗನ ಮೂಲ ಕ್ಷೇತ್ರ ಅಗಸ್ಯ ಮಹರ್ಷಿಗಳು ಸ್ಥಾಪಿಸಿರುವ ಪವಿತ್ರ ಕ್ಷೇತ್ರ ನಾಗರಹಳ್ಳಿಯಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ.
ಅವಧೂತರ ಪ್ರಕಾರ ಶ್ರೀಮಾನ್ ನಾರಾಯಣನ ಶಯನ ಕ್ಷೇತ್ರ
ಸಂತಾನ ಹಾಗೂ ವಿವಾಹ ಕುರಿತಂತೆ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಂದ ಅನೇಕ ಸೇವೆ ಸ್ವೀಕರಿಸಿ ಬಳಿಕ ಸ್ವಾಮಿ ಶೀಘ್ರ ಅನುಗ್ರಹ ನೀಡುವ ಕ್ಷೇತ್ರವಿದು.ಸರ್ಪ ನಾಶ,ವಲ್ಮಿಕ ನಾಶ,ಸೇರಿದಂತೆ ನಾಗನ ಹಲವು ಭಾಧೆಗಳಿಂದ ಬಳಲುತ್ತಿರುವ ಭಕ್ತರಿಗೆ ಶ್ರೀ ಕ್ಷೇತ್ರದಲ್ಲಿನ ಸ್ವಾಮಿಗೆ ಹಲವು ಬಗೆಯ ಪೂಜೆ ಪುನಸ್ಕಾರ ಸಲ್ಲಿಸುವ ಮೂಲಕ ಭಾದೆಗಳಿಂದ ಮುಕ್ತಿ ದೊರೆಯುವುದು.
ಪ್ರತಿವರ್ಷ ಜನವರಿಯಿಂದ ಜೂನ್ ವರೆಗೂ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಟೆ,ರಾಹು ಕೇತು ಶಾಂತಿ,ಸಂತಾನ ಬಯಸುವ ದಂಪತಿಯಿಂದ ತುಲಾಭಾರ,ವಿವಾಹಕ್ಕಾಗಿ ಪುಷ್ಪಾಲಂಕಾರ,ಸೇರಿದಂತೆ ವಿವಿಧ ಸೇವೆ ಕ್ಷೇತ್ರದಲ್ಲಿ ನಡೆಯುತ್ತದೆ. ಸ್ವಾಮಿಗೆ ನಿತ್ಯ ಪೂಜೆ ಜೊತೆಗೆ ಭಕ್ತರ ಸಮಸ್ಯೆಗಳ ನಿವಾರಣೆಗೆ ಮೂಲ ನಾಗನ ಮೃತ್ತಿಕೆ ಪ್ರಸಾದ ಶ್ರೀ ಕ್ಷೇತ್ರದ ವಿಶೇಷ
ವಾರ್ಷಿಕವಾಗಿ ಶ್ರೀ ಕ್ಷೇತ್ರದಲ್ಲಿ ನಾಗರಪಂಚಮಿ ಮತ್ತು ಕೂಳೆ ಪಂಚಮಿ ದಿನದಂದು 2 ದಿನ ಜಾತ್ರಾ ಮಹೋತ್ಸವ ನಡೆಯುತ್ತದೆ.
ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮೊದಲು ಸ್ಥಾಪಿತವಾದ ಕ್ಷೇತ್ರ ಎಂಬ ಪ್ರತೀತಿ ಈ ಕ್ಷೇತ್ರಕ್ಕೆ ಇದೆ. ಸುಬ್ರಹ್ಮಣ್ಯ ಕ್ಷೇತ್ರದ ಹರಕೆ ಇಲ್ಲಿ ಸಲ್ಲಿಕೆ ಆಗುತ್ತದೆ.ಇಲ್ಲಿನ ಹರಕೆ ಸಲ್ಲಿಸಲು ಭಕ್ತರು ಇದೆ ಕ್ಷೇತ್ರಕ್ಕೆ ಬರಬೇಕು ಎಂಬುದು ಇಲ್ಲಿನ ವಾಡಿಕೆ. ಆಗಸ್ಟ್ 9 ಮತ್ತು 10ನೇ ತಾರೀಕು ಇಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದೆ.ಸರ್ವರನ್ನು ಆಡಳಿತ ಮಂಡಳಿ ಸ್ವಾಗತಿಸಿದೆ.

Categories
ಮಾಹಿತಿ ಸುದ್ದಿ

ಇನ್ಮುಂದೆ ಚೆಕ್ ಕ್ಲಿಯರೆನ್ಸ್ ಸಖತ್ ಫಾಸ್ಟ್!

ಇನ್ಮುಂದೆ ಚೆಕ್ ಕ್ಲಿಯರೆನ್ಸ್ ಸಖತ್ ಫಾಸ್ಟ್!
– ಯಾವುದೇ ಅಕೌಂಟ್ ಆದ್ರೂ ಒಂದೇ ದಿನದಲ್ಲಿ ಹಣ ಸಿಗುತ್ತೆ
– ಆರ್‌ಬಿಐ ಘೋಷಣೆ: ಗ್ರಾಹಕರಿಗೆ ಅನುಕೂಲ
– ನೆಫ್ಟ್ ಹಣದ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ

NAMMUR EXPRESS NEWS
ಇನ್ನು ಮುಂದೆ ಚೆಕ್ ಹಾಕಿ ದಿನಗಟ್ಟಲೆ ಹಣಕ್ಕೆ ಕಾಯುವ ಅಗತ್ಯ ಇಲ್ಲ. ಚೆಕ್ ಕ್ಲಿಯರೆನ್ಸ್ ಅನ್ನು ಕೆಲವೇ ಗಂಟೆಗಳಲ್ಲಿ ತ್ವರಿತಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ತ್ವರಿತ ಚೆಕ್ ಪಾವತಿ ವಿಧಾನವು ಪಾವತಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸ್ತುತ ಚೆಕ್ ಕ್ಲಿಯರೆನ್ಸ್ ಗೆ ಸುಮಾರು ಎರಡು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಬದಲಾವಣೆಯು ಚೆಕ್ ಕ್ಲಿಯರೆನ್ಸ್‌ಗೆ ತೆಗೆದುಕೊಳ್ಳುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗೆಯೇ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ಮತ್ತು ರಿಯಲ್ ಟೈಮ್ ಗ್ರಾಸ್‌ ಸೆಟಲ್‌ಮೆಂಟ್ (RTGS) ನೀಡುವ ಕ್ಷಿಪ್ರ ವರ್ಗಾವಣೆ ವೇಗಕ್ಕೆ ಹತ್ತಿರ ತರಲು ಹೊಂದಿಸಲಾಗಿದೆ.
NEFT ವಹಿವಾಟುಗಳು ವರ್ಷದ 365 ದಿನಗಳು ಲಭ್ಯವಿರುತ್ತವೆ ಮತ್ತು ಯಾವುದೇ ಸಮಯದಲ್ಲಿ ಕೈಗೊಳ್ಳಬಹುದು. NEFT ವಹಿವಾಟುಗಳನ್ನು ಬಳಸಿಕೊಂಡು ಒಂದೇ ದಿನದಲ್ಲಿ ವರ್ಗಾವಣೆ ಮಾಡಬಹುದಾದ ಹಣದ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.

Categories
ಮಾಹಿತಿ ಸುದ್ದಿ

ಸಂಗೀತ ಕೇಳುತ್ತೆ ಈ ದನ!

