ಮಳೆಗಾಲದಲ್ಲಿ ಮೀನು, ಏಡಿ ಹಿಡಿಯುವುದೇ ಒಂದು ಗಮ್ಮತ್!
– ಊರ ಬದಿ ಏಡಿ, ಮೀನು ಹಿಡಿಯುವುದರಲ್ಲಿ ಕರಾವಳಿ ಮಂದಿ ಎತ್ತಿದ ಕೈ!
ವಿಶೇಷ ವರದಿ: ಸುರಕ್ಷಾ ಕೊಯಿಲ
NAMMUR EXPRESS NEWS
ಕರಾವಳಿ ಎಂಬುವುದೇ ಮೀನು, ಏಡಿ, ಸಿಗಡಿ ಊಟಕ್ಕೆ ಫೇಮಸ್. ಇಲ್ಲಿ ಮಳೆಗಾಲದಲ್ಲಂತೂ ಕೇಳೋದೇ ಬೇಡ.. ನದಿ ಕೆರೆ ಹೊಳೆಗಳಲ್ಲಿ ಮಾತ್ರವಲ್ಲದೆ ತೋಟಗದ್ದೆಗಳ ಮೂಲೆಯಲ್ಲಿ ಕಂಡುಬರುವ ತೋಡುಗಳಲ್ಲೂ ಏಡಿ ಅಣಬೆ ಮೀನು ಎಂಬ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ ನಮ್ಮ ಕರಾವಳಿ ಮಂದಿ.
ಹೇರಳವಾಗಿ ಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುವುದೇ ಒಂದು ಸೌಭಾಗ್ಯ.
ಮಕ್ಕಳ ಖುಷಿಯಂತೂ ಕೇಳೋದೇ ಬೇಡ.. ಬಿಟ್ಟೂ ಬಿಡದೆ ಬರುವ ಮಳೆಗೆ ಶಾಲಾ-ಕಾಲೇಜುಗಳಲ್ಲಿ ಸುರಕ್ಷತೆಗಾಗಿ ರಜೆ ಕೊಟ್ಟರೆ ಡಬ್ಬಿ, ಹಳೆಯ ಶಾಲು, ಪಾತ್ರೆ ಹಿಡಿದು ತೋಟದ ಬದಿಗೆ ಇವರ ಓಟ. ಅದೇ ಡಬ್ಬಿಯಲ್ಲಿ ಎರಡು ಮೀನು ಸಿಕ್ಕರೆ ಸಾಕು ತಾನೇನೋ ಸಾಧನೆ ಮಾಡಿದಂತೆ ಸಂಭ್ರಮ.
– ಏಡಿ ಹಿಡಿಯೋಕು ಸೈ!
ಊರಲ್ಲಿ ಮಳೆಗಾಲಕ್ಕೆ ಕೆರೆಗಳು ತುಂಬಿದಾಗ ಆ ನೀರು ಹರಿದು ತೋಟಗದ್ದೆಗಳಿಗೆ ನುಗ್ಗುತ್ತದೆ. ಇದರ ಮಧ್ಯೆ ಬೆಳೆ ಹಾಳಾಗಬಾರದೆಂಬ ಕಾರಣಕ್ಕೆ ತೋಡುಗಳನ್ನು ಕಟ್ಟಿರುತ್ತಾರೆ ಹೀಗೆ ತೋಟಗದ್ದೆಗಳಲ್ಲಿ ಕಟ್ಟಿರುವ ತೋಡು ಕಾಲುವೆಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಏಡಿಗಳು ಸಿಗುತ್ತವೆ.
ಈ ಏಡಿಗಳನ್ನು ಹಿಡಿಯುವುದೇ ಒಂದು ಹರಸಾಹಸ.
ಇನ್ನು ಅಣಬೆ ಮೀನು ಹಿಡಿಯುವಷ್ಟು ಸುಲಭವಲ್ಲ ಈ ಏಡಿ ಹಿಡಿಯುವ ಜಂಜಾಟ. ಎಲ್ಲರಿಗೂ ಹಿಡಿಯಲು ಸಾಧ್ಯವಿಲ್ಲ ಆದರೆ ಕೆಲವರಂತೂ ಏಡಿ ಹಿಡಿಯುವುದರಲ್ಲಿ ಪಿಎಚ್‌ಡಿ ಮಾಡಿರುತ್ತಾರೆ. 10 ವರ್ಷದ ಬಾಲಕರಿಂದ ಹಿಡಿದು 30 ವರ್ಷದ ಅಂಕಲ್ಗಳು ಕೂಡ ಈ ಆಟದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ಹಣೆಗೊಂದು ಟಾರ್ಚ್, ಕಟ್ಟಿಕೊಂಡು ರಾತ್ರಿಯ ಸಮಯದಲ್ಲಿ ಏಡಿ ಹಿಡಿಯಲು ತೆರಳುತ್ತಾರೆ.
– ಏಡಿ ಹಿಡಿಯುವುದಕ್ಕೂ ಟ್ರಿಕ್ಸ್!
ಮೊದಲು ಒಂದು ಹಗ್ಗದಲ್ಲಿ ಕೋಳಿ ಕರುಳನ್ನು ಸುತ್ತಿ ಸುತ್ತಿ ಕಟ್ಟಿಕೊಳ್ಳಬೇಕು. ನಂತರ ಒಂದು ಉದ್ದನೆಯ ಹಗ್ಗದಲ್ಲಿ ಕಲ್ಲನ್ನು ಕಟ್ಟಿಕೊಳ್ಳಬೇಕು. ನಂತರ ಕೋಳಿ ಕರುಳು ಕಟ್ಟಿದ ಹಗ್ಗವನ್ನು ಕಲ್ಲು ಕಟ್ಟಿದ ಹಗ್ಗದ ಭಾಗದಲ್ಲಿ ಕಟ್ಟಬೇಕು. ಈಗ ಕಲ್ಲು-ಕರುಳು ಒಂದೇ ಕಡೆ ಆಗುತ್ತದೆ. ನಂತರ ಈ ಉದ್ದನೆಯ ಕಲ್ಲು-ಕರುಳು ಕಟ್ಟಿದ ಹಗ್ಗವನ್ನು ತೋಡಿನೊಳಗೆ ಬಿಡಬೇಕು. ತೋಡಿನೊಳಗೆ ಇರುವ ಕಲ್ಲುಗಳ ಅಡಿ ಅಥವಾ ತೋಡಿನ ಬದಿಯಲ್ಲಿನ ಸಂದುಗಳಲ್ಲಿ ಏಡಿ ಇರುತ್ತವೆ. ಇವು ಕೋಳಿ ಕರುಳಿನ ವಾಸನೆ ಹಿಡಿದು ಅದರ ಬಳಿ ಬರುತ್ತವೆ. ಆದರೆ ಇವು ಬರಲು ಸ್ವಲ್ಪ ಸಮಯ ಬೇಕು ಮತ್ತು ಮನುಷ್ಯರೇ ಹಗ್ಗ ಹಿಡಿದು ನಿಂತರೆ ಶೇಕ್ ಆಗುತ್ತಾ ಇರುತ್ತದೆ, ಹೀಗಾಗಿ ಏಡಿಗಳು ಬರುವುದಿಲ್ಲ. ಅದಕ್ಕಾಗಿ ಆ ಹಗ್ಗವನ್ನು ಹಿಡಿದು ನಿಲ್ಲುವ ಬದಲು ಪಕ್ಕದಲ್ಲಿರುವ ಮರಗಳಿಗೆ ಕಟ್ಟಬಹುದು ಅಥವಾ ನಾವೇ ಒಂದು ಕಂಬ ಊತು ಕಟ್ಟಬಹುದು.
ಮಾಂಸದ ಹಗ್ಗ ಇಳಿಬಿಟ್ಟ 5-10 ನಿಮಿಷಗಳಲ್ಲಿ ನಿಧಾನವಾಗಿ ಏಡಿಗಳು ಬಂದು ಕರುಳನ್ನು ಮುತ್ತಿಹಾಕಿಕೊಳ್ಳುತ್ತವೆ. ಕೊಂಬುಗಳಲ್ಲಿ ಮಾಂಸವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ನಾವು ಆ ಹಗ್ಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಮಾಂಸವನ್ನು ಏನೋ ಎಳೆಯುತ್ತಿದೆ ಎಂದೆನಿಸಿದರೆ ಅಲ್ಲಿ ಏಡಿಗಳು ಬಂದಿವೆ ಎಂದು ಅರ್ಥ. ಹೀಗೆ ಗಮನಕ್ಕೆ ಬಾರದಿದ್ದರೂ ಕೂಡ 5 ನಿಮಿಷದ ಬಳಿಕ ಹಗ್ಗವನ್ನು ಮೇಲಕ್ಕೆತ್ತಿದರೆ ಏಡಿಗಳು ಸಿಕ್ಕಿವೆಯಾ ಇಲ್ಲವಾ ಎಂಬುದು ಗೊತ್ತಾಗುತ್ತದೆ.








