Categories
ಕಾರ್ಕಳ ಮಂಗಳೂರು

ರಾಜ್ಯ ಮಟ್ಟದ ಕ್ರೀಡೆಯಲ್ಲಿ ಕ್ರೈಸ್ಟ್ ಕಿಂಗ್ ಕಾಲೇಜು ಸಾಧನೆ

ರಾಜ್ಯ ಮಟ್ಟದ ಕ್ರೀಡೆಯಲ್ಲಿ ಕ್ರೈಸ್ಟ್ ಕಿಂಗ್ ಕಾಲೇಜು ಸಾಧನೆ
* ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆ
– ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪೂರ್ಣಿಮ ಪ್ರಭು ಗೆ ಕಂಚಿನ ಪದಕ

NAMMUR EXPRESS NEWS
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ,
ವಿಜಯಪುರ ಜಿಲ್ಲೆ ಹಾಗೂ ಹೆಚ್.ಜಿ ಪ.ಪೂ ಕಾಲೇಜು ಸಿಂದಗಿ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಾರ್ಕಳದ ಕೈಸ್ಟ್ರಿಂಗ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೂರ್ಣಿಮ ಪ್ರಭು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದರು.

Categories
ಚಿಕ್ಕಮಗಳೂರು ಶೃಂಗೇರಿ

ವಿಶ್ವನಾಥ್ ಗದ್ದೆಮನೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಹೆಲ್ತ್ ಕಿಟ್

ವಿಶ್ವನಾಥ್ ಗದ್ದೆಮನೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಹೆಲ್ತ್ ಕಿಟ್

* ಸಾಮಾಜಿಕ,ಶೈಕ್ಷಣಿಕ,ಆರೋಗ್ಯ ಕ್ಷೇತ್ರದಲ್ಲಿ ವಿಶ್ವನಾಥ್ ಗದ್ದೆಮನೆ ಸಹಾಯ
* ಪಿ ಯು ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್ ಹಾಗೂ ಸಿಇಟಿ ಪುಸ್ತಕ ವಿತರಣೆ

NAMMMUR EXPRESS NEWS
ಶೃಂಗೇರಿ: ಕ್ಷೇತ್ರದಲ್ಲಿ ಸಮಾಜಿಕ,ಶೈಕ್ಷಣಿಕ,ಆರೋಗ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸಹಕಾರ ನೀಡುತ್ತಾ ಬಡ ಹಾಗೂ ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ವಿಶ್ವನಾಥ್ ಗದ್ದೆಮನೆಯವರು ಈಗ ತಮ್ಮ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ಮೂಲಕ ಕ್ಷೇತ್ರದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಹೆಲ್ತ್ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.
ಇಂದು ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಸದಸ್ಯರು ಕೊಪ್ಪ,ಹರಿಹರಪುರ,ಶೃಂಗೇರಿಯ ಸರ್ಕಾರಿ ಆಸ್ಪತ್ರೆಗಳಿಗೆ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾದ ಎಮರ್ಜೆನ್ಸಿ ಹೆಲ್ತ್ ಕಿಟ್‌ಗಳನ್ನು ವಿತರಿಸಿದರು.
ಈ ಕಿಟ್ ತಜ್ಞ ವೈದ್ಯರಿಂದ ಸೂಚಿಸಲ್ಪಟ್ಟ ಆಧುನಿಕ ವೈದ್ಯಕೀಯ ಪರಿಕರಗಳಿಂದ ಕೂಡಿದ್ದು, ಎನ್ ಆರ್ ಪುರ,ಕೊಪ್ಪ,ಶೃಂಗೇರಿ ತಾಲೂಕುಗಳಲ್ಲಿ ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ವಿಕಾಸ್,ರಾಘವೇಂದ್ರ ಹಂಚಿನಮನೆ,ನಾಗೇಶ್ ಗೌಡ್ರು ಜೀರುಳ್ಳಿ,ನಿಶಾಂತ್ ಭೀಮನೆರೆ,ಅಶೋಕ್ ನಿಲವಾನಿ,ಸಚಿನ್,ಸುಹಾಸ್ ಗದ್ದೆಮನೆ ಇತರರು ಉಪಸ್ಥಿತರಿದ್ದರು.

* ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಕಿಟ್
ಶೈಕ್ಷಣಿಕ ಕ್ಷೇತ್ರದಲ್ಲೂ ನೆರವಿನ ಹಸ್ತ ಮುಂದುವರೆಸಿರುವ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್, ಶೃಂಗೇರಿ, ಕೊಪ್ಪ,ಎನ್ ಆರ್ ಪುರ,ಬಾಳೆಹೊನ್ನೂರಿನ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ನಿಟ್ಟಿನಲ್ಲಿ 900 ಪುಸ್ತಕಗಳ 50 ಸೆಟ್‌ಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ವಿತರಿಸಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷರಾದ ಜಿನಿ ವಿಶ್ವನಾಥ್ ರವರ ನೇತೃತ್ವದಲ್ಲಿ ವಿತರಿಸಲಾದ ಈ ಪುಸ್ತಕಗಳನ್ನು ನೆಸ್ಟ್ ಪಬ್ಲಿಕೇಷನ್ ಸಿದ್ದಪಡಿಸಿದ್ದು,ಇದರಿಂದ ಕ್ಷೇತ್ರದ ಸುಮಾರು 500 ವಿಜ್ಞಾನ ವಿಭಾಗದ ಪಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗಲಿದೆ.

Categories
ಉಡುಪಿ ಉತ್ತರ ಕನ್ನಡ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ!