ಸಂಗೀತ ಕೇಳುತ್ತೆ ಈ ದನ!
– ಯುವತಿಯ ಭಜನೆ ಹಾಡನ್ನು ಕೇಳಿ ಕಣ್ಣೀರು ಹಾಕಿದ ಗೂಳಿ
– ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್

NAMMUR EXPRESS NEWS
ಸಂಗೀತ ಕೇಳಿದರೆ ಕಲ್ಲು ಕೂಡಾ ಕರಗುತ್ತದೆ ಎಂಬ ಮಾತಿದೆ. ಸಂಗೀತದ ಶಕ್ತಿಯೇ ಅಂತಹದ್ದು, ಇದು ಮನಸ್ಸಿಗೆ ತಂಪು ನೀಡಿ, ದುಃಖ ದುಮ್ಮಾನಗಳಿಂದ ಭಾರವಾದ ಮನಸ್ಸನ್ನು ತಿಳಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಪ್ರಾಣಿಗಳು ಕೂಡಾ ಸಂಗೀತಕ್ಕೆ ಮನಸೋಲುತ್ತವೆ. ಇದಕ್ಕೆ ಉತ್ತಮ ನಿದರ್ಶನದಿಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯುವತಿಯ ಭಜನೆ ಹಾಡನ್ನು ಕೇಳಿ ಈಶಾ ಫೌಂಡೇಶನ್‌ ಗೋಶಾಲೆಯಲ್ಲಿರುವ ಬಲಾಢ್ಯ ಗೂಳಿಯಾದ ಭೋಲಾ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ. ಈಶಾ ಫೌಂಡೇಶನ್‌ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಗೋಶಾಲೆಯನ್ನು ಕೂಡಾ ನಡೆಸಲಾಗುತ್ತದೆ. ಈ ಗೋಶಾಲೆಯಲ್ಲಿ 630ಕ್ಕೂ ಹೆಚ್ಚು ಸ್ಥಳೀಯ ತಳಿಯ ಹಸುಗಳು ಮತ್ತು ಗೂಳಿಗಳಿವೆ. ಅವುಗಳಲ್ಲಿ ಭೋಲಾ ಹೆಸರಿನ ವಿಶೇಷ ಗೂಳಿಯೂ ಒಂದು. ಈ ಬಲಾಢ್ಯ ಗೂಳಿಯನ್ನು ನೋಡಲು ಕೂಡಾ ಹಲವಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಗೂಳಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್‌ ಆಗಿದ್ದು, ಯುವತಿಯೊಬ್ಬಳ ಭಜನೆ ಹಾಡನ್ನು ಕೇಳಿ ಈ ಬಲಾಢ್ಯ ಗೂಳಿ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ. ತುಂಬಾನೇ ಆಕ್ರಮಣಕಾರಿ ಸ್ವಭಾವನ್ನು ಹೊಂದಿದ್ದ ಈ ಬಲಾಢ್ಯ ಗೂಳಿಯನ್ನು ಗೋಶಾಲೆಗೆ ತಂದು ಬಿಟ್ಟ ಬಳಿಕ ಸದ್ಗುರುಗಳ ಆರೈಕೆಯಲ್ಲಿ ಇದು ಶಾಂತಿ ಮತ್ತು ತಾಳ್ಮೆಯನ್ನು ಕಲಿಯಿತು. ನಂತರ ಸದ್ಗುರು ಈ ಗೂಳಿಗೆ ʼಭೋಲಾʼ ಎಂಬ ನಾಮಕರಣವನ್ನು ಮಾಡುತ್ತಾರೆ. ಹೀಗೆ ಗೋಶಾಲೆಗೆ ಬಂದ ಭೋಲಾ ನಂತರದಲ್ಲಿ ಎಲ್ಲರೊಂದಿಗೂ ದಯೆ ಮತ್ತು ತಾಳ್ಮೆಯಿಂದ ವರ್ತಿಸಲು ಪ್ರಾರಂಭಿಸಿತು. ಈ ಭೋಲಾನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ʼಭೋಲಾʼ ಗೂಳಿಯ ಮೃದು ಮನಸ್ಸಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್‌ ಆಗುತ್ತಿದೆ.

Categories
ಮಾಹಿತಿ ಸುದ್ದಿ

ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ.. ಹುಷಾರ್!

ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ.. ಹುಷಾರ್!
– ವಯನಾಡು, ಶಿರೂರು, ಕೊಡಗು ಇನ್ನೆಷ್ಟು ಅನಾಹುತ ಬೇಕು?
– ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಟ
– ಮನುಷ್ಯನ ಅತೀ ದುರಾಸೆ ಅಂತ್ಯಕ್ಕೆ ಕಾರಣ ಆಗುತ್ತಾ?

NAMMUR EXPRESS NEWS
ಪ್ರಕೃತಿಯ ಸೌಂದರ್ಯವು ವರವೋ ಶಾಪವೋ ಎನ್ನುವ ಮಾತು ಇದೀಗ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಗ್ರಾಸವಾಗಿದೆ. ಮನುಷ್ಯನಿಗೆ ಏನೂ ಬೇಕೋ ಎಲ್ಲವನ್ನೂ ಪ್ರಕೃತಿ ಮಾತೆ ನೀಡಿದ್ದಾಳೆ. ಆದರೆ ಮನುಷ್ಯ ತನ್ನ ಸ್ವಾರ್ಥ ಹಾಗೂ ದುರಾಸೆಗಾಗಿ ಇಡೀ ನೈಸರ್ಗಿಕ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಡುತ್ತಿರುವ ಈ ಸಂದರ್ಭವೂ ಮನುಷ್ಯನನ್ನೇ ಬಲಿ ಪಡೆಯುತ್ತಾ ಇಡೀ ಮಾನವ ಸಂಕುಲವನ್ನೇ ಅಲುಗಾಡಿಸುತ್ತಿದೆ.
ಬೆಟ್ಟ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು,ಭೂಮಿಯ ಸ್ಥಿರತೆಯನ್ನು ನಾಶ ಮಾಡುತ್ತಾ ಸಂಪೂರ್ಣ ಭೂಮಂಡಲವನ್ನೇ ಕಾಂಕ್ರೇಟ್ ಕಾಡನ್ನಾಗಿ ಪರಿವರ್ತಿಸುತ್ತಿರುವುದರಿಂದ ಪರಿಸರಮಾತೆಯೇ ತನ್ನಲ್ಲಿ ಉಳಿದ ಕೆಲವೇ ಮರಗಳನ್ನು  ಹಿಡಿದಿಟ್ಟುಕೊಳ್ಳುವ ಪ್ರಯತ್ನ ಪಡುತ್ತಿರುವದರ ಹಿನ್ನೆಲೆಯಲ್ಲಿ ಭೂಮಿ ಕುಸಿಯುವ ಮಟ್ಟವನ್ನು ತಲುಪುತ್ತಿದೆ.

