Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ 3 ನ್ಯೂಸ್..!!

ಚಿಕ್ಕಮಗಳೂರು ಟಾಪ್ 3 ನ್ಯೂಸ್..!!
– ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಮತ್ತು ಕಾರಿನ ನಡುವೆ ಅಪಘಾತ
– ಕಾಫಿ ಪಲ್ಪರ್ ನೀರನ್ನು ಹಳ್ಳಕ್ಕೆ ಬಿಟ್ಟ ಕಿಡಿಗೇಡಿಗಳು
– ಕೊಪ್ಪ,ಎನ್.ಆರ್ ಪುರದಲ್ಲಿ ಮತ್ತಿಬ್ಬರಿಗೆ ಕೆಎಫ್‌ಡಿ ಸೋಂಕು ಧೃಢ

ಮೂಡಿಗೆರೆ: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಭಾನುವಾರ ರಾತ್ರಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ(55) ಜ್ಞಾನಮ್ಮ(70), ಮಂಜುಳಾ(50) ಮತ್ತು ರೇಣುಕಾ(26) ಗಂಭೀರವಾಗಿ ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳಿಗೆ ಯಾವುದೇ ರೀತಿಯ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಫಿ ಪಲ್ಪರ್ ನೀರನ್ನು ಹಳ್ಳಕ್ಕೆ ಬಿಟ್ಟ ಕಿಡಿಗೇಡಿಗಳು..!!?
ಆಲ್ದೂರು: ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಅರೇನೂರು ಗ್ರಾಮದ ಆನೆಬಿದ್ದ ಹಳ್ಳಕ್ಕೆ ಕಾಫಿ ಪಲ್ಪರ್ ನೀರನ್ನು ಬಿಟ್ಟ ಕಿಡಿಗೇಡಿಗಳು. ಇದರಿಂದ ನೀರು ಸಂಪೂರ್ಣ ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಹಳ್ಳವು ಭದ್ರಾ ನದಿಗೆ ಸೇರುವುದರಿಂದ ಈ ನೀರನ್ನು ಹತ್ತಾರು ಹಳ್ಳಿಯ ಜನರು ಕುಡುಯುವುದರಿಂದ ಜನರು ಆತಂಕದಲ್ಲಿದ್ದಾರೆ ಹಾಗೂ ಈ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಪ್ಪ, ಎನ್.ಆರ್ ಪುರದಲ್ಲಿ ಮತ್ತಿಬ್ಬರಲ್ಲಿ ಮಂಗನ ಕಾಯಿಲೆ..!!
ಕೊಪ್ಪ/ಎನ್.ಆರ್ ಪುರ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಲ್ಲೂ ಕೊಪ್ಪ, ಎನ್.ಆರ್ ಪುರ ಭಾಗದಲ್ಲಿ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಇಂದು ಮತ್ತೆರಡು ಪ್ರಕರಣಗಳು ಧೃಡವಾಗಿದ್ದು ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 6 ಕ್ಕೆ ಏರಿದೆ. ಇಲ್ಲಿಯವರೆಗೆ ಎನ್.ಆರ್ ಪುರ ತಾಲೂಕಿನಲ್ಲಿ ಮೂವರು ,ಕೊಪ್ಪ ತಾಲೂಕಿನಲ್ಲಿ ಇಬ್ಬರು ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಒಬ್ಬರಲ್ಲಿ ಮಂಗನ ಕಾಯಿಲೆ ಪ್ರಕರಣ ಧೃಡವಾಗಿದೆ. ಆರೋಗ್ಯ ಇಲಾಖೆಯಿಂದ ಅಲರ್ಟ್ ಘೋಷಿಸಿದ್ದು,ಚಿಕಿತ್ಸೆಗೆಂದು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ವಾರ್ಡ್ ತೆರೆಯಲಾಗಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಂತನ ಕೃಪಕಟಾಕ್ಷದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ವಾದಗಳನ್ನು ತಪ್ಪಿಸಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲಸದ ಸ್ಥಳದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರೇಮ ಜೀವನದಲ್ಲಿ ಹೇರಳವಾದ ಪ್ರೀತಿ ಮತ್ತು ವಾತ್ಸಲ್ಯ ಇರುತ್ತದೆ. ಹೊಸ ಸಕಾರಾತ್ಮಕ ಬದಲಾವಣೆಗಳಿಗೆ ಸಿದ್ಧರಾಗಿರಿ.

** ವೃಷಭ ರಾಶಿ :
ಇಂದು ಪ್ರೇಮ ಜೀವನದಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಒಂಟಿ ಜನರು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಇದರಿಂದಾಗಿ ಮನಸ್ಸು ಸಂತೋಷವಾಗಿರುತ್ತದೆ. ಹೊಸ ಆಶ್ಚರ್ಯಗಳಿಗೆ ಸಿದ್ಧರಾಗಿರಿ. ಜೀವನದಲ್ಲಿ ಸಂತೋಷವು ಬರಲಿದೆ. ಹೆಚ್ಚಿನ ಕೆಲಸದ ಒತ್ತಡವನ್ನು ತಪ್ಪಿಸಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ.

** ಮಿಥುನ ರಾಶಿ :
ಇಂದು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಇದು ನಿಮ್ಮ ಸಂಬಂಧವನ್ನು ಸಹ ಬಲಪಡಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪರಿಸರ ಅನುಕೂಲಕರವಾಗಿರುತ್ತದೆ.

** ಕರ್ಕಾಟಕ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಪ್ರಗತಿಗೆ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ಜೀವನದಲ್ಲಿ ಬರುವ ಸವಾಲುಗಳನ್ನು ಜಯಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲು ಸಾಧ್ಯವಿದೆ.

** ಸಿಂಹ ರಾಶಿ :
ಇಂದು ಸ್ನೇಹಿತರು ಅಥವಾ ಒಡಹುಟ್ಟಿದವರೊಂದಿಗಿನ ನಡೆಯುತ್ತಿರುವ ಆರ್ಥಿಕ ವಿವಾದಗಳನ್ನು ನೀವು ಪರಿಹರಿಸಬಹುದು. ಇಂದು ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ವೃತ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹೊಸ ಆದಾಯದ ಮೂಲಗಳನ್ನು ಹುಡುಕಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೋಯಿಸಬೇಡಿ.

** ಕನ್ಯಾ ರಾಶಿ :
ಇಂದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಪ್ರೇಮ ಜೀವನದಲ್ಲಿ ಹೊಸ ರೋಮಾಂಚಕಾರಿ ತಿರುವುಗಳು ಕಂಡುಬರುತ್ತವೆ. ಸಂಬಂಧದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಒಂಟಿ ಜನರು ತಮ್ಮ ಪ್ರೀತಿ ಪಾತ್ರರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯ.

** ತುಲಾ ರಾಶಿ :
ಇಂದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿಷಯಗಳನ್ನು ಕ್ರಮವಾಗಿ ಇರಿಸಿ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಮೌಲ್ಯಮಾಪನ ಸಿಗಬಹುದು. ನಿಮ್ಮ ವೃತ್ತಿಜೀವನದಲ್ಲಿ ನೀವು ಅದ್ಭುತ ಯಶಸ್ಸನ್ನು ಪಡೆಯುತ್ತೀರಿ. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ.

** ವೃಶ್ಚಿಕ ರಾಶಿ :
ಇಂದು ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಕ್ರಮೇಣ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಇರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗುತ್ತವೆ. ಸಾಮಾಜಿಕವಾಗಿ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಭೌತಿಕ ಸೌಕರ್ಯಗಳಲ್ಲಿ ಜೀವನವನ್ನು ನಡೆಸುವರು. ಜೀವನದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ.

** ಧನಸ್ಸು ರಾಶಿ :
ಇಂದು ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಕಚೇರಿಯಲ್ಲಿ ತುಂಬಾ ಕಾರ್ಯನಿರತ ವೇಳಾಪಟ್ಟಿ ಇರುತ್ತದೆ. ಕೆಲಸಕ್ಕೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುವುದು. ಕ್ಲೈಂಟ್ ಅತೃಪ್ತರಾಗಿದ್ದರೆ ಕೆಲಸವನ್ನು ಮತ್ತೆ ಮಾಡಬೇಕಾಗಬಹುದು. ಒತ್ತಡವನ್ನು ತಪ್ಪಿಸಿ. ಪ್ರೀತಿಪಾತ್ರರ ಜೊತೆ ಗುಣಮಟ್ಟದ ಸಮಯವನ್ನು ಕಳೆಯಿರಿ.

** ಮಕರ ರಾಶಿ :
ಇಂದು ಭಾವನೆಗಳಲ್ಲಿ ಏರಿಳಿತಗಳು ಸಾಧ್ಯ. ಸ್ವ-ಆರೈಕೆಯನ್ನು ಆದ್ಯತೆಯನ್ನಾಗಿ ಮಾಡಿ. ಆಯಾಸವನ್ನು ತಪ್ಪಿಸಲು ವಿಶ್ರಾಂತಿ ಪಡೆಯಿರಿ. ನಿಮ್ಮ ಜೊತೆ ಸ್ವಲ್ಪ ಸಮಯ ಕಳೆಯಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಹೊಸ ಬದಲಾವಣೆಗಳಿಗೆ ಸಿದ್ಧರಾಗಿರಿ. ಸವಾಲುಗಳಿಂದ ಒತ್ತಡಕ್ಕೊಳಗಾಗುವ ಬದಲು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನಹರಿಸಿ.

** ಕುಂಭ ರಾಶಿ :
ಇಂದು ನಿಮ್ಮ ಕೆಲಸದ ಮೇಲೆ ಗಮನ ಹರಿಸಿ. ಕಚೇರಿಯಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಹೊಸ ಕೆಲಸಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಇದು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಸಂತೋಷದ ಜೀವನವನ್ನು ನಡೆಸುವಿರಿ.

** ಮೀನ ರಾಶಿ :
ಇಂದು ಖರ್ಚುಗಳು ಹೆಚ್ಚಾಗಲಿವೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಮನಸ್ಸಿನಲ್ಲಿ ಅಶಾಂತಿ ಉಂಟಾಗಬಹುದು. ಅಜ್ಞಾತ ಭಯಗಳಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ದಿನಚರಿಯಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಬೇಡಿ. ನಿಮ್ಮೊಂದಿಗೆ ಸಮಯ ಕಳೆಯಿರಿ ಮತ್ತು ನಿಮ್ಮ ಮನಸ್ಸಿನಲ್ಲಿ ವಿಷಯಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಭ್ರಮದ ಗಣ ರಾಜ್ಯೋತ್ಸವ!

ತೀರ್ಥಹಳ್ಳಿಯಲ್ಲಿ ಸಂಭ್ರಮದ ಗಣ ರಾಜ್ಯೋತ್ಸವ!
– ಅನಂತಮೂರ್ತಿ ಶಾಲೆಯಲ್ಲಿ ಮೊಳಗಿದ ಜೈ ಭಾರತ್ ಘೋಷಣೆ
– ಗಮನ ಸೆಳೆದ ಪುಟಾಣಿ ಮಕ್ಕಳ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನ ಎಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ತೀರ್ಥಹಳ್ಳಿ ತಾಲೂಕಿನ ದಂಡಾಧಿಕಾರಿ ಎಸ್ ರಂಜಿತ್‌ ಭಾನುವಾರ ಯು ಆರ್ ಅನಂತಮೂರ್ತಿ ಶಾಲೆಯ ಕ್ರೀಡಾಂಗಣದಲ್ಲಿ ನಡೆದ 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಗಣರಾಜ್ಯವಾಗಿ ಇಂದಿಗೆ 76 ವರ್ಷಗಳು ಆಗಿದೆ. ಈ ಆಚರಣೆಯ ಅಗತ್ಯತೆ ಮತ್ತು ದೇಶ ಕಟ್ಟುವ ಅನಿವಾರ್ಯತೆ ಇದೆಯೇ ಎಂಬುವ ಪ್ರಶ್ನೆ ಸಹಜ. ಆದರೆ ದೇಶ ಕಟ್ಟುವ ಪ್ರಕ್ರಿಯೆ ನಿರಂತರವಾದದ್ದು. ದೇಶವನ್ನು ಕಟ್ಟಲು ಡೆಲ್ಲಿಯನ್ನೇ ಕಟ್ಟಬೇಕೆಂದೇನಿಲ್ಲ. ನಮ್ಮ ಹಳ್ಳಿ ಹಳ್ಳಿಗಳನ್ನು ಸದೃಢವಾಗಿ ಕಟ್ಟಿದರೆ ಅದು ದೇಶವನ್ನೇ ಕಟ್ಟಿದ ಹಾಗೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಮುಖ್ಯಾಧಿಕಾರಿ ನಾಗರಾಜ್, ಸದಸ್ಯರಾದ ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ಜ್ಯೋತಿ ಮೋಹನ್, ರತ್ನಾಕರ್ ಶೆಟ್ಟಿ, ಅನಿಲ್‌, ಪೊಲೀಸ್ ಇನ್ಸೆಕ್ಟ‌ರ್ ಇಮ್ರಾನ್ ಬೇಗ್ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಿಯಾಗಿದ್ದರು. ಪಟ್ಟಣ ಪಂಚಾಯತ್‌ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ನೇತೃತ್ವದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣ ಪಂಚಾಯತ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಪಟ್ಟಣ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಯುನಿಫಾರಂ ಹಾಗೂ ಗುರುತಿನ ಕಾರ್ಡ್ ನೀಡಿ ಮಾತನಾಡಿದರು.

ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ!

ತೀರ್ಥಹಳ್ಳಿ ಅನಂತಮೂರ್ತಿ ಶಾಲೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮ ಗಮನ ಸೆಳೆಯಿತು. ಜೊತೆಗೆ ಪುಟಾಣಿಗಳ ವೇಷವೂ ಗಮನ ಸೆಳೆಯಿತು. ಕಲಾವಿದ ಅಭಿಷೇಕ್ ಅವರ ಪೇಂಟಿಂಗ್ ಎಲ್ಲರ ಮೆಚ್ಚುಗೆ ಪಡೆಯಿತು.

Categories
ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಸಂಭ್ರಮ!

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಸಂಭ್ರಮ!
– ಸಿಎಂ ಅನುಪಸ್ಥಿತಿಯಲ್ಲಿ ಧ್ವನಿ ಎತ್ತಿದ ಸತ್ಯಜಿತ್ ಸುರತ್ಕಲ್
– ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು: ಅತ್ಯುತ್ತಮ ಆಯೋಜನೆ

NAMMUR EXPRESS NEWS
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವ ಅತ್ಯಂತ ಅದ್ದೂರಿಯಾಗಿ 3 ದಿನಗಳ ಕಾಸ್ಪರ್ಧೆ,ದಿದೆ. ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಸಸಿಹಿತ್ಲು ಇದರ ಗೌರವಾಧ್ಯಕ್ಷರಾದ ಚಂದಯ್ಯ ಬಿ ಕರ್ಕೆರ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಂಸದ ಮಾಲಿಕಯ್ಯ ಗುತ್ತೇದಾರ್ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಮಾಜ 1924ರಂದು ಪ್ರಾರಂಭವಾದದ್ದು, ಇದೀಗ ಈ ಸಂಘ 50 ನೇ ವರ್ಷಕ್ಕೆ ಕಾಲಿಟ್ಟಿದೆ, ಇದೀಗ ಈ ಸುವರ್ಣ ಮಹೋತ್ಸವ ವಿಶ್ವ ಸಮ್ಮೇಳನವಾಗಿದೆ. ಈ ಸಂಘದಲ್ಲಿ 26 ಪಂಗಡಗಳಿವೆ. ಇವರೆಲ್ಲರ ಸಂಗಮವಾಗಬೇಕು. ಜೊತೆಗೂಡ್ಬೇಕು. ಎಂಬ ಕಾರಣಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಕರ್ನಾಟಕ ರಾಜ್ಯಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ಹೇಳಿದರು. ಸಂಘದ ಪ್ರತಿಯೊಂದು ವಿಚಾರಗಳನ್ನು ಮುಖ್ಯಮಂತ್ರಿಗಳಾಗಿರುವ ಸಿ.ಎಂ ಸಿದ್ದರಾಮಯ್ಯ ಮತ್ತು ಸಚಿವ ಮಧುಬಂಗಾರಪ್ಪ ಅವರ ಮುಂದೆ ತಮ್ಮ ಬೇಡಿಕೆಗಳನ್ನು ಗಟ್ಟಿ ಧ್ವನಿಯಲ್ಲಿ, ಮಂಡಿಸಬೇಕು. ತೋರಿಸಬೇಕೆಂಬ ಆಶಯವಿತ್ತು ಹಾಗೂ ಆ ಬೇಡಿಕೆಗಳಿಗೆ ಸ್ವರ ಸೇರಿಸಬೇಕೇಂಬ ಆಶಯ ಸಂಘಟಿಕರಲ್ಲಿತ್ತು ಆದರೆ ಇದೀಗ ನಿರಾಸೆಯಾಗಿದೆ. ಕುಲಕಸುಬುಗಳನ್ನು ಕಳೆದುಕೊಂಡ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬಲು ಕಳೆದ ಐದಾರು ವರ್ಷಗಳಿಂದ ಧ್ವನಿ ಎತ್ತಿ ಕೇವಲ ಘೋಷಣೆಗಳು ನಡೆಯುತ್ತಾ ಇದೆಯೇ ಹೊರತು ಇವತ್ತಿನವರೆಗೂ ಸಮಿತಿ ರಚನೆಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನಮಗೆ ಭರವಸೆ ಕೊಟ್ಟಿದ್ದರೂ ಅವರು ನಮಗೆ ನಿರಾಸೆಯನ್ನುಂಟು ಮಾಡಿದ್ದಾರೆ.
ಆದರೆ ಅವರಿಗೆ ಮನವಿ ನೀಡಲಿದ್ದು ಇವತ್ತು ಅವರ ಅನುಪಸ್ಥಿತಿಯಲ್ಲಿ ಧ್ವನಿ ಎತ್ತುತ್ತಿದ್ದೇವೆ. 2ನೇ ಅತಿದೊಡ್ಡ ಸಮಾಜದ ಪರವಾಗಿ ಬೇಡಿಕೆಯನ್ನು ಇಡುತ್ತಿದ್ದೇವೆ ಆಗ್ರಹ ಮಾತ್ರವಲ್ಲ ತಕ್ಷಣ ಇದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕು, ವೇದಿಕೆಯನ್ನು ಕಲ್ಪಿಸಿಕೊಡಬೇಕು ಈ ಬೇಡಿಕೆಗಳನ್ನು ಚರ್ಚೆಯಲ್ಲಿ ಇಡಬೇಕು. ಹಾಗೂ ಹಿರಿಯ ಕೋಟಿ ಚೆನ್ನಯ್ಯರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಬೇಡಿಕೆಗಳನ್ನು ಸಮಾಜದ ಪರವಾಗಿ ಇಟ್ಟರು.
ಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗುರುತಿಸಿಕೊಂಡ ಸಮಾಜದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ರಂಗು: ವಿಧಾನಸಭೆ ಸಭಾಧ್ಯಕ್ಷರಾದ ಯು. ಟಿ, ಖಾದರ್ ಫರೀದ್, ಸುವರ್ಣಾಕ್ಷರ, ಪುಸ್ತಕವನ್ನು ಗಣ್ಯರೊಂದಿಗೆ ಬಿಡುಗಡೆ ಮಾಡಿದರು. ತೆಲಂಗಾಣ ರಾಜ್ಯಪಾಲರಾದ ತಮಿಳ್ ಇಸೈ ಸೌಂದರರಾಜನ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾದ ಮೂಲ್ಕಿ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ಮಂಗಳೂರು ನವೀನ್ ಚಂದ್ರ ಡಿ. ಸುವರ್ಣ, ಖ್ಯಾತ ಬಹು ಭಾಷಾ ನಟರು ಸುಮನ್ ತಲ್ವಾರ್, ವಿಶ್ವನಾಥ ಕ್ಷೇತ್ರ ಕಟಪಾಡಿ ಬಿ.ಎನ್. ಶಂಕರ್ ಪೂಜಾರಿ, ಹರೀಶ್ ಜಿ ಅಮೀನ್, ವೇದಕುಮಾರ್, ವಿಶ್ವನಾಥ್ ಪೂಜಾರಿ, ಗೋಪಾಲ್ ಪೂಜಾರಿ, ಪ್ರಭಾಕರ್ ಬಂಗೇರಾ, ಹರೀಶ್ ಕುಮಾರ್, ಮೋಹನ್ ಸಿ. ಪೂಜಾರಿ, ಮುರಳಿ, ಮನೋಜ್ ಕುಮಾರ್ ಸೂರತ್, ಸೂರ್ಯಕಾಂತ್, ಶರತ್‌ಚಂದ್ರ ಸನಿಲ್, ಚಂದ್ರಹಾಸ ಅಮೀನ್, ಲೋಕೇಶ್ ಕೋಟ್ಯಾನ್, ದೀಪಕ್ ಪೂಜಾರಿ ಸೇರಿ ನೂರಾರು ಗಣ್ಯರು 3 ದಿನ ಭಾಗವಹಿಸಿದ್ದರು. ಬೀಚ್ ಬಳಿಯ ಆಹಾರ ಮೇಳ, ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ವಾಲಿಬಾಲ್, ನಾಟಕ ಗಮನ ಸೆಳೆಯಿತು. ರಾಜ್ಯದ ಅತ್ಯಂತ ಅಚ್ಚುಕಟ್ಟಿನ ಆಯೋಜನೆಯ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಜನರಿಂದ ಕೇಳಿ ಬಂದಿತು.

Categories
ರಾಜ್ಯ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

– ಹೊಸಪೇಟೆ: ಹಗ್ಗ ತುಂಡಾಗಿ ಸ್ತಂಭದಿಂದ ಬಿದ್ದ ತ್ರಿವರ್ಣ ಧ್ವಜ
– ಬೆಳಗಾವಿ: ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ!
– ಬೀದರ್: ಬಿಹಾರದಿಂದ ಬೈಕಲ್ಲಿ ಬಂದಿದ್ದ ದರೋಡೆಕೋರರು!
– ಮೈಸೂರು: ಹೃದಯಾಘಾತದಿಂದ 10ನೇ ಕ್ಲಾಸ್ ವಿದ್ಯಾರ್ಥಿನಿ ಸಾವು
– ದೇಶದ ಮೊದಲ ಹೃದಯ ಬೈಪಾಸ್‌ ಸರ್ಜರಿ ಡಾಕ್ಟರ್ ನಿಧನ

NAMMUR EXPRESS NEWS
ಹೊಸಪೇಟೆ: ನಗರದ ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭದಲ್ಲಿ ಧ್ವಜಾರೋಹಣ ವೇಳೆ ಏರುತ್ತಿದ್ದ ರಾಷ್ಟ್ರಧ್ವಜ ಅರ್ಧದಲ್ಲೇ ಹಗ್ಗ ತುಂಡರಸಿ ಕೆಳಗೆ ಬಿದ್ದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು. ಆದರೆ, ತಾಂತ್ರಿಕ ಕಾರಣದಿಂದ ಅರ್ಧದಲ್ಲಿಯೇ ಹಗ್ಗ ತುಂಡಾಗಿ ಧ್ವಜ ತುಂಡರಸಿ ಕೆಳಗೆ ಬಿತ್ತು. ಈ ಅವಘಡಕ್ಕೆ ಕಾರಣರಾದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು, ಕ್ರಮ ವಹಿಸಲು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

– ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ!

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಹುಕ್ಕೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಂಗೀತಾ ಗೌಳಿ, ಸಂಗೀತಾ ತಾವಡೆ, ಮೋಹನ್ ತಾವಡೆ ಬಂಧಿತರು. ಉಳಿದ ಆರೋಪಿಗಳಾದ ನಂದಕುಮಾರ ಡೋರಲೇಕರ, ನಂದಿನಿ ಡೋರಲೇಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಕ್ಕಳ ಮಾರಾಟ ಗ್ಯಾಂಗ್ ​ವಿಧವೆಯರನ್ನೇ ಟಾರ್ಗೆಟ್​ ಮಾಡುತ್ತದೆ. ಮಗು ಇದ್ದು ಗಂಡನಿಲ್ಲದ ಮಹಿಳೆಯರಿಗೆ ಎರಡನೇ ಮದುವೆ ಮಾಡಿಸುತ್ತೆ. ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಅರ್ಚನಾ ಎಂಬುವರನ್ನು ರಾಜು ಮಗು ಜೊತೆ ಎರಡನೇ ಮದುವೆ ಮಾಡಿಸಿತ್ತು. ಅರ್ಚನಾ ಅವರ ಮೊದಲ ದಾಂಪತ್ಯದ ಸಾಕ್ಷಿಯಾಗಿ ಗಂಡು ಮಗು ಜನಿಸಿತ್ತು. ಈ ಗಂಡು ಮಗು ಅರ್ಚನಾ ಅವರ ಬಳಿ ಇದೆ. ಆದರೆ, ಈ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಆರೋಪಿಗಳಾದ ತಾವಡೆ ದಂಪತಿ ಮಗುವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್​ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ, ಸಂಗೀತಾ ಗೌಳಿ ಮನೆಯಲ್ಲಿ ನಂದಕುಮಾರ ಡೋರಲೇಕರ ದಂಪತಿಗೆ 3 ಲಕ್ಷ ರೂ.ಗೆ ಮಗು ಮಾರಾಟ ಮಾಡಿದ್ದರು. ಮಗು ಮಾರಾಟದಿಂದ ಬಂದ ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು. ಈ ಸಂಬಂಧ ಹುಕ್ಕೇರಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ವಾರದ ಹಿಂದೆ ಇದೇ ಊರಲ್ಲಿ ಸಂಗೀತಾ ಎಂಬುವರ ಮಗು ಮಾರಾಟವಾಗಿತ್ತು. ಸಂಗೀತಾ ಅವರಿಗೂ ಕೂಡ ಎರಡನೇ ಮದುವೆ ಮಾಡಿಸಿ, ಅವರ ಮೊದಲ ಮಗುವನ್ನು 4 ಲಕ್ಷ ರೂ.ಗೆ ಮಾರಲಾಗಿತ್ತು. ಈ ಪ್ರಕರಣದಲ್ಲಿ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

– ಬಿಹಾರದಿಂದ ಬೈಕ್ ನಲ್ಲಿ ಬಂದಿದ್ದ ಬೀದರ್ ದರೋಡೆಕೋರರು!

ಬೀದರ್‌ನಲ್ಲಿ 93 ಲಕ್ಷ ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದ ಇಬ್ಬರು ಬಿಹಾರಿ ಡಕಾಯಿತರು ಮೊದಲು ಬಿಹಾರದ ಹಾಜಿಪುರದಿಂದ ಹೈದರಾಬಾದ್‌ವರೆಗೆ 1500 ಕಿ.ಮೀ.ನಷ್ಟು ಬೈಕ್‌ನಲ್ಲಿ ಸಂಚರಿಸಿ ಬಂದಿದ್ದರು ಎಂಬ ರೋಚಕ ಸಿಸಿಟಿವಿ ಸಾಕ್ಷ್ಯ ಲಭಿಸಿದೆ. ನಂತರ ಅಲ್ಲಿಂದ ಕರ್ನಾಟಕದ ಬೀದರ್‌ಗೆ ಆಗಮಿಸಿ ಎಟಿಎಂಗೆ ಹಣ ತುಂಬಲು ಬಂದಿದ್ದ ಹಣವನ್ನು ಸಿನಿಮೀಯ ರೀತಿಯಲ್ಲಿ ಲೂಟಿ ಮಾಡಿದ್ದರು. ಬಳಿಕ ಹೈದರಾಬಾದ್‌ಗೆ ತೆರಳಿ ಅಲ್ಲಿ ಅಪ್ಟಲ್‌ ಗಂಜ್‌ನಲ್ಲಿ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದರು ಎಂದು ತಿಳಿದುಬಂದಿದೆ. ಪರಿಚಯಸ್ಥರ ಬೈಕ್‌: ಬಿಹಾರದ ಹಾಜಿಪುರ ಜಿಲ್ಲೆಯವರಾದ ಇಬ್ಬರೂ ಆರೋಪಿಗಳು ಅಪರಾಧ ಎಸಗುವ ಒಂದು ತಿಂಗಳಿಗೂ ಮುನ್ನ ತಮ್ಮ ಪರಿಚಯಸ್ಥರಿಂದ ಬೈಕ್ ಪಡೆದುಕೊಂಡು ಹೈದರಾಬಾದ್‌ವರೆಗೆ ಬರೋಬ್ಬರಿ 1.5 ಸಾವಿರ ಕಿ.ಮೀ. ಸಂಚರಿಸಿದ್ದರು ಎಂದು ತನಿಖೆ ಯಿಂದ ತಿಳಿದುಬಂದಿದೆ. ಅಫಲ್‌ ಗಂಜ್‌ನಲ್ಲಿ ನಡೆದ ಕೊಲೆ ಯತ್ನದ ಬಳಿಕ ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಈ ಮಾಹಿತಿಯನ್ನು ತಿಳಿಸಿದ್ದಾರೆ.

– ಮೈಸೂರು: ಪಿರಿಯಾಪಟ್ಟಣ ಬಳಿ ಹೃದಯಾಘಾತದಿಂದ ಎಸ್​ಎಸ್​ ಎಲ್​ ಸಿ ವಿದ್ಯಾರ್ಥಿನಿ ಸಾವು

ಮೈಸೂರು : ಹೃದಯಾಘಾತದಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ನಾಗರಾಜ್, ವಸಂತ ದಂಪತಿ ಪುತ್ರಿ ದೀಪಿಕಾ (15) ಮೃತಪಟ್ಟ ವಿದ್ಯಾರ್ಥಿನಿ. ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವು ಸಂಭವಿಸಿದೆ

– ದೇಶದ ಮೊದಲ ಹೃದಯ ಬೈಪಾಸ್‌ ಸರ್ಜರಿ ಮಾಡಿದ್ದ ಡಾಕ್ಟರ್ ಚೆರಿಯನ್ ನಿಧನ

50 ವರ್ಷಗಳ ಹಿಂದೆ ದೇಶದಲ್ಲಿ ಮೊದಲ ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದ, ದೇಶದಲ್ಲೇ ಮೊದಲ ಶ್ವಾಸಕೋಶ ಕಸಿ ನಡೆಸಿದ್ದ ಖ್ಯಾತ ಹೃದಯ ತಜ್ಞ ಡಾ. ಕೆ.ಎಂ. ಚೆರಿಯನ್ ಭಾನುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಹೃದಯರೋಗ ಚಿಕಿತ್ಸೆಯಲ್ಲಿ ಅವರನ್ನು ಭಾರತದಲ್ಲೇ ಅವರನ್ನು ಪಿತಾಮಹ ಎಂದು ಬಣ್ಣಿಸಲಾಗುತ್ತಿತ್ತು. ಡಾ. ಚೆರಿಯನ್ ಮಣಿಪಾಲದಲ್ಲಿ ಶಿಕ್ಷಣ ಪೂರೈಸಿದ್ದು, ಚೆನ್ನೈನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಅವರಿಗೆ 1991ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಧಾನಿ ಮೋದಿ ಚೆರಿಯನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Categories
ಚಿಕ್ಕಮಗಳೂರು

ಶಾಲೆಗೆ ಹೊರಟ ಬಾಲಕ ನಾಪತ್ತೆ..!!?

ಶಾಲೆಗೆ ಹೊರಟ ಬಾಲಕ ನಾಪತ್ತೆ..!!?
– ಪೋಷಕರು,ಸ್ಥಳೀಯರಿಂದ ಹುಡುಕಾಟ
– ಬಾಲಕನ ಮಾಹಿತಿ ನೀಡಲು ಮನವಿ

NAMMUR EXPRESS NEWS
ಶೃಂಗೇರಿ: ಬೆಳಿಗ್ಗೆ ಶಾಲೆಗೆಂದು ತನ್ನ ಅಜ್ಜನ ಮನೆಯಿಂದ ಹೊರಟ ಬಾಲಕ ಶಾಲೆಗೂ ಬಾರದೆ ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಅನುದೀಪ್ ಎಂಬ ಬಾಲಕ ನಗರದ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ A ವಿಭಾಗದಲ್ಲಿ ಓದುತ್ತಿದ್ದು, ತಾಯಿ ರೂಪ ತಂದೆ ವೆಂಕಟೇಶ್ ಇವರ ಮಗನಾಗಿರುತ್ತಾನೆ. ಇವರ ಮನೆ ನಗರದ ಹೊರವಲಯದಲ್ಲಿರುವ ಅಕ್ರವಳ್ಳಿ ಉಳುವಳ್ಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ವಾಸವಿದ್ದು. ಇಂದು ಬೆಳಿಗ್ಗೆ ದೇವಸ್ಥಾನ ಗುಡ್ಡೆಯ ತನ್ನ ಅಜ್ಜನ ಮನೆಯಿಂದ ಶಾಲೆಗೆಂದು ಹೋಗಿದ್ದಾನೆ,ಆದರೆ ಶಾಲೆಗೂ ಹೋಗದೆ ನಾಪತ್ತೆಯಾಗಿದ್ದಾನೆ.

ಎಲ್ಲಾದರೂ ಬಾಲಕನ ಸುಳಿವು ಸಿಕ್ಕಲ್ಲಿ
7019726619 / 9448579521
ಈ ನಂಬರ್‌ಗೆ ತಿಳಿಸಲು ಪೋಷಕರು ಮನವಿ ಮಾಡಿದ್ದಾರೆ.

Categories
ಚಿಕ್ಕಮಗಳೂರು

ಕಾಫಿ ನಾಡಲ್ಲಿ ಗಣರಾಜ್ಯೋತ್ಸವ ಸಂಭ್ರಮ!

ಕಾಫಿ ನಾಡಲ್ಲಿ ಗಣರಾಜ್ಯೋತ್ಸವ ಸಂಭ್ರಮ!
– ಎಲ್ಲಾ ತಾಲೂಕು ಕೇಂದ್ರ ಸೇರಿದಂತೆ,ಹಲವು ಕಡೆ ಧ್ವಜಾರೋಹಣ
– ಎಲ್ಲೆಡೆ ಮೊಳಗಿದ ರಾಷ್ಟ್ರ ಭಕ್ತಿ,ಜೈ ಹಿಂದ್

NAMMUR EXPRESS NEWS
ಚಿಕ್ಕಮಗಳೂರು: ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್‌ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಶಾಸಕ ಎಚ್.ಡಿ ತಮ್ಮಯ್ಯ,ಪರಿಷತ್ ಸದಸ್ಯ ಸಿ.ಟಿ ರವಿ,ಎಂ.ಎಲ್.ಸಿ ಭೋಜೇಗೌಡ, ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಸೇರಿದಂತೆ ಜಿಲ್ಲಾಧಿಕಾರಿ,ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಪೋಲೀಸ್ ಇಲಾಖೆ,ಹೋಂ ಗಾರ್ಡ್‌ರವರ ಪಥ ಸಂಚಲನ,ಶಾಲಾ ಕಾಲೇಜು ಮಕ್ಕಳ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣರೋಜ್ಯೋತ್ಸವದ ಸಂಭ್ರವನ್ನು ಹೆಚ್ಚಿಸಿದವು.

ಮೂಡಿಗೆರೆಯಲ್ಲಿ 7 ಜನ ಸಾಧಕರಿಗೆ ಸನ್ಮಾನ

ಮೂಡಿಗೆರೆ: ತಾಲೂಕಿನಾದ್ಯಂತ ಇಂದು ಅದ್ದೂರಿ 76ನೇ ಗಣರಾಜ್ಯೋತ್ಸವ ಜರುಗಿತು. ಶಾಸಕಿ ನಯನ ಮೋಟಮ್ಮನವರ ಮಾರ್ಗದರ್ಶನದಂತೆ ರಾಷ್ಟ್ರೀಯ ಹಬ್ಬದ ಅದ್ಯಕ್ಷರಾದ ತಹಸಿಲ್ದಾರ್ ರಾಜಶೇಖರ ಮೂರ್ತೀಯವರ ನಿರ್ದೆಶನದಂತೆ ಕಾರ್ಯಕ್ರಮ ನಡೆಯಿತು.ಪೊಲೀಸ್ ಇಲಾಖೆಯ ಪಥ ಸಂಚಲನ,ಶಾಲ ಮಕ್ಕಳ ಪಥ ಸಂಚಲನ, ನೃತ್ಯಗಳು ಎಲ್ಲರ ಗಮನಸೆಳೆದವು. 7 ಜನ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಮಹನಿಯರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ತನು ಕೊಟ್ಟಿಗೆಹಾರ,ಕಲಾ ಕ್ಷೇತ್ರದಲ್ಲಿ ಶಿಕ್ಷಕ ವಸಂತಹಾರಗೂಡು,ಶಿಕ್ಷಕರಾದ ದಿನೇಶ್,ಕಲಾ ಕ್ಷೇತ್ರದ ರಮೇಶ್ ಯಾದವ್,ಶರಣ್ಯ ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರ್ತಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. 16 ಜನರಿಗೆ ಎರಡೆರಡು ಎಕರೆ ಜಾಗ ನಾಲ್ಕು ಕುಂಟೆ ನಿವೇಶನಕ್ಕೆ ಹಕ್ಕು ಪತ್ರ ವಿತರಿಸಲಾಯಿತು. 94ಸಿ ಯಲ್ಲಿ 6 ಜನರಿಗೆ ಹಕ್ಕು ಪತ್ರ ವಿತರಿಸಲಾಯಿತು

ಕಳಸದಲ್ಲಿ ಎಲ್ಲೆಡೆ ಹಬ್ಬದ ವಾತಾವರಣ

ಕಳಸ: ತಾಲೂಕಿನಾದ್ಯಂತ ಅತ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಲೂಕಿನ ತಾಲೂಕು ಕಛೇರಿ,ಸಮುದಾಯ ಆರೋಗ್ಯ ಕೇಂದ್ರ,ಪೋಲೀಸ್ ಠಾಣೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಶೃಂಗೇರಿಯಲ್ಲಿ ಗಣ ರಾಜ್ಯೋತ್ಸವದ ರಂಗು

ಶೃಂಗೇರಿ: ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ ನೆರವೇರಿತು.ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿ,ಶಾಲಾ ಕಾಲೇಜುಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕೊಪ್ಪದಲ್ಲಿ ಶಾಸಕ ರಾಜೇಗೌಡ ಧ್ವಜಾರೋಹಣ

ಕೊಪ್ಪ: ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಟಿ.ಡಿ ರಾಜೇಗೌಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೋಲೀಸ್ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ವೀಕ್ಷಿಸಿದರು.

ಎನ್.ಆರ್ ಪುರದಲ್ಲಿ ತ್ರಿವರ್ಣ ಧ್ವಜ ಹಾರಾಟ

ಎನ್.ಆರ್ ಪುರ: ತಾಲೂಕು ಕ್ರೀಡಾಂಗಣದಲ್ಲಿ ತಹಶೀಲ್ದಾರರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಆಚರಿಸಿದರು. ತಾಲೂಕಿನಾದ್ಯಂತ ಶಾಲಾ ಕಾಲೇಜು,ಸರ್ಕಾರಿ ಕಛೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕಡೂರು ಹಾಗೂ ತರೀಕೆರೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಹಾಗೂ ಆನಂದ್ ಕೆ.ಎಸ್ ರವರುಗಳು ಧ್ವಜಾರೋಹಣ ನೆರವೇರಿಸಿದರು. ಚಿಕ್ಕಮಗಳೂರಿನ ಜಿಜೆಪಿ ಕಛೇರಿ ಪಾಂಚಜನ್ಯದಲ್ಲಿ ಸಿ.ಟಿ ರವಿ ಧ್ವಜರೋಹಣ ನೆರವೇರಿಸಿದರು ಪ್ರಮುಖರು,ಕಾರ್ಯಕರ್ತರು ಹಾಜರಿದ್ದರು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಉಡುಪಿ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ! – ಉಡುಪಿ: ಬೆಂಕಿ ದುರಂತ, ಬೆಳೆಬಾಳುವ ವಸ್ತು ಸುಟ್ಟು ಕರಕಲು!
– ಬಜ್ಪೆ: ಭೂಗತ ಪಾತಕಿ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ ಕರೆ
– ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಬಂಧನ

NAMMUR EXPRESS NEWS
ಉಡುಪಿ:
ಉಡುಪಿಯ ಪ್ರತಿಷ್ಠಿತ ವಸತಿ ಶಾಲೆಯಾದ ಶಾರದಾ ಶಾಲೆಗೆ ಬಾಂಬ್ ಬೆದರಿಕೆಪ್ರಕರಣದಲ್ಲಿ ಆರೋಪಿತನು ಅಪರಿಚಿತನಾಗಿದ್ದರಿಂದ, ಆರೋಪಿತನ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು. ಹಲವಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಆರೋಪಿಯ ಮಾಹಿತಿಯನ್ನು ಸಾರ್ವಜನಿಕರಿಗೂ ಪ್ರಚಾರಪಡಿಸಲಾಗಿತ್ತು. ಸಾರ್ವಜನಿಕರ ಸಹಾಯ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಸತತ ಪ್ರಯತ್ನದಿಂದ, ಜ. 26ರ ಭಾನುವಾರ ಸಂಜೆ ಆರೋಪಿ ಮುತ್ತುನನ್ನು ಉಡುಪಿ ಶ್ರೀಕೃಷ್ಣ ಮಠದ ಪರಿಸರದ ವಾದೀರಾಜ 3ನೇ ಕ್ರಾಸ್ ಬಳಿ ಬಂಧಿಸಲಾಯಿತು.
ಆರೋಪಿ ಉಡುಪಿಯಲ್ಲಿ ಯಾವುದೇ ವಿಳಾಸವನ್ನು ಹೊಂದದೆ ಅಲೆಮಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ!

ತೀರ್ಥಹಳ್ಳಿಯಲ್ಲಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ!
– ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಫೈನಲ್
– ಮಲೆನಾಡು, ಕರಾವಳಿಯ ಖ್ಯಾತ ಗಾಯಕ ಗಾಯಕಿಯರ ಸಂಗೀತ ಸುಧೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ ನಡೆಯಲಿದೆ.
ಗಾನಾಂಜಲಿ ಕೋಣಂದೂರು, ತೀರ್ಥಹಳ್ಳಿ ಇವರ ಪ್ರಸ್ತುತಿಯಲ್ಲಿ ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾ ಟ್ರಸ್ಟ್ ಕೋಣಂದೂರು, ಸರ್ಜಾ ಚೆಸ್ ತರಬೇತಿ ಕೇಂದ್ರ ಹಿರೇಸರ, ಶ್ರೀ ಲಕ್ಷ್ಮೀ ಕನ್ಸ್‌ಟ್ರಕ್ಷನ್ ಕೋಣಂದೂರು ಸಹಯೋಗದಲ್ಲಿ ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಕೋಗಿಲೆ ಸೀಸನ್ ಒಂದರ ಅಂತಿಮ ಹಂತದ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ ಇದಾಗಿದೆ. ಫೆಬ್ರವರಿ 8ರ ಶನಿವಾರ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6 ರಿಂದ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮಲೆನಾಡಿನ ಮತ್ತು ಕರಾವಳಿಯ ಪ್ರತಿಭಾವಂತ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಪ್ರಥಮ ಬಹುಮಾನ : ರೂ 10,000, ದ್ವಿತೀಯ ಬಹುಮಾನ : ರೂ 6,000, ತೃತೀಯ ಬಹುಮಾನ : ರೂ 3,000, ಉಳಿದ ಎಲ್ಲಾ ಸ್ಪರ್ಧಿಗಳಿಗೂ ರೂ 1000 ನಗದು ಪುರಸ್ಕಾರ ನೀಡಲಾಗುವುದು.

ಅಂತಿಮ ಹಂತದ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆಗೆ ಆಯ್ಕೆಯಾದವರು

ಭೂಮಿಕಾ ಹೆಗಡೆ, ಮಂಗಳೂರು,
ಸುಕೇಶ್ ಕಾರ್ಕಳ,
ಚೈತನ್ಯ ಶಿವಪುರ,
ವರ್ಷಿಣಿ ಹರಿಹರಪುರ,
ನಿಧಿ ಸುರೇಶ್ ತೀರ್ಥಹಳ್ಳಿ
ಅಶ್ಚಿತ್ ಮಂಗಳೂರು,
ಗಣೇಶ ಅಜೆಕಾರು,
ರಾಜೇಶ್ ಪ್ರಭು ಹೆಬ್ರಿ
ಸಂದೀಪ್ ಶಿವಪುರ,
ಮೋಹನ್ ಜಿ ಸಾಗರ,
ಕೃಷ್ಣ ಕುಲಾಲ್ ಉಡುಪಿ,

ಸಮಸ್ತ ಸಂಗೀತ ಪ್ರಿಯರಿಗೆ ಸುಸ್ವಾಗತ

ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ, ಆಕರ್ಷಕ ಟ್ರೋಫಿ ನೀಡಲಿದ್ದು, ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕಾರ್ಯಕ್ರಮ ಸಂಯೋಜಕರೂ, ಗಾಯಕರಾದ ಕೆ.ಜಿ.ಶಶಿಕುಮಾರ ಕಾರಂತ ಮತ್ತು ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.

Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು
– ಅಡಿಕೆ,ಚಿನ್ನಾಭರಣ ಕಳ್ಳತನ: ಮೂವರು ಅರೆಸ್ಟ್!
– ಬಂಧಿತರಿಂದ 62,500 ರೂ. ವಶಕ್ಕೆ ಪಡೆದ ಪೋಲೀಸರು
– ಮೂಡಗೆರೆ: ಸ್ಟೇರಿಂಗ್ ಕಟ್ ಆಗಿ ಪಲ್ಟಿ ಹೊಡೆದ ಬಸ್.!

NAMMUR EXPRESS NEWS
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ 9 ಮೂಟೆ ಅಡಿಕೆ ಮತ್ತು 10 ಗ್ರಾಂ. ಚಿನ್ನ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ 62,500 ರೂ. ಮೌಲ್ಯದ ವಸ್ತಗಳನ್ನು ಕಳಸ ಪೊಲೀಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಎಡದಾಳಿನ ಬೋವಿಪಾಲ್ ಎಂಬವರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 9 ಮೂಟೆ ಅಡಿಕೆ ಕಳ್ಳತನವಾಗಿರುವ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾದ ಪೊಲೀಸರು ಕಳಸ ಮಾವಿನಕೆರೆ ಕೋಟೆಹೊಳೆ ಕಿರಣ್(27), ಮಾವಿನಕೆರೆ ಗ್ರಾಮ ಗಣಪತಿಕಟ್ಟೆ ರವಿ(50), ಕಳಸ ಹೊರನಾಡು ರಸ್ತೆಯ ಮೇಲಂಗಡಿ ಯು.ನಿತೀಶ್(33) ಎಂಬವರನ್ನು ಬಂಧಿಸಿ 62ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೋವಿಲಾಲ್ ಅವರ ಮನೆಯಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ಸಾಬಿತ್ ಎಂಬವರ ಮನೆಯಲ್ಲಿ ಚಿನ್ನಾಭರಣ ಹಾಗೂ 9 ಮೂಟೆ ಗೋಟು ಅಡಿಕೆ ಚೀಲಗಳನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವುದನ್ನು ಆರೋಪಿಗಳು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಶ್ಲಾಘಿಸಿದ್ದಾರೆ.

ಮೂಡಗೆರೆ: ಸ್ಟೇರಿಂಗ್ ಕಟ್ ಆಗಿ ಪಲ್ಟಿ ಹೊಡೆದ ಬಸ್.!

ಮೂಡಿಗೆರೆ: ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿಯಾದ ಘಟನೆ ಮೂಡಿಗೆರೆಯ ಬಿದರಹಳ್ಳಿಯಲ್ಲಿ ನಡೆದಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ, ಬಸ್‍ನ ಸ್ಟೇರಿಂಗ್ ಕಟ್ ಆಗಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.