Categories
ಶಿವಮೊಗ್ಗ

ಟಾಪ್ ನ್ಯೂಸ್

ಟಾಪ್ ನ್ಯೂಸ್

ಶಿವಮೊಗ್ಗ: ವಿದ್ಯುತ್‌ ಶಾಕ್‌ನಿಂದ ಆನೆ ಸಾವು,ಇಬ್ಬರು ಆರೋಪಿಗಳ ಸೆರೆ
– ಶಿವಮೊಗ್ಗ: ದೇವಸ್ಥಾನದ ಹತ್ತಿರ ಬಂದು ಬೋನಿಗೆ ಬಿದ್ದ ಕರಡಿ
– ಶಿವಮೊಗ್ಗ : ಬಸ್‌ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ
– ಭದ್ರಾವತಿ: ಮನೆಗಳ್ಳತನದ ಆರೋಪಿಯ ಬಂಧನ
– ಶಿರಾಳಕೊಪ್ಪ : ಆನ್‌ಲೈನ್ ವಂಚನೆಯಿಂದ 74 ಲಕ್ಷ ಕಳೆದುಕೊಂಡ ವ್ಯಾಪಾರಿ

NAMMUR EXPRESS NEWS
ಶಿವಮೊಗ್ಗ : ಆಯನೂರಿನ ಬಳಿಯ ವೀರಗಾರನ ಬೈರನ ಕೊಪ್ಪದಲ್ಲಿ ಜೋಳದ ಹೊಲಕ್ಕೆ ತೋಡಿರುವ ಕಂದಕಕ್ಕೆ ಆನೆಯೊಂದು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆದಿದೆ. ನಾಲ್ವರು ಪಶುವೈದ್ಯರು, ಅರಣ್ಯ ವನ್ಯ ಜೀವಿ ವಿಭಾಗದ ಡಿಎಫ್ ಒ ಪ್ರಸನ್ನ ಪಟಗಾರ್ ಮತ್ತು ಲಯನ್ ಸಫಾರಿಯ ಡಿಎಫ್ ಒ ಆಮರಾಕ್ಷರ್, ತಹಶೀಲ್ದಾರ್ ಗಿರೀಶ್ ಮತ್ತು ಗ್ರಾಮಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಆನೆಯ ಪೋಸ್ಟ್ ಮಾರ್ಟಂ ನಡೆದಿದೆ. ಆನೆ ಸತ್ತು ಮೂರು ದಿನಗಳ ನಂತರ ಮರಣೋತ್ತರ ಪರೀಕ್ಷೆ ನಡೆದಿದ್ದು ಆನೆಯ ಮೃತದೇಹ ಊದಿಕೊಂಡು ದುರ್ವಾಸನೆ ಹೊಡೆಯಲು ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಆಧಾರದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಹನುಮಂತ ನಾಯ್ ಮತ್ತು ಓರ್ವನನ್ನು ಬಂಧನಕ್ಕೊಳಪಡಿಸಿ ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ. ಪ್ರಾಥಮಿಕ ವರದಿಯ ಮೇಲೆ ದಾಖಲಾದ ಎಫ್ ಐಆರ್ ಆಧಾರದ ಮೇರೆಗೆ ವಿದ್ಯುತ್ ಶಾಕ್ ನಿಂದ ಆನೆ ಸತ್ತಿರುವುದು ತಿಳಿದು ಬಂದಿದೆ. ಅದರ ಆಧಾರದ ಮೇರೆಗೆ ಜಮೀನಿನ ಮಾಲೀಕ ಸೇರಿದಂತೆ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿದೆ. ಆನೆಮೃತ ದೇಹದ ಸ್ಯಾಂಪಲ್ಸ್ & ಸಂಗ್ರಹಿಸಲಾಗಿದೆ ಎಂದು ಡಿಎಫ್ ಒ ಪ್ರಸನ್ನ ಪಟಗಾರ್ ಮಾಹಿತಿ ನೀಡಿದ್ದಾರೆ.

– ಶಿವಮೊಗ್ಗ: ದೇವಸ್ಥಾನದ ಹತ್ತಿರ ಬಂದು ಬೋನಿಗೆ ಬಿದ್ದ ಕರಡಿ

ಶಿವಮೊಗ್ಗ : ಹೊಳೆಹೊನ್ನೂರು ಭಾಗದಲ್ಲಿ, ಡಣಾಯಕಪುರ ಗ್ರಾಮದಲ್ಲಿ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸ್ಥಳೀಯ ಕಾಲಭೈರವೇಶ್ವರ ದೇವಸ್ಥಾನದ ಸಮೀಪ ಕರಡಿಯು ಸೆರೆಯಾಗಿದೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕರಡಿಯಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಕತ್ತಲ ಹೊತ್ತಲ್ಲಿ ಇಲ್ಲಿ ಹೆಚ್ಚು ಮಲಗುತ್ತಿದ್ದ ಕರಡಿ ಜನರನ್ನ ಭಯ ಬೀಳಿಸಿತ್ತು. ಸ್ಥಳೀಯರು ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುವ ಸನ್ನಿವೇಶ ಕರಡಿ ನಿರ್ಮಾಣ ಮಾಡಿತ್ತು. ಈ ಆಧುನಿಕ ಕರಡಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ಹೊಳೆಹೊನ್ನೂರು ಅರಣ್ಯ ಸಿಬ್ಬಂದಿ ಮೂರು ಕಡೆ ಬೋನ್ ಇರಿಸಿದ್ದರು. ದೇವಸ್ಥಾನದ ಸಮೀಪದ ಬೋನಿಗೆ ಕರಡಿ ಬಿದ್ದಿದೆ. ಇನ್ನೂ ಕರಡಿಯನ್ನ ಸಂರಕ್ಷಿಸಿರುವ ಅರಣ್ಯ ಇಲಾಖೆ ಅದನ್ನು ಸಂರಕ್ಷಿತ ಕಾಡಿಗೆ ಬಿಟ್ಟಿದ್ದಾರೆ.

– ಶಿವಮೊಗ್ಗ : ಬಸ್‌ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ

ಶಿವಮೊಗ್ಗ : ಹೊಸಮನೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬ್ಯಾಗ್ ಕಳವು ಮತ್ತು ಮನೆಕಳ್ಳತನ ಪ್ರಕರಣಗಳು ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದ ನಿವಾಸಿ ಪ್ರಭಾವತಿ ಎಂಬುವರು ಭದ್ರಾವತಿ ಬಸ್‌ ನಿಲ್ದಾಣಕ್ಕೆ ಬಂದಾಗ ಮಹಿಳೆಯೊಬ್ಬರು ಬ್ಯಾಗ ಹಿಡಿದು ಕಳುವಾದ ಪ್ರಕರಣವನ್ನ ಬೇಧಿಸಿದ ಪೊಲೀಸರು 48 ಗಂಟೆಯ ಒಳಗೆ ಆರೋಪಿಯನ್ನ ಬಂಧಿಸಿ 20 ಲಕ್ಷ ರೂ ಮೌಲ್ಯದ 276.75 ಗ್ರಾಂ ತೂಕದ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಮಲಮ್ಮ ಎಂದು ಗುರುತಿಸಲಾಗಿದ್ದು ಭದ್ರಾವತಿ ನಿವಾಸಿಯಾಗಿದ್ದಾರೆ. ಚಿನ್ನಾಭರಣದ ಜೊತೆಗೆ 16 ಸಾವಿರ ರೂ ಮೌಲ್ಯದ ಎರಡು ರೇಷ್ಮೆ ಸೀರೆಯೂ ಪತ್ತೆಯಾಗಿದೆ.

– ಭದ್ರಾವತಿ: ಮನೆಗಳ್ಳತನದ ಆರೋಪಿಯ ಬಂಧನ

ಭದ್ರಾವತಿ: ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿನೋದ್ ಜಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಹಬ್ಬಕ್ಕೆ ತೆರಳಿದಾಗ 20 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣವನ್ನ ಕದ್ದಕೊಂಡು ಹೋದ ಪ್ರಕರಣ ದಾಖಲಾಗಿತ್ತು. ಹೊಸಮನೆ ಕೇಶವಾಪುರದ ಐಟಿ ಉದ್ಯೋಗಿ ನಿತಿನ್ ಎಂಬ 27 ವರ್ಷದ ಯುವಕನನ್ನ ಪತ್ತೆ ಮಾಡಿದ ಪೊಲೀಸರು ಆತನಿಂದ 259 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

– ಶಿರಾಳಕೊಪ್ಪ: ಆನ್‌ಲೈನ್ ವಂಚನೆಯಿಂದ 74 ಲಕ್ಷ ಕಳೆದುಕೊಂಡ ವ್ಯಾಪಾರಿ

ಶಿರಾಳಕೊಪ್ಪ : ಶಿರಾಳಕೊಪ್ಪ ಪಟ್ಟಣದ ನೆಹರೂ ಕಾಲೊನಿ ವ್ಯಾಪಾರಿ ಯೊಬ್ಬರು ಅನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 34.61 ಲಕ್ಷ ಕಳೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಾಪಾರಿ ಮೊಬೈಲ್‌ಗೆ ಬ್ಯಾಂಕ್‌ ಹೆಸರು ಇರುವ ಡಾಟ್ ಎಪಿಕೆ ಎಂಬ ಫೈಲ್‌ನ ಲಿಂಕ್ ಬಂದಿದೆ. ಬ್ಯಾಂಕ್‌ನ ಹೆಸರು ಇದ್ದುದರಿಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ವಂಚಕರು ಅವರ ಖಾತೆ ಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ವ್ಯಾಪಾರಕ್ಕಾಗಿ ಸಾಲ ಮಾಡಿದ್ದ ಅವರು ಉಳಿತಾಯ ಖಾತೆಯಲ್ಲಿ ಆ ಹಣ ಇಟ್ಟುಕೊಂಡಿದ್ದರು. ಖಾತೆಯಿಂದ ಮೊದಲು 3,61,469 ಮತ್ತು ನಂತರ 74,000 ಮೊತ್ತ ಕಡಿತಗೊಂಡಿದೆ. ಈ ಕುರಿತು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ‘ಪಿಎಂ ವಿದ್ಯಾಲಕ್ಷ್ಮಿ’

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ‘ಪಿಎಂ ವಿದ್ಯಾಲಕ್ಷ್ಮಿ’
– ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಖಾತ್ರಿರಹಿತ ಶಿಕ್ಷಣ ಸಾಲ ಭಾಗ್ಯ
– 10 ಲಕ್ಷ ರು.ವರೆಗೆ ಶಿಕ್ಷಣ ಸಾಲ ನೀಡಲು ಸಂಪುಟ ಅಸ್ತು

NAMMUR EXPRESS NEWS
ನವದೆಹಲಿ :
ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌, ‘ಆರ್ಥಿಕ ಸಮಸ್ಯೆಗಳಿಂದಾಗಿ ದೇಶದ ಯುವಕರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲು ಈ ಯೋಜನೆ ರೂಪಿಸಲಾಗಿದೆ’ ಎಂದರು.

ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಕ್ಯುಎಚ್‌ಇಐ) ಪ್ರವೇಶ ದೊರೆತ ವಿದ್ಯಾರ್ಥಿಗಳಿಗೆ, ತಮ್ಮ ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಕೊಲಾಟರಲ್‌ ರಹಿತ ಅಥವಾ ಖಾತರಿದಾರರಿಲ್ಲದೆ ಬ್ಯಾಂಕ್‌ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸಾಲ ನೀಡಲಾಗುತ್ತದೆ. ಅಂದರೆ, ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಪರಿವಾರದ ಹಾಗೂ ಯಾವುದೇ ಶಿಷ್ಯವೇತನ ಸೌಲಭ್ಯ ಪಡೆಯದ ವಿದ್ಯಾರ್ಥಿಗಳಿಗೆ 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಸರ್ಕಾರವೇ ಖಾತರಿ ಕೊಡಲಿದೆ. ಅಂತೆಯೇ, ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು.

– ವಿದ್ಯಾರ್ಥಿಗಳು ಅರ್ಜಿ ಹೇಗೆ ಹಾಕಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಏಕೀಕೃತ ಪೋರ್ಟಲ್‌ ಪರಿಚಯಿಸಲಿದೆ. 860 ಕ್ಯುಎಚ್‌ಇಐ ಸಂಸ್ಥೆಗಳ 22 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಮರ್ಥರಾಗಿದ್ದಾರೆ. ಯೋಜನೆಯ ಲಾಭ ಪಡೆಯುವವರ ಪಟ್ಟಿಯನ್ನು ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ ಆಧರಿಸಿ ಪ್ರತಿ ವರ್ಷ ಪರಿಷ್ಕರಿಸಲಾಗುವುದು.

– ಯಾರು ಅರ್ಹರು?

– ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬದ ಮಕ್ಕಳು ಅರ್ಹರು
– ಇವರು ಸರ್ಕಾರದಿಂದ ಬೇರಾವುದೇ ಶಿಷ್ಯ ವೇತನ ಸೌಲಭ್ಯ ಪಡೆಯುತ್ತಿರಬಾರದು
– 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಕೇಂದ್ರ ಸರ್ಕಾರವೇ ಖಾತರಿ ಕೊಡಲಿದೆ
– ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ದೀರ್ಘಕಾಲದ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಆದರೆ ಕೆಲವರು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಯೋಜಿಸಿ. ಇದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ. ಇಂದು ಭೂಮಿ ಅಥವಾ ವಾಹನ ಖರೀದಿಗೆ ಶುಭ ದಿನವಾಗಿದೆ.

** ವೃಷಭ ರಾಶಿ :
ಇಂದು ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಕಚೇರಿಯಲ್ಲಿ ಕೆಲಸಕ್ಕಾಗಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ. ಆಸ್ತಿ ಖರೀದಿ ಸಾಧ್ಯ.

** ಮಿಥುನ ರಾಶಿ :
ಇಂದು ಉದ್ಯೋಗದಲ್ಲಿ ಹೊಸ ಕೆಲಸಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಇಂದು ವ್ಯಾಪಾರಸ್ಥರು ಪಾಲುದಾರಿಕೆ ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತಾರೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವೃತ್ತಿಜೀವನದ ಅಡೆತಡೆಗಳನ್ನು ಜಯಿಸಲು, ಖಂಡಿತವಾಗಿಯೂ ಕುಟುಂಬ ಸದಸ್ಯರ ಸಲಹೆಗೆ ಗಮನ ಕೊಡಿ. ಇಂದು ಭೂಮಿ ಅಥವಾ ವಾಹನ ಖರೀದಿಯೂ ಸಾಧ್ಯ.

** ಕರ್ಕಾಟಕ ರಾಶಿ :
ಕರ್ಕ ರಾಶಿಯವರಿಗೆ ಇಂದು ಅದೃಷ್ಟ ನಿಮ್ಮ ಕಡೆ ಇರುತ್ತದೆ. ನಿಮ್ಮ ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಹಣದ ಒಳಹರಿವುಗಾಗಿ ಹೊಸ ಮಾರ್ಗಗಳನ್ನು ರಚಿಸಲಾಗುವುದು. ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ವೃತ್ತಿ ಸಂಬಂಧಿತ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಇಂದು ನಿಮ್ಮ ಮನಸ್ಸು ಅತಿಯಾದ ಖರ್ಚುಗಳಿಂದ ತೊಂದರೆಗೊಳಗಾಗುತ್ತದೆ. ಹೊಸ ಬಜೆಟ್ ಮಾಡಿ ಮತ್ತು ಪ್ರಮುಖ ವಿಷಯಗಳ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಖರೀದಿಗಳನ್ನು ಮಾಡಿ. ಕೆಲವರಿಗೆ ಮೂಡ್ ಸ್ವಿಂಗ್ ಸಮಸ್ಯೆಗಳಿರಬಹುದು. ಇದರಿಂದಾಗಿ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಹಾರವನ್ನು ಯೋಜಿಸಬಹುದು. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಿ.

** ಕನ್ಯಾ ರಾಶಿ :
ಇಂದು ನಿಮ್ಮ ಫಿಟ್ನೆಸ್ ದಿನಚರಿಯಲ್ಲಿ ಹೊಸ ವ್ಯಾಯಾಮಗಳನ್ನು ಸೇರಿಸಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇಂದು ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುವಿರಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಯಶಸ್ವಿ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿರಿ. ಹೊಸ ಆಸ್ತಿ ಅಥವಾ ಮನೆಯನ್ನು ಖರೀದಿಸುವುದು ಇಂದು ಸಾಧ್ಯ.

** ತುಲಾ ರಾಶಿ :
ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳಾಗಲಿವೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ವೃತ್ತಿ ಸಮಸ್ಯೆಗಳನ್ನು ಪರಿಹರಿಸಲು ಹಿರಿಯರ ಸಹಾಯ ಪಡೆಯಿರಿ. ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವ್ ಅಥವಾ ರಾತ್ರಿಯ ದಿನಾಂಕವನ್ನು ಯೋಜಿಸಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ.

** ವೃಶ್ಚಿಕ ರಾಶಿ :
ಇಂದು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಹಣದ ಅವಶ್ಯಕತೆ ಹೆಚ್ಚಾಗುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಉದ್ಯಮಿಗಳು ಅನೇಕ ಸ್ಥಳಗಳಿಂದ ಹಣವನ್ನು ಪಡೆಯುತ್ತಾರೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ.

** ಧನಸ್ಸು ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಇಂದು ನಿಮ್ಮ ಕೆಲವು ಹಳೆಯ ನೆನಪುಗಳು ಮತ್ತೆ ಮರುಕಳಿಸಬಹುದು. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಅವಕಾಶ ಪಡೆಯಬಹುದು. ನಿಮ್ಮ ಕುಟುಂಬ ಸದಸ್ಯರ ಸಲಹೆಯನ್ನು ಅನುಸರಿಸುವ ಮೂಲಕ ಪ್ರಗತಿ ಸಾಧ್ಯವಿದೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಕೆಲವು ಹೊಸ ಯೋಜನೆಗಳನ್ನು ಮರುಪ್ರಾರಂಭಿಸುವ ಬಗ್ಗೆ ಮಾತನಾಡಬಹುದು.

** ಮಕರ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಕುಟುಂಬ ಸಮೇತ ಪ್ರವಾಸ ಮಾಡುವ ಅವಕಾಶವಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಇಂದು ನೀವು ಹೊಸ ಆಸ್ತಿಯನ್ನು ಉತ್ತಮ ಬೆಲೆಗೆ ಖರೀದಿಸುವ ಅವಕಾಶವನ್ನು ಪಡೆಯುತ್ತೀರಿ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ..

** ಕುಂಭ ರಾಶಿ :
ಇಂದು ನೀವು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಇಂದು ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ. ನಿಮ್ಮ ವೃತ್ತಿಜೀವನದ ಗುರಿಗಳ ಮೇಲೆ ಕೇಂದ್ರೀಕರಿಸಿ. ಯಶಸ್ಸನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿರಿ. ಕಚೇರಿಯಲ್ಲಿ ಕೆಲಸದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

** ಮೀನ ರಾಶಿ :
ಮೀನ ರಾಶಿಯವರು ಇಂದು ಬಹುಕಾಲದಿಂದ ಬಾಕಿ ಉಳಿದಿರುವ ಹಣವನ್ನು ಮರಳಿ ಪಡೆಯುವರು. ಕುಟುಂಬದವರ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.ವೃತ್ತಿಜೀವನದಲ್ಲಿ ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ನಿಗಾ ಇರಿಸಿ. ಇಂದು ನೀವು ಕೆಲಸಕ್ಕಾಗಿ ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ.

Categories
ಬೆಂಗಳೂರು

ಚನ್ನಪಟ್ಟಣದಲ್ಲಿ ಆರ್.ಎಂ, ಕಿಮ್ಮನೆ ಪ್ರಚಾರ!

ಚನ್ನಪಟ್ಟಣದಲ್ಲಿ ಆರ್.ಎಂ, ಕಿಮ್ಮನೆ ಪ್ರಚಾರ!
– ಪಟಾಕಿ ಹೊಡೆದು ಮಂಜುನಾಥ ಗೌಡರ ಸ್ವಾಗತಿಸಿದ ಕಾರ್ಯಕರ್ತರು
– ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಯೋಗೇಶ್ವರ್ ಪರ ಕಿಮ್ಮನೆ ಮತ ಪ್ರಚಾರ

NAMMUR EXPRESS NEWS
ಚನ್ನಪಟ್ಟಣ ಉಪಚುಣಾವಣೆ ಸಹಕಾರ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ರಾಜ್ಯ ಸಹಕಾರ ನಾಯಕರು ಆದ ಡಾ. ಆರ್.ಎಂ.ಮಂಜುನಾಥ ಗೌಡ ಚನ್ನಪಟ್ಟಣಕ್ಕೆ ಭೇಟಿ ನೀಡಿ ಮತ ಪ್ರಚಾರ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಂಗನೂರು ಹೋಬಳಿ ಪ್ರಚಾರ ಸಭೆಯ ಪೂರ್ವಭಾವಿಯಾಗಿ ಸಭೆ ನಡೆಸಿದ ಡಾ ಆರ್ ಎಂ ಮಂಜುನಾಥ ಗೌಡ ಅವರು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಹಾರ ಹಾಕಿ ಗೌರವಿಸಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಗೆಲುವಿಗೆ ಶ್ರಮವಹಿಸೊಣ ಎಂದರು. ಚನ್ನಪಟ್ಟಣದ ಮುಖ್ಯ ದ್ವಾರದಲ್ಲಿ ಪಟಾಕಿ ಸಿಡಿಸಿ ಡಾ ಆರ್ ಎಂ ಮಂಜುನಾಥ ಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾರಹಾಕಿ ಸ್ವಾಗತಿಸಿದರು. ರಾಜ್ಯ ಕಾಂಗ್ರೆಸ್ ಪ್ರಮುಖರಾದ ಹಮೀದ್ ಪಾಳ್ಯ, ಸುಕೇಶ್ ಕೊಣಂದೂರು ಜೊತೆಯಲ್ಲಿ ಇದ್ದರು.

ಕಿಮ್ಮನೆ, ದಿನೇಶ್ ಗುಂಡೂರಾವ್, ಯತಿಂದ್ರ ಪ್ರಚಾರ

ಮಾಜಿ ಸಚಿವರು, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿ ಸ್ಥಳೀಯ ನಾಯಕರ ಜತೆ ಮಾತುಕತೆ ನಡೆಸಿದರು. ಚನ್ನಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಪರವಾಗಿ ಮತಯಾಚನೆ ಮಾಡಿದರು. ಕಿಮ್ಮನೆ ಅವರ ಜತೆಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಭವ್ಯ ನರಸಿಂಹಮೂರ್ತಿ ಇತರರು ಇದ್ದರು.

Categories
ಅಡಿಕೆ-ದರ

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೇಗಿದೆ?

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೇಗಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಬೆಟ್ಟೆ: 46200- 56549

ಸರಕು: 46899- 91296

ಗೊರಬಲು: 17100- 32307

ರಾಶಿ: 31138- 50006

Categories
ರಾಜ್ಯ

ಡೊನಾಲ್ಡ್ ಟ್ರಂಪ್ ಮತ್ತೆ ಅಮೇರಿಕಾ ಸಾರಥಿ!.

ಡೊನಾಲ್ಡ್ ಟ್ರಂಪ್ ಮತ್ತೆ ಅಮೇರಿಕಾ ಸಾರಥಿ!.
– ಕಮಲಾ ಹ್ಯಾರೀಸ್ ನಿರಾಸೆ+ ಟ್ರಂಪ್ ಭರ್ಜರಿ ಗೆಲುವು
– 2ನೇ ಬಾರಿಗೆ ಅಧಿಕಾರದ ಜೊತೆಗೆ 4 ವರ್ಷ ಅಮೆರಿಕಾ ಅಧ್ಯಕ್ಷ
– ಟ್ರಂಪ್ ಗೆಲುವಿಗೆ ಅಭಿನಂದಿಸಿದ ಪ್ರಧಾನಿ ಮೋದಿ

NAMMUR EXPRESS NEWS
ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ. ಈ ಮೂಲಕ ಅಮೆರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್​​​ ಆಯ್ಕೆಯಾಗಿದ್ದಾರೆಬೆಳಗ್ಗೆಯಿಂದಲೇ ಮತ ಎಣಿಕೆ ಬಿರುಸಿನಿಂದ ನಡೆದಿದ್ದು, ಆರಂಭಿಕ ಹಂತದಿಂದಲೇ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್​ ಅವರು ಮುನ್ನಡೆ ಸಾಧಿಸಿದ್ರು. ಒಂದೆಡೆ ಡೊನಾಲ್ಡ್‌ ಟ್ರಂಪ್​ ಮುನ್ನಡೆ ಸಾಧಿಸಿದ್ರೆ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರಿಗೆ ಭಾರೀ ಹಿನ್ನಡೆ ಆಗಿದೆ. ಡೊನಾಲ್ಡ್​ ಟ್ರಂಪ್​​ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಮುಂದಿನ 4 ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಲಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ಶ್ವೇತಭವನದಲ್ಲಿ ಅಧಿಕಾರ​ ಮಾಡಲಿದ್ದಾರೆ.

– ಟ್ರಂಪ್ ಗೆಲುವಿಗೆ ಅಭಿನಂದಿಸಿದ ಮೋದಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಎಕ್ಸ್‌ನಲ್ಲಿ ಡೊನಾಲ್ಡ್ ಟ್ರಂಪ್‌ ಜತೆಗಿರುವ ಫೋಟೊವನ್ನು ಪೋಸ್ಟ್ ಮಾಡಿದ್ದು, ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ನನ್ನ ಸ್ನೇಹಿತನಿಗೆ ಹೃತೂರ್ವಕ ಅಭಿನಂದನೆಗಳು.
ನಮ್ಮ ಜನರ ಯೋಗಕ್ಷೇಮಕ್ಕಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ. ಹಿಂದಿನಂತೆಯೇ ಭಾರತ-ಯುಎಸ್ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ಸಹಕಾರವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

ಮತದಾನ ಹೇಗೆ?

ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲೆಕ್ಟೋರಲ್ ಕಾಲೇಜ್ ಮತಗಳ ಎಣಿಕೆ ನಡೆಯುತ್ತಿದೆ. ಅಮೆರಿಕದಲ್ಲಿ ಒಟ್ಟು 538 ಚುನಾವಣಾ ಮತಗಳಿವೆ. ಇವು 50 ರಾಜ್ಯಗಳು ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಿಂಗಡಿಸಲ್ಪಟ್ಟಿವೆ. ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಚುನಾವಣಾ ಮತಗಳ ಸಂಖ್ಯೆ ಹೆಚ್ಚು 270 ಅಥವಾ ಅದಕ್ಕಿಂತ ಹೆಚ್ಚು ಚುನಾವಣಾ ಮತಗಳನ್ನು ಪಡೆಯುವ ಅಭ್ಯರ್ಥಿಗೆ ಅಧ್ಯಕ್ಷರಾಗುವ ಅವಕಾಶ ಸಿಗುತ್ತದೆ. ಬುಧವಾರ ಮಧ್ಯಾಹ್ನದ ವೇಳೆಗೆ ಬಂದ ಫಲಿತಾಂಶಗಳ ಪ್ರಕಾರ ಟ್ರಂಪ್ 266 ಚುನಾವಣಾ ಮತಗಳನ್ನು ಗೆದ್ದಿದ್ದಾರೆ.

 

Categories
ತೀರ್ಥಹಳ್ಳಿ

ಕ್ರಷರ್ ಕಲ್ಲುಪುಡಿ ಘಟಕದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು!

ಕ್ರಷರ್ ಕಲ್ಲುಪುಡಿ ಘಟಕದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು!
– ಬಿದರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ
– ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ
– ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಅಕ್ರಮ: ಗ್ರಾಮಸ್ಥರ ಶಂಕೆ
– ಪಶ್ಚಿಮ ಘಟ್ಟದ ತಪ್ಪಲಲ್ಲಿ ಮತ್ತೆ ಕಲ್ಲು ಗಣಿಗಾರಿಕೆ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಬಿದರಗೋಡು ಗ್ರಾಮದ ಸ.ನಂ.73ರಲ್ಲಿನ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿ ಗುತ್ತಿಗೆ ಮತ್ತು ಸ್ಟೋನ್ ಕ್ರಷರ್ ಕಲ್ಲುಪುಡಿ ಘಟಕಕ್ಕೆ ಮಂಜೂರು ಮಾಡುವ ವಿಚಾರದಲ್ಲಿ ಗ್ರಾಮಸ್ಥರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ. ನ.6ರಂದು ತಾಲ್ಲೂಕು ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಮನವಿ ನೀಡಿ ಈ ಗಣಿ ಗಾರಿಕೆ ಮತ್ತು ಕೃಷರ್ ನಮ್ಮ ಗ್ರಾಮಕ್ಕೆ ಬೇಡ ಎಂದು ಪಟ್ಟು ಹಿಡಿದ್ದಾರೆ.
ಉದ್ಯಾನವನ ಮತ್ತು ಆಗುಂಬೆ ಮಳೆ ಕಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪಶ್ಚಿಮ ಘಟ್ಟ ಪ್ರದೇಶದ ಪಕ್ಕದಲ್ಲಿದ್ದು, ಜನರ ಜೀವನ ಜೊತೆಗೆ ಜೀವ ವೈವಿಧ್ಯತೆಗಳಿಗೆ ತೊಂದರೆ ಉಂಟಾಗುತ್ತಿದೆ.

ಈ ಹಿಂದೆ ಕೂಡ ಬಿದರಗೋಡು ಗ್ರಾಮದ ಸ.ನಂ 73 ರಲ್ಲಿ ಕಾನೂನು ಉಲ್ಲಂಘಿಸಿ ಪರವಾನಗಿ ನವೀಕರಣಗೊಳ್ಳದಿದ್ದರೂ ಹಲವಾರು ವರ್ಷಗಳ ಕಾಲ ಕಲ್ಲು ಗಣಿಗಾರಿಕೆ ನಡೆಸಿ, ಕೋಟ್ಯಾಂತರ ರೂಪಾಯಿಗಳ ಸರ್ಕಾರಿ ಸಂಪತ್ತನ್ನು ಲೂಟಿ ಮಾಡಲಾಗಿದೆ.ಇಲಾಖೆಯ ಮಾರ್ಗಸೂಚಿಗಳನ್ನು ಕಡೆಗಣಿಸಿದ ಪರಿಣಾಮವಾಗಿ ಅರಣ್ಯನಾಶ, ಕಲುಷಿತ ವಾತಾವರಣ, ಮನೆಗಳಿಗೆ ಹಾನಿ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ತೊಂದರೆ ಸೃಷ್ಟಿ ಮಾಡಲಾಗಿದೆ.ನಿಯೋಜಿತ ಕ್ರಷರ್( ಕಲ್ಲು ಪುಡಿಮಾಡುವ ಘಟಕ) ಮಾಡಲು ನಿರ್ಧರಿಸಿರುವ ಪ್ರದೇಶವು ಜನವಸತಿ ಪ್ರದೇಶದಿಂದ ಕೇವಲ 100 ಮೀಟರ್ ಅಂತರದಲ್ಲಿದೆ. ರಾಜ್ಯ ಹೆದ್ದಾರಿಯಿಂದ 500 ಮೀಟರ್ ಅಂತರದಲ್ಲಿದೆ. ಈ ಪ್ರದೇಶವು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾಗಿದ್ದು ಶೃಂಗೇರಿ ತಾಲ್ಲೂಕಿನ ಅಸನಬಾಳು ಗ್ರಾಮದ ಸ.ನಂ 117ರ ಸೆಕ್ಷನ್(4) ರ ನೋಟಿಫೈಡ್ ಪ್ರದೇಶದಲ್ಲಿ ಸೇರಿಕೊಂಡಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವ ಜನ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತೇವೆ ಎಂದು ಅಲಳನ್ನು ತೋಡಿಕೊಂಡಿದ್ದಾರೆ.

ಸದರಿ ಕ್ರಷರ್( ಕಲ್ಲು ಪುಡಿಮಾಡುವ ಘಟಕ)ದ ಶೃಂಗೇರಿ ತಾಲ್ಲೂಕು ಮತ್ತು ತೀರ್ಥಹಳ್ಳಿ ಗಡಿಭಾಗದಲಿರುವುದರಿಂದ ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ನಾಗರೀಕರಿಗೆ ಅತೀವ ತೊಂದರೆಯಾಗುತ್ತಿದ್ದು ತಕ್ಷಣವೇ ಎಚ್ಚೆತ್ತುಕೊಂಡು ಯಾವುದೇ ಪರವಾನಗಿ ಮಂಜೂರು ಮಾಡಬಾರದಾಗಿಯೂ, ಮಾಡಿದ್ದಲ್ಲಿ ಗ್ರಾಮಸ್ಥರಾದ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುವುದೆಂದು ಮನವಿ ಮೂಲಕ ತಿಳಿಸಿದ್ದಾರೆ.ಗ್ರಾಮಸ್ಥರ ಹಿತ ಮತ್ತು ನೆಮ್ಮದಿಗಾಗಿ, ಜಾನುವಾರುಗಳ ಮತ್ತು ಅರಣ್ಯ ರಕ್ಷಣೆಯ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಆಗಬಹುದಾದ ಅನಾಹುತಗಳಿಂದ ಗ್ರಾಮಸ್ಥರನ್ನು ಕಾಪಾಡಿ ಎಂದು ಬಿದರಗೋಡು, ಬಾಳೆಹಳ್ಳಿ, ಹಸನಬಾಳು ಗ್ರಾಮಸ್ಥರು ಕೋರಿದ್ದಾರೆ. ಮನವಿ ಸ್ವೀಕರಿಸಿ ತಹಸೀಲ್ದಾರರು ಸಮಸ್ಯೆಗೆ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದು, ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಪಿಲಿಕುಳದಲ್ಲಿ ನ.17ರಿಂದ ಕಂಬಳ?
– ಈ ಬಾರಿ ಬೆಂಗಳೂರಲ್ಲಿ ಇಲ್ವಾ ಕಂಬಳ?
– ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ಆಗಮನ

NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನ.17ಕ್ಕೆ ಕಂಬಳ ನಡೆಯಲಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ಪೀಪಲ್ ಫಾರ್ ದಿ ಎಥಿಕಲ್ ಟ್ರೇಟ್‌ಮೆಂಟ್ ಆಫ್ ಅನಿಮಲ್ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಬಿ. ವಿನೋದ್ ಕುಮಾರ್ ವಾದ ಮಂಡಿಸಿ ಅರ್ಜಿ ಸಂಬಂಧ ತಮ್ಮ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ‘ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಇದೇ 17ರಂದು ಕಂಬಳ ನಡೆಯಲಿದೆ,” ಎಂದು ತಿಳಿಸಿದರು. ಆಕ್ಷೇಪವಿಲ್ಲ ಆದರೆ ಅದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ “ನಮಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಥವಾ ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ಆಕ್ಷೇಪವಿಲ್ಲ, ಆದರೆ, ಪಿಲಿಕುಳದಲ್ಲಿ ಮೃಗಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅದಕ್ಕೆ ನಮ್ಮ ಆಕ್ಷೇಪವಿದೆ. ಅಷ್ಟೇ ಅಲ್ಲ, ಸ್ವತಃ ಮೃಗಾಲಯ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಂಬಳದ ಸಂದರ್ಭದಲ್ಲಿ ಉಂಟಾಗುವ ಕೂಗಾಟದಿಂದ ಬೇರೆ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆಂದು ಹೇಳಿದ್ದಾರೆ ನಮ್ಮದೂ ಅದೇ ವಾದವಾಗಿದೆ,” ಎಂದರು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.

ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ಆಗಮನ

ಮಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಒಡಿಶಾದ ನಂದನ್ ಕಾನನ್ ಮೃಗಾಲಯ ದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ ಮತ್ತು ಅಪರೂಪದ ಪಕ್ಷಿಗಳಾದ ಎರಡು ಸಿಲ್ವ‌ರ್ ಫೆಸೆಂಟ್, ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್‌ಗಳನ್ನು ಮಂಗಳವಾರ ಪಿಲಿಕುಳ ಮೃಗಾಲಯಕ್ಕೆ ತರಲಾಯಿತು. ಪಿಲಿಕುಳದಿಂದ ನಾಲ್ಕು ಕಾಡು ನಾಯಿ/ಧೋಲ್, ಅಪರೂಪದ ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು, ಎರಡು ಬ್ರಾಹ್ಮಣಿ ಗಿಡುಗಗಳು, ಮೂರು ಏಷ್ಯನ್ ಪಾಮ್ ಸಿವೇಟ, ಎರಡು ಲಾರ್ಜ್ ಇಗರೇಟ್‌ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗಿದೆ. ವಿನಿಮ ಯದಲ್ಲಿ ಪಿಲಿಕುಳದಿಂದ ರವಾನೆ ಯಾಗುತ್ತಿರುವ ಪ್ರಾಣಿಗಳು ಪಿಲಿಕುಳ ಮೃಗಾಲಯದಲ್ಲೇ ಜನಿಸಿದವುಗಳಾಗಿವೆ. ಮೃಗಾಲಯದಲ್ಲಿ ಜತೆಯಿಲ್ಲದ ಪ್ರಾಣಿಗಳಿಗೆ ಜತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮ ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು, ಜತೆಗಾರನಾಗಿ ಒಂದು ಗಂಡು ಏಷ್ಯ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತಿ ಕಡಿಮೆ ಇರುವುದರಿಂದ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.

Categories
ಮಲ್ನಾಡ್

ಪಾಂಡಿಚೇರಿ ವಿವಿಯಲ್ಲಿ ತೀರ್ಥಹಳ್ಳಿ ಕಲಾವಿದನ ತರಬೇತಿ

ಪಾಂಡಿಚೇರಿ ವಿವಿಯಲ್ಲಿ ತೀರ್ಥಹಳ್ಳಿ ಕಲಾವಿದನ ತರಬೇತಿ
– ಶೈಲೇಶ್ ತೀರ್ಥಹಳ್ಳಿ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ತರಬೇತಿ
– ರಾಜ್ಯ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಪ್ರಸಿದ್ಧಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯೂನಿವರ್ಸಿಟಿಯಲ್ಲಿ ಯಕ್ಷಗಾನ‌ ತರಬೇತಿ ನಡೆಯಿತು. ಶೈಲೇಶ್ ತೀರ್ಥಹಳ್ಳಿಯವರ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯುನಿವರ್ಸಿಟಿಯ ಎಂ.ಎ ರಂಗಭೂಮಿ ವಿದ್ಯಾರ್ಥಿಗಳಿಗೆ ಒಂದು ವಾರದ ಯಕ್ಷಗಾನ ಹೆಜ್ಜೆ, ವೇಷಭೂಷಣ, ಬಣ್ಣಗಾರಿಕೆಯ ಪರಿಚಯ ಮಾಡಿಕೊಡಲಾಯಿತು. ಅಭ್ಯಾಸಮಾಡಿದ ವಿದ್ಯಾರ್ಥಿಗಳು ಕೊನೆಯದಿನ 30 ನಿಮಿಷಗಳ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕೆಲವು ವರ್ಷಗಳಿಂದ ಯಕ್ಷಭೂಮಿ(ರಿ) ಸಂಸ್ಥೆಯ ಗುರುಗಳಿಂದ ತೀರ್ಥಹಳ್ಳಿಯ ಆಸಕ್ತರಿಗೆ ಹಾಗೂ ನೀನಾಸಂ ಹೆಗ್ಗೋಡು, ರಂಗಾಯಣ, ಸಾಣೇಹಳ್ಳಿ ರಂಗಶಾಲೆ, ಎನ್ ಎಸ್ ಡಿ ಬೆಂಗಳೂರು, ಲಕ್ನೋ, ಗುಜರಾತ್ ಮುಂತಾದ ಕಡೆಗಳಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ.

Categories
ರಾಜ್ಯ

ಇನ್ಮುಂದೆ ಬೈಕಲ್ಲಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ!

ಇನ್ಮುಂದೆ ಬೈಕಲ್ಲಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ!
– ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರದ ನಿಯಮ
– ನಿಯಮ ಉಲ್ಲಂಘಿಸಿದ್ರೆ ಬೀಳುತ್ತದೆ ದಂಡ: ಏನೇನು ನಿಯಮ?

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ 4 ವರ್ಷದ ಒಳಗಿನ ಮಕ್ಕಳನ್ನು ಶಾಲೆ ಅಥವಾ ಇತರೆ ಕೆಲಸಗಳಿಗೆ ಹಿಂದೆ, ಮುಂದೆ ಕೂರಿಸಿಕೊಂಡು ಬೈಕ್ ಚಲಾವಣೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ. 4 ವರ್ಷ ಒಳಗಿನ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕದಿದ್ದರೆ ಕೇಸ್ ಹಾಗೂ ದಂಡವನ್ನು ಸಾರಿಗೆ ಇಲಾಖೆ ಹಾಕುತ್ತಿದೆ. ಮಕ್ಕಳಿಗೆ ಸೇಫ್ಟಿ ಬೆಲ್ಟ್ ಹಾಕದ ಪೋಷಕರಿಗೆ 1,000 ರೂ. ದಂಡ ಹಾಕುತ್ತಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಧಾರಣೆ ಮಾಡುವುದು ಕಡ್ಡಾಯ. ಈ ಬಗ್ಗೆ ಸಾರಿಗೆ ಇಲಾಖೆ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಆರ್‌ಟಿಒಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಹಿಂದೆಯೂ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ, ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾದಾಗ ಕೇಂದ್ರ ಸರ್ಕಾರ ಅಧಿಸೂಚನೆಯಂತೆ ರಾಜ್ಯದಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾರಿಗೆ ಇಲಾಖೆಗೆ ಸೂಚಿಸಿದೆ.