ಎಲ್ಲೆಲ್ಲೂ ರಸ್ತೆ ಫ್ಲೈಓವರ್, ಕಾಂಕ್ರೀಟ್ ಕಾಡು ,ಅಪಾರ ಕಟ್ಟಡ ನಿರ್ಮಾಣ ,ರಸ್ತೆ ಮತ್ತು ಫ್ಲೈ ಓವರ್ ಗಳ ನಿರ್ಮಾಣದಿಂದಾಗಿ ನೆಲದ ಸಮತೋಲನತೆ ನಾಶವಾಗುತ್ತಿದ್ದು, ಈ ಭಾಗಗಳಲ್ಲಿ ನೀರಿನ ಪ್ರವಾಹ ನಿಯಂತ್ರಣ ಕಷ್ಟವಾಗುವುದರೊಂದಿಗೆ  ಭೂಮಿಯ ಶಕ್ತಿಯ ಶೋಷಣೆ ಹೆಚ್ಚಾಗುತ್ತಿದೆ. ಹಾಗಾಗಿ ಮನುಷ್ಯನ ಆಸೆಗೆ ಮಿತಿಯೇ ಇಲ್ಲದೆ ಈ ರೀತಿ ಹಸಿರನ್ನು ನಾಶ ಮಾಡುತ್ತಿರುವುದರಿಂದಾಗಿ ಪ್ರಕೃತಿಯು ಕೊಪಗ್ರಸ್ತಳಾಗಿ ಅಟ್ಟಹಾಸ ಮೆರೆದು ಮನುಷ್ಯನ ಸೊಕ್ಕು ಅಹಂಕಾರಕ್ಕೆ ಬರೆ ಎರೆದಿದ್ದಾಳೆ. ಕೇರಳದ ವಯನಾಡು ,ಕರ್ನಾಟಕದ ಉತ್ತರ ಕನ್ನಡದ ಜಿಲ್ಲೆಯ ಸುತ್ತಮುತ್ತದ ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರಾಂತ್ಯ, ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿಗಳು ಸಂಭವಿಸಿವೆ. ಹಲವೆಡೆ ಅದೆಷ್ಟೋ  ಜೀವಗಳು ಬಲಿಯಾಗಿದ್ರೆ  ಮತ್ತೊಂದೆಡೆ ಸಾವು ಬದುಕಿನ ಮದ್ಯೆ ವದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾನವ ಸಂಕುಲದ ತಪ್ಪುಗಳಿಂದ ಕ್ರೋಧಳಾಗಿ ವ್ಯಾಘ್ರ ನರ್ತನದಂತೆ ರುದ್ರಾವತಾರ ತಾಳಿರುವ ಪ್ರಕೃತಿಯ ಮಾತೆಯ ಕೋಪಕ್ಕೆ ಈವರೆಗೂ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದಲ್ಲಿ 380 ಜನ ದುರಂತ ಸಾವಿಗೀಡ್ ಆಗಿದ್ದು ಈವರೆಗೂ 150ಕ್ಕೂ ಹೆಚ್ಚು ಜನರ ಮೃತ ದೇಹವೇ ಸಿಕ್ಕಿಲ್ಲ. ಜೊತೆಗೆ ನೂರಾರು ಕುಟುಂಬಗಳು ಆಶ್ರಯವಿಲ್ಲದೆ ಆಕ್ರಂದಿಸುವುದರ ಜೊತೆಗೆ 1546 ಎಕರೆಯ ರೈತನ ಪಸಲು ಹಾನಿಗೊಳಗಾಗಿದೆ. ಇನ್ನೊಂದಡೆ ಕರ್ನಾಟಕದ ಶಿರೂರಿನಲ್ಲೂ ನಡೆದ ಭೂಕುಸಿತದಲ್ಲಿ 8 ಎಂಟು ಜನರ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಇದರೊಂದಿಗೆ ಶಿರೂರು ಕೊಡಗಿನಿಂದ ಇದುವರೆಗೂ ಹಲವಾರು ಮನೆಗಳು ನೆಲೆಸಮವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಮೇಘ ಸ್ಫೋಟದ ಕಾರಣ ಹಲವಾರು ಕುಟುಂಬಗಳನ್ನ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಮಾನವ ಸಂಕುಲ ಇನ್ನಾದರೂ ಎಚ್ಚೆತ್ತು ಮರ ಗಿಡ ಬೆಳೆಸಿ ಪೋಷಿಸಿದರೆ ಒಳಿತಾಗಬಹುದು ಅದರ ಬದಲಾಗಿ ಸ್ವಾರ್ಥವೇ ನನ್ನ ಜೀವನ ಎಂದು ಬೀಗಿದ್ದಲ್ಲಿ ಪ್ರಕೃತಿ ನೀಡಿದ ಸೂಚನೆ ಇಲ್ಲಿಗೇ ಅಂತ್ಯವಾಗದೇ ಇನ್ನಷ್ಟು ಕೆಟ್ಟ ಪರಿಣಾಮ ಬೀರಲು ಸಾಧ್ಯವಾಗಲಿದೆ. “ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ” ಎಂಬುದುಕ್ಕೆ ಮಾನವನ ದುರಾಸೆಯೇ ಸಾಕ್ಷಿಯಾಗಿದೆ.

