Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಸುತ್ತ ಮುತ್ತ ಮಂಗನ ಕಾಯಿಲೆ ಹೆಚ್ಚಳ..!!

ತೀರ್ಥಹಳ್ಳಿ ಪಟ್ಟಣ ಸುತ್ತ ಮುತ್ತ ಮಂಗನ ಕಾಯಿಲೆ ಹೆಚ್ಚಳ..!!
– ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ
– ಹೆದ್ದೂರು ಗ್ರಾ.ಪಂ.ವ್ಯಾಪ್ತಿ ಅತೀ ಹೆಚ್ಚು ಪ್ರಕರಣ ದಾಖಲು

NAMMUR EXPRESS NEWS
ತೀರ್ಥಹಳ್ಳಿ : ಹಲವು ದಶಕದಿಂದ ನಿರಂತರವಾಗಿ ಕಾಡುತ್ತಿರುವ ಮಂಗನ ಕಾಯಿಲೆ ಜ್ವರ ಪ್ರಕರಣ ಈ ವರ್ಷವು ತಾಲೂಕಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗೋಚರಿಸಿದೆ. ಬೇಸಿಗೆ ಅವಧಿಯಲ್ಲಿ ಹೆಚ್ಚಾಗಿ ಕಂಡು ಬರುವ ಮಂಗನಕಾಯಿಲೆ ಜ್ವರ ಗ್ರಾಮೀಣ ಜನರನ್ನು ಆತಂಕಕ್ಕೆ ದಾರಿ ಮಾಡಿದೆ. ಜ್ವರ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಕ್ಕೆ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಹಲವು ಉಪಯುಕ್ತ ಕ್ರಮಗಳ ನಡುವೆ ಜ್ವರ ಅನೇಕರಲ್ಲಿ ಕಂಡುಬಂದಿದ್ದು ಹೆದ್ದೂರು, ತ್ರಿಯಂಬಕಪುರ, ಬಸವಾನಿ, ದೇವಂಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ ಕಂಡುಬಂದಿದೆ.

ರಕ್ತ ಪರೀಕ್ಷೆ ವರದಿ ಶೀಘ್ರ : ಈವರೆಗೆ 1569 ರಕ್ತಪರೀಕ್ಷೆ ವರದಿಗೆ ಮಾದರಿ ಸಂಗ್ರಹಿಸಲಾಗಿದೆ. ಮಂಗನಕಾಯಿಲೆ ಜ್ವರ ಪೀಡಿತರ ರಕ್ತಪರೀಕ್ಷೆಗೆ ಆರೋಗ್ಯ ಇಲಾಖೆ ತುರ್ತು ಕ್ರಮ ವಹಿಸಿದೆ. ಸರಕಾರಿ ತಾಲೂಕು ಜೆಸಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಘಟಕ, ಖಾಸಗಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಲಾಗುವ ರಕ್ತದ ಪರೀಕ್ಷೆ ವರದಿ 24 ಗಂಟೆಯೊಳಗೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿದೆ. ಶಿವಮೊಗ್ಗ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರ ರಕ್ತಪರೀಕ್ಷೆ ವರದಿಯನ್ನು ಅತೀ ಶೀಘ್ರವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜ್ವರಪೀಡಿತರಿಗೆ ತ್ವರಿತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ.

2025 ಜನವರಿ ತಿಂಗಳಲ್ಲಿ 5, ಫೆಬ್ರವರಿಯಲ್ಲಿ 18, ಮಾರ್ಚನಲ್ಲಿ 25 ಮಂಗನಕಾಯಿಲೆ ಜ್ವರದ ಪ್ರಕರಣ ಪತ್ತೆ ಆಗಿದೆ. ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 31, ದೇವಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 5, ಹಾರೋಗೊಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 6, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ತ್ರಿಯಂಬಕಪುರ 4, ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 2, ಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಉಣ್ಣೆಯಲ್ಲಿ ಮಂಗನ ಕಾಯಿಲೆ ಜ್ವರ ಇರುವ ಪ್ರಕರಣ ದೃಢಪಟ್ಟಿದೆ. ಈ ವರ್ಷ ತೀರ್ಥಹಳ್ಳಿ ಸಮೀಪದ ಮೇಲಿನಕುರುವಳ್ಳಿ ಗ್ರಾಮದಲ್ಲೂ2 ಮಂಗನ ಕಾಯಿಲೆ ಜ್ವರದ ಪ್ರಕರಣ ಗೋಚರಿಸಿದೆ. ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆ ಆಗಬಹುದು ಎಂಬ ಲೆಕ್ಕಾಚಾರ ಆರೋಗ್ಯ ಇಲಾಖೆಯಲ್ಲಿದ್ದರೂ ನಿರೀಕ್ಷೆ ಪ್ರಕರಣ ಪತ್ತೆಯಾಗಿಲ್ಲ.

ರೋಗಗ್ರಸ್ತ ಮಂಗಕ್ಕೆ ಕಚ್ಚುವ ಉಣ್ಣೆ ಮನುಷ್ಯನಿಗೆ ಕಾಡಿಗೆ ತೆರಳಿದ್ದಾಗ ಕಚ್ಚದಂತೆ ಮುಂಜಾಗ್ರತೆ ವಹಿಸಲು ಈ ಹಿಂದೆ ಡಿಎಂಪಿ ತೈಲ ಬಳಸಲಾಗುತ್ತಿತ್ತು. ಕೈಕಾಲಿಗೆ ಹಚ್ಚುವ ಡಿಎಂಪಿ ತೈಲ ಸುಮಾರು 4 ಗಂಟೆ ಪರಿಣಾಮಕಾರಿ ಆಗಿರುತ್ತಿತ್ತು. ಈಗ 6 ಗಂಟೆ ಪ್ರಭಾವ ಇರುವ ಡಿಫಾ ತೈಲ ಸಂಶೋಧಿಸಿ ವಿತರಣೆ ಮಾಡಲಾಗಿದೆ. ಉಷ್ಣಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಈ ವರ್ಷ ಮಂಗನಕಾಯಿಲೆ ಜ್ವರದ ಪ್ರಕರಣ ಹೆಚ್ಚು ಕಂಡು ಬರುವ ನಿರೀಕ್ಷೆ ಇತ್ತು. ಜ್ವರ ನಿಯಂತ್ರಣ, ಸೂಕ್ತ ಚಿಕಿತ್ಸೆಗೆ ಎಲ್ಲ ಕ್ರಮ ಜರುಗಿಸಲಾಗಿದೆ. ಜನರು ಆತಂಕಪಡುವ ಅಗತ್ಯ ಇಲ್ಲ. ಜ್ವರಕ್ಕೆ ತಕ್ಷಣದಲ್ಲಿ ಚಿಕಿತ್ಸೆ ಪಡೆಯಲು ಜನರು ಮುಂದಾಗಬೇಕು.

Categories
ಬೆಂಗಳೂರು

ಹೋಟೆಲ್ ಗಳಲ್ಲಿ ಟೀ, ಕಾಫಿ ದರ ಏರಿಕೆ ಫಿಕ್ಸ್

ಹೋಟೆಲ್ ಗಳಲ್ಲಿ ಟೀ, ಕಾಫಿ ದರ ಏರಿಕೆ ಫಿಕ್ಸ್
– ಹಾಲಿನ ಖಾದ್ಯಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ.!
– ಜನಸಾಮಾನ್ಯರಿಗೆ ಬಾರಿ ಹೊಡೆತ

NAMMUR EXPRESS NEWS
ಬೆಂಗಳೂರು: ಏಪ್ರಿಲ್ 1 ಮಂಗಳವಾರದಿಂದ ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಸದ್ಯ ನಗರದಲ್ಲಿ ಟೀ, ಕಾಫಿ ಬೆಲೆ ರೂ.15- 20 ಇದೆ. ಇದನ್ನು ಎಷ್ಟರ ಪ್ರಮಾಣದಲ್ಲಿ ಏರಿಕೆ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಹೋಟೆಲ್‌ಗಳ ಸಂಘ, ಕರ್ನಾಟಕ ಹೋಟೆಲ್‌ಗಳ ಸಂಘಗಳು ಸಭೆ ಸೇರಿ ನಿರ್ಧರಿಸಲಿವೆ. ನಂದಿನಿ ಹಾಲಿನ ಬೆಲೆಯೂ ಲೀ.ಗೆ ರೂ.4 ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಕಾಫಿ-ಟೀ ದರದಲ್ಲಿ ಶೇ.10-15ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
‌ಅಕ್ಕಿ, ಬೇಳೆ, ತರಕಾರಿ, ಎಣ್ಣೆ ಎಲ್ಲವೂ ಕಳೆದ ಒಂದು ವರ್ಷದಲ್ಲಿ ಶೇ.30 ರಷ್ಟು ಏರಿಕೆ ಕಂಡಿವೆ. ದುಬಾರಿ ಸಂಬಳ, ಕಾರ್ಮಿಕರ ಕೊರತೆ, ಸರ್ಕಾರದ ಪ್ರೋತ್ಸಾಹವಿಲ್ಲದೆ ಲಾಭ, ನಷ್ಟ ಸರಿದೂಗಿಸಿಕೊಂಡು ಹೋಗುವುದು ಹೋಟೆಲ್ ಉದ್ಯಮಕ್ಕೆ ಸವಾಲಾಗಿದೆ. ರೂ.1, ರೂ.2 ಏರಿಕೆಯನ್ನು ಹೇಗಾದರೂ ನಿಭಾಯಿಸಬಹುದು. ಆದರೆ ರೂ.4 ರಷ್ಟು ಏರಿಕೆ ಹೋಟೆಲ್ ಲಾಭಕ್ಕೆ ಕುತ್ತು ತಂದಿದ್ದು, ಅಸ್ತಿತ್ವ ಅಲುಗಾಡಿಸುವ ಪ್ರಕ್ರಿಯೆ ಎಂದು ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಇನ್ನೂ ಹೋಟೆಲ್‌ಗಳಲ್ಲಿ ಬೆಣ್ಣೆ, ತುಪ್ಪ, ಪನ್ನೀರು ಬಳಸುವ ಎಲ್ಲ ತಿನಿಸುಗಳ ಬೆಲೆಯೂ ಗ್ರಾಹಕರ ಮೇಲೆ ವರ್ಗಾವಣೆ ಆಗಲಿದೆ. ಜ್ಯೂಸ್, ಐಸ್‌ಕ್ರೀಮ್ ಮಳಿಗೆಗಳಲ್ಲೂ ಹಾಲಿನ ಬಳಕೆ ವ್ಯಾಪಕ. ಹೀಗಾಗಿ, ಇವುಗಳ ದರ ಕೂಡ ಹೆಚ್ಚಳವಾಗಲಿದೆ ಎಂದು ಪಿ.ಸಿ.ರಾವ್ ಹೇಳಿದರು.

Categories
ಮಾಹಿತಿ ಸುದ್ದಿ

ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳ: ತಂಪು ಪಾನೀಯಕ್ಕೆ ಡಿಮ್ಯಾಂಡ್!

ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳ: ತಂಪು ಪಾನೀಯಕ್ಕೆ ಡಿಮ್ಯಾಂಡ್!
– ತಂಪು ಪಾನೀಯ, ಹಣ್ಣುಗಳ ಮೊರೆ ಹೋದ ಜನ
– ಬಿಸಿಲಿನ ತಾಪಕ್ಕೆ ಜನರು ಅಗತ್ಯ ಕಾಳಜಿ ವಹಿಸುವುದು ಉತ್ತಮ

NAMMUR EXPRESS NEWS
ಬೇಸಿಗೆಯ ಸುಡುಬಿಸಿಲಿನ ತಾಪಕ್ಕೆ ಜನರು ಮಾತ್ರವಲ್ಲ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಜೊತೆಗೆ ಹೂ ಬಳ್ಳಿ, ಗಿಡಗಳು ಕೂಡ ತತ್ತರಿಸಿ ಬಾಡುವುದುಂಟು. ಮುಂಜಾನೆ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಲ್ಲೇ ಜನರ ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಲಿನ ತಾಪ ಆರಂಭವಾಗುತ್ತದೆ. ಬಿಸಿಲ ಧಗೆಗೆ ಬೆವರು ಇಳಿದು ಗಂಟಲು ಒಣಗುತ್ತದೆ. ದೇಹ ಸುಸ್ತುಗೊಳ್ಳುತ್ತದೆ. ಪ್ರತಿ ದಿನ ಇಂತಹ ಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಇದೆ.
ಬಸ್, ಲಾರಿ, ಟೆಂಪೋ, ಟ್ರ್ಯಾಕ್ಟರ್, ತ್ರಿಚಕ್ರ ವಾಹನದಲ್ಲಿ ಸಂಚರಿಸುವವರ ಪಾಡು ಅಷ್ಟಿಷ್ಟಲ್ಲ. ದ್ವಿಚಕ್ರ ವಾಹನಗಳಲ್ಲಿ ಹೆಲೈಟ್ ಧರಿಸಿಕೊಂಡು ಸಂಚರಿಸುವಾಗ ಆಗುವ ಕಿರಿಕಿರಿ ಹೇಳತೀರದು.
ಒಣಗಿದ ಗಂಟಲು ತಣಿಸಲು ನೀರು, ಮಜ್ಜಿಗೆ, ಪಾನಕ, ಕೂಲ್ ಡ್ರಿಂಕ್ಸ್, ಕಬ್ಬಿನ ರಸದ ಹಣ್ಣುಗಳ ಜ್ಯೂಸ್ ಸೆಂಟರ್‌ಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಈ ಹಂತದಲ್ಲಿ ಬಹುತೇಕರು ಹಣ್ಣಿನ, ಕಬ್ಬಿನ ಜ್ಯೂಸ್‌ಗೆ ಮೊರೆ ಹೋಗುತ್ತಾರೆ. ಆದರೆ ಹಣ್ಣುಗಳ ಮತ್ತು ಜ್ಯೂಸಿನ ಬೆಲೆಯು ದುಬಾರಿಯಾಗಿದೆ. ನೂರು ರೂಪಾಯಿಗೆ ಮೂರು ಕೆಜಿ ಕರ್ಬೂಜದ ಹಣ್ಣು, ನೂರು ಐವತ್ತರಿಂದ ಅರವತ್ತು ರೂಪಾಯಿ ಮೂಸಂಬಿ ಹಣ್ಣು, ಐವತ್ತು ರೂಪಾಯಿಗೊಂದು ಎಳನೀರು, ಮೂವತ್ತು ರೂಪಾಯಿಗೊಂದು ಲೋಟ ಕಬ್ಬಿನ ಜ್ಯೂಸ್, 15ರಿಂದ 20 ರೂ.ಗೆ ಕೆಜಿ ಕಲ್ಲಂಗಡಿ ಹಣ್ಣು, ಬೆಲ್ಲದ ಹಣ್ಣಿನ ಬೆಲೆ ಹೇಳುವಂಗಿಲ್ಲ. ಇವೆಲ್ಲವೂ ಮನುಷ್ಯರ ದೇಹ ತಣಿಸಿಕೊಳ್ಳಲಿರುವ ಪಾನೀಯಗಳಾದರೆ ಬಡಪಾಯಿಗಳು ತಮ್ಮ ದಾಹ ನೀಗಿಸಲು ಬರೀ ನೀರು, ಮಜ್ಜಿಗೆಗೆ ಮೊರೆ ಹೋಗುತ್ತಾರೆ. ಇವೆಲ್ಲದರ ಮಧ್ಯೆ ಪ್ರಾಣಿ ಪಕ್ಷಿ ಸಂಕುಲದತ್ತಲೂ ಚಿತ್ತವಿರಿಸಿ ಅವುಗಳ ದಾಹಕ್ಕೊಂದಿಷ್ಟು ಮನೆಯ ಬಳಿ, ಮನೆ ಟಾರಸಿ ಮೇಲೆ ನೀರಿಟ್ಟರೆ ಪುಣ್ಯದ ಕೆಲಸವಾದೀತು.
ವೈದ್ಯರ ಸಲಹೆ : ಬೆಳಗ್ಗೆ ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನೇರವಾಗಿ ಮುಖವೊಡ್ಡದೆ ಅಗತ್ಯ ಕಾಳಜಿ ವಹಿಸಬೇಕು. ಇದರಿಂದ ಚರ್ಮಕಾಂತಿ ಕಾಪಾಡಿಕೊಳ್ಳಬಹುದು ಮತ್ತು ರೋಗರುಜಿನುಗಳಿಗೆ ಕಡಿವಾಣ ಹಾಕಬಹುದಾಗಿದೆ.

Categories
ಬೆಂಗಳೂರು

ಕನಕಪುರ : ಏಕಾಏಕಿ ಕಾಡಾನೆ ದಾಳಿಯಿಂದ ವೃದ್ಧೆಗೆ ಗಾಯ..!!

ಟಾಪ್ 3 ನ್ಯೂಸ್

ಕನಕಪುರ : ಏಕಾಏಕಿ ಕಾಡಾನೆ ದಾಳಿಯಿಂದ ವೃದ್ಧೆಗೆ ಗಾಯ..!!
– ಬೆಂಗಳೂರು: ತಾಯಿ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ
– ಬೆಳಗಾವಿ : ಕರಡಿ ದಾಳಿಯಿಂದ ಗಂಭೀರ ಗಾಯ..!

NAMMUR EXPRESS NEWS
ಕನಕಪುರ: ಜಮೀನಿನ ಬಳಿ ಕೆಲಸಕ್ಕೆ ತೆರಳಿದ್ದ ವೃದ್ಧ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸೋಮವಾರ ತಾಲೂಕಿನ ಕಸಬಾ ಹೋಬಳಿ ನಾರಾಯಣಪುರ ಸಮೀಪ ಮುನೇಶ್ವರ ದೊಡ್ಡಿ ಬಳಿ ನಡೆದಿದೆ. ಆನೆ ದಾಳಿಯಿಂದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಬೆಳಗಿನ ಜಾವ ಜಮೀನಿನ ಬಳಿ ತೆರಳಿದ್ದ ಈರಮ್ಮ(80) ಎಂಬುವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಈರಮ್ಮನ ಕಾಲು, ತೊಡೆ ಸೇರಿದಂತೆ ಗಂಭೀರ ಗಾಯಗಳಾಗಿವೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಉಪ ಸಂರಕ್ಷಣಾಧಿಕಾರಿ ರವಿಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದನ್, ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಗಾಯಾಳುವನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಾಳುವಿಗೆ ಸರ್ಕಾರದಿಂದ ಸೂಕ್ತ ನೆರವಿನ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

– ಬೆಂಗಳೂರು: ತಾಯಿ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಬೆಂಗಳೂರು: ತಾಯಿ ಸಾವಿನಿಂದ ಮನನೊಂದು ಮಗ ಸಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಂದಿ ಮೋರಿ ಬಳಿ ನಡೆದಿದೆ.
ಅಪರಾಧ ನೇಣಿಗೆ ಶರಣಾದ ಯುವಕನನ್ನು ಸುದ್ದಿಗಳು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (24) ಎಂದು ಗುರುತಿಸಲಾಗಿದೆ. ಯುವಕ, ಪುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇವರ ತಾಯಿ ಚಂದ್ರಿಕಾ ಸಹ ಕಳೆದ ಒಂದೂವರೆ ತಿಂಗಳ ಹಿಂದೆ ಸಾಲಬಾಧೆಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಬೆಳಗಾವಿ : ಕರಡಿ ದಾಳಿಯಿಂದ ಗಂಭೀರ ಗಾಯ

ಬೆಳಗಾವಿ: ಯುಗಾದಿ ಹಬ್ಬಕ್ಕೆ ಮನೆ ಬಾಗಿಲಿಗೆ ತೋರಣ
ಕಟ್ಟಲು ಬೇವಿನ ಸೊಪ್ಪು ಹಾಗೂ ಮಾವಿನ ಎಲೆ ತರಲೆಂದು
ಜಮೀನಿಗೆ ತೆರಳಿದ್ದ ರೈತನ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಕಣಕುಂಬಿ ಅರಣ್ಯ ವ್ಯಾಪ್ತಿಯ ಚಿಗುಳೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿಗುಳೆ ಗ್ರಾಮದ ವಿಲಾಸ ಚಿಕ್ಕಲಾಕರ್(55) ಎಂಬುವರೇ ಕರಡಿಗಳಿಂದ ದಾಳಿಗೊಳಗಾಗಿದ್ದು, ತಾಯಿ ಹಾಗೂ ಎರಡು ಮರಿ ಕರಡಿಗಳು ಈತನ ಮೇಲೆ ದಾಳಿ ನಡೆಸಿ ಮುಖದ ಭಾಗವನ್ನು ತೆಗೆದುಹಾಕಿದೆ.

Categories
ಮಾಹಿತಿ ಸುದ್ದಿ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ!

– ಆಘಾತಕಾರಿ ಮಾಹಿತಿ ಕುಟುಂಬದವರಿಂದ ಬಹಿರಂಗ!
– ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್

NAMMUR EXPRESS NEWS
ಭಾರತದಲ್ಲಿ ಸಾಕಷ್ಟು ವಿವಾದಗಳ ಸುಳಿಯಲ್ಲಿ ಸಿಲುಕಿ, ವಿದೇಶಕ್ಕೆ ಕಾಲ್ ಕೆತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದೆ.
ಹೌದು, ನಿತ್ಯಾನಂದನ ಸಹೋದರಿಯ ಮಗ ಸುಂದರೇಶ್ವರನ್ ಈ ಮಾಹಿತಿಯನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ವಿಡಿಯೋದಲ್ಲಿ ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮಕ್ಕಾಗಿ ಶ್ರಮಿಸಿದರು ಎಂದು ಸ್ಮರಿಸಿದರು. ನಿತ್ಯಾನಂದರು ತಮ್ಮ ಆಧ್ಯಾತ್ಮಿಕ ಸಂದೇಶಗಳಿಂದ ಅನೇಕ ಭಕ್ತರ ಮೆಚ್ಚುಗೆಯನ್ನು ಗಳಿಸಿದರು, ಇಂದು ನಮ್ಮನ್ನು ಅಗಲಿದ್ದಾರೆ ಎನ್ನಲಾಗಿದೆ. ಅವರ ಆಶ್ರಮವು ಸಾವಿನ ವರದಿಗಳ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಇನ್ನೂ ಮಾಹಿತಿ ಹೊರಬರಬೇಕಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆ, ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೋಮಾದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಅವರು ಈ ವದಂತಿಗಳಿಗೆ ಅಂತ್ಯ ಹಾಡಲು ವೀಡಿಯೊ ಮೂಲಕ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಆದರೆ, ಈಗ ಅವರು ಮತ್ತೆ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ವಿವಿಧ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಈ ರೀತಿ ಸುಳ್ಳು ಮಾಹಿತಿಯನ್ನು ಹರಡಿರಬಹುದು ಎಂದು ಹೇಳಲಾಗುತ್ತದೆ.

Categories
ಉಡುಪಿ

ಬ್ರಹ್ಮಾವರ: ಕಾರ್ ಡಿಕ್ಕಿ ಹೊಡೆದು ಬಾಲಕ ಮೃತ್ಯು!

ಉಡುಪಿ ಟಾಪ್ ನ್ಯೂಸ್!

ಬ್ರಹ್ಮಾವರ: ಕಾರ್ ಡಿಕ್ಕಿ ಹೊಡೆದು ಬಾಲಕ ಮೃತ್ಯು!

– ಉಡುಪಿ: ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಪೊಲೀಸ್, ದೂರು ದಾಖಲು!
– ಉಡುಪಿ ಮೂಲದವರಿದ್ದ ಕಾರ್ ಮೈಸೂರಿನಲ್ಲಿ ಪಲ್ಟಿ!

NAMMUR EXPRESS NEWS
ಬ್ರಹ್ಮಾವರ: ಶಾಲೆಗೆಂದು ತೆರಳುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸಮೀಪ ಏಪ್ರಿಲ್ 1 ರಂದು ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತ ಬಾಲಕ ಸ್ಥಳೀಯ ಎಸ್ ಎಮ್ ಎಸ್ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ಬಾಲಕ ವಂಶಿ ಜಿ ಶೆಟ್ಟಿ(14) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಾಲಕ ವಂಶಿ ಜಿ ಶೆಟ್ಟಿ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕುಂದಾಪುರ ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸಾವನಪ್ಪಿದ್ದಾನೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸ್ಥಳ ಅಪಘಾತ ವಲಯವಾಗಿದ್ದು, ಈ ಹಿಂದೆ ಹಲವು ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಜಂಕ್ಷನ್‌ನಲ್ಲಿ ಸುರಕ್ಷತೆಗಾಗಿ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಅತೀ ಶೀಘ್ರದಲ್ಲಿ ಗಮನಹರಿಸಬೇಕಾಗಿದೆ.

– ಉಡುಪಿ: ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಪೊಲೀಸ್, ದೂರು ದಾಖಲು!

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬರ ಜೊತೆ ಪೊಲೀಸ್ ಸಿಬ್ಬಂದಿಯೋರ್ವ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಿರುದ್ಧವೇ ಸುಮುಟೋ ಕೇಸ್ ದಾಖಲಾಗಿರುವ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಶರಣ ಬಸವ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಂತ್ ಎಂಬವರ ಜೊತೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದರು. ಈ ವಿಚಾರದ ಬಗ್ಗೆ ಸುಮಂತ್ ಪೊಲೀಸರ ಗಮನಕ್ಕೆ ತಂದಿದ್ದು ದೂರು ದಾಖಲಿಸುವುದು ಬೇಡ ಎಂದಿದ್ದರು.
ಆದರೆ ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿರುದ್ಧವೇ ದೂರು ದಾಖಲಾಗಿರುವುದು ಅಪರೂಪದ ಸಂಗತಿಯಾಗಿದೆ.

– ಉಡುಪಿ ಮೂಲದವರಿದ್ದ ಕಾರ್ ಮೈಸೂರಿನಲ್ಲಿ ಪಲ್ಟಿ!

ಉಡುಪಿ: ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 2 ವರ್ಷದ ಮಗು ಮೃತಪಟ್ಟಿದ್ದು ಒಂದೇ ಕುಟುಂಬದ ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿ ನರೇಶ್ ಅವರ ಪುತ್ರಿ ಮೈಥಿಲಿ (2) ಮೃತ ಬಾಲಕಿ. ಕಾರಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.
ಮೂಲತಃ ಉಡುಪಿ ನಿವಾಸಿಯಾದ ನರೇಶ್ ಅವರು ಕುಟುಂಬ ಸಮೇತ ಕೇರಳದ ವಯನಾಡಿಗೆ ತೆರಳಿದ್ದು ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಕಾರಿನಲ್ಲಿದ್ದ ನರೇಶ್, ಅವರ ಪತ್ನಿ ಸಂಧ್ಯಾ, ಭಾಮೈದ ಸಂದೇಶ್, ಡಾ| ಲಿಖಿತಾ, ನರೇಶ್ ಅತ್ತೆ ಮನೋರಮಾ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕಾರ್ಕಳ

ಮಾಳ ಶ್ರೀ ಗುರುಕುಲ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಬಿರದ ರಂಗು!

ಮಾಳ ಶ್ರೀ ಗುರುಕುಲ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಬಿರದ ರಂಗು!
– ಸುಮಾರು 60 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿ!

ಮಾಳ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ!
– ಪ್ರಶಸ್ತಿ ಪತ್ರವನ್ನು ನೀಡಿ ವಿದ್ಯಾರ್ಥಿಗಳಿಗೆ ಗೌರವ

NAMMUR EXPRESS NEWS
ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಮೃತ ಶಿಬಿರ 2025 ಇದರ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ನಾಗಭೂಷಣ ಜೋಶಿ ಇವರು ದೀಪ ಬೆಳಗಿಸುವ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ವಹಿಸಿದ್ದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಬಾಕಸ್ ನೆಕ್ಸ್ಟ್ ಜನರೇಶನ್ ಇದರ ಸಂಸ್ಥಾಪಕರಾದ ಗುರುರಾಜ ಹೆಗ್ಡೆ ಯೋಗ ಸಂಪನ್ಮೂಲ ವ್ಯಕ್ತಿ ಪದ್ಮ ಗಂಗಾಧರ ಭಗವದ್ಗೀತೆ ಸಂಪನ್ಮೂಲ ವ್ಯಕ್ತಿ ಶಿಲ್ಪ ಡೋಂಗ್ರೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಮತ್ತು ವೇದಗಣಿತ ಸಂಪನ್ಮೂಲ ವ್ಯಕ್ತಿ ಲತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು. ಈ ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

– ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ!

ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯುಕೆಜಿಯ ವಿದ್ಯಾರ್ಥಿಗಳಿಗೆ ಮೈಸೂರು ಪೇಟ, ಶಾಲು ಗ್ರೂಪ್ ಫೋಟೋ ಹೂವು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಇವರು ವಹಿಸಿ ಯುಕೆಜಿ ವಿದ್ಯಾರ್ಥಿಗಳ ಪೋಷಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಜ್ಯೋತಿ ಇವರು ನಡೆಸಿ, ಶಿಕ್ಷಕಿ ಸುನಿತಾ ಕಾರ್ಯಕ್ರಮದಲ್ಲಿ ಧನ್ಯವಾದ ಸಮರ್ಪಿಸಿದರು. ಸ್ವಾಗತವನ್ನು ಹಿರಿಯ ಶಿಕ್ಷಕಿ ಶೋಭ ನಿರ್ವಹಿಸಿದರು ಈ ಕಾರ್ಯಕ್ರಮದಲ್ಲಿ ಎಲ್ ಕೆ ಜಿ ವಿದ್ಯಾರ್ಥಿಗಳ ಪೋಷಕರು ಶಿಕ್ಷಕರು ಹಾಗೂ ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯ ಆದ ರವಿ ಜೋಶಿ ಸದಸ್ಯರಾದ ರಘುಪತಿ ಕಾಮತ್ ಉಪಸ್ಥಿತರಿದ್ದರು.

Categories
ಕರಾವಳಿ

ಕಂಬಳ ಲೋಕಕ್ಕೆ ವಿದಾಯ ಹಾಡಿದ – ನಂದಳಿಕೆ ಶ್ರೀಕಾಂತ ಭಟ್ರ ನೆಚ್ಚಿನ ಕೋಣ!

ಕಂಬಳ ಲೋಕಕ್ಕೆ ವಿದಾಯ ಹಾಡಿದ – ನಂದಳಿಕೆ ಶ್ರೀಕಾಂತ ಭಟ್ರ ನೆಚ್ಚಿನ ಕೋಣ!

– 50ಕ್ಕೂ ಹೆಚ್ಚು ಚಿನ್ನದ ಪದಕ ಗೆದ್ದು, ಕಂಬಳಕ್ಕೆ ಬೈ ಬೈ ಹೇಳಿದ ‘ಚಾಂಪಿಯನ್ ಕುಟ್ಟಿ’
– 17 ವರ್ಷದಿಂದ ಕಂಬಳಾಭಿಮಾನಿಗಳ ಫೇವರೇಟ್ ‘ಕುಟ್ಟಿ’!

NAMMUR EXPRESS NEWS
ಕಂಬಳ ಲೋಕದ ಲೆಜೆಂಡ್ ಕೋಣ “ಚಾಂಪಿಯನ್ ಕುಟ್ಟಿ” ವಿದಾಯ ಹೇಳಿದ್ದಾನೆ. ಕಳೆದ 17 ವರ್ಷಗಳಿಂದ ಕಂಬಳ ಕ್ಷೇತ್ರವನ್ನು ಆಳಿದ ಸೋಲಿಲ್ಲದ ಸರದಾರ ಅಂತಾನೇ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದ ನಂದಳಿಕೆ ಶ್ರೀಕಾಂತ ಭಟ್ ಅವರ ನೆಚ್ಚಿನ ಕೋಣ ಚಾಂಪಿಯನ್ ಕುಟ್ಟಿ ಕಂಬಳ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾನೆ. ಕಂಬಳದ ಕರೆಯಲ್ಲಿ ಗಾಂಭೀರ್ಯ ಓಟದ ಮೂಲಕ ಕಂಬಳ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ಕುಟ್ಟಿ ಕೊನೆಯ ಓಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಗೌರವದ ವಿದಾಯ ಹಾಡಿದ್ದಾನೆ.
17 ವರ್ಷಗಳ ಹಿಂದೆ ಮುಲ್ಕಿಯಲ್ಲಿ ನಡೆದ ಕಂಬಳದಲ್ಲಿ ಜೂನಿಯರ್ ವಿಭಾಗದಲ್ಲಿ ಮೊದಲ ಬಾರಿಗೆ ಕಂಬಳದ ಕರೆಗೆ ಇಳಿದ ಕುಟ್ಟಿ ಮೊದಲ ಓಟದಲ್ಲೇ ಬಹುಮಾನದ ನಾಗಾಲೋಟವನ್ನು ಆರಂಭಿಸಿತು.
ಇದಾದ ಬಳಿಕ ಸತತ ಎರಡು ವರ್ಷ ಜ್ಯೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ‘ಚಾಂಪಿಯನ್ ಕುಟ್ಟಿʼ ಕಂಬಳಾಭಿಮಾನಿಗಳ ಹೃದಯ ಗೆದ್ದಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಬಳಿ ಇದ್ದ ‘ಕುಟ್ಟಿ’ ಕೋಪಿಷ್ಠನಾಗಿದ್ದು, ಯಾರ ನಿಯಂತ್ರಣಕ್ಕೂ ಸಿಗುವ ಕೋಣ ಅಲ್ಲ. ಹೀಗಾಗಿ ‘ಚಾಂಪಿಯನ್ ಕುಟ್ಟಿ’ ನಂದಳಿಕೆ ಶ್ರೀಕಾಂತ ಭಟ್ಟರ ತಂಡ ಸೇರಿಕೊಂಡಿತ್ತು. ನಂದಳಿಕೆ ಶ್ರೀಕಾಂತ ಭಟ್ಟರ ಬಳಿ ಮತ್ತಷ್ಟು ಪಳಗಿದ ‘ಕುಟ್ಟಿ’ ಹಲವಾರು ಬಹುಮಾನಗಳನ್ನು ಪಡೆಯುವ ಮೂಲಕ ‘ಚಾಂಪಿಯನ್ ಕುಟ್ಟಿ’ಯಾಗಿ ಬದಲಾಗಿತ್ತು.

ಸೋಲಿಲ್ಲದ ಸರದಾರ ನಮ್ಮ ಚಾಂಪಿಯನ್‌ ಕುಟ್ಟಿ!

ಯಾವುದೇ ಕೋಣಗಳ ಜೊತೆ ಕಟ್ಟಿ ಓಡಿಸಿದ್ರೂ ಬಹುಮಾನ ತಂದು ಕೊಡುವ ಶಕ್ತಿ ಚಾಂಪಿಯನ್‌ ‘ಕುಟ್ಟಿ’ಗೆ ಇತ್ತು ಅನ್ನೋದೇ ವಿಶೇಷ.
ಈ ಕೋಣವನ್ನು ಓಡಿಸಿದ ನಾಲ್ವರು ಓಟಗಾರರು ಕೂಡಾ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಓಟದಲ್ಲಿ ಹಿಂದೆ ಬಿದ್ದಾಗ ಕೋಣಗಳಿಗೆ ನಿವೃತ್ತಿ ಘೋಷಣೆ ಮಾಡಲಾಗುತ್ತದೆ. ಆದ್ರೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿದ ‘ಚಾಂಪಿಯನ್‌ ಕುಟ್ಟಿ’ ಇಲ್ಲೂ ಕೂಡಾ ಹಗ್ಗ ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿ ತಾನು ಇನ್ನೂ ಚಾಂಪಿಯನ್‌ ಅಂತ ತೋರಿಸಿಕೊಟ್ಟಿದೆ.
ಆದರೆ ಇದಾದ ಬಳಿಕ ನಂದಳಿಗೆ ಶ್ರೀಕಾಂತ್ ಭಟ್ಟರು ‘ಚಾಂಪಿಯನ್ ಕುಟ್ಟಿ’ಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕಂಬಳ ಅಭಿಮಾನಿಗಳ ಕರತಾಡನದೊಂದಿಗೆ ‘ಚಾಂಪಿಯನ್ ಕುಟ್ಟಿ’ಗೆ ಗೌರವ ನೀಡಿ ವಿಶೇಷ ರೀತಿಯಲ್ಲಿ ಬೀಳ್ಕೊಡಲಾಗಿದೆ.

Categories
ರಾಜ್ಯ

ಕೊಡಗು : 2 ಕಾಡುಕೋಣಗಳಿಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ..!!

ಟಾಪ್ 5 ನ್ಯೂಸ್ ಕರ್ನಾಟಕ

ಕೊಡಗು : 2 ಕಾಡುಕೋಣಗಳಿಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ..!!
– ರಾಯಚೂರು: ಬೀದಿನಾಯಿಗಳ ದಾಳಿಯಿಂದ 6 ವರ್ಷದ ಬಾಲಕ ಬಲಿ.!
– ಬಾಗಲಕೋಟೆ: ಸ್ನಾನಕ್ಕೆಂದು ನದಿಗೆ ತೆರಳಿದ್ದ ಮೂರು ಬಾಲಕರು ಸಾವು..!!
– ಧಾರವಾಡ: ಆಡು ಮೇಯಿಸುತ್ತಿರುವಾಗ ಸಿಡಿಲು ಬಡಿದು ವ್ಯಕ್ತಿ ಸಾವು..!
– ಬೆಂಗಳೂರು: ರಂಜಾನ್‌ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಿ ಬರುವಾಗ ಅಪಘಾತ

NAMMUR EXPRESS NEWS
ಕೊಡಗು: ಗುಂಡು ಹಾರಿಸಿ ದುಷ್ಕರ್ಮಿಗಳು ಎರಡು ಕಾಡುಕೋಣಗಳನ್ನು ಹತ್ಯೆ ಮಾಡಿರುವ ಘಟನೆ ಕೊಡಗಿನ ಕುಶಾಲನಗರ ತಾಲೂಕು ಮಾಲ್ದಾರೆ ಮೀಸಲು ಅರಣ್ಯದ ವಾಲನೂರು ತ್ಯಾಗತೂರು ವ್ಯಾಪ್ತಿ ಅವರೆಗುಂದದಲ್ಲಿ ನಡೆದಿದೆ. ದುಷ್ಕರ್ಮಿಗಳು ರಾತ್ರಿ ಗುಂಡು ಹಾರಿಸಿದ ಶಬ್ದ ಕೇಳಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಎರಡು ಕಾಡು ಕೋಣಗಳು ಸ್ಥಳದಲ್ಲೇ ಬಿದ್ದು ಮೃತಪಟ್ಟಿವೆ. ಆರೋಪಿಗಳ ಸುಳಿವು ದೊರೆತಿದ್ದು, ತನಿಖೆ ನಡೆಯುತ್ತಿದೆ.

– ರಾಯಚೂರು: ಬೀದಿನಾಯಿಗಳ ದಾಳಿಯಿಂದ 6 ವರ್ಷದ ಬಾಲಕ ಬಲಿ

ರಾಯಚೂರು : ಬಹಿರ್ದೆಸೆಗೆ ಹೋಗಿದ್ದ ಬಾಲಕ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ(6) ಮೃತಬಾಲಕ. ಬಹಿರ್ದೆಸೆಗೆ ಹೋಗಿದ್ದಾಗ ಬೀದಿ ನಾಯಿಗಳ ಹಿಂಡು ಸಿದ್ದಪ್ಪನ ಮೇಲೆ ದಾಳಿ ಮಾಡಿವೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಪಾಲಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಬಾಲಕಿ ಮೇಲೂ ದಾಳಿ: ಮನೆ ಅಂಗಳದಲ್ಲಿ ಆಡುತ್ತಿದ್ದ ಬಾಲಕಿ ಚೈತ್ರ (9) ಮೇಲೂ ಬೀದಿ ನಾಯಿಗಳುದಾಳಿ ನಡೆಸಿರುವ ಘಟನೆ ಮರ್ಚೇಟ್ಟಾಳದಲ್ಲಿ ಇತ್ತೀಚೆಗೆ ನಡೆದಿದೆ. ಬಾಲಕಿಯನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿದೆ.

– ಬಾಗಲಕೋಟೆ: ಸ್ನಾನಕ್ಕೆಂದು ನದಿಗೆ ತೆರಳಿದ್ದ ಮೂರು ಬಾಲಕರು ಸಾವು..!!

ಬಾಗಲಕೋಟೆ: ಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದ 3 ಬಾಲಕರು ನೀರುಪಾಲಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಇಲಿಯಾಳ ಗ್ರಾಮದಲ್ಲಿ ಜರುಗಿದೆ. ಇಲಿಯಾಳ ಗ್ರಾಮದ ಸೋಮಶೇಖರ ದೇವರಮನಿ (15), ಪರನಗೌಡ ಬೀಳಗಿ (17), ಮಲ್ಲಪ್ಪ ಬಗಲಿ (15) ಮೃತ ಬಾಲಕರು. ದೇವರ ಪಲ್ಲಕ್ಕಿ ಉತ್ಸವದ ವೇಳೆ ಕೃಷ್ಣಾನದಿ ಬಳಿ ಸ್ನಾನಕ್ಕೆ ತೆರಳಿದಾಗ ಈ ದುರ್ಘಟನೆ ಜರುಗಿದೆ.

– ಧಾರವಾಡ: ಆಡು ಮೇಯಿಸುತ್ತಿರುವಾಗ ಸಿಡಿಲು ಬಡಿದು ವ್ಯಕ್ತಿ ಸಾವು..!

ಧಾರವಾಡ: ಕಳೆದೆರಡು ದಿನಗಳಿಂದ ಧಾರವಾಡ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗಿದ್ದು, ಸಿಡಿಲಿಗೆ ಭಾನುವಾರ ವ್ಯಕ್ತಿ ಮೃತಪಟ್ಟಿದ್ದಾರೆ. ಮುಗದ ಗ್ರಾಮದ ರಸೂಲ್ ಸಾಬ್ ಮಹಬೂಬ್ ಸಾಬ್ ಚಾಂದವಾಲೆ (45) ಸಂಜೆ ಜಮೀನಿನಲ್ಲಿ ಆಡು ಮೇಯಿಸುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

– ಬೆಂಗಳೂರು: ರಂಜಾನ್‌ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಿ ಬರುವಾಗ ಅಪಘಾತ

ಬೆಂಗಳೂರು : ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಿ ಮನೆಗೆ ಮರಳುವಾಗ ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಕೆಲಸಗಾರರು ಮೃತಪಟ್ಟಿರುವ ಘಟನೆ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ. ಈಶಾನ್ಯ ರಾಜ್ಯ ಮೂಲದ ಸುಹೇಲ್ ಸಾದಿಕ್ (26) ಹಾಗೂ ಬಿಜಯ್ (25) ಮೃತಪಟ್ಟಿದ್ದು, ಸದಾಶಿವನಗರ ಸಮೀಪ ಬಿಇಎಲ್ ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸಾದಿಕ್ ಹಾಗೂ ಬಿಜಯ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಸೂಪರ್ ಮಾರ್ಕೆಟ್‌ವೊಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಭಾನುವಾರ ರಾತ್ರಿ ಶಾಪಿಂಗ್‌ಗೆ ಹೋದವರು ನಸುಕಿನಲ್ಲಿ ಮನೆಗೆ ಅವರು ಮರಳುತ್ತಿದ್ದರು. ಆಗ ಮಾರ್ಗೆ ಮಧ್ಯೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ಐಪಿಎಲ್ – 2025
* ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಮುಂಬೈ
* ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ವೇಗಿ ಅಶ್ವನಿ ಕುಮಾರ್

NAMMUR EXPRESS SPORTS NEWS
ಮುಂಬೈ: ಐಪಿಎಲ್ 2025 ರ 12 ನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಸೀಸನ್‌ನ ತನ್ನ ಮೊದಲ ಗೆಲುವು ದಾಖಲಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಗೆಲುವು ದಾಖಲಿಸಿತು. ಮುಂಬೈ ತಂಡದ ಈ ಗೆಲುವಿನಲ್ಲಿ ವೇಗಿ ಅಶ್ವನಿ ಕುಮಾರ್ ಮತ್ತು ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಪ್ರಮುಖ ಪಾತ್ರವಹಿಸಿದರು.
ಈ ಎರಡು ತಂಡಗಳು ಸತತ ಸೋತು ಬಂದಿದ್ದರಿಂದ ಎರಡೂ ತಂಡಗಳಿಗೂ ಗೆಲುವು ಅವಶ್ಯಕವಾಗಿತ್ತು. ಅಂತಿಮವಾಗಿ ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡಿದ ಮುಂಬೈ ಏಕಪಕ್ಷೀಯವಾಗಿ ಕೆಕೆಆರ್ ತಂಡವನ್ನು ಮಣಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ ಕೇವಲ 12.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿ ಎಂಟು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

* ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ವೇಗಿ ಅಶ್ವನಿ ಕುಮಾರ್
ಮುಂಬೈ ಇಂಡಿಯನ್ಸ್‌ನ ಯುವ ವೇಗಿ ಅಶ್ವನಿ ಕುಮಾರ್‌ ಅವರು ತನ್ನ ಪಾದಾರ್ಪಣೆ ಪಂದ್ಯದ ಬೌಲ್ ಮಾಡಿದ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ 23 ವರ್ಷದ ಆಟಗಾರ ಅಶ್ವನಿ ಕುಮಾರ್ ಕೆಕೆಆ‌ರ್ ನಾಯಕ ಅಜಿಂಕ್ಯ ರಹಾನೆಯನ್ನು ತಮ್ಮ ಮೊದಲ ಎಸೆತದಲ್ಲಿ ಔಟ್ ಮಾಡಿದರು. ಕೆಕೆಆರ್‌ನ ನಾಲ್ಕನೇ ಓವ‌ರ್ ನಲ್ಲಿ ರಹಾನೆ 7 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಎಡಗೈ ವೇಗಿಯಾದ ಅಶ್ವನಿ ಕುಮಾರ್ ಪಂಜಾಬ್‌ಗಾಗಿ ದೇಶೀಯವಾಗಿ ಆಡಿರುತ್ತಾರೆ ಮತ್ತು ಇದುವರೆಗೆ ಎರಡು ಪ್ರಥಮ ದರ್ಜೆ ಪಂದ್ಯಗಳು, ನಾಲ್ಕು ಲಿಸ್ಟ್ ಎ ಪಂದ್ಯಗಳು ಮತ್ತು ನಾಲ್ಕು ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ.

ಇಂದು ಲಖನೌ ಹಾಗೂ ಪಂಜಾಬ್ ನಡುವೆ ಪಂದ್ಯ ನಡೆಯಲಿದ್ದು ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲವಿದೆ.