Categories
ಚಿಕ್ಕಮಗಳೂರು ಮೈಸೂರು

ಮೈಸೂರು ಚಲೋ ಪಾದಯಾತ್ರೆಯಲ್ಲಿ ಜೀವರಾಜ್

ಮೈಸೂರು ಚಲೋ ಪಾದಯಾತ್ರೆಯಲ್ಲಿ ಜೀವರಾಜ್
– ಸಿದ್ದರಾಮಯ್ಯ ರಾಜೀನಾಮೆಗೆ ಜೀವರಾಜ್ ಪಟ್ಟು
– ಚಿಕ್ಕಮಗಳೂರು ಜಿಲ್ಲೆಯಿಂದ ಸಾವಿರಾರು ಜನ

NAMMUR EXPRESS NEWS
ಎನ್ ಆರ್ ಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಶೃಂಗೇರಿ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್‌ರವರು ಪಾಲ್ಗೊಂಡು ಬಿಜೆಪಿ ಜೆಡಿಎಸ್ ನಾಯಕರೊಡನೆ ಹೆಜ್ಜೆ ಹಾಕಿದ್ದಾರೆ.
ಆಗಸ್ಟ್ 3ರಿಂದ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜೀವರಾಜ್‌ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜತೆ ಮಾತನಾಡಿದ ಅವರು, ಜನರಿಗೆ ಬಿಟ್ಟಿ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಭ್ರಷ್ಟಾಚಾರ ಮಾಡಿ,ಜನರಿಗೆ ನೀಡಿದ ಭರವಸೆಯನ್ನೂ ಈಡೇರಿಸದೆ, ಜನರ ಹಣವನ್ನು ಲೂಟಿ ಮಾಡಿ ರಾಜ್ಯದ ಜನತೆಗೆ ಮೊಸ ಮಾಡಿದ್ದಾರೆ. ಮೂರು ದಿನಗಳಿಂದಲೂ ಪಾದಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಭಾಗವಹಿಸುತ್ತಿರುವ ಕಾರ್ಯಕರ್ತರ ಹುಮ್ಮಸ್ಸನ್ನು ನೋಡಿದರೆ ಇಡೀ ರಾಜ್ಯದ ಜನತೆಗೆ ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತಿಳಿದಿದೆ ಎಂದಿದ್ದಾರೆ.
ಸಿದ್ದರಾಮ್ಯನವರಿಗೆ ಪೂರ್ಣ ಬಹುಮತದ ಸರ್ಕಾರಕ್ಕೆ ಜನ ಅವಕಾಶ ನೀಡಿದ್ದರೂ ಯಾಕೆ ಇಂತಹ ಹಗರಣಗಳ ಮೂಲಕ ಸರ್ಕಾರ ನಡೆಸಬೇಕಾಯ್ತೋ ಗೊತ್ತಿಲ್ಲ. ಈಗ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರೇ ಕೇಳಿ ಬಂದಿರುವುದರಿಂದ ತಕ್ಷಣ ತಮ್ಮ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಆರೋಪ ಮುಕ್ತರಾಗಿ ಬಂದರೆ ಮತ್ತೆ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

Categories
ಚಿಕ್ಕಮಗಳೂರು

ಕೊಪ್ಪಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ

ಕೊಪ್ಪಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ
– ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಪರಿಶೀಲನೆ
– ಶಾಸಕ ರಾಜೇಗೌಡ, ಅಧಿಕಾರಿಗಳಿಂದ ಹಾನಿ ಬಗ್ಗೆ ಮಾಹಿತಿ

NAMMUR EXPRESS NEWS
ಕೊಪ್ಪ: ಮಳೆ ಅಬ್ಬರಕ್ಕೆ ಈ ವರ್ಷ ಅತೀ ಹೆಚ್ಚು ನಷ್ಟವಾದ ತಾಲೂಕಿನ ಪೈಕಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಕೂಡ ಒಂದು. ಇದೀಗ ಕೊಪ್ಪ ತಾಲೂಕಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೂ ಕುಸಿತದಿಂದ ಹಾನಿಕೊಂಡಿರುವ ಕೊಪ್ಪ-ಜಯಪುರ ಮುಖ್ಯರಸ್ತೆಯಲ್ಲಿ ಅವರು ಪರಿಶೀಲನೆ ಮಾಡಿದರು.
ಕೊಪ್ಪ ತಾಲೂಕಿನ ಜಯಪುರ-ಕೊಪ್ಪ ಮುಖ್ಯ ರಸ್ತೆ ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಕೆ.ಆರ್.ಇ.ಡಿ.ಎಲ್ ಅಧ್ಯಕ್ಷರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು,ಕೊಪ್ಪ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಕೊಪ್ಪ ಬ್ಲಾಕ್ ಕಾಂಗ್ರೆಸ್‌ನ ಪ್ರಮುಖರು ಉಪಸ್ಥಿತರಿದ್ದರು.

Categories
ಕರಾವಳಿ ಮಂಗಳೂರು

ಪಬ್ಬಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ: ನಾಲ್ವರು ಅಂದರ್‌!