Categories
ರಾಜ್ಯ

ಭಾರತ ಒಲಂಪಿಕ್ ಸಾಧನೆ ಸಾಕಾಗಲಿಲ್ಲ!

ಭಾರತ ಒಲಂಪಿಕ್ ಸಾಧನೆ ಸಾಕಾಗಲಿಲ್ಲ!
– ಅಮೇರಿಕ 94, ಚೀನಾ 65, ಆಸ್ಟ್ರೇಲಿಯಾ 42 ಪದಕಗಳೊಂದಿಗೆ ಟಾಪರ್
– ಭಾರತ 3 ಪದಕದೊಂದಿಗೆ ಪಟ್ಟಿಯಲ್ಲಿ 67ನೇ ಸ್ಥಾನ
– ಭರವಸೆ ಮೂಡಿಸಿದ ಕ್ರೀಡಾಪಟುಗಳು ಯಾರು ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಜುಲೈ 26ರಂದು ಆರಂಭವಾಗಿ ಆಗಸ್ಟ್ 11ರ ತನಕ ನಡೆಯುತ್ತಿರುವ ಐತಿಹಾಸಿಕ ಪ್ಯಾರಿಸ್ ಒಲಂಪಿಕ್ಸ್ ರೋಮಾಂಚನಕಾರಿ ಹಂತ ತಲುಪಿದ್ದು, ಒಂದಾದ ಮೇಲೆ ಒಂದರಂತೆ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವ ಭರವಸೆ ಮೂಡಿಸುತ್ತಿದ್ದಾರೆ.
ಪ್ರಸ್ತುತ ಒಲಂಪಿಕ್ಸ್ ನಲ್ಲಿ ಭಾರತದಿಂದ ಒಟ್ಟು 117 ಅಥ್ಲೆಟ್ ಗಳು ಭಾಗವಹಿಸಿದ್ದು, ಇಬ್ಬರು ಕ್ರೀಡಾಪಟುಗಳು ಶೂಟಿಂಗ್ ವಿಭಾಗದಲ್ಲಿ ಮೂರು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಭರವಸೆ ಮೂಡಿಸಿದ ಚೋಪ್ರಾ, ಅವಿನಾಶ್ ಸಾಬ್ಲೆ

ಟೋಕಿಯಾ ಒಲಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪ್ರಸಕ್ತ ಸಾಲಿನಲ್ಲಿಯೂ ಫೈನಲ್ ತಲುಪುವ ಮೂಲಕ ಭಾರತಾಂಬೆಗೆ ಚಿನ್ನದ ಪದಕದ ಮಾಲೆಯನ್ನು ಮುಡಿಗೇರಿಸುವ ವಿಶ್ವಾಸ ಮೂಡಿಸಿದ್ದಾರೆ. ಜೊತೆಗೆ ಪುರುಷರ 3000 ಮೀ ಸ್ಟೀಪಲ್‌ಚೇಸ್‌ನ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ಅವಿನಾಶ್ ಸಾಬ್ಲೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದು,ಅರ್ಹತಾ ಸುತ್ತಿನಲ್ಲಿ ಅದ್ಭುತ ಓಟ ಪ್ರದರ್ಶಿಸಿ, 3 ಸಾವಿರ ಮೀಟರ್‌ (3 ಕಿ.ಮೀ.) ದೂರದ ಸ್ಟೀಪಲ್‌ ಚೇಸ್‌ ಓಟವನ್ನು 8:15.43 ನಿಮಿಷಗಳಲ್ಲಿ ಪೂರೈಸಿದರು. ಈ ಮೂಲಕ ಈಟ್ಸ್‌ನಲ್ಲಿ 5ನೇ ಸ್ಥಾನಿಯಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಆಗಸ್ಟ್‌ 8ರಂದು ಪುರುಷರ 3 ಸಾವಿರ ಮೀ. ಸ್ಟೀಪಲ್‌ ಚೇಸ್‌ ಓಟದ ಫೈನಲ್‌ ಆಯೋಜನೆ ಆಗಲಿದ್ದು, ಅಗ್ರ 3ರ ಒಳಗೆ ಅವಿನಾಶ್‌ ಕಾಣಿಸಿಕೊಂಡರೆ ಭಾರತಕ್ಕೆ ಮತ್ತೊಂದು ಪದಕವು ಅದರ ಜೊತೆಗೆ ಭಾರತದ ಕ್ರೀಡಾ ಜಗತ್ತಿನಲ್ಲಿ ನೂತನ ಇತಿಹಾಸವೊಂದು ರಚನೆಯಾಗಲಿದೆ.

ಭಾರತೀಯರ ಹೃದಯ ಗೆದ್ದ ವಿನೇಶ್ ಫೋಗಟ್‌

ಇನ್ನೊಂದೆಡೆ ಕುಸ್ತಿಯಲ್ಲಿನ 50 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಯುಯಿ ಸುಸಾಕಿ ವಿರುದ್ಧ ಗೆದ್ದು, ಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಭರವಸೆ ಮೂಡಿಸಿದ್ದ ವಿನೇಶ್ ಫೋಗಟ್‌ ಅವರು ಫೈನಲ್ ಪಂದ್ಯದಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಳದ ಕಾರಣದಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದರೂ ಕೂಡ ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಕ್ರಶ್ ಮನು ಬಾಕರ್, ಸರಬ್ಜೋತ್ ಸಿಂಗ್

ಒಲಂಪಿಕ್ ಶೂಟಿಂಗ್ ವಿಭಾಗದಲ್ಲಿ ಭಾರತ ತನ್ನ ಮೂರು ಕಂಚಿನ ಪದಕಗಳನ್ನು ಪಡೆದಿದ್ದರೆ ಅದರಲ್ಲಿ ಮನುಬಾಕರ್ ಅವರೇ 10 ಮೀಟರ್ ಪಿಸ್ತೂಲ್ ಮಹಿಳೆಯರು ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ. ಇವರೊಂದಿಗೆ ಮಿಶ್ರ ಶೂಟಿಂಗ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಅವರು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ 2024ರ ಐತಿಹಾಸಿಕ ಪ್ಯಾರಿಸ್ ಒಲಂಪಿಕ್ ನಲ್ಲಿ 11ನೇ ದಿನದಂದು ಭಾರತ ಮೂರು ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿ ಮುಂದುವರೆದಿದೆ.

ಅಮೇರಿಕಾ ಟಾಪ್: ಟಾಪ್ 5 ದೇಶಗಳು ಯಾವುದು?

ಒಲಂಪಿಕ್ಸ್ ಅಲ್ಲಿ ಅಮೇರಿಕಾದ ಕ್ರಮವಾಗಿ 27 ಚಿನ್ನ, 35 ಬೆಳ್ಳಿ, 32 ಕಂಚು ಪದಕದೊಂದಿಗೆ 94 ಪದಕ ಗೆದ್ದು ಮೊದಲ ಸ್ಥಾನದಲ್ಲಿದೆ.
25, 23,17 ಒಟ್ಟು 65 ಪದಕಗಳೊಂದಿಗೆ ಚೀನಾ ಎರಡನೇ ಸ್ಥಾನ, 18, 13,11 ಒಟ್ಟು 42 ಪದಕಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಬಳಿಕ 51 ಪದಕ ಪಡೆದ ಫ್ರಾನ್ಸ್, 49 ಪದಕ ಪಡೆದ ಬ್ರಿಟನ್ ನಂತರದ ಸ್ಥಾನದಲ್ಲಿವೆ.

Categories
ಚಿಕ್ಕಮಗಳೂರು

ತಂದೆಯಿಂದ ಹಾರೆಯಿಂದ ಹೊಡೆದು ಮಗನ ಕೊಲೆ!

ಚಿಕ್ಕಮಗಳೂರು ಟಾಪ್ 3 ನ್ಯೂಸ್

ತಂದೆಯಿಂದ ಹಾರೆಯಿಂದ ಹೊಡೆದು ಮಗನ ಕೊಲೆ!
– ಮೂಡಿಗೆರೆಯ ಇಂದಿರಾನಗರ ಎಂಬಲ್ಲಿ ಘಟನೆ

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ ಇನ್ನಿಲ್ಲ

ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ವಿರುದ್ಧ ಕಾಫಿನಾಡಲ್ಲಿ ಪ್ರತಿಭಟನೆ

NAMMUR EXPRESS NEWS
ಮೂಡಿಗೆರೆ: ತಂದೆಯೇ ತನ್ನ ಮಗನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ, ತಾಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಎಂಬಲ್ಲಿ ಈ ಘಟನೆ ನಡೆದಿದೆ.
ತಂದೆ ಗೋಪಾಲಗೌಡ ತನ್ನ ಮಗ ಪ್ರಸನ್ನ(38)ಎಂಬುವರನ್ನು ಮಂಗಳವಾರ ರಾತ್ರಿ ಮಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇಂದಿರಾ ನಗರದ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ತಂದೆ ಹಾಗೂ ಮಗ ರಾತ್ರಿ ಪರಸ್ಪರ ಜಗಳ ಮಾಡಿಕೊಂಡಿದ್ದು ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಹಾರೆಯಿಂದ ಮಗನ ತಲೆಗೆ ಹೊಡೆದಿದ್ದು ತೀವ್ರ ಗಾಯಗೊಂಡ ಮಗ ಪ್ರಸನ್ನ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಗೋಪಾಲಗೌಡನನ್ನು ಬಂಧಿಸಿದ್ದಾರೆ. ಮೃತ ಪ್ರಸನ್ನ ಗೆ ವಿವಾಹವಾಗಿದ್ದು ಪತ್ನಿ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಕುಡಿತದಿಂದ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ ಇನ್ನಿಲ್ಲ

ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ (57) ಹೃಧಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರು ಮೂಡಿಗೆರೆ ತಾಲೂಕು ಬಣಕಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಒಂದು ಅವಧಿ ಸೇವೆ ಸಲ್ಲಿಸಿದ್ದರು. ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ ಬಣಕಲ್ ಪಟ್ಟಣದಲ್ಲಿ ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕುಸಿದಿದ್ದಾರೆ. ತಕ್ಷಣ ಹತ್ತಿರದ ಕ್ಲಿನಿಕ್‌‌ಗೆ ಕರೆದೊಯ್ದು ಪರೀಕ್ಷಿಸಿದ ನಂತರ ಮೂಡಿಗೆರೆ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಚಿಕ್ಕಮಗಳೂರು ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ನಿಮ್ಹಾನ್ಸ್ ತಲುಪಿದ ತಕ್ಷಣ ಶಾಮಣ್ಣನವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ವಿರುದ್ಧ ಕಾಫಿನಾಡಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ನಗರದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆ ವಿರುದ್ಧ ಅಹಿಂದ ಸಂಘಟನೆಗಳ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು. ತಾಲೂಕು ಕಛೇರಿಯಿಂದ ಆಜಾದ್ ಪಾರ್ಕ್‌ವರೆಗೆ ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಎಲ್ಲಾ ಅಹಿಂದ ನಾಯಕರು,ಕಾಂಗ್ರೇಸ್ ಶಾಸಕರು ,ನಾಯಕರು ಭಾಗಿಯಾದರು.
ಕೈ ನಾಯಕರಿಂದ ಬಿಜೆಪಿ – ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಆಗಸ್ಟ್ 9 ರಂದು ಮೈಸೂರಿನಲ್ಲಿ ಕಾಂಗ್ರೇಸ್ ನಡೆಸಲಿರುವ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಯಿತು.