Categories
Uncategorized

ಕಾಳು ಮೆಣಸು ದರದಲ್ಲಿ ಇಳಿಕೆ..! ಏಕೆ..?! – ಮಾರುಕಟ್ಟೆವಾರು ಬೆಲೆ 660 ರಿಂದ 850 ಕೆಜಿಗೆ ವ್ಯತ್ಯಾಸ – ಕಾಳುಮೆಣಸಿಗೆ ಪ್ರತ್ಯೇಕವಾದ ಬೆಲೆ?: ಏನಿದು ಕೃಷಿ ನ್ಯೂಸ್

ಬೆಂಗಳೂರು: ಕಾಳು ಮೆಣಸಿನ ಆಗಮನವು ದೇಸೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದರೂ ಕೂಡ, ದೇಶದಲ್ಲಿ ಇದರ ಬೆಲೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿದ್ದರೂ ಕೂಡ ದರದಲ್ಲಿ ಹೆಚ್ಚಳವಾಗದಿರುವುದು ಅಚ್ಚರಿಯನ್ನುಂಟು ಮಾಡಿದೆ.
ಮಾರುಕಟ್ಟೆಗೆ ಸರಕು ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದಾಗ, ಅದರ ಬೆಲೆ ದುಪ್ಪಟ್ಟು ಏರಿಕೆಯಾಗುವುದು ಮಾರುಕಟ್ಟೆ ವಿಚಾರದಲ್ಲಿ ಸಹಜ ಸಂಗತಿ ಜೊತೆಗೆ ಹೊಸ ಬೆಳೆಯು ಮಾರುಕಟ್ಟೆಗೆ ಬರುವ ಸಮಯದಲ್ಲಿ ಪೂರೈಕೆ ಕಡಿಮೆಯಾಗಿದ್ದರೂ ಕೂಡ ವ್ಯಾಪಾರಿಗಳ ಬಳಿ ಈಗಾಗಲೇ ಇರುವ ದಾಸ್ತಾನು ಬೆಲೆಯ ಮೇಲೆ ತೀವ್ರ ರೀತಿಯ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಆದರೆ ಕಾಳುಮೆಣಸಿನ ವಿಚಾರದಲ್ಲಿ ಅದು ಯಾವುದು ಸಾಧ್ಯವಾಗುವುದಿಲ್ಲ.
ಹಳೆಯ ದಾಸ್ತಾನು, ಆಮದು ಪರಿಸ್ಥಿತಿ, ದೇಸಿಯ ಬೇಡಿಕೆ ಮತ್ತು ರಫ್ತು ಬೇಡಿಕೆ ಕೂಡ ಬೆಲೆಯ ದಿಕ್ಕನ್ನು ನಿರ್ಧರಿಸುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ವರದಿಗಳಲ್ಲಿಯೂ ಕೂಡ ಕಾಳುಮೆಣಸಿನ ಪೂರೈಕೆ ಮತ್ತು ಬೇಡಿಕೆಯ ಸಮೀಕರಣವನ್ನು ಪ್ರಮುಖವಾಗಿ ಸೂಚಿಸಲಾಗುತ್ತಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ ಎನ್ನುವ ಮಾಹಿತಿ ಲಭಿಸಿದೆ.

ಕಳೆದ ವಾರ ಮಾರುಕಟ್ಟೆಯಲ್ಲಿ ದರ ಎಷ್ಟಿದೆ?

ಸೆಪ್ಟೆಂಬರ್ 24ರ ಎಪಿಎಂಸಿ ಮಾರುಕಟ್ಟೆಯ ಅನ್ವಯ ವಿವಿದೆಡೆ ವಿವಿಧ ಧಾರಣೆಗಳು ದಾಖಲಾಗಿವೆ. ಆದರೆ ಇವು ಮಾರುಕಟ್ಟೆವಾರು ಮಾದರಿ ಬೆಲೆಗಳು, ರೈತರಿಗೆ ಸಿಗುವ ಬೆಲೆಯ ಗುಣಮಟ್ಟ, ಗ್ರೇಡ್ ಮತ್ತು ವ್ಯಾಪಾರಿಯ ಖರೀದಿಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 25ರಂದು ಕೇರಳದ ವರದಿಯ ಪ್ರಕಾರ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಸರಾಸರಿ ಬೆಲೆ 714 ಕೆಜಿ ಆಗಿತ್ತು. ಆದರೆ ಮಾರುಕಟ್ಟೆವಾರು ಬೆಲೆ 660 ರಿಂದ 850 ಕೆಜಿಗೆ ವ್ಯತ್ಯಾಸ ಕಂಡುಬಂದಿದೆ.‌ ಪರಿಣಾಮವಾಗಿ ಭಾರತದಲ್ಲಿ ಕಾಳುಮೆಣಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವುದು ಕಂಡುಬರುತ್ತಿದ್ದು, ಈ ರೀತಿಯ ಪರಿಸ್ಥಿತಿ ಎದುರಾಗುವುದಕ್ಕೆ ಕಾರಣವೇನು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.
ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡುಬಂದಾಗ ತಕ್ಷಣವೇ ದೊಡ್ಡಮಟ್ಟದಲ್ಲಿ ಮಾರಾಟ ಮಾಡುವ ಬದಲಾಗಿ, ಮಾರುಕಟ್ಟೆ ಟ್ರೆಂಡ್ ನಂತಹ ಕೆಲವು ಅಂಶಗಳನ್ನು ಗಮನಿಸಿ ಮಾರಾಟಕ್ಕೆ ಮುಂದಾಗಬೇಕು. ಕೃಷಿಗೆ ಸಂಬಂಧಿಸಿದಂತಹ ಇತರೆ ಉತ್ಪನ್ನಗಳ ಮಾರಾಟದ ವಿಷಯದಲ್ಲಿಯೂ ಕೂಡ ಈ ಅಂಶಗಳನ್ನು ಗಮನಿಸಬೇಕು. ಅಷ್ಟೇ ಅಲ್ಲದೆ ಗುಣಮಟ್ಟದ ಕಾಳುಮೆಣಸಿಗೆ ಪ್ರತ್ಯೇಕವಾದ ಬೆಲೆ ಸಿಗುತ್ತದೆಯೇ, ಸ್ಥಳೀಯ ಮಾರುಕಟ್ಟೆಯಲ್ಲಿನ ಆಗಮನ ಹೇಗಿದೆ? ವ್ಯಾಪಾರಿಗಳ ಖರೀದಿಗೆ ಬೇಡಿಕೆ ಹೇಗಿದೆ ಮತ್ತು ಮುಂದಿನ ದಿನಗಳಲ್ಲಿ ಹೊಸ ಸರಕು ಎಷ್ಟು ಪ್ರಮಾಣದಲ್ಲಿ ಬರಲಿದೆ ಎನ್ನುವುದನ್ನು ಕೂಡ ಗಮನಿಸಬೇಕು ಎನ್ನುವಂತಹ ಸಲಹೆಯನ್ನು ಕೂಡ ಈ ಸಂದರ್ಭದಲ್ಲಿ ನೀಡಲಾಗಿದೆ.

Categories
Uncategorized

ನರಸಿಂಹರಾಜಪುರ: ಕಳ್ಳರು ಸಾರ್ ಕಳ್ಳರು!.. ಕೇಬಲ್ ಕದ್ದರು! •ಶಿವಮೊಗ್ಗ: ಬಸ್ ಮತ್ತು ಬೈಕ್ ನಡುವೆ ಆಕ್ಸಿಡೆಂಟ್ •ಸೊರಬ: ಅಪಘಾತ ಮಾಡಿ ಪರಾರಿ ಆಗಿದ್ದವ 5 ವರ್ಷಗಳ ಬಳಿಕ ಅರೆಸ್ಟ್! – ಹೊಸನಗರ: ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವಾಹನ ಹರಿದು ದನಗಳು ಸಾವು

ನರಸಿಂಹರಾಜಪುರ: ನರಸಿಂಹರಾಜಪುರ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋಕಳ್ಳತನ, ಇಸ್ಪೀಟ್ ದಂಧೆ, ಗಾಂಜಾ ಮಾರಾಟದಂತಹ ಅಕ್ರಮ ಚಟುವಟಿಕೆಗಳು ಹೆಚ್ಚಾಗಿರುವುದರ ಜೊತೆಗೆ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಕೇಬಲ್ ಸಹ ಕಳುವಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸೋಮವಾರದಂದು ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ನಿವಾಸಿಯಾದ ವೆಂಕಟೇಶ್ ಎನ್ನುವವರ ತೋಟಕ್ಕೆ ರಾತ್ರಿಯ ಸಮಯದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಖದೀಮರು, ಎರಡು ಕೊಳವೆ ಬಾವಿಗಳಿಗೆ ಅಳವಡಿಸಿದ್ದಂತಹ 360 ಮೀಟರ್ ಉದ್ದದ, ಸುಮಾರು 80.000ರೂಪಾಯಿಗಳಷ್ಟು ತಾಮ್ರದ ಮೌಲ್ಯ ಇರುವಂತಹ ಕೇಬಲ್ ಗಳನ್ನು ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿಯೂ ಕೂಡ ಮೆಣಸೂರು ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಕೊಳವೆಬಾವಿಗೆ ಅಳವಡಿಸಲಾಗಿದ್ದ 25 ಅಡಿ ಉದ್ದದ ತಾಮ್ರದ ಕೇಬಲ್ ಅನ್ನು ಸಹ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೇಬಲ್ ಕಳುವು ಪ್ರಕರಣವು ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ರೈತರು ರಾತ್ರಿಯ ಸಮಯದಲ್ಲಿ ಕೊಳವೆಬಾವಿಗಳನ್ನು ಕಾಯುವಂತಹ ಸನ್ನಿವೇಶ ಎದುರಾಗಿದೆ. ಇದರೊಂದಿಗೆ ಭದ್ರಾವತಿ ಮತ್ತು ಶಿವಮೊಗ್ಗದಿಂದ ಈ ಭಾಗಕ್ಕೆ ಗಾಂಜಾ ಸಾಗಾಟ ನಡೆಯುತ್ತಿದ್ದು, ಯುವಕರು ಇದಕ್ಕೆ ದಾಸರಾಗುತ್ತಿರುವುದು, ಮುತ್ತಿನಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿರುವುದು ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೆ ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಇಸ್ಪೀಟ್ ಮತ್ತು ಗಾಂಜಾ ದಂಧೆಯ ವಿರುದ್ಧ ಪೊಲೀಸ್ ಇಲಾಖೆಯು ಕಾನೂನು ಕ್ರಮವನ್ನು ಕೈಗೊಳ್ಳಲು ಆಲೋಚಿಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ಗಂಭೀರ ಸಂಗತಿಯತ್ತ ಗಮನಹರಿಸಿ, ತಾಲ್ಲೂಕು ಭಾಗದಲ್ಲಿ ನಡೆಯುತ್ತಿರುವಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.

•ಶಿವಮೊಗ್ಗ: ಬಸ್ ಮತ್ತು ಬೈಕ್ ನ ನಡುವೆ ಅಪಘಾತ

ಶಿವಮೊಗ್ಗ: ಬೈಕ್ ಮತ್ತು ಖಾಸಗಿ ಬಸ್ ನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಬುಧವಾರದಂದು ಸಾಗರ ರಸ್ತೆಯಲ್ಲಿರುವ ಫ್ಲೈ ಓವರ್ ಬಳಿ ನಡೆದಿದೆ. ಬೈಕ್ ಸವಾರರು ವೇಗವಾಗಿ ಬಂದು ಖಾಸಗಿ ಬಸ್ ಒಂದಕ್ಕೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಸೊರಬ: ಐದು ವರ್ಷದಿಂದ ಸಿಗದಿದ್ದ ಆರೋಪಿಯ ಬಂಧನ

ಸೊರಬ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮಡಿವಾಳಪ್ಪ ಎಂದು ಗುರುತಿಸಲಾಗಿದೆ. 2022ರಲ್ಲಿ ನಡೆದಂತಹ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಮಡಿವಾಳಪ್ಪನ ವಿರುದ್ಧ ಸೊರಬದ ಪಿಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಅಪರಾಧ ಕ್ರಮ 2342/2022ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಅಂದಿನಿಂದ ಮಡಿವಾಳಪ್ಪ ತಲೆಮರೆಸಿಕೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಮಡಿವಾಳಪ್ಪನನ್ನು ಜಾಮೀನು ರಹಿತವಾಗಿ ದಸ್ತಗಿರಿ ಮಾಡುವಂತೆ ವಾರೆಂಟ್ ಅನ್ನು ಹೊರಡಿಸಲಾಗಿತ್ತು.‌ ಸೊರಬ ವೃತ್ತದ ಸಿಪಿಐ ಮಹಾಂತೇಶ್ ಲಂಬಿ ಅವರ ಮಾರ್ಗದರ್ಶನದಲ್ಲಿ, ಸೊರಬ ಠಾಣೆಯ ಪಿಎಸ್ಐ ನವೀನ್ ಅವರ ನೇತೃತ್ವದಲ್ಲಿ ಪ್ರೋಸೆಸ್ ವಿಭಾಗದ ಸಿಬ್ಬಂದಿ ಸೋಮನಾಯ್ಕ ಅವರು ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯ ಚಲನವಲನಗಳತ್ತ ಗಮನಹರಿಸಿ ಬಳಿಕ ಸ್ವಗ್ರಾಮದಲ್ಲಿ ಆತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವಾಹನ ಹರಿದು ದನಗಳು ಸಾವು

ರಿಪ್ಪನ್‌ಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೆರಡು ದನಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ.
ರಸ್ತೆಯಲ್ಲಿ ದನಗಳ ಗುಂಪೊಂದು ಮಲಗಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ, ಬಹುಶಃ ಲಾರಿ, ದನಗಳ ಮೇಲೆ ಹರಿದು ಹೋಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡು ದನಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೆರಡು ದನಗಳಿಗೆ ಗಂಭೀರ ಗಾಯಗಳಾಗಿವೆ. ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Categories
Uncategorized

ಮಲೆನಾಡ ಯೋಧನಿಗೆ ಒಲಿದ ‘ಆರ್ಮಿ ಕಮೆಂಡೇಶನ್ ಡಿಸ್ಕ್’ ಗೌರವ – ಶೃಂಗೇರಿ ಮೂಲದ ಯೋಧರಾದ ಎನ್. ನಿತೇಶ್ ನರೇಂದ್ರ ಅವರಿಗೆ ಭಾರತೀಯ ಸೇನೆಯ ಪ್ರತಿಷ್ಠಿತ – ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸೇವೆ

ಚಿಕ್ಕಮಗಳೂರು: ಸಿಆರ್ ಪಿಎಫ್ ಅಧಿಕಾರಿಯಾಗಿರುವಂತಹ‌ ಶೃಂಗೇರಿ ಮೂಲದ ಯೋಧರಾದ ಎನ್. ನಿತೇಶ್ ನರೇಂದ್ರ ಅವರಿಗೆ ಭಾರತೀಯ ಸೇನೆಯ ಪ್ರತಿಷ್ಠಿತ ‘ಆರ್ಮಿ ಕಮೆಂಡೇಶನ್ ಡಿಸ್ಕ್’ ಅರಸಿ ಬಂದಿದೆ. ಸೆಪ್ಟೆಂಬರ್ 16ರ ಬುಧವಾರ ಮತ್ತು 17ರ ಗುರುವಾರದ ರಾತ್ರಿಯ ಸಮಯದಲ್ಲಿ ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಮಜಲ್ಟಾ ವ್ಯಾಪ್ತಿಯ ಬ್ರಾಟಲ್ ಪ್ರದೇಶದಲ್ಲಿ ನಡೆದಂತಹ ‘ಆಪರೇಷನ್ ಸೋಹನ್’ ಎನ್ನುವ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಕನ್ನಡಿಗ ನಿತೇಶ್ ನರೇಂದ್ರ ಅವರು ಪ್ರತಿಕೂಲ ಹವಾಮಾನ, ಕಠಿಣ ಭೂಪ್ರದೇಶ ಮತ್ತು ಕಡಿಮೆ ಗೋಚರತೆಯ ನಡುವೆಯೂ ತೋರಿದ ಧೈರ್ಯ ಮತ್ತು ಕರ್ತವ್ಯನಿಷ್ಠೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್, ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ಹಾಗೂ ಸಿಆರ್ ಪಿಎಫ್ ಭಾಗಿಯಾಗಿದ್ದವು. ಪ್ರಸ್ತುತ ನಿತೇಶ್ ನರೇಂದ್ರ ಅವರು ಸಿಆರ್ ಪಿಎಫ್ ನ ಕೋಬ್ರಾ ಪಡೆಯ ಸಹಾಯಕ ಕಮಾಂಡಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. “ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಿತೇಶ್ ನರೇಂದ್ರ ಅವರು ಮಹತ್ವದ ಪಾತ್ರವನ್ನು ವಹಿಸಿದರು” ಎಂದು ಸ್ಥಳೀಯ ಆಕಾಶವಾಣಿ ವರದಿ ಮಾಡಿರುವ ಕುರಿತು ಮೂಲಗಳಿಂದ ಮಾಹಿತಿ ಲಭಿಸಿದೆ.