* ಮಂಗಳೂರು: ಸಂಕಷ್ಟಕ್ಕೆ ಸಿಲುಕಿದ 31 ಮಂದಿ ಮೀನುಗಾರರ ರಕ್ಷಣೆ
* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ
* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ
* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ
* ಕಡಬ: ಎರಡು ಕಾರುಗಳ ನಡುವೆ ಡಿಕ್ಕಿ
* ಬ್ರಹ್ಮಾವರ: ಸಾಲ ದೊರಕಿಸಿಕೊಡುವುದಾಗಿ ವಂಚನೆ
* ಹೊನ್ನಾವರ: ಯುವತಿ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮೀನುಗಾರಿಕಾ ದೋಣಿಯೊಂದು ಸ್ಟೀಯರಿಂಗ್ ಗೆ ದೋಷದ ಪರಿಣಾಮವಾಗಿ ನಿಯಂತ್ರಣ ತಪ್ಪಿ, 31 ಮಂದಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಿದ ಘಟನೆ ನಡೆದಿದೆ. ಗೋವಾ ಮೂಲದ ಐಎಫ್ ಬಿ ಸಂತ್ ಅಂಟಾನ್ -1 ಎಂಬ ಹೆಸರಿನ ದೋಣಿಯು ಮಂಗಳೂರಿನ ಕರಾವಳಿ ಭಾಗದಿಂದ ಸುಮಾರು 185 ಕಿಲೋಮೀಟರ್ ದೂರದಲ್ಲಿ, ಸಮುದ್ರದ ನಡುವೆಯೇ 11 ದಿನಗಳಿಂದ ತೇಲಾಡುತ್ತಿತ್ತು. ಹವಾಮಾನ ವೈಪರೀತ್ಯದ ನಡುವೆಯೂ, ಐಸಿಜಿಎಸ್ ಕಸ್ತೂರ್ ಬಾ ಗಾಂಧಿ ನೌಕೆ ಹಾಗೂ ಕೊಚ್ಚಿಯಿಂದ ಕರಾವಳಿ ರಕ್ಷಣಾ ದಳದ ಡೊರ್ನಿಯರ್ ವಿಮಾನದ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ರಕ್ಷಣಾ ದಳದ ಸಿಬ್ಬಂದಿಗಳು ಸಮುದ್ರದ ನಡುವೆ ತೇಲಾಡುತ್ತಿದ್ದ ಮೀನುಗಾರಿಕಾ ದೋಣಿಗೆ ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವನ್ನು ನೀಡಿದರು. ಈ ಮೂಲಕ ಸ್ಟೀರಿಂಗ್ ದೋಷವು ನಿವಾರಣೆಯಾಗಿ, ದೋಣಿಯನ್ನು ಹೊನ್ನಾವರದ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸುಮಾರು 31 ಜನ ಮೀನುಗಾರರು ಕೋಸ್ಟ್ ಗಾರ್ಡ್ ಅವರ ಕಾರ್ಯಾಚರಣೆಯ ನೆರವಿನಿಂದ ರಕ್ಷಣೆ ಪಡೆದುಕೊಂಡರು ಎನ್ನಲಾಗಿದೆ.

* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ

ಕುಂದಾಪುರ: ನೇರಳೆಕಟ್ಟೆ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ, ಸಾಗುವಾನಿ ಜಾತಿಯ ಮರಗಳನ್ನು ಕಡಿದು, ಸಾಗಾಟ ಮಾಡಿರುವ ಕುರಿತು ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ದೂರು ನೀಡಿದ್ದರು.ಆರೋಪಿಗಳಾದ ಆನಗಳ್ಳಿಯ ದಿನೇಶ್ ಗಾಣಿಗ, ಸಂತೋಷ್ ಮತ್ತು ಶಾಂತರಾಮ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿತ್ತು. ಕುಂದಾಪುರದ ಜೆಎಂಎಫ್ ಸಿ ನ್ಯಾಯಾಲಯವು ವಿಚಾರಣೆಯನ್ನು ನಡೆಸುವ ಸಂದರ್ಭದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ದೋಷಮುಕ್ತ ಎಂದು ಆದೇಶವನ್ನು ಹೊರಡಿಸಿದೆ.‌

* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಅಲೆವೂರು ಗ್ರಾಮದ ಪಡುಅಲೆವೂರಿನಲ್ಲಿ ನಡೆದಿದೆ. ಮನೆಯ ಬಳಿಯ ಸರ್ಕಾರಿ ಜಾಗದಲ್ಲಿದ್ದ ತೆಂಗಿನಮರವನ್ನು ಹತ್ತಿದ ಸಂದರ್ಭದಲ್ಲಿ, ಸುರೇಶ್ ಅವರು ಬಿದ್ದಿದ್ದಾರೆ. ಇದರ ಪರಿಣಾಮವಾಗಿ ತಲೆ, ಬೆನ್ನು ಮತ್ತು ಕಣ್ಣಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಸುರೇಶ್ ಅವರನ್ನು ಪರೀಕ್ಷಿಸಿದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದರು. ಬಳಿಕ ಅಲ್ಲಿಂದ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಅವರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುರೇಶ್ ಅವರ ಸಹೋದರಿ ಸುಜಾತ ದೇವಾಡಿಗ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.‌ ಹೇಳಿಕೆಯ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ

ಮೂಡಬಿದರೆ: ಕಳೆದೆರಡು ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ಯುವಕನೋರ್ವ ಕತ್ತಿಯಿಂದ ಇರಿದ ಘಟನೆ, ವರ್ಣಬೆಟ್ಟುವಿನಲ್ಲಿ ನಡೆದಿದೆ. ಕೆರೆಕೋಡಿ ನಿವಾಸಿಯಾದ ಸಂಜೀವಿ ಅಥವಾ ನಯನಾ ನಾಯ್ಕ ಅವರಿಗೆ, ರಾಮ್ ಮೋಹನ ನಗರದ ನಿವಾಸಿಯಾದ ರಾಜೇಶ್ ನಾಯ್ಕ ಕತ್ತಿಯಿಂದ ಇರಿದಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಇದರ ಪರಿಣಾಮವಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ತಲೆ, ಕೈ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದ ಹಾಗೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಅವರು, ರಾಜೇಶ್ ನಾಯ್ಕನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಮೂಲಕ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ ಎನ್ನಲಾಗಿದೆ.‌

* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ

ಪುತ್ತೂರು: ಕೊಕ್ಕಡ ಗ್ರಾಮದ ನಿವಾಸಿಯಾದ ಮ್ಯಾಕ್ಸಿಮ್ ಪಿಂಟೋ ಎನ್ನುವವರು ಬಸ್ ಚಾಲಕರಾಗಿದ್ದು, ತಮ್ಮ ಕರ್ತವ್ಯವನ್ನು ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರ ಮೇಲೆ ಹಲ್ಲೆಯಾದ ಘಟನೆ ಇಳಂತಿಲ ಗ್ರಾಮದ ಅಲೆಕ್ಕಿ ಎಂಬಲ್ಲಿ ನಡೆದಿದೆ. ಬೈಕ್ ವೊಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮ್ಯಾಕ್ಸಿನ್ ಅವರ ಬೈಕ್ ಗೆ ಅಡ್ಡಗಟ್ಟಿ ಹಲ್ಲೆ ನಡೆಸಿ, ಬಳಿಕ ನಾಲ್ಕು ಸಾವಿರ ರೂಪಾಯಿಯಷ್ಟು ಹಣವನ್ನು ದೋಚಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮಹಜರು ನಡೆಸುವ ಮೂಲಕ ತನಿಖೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

* ಕಡಬ: ಎರಡು ಕಾರುಗಳ ನಡುವೆ ಢಿಕ್ಕಿ

ಕಡಬ: ಬದಿಯಡ್ಕ ಕಡೆಯಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ, ಕೇರಳ ಮೂಲದ ವ್ಯಾಗನಾರ್ ಮತ್ತು ಸುಬ್ರಹ್ಮಣ್ಯದಿಂದ ಮಡಿಕೇರಿಯ ಕಡೆಗೆ ತೆರಳುತ್ತಿದ್ದ, ಚಿತ್ರದುರ್ಗ ಮೂಲದ ಕಾರುಗಳ ನಡುವೆ ಢಿಕ್ಕಿ ಸಂಭವಿಸದ ಘಟನೆ, ಭಾನುವಾರದಂದು ನಡೆದಿದೆ. ಕೇರಳ ಮೂಲದವರ ಕಾರಿನಲ್ಲಿದ್ದ ಮಗು ಮತ್ತು ಮಹಿಳೆ ಸೇರಿದಂತೆ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿತ್ರದುರ್ಗ ಮೂಲದವರ ಕಾರಿನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು.‌

* ಬ್ರಹ್ಮಾವರ: ಯೋಜನೆ ಅಡಿಯಲ್ಲಿ ಸಾಲ ದೊರಕಿಸಿಕೊಡುವುದಾಗಿ ವಂಚನೆ

ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಅಡಿಯಲ್ಲಿ, ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ, ಬ್ರಹ್ಮಾವರ ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಜನರು ಉಡುಪಿ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆಯ ಜಾಲದ ಕಿಂಗ್ ಪಿನ್ ಆಗಿರುವ, ಬ್ರಹ್ಮಾವರ ತಾಲ್ಲೂಕಿನ ಆಲೂರು ಗ್ರಾಮದ ಕೌಸಲ್ಯಾ ಎನ್ನುವ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಜೊತೆಗೆ ಇನ್ನಿಬ್ಬರು ವಂಚಕರಾದ ಕೊಕ್ಕರ್ಣೆ ಮತ್ತು ಬೈಂದೂರಿನ ವ್ಯಕ್ತಿಗಳನ್ನು ಸೆರೆಹಿಡಿದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆರಾಡಿ ಗ್ರಾಮದ ಸರಿತಾ ಲೂಯಿಸ್ ಎನ್ನುವವರು ಯೋಜನೆ ಅಡಿಯಲ್ಲಿ ಸಬ್ಸಿಡಿ ಸಾಲವನ್ನು ಕೊಡಿಸುವುದಾಗಿ, ತಮ್ಮಿಂದ 80,72,000 ಮತ್ತು ತಮ್ಮ ಸಂಬಂಧಿಕರಾದ ಅಂಜಲಿನ್ ಡಿಸಿಲ್ವಾ ಅವರಿಂದ 65,೦೦,೦೦೦ ರೂಪಾಯಿಯಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕೌಸಲ್ಯಾ , ಆಕೆಯ ಪತಿ ಸಂದೇಶ್, ಪ್ರಕಾಶ್, ಆಶೀಶ್ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್ ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎನ್ನುವವರು ತಮ್ಮ ತಮ್ಮ ಖಾತೆಗಳಿಗೆ ಹಂತಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2025ರಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ.‌

ಸುಳ್ಯ: ಚಪ್ಪಲಿಯೊಳಗೆ ಅಡಗಿ ಕುಳಿತಿದ್ದ ಹಾವೊಂದು ಕಚ್ಚಿ, ಮಹಿಳೆಯೊಬ್ಬರು ಅಸ್ವಸ್ಥರಾದ ಘಟನೆ ಆಲೆಟ್ಟಿ ಗ್ರಾಮದ ಕೊಲ್ಚಾರಿನಲ್ಲಿ ಭಾನುವಾರದಂದು ನಡೆದಿದೆ. ಕೊಲ್ಚಾರಿನ ನಿವಾಸಿಯಾದ ವಿನುತಾ ಎನ್ನುವವರು, ಬೆಳಗಿನ ಸಮಯದಲ್ಲಿ ಮನೆಯ ಹೊರಗಡೆ ಇರಿಸಿದ್ದ ಚಪ್ಪಲಿಯನ್ನು ಹಾಕಿಕೊಳ್ಳಲು ಹೋದ ಸಂದರ್ಭದಲ್ಲಿ, ಚಪ್ಪಲಿಯ ಒಳಗಡೆ ಸೇರಿಕೊಂಡಿದ್ದ ಹಾವು ಅವರ ಕಾಲಿಗೆ ಕಚ್ಚಿದೆ. ತಕ್ಷಣ ಮನೆಯವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

* ಹೊನ್ನಾವರ: ಯುವತಿ ಆತ್ಮಹತ್ಯೆ

ಹೊನ್ನಾವರ: ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಭಾನುವಾರದಂದು ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ನಲ್ಲಿ ನಡೆದಿದೆ. ಯಾವುದೋ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು, ಬದುಕಿನ ಬಗ್ಗೆ ಬೇಸರಗೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಡೆಲ್ಲಿ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!!

