Categories
ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು, ಮೇಷ ರಾಶಿಯ ಜನರು ಇದ್ದಕ್ಕಿದ್ದಂತೆ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶಗಳನ್ನು ಪಡೆಯಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಕುಟುಂಬ ಅಥವಾ ಸಂಬಂಧಿಕರೊಂದಿಗೆ ಹಣದ ಬಗ್ಗೆ ನಡೆಯುತ್ತಿರುವ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.

** ವೃಷಭ ರಾಶಿ :
ಇಂದು ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳ ಮೇಲೆ ಸ್ವಲ್ಪ ಕಡಿಮೆ ಅಧ್ಯಯನ ಒತ್ತಡ ಇರುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ.

** ಮಿಥುನ ರಾಶಿ :
ಇಂದು ನಿಮಗೆ ಮಿಶ್ರ ಪರಿಣಾಮಗಳನ್ನು ನೀಡಲಿದೆ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟದ ಲಕ್ಷಣಗಳಿವೆ. ಇಂದು ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹಣಕಾಸಿನ ವಿಷಯಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.

** ಕರ್ಕಾಟಕ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಅನಿರೀಕ್ಷಿತ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳನ್ನು ನೋಡಿಕೊಳ್ಳಿ. ಇಂದು ಹಣದ ವಿಷಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ನಿಮ್ಮ ಸಂಗಾತಿಯೊಂದಿಗಿರುವ ತಪ್ಪು ತಿಳುವಳಿಕೆಯನ್ನು ಪರಿಹರಿಸಲು ಪ್ರಯತ್ನಿಸಿ. ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಾನೂನು ವಿಷಯಗಳಿಂದ ದೂರವಿರಿ. ಇಂದು ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವಿದೆ. ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಈ ದಿನವು ನಿಮಗೆ ಸಾಮಾನ್ಯವಾಗಿರುತ್ತದೆ. ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲು ಸಾಧ್ಯವಿದೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ, ಇದರಿಂದಾಗಿ ಮನಸ್ಸು ತೊಂದರೆಗೊಳಗಾಗಬಹುದು.

** ತುಲಾ ರಾಶಿ :
ಇಂದು ತುಲಾ ರಾಶಿಯವರ ಪರಿಶ್ರಮಕ್ಕೆ ಫಲ ಸಿಗಲಿದೆ. ವೃತ್ತಿಜೀವನದಲ್ಲಿ ಹೊಸ ಕಾರ್ಯಗಳನ್ನು ಸಾಧಿಸಲಾಗುವುದು. ನಿಮ್ಮ ಕೆಲಸದ ಕಡೆಗೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ವ್ಯರ್ಥವಾಗುವುದಿಲ್ಲ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ಅಜಾಗರೂಕರಾಗಬೇಡಿ.

** ವೃಶ್ಚಿಕ ರಾಶಿ :
ಈ ದಿನ ನಿಮಗೆ ಜೀವನದಲ್ಲಿ ಸವಾಲುಗಳು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಇಂದು ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ವ್ಯವಹಾರ ಸಂಬಂಧಿತ ನಿರ್ಧಾರಗಳಲ್ಲಿ ತಜ್ಞರ ಸಲಹೆಯನ್ನು ತೆಗೆದುಕೊಳ್ಳಲು ಹಿಂಜರಿಯದಿರಿ.

** ಧನಸ್ಸು ರಾಶಿ :
ಇಂದು ಈ ರಾಶಿಯವರಿಗೆ ಸಾಮಾನ್ಯ ದಿನವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಕೆಲಸದ ಸವಾಲುಗಳನ್ನು ಜಯಿಸಲು ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯಬೇಡಿ. ಈಗ ಹೊಸ ಯೋಜನೆಯನ್ನು ಪ್ರಾರಂಭಿಸಲು ಸ್ವಲ್ಪ ನಿರೀಕ್ಷಿಸಿ. ಇಂದು ಸಂವಾದದ ಮೂಲಕ ನಡೆಯುತ್ತಿರುವ ಕೌಟುಂಬಿಕ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ.

** ಮಕರ ರಾಶಿ :
ಕಚೇರಿ ರಾಜಕೀಯದಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಇಂದು ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಇದು ನಿಮಗೆ ಹಾನಿ ಉಂಟುಮಾಡಬಹುದು. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಇಂದು ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

** ಕುಂಭ ರಾಶಿ :
ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಇರುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.

** ಮೀನ ರಾಶಿ :
ಇಂದು ಜೀವನದಲ್ಲಿ ಹಲವು ಏರಿಳಿತಗಳು ಎದುರಾಗುತ್ತವೆ. ಯಾವುದೇ ಅಪರಿಚಿತ ವ್ಯಕ್ತಿಗೆ ಸಾಲ ನೀಡುವುದನ್ನು ತಪ್ಪಿಸಿ. ಇಂದು ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯವಿರಬಹುದು. ಸಂಬಂಧದಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಲು ಬಿಡಬೇಡಿ.

Categories
ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ರಾಜ್ಯ

ರಾಜ್ಯ ಕಂಡ ಅಪ್ರತಿಮ ನಾಯಕ ಸಾರೆಕೊಪ್ಪ ಬಂಗಾರಪ್ಪ

ರಾಜ್ಯ ಕಂಡ ಅಪ್ರತಿಮ ನಾಯಕ

ಸಾರೆಕೊಪ್ಪ ಬಂಗಾರಪ್ಪ

ಸಿಎಂ ಆಗಿ ರಾಜ್ಯದ ಮಾನವೀಯತೆಯ ಹರಿಕಾರ

ಸಾರೇಕೊಪ್ಪ ಬಂಗಾರಪ್ಪ ಕರ್ನಾಟಕ ರಾಜ್ಯದ 12ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರ ಅವಧಿಯಲ್ಲಿ ಆದ ಕೆಲಸಗಳು ಇಂದಿಗೂ ಮನೆ ಮಾತಾಗಿವೆ.
ಸಾರೇಕೊಪ್ಪ ಬಂಗಾರಪ್ಪ ಅಂದರೆ ಸೊರಬದ ಹುಲಿ. ಆರಾಧನಾ, ಗ್ರಾಮೀಣ ಕೃಪಾಂಕ ಸೇರಿ ನೂರಾರು ಯೋಜನೆ ಕೊಟ್ಟ ಹೆಮ್ಮೆಯ ಮುಖ್ಯಮಂತ್ರಿ ಬಂಗಾರಪ್ಪ. ಹಿಂದುಳಿದ ವರ್ಗ, ಈಡಿಗ ಸಮುದಾಯಕ್ಕೆ ನ್ಯಾಯ ಕೊಟ್ಟ ನಾಯಕರು ಬಂಗಾರಪ್ಪ.
ಮುಖ್ಯಮಂತ್ರಿಯಾಗಿ, ಸಂಸದರಾಗಿ, ಶಾಸಕರಾಗಿ ಕರ್ನಾಟಕದ ಖ್ಯಾತ ನಾಯಕರಾಗಿ ಹೆಸರು ಮಾಡಿದವರು. ಅ. 26, 1932ರಂದು ಜನಿಸಿದ ಬಂಗಾರಪ್ಪ ಅವರು ಡಿ. 26, 2011ರಂದು ಮೃತರಾದರು. ಆದರೆ ಅವರ ಹೆಸರು ಮಾತ್ರ ಇಂದಿಗೂ ಜನಮಾನಸದಲ್ಲಿ ನೆನಪಿನಲ್ಲಿಡುವಂತೆ ಆಗಿದೆ.
ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜೀ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತ. ಎಸ್. ಬಂಗಾರಪ್ಪನವರು ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಂತ ನಿವಾಸದಲ್ಲಿ ವಾಸಿಸುತ್ತಿದ್ದು, ತಮ್ಮ ಕೊನೆಯುಸಿರಿರುವವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ ಹಾಗೂ ತಾಯಿ ಕಲ್ಲಮ್ಮ. ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು ‘ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ’ ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ ೧೯೬೨ ರಲ್ಲಿ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲ ವೃತ್ತಿಯನ್ನು ನಡೆಸುತ್ತಿದ್ದರು.

ರಾಜಕೀಯ ಏಳು ಬೀಳು.. ಆದ್ರೂ ಛಲ ಬಿಡದ ರಾಜಕಾರಣಿ

ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು.
ವಕೀಲ ವೃತ್ತಿ ಪ್ರವೇಶಿಸಿದ್ದ ವೇಳೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967ರಲ್ಲಿ ಮೊದಲ ಬಾರಿಗೆ ಸೊರಬ ದಲ್ಲಿ ಸೋಷಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ. ಸಮಾಜವಾದಿ ಹವಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್‌ನತ್ತ ಹೊರಳಿದ ಬಂಗಾರಪ್ಪ 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ನಾಯಕತ್ವ ವಹಿಸಿದರು. ಜನತಾ ಪಕ್ಷದೊಡನೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾರಂಗದ ಹೆಸರಿನಲ್ಲಿ ಚುನಾವಣಾ ಪ್ರಚಾರದ ನಾಯಕತ್ವ ವಹಿಸಿದರು.

ಕ್ಷೇತ್ರಕ್ಕೆ ಬಾರದೆಯೇ ಗೆದ್ದವರು!

ಆ ಸಂದರ್ಭದಲ್ಲಿ ಸೊರಬದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಫಲಿತಾಂಶದ ಬಳಿಕವಷ್ಟೇ ಕ್ಷೇತ್ರಕ್ಕೆ ಮರಳಿ ಬರುವೆ. ಅಲ್ಲಿಯವರೆಗೆ ರಾಜ್ಯ ಪ್ರವಾಸ ಮಾಡುವೆ. ನನ್ನನ್ನು ಗೆಲ್ಲಿಸಿಕೊಡುವುದು ಸೊರಬದ ಜನತೆ ಕೆಲಸ ಎಂದು ಹೇಳಿ ಹೊರಟವರು ಕೊನೆಗೆ ಚುನಾವಣಾ ದಿನ ಮತ ಹಾಕಲು ಸೊರಬಕ್ಕೆ ಬಂದರು. ಆ ಚುನಾವಣೆ ಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದರು ಎಂಬುದು ಇತಿಹಾಸ.
ಆದರೆ ಗೆಲುವು ಸಾಧಿಸಿ ಅಧಿಕಾರ ಹಿಡಿದ ಜನತಾರಂಗದ ನಾಯಕತ್ವ ಇದ್ದಕ್ಕಿದ್ದಂತೆ ರಾಮ ಕೃಷ್ಣ ಹೆಗಡೆ ಪಾಲಾಗಿ ಅವರು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಮತ್ತೆ ಸೆಡ್ಡು ಹೊಡೆದ ಬಂಗಾರಪ್ಪ ಜನತಾರಂಗ ತೊರೆದು ಕಾಂಗ್ರೆಸ್‌ಗೆ ಮರಳಿದರು. 1990ರಲ್ಲಿ ಮುಖ್ಯಮಂತ್ರಿಯಾದರು. 92ರಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರು ಬಂಗಾರಪ್ಪ ಅವರನ್ನು ಅಧಿಕಾರ ದಿಂದ ಇಳಿಸಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿದರು.

ಬಂಗಾರಪ್ಪ ರಾಜಕೀಯ ಕಲ್ಲು ಮುಳ್ಳಿನ ಹಾದಿ!

ಆಗ ಮತ್ತೆ ಕಾಂಗ್ರೆಸ್‌ ತೊರೆದು ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ(ಕೆಸಿಪಿ) ಸ್ಥಾಪಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರಕ್ಕೆ ಸರಿಸಿದರು. ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ ಬಂಗಾರಪ್ಪ, 1997ರಲ್ಲಿ ಪುನಃ ಕಾಂಗ್ರೆಸ್‌ ತೊರೆದು ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ) ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು.
ನಂತರ ಅದನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಿದರು. 2004ರಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಬಹುದು ಎಂಬ ಆಕಾಂಕ್ಷೆಯಿಂದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನೂ ತೊರೆದು ಜೆಡಿಎಸ್‌ ಸೇರಿದರು. ಅದೇ ಅವರ ಕೊನೆ ಪಕ್ಷವಾಗಿತ್ತು. ಆದರೆ ಅವರು ಯಾವುದೇ ಪಕ್ಷ ಸೇರಿದರೂ ಸೊರಬದ ಜನ ಅವರನ್ನು ಬೆಂಬಲಿಸುತ್ತಿದ್ದರು. ಅಲ್ಲದೆ ಯಾವುದೇ ಪಕ್ಷ ಸೇರಿದರೂ ಹಿಂದಿನ ಪಕ್ಷದಿಂದ ಗೆದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಸ್ಪರ್ಧೆ ಮಾಡುತ್ತಿದ್ದರು ಎಂಬುದು ವಿಶೇಷ. ಹಿಂದೆ ಮುಂದೆ ನೋಡದೆ ನಿರ್ಧಾರ ಕೈಗೊಳ್ಳುತ್ತಿದ್ದ ಅವರು ಹಠದಿಂದ ತಾವು ಅಂದು ಕೊಂಡಿದ್ದನ್ನು ಸಾಧಿಸುತ್ತಿದ್ದರು. ಪುತ್ರ ಮಧು ಬಂಗಾರಪ್ಪನವರನ್ನು ಶಾಸಕನಾಗಿ ನೋಡ ಬೇಕೆಂದು ಹಠ ತೊಟ್ಟರು. ಆದರೆ 2004ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು 2008ರಲ್ಲಿ ತಮ್ಮ ಪುತ್ರರಿಬ್ಬರ ಸೋಲನ್ನು ನೋಡಬೇಕಾದ ದುರಂತ ಪರಿಸ್ಥಿತಿ ಅವರದ್ದಾಗಿತ್ತು. 2013ರಲ್ಲಿ ಮಧು ಬಂಗಾರಪ್ಪ ಶಾಸಕರಾಗುವ ವೇಳೆ ಬಂಗಾರಪ್ಪ ಇಹಲೋಕ ತೊರೆದಿದ್ದರು. ಸೋಲಿಲ್ಲದ ಸರದಾರ ಎಂಬ ಅಭಿದಾನವನ್ನು ಪಡೆದ ಬಂಗಾರಪ್ಪ ಸೊರಬದಲ್ಲಿ ನಿರಂತರವಾಗಿ ಯಾವುದೇ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಿದ್ದರು ಎಂಬುದು ನಿಜ. ಆದರೆ 1994ರಲ್ಲಿ ಸೊರಬದಲ್ಲಿ ಕೆಸಿಪಿ ಸ್ಥಾಪಿಸಿದ್ದ ವೇಳೆ ಸಾಗರ ದಲ್ಲೂ ಒಂದು ಕೈ ನೋಡಿಯೇ ಬಿಡುವ, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುತ್ತೇನೆ ಎಂಬ ಭ್ರಮೆಗೆ ಸಿಕ್ಕು ಸ್ಪರ್ಧಿಸಿದರು. ಆದರೆ ಅಲ್ಲಿ 3ನೇ ಸ್ಥಾನ ಪಡೆಯಬೇಕಾಯಿತು. ಬಳಿಕ ಅವರು ಸೋಲು ಕಂಡಿದ್ದು 2008ರಲ್ಲಿ. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸುದ್ದಿ ಮಾಡಿದ್ದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರೋಕ್ಷವಾಗಿ ಸಹಕರಿಸಿದ್ದವು. ಆದರೆ ಆಘಾತಕಾರಿ ಸೋಲು ಎದುರಾಗಿತ್ತು.
ಡಿಸೆಂಬರ್, ೨೫ ರಂದು, ಮಧ್ಯರಾತ್ರಿ ೧೨-೪೫ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ,, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಬಿಟ್ಟು ಅಗಲಿದರು. ಈಗ ಬಂಗಾರಪ್ಪ ನೆನಪು ಮಾತ್ರ. ಅವರ ಸೇವೆ, ಮಾನವೀಯತೆ ಎಲ್ಲರಿಗೂ ಮಾದರಿ.

ಬಂಗಾರಪ್ಪ ಅವರ ಜನ್ಮ ದಿನದಂದು ಅವರ ಸೇವೆ ಸ್ಮರಿಸೋಣ.

Categories
ತೀರ್ಥಹಳ್ಳಿ ಮಲ್ನಾಡ್

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

-ಮೇಗರವಳ್ಳಿಯ ಪ್ರೌಢಶಾಲೆ ವಿದ್ಯಾರ್ಥಿನಿ ದೀಪಿಕಾ ಜಿ ಇನ್ನಿಲ್ಲ
– ಕೆರೆಗೆ ಬಿದ್ದು ಕಾಡುಕೋಣ ಸಾವು: ಅಂತ್ಯ ಸಂಸ್ಕಾರ
– ಬಾಳೆಬೈಲು ಬಳಿ ಗೋ ಸಾಗಾಟಕ್ಕೆ ಯತ್ನ: ಇಬ್ಬರು ಅರೆಸ್ಟ್

NAMMUR EXPRESS NEWS
ತೀರ್ಥಹಳ್ಳಿ: ಮೇಗರವಳ್ಳಿಯ ಪ್ರೌಢಶಾಲೆ ವಿದ್ಯಾರ್ಥಿನಿ ದೀಪಿಕಾ ಜಿ (15) ರಕ್ತದ ಒತ್ತಡ ಕಡಿಮೆಯಾಗಿ ತಮ್ಮ ತವರು ದಾವಣಗೆರೆಯಲ್ಲಿ ಹಬ್ಬಕ್ಕೆ ಹೋಗಿದ್ದಾಗ ಮೃತಪಟ್ಟ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಕಡ್ಲೆಬಾಳುವಿನ ಹನುಮಂತಪ್ಪ ಅವರ ಮಗಳಾದ ದೀಪಿಕಾ ದಸರಾ ರಜೆ ಮತ್ತು ದೀಪಾವಳಿ ರಜೆ ಪ್ರಯುಕ್ತ ಊರಿಗೆ ಹೋದಾಗ ಅವರ ಸ್ವಗ್ರಹದಲ್ಲಿ ಬೆಳಗಿನ ಜಾವ 2 ಗಂಟೆಗೆ ಲೋ ಬಿಪಿಯಾಗಿ ಆಸುನೀಗಿರುತ್ತಾರೆ. ಬಾರಿ ಸ್ಥಿತಿವಂತರಲ್ಲದ ಕುಟುಂಬದಲ್ಲಿ ಜನಿಸಿ ಚೆನ್ನಾಗಿ ಓದಿ ಏನಾದರೂ ಸಾಧನೆ ಮಾಡಲೇಬೇಕೆಂದು ಅಲ್ಲಿಯ ಶಿಕ್ಷಕರೊಬ್ಬರ ಸಲಹೆಯಂತೆ ಮೇಗರವಳ್ಳಿಯ ಹಾಸ್ಟೆಲ್ ಮತ್ತು ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಓದು ಮತ್ತು ಕ್ರೀಡೆಯಲ್ಲಿ ಕೂಡ ಮುಂದಿದ್ದು ಎಲ್ಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಳು. ಅವಳ ಆಕಸ್ಮಿಕ ಸಾವು ನಮ್ಮ ಶಾಲೆಗೆ ತುಂಬಲಾರದ ನಷ್ಟ ಆಗಿದೆ ಬೆಳೆದು ಪೋಷಕರಿಗೆ ಆಸರೆ ಆಗಬೇಕಾದ ಮಗಳನ್ನು ಕಳೆದುಕೊಂಡ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಅಧ್ಯಕ್ಷರು ಸದಸ್ಯರು ಎಸ್ ಡಿ ಎಂ ಸಿ ಮೇಗರವಳ್ಳಿ ಪ್ರೌಢಶಾಲೆ, ಮುಖ್ಯೋಪಾಧ್ಯಾಯರು. ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿ ವೃಂದ ಮೇಗರವಳ್ಳಿಯ ಪ್ರೌಢಶಾಲೆ ಇವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಾಳೆಬೈಲು ಬಳಿ ಗೋ ಸಾಗಾಟಕ್ಕೆ ಯತ್ನ..!!

ತೀರ್ಥಹಳ್ಳಿ : ವಾಹನದಲ್ಲಿ ಗೋ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ವಾಹನ ಸಮೇತ ಪೊಲೀಸರು ಬಂಧಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಗ್ಯಾರೇಜ್ ಹತ್ತಿರ ಜಾನುವಾರುಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದಾಗಿ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ಗಸ್ತು ವಾಹನಕ್ಕೆ ವಿಷಯ ತಿಳಿಸಲಾಗಿದೆ. ಸದರಿ ಸ್ಥಳದಲ್ಲಿ ಇಬ್ಬರು ತಮ್ಮ ವಾಹನದಲ್ಲಿ ಕುಳಿತು ಜಾನುವಾರು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದು ಕಂಡು ಬಂದಿದ್ದು ಕೂಡಲೇ ಸ್ಥಳಿಯರ ಸಹಾಯದಿಂದ ವಾಹನ ಸಮೇತ ಇಬ್ಬರನ್ನು ಬಂಧಿಸಲಾಗಿದೆ.
ಜಾನುವಾರು ಕಳ್ಳತನಕ್ಕೆ ತಂದಿದ್ದ ವಾಹನದಲ್ಲಿದ್ದ ವ್ಯಕ್ತಿಗಳಲ್ಲಿ ಶರತ ಬಿನ್ ಧರ್ಮೇಗೌಡ, 35 ವರ್ಷ, ಕಡೇಮನೆ ಬಿಳುಕೊಪ್ಪ, ಮತ್ತೊರ್ವ ನಯಾಜ್ ಬಿನ್ ಇಲಿಯಾಜ್ ಖಾನ್, 34 ವರ್ಷ, ಗಾಜನೂರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ರಸ್ತೆ ಬದಿಯಲ್ಲಿ ಮಲಗಿದ್ದ ಬಿಡಾಡಿ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗಲು ವಾಹನ ಸಮೇತ ಬಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೆರೆಗೆ ಬಿದ್ದು ಕಾಡುಕೋಣ ಸಾವು: ಅಂತ್ಯ ಸಂಸ್ಕಾರ

ತೀರ್ಥಹಳ್ಳಿ : ಕಾಡುಕೋಣವೊಂದು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೈಮರ ಸಮೀಪ ಶನಿವಾರ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಂಡಿನ ಕೊಡುಗೆಯ ರವಿರಾಜ್ ಹೆಬ್ಬಾರ್ ಅವರ ತೋಟದ ಬಾವಿಯಲ್ಲಿ ಕಾಡು ಕೋಣ ಬಿದ್ದು ಮೃತ ಪಟ್ಟಿದ್ದು ಘಟನಾ ಸ್ಥಳಕ್ಕೆ ಮೇಗರವಳ್ಳಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾಡು ಕೋಣದ ಮೃತದೇಹವನ್ನು ಹೊರತೆಗೆದು ಮರಣೋತರ ಪರೀಕ್ಷೆಯ ನಂತರ ಎಂ ಕೇ ಬೈಲಿನಲ್ಲಿರುವ ಡಿಪೋ ಸಮೀಪ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.

Categories
ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಮಲೆನಾಡು ಮತ್ತು ಕರಾವಳಿ ಒಕ್ಕೂಟಕ್ಕೆ ಅವಮಾನ, ಒಕ್ಕೂಟದ ಆಕ್ರೋಶ

ಮಲೆನಾಡು ಮತ್ತು ಕರಾವಳಿ ಒಕ್ಕೂಟಕ್ಕೆ ಅವಮಾನ, ಒಕ್ಕೂಟದ ಆಕ್ರೋಶ

* ಮಂಡಾಳೆ ಗ್ಯಾಂಗ್ ಎಂದಿದ್ದ ಬಿಜೆಪಿ ಮುಖಂಡ ರಾಮಸ್ವಾಮಿ ಶೆಟ್ಟಿಗದ್ದೆ
* ಸ್ವಾಮೀಜಿಗಳಿಗೆ ಅವಮಾನಿಸಿದ್ದೀರಿ – ಅನಿಲ್ ಹೊಸಕೊಪ್ಪ

NAMMMUR EXPRESS NEWS
ಶೃಂಗೇರಿ: ಮಲೆನಾಡು ಮತ್ತು ಕರಾವಳಿ ಒಕ್ಕೂಟವನ್ನು ಬಿಜೆಪಿ ಮುಖಂಡ ಶೆಟ್ಟಿಗದ್ದೆ ರಾಮಸ್ವಾಮಿ ಅವರು ಸಭೆಯಲ್ಲಿ ಅವಮಾನಿಸಿರು ವುದು ಖಂಡನೀಯ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ನಮ್ಮ ತಂಡವನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಮಲೆನಾಡಿಗರ ಪರ ಧ್ವನಿ ಎತ್ತಿರುವ ಒಕ್ಕೂಟಕ್ಕೆ ಅವಮಾನ ಮಾಡಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಜನರ ಸಮಸ್ಯೆಗೆ ಹೋರಾಟ ನಡೆಸಿದ್ದೇವೆ. ನಮ್ಮ ಸಭೆಗೆ ರಾಜಕೀಯ ಮುಖಂಡರು, ಶಾಸಕರು, ಮಾಜಿ ಸಚಿವರು ಬಂದಿದ್ದಾರೆ. ಇತ್ತೀಚೆಗೆ ಅರಣ್ಯ ಸಚಿವರ ಹೇಳಿಕೆ ವಿರುದ್ಧ ಚರ್ಚಿಸಲು ರಂಭಾಪುರಿ ಸ್ವಾಮೀಜಿ, ಗುಣನಾಥ ಸ್ವಾಮೀಜಿ ಭಾಗವಹಿಸಿದ್ದರು. ಇದು ಸ್ವಾಮೀಜಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ.
ಒಕ್ಕೂಟದ ಕಣದಮನೆ ಜಗದೀಶ್ ಮಾತನಾಡಿ, ಪಶ್ಚಿಮ ಘಟ್ಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ವಿರುದ್ಧ ನಡೆದ ಒಕ್ಕೂಟದ ಹೋರಾಟದಲ್ಲಿ ಬಿಜೆಪಿಯ ಮಾಜಿ ಶಾಸಕ ಡಿ.ಎನ್ ಜೀವರಾಜ್ ಭಾಗವಹಿಸಿದ್ದರು. ಹಾಗಾದರೆ ಅವರನ್ನೂ ನೀವು ಅವಮಾನಿಸುವಿರಾ ಎಂದು ಪ್ರಶ್ನಿಸಿದರು.
ಒಕ್ಕೂಟದ ಬೆಂಗಳೂರು ನಗರ ಸಂಚಾಲಕ ಪ್ರವೀಣ್ ಹಗಡೂರು, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕಲ್ಲೋಳ್ಳಿ, ಕೆ.ಟಿ ಮಂಜುನಾಥ್, ಸಂಪೇಕೊಳಲು ರತ್ನಾಕರ್, ಸಂತೋಷ್ ಕಾಳ್ಯ, ಶುಭಕೃತ್ ಹೆಗ್ಡೆ, ಅವಿನಾಶ್, ಸುಬ್ಬಣ್ಣ, ಅಭಿ ಹುಲುಗಾರು, ಪ್ರದೀಪ್ ಯಡದಾಳು, ರಾಜ್ ಕುಮಾರ್ ಹೆಗ್ಡೆ ಭಾಗವಹಿಸಿದ್ದರು

Categories
ಬೆಂಗಳೂರು ಮಲ್ನಾಡ್ ರಾಜ್ಯ

ದಾಖಲೆ ಬರೆದ ಅಡಿಕೆ ದರ:1 ಲಕ್ಷ ಗಡಿ ದಾಟಿದ ಸರಕು!

ದಾಖಲೆ ಬರೆದ ಅಡಿಕೆ ದರ:1 ಲಕ್ಷ ಗಡಿ ದಾಟಿದ ಸರಕು!
– ರೈತರಿಗೆ ಬಂಪರ್ ಬೆಲೆ: ಆದ್ರೆ ಅಡಿಕೆ ಸುಲಿತಕ್ಕೆ ಮಳೆ ಅಡ್ಡಿ
– ಬಯಲು ಸೀಮೆಯಲ್ಲಿ ಅಡಿಕೆ ಬೆಳೆಗಾರಿಗೆ ಬಂಗಾರದ ಬೆಲೆ

NAMMUR EXPRESS NEWS
ಅಡಿಕೆಗೆ ಈಗ ಚಿನ್ನದ ಬೆಲೆ, 1 ಲಕ್ಷ ಗಡಿ ದಾಟಿದ ಸರಕು ದರ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಏರಿಕೆಯಾಗಿದ್ದು, ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ಶಿವಮೊಗ್ಗದಲ್ಲಿ ಸರಕು ದರ ಒಂದು ಲಕ್ಷ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಪೂರೈಕೆ ಸಂಪೂರ್ಣವಾಗಿ ಕುಸಿತ ಕಂಡುಬಂದಿರುವುದರಿಂದ ಈ ದರ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದಾಗಿದೆ.
ರೈತರಿಗೆ ಬಂಪರ್ ಎಂದೇ ಹೇಳಬಹುದು. ಮಲೆನಾಡಿನ ಅಡಿಕೆ ಫಸಲು ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ತೀವ್ರವಾಗಿ ಕಡಿಮೆಯಾಗಿದ್ದು, ಒಟ್ಟಾರೆ ಪೂರೈಕೆ ಕಡಿಮೆ ಉಂಟಾಗಿದೆ. ಆದರೆ ಈ ಬಾರಿ ಸಂಪೂರ್ಣವಾಗಿ ಅಡಿಕೆ ಫಸಲು ಕಡಿಮೆಯಾಗಿರುವುದರಿಂದ ದರ ಮಾತ್ರ ಏರಿಕೆಯಲ್ಲಿ ಸಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಅಡಿಕೆ ಸುಲಿತಕ್ಕೆ ಮಳೆ ಅಡ್ಡಿ

ಸತತವಾಗಿ ಸುರಿಯುತ್ತಿರುವ ಮಳೆ ಕಾರಣ ಮಲೆನಾಡಲ್ಲಿ ಅಡಿಕೆ ಸುಲಿತ ಮಾಡಲು ತೊಂದರೆ ಆಗಿದೆ. ಅಡಿಕೆ ಬೆಲೆಇದ್ದರೂ ಅಡಿಕೆಸುಲಿತ ಮಾಡಲಾಗುತ್ತಿಲ್ಲ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಬಯಲು ಸೀಮೆಯಲ್ಲಿ ಈಗಾಗಲೇ ಅಡಿಕೆ ಸುಲಿತ ಮಾಡುತ್ತಿರುವವರಿಗೆ ಅಡಿಕೆ ಬೆಳೆಗಾರಿಗೆ ಬಂಗಾರದ ಬೆಲೆ ಸಿಗುತ್ತಿದೆ.

 

ಅ. 24ರ ಶಿವಮೊಗ್ಗ ಮಾರುಕಟ್ಟೆ ದರ

ಸರಕು – 100007 – 85210
ಬೆಟ್ಟೆ – 76900 – 76600
ರಾಶಿ ಇಡಿ – 66501 – 64509
ಗೊರಬಲು – 46399 – 40099

Categories
ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಸುಳ್ಯ: ಕ್ರಿಪ್ಟೋ ಕರೆನ್ಸಿ ಮಾಫಿಯಾ ಹುಷಾರ್!
* ಮಂಗಳೂರು: ಬಜರಂಗದಳದ ವ್ಯಕ್ತಿಯಿಂದ ಬಾರ್ ನಲ್ಲಿ ಚೂರಿ ಇರಿತ
* ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನ ಕಳುವು
* ಕಾರ್ಕಳ: ಜುಗಾರಿ ಆಡುತ್ತಿದ್ದ ಏಳು ಮಂದಿ ಪೊಲೀಸರಿಗೆ ಸೆರೆ
* ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸ್ಪೋಟ; ತಪ್ಪಿದ ಅವಘಡ
* ಉಡುಪಿ: ಕಾರು ಡಿಕ್ಕಿ; ಮಹಿಳೆಗೆ ಗಾಯ
* ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಕಳುವು
* ಹೊನ್ನಾವರ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ;
* ಭಟ್ಕಳ: ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಳ್ಯ: ಕ್ರಿಪ್ಟೋ ಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಸುಳ್ಯದ ಕೆರೆಮೂಲೆಯ ನಿವಾಸಿಯಾದ ವ್ಯಕ್ತಿಯೊಬ್ಬರು ಚಾಟ್ ಜಿಪಿಟಿ ಮೂಲಕ ಆ್ಯಪ್ ವೊಂದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ.‌ ಬಳಿಕ ಅದರಲ್ಲಿ ಇಶಾ ಸಿಂಗ್ ಎನ್ನುವ ಅಪರಿಚಿತ ವ್ಯಕ್ತಿಯು ಕ್ರಿಪ್ಟೋ ಕರೆನ್ಸಿ ಹೂಡಿಕೆ ಮತ್ತು ಟ್ರೇಡಿಂಗ್ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಆನ್ ಲೈನ್ ಮೂಲಕ ಹಂತಹಂತವಾಗಿ 2,90,000 ದಷ್ಟು ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಬಜರಂಗದಳದ ವ್ಯಕ್ತಿಯಿಂದ ಬಾರ್ ನಲ್ಲಿ ಚೂರಿ ಇರಿತ

ಮಂಗಳೂರು: ಬಾರ್ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಸೂರತ್ಕಲ್ ನಲ್ಲಿ ನಡೆದಿದೆ. ಮುಖೀದ್, ನಿಜಾಮ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಬಾರ್ ಗೆ ತೆರಳಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿ ಮದ್ಯ ಸೇರಿಸಿದ ನಾಲ್ಕು ಅಪರಿಚಿತ ವ್ಯಕ್ತಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದು, ಬಾರ್ ನಿಂದ ಹೊರಬಂದ ಬಳಿಕವೂ ಜಟಾಪಟಿ ಮುಂದುವರಿದಿತ್ತು. ಆಗ ನಾಲ್ಕು ಜನ ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಚಾಕು ತೆಗೆದುಕೊಂಡು ಮುಖೀದ್ ನಿಗೆ ಹೊಟ್ಟೆ ಮತ್ತು ಕಿವಿಯ ಬಳಿ ಇರಿದಿದ್ದಾನೆ. ಮುನೀದ್ ನ ಜೊತೆಗಿದ್ದ ನಿಜಾಮ್ ನ ಕೈಗೂ ಚುಚ್ಚಿದ್ದರಿಂದ ಗಾಯವಾಗಿದೆ. ಗಾಯವು ಆಳವಾಗಿಯಾಗದ ಕಾರಣ ಮುನೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಸೂರತ್ಕಲ್ ನ ರೌಡಿ ಶೀಟರ್ ಗಳಾದ ಮತ್ತು ಬಜರಂಗದಳದ ಸಕ್ರಿಯರಾದ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ. ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ, ಆರೋಪಿಗಳು ಮೊದಲೇ ಪರಾರಿಯಾಗಿದ್ದರಕ ಎನ್ನುವ ಸಂಗತಿ ತಿಳಿದುಬಂದಿದೆ. ಪೊಲೀಸ್ ಕಮಿಷನರ್ ಆದ ಸುಧೀರ್ ಕುಮಾರ್ ರೆಡ್ಡಿ ಅವರು, ಶುಕ್ರವಾರದಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ನಾಲ್ವರು ಆರೋಪಿಗಳ ವಿರುದ್ಧ 3೦7 ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

* ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನ ಕಳುವು

ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ದನವೊಂದು ಕಾಣೆಯಾಗಿರುವ ಘಟನೆ ಕಾಣೆಯೂರು ಗ್ರಾಮದ ಬೋರುಗುಡ್ಡೆಯಲ್ಲಿ ನಡೆದಿದೆ. ಈಶ್ವರ್ ನಾಯ್ಕ ಎನ್ನುವವರು ಕಳೆದ 10 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದು, ಒಂದು ಜರ್ಸಿ ದನ ಮತ್ತು ಅದರ ಕರುವನ್ನು, ಅವರ ಮನೆಯ ಬಳಿಯಿರುವ ಅಕೇಶಿಯ ಕಾಡಿಗೆ ಮೇಯಲು ಬಿಟ್ಟಿದ್ದರು.‌ ಸಂಜೆ 6 ಗಂಟೆಯ ಸುಮಾರಿಗೆ ಕರು ಮಾತ್ರ ಮನೆಗೆ ಬಂದಿದ್ದು, ದನ ಬರಲಿಲ್ಲ. ಅಲ್ಲದೆ ಕರುವಿನ ಕುತ್ತಿಗೆಗೆ ನೈಲಾನ್ ಹಗ್ಗವೊಂದು ಸುತ್ತಿಕೊಂಡಿತ್ತು.‌ ಇದರಿಂದಾಗಿ ಅನುಮಾನಗೊಂಡ ಈಶ್ವರ ನಾಯ್ಕ ಅವರು ಬಾಡಿಗೆ ತೆರಳಿ, ಎಲ್ಲೆಡೆ ಹುಡುಕಿದರೂ ದನ ಪತ್ತೆಯಾಗಲಿಲ್ಲ. ಅದರ ಮೌಲ್ಯ 25,000 ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಶ್ವರ ನಾಯ್ಕ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

* ಕಾರ್ಕಳ: ಜುಗಾರಿ ಆಡುತಿದ್ದ ಏಳು ಮಂದಿ ಪೊಲೀಸರಿಗೆ ಸೆರೆ

ಕಾರ್ಕಳ: ಕಳೆದೆರಡು ದಿನಗಳ ಹಿಂದೆ ಹಣವನ್ನು ಪಣವಾಗಿಟ್ಟು, ಇಸ್ಪೀಟ್ ಆಡುತ್ತಿದ್ದ ಏಳು ಮಂದಿ ಆರೋಪಿಗಳನ್ನು, ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಮತ್ತು ಅವರ ತಂಡ ಸೆರೆಹಿಡಿದ ಘಟನೆ, ಎಸ್ ಪಿ ಕ್ರಿಯೇಶನ್ ಕ್ಲಬ್ ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ 1130 ರೂಪಾಯಿ ನಗದು ಹಣ, ಇಸ್ಪೀಟ್ ಎಲೆಗಳು, 7 ಮೊಬೈಲ್ ಗಳು, ಕುರ್ಚಿಗಳು, ಮೇಜುಗಳು, ಸಿಸಿಟಿವಿ ಡಿವಿಆರ್ ಮತ್ತು ಕ್ಲಬ್ ನ ದಾಖಲಾತಿ ಪುಸ್ತಕವನ್ನು ವಶಪಡಿಸಿಕೊಳ್ಳಲಾಯಿತು. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 193/2025, 79, 80 ಕೆಪಿ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸ್ಪೋಟ; ಯುವಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ

ಬಂಟ್ವಾಳ: ಅನಂತಾಡಿ ಗ್ರಾಮದ ಬಾಬನಕಟ್ಟೆ ಎನ್ನುವಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಯುವಕನ ಸಮಯಪ್ರಜ್ಞೆಯಿಂದ ಮನೆಯಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತಾಯಿ ಸುಶೀಲ ಮತ್ತು ಮಗ ಜಯರಾಜ್ ಇಬ್ಬರೇ ವಾಸವಾಗಿದ್ದ ಮನೆಯಲ್ಲಿ, ಹಳೆ ಸಿಲಿಂಡರ್ ಖಾಲಿಯಾಗಿದ್ದು ಹೊಸ ಸಿಲಿಂಡರ್ ಅನ್ನು ಅಳವಡಿಸಲಾಗಿತ್ತು.‌ ಆದರೆ, ಹೊಸ ಸಿಲಿಂಡರ್ ನ ರೆಗ್ಯುಲೇಟರ್ ಪಕ್ಕದಿಂದ ಗ್ಯಾಸ್ ಸೋರಿಕೆಯಾಗಿ, ಒಮ್ಮೆಗೆ ಬೆಂಕಿ ಹತ್ತಿಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಧೃತಿಗೆಡದೆ ಜಯರಾಜ್ ಬೆಂಕಿ ಹತ್ತಿಕೊಂಡಿದ್ದ ಸಿಲಿಂಡರ್ ಅನ್ನು ಮನೆಯಿಂದ ಹೊರ ಹಾಕಿದ್ದು, ತಕ್ಷಣ ನೆರೆಮನೆಯ ವೆಂಕಪ್ಪ ಪೂಜಾರಿಯವರು ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ಮೇಲೆ ಗೋಣಿಚೀಲವೊಂದನ್ನು ಒದ್ದೆ ಮಾಡಿ ಹಾಕಿ, ಬೆಂಕಿಯನ್ನು ಆರಿಸಿದ್ದಾರೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಕಿಟಕಿ, ಬಾಗಿಲು, ದ್ವಿಚಕ್ರವಾಹನ ಸೇರಿದಂತೆ, ಹಲವಾರು ಸಾಮಗ್ರಿಗಳು ಹಾನಿಗೊಳಪಟ್ಟಿವೆ. ಜಯರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಯಿ ಮಗ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಸುಜಾತ, ಮಾಜಿ ಅಧ್ಯಕ್ಷರಾದ ಗಣೇಶ್ ಅವರೊಂದಿಗೆ, ಸನತ್ ಕುಮಾರ್ ರೈ, ಗಣೇಶ್ ಬಂಟ್ರಿಂಜ, ಉಮೇಶ್ ನೆಡ್ಯಾರ್, ಗ್ರಾಮ ಕರಣಿಕರು ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಹಾಗೆಯೇ ಬಂಟ್ವಾಳದ ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿಯ ಕರುಣಾಕರ ಶೆಟ್ಟಿಯವರು ಸುಶೀಲ ಮತ್ತು ಜಯರಾಜ್ ಅವರನ್ನು ಭೇಟಿ ಮಾಡಿ, ಸ್ಪೋಟದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ಭರವಸೆಯನ್ನು ನೀಡಿದರು.

* ಉಡುಪಿ: ಕಾರು ಢಿಕ್ಕಿ; ಮಹಿಳೆಗೆ ಗಾಯ

ಉಡುಪಿ: ಪರ್ಕಳ ಕಡೆಯಿಂದ ಉಡುಪಿಯ ಕಡೆಗೆ ಸಾಗುತ್ತಿದ್ದ ಕಾರು ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದ ಘಟನೆ, ಮಣಿಪಾಲದ ಖಾಸಗಿ ಆಸ್ಪತ್ರೆಯೊಂದರ ಎದುರಿಗೆ ನಡೆದಿದೆ. ಇದರ ಪರಿಣಾಮವಾಗಿ ಶಿವಮೊಗ್ಗ ಮೂಲದ ರುಬೀನಾ ಕೌಸರ್ ಅವರು ಗಾಯಗೊಂಡಿದ್ದಾರೆ. ಕಾರು ಚಾಲಕನಾದ ಜಯಂತ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಕಳುವು

ಪುತ್ತೂರು: ಬಪ್ಪಳಿಗೆಯ ನಿವಾಸಿಯಾದ ನೇಬಿಸಾ ಎನ್ನುವ ವ್ಯಕ್ತಿಯು, ಮನೆಯಲ್ಲಿ ಸಾಕಿಕೊಂಡಿದ್ದ ದನವನ್ನು ಮನೆಯ ಸಮೀಪದಲ್ಲಿದ್ದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಪುತ್ತೂರಿಗೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಕಟ್ಟಿ ಹಾಕಿದ್ದ ದನ ಇರಲಿಲ್ಲ. ಎರಡು ದಿನಗಳ ಕಾಲ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನೇಬಿಸಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

* ಹೊನ್ನಾವರ: 16 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿಯೊಂದಿಗೆ, ಮೂವರು ವ್ಯಕ್ತಿಗಳು ದೈಹಿಕ ಸಂಪರ್ಕ ಬೆಳೆಸಿದ ಘಟನೆ, ಹೊನ್ನಾವರದ ಗ್ರಾಮವೊಂದರಲ್ಲಿ ನಡೆದಿದೆ.‌ ಪರಿಣಾಮವಾಗಿ ಹುಡುಗಿಯು ಎರಡು ತಿಂಗಳ ಗರ್ಭಿಣಿಯಾಗಿರುವ ಸಂಗತಿ ತಿಳಿದುಬಂದಿದೆ. ದುಷ್ಕರ್ಮಿಗಳನ್ನು ಮಾವಿನಕುರ್ವೆಯ ಅಭಿ ಗೌಡ, ನಗರೆ ಹೇಮಂತ ನಾಯ್ಕ ಮತ್ತು ಇಡಗುಂಜಿಯ ದೇವೇಂದ್ರ ನಾಯ್ಕ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯು ನೀಡಿದ ದೂರಿನ ಆಧಾರದ ಮೇಲೆ, ಮೂವರು ದುಷ್ಕರ್ಮಿಗಳ ವಿರುದ್ಧ ಲೈಂಗಿಕ ಅಪರಾಧ ಕಾಯ್ದೆ ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.‌

* ಭಟ್ಕಳ: ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ

ಭಟ್ಕಳ: ಗ್ರಾಮೀಣ ಪೊಲೀಸ್ ತಂಡವು ಸಿಪಿಐ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ, ಆಹಾರ ನಿರೀಕ್ಷಕರಾದ ಉದಯ ತಳವಾರ ಅವರ ಸಹಯೋಗದೊಂದಿಗೆ ಪಡಿತರ ಯೋಜನೆಗೆ ಸಂಬಂಧಿಸಿದಂತೆ, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಬೇರೆಡೆಗೆ ಸಾಧಿಸಲಾಗುತ್ತಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸಮೀರ್ ಮುಗಳಿಹೊಂಡ, ಮಲ್ಲಿಕಾರ್ಜುನ್ ಆರ್ ಮಾಗಡಿ, ನಿತಿನ್ ಎಚ್.ಎನ್, ಸಬೂಲ್ ಮುಗಳಿ ಹೊಂಡ, ಮಾರುತಿ ಒಮ್ನಿ , ಅಶೋಕ ಲೈಲ್ಯಾಂಡ್ ಲಾರಿ, ಅಶೋಕ ಲೈಲ್ಯಾಂಡ್ ದೋಸ್ತ್ ವಾಹನಗಳ ಚಾಲಕರು ಮತ್ತು ಮಾಲೀಕರೆಂದು ಗುರುತಿಸಲಾಗಿದೆ. ಪೊಲೀಸರ ಈ ದಾಳಿಯಲ್ಲಿ 228 ಚೀಲಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ, ಸುಮಾರು 3,87,600 ರೂಪಾಯಿಯಷ್ಟು ಬೆಲೆ ಬಾಳುವ, 11400 ಕ್ವಿಂಟಾಲ್ ಪಡಿತರ ಅಕ್ಕಿಯನ್ನು, ಸಾಗಿಸಲು ಬಳಸಲಾದ ಅಶೋಕ ಲೈಲ್ಯಾಂಡ್ ಲಾರಿ, ಮಾರುತಿ ಒಮ್ನಿ, ಅಶೋಕ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.‌ ಇದಕ್ಕೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕರಾದ ಉದಯ್ ತಳವಾರ್ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್

ಜೀ ಕುಟುಂಬ ಅವಾರ್ಡ್ ಗೆದ್ದ ಮಲೆನಾಡ ಹುಡುಗ ಸ್ಕಂದ ಆಗುಂಬೆ

ಜೀ ಕುಟುಂಬ ಅವಾರ್ಡ್ ಗೆದ್ದ
ಮಲೆನಾಡ ಹುಡುಗ ಸ್ಕಂದ ಆಗುಂಬೆ
– ಕರ್ಣ ಧಾರಾವಾಹಿ ಡೈಲಾಗ್: ಜನ ಮೆಚ್ಚಿದ ಸಂಭಾಷಣೆಕಾರ ಪ್ರಶಸ್ತಿ

ಕರ್ಣ ಧಾರವಾಹಿಯ ಸಂಭಾಷಣೆಗೆ ಮಲೆನಾಡ ಪ್ರತಿಭಾವಂತ ಸಂಭಾಷಣೆಕಾರ ಸ್ಕಂದ ಆಗುಂಬೆ ಅವರಿಗೆ ಪ್ರತಿಷ್ಠಿತ ಜೀ ಕುಟುಂಬ ಅವಾರ್ಡ್( ಜನ ಮೆಚ್ಚಿದ ಸಂಭಾಷಣೆಕಾರ) ಪ್ರಶಸ್ತಿ ಸಂದಿದೆ.
ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅಸೀಮನೆಯ ನಾಗೇಂದ್ರ ಮತ್ತು ಸುಮಾ ದಂಪತಿಗಳ ಪುತ್ರ ಸ್ಕಂದ ಆಗುಂಬೆ ಈಗ ಟಿವಿ ಲೋಕದಲ್ಲಿ ಪ್ರಸಿದ್ಧ ಹೆಸರು.
ಜೀ ಕನ್ನಡದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಅವರು ಕೆಲಸಮಾಡುತ್ತಿದ್ದಾರೆ. ಈ ಹಿಂದೆ ಸಹಾಯಕ ನಿರ್ಮಾಪಕ – ಫಿಕ್ಷನ್, ಜೀ ಕನ್ನಡ, ಕ್ರಿಯೇಟಿವ್ ರೈಟರ್, ಪಾಕೆಟ್ ಎಫ್‌ಎಂ – ಇಂಡಿಯಾ, ಕಂಟೆಂಟ್ ಎಡಿಟರ್, ಟಿವಿ9 ಕನ್ನಡದಲ್ಲಿ ಕೆಲಸ ಮಾಡಿದ್ದಾರೆ.
ಗೋಪಾಲಸ್ವಾಮಿ ಸಂಸ್ಥೆ ಪಿ.ಯು.ಸಿ. (ವಿಜ್ಞಾನ), ಮಹಾರಾಜಾ ಕಾಲೇಜು, ಮೈಸೂರು ಯುಜಿ (UG) – ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯ, ಎಸ್.ಡಿ.ಎಂ. ಕಾಲೇಜು, ಉಜಿರೆ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (JMC) ಸ್ನಾತಕೋತ್ತರ ಪದವಿ (PG) ಅಧ್ಯಯನ ಮಾಡಿರುವ ಸ್ಕಂದ ಈಗಾಗಲೇ ಭರವಸೆ ಸಂಭಾಷಣೆಕಾರರಾಗಿ ಹೆಸರು ಮಾಡುತ್ತಿದ್ದಾರೆ.
ಕರ್ಣ ಧಾರಾವಾಹಿಯ “ಹೆಣ್ಣುಮಕ್ಕಳು ಮನೆಯಲ್ಲಿ ಅವಮಾನ ಸಹಿಸಿಕೊಳ್ತಾರೆ ಅಂದರೆ ಅವರಿಗೆ ಅದಕ್ಕೆ ತಿರುಗಿ ಕೊಡಕ್ಕೆ ಬರಲ್ಲ ಅಂತ ಅಲ್ಲ, ಸಂಬಂಧ ಮುಖ್ಯವಾಗಿರುತ್ತೆ ಅವರಿಗೆ, ಅದಕ್ಕೇ ಸುಮ್ಮನಿರ್ತಾರೆ. ಅದನ್ನು ಅರ್ಥ ಮಾಡ್ಕೊಳಿ” ಇಂತಹ ನೂರಾರು ಸಂಭಾಷಣೆ ಸ್ಕಂದ ಅವರ ಟ್ಯಾಲೆಂಟ್ ಅಲ್ಲಿ ಹೊರ ಹೊಮ್ಮಿದೆ. ಯುವ ಪ್ರತಿಭೆಗೆ ಪ್ರಶಸ್ತಿಯ ಶುಭಾಶಯಗಳು.

Categories
ಕರಾವಳಿ ಮಂಗಳೂರು

ಮಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಗೆ ಚಳವಳಿ!

ಮಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಗೆ ಚಳವಳಿ!
– ಉಚ್ಚ ನ್ಯಾಯಾಲಯ ಸ್ಥಾಪಿಸಲು ಪೋಸ್ಟ್ ಕಾರ್ಡ್ ಚಳವಳಿ
– ಹೋರಾಟಕ್ಕೆ ಹೆಚ್ಚಿನ ಬಲ ನೀಡಿದ ಸಂಘಟನೆಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡಬಿದರೆ: ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಉಚ್ಚ ನ್ಯಾಯಾಲಯ ಸ್ಥಾಪಿಸಲು ಜಾಗವನ್ನು ಗುರುತಿಸಲಾಗಿದ್ದು, ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು ನ್ಯಾಯಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಗುರುವಾರದಂದು ಮೂಡಬಿದಿರೆಯಲ್ಲಿ ವಕೀಲರ ಸಂಘ, ಪುರಸಭೆ, ಮೂಡಬಿದರೆ ಪ್ರೆಸ್ ಕ್ಲಬ್ ಮತ್ತು ಸಾರ್ವಜನಿಕರಿಂದ ಪೋಸ್ಟ್ ಕಾರ್ಡ್ ಚಳವಳಿ ನಡೆಯಿತು. ಇದಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದ ಸ್ಥಾಪಕಾಧ್ಯಕ್ಷರಾದ ಮತ್ತು ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ್ ಅವರು ” ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಸುಮಾರು ಒಂದು ಕೋಟಿಯಷ್ಟು ಜನರಿಗೆ ಸಂಪರ್ಕ, ಸಂಚಾರ ಮತ್ತು ಸಂವಹನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಉಚ್ಚ ನ್ಯಾಯಾಲಯ ಸ್ಥಾಪನೆ ಮಾಡಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಇತ್ತೀಚೆಗೆ ಕಳೆದ ಎರಡು ವರ್ಷಗಳಿಂದ ಹೋರಾಟಕ್ಕೆ ಹೆಚ್ಚಿನ ಬಲ ಸಿಕ್ಕಿದೆ” ಎಂದು ಹೇಳಿದರು.

ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು ನ್ಯಾಯಪೀಠ ರಚನೆಗೆ ಒತ್ತಾಯಿಸಿ, ಸರ್ಕಾರಕ್ಕೆ ಮತ್ತು ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ತಿಳಿಸುವ ಉದ್ದೇಶದಿಂದ ಈ ರೀತಿಯ ಚಳವಳಿಯನ್ನು ಆರಂಭಿಸಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ನ್ಯಾಯಪೀಠ ಹೋರಾಟ ಸಮಿತಿಯ ಕಾರ್ಯದರ್ಶಿಗಳಾದ ಪ್ರವೀಣ್ ಲೋಬೋ, ವಕೀಲರ ಸಂಘದ ಅಧ್ಯಕ್ಷರಾದ ಹರೀಶ್. ಪಿ ಮತ್ತು ಕಾರ್ಯದರ್ಶಿಗಳಾದ ಜಯಪ್ರಕಾಶ್, ಪುರಸಭೆಯ ಉಪಾಧ್ಯಕ್ಷರಾದ ನಾಗರಾಜ ಪೂಜಾರಿ, ಸದಸ್ಯರಾದ ಜೊಸ್ಸಿ ಮಿನೇಜಸ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಸೀತಾರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ ಮಲ್ನಾಡ್

ಡಾ.ಸರ್ಜಾಶಂಕರ ಹರಳಿಮಠ ಅವರಿಗೆ ‘ಕನಕ ಸಾಹಿತ್ಯ ಪ್ರಶಸ್ತಿ

ಡಾ.ಸರ್ಜಾಶಂಕರ ಹರಳಿಮಠ ಅವರಿಗೆ ‘ಕನಕ ಸಾಹಿತ್ಯ ಪ್ರಶಸ್ತಿ
– ತೀರ್ಥಹಳ್ಳಿ ಮೂಲದ ಸಾಹಿತಿಗೆ ಒಲಿದ ಪ್ರತಿಷ್ಠಿತ ಪ್ರಶಸ್ತಿ

ಸಹ್ಯಾದ್ರಿ ಶಾಲೆ ಬಾಲಕಿ ಚೆಸ್ ಅಲ್ಲಿ ಸಾಧನೆ!
– ಸಹ್ಯಾದ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಾವನಿ ರಾಜ್ಯಮಟ್ಟಕ್ಕೆ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ಮೈಸೂರಿನ ಸನ್ವಿತಿ ಪ್ರಕಾಶನ ಸಂಸ್ಥೆಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಾಹಿತಿ ಡಾ.ಸರ್ಜಾಶಂಕರ ಹರಳಿಮಠ ಅವರನ್ನು ರಾಜ್ಯಮಟ್ಟದ ‘ಕನಕ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.
ಈ ಲೇಖಕರ “ಬೆಚ್ಚಿ ಬೀಳಿಸಿದ ಬೆಂಗಳೂರು” ಅಂಕಣಪ್ರಬಂಧ ಕೃತಿಯು ಅಪಾರ ಜನಮನ್ನಣೆ ಗಳಿಸಿದ್ದು,ಎರಡು ಆವೃತ್ತಿಗಳನ್ನು ಕಂಡಿದೆ. ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ” ಸೇರಿದಂತೆ ರಾಜ್ಯಮಟ್ಟದ ವಿವಿಧ ಕಥಾಸ್ಪರ್ಧೆಗಳಲ್ಲಿ ಇವರ ಕಥೆಗಳು ಬಹುಮಾನ ಗಳಿಸಿದ್ದು,”ಬಾರಯ್ಯ ಬೆಳದಿಂಗಳೇ’ ಕಥಾಸಂಕಲನ ಪ್ರಕಟವಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ “ಕನ್ನಡತನ” ಸಂಶೋಧನಾ ಕೃತಿ ಕನ್ನಡದ ವಿವೇಕವನ್ನು ಹೊಸಬಗೆಯಲ್ಲಿ ಕಂಡಿರಿಸಿದೆ ಎಂಬ ಅಭಿಪ್ರಾಯ ವಿಮರ್ಶಕರಿಂದ ವ್ಯಕ್ತವಾಗಿದೆ. ‘ಅಂತರಾಳ”, ‘ಜೀವದನಿ’, ‘ಸುಡುಹಗಲ ಸೊಲ್ಲು’ ಸರ್ಜಾಶಂಕರ ಅವರ ಇತರ ಕೃತಿಗಳಾಗಿವೆ. ಈ ಲೇಖಕರು ‘ಪ್ರಜಾವಾಣಿಯಲ್ಲಿ’ ಬರೆದ ‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಲೇಖನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ದೊರೆತಿದೆ. ಈ ಲೇಖಕರ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ “ಕನಕ ಸಾಹಿತ್ಯ ಪ್ರಶಸ್ತಿ” ಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಸರ್ಜಾಶಂಕರ ಹರಳಿಮಠ ಅವರು ಪ್ರಸ್ತುತ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

– ಸಹ್ಯಾದ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಾವನಿ ರಾಜ್ಯಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ : ಶಾಲಾ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಹಾಗೂ
ಪ್ರಜ್ಞಾಭಾರತಿ ಪ್ರೌಢಶಾಲೆ ಚಿಟ್ಟೆಬೈಲು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 17 ವರ್ಷ ವಯೋಮಿತಿಯೊಳಗಿನ ಜಿಲ್ಲಾಮಟ್ಟದ ಪ್ರೌಢಶಾಲಾ ಚೆಸ್‌ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪ್ರೌಢಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯಾದ ಪಾವನಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಹಾಗೂ ತೀರ್ಥಹಳ್ಳಿ ತಾಲ್ಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.
ಈ ಉದಯೋನ್ಮುಖ ಕ್ರೀಡಾಪಟು ಶಿಲ್ಪಾ ಮತ್ತು ರೇವಣ್ಣ ಸ್ವಾಮಿ ಅವರ ಪುತ್ರಿಯಾಗಿದ್ದು ಈ ಸಾಧಕ ಪ್ರತಿಭೆಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಎಂ. ಎಸ್‌ ಇವರಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿರುತ್ತಾರೆ.

Categories
ರಾಜ್ಯ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆ!

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆ!
– 5 ದಿನಗಳ ಹಬ್ಬ: ಮನೆ ಮಂದಿಯೆಲ್ಲಾ ಸೇರಿ ಸಂತಸ
– ಪ್ರಕೃತಿಯ ಆರಾಧನೆಯ ಸಂಕೇತ ವರ್ಷ ತೊಡಕು ಹಬ್ಬ

NAMMUR EXPRESS NEWS
ದೀಪಾವಳಿ ಸಡಗರ ಸಂಭ್ರಮ ಈ ಬಾರಿ ಮಳೆ ನಡುವೆ ಕಳೆದಿದೆ. 5 ದಿನಗಳ ಕಾಲ ಪ್ರತಿ ಮನೆಯಲ್ಲೂ ಹಬ್ಬದ ಸಡಗರ ಕಂಡು ಬಂತು. ಅ. 19ರಿಂದ ಅ. 24ರವರೆಗೆ ಹಬ್ಬ ಆಚರಣೆ ಮಾಡಲಾಯಿತು.
ಲಕ್ಷ್ಮಿ ಪೂಜೆ, ಮನೆ ಪೂಜೆ, ಗೋ ಪೂಜೆ, ಬಲಿಂದ್ರ ಪೂಜೆ, ವರ್ಷ ತೊಡಕು ಹಬ್ಬವನ್ನು ಮನೆ ಮಂದಿ ಎಲ್ಲಾ ಸೇರಿ ಆಚರಣೆ ಮಾಡಿದರು. ಹೊರ ಊರಿನಲ್ಲಿ ಇದ್ದವರು ಕೂಡ ಆಗಮಿಸಿ ಹಬ್ಬ ಆಚರಣೆ ಮಾಡಿದರು.
ಪ್ರತಿಯೊಂದು ಹಬ್ಬವನ್ನು ರಾಜ್ಯಾದ್ಯಂತ ಸೀಮೆಗಳಿಗೆ ಅನುಸಾರವಾಗಿ, ಅಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ಆಚರಿಸಿಕೊಂಡು ಬರಲಾಗುತ್ತದೆ.‌ ವರ್ಷ ತೊಡಕು ಹಬ್ಬ ಕೊನೆ ದಿನ. ರೈತಾಪಿ ಜನರು, ವ್ಯವಸಾಯದ ಮೂಲವನ್ನು ಹೊಂದಿರುವವರು ಸಡಗರದಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ ಇದು. ಮಳೆಗಾಲದಲ್ಲಿ ನಾಟಿ ಮಾಡಿದ ಭೂಮಿಗೆ, ಆಶ್ವಯುಜ ಮಾಸದಲ್ಲಿ ಬರುವ ಹುಣ್ಣಿಮೆಯ ದಿನದಂದು, ಭೂಮಿ ಹುಣ್ಣಿಮೆ ಎಂಬ ಹೆಸರಿನಿಂದ ಭೂತಾಯಿಯ ಸೀಮಂತವನ್ನು ನಡೆಸಿ, ಯಾವುದೇ ಸಮಸ್ಯೆಗಳು ಎದುರಾಗದಂತೆ, ಉತ್ತಮ ಫಲ ನೀಡು ಎಂದು ಪ್ರಾರ್ಥಿಸಿಕೊಂಡು ಆಕೆಯ ಬಯಕೆಯನ್ನು ನೆರವೇರಿಸುತ್ತಾರೆ. ಬಳಿಕ ಕಾರ್ತಿಕ ಮಾಸದಲ್ಲಿ ಬರುವ ದೊಡ್ಡ ಮತ್ತು ಬೆಳಕಿನ ಹಬ್ಬವಾದ ದೀಪಾವಳಿ ಮುಗಿದ ನಂತರ, ತದಿಗೆಯ ದಿನದಂದು ಗದ್ದೆಗಳಿಗೆ ತೆರಳಿ, ಪೂಜೆಯನ್ನು ನೆರವೇರಿಸಿ, ಮೊದಲ ಫಲವಾದ ಭತ್ತದ ತೆನೆಯನ್ನು ಕೊಯ್ದು, ತಲೆಯ ಮೇಲೆ ಹೊತ್ತುಕೊಂಡು ಬಂದು ಸಂಭ್ರಮದಿಂದ ಮನೆಗೆ ಬರಮಾಡಿಕೊಳ್ಳುವುದೇ ಹೊಸತು ತರುವುದು, ಕದಿರು ತರುವುದು ಅಥವಾ ವರ್ಷ ತೊಡಕು. ಮನೆಗೆ ತಂದ ನಂತರ, ದೇವರಮನೆಯಲ್ಲಿರಿಸಿ ಮತ್ತೊಮ್ಮೆ ಪೂಜೆಯನ್ನು ನೆರವೇರಿಸಿ, ದೇವರ ಕೋಣೆ, ಮನೆಯ ಮುಂಬಾಗಿಲು, ಹಣವನ್ನಿರಿಸುವ ಬೀರು ಮೊದಲಾದ ಕಡೆಗಳಲ್ಲಿ ಕಟ್ಟಿ, ಪ್ರತಿ ವರ್ಷ ಇದೇ ರೀತಿ ಭೂಮಿಯಲ್ಲಿ ಮತ್ತು ಮನೆಯಲ್ಲಿ ಸಮೃದ್ಧಿ ತುಂಬಿರಲಿ ಎಂದು ಪ್ರಾರ್ಥಿಸಿಕೊಳ್ಳುವುದು ಈ ಹಬ್ಬದ ವಿಶೇಷ. ಜೊತೆಗೆ ಮೊದಲ ಫಸಲೆಂದು ತೆನೆಯಿಂದ ಸ್ವಲ್ಪ ಭತ್ತದ ಕಣಗಳನ್ನು ತೆಗೆದು, ಅದನ್ನು ಅನ್ನದಲ್ಲಿ ಅಥವಾ ಪಾಯಸದಲ್ಲಿ ಬೆರೆಸಿ ಪ್ರಸಾದದ ರೂಪದಲ್ಲಿ ಸೇವಿಸುವುದು, ಆ ಮೂಲಕ ಹಬ್ಬದ ಊಟವನ್ನು ಮಾಡುವುದು ಇದರ ಮತ್ತೊಂದು ವೈಶಿಷ್ಟ್ಯ. ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲೇ ಇದನ್ನು ಬೆರೆಸುವುದು ವಾಡಿಕೆ. ಪರಿಸರ ಆರಾಧಿಸುವುದು ಮತ್ತು ಸಂಭ್ರಮಿಸುವುದೇ ವರ್ಷ ತೊಡಕಿನ ಮೂಲ. ಹೀಗೆ ಹಬ್ಬದ ಸಂಭ್ರಮ ಕಳೆದು ಜನ ಮತ್ತೆ ತಮ್ಮ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.