Categories
ಚಿಕ್ಕಮಗಳೂರು ಬೆಂಗಳೂರು

ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ಜಿಲ್ಲೆ ನಾಯಕರು!

ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ಜಿಲ್ಲೆ ನಾಯಕರು!
– ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಪಟ್ಟು
– ವಿಜಯೇಂದ್ರ ಅವರ ನೇತೃತ್ವದಲ್ಲಿ ಪಾದಯಾತ್ರೆ

NAMMUR EXPRESS NEWS
ಬೆಂಗಳೂರು: ಭ್ರಷ್ಟ ಕಾಂಗ್ರೆಸ್‌ ಸರ್ಕಾರ ತೊಲಗಿಸಿ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಶನಿವಾರ ಬೆಳಗ್ಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು.
ಪಾದಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ದೇವರಾಜ್ ಶೆಟ್ಟಿ ಮಾತನಾಡಿ, ನಮಗೆ 100 ಜನ ಬರಬೇಕು ಎಂದು ರಾಜ್ಯದಿಂದ ಆದೇಶ ಇತ್ತು, ಆದರೆ ನಾವು 150 ಕ್ಕೂ ಹೆಚ್ಚು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತಿದ್ದೇವೆ. ಇನ್ನು 8 ದಿನಗಳ ಕಾಲ ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ. ಈ ಪಾದಯಾತ್ರೆ ಸುಮಾರು 2 ವರೆ 3 ಕಿ. ಮೀ ವರೆಗೆ ಜನ ನಡೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರೆಯುತ್ತದೆ. ಇಂದು 12ಕಿ.ಮೀ ವರೆಗೂ ಅಧಿಕ ಪಾದಯಾತ್ರೆ ನಡೆದಿದೆ .2-3 ಕಿ.ಮೀಗಳಷ್ಟು ಉದ್ದ ರಸ್ತೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರತೀಯ ಜನತಾ ಪಾರ್ಟಿಯ ನೇತೃತ್ವದಲ್ಲಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾದ ಕುಮಾರ್ ಸ್ವಾಮಿ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಅಂತಿಮವಾಗುವ ಮುಂಚೆ ಕಾಂಗ್ರೇಸ್ ನೇತೃತ್ವದ ಸರ್ಕಾರ ಪತನ ಆಗಬೇಕು, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯ ಎಂದರು. ಬೋಜೆ ಗೌಡರು ಕೂಡ ನಮ್ಮ ಜೊತೆ ಇದ್ದಾರೆ. ನೂರಾರು ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಒಟ್ಟಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು. ಜಿಲ್ಲೆಯಲ್ಲಿ ಸುಮಾರು 1 ಸಾವಿರ ಬಿಜೆಪಿ ಕಾರ್ಯಕರ್ತರು ಹಾಗು 500 ಜನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಮತ್ತು ಅನೇಕರು ಭಾಗವಹಿಸಿದ್ದರು.

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ರಾಜ್ಯ ಕಾಂಗ್ರೇಸ್ ಸರ್ಕಾರದ ಹಗರಣದ ವಿರುದ್ಧ ರಾಜ್ಯ ಬಿಜೆಪಿ ಕರೆಕೊಟ್ಟಿರುವ ಮೈಸೂರು ಚಲೋ ಪಾದಯಾತ್ರೆ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರು ಆಗಮಿಸಿದ್ದಾರೆ. ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಯಲಿರುವ ಪಾದಯಾತ್ರೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ ವೈ ವಿಜಯೇಂದ್ರ ಹಾಗೂ ಹೆಚ್.ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಉದ್ಘಾಟನೆಗೊಂಡು ಆಗಸ್ಟ್ 8 ರಂದು ಮೈಸೂರಿನಲ್ಲಿ ಕೊನೆಗೊಳ್ಳಲಿದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲು!?

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲು!?
– ಮೂಡಿಗೆರೆ: ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ
– ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆ
– ಕೊಪ್ಪ: ಮದ್ಯಪಾನ ಮಾಡಿ ಬೈಕ್‌ ಚಾಲನೆ ಮಾಡಿದ್ರೆ ಕೇಸ್
– ಕಡೂರು: ದನಗಳ್ಳರ ಬಂಧನ: ಜಾನುವಾರು ರಕ್ಷಣೆ
– ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಮಳೆ ದುರಂತಗಳು ಇನ್ನು ಮುಂದುವರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲಾಗಿರುವ ಶಂಕೆ ಎದುರಾಗಿದೆ.
ಮೂಡಿಗೆರೆಯಲ್ಲಿ ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ ನಾಪತ್ತೆಯಾದರೆ, ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆಯಾಗಿದ್ದಾರೆ.

ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಬಂದವ ನಾಪತ್ತೆ

ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿಯ ನಿವಾಸಿ ಶಿವಕುಮಾರ ಶರ್ಮ (41)
ಆಗಸ್ಟ್ 1 ರಂದು 20 ರಿಂದ 25 ಖ್ಯಾತ ಜೋತಿಷ್ಯ ಪಂಡಿತರಿಗೆ ಶ್ರೀ ಮಠದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧುಶೇಖರ ಸ್ವಾಮೀಜಿಯಿಂದ ಸನ್ಮಾನ ಕೂಡ ಶರ್ಮರು ಸ್ವೀಕರಿಸಿದ್ದಾರೆ. ಆದರೆ, ಆಗಸ್ಟ್ 2 ರಂದು ಬೆಳಗಿನ ಜಾವ ಸ್ನಾನ ಮಾಡಿ ಜಪ ಮಾಡಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾದ ಬಗ್ಗೆ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ದನ ಕಟ್ಟಲು ಹೋಗಿ ಹೊಳೆಗೆ ಬಿದ್ದು ರೈತ ಸಾವು?

ಮೂಡಿಗೆರೆ: ಜಾನುವಾರು ಕಟ್ಟಲು ಹೋದ ರೈತರೊಬ್ಬರು ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿ. ಎಲ್ ಗೋಪಾಲಗೌಡ (63) ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ. ಜಾನುವಾರುಗಳನ್ನು ಕಟ್ಟಲು ಹೋದಾಗ ಆಕಸ್ಮಿಕವಾಗಿ ತುಂಬಿಹರಿಯುತ್ತಿದ್ದ ಹೇಮಾವತಿ ಉಪನದಿಗೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ಗೋಪಾಲ ಅವರಿಗೆ ಮೇಲೇಳಲಾಗದೆ ಹೊಳೆಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗೋಪಾಲ ಅವರಿಗೆ ಶೋಧ ನಡೆಸಿದ್ದು ಪತ್ತೆಯಾಗಿಲ್ಲ ಎನ್ನಲಾಗಿದೆ.

ಕೊಪ್ಪ: ಮದ್ಯಪಾನಿ ಬೈಕ್‌ ಚಾಲಕನಿಗೆ ಬಿತ್ತು 10 ಸಾವಿರ ರೂ. ದಂಡ!

ಕೊಪ್ಪ: ಕೊಪ್ಪ ಪಟ್ಟಣದ ಸುಬಾಷ್ ರಸ್ತೆಯಲ್ಲಿ ಮದ್ಯಪಾನ ಮಾಡಿ ಬೈಕ್ ಓಡಾಸುತ್ತಿದ್ದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದಾರೆ.
ಪಿಎಸ್‌ಐ ಬಸವರಾಜ್ ಜಿ.ಕೆ., ಎ ಎಸ್ ಐ .ರಮೇಶ್‌ ಶೆಟ್ಟಿ, ಪ್ರಶಾಂತ, ಮತ್ತು ಓಂಕಾರ್ ವಾಹನ ತಪಾಸಣೆ ಮಾಡುತ್ತಿದ್ದಾಗ ಪ್ರಜ್ವಲ್ ಎಂಬಾತ ಪಾನಮತ್ತನಾಗಿ ಬೈಕ್‌ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಈತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದು, ಸೋಮವಾರ ಕೊಪ್ಪ ನ್ಯಾಯಾಲಯದ ನ್ಯಾಯಾಧೀಶರು 10,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 25 ಪ್ರಕರಣಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದವರಿಗೆ ₹ 2.50 ಲಕ್ಷದಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು: ದನ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ

ಚಿಕ್ಕಮಗಳೂರು: ದನಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ, ಹಣ ಹಾಗೂ ಜಾನುವಾರು ಗಳನ್ನು ರಕ್ಷಣೆ ಮಾಡುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದನಕಳ್ಳತನ ಮಾಡುತ್ತಿದ್ದ ಅಜ್ಜಂಪುರ ನಿವಾಸಿಗಳಾದ ಉಮ್ಮರ್ ಫಾರುಕ್ ಖಾನ್, ಮುಬಾರಕ್ ಬಂಧಿತ ಆರೋಪಿಗಳು. ಬಂಧಿತರಿಂದ 4ಲಕ್ಷ 30 ಸಾವಿರ ರೂ. ಮೌಲ್ಯದ ಆಶೋಕ ಲೈಲ್ಯಾಂಡ್ ವಾಹನ, 1.10 ಲಕ್ಷ ರೂ. ಮೌಲ್ಯದ ಮೂರು ಹಸು ಒಂದು ಹೋರಿ, ಕರುಗಳು ಸೇರಿ 6.30 ಲಕ್ಷ ರೂ. ಮೌಲ್ಯದಷ್ಟು ಹಸು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲೂಕಿನ ವಿವಿಧೆಡೆ ದನಗಳ ಕಳ್ಳತನ ಪ್ರಕರಣ ನಡೆದಿದ್ದು, ತಂಗಲಿ ಬೈಪಾಸ್‌ ರಸ್ತೆಯ ಬ್ರಿಡ್ಜ್ ಬಳಿ ಅನುಮಾನಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾಗ ಆಶೋಕ ಲೈಲ್ಯಾಂಡ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ನಾಲ್ಕು ಹಸುಗಳು ವಾಹನದಲ್ಲಿ ಇದ್ದದ್ದು ಕಂಡು ಬಂದಿದೆ. ಈ ಸಂಬಂಧ ಮೂರು ಜನರನ್ನು ವಿಚಾರಣೆ ಒಳಪಡಿಸಿದಾಗ ಸಮಂಜಸ ಉತ್ತರ ನೀಡಿಲ್ಲ ಹಾಗೂ ಜಾನುವಾರು ಸಾಗಟ ಸಂಬಂಧ ಸೂಕ್ತ ದಾಖಲೆ ಇಲ್ಲದಿದ್ದರಿಂದ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂದುವರಿದ ಜಿಟಿ ಜಿಟಿ ಮಳೆ: ಧರೆ ಕುಸಿತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಮಳೆಯ ತೀವ್ರತೆ ಕಡಿಮೆ ಆಗಿದೆ. ಆದರೆ ಗಾಳಿ ಮಳೆಯಿಂದ ಗುಡ್ಡ, ಧರೆ ಕುಸಿತ ಮುಂದುವರಿದಿದೆ.

Categories
ಮಾಹಿತಿ ಸುದ್ದಿ

ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳಿಗೆ ಅರ್ಜಿ

ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳಿಗೆ ಅರ್ಜಿ
– ಆಗಸ್ಟ್ 5 ಕೊನೆಯ ದಿನ: ಯಾವ ಹುದ್ದೆ? ಎಲ್ಲಿ?
– ಏನು ಓದಿರಬೇಕು..? ಕೆಲಸದ ವಿವರ ಇಲ್ಲಿದೆ

NAMMUR EXPRESS NEWS
ನವದೆಹಲಿ: ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ . ಗ್ರಾಮೀಣ ಡಾಕ್ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 5. ಇನ್ನು ಎರಡೇ ದಿನ ಬಾಕಿ ಉಳಿದಿದ್ದು ಕೂಡಲೇ ಅಪ್ಲೈ ಮಾಡಿ.

ವಿದ್ಯಾರ್ಹತೆ ಮತ್ತು ವಯೋಮಿತಿ :

ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್‌ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಕರ್ನಾಟಕದಲ್ಲಿ 1,940 ಹುದ್ದೆಗಳಿವೆ. ಜತೆಗೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ:
10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 10,000 ರೂ. – 29,380 ರೂ. ಮಾಸಿಕ ವೇತನವಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://indiapostgdsonline.gov.in/Reg_validation.aspx)

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಟಾಪ್ ನ್ಯೂಸ್

ಶಿವಮೊಗ್ಗ ಜಿಲ್ಲೆಯ ಟಾಪ್ ನ್ಯೂಸ್

– ಶಿವಮೊಗ್ಗ: ಒಂಟಿ ಮಹಿಳೆ ಕೊಲೆ: ಕತ್ತು ಹಿಸುಕಿ ಕೊಂದವರು ಯಾರು?
– ಸೊರಬ: ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ
– ಶಿವಮೊಗ್ಗ: ಬಿಜೆಪಿ ನಾಯಕನಿಂದ ಅತ್ಯಾಚಾರ: ಕೇಸ್
– ಬಿಜೆಪಿ ವಿರುದ್ಧ ಕತ್ತೆಗಳ ಮೆರವಣಿಗೆ ಮಾಡಿದ ಕಾಂಗ್ರೆಸ್
– ತೀರ್ಥಹಳ್ಳಿ: ಅಪಘಾತಕ್ಕೆ ಮನೆ ಬಳಿಯೇ ಯುವಕ ಬಲಿ!

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಒಂಟಿ ಮಹಿಳೆಯ ಕೊಲೆಯಾಗಿದೆ. ಕತ್ತು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ತಡರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಂಜರಿಕೊಪ್ಪದಲ್ಲಿ ಮಹಿಳೆಯ ಕೊಲೆಯಾಗಿದೆ. ಸಾವಿತ್ರಮ್ಮ (65) ಕೊಲೆಯಾದವರು. ಕುಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಕೊಲೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಂತಕರ ಹುಡುಕಾಟವನ್ನು ನಡೆಸುತ್ತಿದ್ದಾರೆ.

ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ!

ಸೊರಬ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕುದುರೆಗಣಿ ಗ್ರಾಮದಲ್ಲಿ ಕೆಲವು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ವೃದ್ಧೆಯೊಬ್ಬರು ವಿಷ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬ ಸದಸ್ಯರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಭತ್ತ ನಾಟಿಗೆ ಸಿದ್ಧಪಡಿಸಿದ್ದ ಸಸಿ ಮಡಿಗಳನ್ನು ಬೆಳಗಿನಜಾವ ಗ್ರಾಮದ ಕೆಲವರು ಬದುವಿನ ಸಮೇತ ನಾಶಗೊಳಿಸಿದ್ದರು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ವೃದ್ದೆ ಪುಟ್ಟಮ್ಮ (85) ಅವರು ಈ ಬೆಳವಣಿಗೆಯಿಂದ ಮತ್ತಷ್ಟು ನೊಂದುಕೊಂಡು ಗುರುವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮದುವೆಯಾಗುವುದಾಗಿ ರೇಪ್: ಬಿಜೆಪಿ ಪ್ರಮುಖನ ವಿರುದ್ಧ ಕೇಸ್

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಶರತ್‌ ಕಲ್ಯಾಣಿ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಶರತ್‌ ಕಲ್ಯಾಣಿಯು ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ‘ನಾನಿನ್ನು ಅವಿವಾಹಿತ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ’ ಎಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
7-8 ತಿಂಗಳಿಂದ ಮಹಿಳೆ ಜೊತೆ ನಿರಂತರ ಸಂಪರ್ಕದಲ್ಲಿದ್ದ ಶರತ್‌, ಸಂತ್ರಸ್ತ ಮಹಿಳೆಯು ಮದುವೆಯಾಗು ಎಂದು ಒತ್ತಾಯಿಸಿದರೆನ್ನಲಾಗಿದೆ. ಈ ವೇಳೆ ಶರತ್‌, ‘ನನಗೆ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿದ್ದನು. ಅಲ್ಲದೆ, ಈಗ ನನಗೆ ಸಹಾಯ ಮಾಡು ಎಂದು ಕೇಳಿದ್ದ. ಈ ವೇಳೆ ಮಹಿಳೆಯು ಹಲವು ಬಾರಿ ಹಣ ನೀಡಿದ್ದು, ಒಟ್ಟು ನಾಲ್ಕು ಲಕ್ಷ ಹಣವನ್ನು ಶರತ್‌ಗೆ ನೀಡಿದ್ದರು. ನಂತರ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ, ಫೋನ್ ಸಂಪರ್ಕವನ್ನೂ ಕಡಿದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಕೇಳಲು ಮಹಿಳೆ ಗುಂಡಪ್ಪ ಶೆಡ್ಡಿನಲ್ಲಿರುವ ಶರತ್‌ ಕಲ್ಯಾಣಿಯ ಮನೆಗೆ ಹೋದಾಗ ಆತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ವಿರುದ್ಧ ಕತ್ತೆಗಳ ಮೆರವಣಿಗೆ ಮಾಡಿದ ಕಾಂಗ್ರೆಸ್ l

ಶಿವಮೊಗ್ಗ : ಕತ್ತೆಗಳ ಮೆರವಣಿಗೆ ಮೂಲಕ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ನಾಯಕರು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು. ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅನಗತ್ಯವಾಗಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು.
ಬಿಜೆಪಿಯವರು ಕತ್ತೆಗಳು ಎಂದು ಜರಿದು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವನ್ನು ಇಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರು ಆಟವಾಡುತ್ತಿದ್ದಾರೆ. ಜನವಿರೋಧ ಪಕ್ಷವೆಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅಭಿಮಾನಿಗಳ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಮನೆ ಬಳಿಯೇ ಯುವಕ ಅಪಘಾತಕ್ಕೆ ಬಲಿ!

ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಲ್ಲಿ ಗುರುವಾರ ಅಪಘಾತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ರಂಜಿತ್ (36) ಮೃತ ಯುವಕ. ತೀರ್ಥಹಳ್ಳಿಯಿಂದ ಮನೆಗೆ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ, ಮಕ್ಕಳಿದ್ದಾರೆ.

Categories
ತೀರ್ಥಹಳ್ಳಿ

ಮಾದಕ ವಸ್ತು, ಅತಿಯಾದ ಮೊಬೈಲ್ ಬಳಕೆ ಹುಷಾರ್

ಮಾದಕ ವಸ್ತು, ಅತಿಯಾದ ಮೊಬೈಲ್ ಬಳಕೆ ಹುಷಾರ್
– ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯಲ್ಲಿ ಮಕ್ಕಳಿಗೆ ಮಾಹಿತಿ
– ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಶಾಲೆಗೆ ಭೇಟಿ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ ಶಾಲೆಗೆ ಭೇಟಿ ನೀಡಿದ ತೀರ್ಥಹಳ್ಳಿ ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಅವರು ಮಕ್ಕಳಿಗೆ, ಮಾದಕ ವಸ್ತುಗಳು ಕೆಟ್ಟ ಪರಿಣಾಮ, ಮೊಬೈಲ್ ಬಳಕೆ ಸಾಧಕ ಬಾಧಕಗಳು, ಫೇಸ್ ಬುಕ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಆ್ಯಪ್ ಅಂತಹ ಸಾಮಾಜಿಕ ಜಾಲ ತಾಣಗಳ ಬಳಕೆಯ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತೆಯ ಬಗ್ಗೆ, ಹಾಗೂ ಪೋಕ್ಸೋ ಕಾಯ್ದೆಯ ಮತ್ತು ಕಾನೂನು ಮಾಹಿತಿಯನ್ನು ಹಂಚಿಕೊಂಡು, ಮಕ್ಕಳು ಕಲಿಕೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಕೊನೆಯಲ್ಲಿ ಶಾಲೆಗೆ ಅನೇಕ ಬಾರಿ ಸಹಕಾರ ನೀಡಿದ ಮಾನ್ಯರನ್ನು ಮಕ್ಕಳು, ಶಿಕ್ಷಕರು, ಮುಖ್ಯ ಶಿಕ್ಷಕರು ಗೌರವಿಸಿದರು. ಈ ಸಂದರ್ಭದಲ್ಲಿ, ಆಗುಂಬೆ ಆರಕ್ಷಕ ಉಪ ನಿರೀಕ್ಷಕ ರಂಗನಾಥ್ ಅಂತರಗಟ್ಟಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ಆನಂದನ್ ಎ, ವೀರೇಶ್ ಟಿ, ಬೀರಪ್ಪ ಇಟಗಿ, ಶೌಕತ್ ಆಲಿ, ಶ್ರೀಮತಿ ಸೌಮ್ಯ ಹಾಗೂ ಮಕ್ಕಳು ಹಾಜರಿದ್ದರು.. ‌

Categories
ಉಡುಪಿ

ಬೈಂದೂರಿನಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ..!

ಬೈಂದೂರಿನಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ..!
– ಆ.4 ರ ಭಾನುವಾರ ಮಾರಸ್ವಾಮಿ ಕ್ಷೇತ್ರದಲ್ಲಿ ಜಾತ್ರೆ
– ದೇವಸ್ಥಾನದಿಂದಲೇ ಹಣ್ಣು-ಕಾಯಿ ಖರೀದಿಸುವಂತೆ ವಿನಂತಿ

NAMMUR EXPRESS NEWS
ಬೈಂದೂರು: ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಮರವಂತೆ ಶ್ರೀ ಕ್ಷೇತ್ರ ಮಾರಸ್ವಾಮಿ ಬೈಂದೂರಿನಲ್ಲಿ ದಿನಾಂಕ : 04-08-2024 ರ ಭಾನುವಾರ ಕರ್ಕಾಟಕ ಅಮಾವಾಸ್ಯೆಯ ಜಾತ್ರೆ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಹಣ್ಣು – ಕಾಯಿ ಪ್ರಸಾದ ದೇವಸ್ಥಾನದಲ್ಲೆ ದೊರೆಯುತ್ತದೆ. ಹಾಗೂ ಹೊರಗಿನಿಂದ ತಂದ ಹಣ್ಣು – ಕಾಯಿಗಳನ್ನು ಹಬ್ಬದ ದಿನ ಒಡೆದುಕೊಡಲಾಗುವುದಿಲ್ಲ. ಭಗವದ್ ಭಕ್ತರಾದ ತಾವುಗಳು ದೇವಸ್ಥಾನದಿಂದಲೇ ಹಣ್ಣು – ಕಾಯಿ ಖರೀದಿಸಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೋಸ್ಕರ ನಮ್ಮ ಜೊತೆ ಕೈಜೋಡಿಸಿ ಶ್ರೀ ದೇವರ ಸಿರಿಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅರ್ಚಕರು, ಉಪಾದಿವಂತರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಿಬ್ಬಂದಿ ನೌಕರರ ವರ್ಗ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.

Categories
ಮಂಗಳೂರು

ನಾಯಿ ಉಳಿಸಲು ಹೋಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು!

ಟಾಪ್ ನ್ಯೂಸ್ ಕರಾವಳಿ

ನಾಯಿ ಉಳಿಸಲು ಹೋಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು!
– ಬ್ರಹ್ಮಾವರದ ಕೋಟಾ ಉಪ್ಲಾಡಿ ಸೇತುವೆಯಿಂದ ಕೆಳಗೆ ಬಿದ್ದ ಕಾರು
– ಕಾರ್ಕಳ: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
– ಮಂಗಳೂರು: ಗಾಂಜಾ ಸೇವಿಸುತ್ತಿದ್ದ ಯುವಕ ಅರೆಸ್ಟ್
– ಮಂಗಳೂರು: ನಡುರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಹೊಡೆದಾಟ!

NAMMUR EXPRESS NEWS
ಬ್ರಹ್ಮಾವರ: ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಉಪ್ಲಾಡಿ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಆ. 3 ರಂದು ಶನಿವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕಿನ ಕೋಟ ಮೂರು ಕೈ ಸಮೀಪ ಉಪ್ಲಾಡಿ ಸೇತುವೆ ಬಳಿ ನಡೆದಿದೆ.
ಚಾಲಕನೋರ್ವ ಆಲ್ಲೊ ಕಾರುನ್ನು ಚಲಾಯಿಸಿಕೊಂಡು ಕೋಟ ಮೂರುಕೈ ಯಿಂದ ಮಧುವನ ಕಡೆಗೆ ಹೋಗುತ್ತಿದ್ದಾಗ ಉಪ್ಲಾಡಿ ಸೇತುವೆ ಸಮೀಪ ದಾರಿಗೆ ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಉಪ್ಲಾಡಿ ಸೇತುವೆ ಕೆಳಗೆ ಬಿದ್ದಿದೆ.
ಸೇತುವೆಯಿಂದ ಕೆಳಗೆ ಬಿದ್ದ ಕಾರು ಅದೃಷ್ಟವಶಾತ್ ಮರವೊಂದಕ್ಕೆ ಸಿಕ್ಕಿಕೊಂಡಿದ್ದರಿಂದ ಹೊಳೆಯ ನೀರಿನಿಂದ ಕೂದಲೇಳೆ ಅಂತರದಲ್ಲಿ ಪಾರಾಗಿ ದೊಡ್ಡ ದುರಂತವೊಂದು ತಪ್ಪಿದೆ.ಕಾರಿನಲ್ಲಿ ಚಾಲಕನೊರ್ವ ಮಾತ್ರ ಇದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಾಲಕ ಮಧುವನ ಅಬ್ದುಲ್ ರಜಾಕ್ ನನ್ನು ಸ್ಥಳೀಯರು ತಕ್ಷಣ ರಕ್ಷಿಸಿದ್ದಾರೆ.ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.

ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಉಡುಪಿ: ಭಾರೀ ಗಾಳಿಮಳೆಗೆ ಕಾರ್ಕಳ ತಾಲೂಕಿನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಸಮೀಪದಲ್ಲಿ ಪರ್ಪಲೆ ಗುಡ್ಡ ಕುಸಿದಿದ್ದು, ರಾಜ್ಯ ಹೆದ್ದಾರಿಯಲ್ಲಿ ಬಿರುಕು ಬಿದ್ದಿದೆ. ರಸ್ತೆ ಮಧ್ಯೆ ಕಂದಕ ನಿರ್ಮಾಣಗೊಂಡು ರಸ್ತೆ ಮಧ್ಯೆ ವಿಪರೀತ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್‌ ಎಂಬವರ ಮನೆಯ ಹಿಂಭಾಗದಲ್ಲಿ ಮತ್ತು ನಿಟ್ಟೆ ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿದಿದ್ದು, ಅಪಾರ ನಷ್ಟ ಉಂಟಾಗಿದೆ. ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ರಸ್ತೆ ಬದಿ ಹಾಗೂ ಬೆಳ್ಳಣ್ ಗ್ರಾಮದ ಇಂದಾರು ಎಂಬಲ್ಲಿನ ಡೈಮಂಡ್ ಹಿಲ್ ಅಪಾರ್ಟೆಂಟ್ ಬಳಿ ಗುಡ್ಡ ಜರಿದಿದೆ. ಹಿರ್ಗಾನ ಗ್ರಾಮದ ವಿಶಾಲಾಕ್ಷಿ ಶೆಟ್ಟಿಯವರ ಮನೆಗೆ ಹಾನಿಯಾಗಿದೆ.

ಮಂಗಳೂರು: ಗಾಂಜಾ ಸೇವಿಸುತ್ತಿದ್ದ ಯುವಕ ಅರೆಸ್ಟ್

ಮಂಗಳೂರು: ಚಿಲಿಂಬಿಗುಡ್ಡೆ ಮೈದಾನದ ಬಳಿ ಗಾಂಜಾ ಸೇದುತ್ತಿದ್ದ ಯುವಕನನ್ನು ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಯುವಕ ನನ್ನು ಪ್ರೀತಂ ಯಾನೆ ಅಭಿ (33) ಎಂದು ಗುರುತಿಸಲಾಗಿದೆ.ಪ್ರೀತಂನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತು ಎನ್‌ಡಿಪಿಎಸ್ ಕಾಯ್ದೆಯಡಿ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಡುರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಹೊಡೆದಾಟ!

ಮಂಗಳೂರು: ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲಿಯೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು ಬಳಿ ನಡೆದಿದೆ. ಕಾಲೇಜು ಗೇಟ್ ಮುಂಭಾಗದ ರಸ್ತೆಯಲ್ಲಿ ಎರಡು ಪ್ರತ್ಯೇಕ ಬಣ್ಣದ ಯುನಿಫಾರಂ ಧರಿಸಿರುವ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ಕಾಲೇಜು ಬಿಟ್ಟ ಬಳಿಕ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿಗಳ ನಡುವೆ ಹಿಗ್ಗಾಮುಗ್ಗಾವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಸದ್ಯ ಹೊಡೆದಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

Categories
ರಾಜ್ಯ

ರಾಜ್ಯದಲ್ಲಿ ಹೆಚ್ಚಿದ ಕಲಬೆರಕೆ ಮಾಫಿಯಾ!

ರಾಜ್ಯದಲ್ಲಿ ಹೆಚ್ಚಿದ ಕಲಬೆರಕೆ ಮಾಫಿಯಾ!

– ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ವಿಷ?
– ತಿನ್ನೋದೆಲ್ಲವೂ ವಿಷ ಇದ್ದಂತೆ.. ಜೋಪಾನ ಜೋಪಾನ
– ಅತಿಯಾದ ಕೆಮಿಕಲ್, ಎಣ್ಣೆ, ಮಸಾಲಾ ಒಳ್ಳೆಯದಲ್ಲ
– ಕಣ್ಣು ಮುಚ್ಚಿ ಕುಳಿತ ಸ್ಥಳೀಯ ಆಡಳಿತ, ಅಧಿಕಾರಿಗಳು

NAMMUR EXPRESS NEWS

ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಳಸುವ ಬಹುತೇಕ ವಸ್ತುಗಳು ಇತ್ತೀಚಿಗೆ ಕಲ ಬೆರಕೆ ಎಂಬುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಜನ ಜಾಗೃತಿ ವಹಿಸಬೇಕು. ಅಡುಗೆ ಎಣ್ಣೆಗೇ ವಿಷ ಬೆರೆಸಲಾಗುತ್ತಿದೆ. ರಕ್ಕಸ ರೂಪದಲ್ಲಿ ಬೆಳೆದಿರುವ ಕಲಬೆರಕೆ ಜಾಲವು ಅಧಿಕ ಲಾಭದಾಸೆಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಅತಿಯಾದ ಎಣ್ಣೆ ಹಾಗೂ ಕೆಮಿಕಲ್ ಹಾಗೂ ಅತಿಯಾಗಿ ಮಸಾಲೆ ಬೆಳೆಸುವ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಕಾಯಿಲೆಗಳು ಉಲ್ಬಣಿಸುತ್ತಿವೆ.

ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ದುಡ್ಡಿನ ಆಸೆಗೆ ಇತರೆ ಪದಾರ್ಥ ಬೆರಕೆ ಮಾಡಲಾಗುತ್ತಿದೆ. ಆದರೆ ಆಡಳಿತ ಹಾಗೂ ಅಧಿಕಾರಿಗಳು ಡೀಲ್ ಮಾಡಿಕೊಂಡು ಕಣ್ಣು ಮುಚ್ಚಿ ಕುಳಿತಿದ್ದಾರೆ.ದೊಡ್ಡ ಮಿಲ್, ಕಾರ್ಖಾನೆಗಳಲ್ಲಿ, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ವಿವಿಧ ರಾಜ್ಯಗಳಲ್ಲಿ ನಡೆಸಿರುವ ಪರೀಕ್ಷೆಯೂ ಅದನ್ನು ದೃಢಪಡಿಸಿದೆ. ಧಾರಾಳವಾಗಿ ಹಾಗೂ ಕಡಿಮೆ ಬೆಲೆಗೆ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್ ಆಯಿಲ್’ ಅನ್ನು ಅಡುಗೆ ಎಣ್ಣೆಗೆ ಬೆರೆಸುವ ಜಾಲ ಸಕ್ರಿಯವಾಗಿದ್ದು, ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ.

ದೊಡ್ಡ ದೊಡ್ಡ ಕಂಪನಿಗಳು, ವರ್ತಕರು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಜಾಲದೊಂದಿಗೆ ಕೈಜೋಡಿಸಿದ್ದಾರೆ. ಹೃದಯ ಹಾಗೂ ಇತರ ಅಂಗಾಂಗಳನ್ನು

ಹಾನಿಗೊಳಿಸುತ್ತಿರುವ, ರಾಸಾಯನಿಕಗಳಿಂದ ಶುದ್ದೀಕರಿಸಿದ (ರಿಫೈನ್ಸ್) ಅಡುಗೆ ಎಣ್ಣೆಯೇ ಆರೋಗ್ಯಕ್ಕೆ ಉತ್ತಮ ಎಂದು ಬಿಂಬಿಸಲಾಗುತ್ತಿದೆ. ಬಾಟಲಿ, ಪೊಟ್ಟಣಗಳ ಮೇಲೆಶೇ 100ರಷ್ಟು ಪ್ಯೂರ್ ಎಡಿಬಲ್ ಆಯಿಲ್ ಎಂದೇ ಲೇಬಲ್ ಹಾಕಿಕೊಂಡು ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಹೆಸರಾಂತ ಬ್ರಾಂಡ್‌ಗಳ ಒಂದು ಲೀಟರ್ ಅಡುಗೆ ಎಣ್ಣೆ ಪೊಟ್ಟಣಕ್ಕೆ ₹150ರವರೆಗೆ ಇದ್ದರೆ, ಇನ್ನು ಕೆಲವುಗಳ ದರ ಲೀಟರ್‌ಗೆ ₹ 80 ಇದೆ. ಸ್ಪರ್ಧೆ ಜೋರಾದಂತೆ ಕಲಬೆರಕೆಯೂ ಹೆಚ್ಚಾಗುತ್ತಿದೆ.
ಕಲಬೆರಕೆ ಎಣ್ಣೆಯು ಸ್ಥಳೀಯವಾಗಿ ಪೂರೈಕೆ ಆಗುವುದಲ್ಲದೇ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ರಾಜ್ಯಕ್ಕೆ ಸರಬರಾಜಾಗುತ್ತಿದೆ. ತೆಂಗು, ಶೇಂಗಾ, ಸೂರ್ಯಕಾಂತಿ ಬೆಳೆಯುವ ಪ್ರದೇಶಗಳಲ್ಲಿ ಮಿಶ್ರಣ ದಂಧೆ ಹೆಚ್ಚಿದೆ. ಡ್ರಮ್‌ಗಳಲ್ಲಿ ಎಣ್ಣೆ ತಂದು ಅದನ್ನು ಸ್ಥಳೀಯವಾಗಿ ಕ್ಯಾನ್ ಹಾಗೂ ಟಿನ್‌ಗೆ ತುಂಬಿಸುವಾಗಲೂ ಮಿಶ್ರಣ ದಂಧೆ ನಡೆಯುತ್ತಿದೆ.

ಸ್ಥಳೀಯ ಪ್ರಾಡಕ್ಟ್ ಬಳಸಿ… ಬೆಂಬಲಿಸಿ

ಮನೆಯಲ್ಲೇ ತಯಾರಿಸಿದ ಸ್ಥಳೀಯ ಕೈ ರುಚಿಯಾದ ಬ್ರಾಂಡ್ ಬಳಸಿ. ಅವು ಅರೋಗ್ಯಕ್ಕೂ ಹಾನಿ ಆಗಲ್ಲ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಎಲ್ಲಾ ಆಹಾರ ಪದಾರ್ಥ ಮಾಫಿಯಾ ಕೂಡ ಜೋರಾಗಿದೆ. ಬಳಸುವ ಮುನ್ನ ಒಮ್ಮೆ ಯೋಚಿಸಿ ಅಷ್ಟೇ.

Categories
ರಾಜ್ಯ

ಬಿಜೆಪಿ -ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಶುರು

ಬಿಜೆಪಿ -ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಶುರು

– ಹೈಕೋರ್ಟ್‌ನಿಂದಲೇ ಅನುಮತಿ ಪಡೆದ ಬಿಜೆಪಿ
– ರಾಜ್ಯದಲ್ಲಿ ಭಾರೀ ಕಾವು ಮೂಡಿಸಿದ ಪಾದಯಾತ್ರೆ!

NAMMUR EXPRESS NEWS

ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ತೊಲಗಿಸಿ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ನೇರವಾಗಿ ಹೈಕೋರ್ಟ್‌ನಿಂದ ಅನುಮತಿ ಪಡೆಯಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹೋಗಿದ್ದ ಬಿಜೆಪಿ ಮುಖಂಡರು, ಪಾದಯಾತ್ರೆಗೆ ಅನುಮತಿ ಪಡೆದುಕೊಂಡಿದ್ದಾರೆ.

ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ ಬೆನ್ನಲ್ಲೇ ಸರ್ಕಾರದಿಂದ ಸಮಸ್ಯೆ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿ ಉಚ್ಚ ನ್ಯಾಯಾಲಯಕ್ಕೆ ತೆರಳಿತ್ತು. ಶಾಸಕ ಪಿ. ರಾಜೀವ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದನ್ ಗೌಡರ್‌, ಅನುಮತಿ ನೀಡಿದ್ದು, ಪಾದಯಾತ್ರೆ ಸಾಗುವ ಜಾಗದಲ್ಲಿ ಭದ್ರತೆ ನೀಡುವಂತೆ ಡಿಸಿ, ಎಸ್ ಪಿ ಗೆ ಸೂಚನೆ ನೀಡಿದ್ದಾರೆ.

ಚಾಮುಂಡೇಶ್ವರಿ ದರ್ಶನ..!

ಮುಡಾ ಹಗರಣ ವಿರುದ್ದ ಇಂದಿನಿಂದ ನಡೆಯಲಿರುವ ಮೈಸೂರು ಚಲೋ ಪಾದಯಾತ್ರೆ ಪ್ರಾರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ದೇವಿ ಚಾಮುಂಡೇಶ್ವರಿ ಮೊರೆಹೋದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ನಾಡದೇವತೆ ಚಾಮುಂಡಿ ತಾಯಿ ದರ್ಶನ ಪಡೆದರು. ಪಾದಯಾತ್ರೆ ಯಶಸ್ಸಿಗೆ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿ, ದಂಪತಿ ಸಮೇತ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಜಯೇಂದ್ರಗೆ ಮಾಜಿ ಶಾಸಕ ನಾಗೇಂದ್ರ ಸೇರಿ ಮುಖಂಡರು ಸಾಥ್ ನೀಡಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. “ಭ್ರಷ್ಟ ಕಾಂಗ್ರೆಸ್‌ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಇಂದು 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗಿದ್ದು, ಏಳು ದಿನಗಳ ಪಾದಯಾತ್ರೆ ಸಾಗುವ ಮಾರ್ಗದ ವಿವರವನ್ನು ಇಲ್ಲಿ ನೀಡಲಾಗಿದೆ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 124 ಕಿ.ಮೀ ಪಾದಯಾತ್ರೆ ಸಾಗಲಿದ್ದು, ಸಮಾರೋಪ ಸಮಾರಂಭ ಸೇರಿ ಒಟ್ಟು ಎಂಟು ದಿನಗಳ ಕಾರ್ಯಕ್ರಮದ ಮಾಹಿತಿ ಇಲ್ಲಿದೆ.

ಪಾದಯಾತ್ರೆ ಸಾಗುವ ಮಾರ್ಗದ ವಿವರ

ಆ.3- ಕೆಂಗೇರಿಯಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ
ಆ.4- ಬಿಡದಿಯಿಂದ ಹೊರಟು ಕೆಂಗಲ್‌ನಲ್ಲಿ ಹಾಲ್ಟ್
ಆ.5- ಕೆಂಗಲ್ ನಿಂದ ಹೊರಟು ನಿಡಘಟ್ಟದಲ್ಲಿ ವಾಸ್ತವ್ಯ
ಆ.6- ನಿಡಘಟ್ಟದಿಂದ ಹೊರಟು ಮಂಡ್ಯ
ಆ.7- ಮಂಡ್ಯದಿಂದ ಹೊರಟು ತೂಬಿನಕೆರೆಯಲ್ಲಿ ವಾಸ್ತವ್ಯ
ಆ.8- ತೂಬಿನ ಕೆರೆಯಿಂದ ಹೊರಟು ಶ್ರೀರಂಗಪಟ್ಟಣದಲ್ಲಿ ಹಾಲ್ಟ್
ಆ.9- ಶ್ರೀರಂಗಪಟ್ಟಣದಿಂದ ಹೊರಟು ಮೈಸೂರು ಹೊರವಲಯದಲ್ಲಿ ವಾಸ್ತವ್ಯ
ಆ.10- ಮೈಸೂರು ಹೊರವಲಯದಿಂದ ಕೇಂದ್ರ ನಾಯಕರ ಜತೆ ಪಾದಯಾತ್ರೆ ಹೊರಟು ಸಮಾರೋಪ ಸಮಾರಂಭದ ವೇದಿಕೆ ತಲುಪುವುದು.

ನಗರದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಕಮಿಷನ‌ರ್:

ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಹಿನ್ನೆಲೆ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಪ್ರತಿಕ್ರಿಯಿಸಿ, ಎಲ್ಲಿಂದ ಯಾವ ರೀತಿ ಪಾದಯಾತ್ರೆ ಮಾಡುತ್ತಾರೋ ಅಂತ ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆ, ರ್‍ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.ಪಾದಯಾತ್ರೆ ಹಿನ್ನಲೆಯಲ್ಲಿ ಕೆಂಗೇರಿಯಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ, 100 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 2 ಎಸಿಪಿ, 7 ಜನ ಇನ್ಸೆಕ್ಟ‌ರ್ 15 ಜನ ಸಬ್ ಇನ್ಸೆಕ್ಟರ್ ಸೇರಿ ನೂರು ಜನರಿಂದ ಬಂದೋಬಸ್ತ್ ಮಾಡಲಾಗಿದೆ. ರಾಮನಗರದವರೆಗೂ ಬೆಂಗಳೂರು ನಗರ ಪೊಲೀಸರು ಬಂದೋಬಸ್ತ್ ಒದಗಿಸಲಿದ್ದಾರೆ.

Categories
ಮೈಸೂರು ಹಾಸನ

ಡ್ಯಾಂಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ..!

ಡ್ಯಾಂಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ..!

– ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಹೈಅಲರ್ಟ್
– ಕಬಿನಿ ಜಲಾಶಯಕ್ಕೆ 57,819 ಕ್ಯೂಸೆಕ್ ಒಳಹರಿವು

NAMMUR EXPRESS NEWS
ಮಂಡ್ಯ: ಕರ್ನಾಟಕದಾದ್ಯಂತ ವರುಣಾರ್ಭಟ ಹೆಚ್ಚಿದ್ದು, ಬಹುತೇಕ ಡ್ಯಾಂಗಳು ತುಂಬಿ ಹರಿಯುತ್ತಿದೆ. ಅದರಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ವಯನಾಡಿನಲ್ಲಿ ಮಳೆ ಅಬ್ಬರಕ್ಕೆ ರಾಜ್ಯದ ಡ್ಯಾಮ್‌ಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನಲೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಿದ್ದು, ಕಾವೇರಿ, ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಮಳೆಯ ಅಬ್ಬರಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಿಸಿದ್ದು, ಕೆಆರ್‌ಎಸ್‌ ಡ್ಯಾಂನಿಂದ 1,10,000 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟರೆ, ಕಬಿನಿ ಜಲಾಶಯದಿಂದ 80,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗಿದೆ. ಜೊತೆಗೆ ಯಾವಾಗ ಬೇಕಾದರೂ 2,00,000 ಕ್ಯೂಸೆಕ್‌ಗೂ ಹೆಚ್ಚಾಗಬಹುದು. ಹೀಗಾಗಿ ನದಿ ಪಾತ್ರದ ಜನರು ನದಿಯ ತಟಕ್ಕೆ ಹೋಗಬೇಡಿ, ಜನರು ತಮ್ಮ ಆಸ್ತಿಪಾಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಸುರಕ್ಷಿತ ಪ್ರದೇಶಗಳಲ್ಲಿ ನದಿ ದಂಡೆಯ ಜನರು ಇರಬೇಕೆಂದು ಕಾವೇರಿ ನೀರಾವರಿ ನಿಗಮ ಅಲರ್ಟ್ ಘೋಷಿಸಿದೆ.

ಕಬಿನಿ ಜಲಾಶಯಕ್ಕೆ 57,819 ಕ್ಯೂಸೆಕ್ ಒಳಹರಿವು

ಮೈಸೂರು: ಕೇರಳದ ವಯನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಒಟ್ಟು 57,819 ಕ್ಯೂಸೆಕ್ ಒಳಹರಿವು ಇದ್ದು, ಕಬಿನಿ ಜಲಾಶಯದ ಹೊರ ಹರಿವು 80 ಸಾವಿರ ಕ್ಯೂಸೆಕ್‌ ಇದೆ. ಇನ್ನು ಜಲಾಶಯ ಗರಿಷ್ಟ ಮಟ್ಟ 84 ಅಡಿ ಇದ್ದು, ಈಗಾಗಲೇ 83.14 ಅಡಿ ನೀರು ತುಂಬಿದೆ. ಈ ಹಿನ್ನಲೆ ನಂಜನಗೂಡಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೂಡಲೇ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಜನರಿಗೆ ನೀರಿಗಿಳಿಯದಂತೆ ಜಿಲ್ಲಾಧಿಕಾರಿ ಮನವಿ!

ಇನ್ನು ನಂಜನಗೂಡು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ ನೀಡಿ, ಕಾಳಜಿ ಕೇಂದ್ರಕ್ಕೆ ಸಂತ್ರಸ್ತರನ್ನು ಸ್ಥಳಾಂತರ ಮಾಡಿದರು. ಜೊತೆಗೆ ಜನರಿಗೆ ನೀರಿಗಿಳಿಯದಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು. ಈ ವೇಳೆ ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಸಾಥ್ ನೀಡಿದರು.