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!!
– ಎಸ್‌ಬಿಐ ಮಾರ್ಚ್‌ ವೇಳೆಗೆ 3,500 ಹುದ್ದೆ ಭರ್ತಿ
– ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನೇಮಕಾತಿ

NAMMUR EXPRESS NEWS
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮುಂದಿನ ಐದು ತಿಂಗಳೊಳಗೆ ಸುಮಾರು 3,500 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಜೂನ್ ತಿಂಗಳಿನಲ್ಲಿ 505 ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈಗ ಇಷ್ಟೇ ಸಂಖ್ಯೆಯ ಹುದ್ದೆಗಳಿಗೆ ಮತ್ತೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿಗಳನ್ನು ಸ್ವೀಕರಿಸಲಾಗಿದೆ. ದೇಶದಾದ್ಯಂತ ಬ್ಯಾಂಕ್‌ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಬ್ಯಾಂಕ್‌ನ ಉಪವ್ಯವಸ್ಥಾಪಕ ನಿರ್ದೇಶಕ (ಮಾನವ ಸಂಪನ್ಮೂಲ ವಿಭಾಗ) ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಿಶೋರ್ ಕುಮಾ‌ರ್ ಪೋಲುದಾಸು ಹೇಳಿದ್ದಾರೆ.

ಈಗಾಗಲೇ 541 ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಸ್ವೀಕರಿಸಲಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ ವಲಯ ಆಧಾರಿತ ಅಧಿಕಾರಿಗಳ ಅಂದಾಜು 3 ಸಾವಿರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಎಸ್‌ಬಿಐ ಅಧ್ಯಕ್ಷ ಸಿ.ಎಸ್.ಸೆಟ್ಟಿ ಅವರು ಬ್ಯಾಂಕ್ 18 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಬಳಿಕ 13,500 ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇದೀಗ ಪ್ರೊಬೇಷನರಿ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

Categories
ಮಲ್ನಾಡ್ ಶಿವಮೊಗ್ಗ

ಮಲ್ನಾಡ್ ಟಾಪ್ 3 ನ್ಯೂಸ್

ಮಲ್ನಾಡ್ ಟಾಪ್ 3 ನ್ಯೂಸ್

-ಶಶಿಧರ್ ಈಚಲಬೈಲು ಅವರ ತಾಯಿ ಲಲಿತಮ್ಮ ನಿಧನ…!!
– ಶಿವಮೊಗ್ಗ : ಟಿವಿಎಸ್‌ ವಾಹನ ಹಾಗೂ ಗೂಡ್ಸ್‌ ವಾಹನ ಡಿಕ್ಕಿಯಿಂದ ರೈತ ಸಾವು..!!
– ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸಾವು..!!

NAMMUR EXPRESS NEWS
ಕಾಂಗ್ರೆಸ್ ಯುವ ಮುಖಂಡ, ಸಹಕಾರಿ ಶಶಿಧರ್ ಈಚಲಬೈಲ್ ತಾಯಿ ಲಲಿತಮ್ಮ (84) ಸೋಮವಾರ ನಿಧನರಾದರು. ಅವರು ಪುತ್ರರಾದ ನಿವೃತ್ತ ಡಿವೈಎಸ್ಪಿ ಶ್ರೀಧರ್ ಮತ್ತು ಶಶಿಧರ್ ಈಚಲಬೈಲ್ ಸೇರಿದಂತೆ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸಂಜೆ 5 ಗಂಟೆಗೆ ಈಚಲಬೈಲಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

– ಶಿವಮೊಗ್ಗ : ಟಿವಿಎಸ್‌ ವಾಹನ ಹಾಗೂ ಗೂಡ್ಸ್‌ ವಾಹನ ಡಿಕ್ಕಿಯಿಂದ ರೈತ ಸಾವು..!!

ಶಿವಮೊಗ್ಗ: ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ರೈತರೊಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿವಮೊಗ್ಗ – ಚಿತ್ರದುರ್ಗ ರಸ್ತೆಯ ಹೊಳೆಬೆನವಳ್ಳಿ ತಾಂಡಾ ಕ್ರಾಸ್‌ ರಸ್ತೆಯಲ್ಲಿ ಅಪಘಾತವಾಗಿದೆ.
ಹೊಳೆಬೆನವಳ್ಳಿಯ ಯಶವಂತಪ್ಪ ದನಗಳಿಗೆ ಹುಲ್ಲು ತರಲು ಟಿವಿಎಸ್‌ ವಾಹನದಲ್ಲಿ ತೆರಳಿದ್ದರು. ಈ ಸಂದರ್ಭ ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ತಲೆ ಭಾಗ, ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪ್ಪ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಸಕ್ರೆಬೈಲು ಸಮೀಪ ಅವರ ಉಸಿರಾಟದಲ್ಲಿ ತೀವ್ರ ಸಮಸ್ಯೆಯಾಗಿತ್ತು. ಹಾಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಮರಳಿ ಕರೆತಂದು ಪರೀಕ್ಷಿಸಿದಾಗ ಯಶವಂತಪ್ಪ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಗೂಡ್ಸ್‌ ವಾಹನ ಚಾಲಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸಾವು..!!

ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಆಟವಾಡುತ್ತಿದ್ದ ಎರಡು ವರ್ಷದ ಮಗು ಗಂಭೀರ ಗಾಯಗೊಂಡು ಸಾವನ್ನಪ್ಪಿದೆ. ಕೋಟೆ ಗಂಗೂರು – ಸಾಗರ ರಸ್ತೆಯ ವಿರುಪಿನಕೊಪ್ಪದಲ್ಲಿ ಘಟನೆ ಸಂಭವಿಸಿದೆ.
ಷಣ್ಮುಖ ಎಂಬುವವರ ಮಗು ವಿನಯ್‌ (2) ಮೃತ ದುರ್ದೈವಿ. ರಸ್ತೆಯಲ್ಲಿ ಆಟವಾಡುವಾಗ ಕೋಟೆ ಗಂಗೂರು ಕಡೆಯಿಂದ ಸಾಗರ ರಸ್ತೆ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಿನಯ್‌ನ ಕಾಲು, ಮೈ, ಕೈಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ಮಗುವನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು ರಾಜ್ಯ

ನ.1ರಿಂದ ಬ್ಯಾಂಕ್ ನಿಯಮ ಬದಲು: ಪ್ರತಿಯೊಬ್ಬರೂ ಓದಲೇಬೇಕು!

ನ.1ರಿಂದ ಬ್ಯಾಂಕ್ ನಿಯಮ ಬದಲು: ಪ್ರತಿಯೊಬ್ಬರೂ ಓದಲೇಬೇಕು!
– ಬ್ಯಾಂಕ್‌ ಖಾತೆಗೆ 4 ಜನ ನಾಮನಿರ್ದೇಶನ ಕಡ್ಡಾಯ
– ಎಲ್ಲಾ ಬ್ಯಾಂಕ್‌ ಖಾತೆಗೂ ಏಕೀಕೃತ ನಿಯಮ ಜಾರಿ

NAMMUR EXPRESS NEWS
ನ.1ರಿಂದ ಬ್ಯಾಂಕ್ ನಿಯಮ ಬದಲು ಆಗಲಿದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಸುದ್ದಿ. ಇನ್ನು ಬ್ಯಾಂಕ್‌ ಖಾತೆಗೆ 4 ಜನ ನಾಮನಿರ್ದೇಶನ ಕಡ್ಡಾಯವಾಗಲಿದೆ.
ಈಗಿರುವ ಖಾತೆ ಸೇರಿ ಎಲ್ಲಾ ಬ್ಯಾಂಕ್‌ ಖಾತೆಗೂ ಏಕೀಕೃತ ನಿಯಮ ಜಾರಿಯಾಗಲಿದೆ.
ಈ ನಿಯಮ ಜಾರಿಗೆ ಕಾರಣ ಏನು?: ನಿಮ್ಮ ತಂದೆಯೋ, ತಾಯಿಯೋ, ತಾತನೋ, ಅಜ್ಜಿಯೋ ಕುಟುಂಬದವರಿಗೆ ತಿಳಿಸದೆ ಬ್ಯಾಂಕ್ ಖಾತೆ ಆರಂಭಿಸಿರುತ್ತಾರೆ. ಅದಕ್ಕೆ ನಾಮನಿರ್ದೇಶನ ಮಾಡಿರುವುದಿಲ್ಲ. ಕೊನೆಗೆ, ಅವರ ಕಾಲದ ನಂತರ ಆ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಕುಟುಂಬದವರಿಗೆ ಮಾಹಿತಿ ಇರುವುದಿಲ್ಲ. ಆ ಖಾತೆಯಲ್ಲಿನ ಹಣವನ್ನು ಯಾರಿಗೆ ನೀಡಬೇಕು ಎಂದು ಬ್ಯಾಂಕ್‌ನವರಿಗೂ ಸ್ಪಷ್ಟತೆ ಇರುವುದಿಲ್ಲ. ಹೌದು, 2025ರ ಜೂನ್‌ವರೆಗೆ ಲಭ್ಯವಿರುವ ಅಂಕಿ– ಅಂಶದ ಪ್ರಕಾರ ಹೀಗೆ, ವಾರಸುದಾರರಿಲ್ಲದ ಸುಮಾರು ₹67 ಸಾವಿರ ಕೋಟಿಯಷ್ಟು ಮೊತ್ತವು ಬ್ಯಾಂಕ್‌ಗಳಲ್ಲಿ ಇದೆ. ಈ ಪೈಕಿ ₹58,330.26 ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇದ್ದರೆ, ಇನ್ನುಳಿದ ಸುಮಾರು ₹8,773.72 ಕೋಟಿ ಖಾಸಗಿ ಬ್ಯಾಂಕ್‌ಗಳಲ್ಲಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸುವುದೂ ಸೇರಿದಂತೆ, ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೆ ತರಲು ಹಣಕಾಸು ಸಚಿವಾಲಯ ತೀರ್ಮಾನಿಸಿದೆ.
ನವೆಂಬರ್ 1ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಈ ಬದಲಾವಣೆಗಳು ಜಾರಿಗೆ ಬರುತ್ತಿವೆ. ಗ್ರಾಹಕರ ಬ್ಯಾಂಕ್‌ ಖಾತೆಗಳು, ಲಾಕರ್‌ಗಳು ಹಾಗೂ ಠೇವಣಿ ಸೇವೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಹಣದ ಹಕ್ಕು ಹಸ್ತಾಂತರ ಪ್ರಕ್ರಿಯೆಯನ್ನು ಸರಳಗೊಳಿಸುವುದು, ವಾದ-ವಿವಾದಗಳನ್ನು ತಗ್ಗಿಸುವುದು ಮತ್ತು ದಾವೆ ಪರಿಹಾರವನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಮಾಡುವುದು ಇದರ ಉದ್ದೇಶ. ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ-2025ರ ಅಡಿಯಲ್ಲಿ ಹಾಗೂ ಹಣಕಾಸು ಸಚಿವಾಲಯವು ಅಧಿಸೂಚನೆಯನ್ನು ಪ್ರಕಟಿಸುವುದರೊಂದಿಗೆ, ಈ ಬದಲಾವಣೆಗಳು ಅನುಷ್ಠಾನಗೊಳ್ಳಲಿವೆ.

ಏನಿದು ಹೊಸ ನಿಯಮ?:

ಕೇಂದ್ರ ಸರ್ಕಾರ ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಕಾಯ್ದೆ-2025ರ 10, 11, 12 ಮತ್ತು 13ನೇ ಸೆಕ್ಷನ್ನುಗಳನ್ನು ಜಾರಿಗೆ ತಂದಿದೆ. ಈ ಸೆಕ್ಷನ್ನುಗಳು ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯವಾಗುವಂತೆ ನಾಮನಿರ್ದೇಶನ, ದಾವೆ ನಿವಾರಣೆ, ಭದ್ರತಾ ಮೊತ್ತ ಸಂಗ್ರಹ ಮತ್ತು ಲಾಕರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಒಳಗೊಂಡಿವೆ.

ಹೊಸ ನಿಯಮಗಳ ಮುಖ್ಯ ಅಂಶಗಳು

* ಪ್ರತಿ ಖಾತೆಗೆ ಗರಿಷ್ಠ ನಾಲ್ಕು ನಾಮನಿರ್ದೇಶನ: ಗ್ರಾಹಕರು ತಮ್ಮ ಉಳಿತಾಯ ಖಾತೆ, ನಿಶ್ಚಿತ ಠೇವಣಿ, ಲಾಕರ್ ಸೇರಿದಂತೆ ಎಲ್ಲಾ ಠೇವಣಿ ಸೇವೆಗಳಿಗೆ ನಾಲ್ಕು ಜನರನ್ನು ನಾಮನಿರ್ದೇಶನ (ನಾಮಿನಿ) ಮಾಡಬಹುದು. ನಾಮನಿರ್ದೇಶಿತರಿಗೆ ಹಂಚಿಕೆಯನ್ನು ಶೇಕಡಾವಾರು (ಉದಾ: ಪತ್ನಿಗೆ ಶೇ 50, ಮಗನಿಗೆ ಶೇ 30, ಸಹೋದರನಿಗೆ ಶೇ 20) ಆಧಾರದಲ್ಲಿ ಮಾಡಬಹುದು. ಅಥವಾ ಆನುವಂಶಿಕ ಕ್ರಮದಲ್ಲಿ ಕೂಡ ನೀಡಬಹುದು. ಅಂದರೆ ಮೊದಲ ನಾಮನಿರ್ದೇಶಿತ ಲಭ್ಯವಿಲ್ಲದಿದ್ದರೆ ಮುಂದಿನವರಿಗೆ ಹಕ್ಕು ಬರುತ್ತದೆ. ಈ ಬದಲಾವಣೆ ವಿವಾದಗಳನ್ನು ತಪ್ಪಿಸಲು ಮತ್ತು ಆಸ್ತಿ ವರ್ಗಾವಣೆ ವೇಗವಾಗಿ ನಡೆಯಲು ಸಹಕಾರಿಯಾಗುತ್ತದೆ.

* ನಾಮನಿರ್ದೇಶಿತರ ಸಂಪರ್ಕ ವಿವರ ಕಡ್ಡಾಯ: ಪ್ರತಿ ನಾಮನಿರ್ದೇಶಿತರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐ.ಡಿ ಈಗ ಬ್ಯಾಂಕ್ ದಾಖಲೆಗಳಲ್ಲಿ ಕಡ್ಡಾಯವಾಗಲಿದೆ. ಇದು ಖಾತೆದಾರರ ನಿಧನದ ನಂತರ ವೇಗವಾದ ಪರಿಶೀಲನೆ ಮತ್ತು ಸಂಪರ್ಕಕ್ಕೆ ನೆರವಾಗುತ್ತದೆ.

* ಎಲ್ಲಾ ಬ್ಯಾಂಕ್‌ಗಳಿಗೆ ಏಕೀಕೃತ ನಿಯಮ: ಈ ನಿಯಮಗಳು ಸರ್ಕಾರಿ, ಖಾಸಗಿ, ಸಹಕಾರ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೂ ಅನ್ವಯಿಸುತ್ತವೆ. ಆರ್‌ಬಿಐ ಈಗ ಎಲ್ಲಾ ಬ್ಯಾಂಕ್‌ಗಳಲ್ಲಿ ಏಕರೂಪದ ದಾವೆ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದೆ.

* ಸರಳೀಕೃತ ದಾವೆ ಪರಿಹಾರ ಪ್ರಕ್ರಿಯೆ: ನಾಮನಿರ್ದೇಶಿತರು ಅಥವಾ ಕಾನೂನಾತ್ಮಕ ವಾರಸುದಾರರು ನಿಧನದ ನಂತರ ಖಾತೆಯ ಮೊತ್ತ ಅಥವಾ ಲಾಕರ್‌ನ ವಸ್ತುಗಳನ್ನು ವೇಗವಾಗಿ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು-2025ರ ಅಡಿಯಲ್ಲಿ ಪ್ರಕ್ರಿಯೆಯ ಮಾದರಿ ಪ್ರಕಟಿಸಲಿದೆ. ಹೊಸ ನಿಯಮವು ಠೇವಣಿ, ಲಾಕರ್‌ಗಳಿಗೆ ಅನ್ವಯವಾಗಲಿದ್ದು, ಎಲ್ಲದಕ್ಕೂ ಏಕರೂಪದ ಪ್ರಕ್ರಿಯೆ ಜಾರಿಗೆ ಬರಲಿದೆ.
ಏಕೆ ಈ ಬದಲಾವಣೆ ಮುಖ್ಯ?: ಈ ಬದಲಾವಣೆಯಿಂದ ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಹಣಕಾಸಿನ ಭದ್ರತೆ ಮತ್ತು ಮನಃಶಾಂತಿ ದೊರೆಯಲಿದೆ. ನಿಧನದ ನಂತರ ಬ್ಯಾಂಕ್‌ನಲ್ಲಿರುವ ಠೇವಣಿಗಳು ಕಾನೂನು ಪ್ರಕ್ರಿಯೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯ ಕಡಿಮೆಯಾಗುತ್ತದೆ. ಸಣ್ಣದಾಗಿ ಕಾಣುವ ಈ ಬದಲಾವಣೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸ ಮತ್ತು ಸುಗಮ ಸೇವೆಗೆ ದೊಡ್ಡ ಹೆಜ್ಜೆಯಾಗಿದೆ.

Categories
ತೀರ್ಥಹಳ್ಳಿ ರಾಜ್ಯ

ನಾಯಿಮರಿ-ಬೆಕ್ಕಿನ ಮರಿ ರಸ್ತೆ ಮೇಲೆ: ಮರೆಯಾದ ಮಾನವೀಯತೆ!

ನಾಯಿಮರಿ-ಬೆಕ್ಕಿನ ಮರಿ ರಸ್ತೆ ಮೇಲೆ: ಮರೆಯಾದ ಮಾನವೀಯತೆ!
– ರಸ್ತೆಯಲ್ಲಿ ಬಿಡುವ ಬದಲು ನಿಮ್ಮ ಸ್ನೇಹಿತರ ಮನೆಗೆ ಕೊಡಿ ಪ್ಲೀಸ್
– ನಮ್ಮಂತೆ ಜೀವ ಇರುವ ಮರಿಗಳು ಅಪಘಾತಕ್ಕೆ ಬಲಿ

ಕಾಪಾಡಿ ಪ್ಲೀಸ್ ಅಭಿಯಾನ!

NAMMUR EXPRESS NEWS
ನಾಯಿ-ಬೆಕ್ಕುಗಳನ್ನು ಕಾಟಾಚಾರಕ್ಕೆ ಸಾಕಿ ಬಳಿಕ ಅವುಗಳ ಹಾಲು ಕುಡಿಯುವ ಚಿಕ್ಕ ಮರಿಗಳನ್ನು ರಸ್ತೆ, ಹಾಳು ಕಟ್ಟಡ, ನಿರ್ಜನ ಪ್ರದೇಶದಲ್ಲಿ ತಂದು ಬಿಟ್ಟು ಹೋಗುವ ನೀಚರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಯಾವುದೇ ರಸ್ತೆಗೆ ಹೋದರೂ ಅಲ್ಲಿ ನಾಲ್ಕಾರು ನಿರ್ಗತಿಕ ನಾಯಿ-ಬೆಕ್ಕಿನ ಮರಿಗಳ ದುರವಸ್ಥೆ ಕಣ್ಣಿಗೆ ಬೀಳುತ್ತದೆ. ಪಾರ್ಕ್, ನದಿ ತೀರ, ರಸ್ತೆ ಸೇರಿ ಎಲ್ಲಾ ಕಡೆ ಆಗಷ್ಟೇ ಹುಟ್ಟಿದ ಮರಿಗಳನ್ನು, ಹಾಲು ಕುಡಿವ ಮರಿಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇಂತವರ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಅನೇಕ ಕಡೆ ಇಂತಹ ಘಟನೆ ಬೆಳಕಿಗೆ ಬರುತ್ತಿದೆ. ಅನೇಕ ಭಾಗದಲ್ಲಿ ಬೋರ್ಡ್ ನೆಟ್ಟು ‘ನೀವು ಇಲ್ಲಿ ನಾಯಿ ಮರಿಗಳನ್ನು ಬಿಟ್ಟು ಹೋಗುವ ಬದಲು ನಿಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿ ನಾವು ಅವರನ್ನೂ ಸಾಕುತ್ತೇವೆ’ ಎಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶು ಇಲಾಖೆ ಕೂಡ ಯಾವ ಮನೆಯಲ್ಲಿ ನಾಯಿ, ಬೆಕ್ಕುಗಳಿಗೆ ಮರಿ ಬೇಡವೋ ಅಂತ ಮನೆಗಳಿಗೆ ಗರ್ಭ ನಿರೋಧಕ ಮಾತ್ರೆ ನೀಡುವ ಬಗ್ಗೆ ಗಮನಿಸಬೇಕಿದೆ.

Categories
ಕಡೂರು ಚಿಕ್ಕಮಗಳೂರು

ಮಾಜಿ ಶಾಸಕನ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ

ಮಾಜಿ ಶಾಸಕನ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ

* ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅಳಿಯ ಸಂದೇಶ್ ಕುಮಾರ್
* ರಾತ್ರೋರಾತ್ರಿ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

NAMMMUR EXPRESS NEWS
ಕಡೂರು: ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯ ಸಂದೇಶ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಮತ್ತು ಅವನ ಸಂಗಡಿಗರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

* ಕಾರು ಓವರ್​ಟೇಕ್​ ವಿಚಾರಕ್ಕೆ ಹಲ್ಲೆ ಎಂಬ ಆರೋಪ
ಈ ಹಲ್ಲೆಯು ಕಾರು ಓವರ್‌ಟೇಕ್ ವಿಚಾರಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಸಂದೇಶ್ ಕುಮಾರ್ ಮತ್ತು ಸಂತೋಷ್ ನಡುವೆ ಗಲಾಟೆ ಉಂಟಾಗಿ ಹಲ್ಲೆಗೆ ದಾರಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಡೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಮಧ್ಯರಾತ್ರಿ ಕಡೂರು ಪೊಲೀಸ್ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.

* ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಕ್ರೋಶ
ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಠಾಣೆ ಬಳಿ ಘೋಷಣೆಗಳನ್ನು ಕೂಗಿ ಬಿಜೆಪಿ ನಾಯಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾತ್ರೋರಾತ್ರಿ ನಡೆದ ಈ ಪ್ರತಿಭಟನೆಯಿಂದ ಕಡೂರು ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಯಿತು.

* 24 ಗಂಟೆಗಳ ಒಳಗೆ ಬಂಧಿಸುವುದಾಗಿ ಎಸ್‌ಪಿ ಭರವಸೆ
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಆಮಟೆ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದರು. 24 ಗಂಟೆಗಳ ಒಳಗೆ ಹಲ್ಲೆಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಈ ಭರವಸೆ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟು ಹಿಂದಿರುಗಿದರು.
ಬೆಳ್ಳಿ ಪ್ರಕಾಶ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಕಡೂರು ಕ್ಷೇತ್ರದಲ್ಲಿ ಬಲಿಷ್ಠ ಪ್ರಭಾವ ಹೊಂದಿದ್ದಾರೆ. ಅವರ ಅಳಿಯನ ಮೇಲೆ ನಡೆದ ಹಲ್ಲೆ ರಾಜಕೀಯ ದ್ವೇಷದಿಂದಲೇ ಎಂಬ ಆರೋಪ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತೋಷ್ ಮತ್ತು ಸಂಗಡಿಗರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ.

Categories
ಚಿಕ್ಕಮಗಳೂರು

ಹೋಂ ಸ್ಟೇ ಬಾತ್ ರೂಂನಲ್ಲಿ ಯೂವತಿ ಸಾವು

ಹೋಂ ಸ್ಟೇ ಬಾತ್ ರೂಂನಲ್ಲಿ ಯೂವತಿ ಸಾವು

* ಗೆಳತಿ ಎಂಗೇಜ್ಮೆಂಟ್‌ಗೆ ಬೆಂಗಳೂರಿಂದ ಬಂದಿದ್ದ ಯುವತಿ
* ಹೋಂ ಸ್ಟೇಗೆ ಲೈಸನ್ಸ್ ಇರಲಿಲ್ಲ,ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

NAMMMUR EXPRESS NEWS

ಮೂಡಿಗೆರೆ: ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂ ಸ್ಟೇಯ ಬಾತ್ ರೂಂ‌ನಲ್ಲಿ ಯುವತಿ ಅನುಮಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಗೆಳತಿಯ ಎಂಗೇಜ್ಮೆಂಟ್​​​ಗೆಂದು ಸ್ನೇಹಿತರ ಜೊತೆ ಬಂದಿದ್ದ 27 ವರ್ಷದ ರಂಜಿತಾ ಸಾವನ್ನಪ್ಪಿದ್ದ ಯುವತಿ. ಮೂಡಿಗೆರೆ ತಾಲೂಕಿನ ಹಿಪ್ಲ ಹೋಂ ಸ್ಟೇ‌ಯಲ್ಲಿ ತನ್ನ ಸ್ನೇಹಿತೆ ರೇಖಾ ಜೊತೆ ತಂಗಿದ್ದರು. ಬೆಳಗ್ಗೆ ಹೋಮ್​​ ಸ್ಟೇ ಸ್ನಾನ ಗೃಹದಲ್ಲಿ ರಂಜಿತಾ ಶವ ಪತ್ತೆಯಾಗಿದ್ದಾರೆ.
ಎಂಗೇಜ್ಮೆಂಟ್‌ಗೆ ಬಂದಿದ್ದ ರಂಜಿತಾ, ರೇಖಾ ಇಬ್ಬರೂ ಮೂಡಿಗೆರೆ ಪಟ್ಟಣದ ಹೋಟೆಲ್‌ನಲ್ಲಿ ಸಂಜೆ ಊಟ ಮಾಡಿ ಬಂದಿದ್ದಾರೆ. ಬಳಿಕ ಇಬ್ಬರೂ ತಮ್ಮ ಸ್ಕೂಟಿಯಲ್ಲಿ ಹೋಮ್​​ ಸ್ಟೇ‌ಗೆ ಬಂದಿದ್ದರು. ಹೋಂ ಸ್ಟೇ ಸಿಸಿಟಿವಿ ಸರಿಯಿಲ್ಲ ಕಾರಣ ಈ ದೃಶ್ಯಗಳು ಸೆರೆಯಾಗಿಲ್ಲ. ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ರಂಜಿತಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ರಂಜಿತಾರ ಮರಣೋತ್ತರ ಪರೀಕ್ಷೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಸಾವನ್ನಪ್ಪಿದ ಹೋಮ್​​ ಸ್ಟೇಗೆ ಲೈಸೆನ್ಸ್ ಇರಲಿಲ್ಲ ಎಂಬ ವಿಷಯ ತಿಳಿದಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಲೈಸೆನ್ಸ್ ನೀಡದೆ ಇದ್ದರೂ ಮಾಲೀಕ ಹೋಂ ಸ್ಟೇ ನಡೆಸುತ್ತಿದ್ದ. ಹೀಗಿದ್ದರೂ ಹೋಂ ಸ್ಟೇ ವಿರುದ್ಧ ಇಲ್ಲಿಯವರೆಗೆ ಯಾಕೆ ಕ್ರಮ ಆಗಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪೊಲೀಸರು , ಪ್ರವಾಸೋದ್ಯಮ ಇಲಾಖೆ ವಿರುದ್ಧವೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಯುವತಿಯ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Categories
ಚಿಕ್ಕಮಗಳೂರು ರಾಜ್ಯ

ಚಿಕ್ಕಮಗಳೂರು ಕಾಫಿಗೆ ಮೋದಿ ಫಿದಾ..!

ಚಿಕ್ಕಮಗಳೂರು ಕಾಫಿಗೆ ಮೋದಿ ಫಿದಾ..!
* ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ರಾಜ್ಯದ ಕಾಫಿ ಉಲ್ಲೇಖ
* ಬೆಂಗಳೂರಿನ ಯುವ ಪರಿಸರವಾದಿಯ ಕಾರ್ಯಕ್ಕೆ ಶ್ಲಾಘನೆ

NAMMMUR EXPRESS NEWS
ನವ ದೆಹಲಿ: ಪ್ರತಿ ತಿಂಗಳು ಪ್ರಧಾನಿ ನರೇಂದ್ರ ಮೋದಿ ನಡೆಸುವ ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್‌’ನ 127 ನೇ ಸಂಚಿಕೆಯಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಮನ್​ ಕಿ ಬಾತ್​ನಲ್ಲಿ ಚಿಕ್ಕಮಗಳೂರು ಕಾಫಿ ಬಗ್ಗೆ ಶ್ಲಾಘಿಸಿರುವ ಮೋದಿ, ಬೆಂಗಳೂರಿನ ಯುವ ಪರಿಸರವಾದಿಯ ಕೆಲಸವನ್ನೂ ಶ್ಲಾಘಿಸಿದ್ದಾರೆ. ವಾರಾಂತ್ಯದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪ್ರಾರಂಭವಾದ ಬೆಂಗಳೂರಿನ ಯುವ ಪರಿಸರವಾದಿ ಕೆಲಸವು ಈಗ ಕೆರೆಗಳ ಪುನರುಜ್ಜೀವನದವರೆಗೆ ಬಂದು ನಿಂತಿದೆ ಎಂದು ಹೇಳಿದ್ದಾರೆ.

* ಕರ್ನಾಟಕದ ಕಾಫಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಮನ್​ ಕೀ ಬಾತ್​ನಲ್ಲಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿರುವ ಬಗ್ಗೆ ಮೋದಿ ಪ್ರಸ್ಥಾಪಿಸಿದ್ದಾರೆ. ಇದೇ ವೇಳೆ ಕರ್ನಾಟಕ ಕಾಫಿಗೆ ಮೋದಿ ಫಿದಾ ಆಗಿದ್ದು, ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಗುಣಗಾನ ಮಾಡಿದ್ದಾರೆ.
ಕರ್ನಾಟಕವಲ್ಲದೆ, ತಮಿಳುನಾಡು ಮತ್ತು ಕೇರಳ ಸೇರಿದಂತೆ ರಾಜ್ಯಗಳಲ್ಲಿ ಬೆಳೆಯುವ ವೈವಿಧ್ಯಮಯ ಕಾಫಿಯಿಂದಾಗಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಹೇಳಿದ್ದಾರೆ. ಈಶಾನ್ಯವು ಕಾಫಿ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದು ವಿಶ್ವಾದ್ಯಂತ ಭಾರತದ ಕಾಫಿಯ ಗುರುತನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಪ್ರಶಂಸಿದ್ದಾರೆ.