ಟಾಪ್ ನ್ಯೂಸ್ ಕರಾವಳಿ
ಪಬ್ಬಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ: ನಾಲ್ವರು ಅಂದರ್‌!
– ಮಂಗಳೂರಿನ ಪಬ್ ಒಂದರಲ್ಲಿ ಘಟನೆ: ಪುತ್ತೂರು ಯುವಕರ ಬಂಧನ
-ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು
– ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ!
– ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ!

NAMMUR EXPRESS NEWS
ಮಂಗಳೂರು: ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32) ಪ್ರೀತೀಶ್ (33) ಬಂಧನ ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ಗೆ ಜುಲೈ ೩ರಂದು ಮಹಿಳೆಯೊಬ್ಬರು ತನ್ನ ಗೆಳತಿಯೊಂದಿಗೆ ತೆರಳಿದ್ದರು. ಈ ವೇಳೆ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರ ತಂಡ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜೊತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಹಿಳೆಯು ದೂರು ನೀಡಿದ್ದು, ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀದರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಓರ್ವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಮೂವರು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು

ಮೂಡುಬಿದಿರೆ: ತಾಲೂಕಿನ ಕೋಟೆಬಾಗಿಲು ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮರಿಯಾಡಿ ನಿವಾಸಿ ಅಹ್ಮದ್ ಬಾವ (50) ಅವರು ಮೃತಪಟ್ಟಿದ್ದಾರೆ.
ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಕಾರೊಂದು ಮೂಡುಬಿದಿರೆಯಿಂದ ಮರಿಯಾಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಅಹ್ಮದ್ ಬಾವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ ವೇಳೆ ಮೃತಪಟ್ಟಿದ್ದಾರೆ.

ಉಡುಪಿ: ನಿಂತಿದ್ದ ಬಸ್ಸಿಗೆ ಸ್ಕೂಟ‌ರ್ ಡಿಕ್ಕಿ; ಇಬ್ಬರಿಗೆ ಗಾಯ

ಉಡುಪಿ: ನಿಂತಿದ್ದ ಬಸ್ಸಿಗೆ ದಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಕಿನ್ನಿಮುಲ್ಕಿಯ ಮಂಜುನಾಥ್ ಪೆಟ್ರೋಲ್ ಬಂಕ್ ಬಳಿ ಸೋಮವಾರ ರಾತ್ರಿ ನಡೆದಿದೆ. ಅತೀ ವೇಗದಲ್ಲಿ ಸುಜುಕಿ ಆಕ್ಸಿಸ್ ನಲ್ಲಿ ಬಂದ ಯುವಕರಿಬ್ಬರು ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆ ಬಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಆ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ!

ಉಡುಪಿ: ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಿನಿಂದ ಬಂದ ವ್ಯಕ್ತಿಯೋರ್ವ ಸುಲಿಗೆ ಮಾಡಿಕೊಂಡು ಪರಾರಿಯಾದ ಘಟನೆ ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ನಡೆದಿದೆ. ಶಾಂತಾ ಕಾಮತ್ (84) ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆಂದು ಹೋಗುತ್ತಿದ್ದರು. ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಂಡೇಲು ಎಂಬಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ ಚಿನ್ನದ ಚೈನ್ ಅನ್ನು ಕಸಿದುಕೊಂಡಿದ್ದಾನೆ. ಈ ವೇಳೆ ಅವರು ಆತನನ್ನು ಹಿಡಿಯಲು ಯತ್ನಿಸಿದರೂ ಆತ ಚೈನ್ ಸಹಿತ ಪರಾರಿಯಾಗಿದ್ದಾನೆ. ಈ ವೇಳೆ ಶಾಂತಾ ಕಾಮತ್ ಅವರ ಕೈಗೆ ಗಾಯವಾಗಿದೆ. ಸುಮಾರು 20ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ

ಮಂಗಳೂರು : ಮಂಗಳೂರು – ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.ವಾಮಂಜೂರು ಆಸುಪಾಸಿನ ಕೆತ್ತಿಕಲ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು
ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ
ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು
ತಜ್ಞರು ತಿಳಿಸಿದ್ದಾರೆ. ಗುಡ್ಡದ ಸಮೀಪದಲ್ಲೇ ಇರುವ ಮನೆಗಳಿಗೆ ನೋಟಿಸ್‌ ನೀಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿನ 12 ಮನೆಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಧಿಕಾರಿಗಳ ವಿರುದ್ದ ಕೆತ್ತಿಕಲ್ ಗುಡ್ಡದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಖಾಲಿ ಮಾಡಿ ಹೋಗಿ ಎಂದರೆ ನಾವೆಲ್ಲಿಗೆ ಹೊಗುವುದು? ಗುಡ್ಡ ಅಗೆಯುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿತ್ತೇ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

Categories
ಕರಾವಳಿ

ರಾಜಧಾನಿಯಲ್ಲಿ ಕರಾವಳಿಗರ ಆಶಾಡಿ ಹಬ್ಬ!

ರಾಜಧಾನಿಯಲ್ಲಿ ಕರಾವಳಿಗರ ಆಶಾಡಿ ಹಬ್ಬ!
– ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಕಾರ್ಯಕ್ರಮ
– ಕರಾವಳಿ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ
– ಕೋಟಾ, ಗೋವಿಂದ ಬಾಬು ಪೂಜಾರಿ, ರಮೇಶ್ ಭಟ್ ಸೇರಿ ಗಣ್ಯರು ಹಾಜರ್

NAMMUR EXPRESS NEWS
ಕರಾವಳಿ: ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಆಶಾಡಿ ಹಬ್ಬ 2024 ಬಸವೇಶ್ವರನಗರ ಬೆಂಗಳೂರಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದು, ಆಶಾಡಿ ಹಬ್ಬ ಜನರ ಮನ ಸೆಳೆದಿದೆ.
ಕರಾವಳಿ ಸಿರಿ ಕ್ಲಬ್ ಬೆಂಗಳೂರು ಸದಸ್ಯರು ಮತ್ತು ಬೆಂಗಳೂರು ಕುಂದಗನ್ನಡಿಗರು ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ಪಂಚಪರ್ವ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯುನೇತಾಜಿ ಗ್ರೌಂಡ್ ಅಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುಂದಾಪುರ ಬಯಲಾಟ ಪ್ರಶಸ್ತಿ ಪ್ರಧಾನ ಹಾಗೂ ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದಿಂದ ಮಾಡಿರುವ ಕಂಗೀಲು ನೃತ್ಯ ಪ್ರದರ್ಶನಕ್ಕೆ ಬೆಂಗಳೂರು ಕುಂದ ಕನ್ನಡಿಗರು ಮನ ಸೋತರು.
ಇಡೀ ಕಾರ್ಯಕ್ರಮಕ್ಕೆ ಹೊಸ ಹುರುಪನ್ನು ತಂದ ತಂಡ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಕಾರ್ಯಕ್ರಮದಲ್ಲಿ ಅನೇಕ ಗಣ್ಯರೊಂದಿಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಖ್ಯಾತ ಹಿರಿಯ ಚಲನ ಚಿತ್ರ ನಟ ರಮೇಶ್ ಭಟ್, ಟೀಮ್ ಕುಂದಾಪುರಿಯನ್ಸ್ ಪ್ರಮುಖರು ಹಾಜರಿದ್ದರು.

Categories
ಮಲ್ನಾಡ್

ಶೃಂಗೇರಿಯಲ್ಲಿ ಸರಣಿ ಕಳ್ಳತನ!

ಮಲ್ನಾಡ್ ಪ್ರಮುಖ ಸುದ್ದಿ

ಶೃಂಗೇರಿಯಲ್ಲಿ ಸರಣಿ ಕಳ್ಳತನ!
– ಮೆಡಿಕಲ್, ಅಕ್ಕಪಕ್ಕ ದಿನಸಿ ಅಂಗಡಿಯಲ್ಲಿ ಕಳ್ಳತನ
– ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ: ತನಿಖೆ
– ಶಿವಮೊಗ್ಗ: ಹಲಗೆ ಕದಿಯಲು ಬಂದು ಅತ್ತೆಯ ಕೊಂದ!

– 7 ಕೆಜಿ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್

NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸರಣಿ ಕಳ್ಳತನವಾಗಿದ್ದು ಕಳ್ಳರಿಗಾಗಿ ಪೋಲೀಸ್ ತಂಡ ಶೋಧ ನಡೆಸುತ್ತಿದ್ದಾರೆ. ಶೃಂಗೇರಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಇರುವ ಮೆಡಿಕಲ್ ಹಾಗೂ ಅಕ್ಕ ಪಕ್ಕದ ದಿನಸಿ ಅಂಗಡಿಯಲ್ಲಿ ತಡ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮೊನ್ನೆ ತಾಲೂಕಿನ ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಹಣ,ಚಿನ್ನ ದೊಚಿ ಪಪರರಾರಿಯಾಗಿದ್ದರು. ಈ ಎರಡು ಘಟನೆ ನಡೆದ ಸ್ಥಳಕ್ಕೆ ಶೃಂಗೇರಿ ಪೋಲೀಸ್ ಅಧಿಕಾರಿಗಳಾದ ಜಕ್ಕಣನವರ್ ತಂಡ ಭೇಟಿ ನೀಡಿ ಪರಿಶೀಲಿಸಿದೆ ಹಾಗೂ ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹಲಗೆ ಕದಿಯಲು ಬಂದು ಅತ್ತೆಯ ಕೊಂದ!

ಶಿವಮೊಗ್ಗ: ಕೊಲೆ ಪ್ರಕರಣ ಆರೋಪಿಯನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಮಹಿಳೆಯ ಸಂಬಂಧಿಯೇ ಆಗಿದ್ದು, ಹಲಗೆ ಕಳ್ಳತನಕ್ಕೆ ಹೋದಾಗ ಕೃತ್ಯ ಎಸಗಿದ್ದಾನೆ.
ಮಂಜರಿಕೊಪ್ಪ ಗ್ರಾಮದ ಎಸ್.ಆದರ್ಶ್(30) ಬಂಧಿತ. ಅದೇ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸಾವಿತ್ರಮ್ಮ (60) ಅವರನ್ನು ಗುರುವಾರ ಈತ ಹತ್ಯೆ ಮಾಡಿದ್ದ. ಕೊಲೆಯಾದ ಸಾವಿತ್ರಮ್ಮ ಬಂಧಿತ ಆದರ್ಶನ ಅತ್ತೆ. “ಸಾವಿತ್ರಮ್ಮ ಮನೆಯಲ್ಲಿ ಹಲಗೆ ಕಳವು ಮಾಡಲು ಹೋಗಿದ್ದ. ಎಚ್ಚರಗೊಂಡ ಸಾವಿತ್ರಮ್ಮ ಆದರ್ಶನನ್ನು ಪ್ರಶ್ನೆ ಮಾಡಿದ್ದರು. ಈ ಸಂದರ್ಭ ಆದರ್ಶ ಸಾವಿತ್ರಮ್ಮಳ ಹತ್ಯೆ ಮಾಡಿದ್ದ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಪ್‌ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

7 ಕೆಜಿ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್

ಶಿವಮೊಗ್ಗ: ಮನೆ ಹಿಂಭಾಗದ ಹುಲ್ಲಿನ ಪಿಂಡಿಗಳ ಅಡಿ ಅವಿತಿದ್ದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದಲ್ಲಿ ಹಾವು ಪತ್ತೆಯಾಗಿತ್ತು.
ಸುಹಾಸ್ ಎಂಬುವವರ ಮನೆ ಹಿಂಬದಿ ಹುಲ್ಲಿನ ಪಿಂಡಿಗಳನ್ನು ಇಟ್ಟಿದ್ದರು. ಬೆಳಗ್ಗೆ ಹಸುಗಳಿಗೆ ಹುಲ್ಲು ತರಲು ಹೋದಾಗ ಹಾವು ಕಾಣಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಸ್ನೇಕ್ ಕಿರಣ್ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಈ ಹಾವು 7 ಕೆ.ಜೆ 700 ಗ್ರಾಮ್ ತೂಕವಿತ್ತು. ಶಂಕರ ವಲಯ ಅರಣ್ಯಾಧಿಕಾರಿಗಳ ಸಮುಖದಲಿ ಹೆಬ್ಬಾವನು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಭೂ ಬ್ಯಾಂಕ್ ಲಾಭದ ಸಾಧನೆ!

ತೀರ್ಥಹಳ್ಳಿಯ ಭೂ ಬ್ಯಾಂಕ್ ಲಾಭದ ಸಾಧನೆ!
– 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿ ಅನೇಕ ಹಿರಿಯ ಸಹಕಾರಿಗಳ ನೆರವಿಂದ ಶುರುವಾದ ಸಂಸ್ಥೆ
– ತೀರ್ಥಹಳ್ಳಿ ರೈತರಿಗೆ ಆಸರೆಯಾದ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್
– ಸಂಸ್ಥೆ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: 84 ವರ್ಷದ ಇತಿಹಾಸದಲ್ಲೇ ತೀರ್ಥಹಳ್ಳಿಯ ಭೂ ಬ್ಯಾಂಕ್ ಎರಡು ಬಾರಿ ಅತ್ಯಂತ ಹೆಚ್ಚು ಲಾಭಗಳಿಸಿದ್ದು,ತೀರ್ಥಹಳ್ಳಿ ಭೂ ಬ್ಯಾಂಕ್ 1 ಕೋಟಿ 1 ಲಕ್ಷ ಕ್ಕೂ ಹೆಚ್ಚು ಲಾಭ ಇದು ಈ ಅವಧಿಯ ಲಾಭ ಪಡೆದಿದೆ.
ಸೋಮವಾರ ಪಿ ಎಲ್ ಡಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್, ಸುಮಾರು 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ ಎಂದರು.
ಹೊಸ ತೋಟ ನಿರ್ಮಿಸಲು, ಹಳೇ ತೋಟಗಳ ಅಭಿವೃದ್ದಿಗೆ, ಬೇಲಿ ನಿರ್ಮಿಸಲು, ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್‌ನ ಕೊಡುಗೆ ಬಹುದೊಡ್ಡದು ಎಂದು ಹೇಳಿದರು.
ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್‌ಗೆ ರಾಜ್ಯದ ಭೂಪಟದಲ್ಲಿಯೇ ವಿಶೇಷ ಗೌರವಾಧರಗಳಿವೆ. ಈ ಬ್ಯಾಂಕಿನಿಂದ ರಾಜ್ಯ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕಿಗೆ ಪ್ರತಿನಿಧಿಯಾಗಿದ್ದ ಬಿ.ಎಸ್.ವಿಶ್ವನಾಥನ್ ವಿಶ್ವ ಸಹಕಾರ ಪಟ್ಟವೇರಲು ತೀರ್ಥಹಳ್ಳಿ ಭೂ ಬ್ಯಾಂಕ್ ಬಹುದೊಡ್ಡ ಮೆಟ್ಟಿಲಾಗಿದೆ. ಬಿ.ಎಸ್.ವಿಶ್ವನಾಥನ್ ರವರ ನಂತರ ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಿಂಹಪಾಲು ಸಲ್ಲಿಸಿದ್ದು ಬಸವಾನಿ ವಿಜಯದೇವ್.ಪ್ರಸ್ತುತ ರಾಜ್ಯ ಬ್ಯಾಂಕಿನ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುವ ಮೂಲಕ ಬಸವಾನಿ ವಿಜಯದೇವ್ ತಮ್ಮ ನಿರಂತರ ಪ್ರಯತ್ನದ ಮೂಲಕ ಈ ಬ್ಯಾಂಕಿನ ಷೇರುದಾರ ಸದಸ್ಯರುಗಳಿಗೆ ಸಾಲ ನೀಡುವ ಮೂಲಕ ರೈತರ ಬದುಕನ್ನು ಹಸನುಗೊಳಿಸಿದ್ದಾರೆ. ಇತ್ತೀಚಿನ ವರ್ಷಗಳಿಂದ ರಾಜ್ಯದ ಬಹುತೇಕ ಭೂ ಬ್ಯಾಂಕ್ ಗಳು ರೈತರಿಗೆ ಸಾಲ ನೀಡಲಾಗದೇ ಸಂಪೂರ್ಣ ನೆಲಕಚ್ಚಿರುವ ಈ ಸಂದರ್ಭದಲ್ಲಿ ತೀರ್ಥಹಳ್ಳಿ ಭೂ ಬ್ಯಾಂಕ್ ರೈತರಿಗೆ ಕೃಷಿ ಸಾಲ ನೀಡುವುದರ ಮೂಲಕ ಪ್ರತೀ ವರ್ಷವೂ ಸಾಧನೆಯ ಉತ್ತುಂಗಕ್ಕೆ ಏರುತ್ತಿದೆ ಎಂದರು.
ರಾಜ್ಯ ಬ್ಯಾಂಕಿನ ಬೆಳವಣಿಗೆಗೆ ಹಲವು ಪ್ರಾಥಮಿಕ ಬ್ಯಾಂಕುಗಳು ಕೈಜೋಡಿಸಿದ್ದು ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್ ಈ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ, ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ ಎಂದರು.

 

ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಸಾಧನೆ

ಸಹಕಾರಿ ರತ್ನ, ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾಗಿರುವ ತೀರ್ಥಹಳ್ಳಿ ಪಿಕಾರ್ಡ್ ಬ್ಯಾಂಕ್, 2023-2024 ನೇ ಸಾಲಿನಲ್ಲಿ 1 ಕೋಟಿ 1 ಲಕ್ಷದ 76 ಸಾವಿರ ರೂಪಾಯಿಗಳಿಗೂ ಮಿಕ್ಕಿ ಲಾಭಗಳಿಸಿದ್ದು ಕಳೆದ ವರ್ಷ ಶೇ. 10% ಡೆವಿಡೆಂಟ್ ಹಂಚಿಕೆ ಮಾಡಿದ್ದು ಈ ವರ್ಷವೂ ಶೇಕಡ 10% ರ ಡೆವಿಡೆಂಟ್ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ.
ಪ್ರಕೃತಿ ವೈಪರಿತ್ಯ,ಅನಾವೃಷ್ಟಿ, ಕೊಳೆ ರೋಗ ಮತ್ತು ಎಲೆ ಚುಕ್ಕೆ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭಗಳಿಸಿರುವ ಭೂ ಬ್ಯಾಂಕ್‌ಗಳಲ್ಲಿ ಒಂದಾಗಿ ಗಮನ ಸೆಳೆದಿದೆ.
ಒಟ್ಟು 5,315 ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 18 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ “ಎ” ಗ್ರೇಡ್ ಪಡೆದಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ ಶೇಕಡ 83.84% ವಸೂಲಾತಿ ಮಾಡಿ 33.72 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ನಡೆಸಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡದೇ ನಿರಂತರ ಸುಸ್ತಿದಾರರಾದ ಸಾಲಗಾರ ಸದಸ್ಯರ ಮೇಲೆ ದಾವೆ ಹೂಡಲಾಗಿದೆ.

ವಿಜಯ್ ದೇವ್ ಸಾರಥಿಯಾಗಿ ಸೇವೆ

ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾದ ನಂತರ ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆಗುವಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು ವಿವಿಧ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ-ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕರಿಸುತ್ತಿರುವುದಕ್ಕೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಸವಾನಿ ವಿಜಯದೇವ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಸರ್ವ ಸದಸ್ಯರ ಮಹಾಸಭೆ

ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆ ನಡೆಯಲಿದ್ದು ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ವಿನಂತಿಸಿದ್ದಾರೆ. ಈ ವರ್ಷವು ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಸುತ್ತಿದ್ದು ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕೊಡಸಗೊಳ್ಳಿ ಸತೀಶ್,ಹಿಂದಿನ ಅವಧಿಯ ವ್ಯವಸ್ಥಾಪಕರಾದ ಶ್ರೀ ಕೆ ಕೃಷ್ಣಮೂರ್ತಿ,ಹಾಲಿ ವ್ಯವಸ್ಥಾಪಕರಾದ ಸಂಜಯ್‌, ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಧ್ಯಕ್ಷ ಶ್ರೀ ಬಸವಾನಿ ವಿಜಯದೇವ್ ಕೃತಜ್ಞತೆ ಸಲ್ಲಿಸಿದ್ದಾರೆ. ಬಸವಾನಿ ವಿಜಯದೇವ್, ಹಿಂದಿನ ಅವಧಿಯ ವ್ಯವಸ್ಥಾಪಕರಾದ ಕೆ, ಕೃಷ್ಣಮೂರ್ತಿ ಹಾಗೂ ಹಾಲಿ ವ್ಯವಸ್ಥಾಪಕರಾದ ಸಂಜಯ್ ಉಪಸ್ಥಿತರಿದ್ದರು.

Categories
ಮಲ್ನಾಡ್

ಕಂದಾಯ ಜಾಗ ಒತ್ತುವರಿಯೂ ತೆರವು!

ಕಂದಾಯ ಜಾಗ ಒತ್ತುವರಿಯೂ ತೆರವು!
– ಇಂದಿನಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ
– ಹಳೆ ಕಾಯ್ದೆಯ ಪ್ರಕಾರವೇ ತೆರವು: ಅಧಿಕಾರಿಗಳಿಗೆ ಸೂಚನೆ

NAMMUR EXPRESS NEWS
ಶೃಂಗೇರಿ: ಶೃಂಗೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ ಭೇಟಿ ನೀಡಿದ್ದು, ಒತ್ತುವರಿ ತೆರವು ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಅಕ್ರಮ ಒತ್ತುವರಿ ಬಗ್ಗೆ ಸ್ಪಷ್ಟನೆ ನೀಡಿದ ಕಠಾರಿಯಾ ಜಿಲ್ಲೆಯಲ್ಲಿ ಬೇರೆ ಬೇರೆ ಕಾಯ್ದೆಗಳಿಂದ ಅಕ್ರಮ ಸಕ್ರಮ ಮಾಡಲಾಗಿದ್ದು ಕಂದಾಯ ಜಾಗದ ಒತ್ತುವರಿ ಕಂಡಲ್ಲಿ ತೆರವು ಮಾಡುತ್ತೇವೆ. ನಾವು ಜನ ಹಾಗೂ ಅರಣ್ಯ ಎರಡನ್ನೂ ಉಳಿಸಿಕೊಳ್ಳಬೇಕಾಗಿದೆ ಎಂದರು.
ಫಾರಂ ನಂ.50,53,57 ಎಲ್ಲಾ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು ಹೊಸದಾಗಿ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಕಾಯ್ದೆಯ ಪ್ರಕಾರವೇ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವರು ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಇದರಿಂದ ಸರ್ಕಾರಿ ಕಟ್ಟಡ,ಶಾಲೆ,ಆಸ್ಪತ್ರೆ ನಿರ್ಮಿಸಲು ಕಂದಾಯ ಇಲಾಖೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಅಂತಹ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು.
ಕಳೆದ ಹತ್ತು ವರ್ಷಗಳಿಂದ ಮಲೆನಾಡಿನಲ್ಲಿ ಒತ್ತುವರಿ ಹೆಚ್ಚಾಗಿದ್ದು ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು ಇಂದಿನಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದಿದ್ದಾರೆ.

Categories
ಚಿತ್ರದುರ್ಗ

ಶನೇಶ್ವರ ಸ್ವಾಮಿ ಸ್ವಾಮಿಗೆ ಉಘೇ ಉಘೇ..!

ಶನೇಶ್ವರ ಸ್ವಾಮಿ ಸ್ವಾಮಿಗೆ ಉಘೇ ಉಘೇ..!
– ಶ್ರದ್ಧಾ ಭಕ್ತಿಯ ವೈಭವದ ಶನೇಶ್ವರ ಸ್ವಾಮಿ ಮೆರವಣಿಗೆ
– ಭಕ್ತರ ಗಮನ ಸೆಳೆದ ದೇವರುಗಳ ಮೆರವಣಿಗೆ

NAMMUR EXPRESS NEWS
ಹೊಸದುರ್ಗ: ಹೊಸದುರ್ಗ ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ಹುಳಿಯಾರು ರಸ್ತೆಯಲ್ಲಿನ ನೂತನವಾಗಿ ಲೋಕಾರ್ಪಣೆಗೆ ಸಿದ್ದಗೊಂಡಿರುವ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ದೇವರುಗಳ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು.
ನಗರದ ಗ್ರಾಮದೇವತೆ ದುರ್ಗಾಂಬಿಕಾದೇವಿ, ಬನಶಂಕರಿ ದೇವಿ, ಪ್ಲೇಗದಮ್ಮದೇವಿ, ಅಂತರಘಟ್ಟಮ್ಮದೇವಿ, ಕಾಳಮ್ಮ, ಗೊರವಿನಕಲ್ಲು ಕಂಬದ ನರಸಿಂಹಸ್ವಾಮಿ, ಹೊಸದುರ್ಗದ ರಾಮದೇವರು, ಕುರುಬರಹಳ್ಳಿ ಕರಿಯಮ್ಮ, ಬುಕ್ಕಸಾಗರ ಆಂಜನೇಯ ಸ್ವಾಮಿ, ಹಟ್ಟಿ ದುರ್ಗಾಂಭ ದೇವಿ, ಪಟ್ಟಣದ ವೀರಭದ್ರೇಶ್ವರ ಸ್ವಾಮಿ, ಕುಕ್ಕುವಾಡೇಶ್ವರಿದೇವಿ, ಕಾಳಮ್ಮ, ಕರುಮಾರಿಮ್ಮದೇವಿ ಹಾಗೂ ಪುರದ ಲಕ್ಷ್ಮೀ ರಂಗನಾಥಸ್ವಾಮಿ ದೇವರು ಮೆರವಣಿಗೆ ಪಟ್ಟಣದಲ್ಲಿ ಸಾಗಿತು.
ಭವ್ಯವಾದ ಅಲಂಕೃತಗೊಂಡ ದೇವರುಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆಯುವಂತಿತ್ತು. ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿ ಸನ್ನಿಧಿಯಲ್ಲಿ ಪೂಜೆ ಮಾಡಿಸಿ, ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ಹುಳಿಯಾರು ವೃತ್ತದ ಮೂಲಕ ವೀರಭದ್ರೇಶ್ವರ ಹಾಗೂ ಸಾಯಿ ಮಂದಿರದ ಮಾರ್ಗವಾಗಿ ಶನೇಶ್ವರ ಸ್ವಾಮಿ ದೇವಾಲಯ ತಲುಪಿತು.

Categories
ರಾಜ್ಯ

3 ಎಕರೆ ಒಳಗಿನ ಭೂಮಿ ಒತ್ತುವರಿ ತೆರವು ಇಲ್ಲ!

3 ಎಕರೆ ಒಳಗಿನ ಭೂಮಿ ಒತ್ತುವರಿ ತೆರವು ಇಲ್ಲ!
– ಕೊಪ್ಪ ತಾಲೂಕಿನಲ್ಲಿ ಒತ್ತುವರಿ ತೆರವು ಶುರು
– ಅರಣ್ಯ ಸಚಿವರು ಹೇಳಿದ್ದೇನು..? ಯಾವ ಭೂಮಿ ತೆರವು ಇಲ್ಲ?
– ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ

NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರ 2015ರಲ್ಲಿ ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾ ಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರಕಾರ ಈಗಲೂ ಅದಕ್ಕೆ ಬದ್ಧವಾಗಿದೆ.
ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ಅನಂತರದ ಹೊಸ ಒತ್ತುವರಿ ವಿಚಾರದಲ್ಲಿ ಕ್ರಮ ಜರಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಯನಾಡು ಭೂ ಕುಸಿತದ ಬೆನ್ನಲ್ಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಆತಂಕದ ಛಾಯೆ ಮನೆ ಮಾಡಿದ್ದು, ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ 69 ಎಕರೆ ಒತ್ತುವರಿ ತೆರವುಗೊಳಿಸಿದೆ.

69 ಎಕರೆ ಒತ್ತುವರಿ ತೆರವು

ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಒತ್ತುವರಿಯನ್ನು ತತ್ ಕ್ಷಣದಿಂದಲೇ ತೆರವುಗೊಳಿಸುವಂತೆ ಖಂಡ್ರೆ ಸೂಚನೆ ನೀಡಿದ 24 ಗಂಟೆಯಲ್ಲಿ ನೂತನ ಕಾರ್ಯಪಡೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಹೋಬಳಿಯ ಮಾಗುಂಡಿಯಲ್ಲಿ 17.17 ಎಕರೆ, ಹಲಸೂರಿನಲ್ಲಿ 13.38 ಎಕರೆ ಹಾಗೂ ತನುಡಿಯಲ್ಲಿ 36 ಎಕರೆ ಸೇರಿ ಒಟ್ಟು 69 ಎಕರೆ ಅರಣ್ಯ ಭೂಮಿ ತೆರವು ಮಾಡಿಸಲಾಗಿದೆ. ಪಶ್ಚಿಮಘಟ್ಟ ಮತ್ತು ಅರಣ್ಯ ಒತ್ತುವರಿ ತೆರವು ಕಾರ್ಯಪಡೆಯ ಅಧ್ಯಕ್ಷರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್ ಅವರ ಆದೇಶದಂತೆ ಈ ಕ್ರಮ ಜರುಗಿಸಲಾಗಿದೆ.

ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ

ಇದೆಲ್ಲ ವಿಚಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಈಗ ಮತ್ತೂಂದು ಅಧಿಸೂಚನೆ ಹೊರಡಿಸಿದೆ. ರಾಜ್ಯದ 20,668 ಚದರ ಕಿಲೋ ಮೀಟರ್‌ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ರಾಜ್ಯದ 10 ಜಿಲ್ಲೆ ಅಂದರೆ
ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲೂಕು ಪುನರ್ ವಿಂಗಡಣೆಯ ಅನಂತರ 39) ತಾಲೂಕುಗಳ 1,533 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಸಾಧಕ-ಬಾಧಕ ಅರಿಯಲು ಸಮಿತಿ ರಾಜ್ಯ ಸರಕಾರ ಈಗಾಗಲೇ ಈ ವರದಿ ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಈಗ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಚಿವ ಸಂಪುಟದಲ್ಲಿ ಸಮಾಲೋಚಿಸಿ, ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಬಾಧ್ಯಸ್ಥರೊಂದಿಗೆ ಅಂದರೆ 1,533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ ಬಾಧಕ ಅರಿತು ವರದಿ ನೀಡಲು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಮಾತುಕತೆ ನಡೆಸಲಿಲ್ಲ ಎಂದು ಹೇಳಿದರು.

Categories
ಜ್ಯೋತಿಷ್ಯ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.

** ವೃಷಭ ರಾಶಿ :
ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

** ಮಿಥುನ ರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಮಾತಿನಲ್ಲಿ ಸೌಮ್ಯತೆಯ ಪರಿಣಾಮವಿರುತ್ತದೆ.

** ಕರ್ಕಾಟಕ ರಾಶಿ :
ಜೀವನದಲ್ಲಿ ಹೊಸ ರೋಚಕ ತಿರುವುಗಳಿರುತ್ತವೆ. ಹಣಕಾಸಿನ ವಿಷಯಗಳಲ್ಲಿ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಅಗತ್ಯವಿದ್ದರೆ ತಜ್ಞರ ಸಲಹೆಯನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ.

** ಸಿಂಹ ರಾಶಿ :
ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಹೊಸ ಬದಲಾವಣೆಗಳನ್ನು ಸ್ವೀಕರಿಸಲು ಸಿದ್ಧರಾಗಿರಿ. ಇಂದು, ಉದ್ಯೋಗದಲ್ಲಿ ಸವಾಲುಗಳು ಹೆಚ್ಚಾಗಬಹುದು, ಆದರೆ ಇದು ವೃತ್ತಿ ಬೆಳವಣಿಗೆಗೆ ಹೊಸ ಆಯ್ಕೆಗಳನ್ನು ಒದಗಿಸುತ್ತದೆ.

** ಕನ್ಯಾ ರಾಶಿ :
ಉದ್ಯೋಗದಲ್ಲಿ ನಿಮ್ಮ ಧನಾತ್ಮಕ ಚಿತ್ರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ವೈಫಲ್ಯದ ಹೊರತಾಗಿಯೂ, ಬಿಡಬೇಡಿ ಮತ್ತು ಪ್ರಯತ್ನವನ್ನು ಮುಂದುವರಿಸಿ. ಕಚೇರಿಯಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಿ. ಇದು ಮೌಲ್ಯಮಾಪನ ಅಥವಾ ಪ್ರಚಾರದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಸಹೋದ್ಯೋಗಿಗಳ ಸಹಾಯದಿಂದ, ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ.

** ತುಲಾ ರಾಶಿ :
ಜೀವನದಲ್ಲಿ ಹಲವು ಏರಿಳಿತಗಳು ಎದುರಾಗುತ್ತವೆ. ಅನಿರೀಕ್ಷಿತ ಬದಲಾವಣೆಗಳಿಗೆ ಸಿದ್ಧರಾಗಿರಿ. ಸವಾಲುಗಳಿಗೆ ಹೆದರಬೇಡಿ. ತಾಳ್ಮೆಯನ್ನು ಕಾಪಾಡಿಕೊಳ್ಳಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿ. ಆದಾಗ್ಯೂ, ಕಾರ್ಯಗಳಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.

** ವೃಶ್ಚಿಕ ರಾಶಿ :
ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಎಲ್ಲಾ ಕಾರ್ಯಗಳನ್ನು ಸಕಾರಾತ್ಮಕ ಮನೋಭಾವದಿಂದ ನಿರ್ವಹಿಸಿ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಲು ಬಿಡಬೇಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.

** ಧನಸ್ಸು ರಾಶಿ :
ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ. ಸೋಮಾರಿತನದಿಂದ ದೂರವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಶುಭ ದಿನವಾಗಿದೆ. ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಜೀವನದಲ್ಲಿ ಮುನ್ನಡೆಯಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು.

** ಮಕರ ರಾಶಿ :
ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಕೆಲವರ ಮದುವೆ ನಿಶ್ಚಯವಾಗಬಹುದು. ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಿರಿ. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಆದರೆ, ಹೆಚ್ಚಿನ ಜವಾಬ್ದಾರಿಯಿಂದ ಕಚೇರಿ ಕೆಲಸವನ್ನು ನಿರ್ವಹಿಸಿ.

** ಕುಂಭ ರಾಶಿ :
ಕುಟುಂಬ ಸದಸ್ಯರೊಂದಿಗೆ ಅನಾವಶ್ಯಕ ವಾದ ವಿವಾದಗಳಿಂದ ದೂರವಿರಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲಸದಲ್ಲಿ ಅಜಾಗರೂಕತೆ ಬೇಡ. ವ್ಯಾಪಾರದಲ್ಲಿ ಲಾಭ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು. ನಿಮ್ಮ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ.

** ಮೀನ ರಾಶಿ :
ವೃತ್ತಿಪರ ಜೀವನದಲ್ಲಿ ಸೃಜನಶೀಲತೆ ಮತ್ತು ಹೊಸ ಹೊಸ ಆಲೋಚನೆಗಳಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕಚೇರಿಯಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ.